Site icon Vistara News

Zomato Pure Veg: ಜೊಮ್ಯಾಟೋ ಪ್ಯೂರ್‌ ವೆಜ್‌ ಫು‌ಡ್; ಸೋಶಿಯಲ್‌ ಮೀಡಿಯಾದಲ್ಲಿ ಬಿತ್ತು ಬೆಂಕಿ! ಅಳುಕಿದ ಸಂಸ್ಥೆ

zomato pure veg food

ಹೊಸದಿಲ್ಲಿ: ಆಹಾರ ಡೆಲಿವರಿ ಸೇವೆ ಜೊಮ್ಯಾಟೋ (Zomato), ಮಂಗಳವಾರ ʼಪ್ಯೂರ್‌ ವೆಜ್‌ ಫ್ಲೀಟ್‌ʼ (Zomato Pure Veg fleet) ಅನ್ನು ಪರಿಚಯಿಸಿತ್ತು. ಶುದ್ಧ ಸಸ್ಯಾಹಾರವನ್ನು ವಿತರಿಸುವ ಪ್ರತ್ಯೇಕ ತಂಡ ಹಾಗೂ ಡೆಲಿವರಿ ಬಾಯ್ಸ್‌ಗೆ (Delivery boys) ಪ್ರತ್ಯೇಕ ಹಸಿರು ಸಮವಸ್ತ್ರವನ್ನು (Green uniform) ಪರಿಚಯಿಸಿತ್ತು. ಈ ಉಪಕ್ರಮಕ್ಕೆ ಇಂಟರ್‌ನೆಟ್‌ನಲ್ಲಿ ಭಾರಿ ಸ್ವಾಗತ ಹಾಗೂ ಭಾರಿ ಪ್ರತಿರೋಧ ಎರಡೂ ವ್ಯಕ್ತವಾಗಿವೆ. ಹೀಗಾಗಿ ಜೊಮ್ಯಾಟೋ ತನ್ನ ಕ್ರಮದಲ್ಲಿ ಇದೀಗ ಕೆಲವು ಬದಲಾವಣೆ ಮಾಡಿದೆ.

ʼಪ್ಯೂರ್‌ ವೆಜ್‌ʼ ಹೊಸ ಸೇವೆಯ ಅಡಿಯಲ್ಲಿ, ಸಸ್ಯಾಹಾರಿಗಳಿಗೆ ಆಹಾರವನ್ನು ವಿತರಿಸುವವರಿಗೆ ಹಸಿರು ಸಮವಸ್ತ್ರವನ್ನು ಅಳವಡಿಸುವ ತನ್ನ ನಿರ್ಧಾರವನ್ನು ಜೊಮ್ಯಾಟೋ ಹಿಂತೆಗೆದುಕೊಂಡಿದೆ. ತನ್ನ ಎಲ್ಲಾ ಡೆಲಿವರಿ ಬಾಯ್ಸ್‌ ಕೆಂಪು ಬಣ್ಣದ ಸಮವಸ್ತ್ರವನ್ನೇ (red uniform) ಧರಿಸಲಿದ್ದಾರೆ ಎಂದು Zomato ಹೇಳಿದೆ. ಆದರೆ ಶುದ್ಧ ಸಸ್ಯಾಹಾರ ಪ್ರತ್ಯೇಕ ವಿತರಣೆ ಮುಂದುವರಿಯಲಿದೆ.

“ನಾವು ಸಸ್ಯಾಹಾರಿಗಳಿಗಾಗಿ ವಿಶೇಷ ದಳವನ್ನು ಮುಂದುವರಿಸಲಿದ್ದೇವೆ. ಆದರೆ ಹಸಿರು ಬಣ್ಣವನ್ನು ಸಮವಸ್ತ್ರಕ್ಕೆ ಬಳಸಿಕೊಳ್ಳುವ ನಿರ್ಧಾರವನ್ನು ಹಿಂದೆಗೆದುಕೊಂಡಿದ್ದೇವೆ. ನಮ್ಮ ಎಲ್ಲಾ ಸವಾರರು- ಸಸ್ಯಾಹಾರ ಡಿಲಿವರಿಯೂ ಸೇರಿದಂತೆ- ಕೆಂಪು ಬಣ್ಣವನ್ನು ಧರಿಸುತ್ತಾರೆ” ಎಂದು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ.

ʼಪ್ಯೂರ್ ವೆಜ್’ ಆಯ್ಕೆಯನ್ನು ಆರಿಸಿಕೊಳ್ಳುವ ಗ್ರಾಹಕರು ತಮ್ಮ ಆರ್ಡರ್‌ಗಳನ್ನು ʼವೆಜ್‌ ಮಾತ್ರ’ ಫ್ಲೀಟ್‌ನಿಂದ ವಿತರಿಸಲಾಗುತ್ತಿರುವುದನ್ನು ಮೊಬೈಲ್ ಅಪ್ಲಿಕೇಶನ್‌ನಲ್ಲಿ ಟ್ರ್ಯಾಕ್‌ ಮಾಡಬಹುದು ಎಂದು ಗೋಯಲ್ ವಿವರಿಸಿದ್ದಾರೆ.

Zomatoದ ಕ್ರಮವು ಸಾಮಾಜಿಕ ಮಾಧ್ಯಮದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು. ಆಹಾರದ ಆದ್ಯತೆಗಳ ಆಧಾರದ ಮೇಲೆ ಡೆಲಿವರಿ ಬಾಯ್‌ಗಳನ್ನು ಪ್ರತ್ಯೇಕಿಸಿದರೆ ಉಂಟಾಗಬಹುದಾದ ತಾರತಮ್ಯದ ಸಂಭಾವ್ಯತೆಯ ಬಗ್ಗೆ ಕೆಲವರು ಕಳವಳ ವ್ಯಕ್ತಪಡಿಸಿದ್ದರು. “ಈ ಕ್ರಮವು ಈಗಾಗಲೇ ಇರುವ ಪ್ರತ್ಯೇಕತೆಯ ಭಾವನೆಯನ್ನು ಉಲ್ಬಣಗೊಳಿಸಬಹುದು; ಸಸ್ಯಾಹಾರಕ್ಕೆ ಆದ್ಯತೆ ನೀಡುವ ಅಪಾರ್ಟ್‌ಮೆಂಟ್‌ ಅಥವಾ ಸಮುಚ್ಚಯಗಳಲ್ಲಿ ʼಕೆಂಪು ಶರ್ಟ್‌ʼಗಳ ಡೆಲಿವರಿ ಬಾಯ್ಸ್‌ಗೆ ಕಿರುಕುಳ ಅಥವಾ ಸುರಕ್ಷತೆ ಸಮಸ್ಯೆಗೆ ಕಾರಣವಾಗಬಹುದು” ಎಂದು ಕೆಲವರು ಟೀಕಿಸಿದ್ದರು.

“ಶುದ್ಧ ವೆಜ್ʼ ಹೌಸಿಂಗ್ ಸೊಸೈಟಿಗಳು ಸಾಮಾನ್ಯ ಕೆಂಪು ಟಿಶರ್ಟ್ ಜೊಮ್ಯಾಟೊ ಸವಾರರ ಮೇಲೆ ದಾಳಿ ಮಾಡಬಹುದು. ಕೆಲವು ಬಳಕೆದಾರರ ಮೇಲೂ ಬಹಿಷ್ಕಾರ ಹಾಕಲು ಕಾರಣವಾಗಬಹುದು” ಎಂದು ಇನ್ನು ಕೆಲವರು ಧ್ವನಿ ಎತ್ತಿದ್ದರು.

ಇದನ್ನು ಜೊಮ್ಯಾಟೊ ಸಿಇಒ ದೀಪಿಂದರ್ ಗೋಯಲ್ ಒಪ್ಪಿದ್ದು, ಹಸಿರು ಸಮವಸ್ತ್ರ ರದ್ದು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. “ನಮ್ಮ ಡೆಲಿವರಿ ಬಾಯ್‌ಗಳ ಸುರಕ್ಷತೆಯು ನಮಗೆ ಅತ್ಯಂತ ಮಹತ್ವದ್ದು. ಕೆಂಪು ಸಮವಸ್ತ್ರದಿಂದಾಗಿ ಅವರು ಸಮಸ್ಯೆಗೀಡಾಗದಂತೆ, ಅಥವಾ ಯಾವುದೇ ಹೌಸಿಂಗ್‌ ಸೊಸೈಟಿಗಳಿಂದ ನಿರ್ಬಂಧಕ್ಕೊಳಗಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಕೆಲವು ಗ್ರಾಹಕರು ಸಹ ಇದರಿಂದ ತೊಂದರೆಗೆ ಸಿಲುಕಬಹುದು ಎಂದು ನಾವು ಈಗ ಅರ್ಥ ಮಾಡಿಕೊಂಡಿದ್ದೇವೆ. ನಮ್ಮ ಕಾರಣದಿಂದಾಗಿ ಅದು ಸಂಭವಿಸಿದರೆ ಅದು ಒಳಿತಲ್ಲ” ಎಂದು ಗೋಯಲ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ನಿನ್ನೆ ಪ್ಯೂರ್‌ ವೆಜ್‌ ಸೇವೆಯ ಘೋಷಣೆಯ ನಂತರ ಈ ಅಂಶಗಳನ್ನು ಎತ್ತಿದ್ದಕ್ಕಾಗಿ ಅವರು ಸಾಮಾಜಿಕ ಮಾಧ್ಯಮಕ್ಕೆ ಧನ್ಯವಾದ ಅರ್ಪಿಸಿದರು. “ಈ ಕ್ರಮದ ಅನಪೇಕ್ಷಿತ ಪರಿಣಾಮಗಳನ್ನು ನೀವು ನಮಗೆ ಅರ್ಥ ಮಾಡಿಸಿದ್ದೀರಿ. ನಿಮ್ಮ ಎಲ್ಲಾ ಪ್ರೀತಿ ಮತ್ತು ಟೀಕೆಗಳು ತುಂಬಾ ಉಪಯುಕ್ತವಾಗಿವೆ. ನಮಗೆ ಅತ್ಯುತ್ತಮ ಹಂತಕ್ಕೆ ಹೋಗಲು ಸಹಾಯ ಮಾಡಿವೆ” ಎಂದು ಅವರು ಹೇಳಿದರು.

“ಶುದ್ಧ ವೆಜ್” ಸೇವೆಯ ಘೋಷಣೆ ಮತ್ತು ಪ್ರತ್ಯೇಕ ಬಣ್ಣದ ಕೋಡ್ ನಿನ್ನೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಗದ್ದಲವನ್ನು ಹುಟ್ಟುಹಾಕಿತ್ತು. ಕೆಲವು ಬಳಕೆದಾರರು ಇದನ್ನು ಆಧುನಿಕ ಜಾತಿವಾದದ ಒಂದು ರೂಪ ಎಂದು ಕರೆದಿದ್ದರು. ಸಸ್ಯಾಹಾರಿಗಳು ಬಹುಸಂಖ್ಯಾತರಾಗಿರುವ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಕೆಂಪು-ಸಮವಸ್ತ್ರದ ಡೆಲಿವರಿ ಬಾಯ್ಸ್‌ ಪ್ರವೇಶದ ಮೇಲೆ ಇದು ಹೇಗೆ ನಿಷೇಧಕ್ಕೆ ಕಾರಣವಾಗಬಹುದು ಎಂಬುದನ್ನು ಕೆಲವರು ಸೂಚಿಸಿದ್ದರು. ಇದರಿಂದ ಮಾಂಸಾಹಾರ ಆರ್ಡರ್ ಮಾಡುವವರಿಗೆ, ಅದರಲ್ಲೂ ನಿರ್ದಿಷ್ಟವಾಗಿ ಅದನ್ನು ವಿರೋಧಿಸುವ ಪ್ರದೇಶಗಳಲ್ಲಿ, ತೊಂದರೆಯಾಗಲಿದೆ ಎಂದಿದ್ದರು.

ಪ್ಯೂರ್‌ ವೆಜ್‌ ಸೇವೆಯನ್ನು ಪ್ರತ್ಯೇಕವಾಗಿ ಮುಂದುವರಿಸುವ ನಿರ್ಣಯವನ್ನು ಮಾತ್ರ ಜೊಮ್ಯಾಟೋ ಹಾಗೇ ಉಳಿಸಿಕೊಂಡಿದೆ. ಈ ಕುರಿತು ಗೋಯೆಲ್‌ ನಿನ್ನೆ ವಿವರ ನೀಡಿದ್ದರು. “ಭಾರತವು ಪ್ರಪಂಚದಲ್ಲಿ ಹೆಚ್ಚಿನ ಶೇಕಡಾವಾರು ಸಸ್ಯಾಹಾರಿಗಳನ್ನು ಹೊಂದಿದೆ. ಅವರು ತಮ್ಮ ಆಹಾರದ ನಿರ್ವಹಣೆ ಬಗ್ಗೆ ಬಹಳ ನಿರ್ದಿಷ್ಟವಾಗಿರುತ್ತಾರೆ. ನಮ್ಮೆಲ್ಲರ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಕೆಲವೊಮ್ಮೆ ಆಹಾರವು ಡೆಲಿವರಿ ಬಾಕ್ಸ್‌ಗಳಲ್ಲಿ ಚೆಲ್ಲುತ್ತದೆ. ಅಂತಹ ಸಂದರ್ಭಗಳಲ್ಲಿ, ಆಹಾರದ ವಾಸನೆಯು ಸಸ್ಯಾಹಾರಿ ಆಹಾರ ಸೇವನೆ ಮಾಡುವವರಿಗೆ ತೊಂದರೆಯಾಗಬಹುದು. ಈ ಕಾರಣಕ್ಕಾಗಿ ನಾವು ಸಸ್ಯಾಹಾರಿ ಆರ್ಡರ್‌ಗಳಿಗಾಗಿ ದಳವನ್ನು ಪ್ರತ್ಯೇಕಿಸಬೇಕಾಯಿತು” ಎಂದು ಅವರು ವಿವರಿಸಿದ್ದರು.

“ಶುದ್ಧ ಸಸ್ಯಾಹಾರಿ ಸೇವೆಯು ವ್ಯಕ್ತಿಯ ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಆಹಾರದ ಆದ್ಯತೆಯನ್ನು ಕಟ್ಟುನಿಟ್ಟಾಗಿ ಪೂರೈಸುತ್ತದೆ” ಎಂದು ಅವರು ಒತ್ತಿ ಹೇಳಿದ್ದರು. “ಈ ಪ್ಯೂರ್ ವೆಜ್ ಮೋಡ್ ಅಥವಾ ಪ್ಯೂರ್ ವೆಜ್ ಫ್ಲೀಟ್ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಆದ್ಯತೆಗಳನ್ನು ಪೂರೈಸುವುದಿಲ್ಲ ಅಥವಾ ದೂರವಿಡುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ” ಎಂದು ಅವರು ಹೇಳಿದ್ದರು.

ಇದನ್ನೂ ಓದಿ: Zomato : ಪ್ಯೂರ್​ ವೆಜ್​ ಫುಡ್​ ಮಾತ್ರ ವಿತರಿಸುವ ಹೊಸ ಯೋಜನೆ ಘೋಷಿಸಿದ ಜೊಮ್ಯಾಟೊ

Exit mobile version