Site icon Vistara News

Donald Trump: ಬೈಡೆನ್‌ ಅತಿ ಕೆಟ್ಟ ಅಧ್ಯಕ್ಷ, ಕಮಲಾ ಹ್ಯಾರಿಸ್‌ರನ್ನು ಸೋಲಿಸುವೆ; ಡೊನಾಲ್ಡ್‌ ಟ್ರಂಪ್ ವಿಶ್ವಾಸ

Donald trump

Worst President In The History Of US: Donald Trump On Biden Dropping Out, Says Defeating Kamala Harris ‘Easier’

ವಾಷಿಂಗ್ಟನ್:‌ ನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ (US Presidential Election 2024) ರೇಸ್‌ನಿಂದ ಹಾಲಿ ಅಧ್ಯಕ್ಷ ಜೋ ಬೈಡೆನ್‌ (Joe Biden) ಅವರು ಹಿಂದೆ ಸರಿದಿದ್ದಾರೆ. ಅಷ್ಟೇ ಅಲ್ಲ, ಡೆಮಾಕ್ರಟಿಕ್‌ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಉಪಾಧ್ಯಕ್ಷೆ, ಭಾರತ ಮೂಲದ ಕಮಲಾ ಹ್ಯಾರಿಸ್‌ (Kamala Harris) ಅವರನ್ನು ಆಯ್ಕೆ ಮಾಡುವುದು ಉತ್ತಮ ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ, ಪ್ರತಿಸ್ಪರ್ಧಿ, ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಅವರು ಪ್ರತಿಕ್ರಿಯಿಸಿದ್ದು, ಜೋ ಬೈಡೆನ್‌ ಅವರು ಅಮೆರಿಕ ಕಂಡ ಅತಿ ಕೆಟ್ಟ ಅಧ್ಯಕ್ಷ ಎಂದು ಜರಿದಿದ್ದಾರೆ. ಅಲ್ಲದೆ, ಕಮಲಾ ಹ್ಯಾರಿಸ್‌ ಅವರನ್ನು ಸುಲಭವಾಗಿ ಸೋಲಿಸುವೆ ಎಂದಿದ್ದಾರೆ.

ಜೋ ಬೈಡೆನ್‌ ನಿರ್ಧಾರದ ಕುರಿತು ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯಿಸಿದ ಡೊನಾಲ್ಡ್‌ ಟ್ರಂಪ್‌, “ಜೋ ಬೈಡೆನ್‌ ಅವರು ಅಮೆರಿಕ ಇತಿಹಾಸ ಕಂಡ ಅತಿ ಕೆಟ್ಟ ಅಧ್ಯಕ್ಷರಾಗಿದ್ದಾರೆ. ಇದೇ ಹಣೆಪಟ್ಟಿಯೊಂದಿಗೆ ಅವರು ನಿರ್ಗಮಿಸಿದ್ದಾರೆ. ಇನ್ನು, ಜೋ ಬೈಡೆನ್‌ ಅವರಿಗಿಂತ ಸುಲಭವಾಗಿ ಕಮಲಾ ಹ್ಯಾರಿಸ್‌ ಅವರನ್ನು ಚುನಾವಣೆಯಲ್ಲಿ ಸೋಲಿಸುತ್ತೇನೆ” ಎಂಬುದಾಗಿ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಕಮಲಾ ಹ್ಯಾರಿಸ್‌ಗೆ ಬೈಡೆನ್‌ ಮೆಚ್ಚುಗೆ

ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದ ಬೆನ್ನಲ್ಲೇ, ಪೋಸ್ಟ್‌ ಮೂಲಕ ಕಮಲಾ ಹ್ಯಾರಿಸ್‌ ಬಗ್ಗೆ ಬೈಡೆನ್‌ ಅವರು ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. “ಡೆಮಾಕ್ರಟಿಕ್‌ ಪಕ್ಷದ ಸದಸ್ಯರು, ನಾಯಕರೇ, ನಾನು ಈಗಿನ ಅವಧಿಗೆ ಮಾತ್ರ ಅಧ್ಯಕ್ಷನಾಗಿ ಇರುತ್ತೇನೆ. ಚುನಾವಣೆ ಮರು ಸ್ಪರ್ಧೆಯಿಂದ ನಾನು ಹಿಂದೆ ಸರಿದಿದ್ದೇನೆ. ನಾನು 2020ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದಾಗ, ಉಪಾಧ್ಯಕ್ಷರ ಸ್ಥಾನಕ್ಕೆ ಕಮಲಾ ಹ್ಯಾರಿಸ್‌ ಅವರನ್ನು ಆಯ್ಕೆ ಮಾಡಿಕೊಂಡಿದ್ದು ನನ್ನ ಮೊದಲ ಹಾಗೂ ಉತ್ತಮ ನಿರ್ಧಾರವಾಗಿತ್ತು. ಈಗಲೂ ಅಷ್ಟೇ, ಡೆಮಾಕ್ರಟಿಕ್‌ ಪಕ್ಷದಿಂದ ಕಮಲಾ ಹ್ಯಾರಿಸ್‌ ಅವರೇ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಎಂಬುದು ನನ್ನ ಅಭಿಲಾಷೆ ಹಾಗೂ ಆಯ್ಕೆಯಾಗಿದೆ” ಎಂದು ಜೋ ಬೈಡೆನ್‌ ಪೋಸ್ಟ್‌ ಮಾಡಿದ್ದರು.

ಇದಕ್ಕೂ ಮೊದಲು, ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿಯುವ ಕುರಿತು ಜೋ ಬೈಡೆನ್‌ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪತ್ರದ ಮೂಲಕ ಘೋಷಿಸಿದ್ದರು. “ನಾನು ಕಳೆದ ಮೂರುವರೆ ವರ್ಷಗಳಿಂದ ಅಮೆರಿಕ ಅಧ್ಯಕ್ಷನಾಗಿ, ದೇಶದ ಏಳಿಗೆಗೆ ದುಡಿದಿದ್ದೇನೆ. ನಿಮ್ಮೆಲ್ಲರ ಅಧ್ಯಕ್ಷನಾಗಿ ಸೇವೆ ಮಾಡಿದ್ದು ನನಗೆ ಖುಷಿಯಾಗಿದೆ. ಎರಡನೇ ಬಾರಿ ಆಯ್ಕೆಗೂ ನಾನು ಮನಸ್ಸು ಮಾಡಿದ್ದೆ. ಆದರೆ, ದೇಶ ಹಾಗೂ ಪಕ್ಷದ ಹಿತದೃಷ್ಟಿಯಿಂದಾಗಿ ನಾನು ಅಮೆರಿಕ ಅಧ್ಯಕ್ಷೀಯ ಚುನಾವಣೆಯಿಂದ ಹಿಂದೆ ಸರಿದಿದ್ದೇನೆ” ಎಂದು ಅವರು ಹೇಳಿದ್ದರು. ಏಕೆ ಇಂತಹ ತೀರ್ಮಾನ ತೆಗೆದುಕೊಂಡೆ ಎಂಬುದರ ಕುರಿತು ಬಳಿಕ ವಿವರಿಸುವೆ ಎಂದು ಅವರು ತಿಳಿಸಿದ್ದಾರೆ.

ಮರೆವು, ವಯಸ್ಸು ಕಾರಣ?

ಜೋ ಬೈಡೆನ್‌ ಅವರಿಗೆ ಇತ್ತೀಚೆಗೆ ಮರೆವು ಜಾಸ್ತಿಯಾಗಿದೆ. ಅಲ್ಲದೆ, 81 ವರ್ಷದ ಜೋ ಬೈಡೆನ್‌ ಅವರ ಮರು ಸ್ಪರ್ಧೆಗೆ ಪಕ್ಷದಲ್ಲೇ ವಿರೋಧ ವ್ಯಕ್ತವಾಗಿತ್ತು. ಜಾಗತಿಕ ವೇದಿಕೆಗಳಲ್ಲಿ ಜೋ ಬೈಡೆನ್‌ ಅವರು ಮುಜುಗರ ಅನುಭವಿಸಿದ್ದರು. ಹಾಗಾಗಿ, ಅವರೇ ಸ್ಪರ್ಧೆಯಿಂದ ಹಿಂದೆ ಸರಿಯುವ ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಅವರೇ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಲಿದ್ದಾರೆ ಎಂದು ಮೊದಲಿನಿಂದಲೂ ಹೇಳಲಾಗುತ್ತಿತ್ತು. ಈಗ ಪಕ್ಷದ ಎಲ್ಲರೂ ಸಹಮತದಿಂದ ಒಪ್ಪಿದರೆ, ಚುನಾವಣೆಯಲ್ಲಿ ಗೆದ್ದರೆ, ಭಾರತ ಮೂಲದವರು ಅಮೆರಿಕ ಅಧ್ಯಕ್ಷರಾಗಲಿದ್ದಾರೆ. ಭಾರತ ಮೂಲದ ರಿಷಿ ಸುನಕ್‌ ಅವರು ಬ್ರಿಟನ್‌ ಪ್ರಧಾನಿಯಾಗಿದ್ದರು.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್‌ ಹೆಸರು ಸೂಚಿಸಿದ ಜೋ ಬೈಡೆನ್!

Exit mobile version