Site icon Vistara News

Pradeep Eshwar: ಪ್ರದೀಪ್‌ ಈಶ್ವರ್‌ ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್‌ ನಾಯಕ ಪಕ್ಷದಿಂದಲೇ ಉಚ್ಚಾಟನೆ!

Pradeep Eshwar

ಚಿಕ್ಕಬಳ್ಳಾಪುರ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶದ (Election Results 2024) ಬಳಿಕ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ರಾಜೀನಾಮೆಗೆ ಒತ್ತಾಯಿಸಿದ ಕಾಂಗ್ರೆಸ್ (congress) ಮುಖಂಡನೊಬ್ಬನನ್ನು ಪಕ್ಷದ ಯುವ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಎಸ್.ಎಂ ಜಗದೀಶ್ ಎಂಬವರನ್ನು ರಾಜ್ಯ ಪ್ರದೇಶ ಯುವ ಕಾಂಗ್ರೆಸ್ (Youth congress) ಕಾರ್ಯದರ್ಶಿ ಹುದ್ದೆಯಿಂದ ಉಚ್ಚಾಟನೆ ಮಾಡಲಾಗಿದೆ.

ಇವರು, ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದರು. ರಾಜೀನಾಮೆಗೆ ಒತ್ತಾಯಿಸಿದ್ದರ ಕುರಿತು ವಿಸ್ತಾರ ನ್ಯೂಸ್ ವರದಿ ಮಾಡಿತ್ತು. ವಿಸ್ತಾರ ನ್ಯೂಸ್ ವರದಿ ವೀಕ್ಷಣೆ ಬಳಿಕ, ಜಗದೀಶ್ ಅವರನ್ನು ಹುದ್ದೆಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಉಚ್ಛಾಟಿಸಿದೆ. ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೂ ಆರು ವರ್ಷಗಳ ಕಾಲ ಉಚ್ಚಾಟನೆ ಮಾಡಲಾಗಿದೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು (Congress candidate) ಬೆಂಬಲಿಸದೆ, ಅನ್ಯ ಪಕ್ಷದ ಅಭ್ಯರ್ಥಿಯೊಂದಿಗೆ ಪ್ರಚಾರದಲ್ಲಿ ಭಾಗಿಯಾಗಿದ್ದಾನೆಂದು ಕಾರಣ ನೀಡಿ ಉಚ್ಚಾಟನೆ ಮಾಡಲಾಗಿದೆ. ಈ ಜಗದೀಶ್‌ ಅವರು ಚಿಕ್ಕಬಳ್ಳಾಪುರ ಮಾಜಿ ಶಾಸಕ ಎಸ್. ಮುನಿಯಪ್ಪ ಪುತ್ರನಾಗಿದ್ದಾರೆ. ಈ ಹಿಂದೆ ವಿಧಾನಸಭೆ ಚುನಾವಣೆ ಪ್ರಚಾರ ಕಣದಲ್ಲಿ ಇವರು ಪ್ರದೀಪ್‌ ಈಶ್ವರ ಜತೆಗಿದ್ದರು.

ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಲ್ಬಣಿಸಿತ್ತು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕೆ. ಸುಧಾಕರ್‌‌ (K Sudhakar) ಅವರು ಸ್ಪರ್ಧಿಸಿದ್ದು, ಈ ಬಗ್ಗೆ ಪ್ರದೇಶ್‌ ಈಶ್ವರ್‌ ವ್ಯಂಗ್ಯವಾಡಿದ್ದರು. ಕಾಂಗ್ರೆಸ್‌ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಒಂದು ಮತ ಲೀಡ್‌ ಪಡೆದರೂ (election results 2024) ರಾಜೀನಾಮೆ ನೀಡುವುದಾಗಿ ಘೋಷಿಸಿದ್ದ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದರು. ಈ ಸುದ್ದಿ ವೈರಲ್‌ ಆದ ಬೆನ್ನಲ್ಲೇ ಸ್ವಪಕ್ಷದ ಶಾಸಕನ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಕೂಡ ತಿರುಗಿಬಿದ್ದಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದರು.

ಈ ಹಿಂದೆ ನಡೆದಿದ್ದ ಕಾಂಗ್ರೆಸ್‌ ಸಭೆಯಲ್ಲಿ “ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್‌ ಅವರಿಗೆ ಒಂದೇ ಒಂದು ಮತದ ಲೀಡ್‌ ಸಿಕ್ಕರೂ ರಾಜಕೀಯ ನಿವೃತ್ತಿ ಪಡೆಯುವೆ” ಎಂದು ಶಾಸಕ ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು. ಇದೀಗ ಆ ಹೇಳಿಕೆಯೇ ಅವರಿಗೆ ತಲೆನೋವು ತಂದಿದೆ.

ಅಣಕು ರಾಜೀನಾಮೆ ಪತ್ರ ವೈರಲ್‌, ಟ್ರೋಲ್‌

ಶಾಸಕ ಪ್ರದೀಪ್‌ ಈಶ್ವರ್‌ ರಾಜೀನಾಮೆ ಘೋಷಣೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಪೋಸ್ಟರ್. ‌

“ನನ್ನ ಮಾತಿಗೆ ನಾನು ಬದ್ಧ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಮತಗಳನ್ನು ಪಡೆದಿರುವುದರಿಂದ ನಾನು ನೈತಿಕ ಹೊಣೆ ಹೊತ್ತು, ಶಾಸಕ ಸ್ಥಾನಕ್ಕೆ ಜೂನ್‌ 5ರಂದು ಬೆಳಗ್ಗೆ 5ಗಂಟೆಗೆ ರಾಜೀನಾಮೆ ನೀಡಲಿದ್ದೇನೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿನ್ನಡೆಗೆ ನಾನೇ ನೇರ ಹೊಣೆ ಎಂದು” ಶಾಸಕ ಪ್ರದೀಪ್‌ ಈಶ್ವರ್‌ ಅವರು ಹೇಳಿದಂತಿರುವ ಪೋಸ್ಟರ್‌ ವೈರಲ್‌ ಮಾಡಲಾಗಿದೆ. ಆದರೆ, ಇದು ಶಾಸಕ ಪ್ರದೀಪ್‌ ಈಶ್ವರ್‌ ಅವರ ಅಧಿಕೃತ ಪೋಸ್ಟರ್‌ ಅಲ್ಲ. ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಟ್ರೋಲ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ | Chikballapur Election Result 2024 : ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್​ಗೆ ಭರ್ಜರಿ ಗೆಲುವು

Exit mobile version