Site icon Vistara News

Karnataka Weather : ಇಂದಿನಿಂದ ಡಿ.20ರ ತನಕ ಮಳೆ ಕಾಟ!

karnataka weather Forecast

ಬೆಂಗಳೂರು: ಬೆಂಗಳೂರು ಸೇರಿದಂತೆ ಹಲವೆಡೆ ಕ್ಷಣಕ್ಕೊಂದು (Karnataka weather Forecast) ವಾತಾವರಣವಿದೆ. ಹೊರಗೆ ಬೀಸುವ ಥಂಡಿ ಗಾಳಿಗೆ ಮಳೆಯು (Rain News) ಸೇರಿಕೊಂಡು ಜನರನ್ನು ನಡುಗಿಸುತ್ತಿದೆ. ಒಮ್ಮೆ ಬಿಸಿಲು ಇದ್ದರೆ ಕ್ಷಣಾರ್ಧದಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಘಳಿಗೆಗೊಂದು ವಾತಾವರಣವು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ.

ಹೊರಗೆ ಹೋದರೆ ಸಾಕು ಥಂಡಿ, ಗಾಳಿ, ಮಳೆ ನೀರಿನ ಕಾರಣ ಶೀತ, ಕೆಮ್ಮು, ಜ್ವರ ಮುಂತಾದ ರೋಗಗಳು ಜನರನ್ನು ಭಾದಿಸುತ್ತಿದೆ. ಸದ್ಯ ಇದೇ ಸ್ಥಿತಿಯು ರಾಜ್ಯದಲ್ಲಿ ಇಂದಿನಿಂದ ಡಿ. 20ರವರೆಗೆ ಮುಂದುವರಿಯಲಿದೆ.

ರಾಜ್ಯದಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿರಲಿದೆ. ಕೆಲವೊಮ್ಮೆ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಸೂಚನೆ ಇದ್ದರೆ, ಉತ್ತರ ಒಳನಾಡಿನಲ್ಲಿ ಬಿಸಿಲಿನಿಂದ ಕೂಡಿರಲಿದ್ದು, ಒಣಹವೆ ಮುಂದುವರಿಯಲಿದೆ.

ಇದನ್ನೂ ಓದಿ: Star Couple Fashion: ಸ್ಯಾಂಡಲ್‌ವುಡ್‌ ಜೋಡಿ ರಿಶಿ-ಸ್ವಾತಿಯ ಟ್ರೆಡಿಷನಲ್‌ ಕಾಂಟ್ರಾಸ್ಟ್ ಟ್ವಿನ್ನಿಂಗ್‌ ಫ್ಯಾಷನ್‌

ಇಲ್ಲೆಲ್ಲ ಮಳೆ

ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರತ್ಯೇಕ ಸ್ಥಳದಲ್ಲಿ ಮಳೆಯಾಗಲಿದೆ. ಮಲೆನಾಡಿನ ಹಾಸನ, ಶಿವಮೊಗ್ಗ, ಕೊಡಗು ಭಾಗದಲ್ಲೂ ಜಿಟಿ ಜಿಟಿ ಮಳೆ ಇರಲಿದೆ. ಉಳಿದಂತೆ ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ರಾಯಚೂರು, ವಿಜಯಪುರದಲ್ಲಿ ಮಳೆಯ ಸಿಂಚನವಾಗಲಿದೆ.

ದಕ್ಷಿಣ ಒಳನಾಡಿನಲ್ಲಿ ಇನ್ನೊಂದು ವಾರವೂ ಮಳೆ ಸುರಿಯಲಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ತುಮಕೂರು, ವಿಜಯನಗರ, ರಾಮನಗರದಲ್ಲೂ ಸಾಧಾರಣ ಮಳೆಯಾಗಲಿದೆ.

ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಸಂಜೆ ಅಥವಾ ರಾತ್ರಿ ವೇಳೆ ಕೆಲವು ಪ್ರದೇಶಗಳಲ್ಲಿ ಅತಿ ಹಗುರದೊಂದಿಗೆ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಉಷ್ಣಾಂಶ 27 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಚಳಿಗಾಲದಲ್ಲಿ ಯಾವ ಆಹಾರ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ?

ಚಳಿಯೆಂದರೆ (Winter Foods) ಒಬ್ಬೊಬ್ಬರಿಗೆ ಒಂದೊಂದು ಕಾರಣಕ್ಕೆ ಇಷ್ಟ. ಕೆಲವರಿಗೆ ಹೊದ್ದು ಮಲಗುವುದಕ್ಕೆ, ಕೆಲವರಿಗೆ ಮಂಜು ಮುಸುಕಿದ ಹಾದಿಯಲ್ಲಿ ಕ್ಯಾಮೆರಾ ಹಿಡಿದು ನಡೆಯುವುದಕ್ಕೆ, ಸುಂದರ ಜಾಕೆಟ್‌ಗಳನ್ನು ತೊಟ್ಟು ಸಂಭ್ರಮಿಸುವುದಕ್ಕೆ, ನಾಲಿಗೆಯಲ್ಲಿ ನೀರೂರುವಂಥ ಖಾರದ ತಿನಿಸುಗಳನ್ನು ಮೆಲ್ಲುವುದಕ್ಕೆ, ಕರಿದ ಸಿಹಿ ತಿಂಡಿಗಳನ್ನು ತಿನ್ನುವುದಕ್ಕೆ, ಬಿಸಿ ಕಾಫಿಯೊ ಸೂಪೋ ಹೀರುವುದಕ್ಕೆ… ಅಂತೂ ಒಬ್ಬೊಬ್ಬರಿಗೆ ಒಂದೊಂದು ಕಾರಣಗಳು ಇರಬಹುದು. ಆದರೆ ನಮ್ಮ ಆರೋಗ್ಯವನ್ನು ಕಾಪಾಡುವಂಥ ಅಭ್ಯಾಸಗಳು ಮಾತ್ರ ಚಳಿಗಾಲವನ್ನು ಸುರಕ್ಷಿತವಾಗಿ ದಾಟಿಸಬಲ್ಲವು, ಅದರಲ್ಲೂ ಮುಖ್ಯವಾಗಿ ನಮ್ಮ ಆಹಾರಾಭ್ಯಾಸಗಳು. ಚಳಿಗಾಲದಲ್ಲಿ ನಮ್ಮ ಆಹಾರ ಹೇಗಿರಬೇಕು? ಹಾಗಿರುವುದರ ಲಾಭಗಳೇನು?

ಹಸಿರಿರಲಿ

ಊಟದ ತಟ್ಟೆಯಲ್ಲಿ ಹಸಿರು ಬಣ್ಣ ಸಾಕಷ್ಟಿರಲಿ. ಅಂದರೆ ಹಸಿರು ಸೊಪ್ಪು, ಹಸಿರು ತರಕಾರಿಗಳು ಧಾರಾಳವಾಗಿರಲಿ. ಮೆಂತೆ, ಪಾಲಕ್‌ನಿಂದ ಹಿಡಿದು ದಂಟು, ಹೊನಗನ್ನೆಯವರೆಗೆ ಎಲ್ಲಾ ರೀತಿಯ ಸೊಪ್ಪುಗಳನ್ನು ತಿನ್ನಿ. ಕ್ಯಾಪ್ಸಿಕಂ, ಬೆಂಡೆಕಾಯಿಯಿಂದು ಹಿಡಿದು, ಎಲೆಕೋಸು, ಬ್ರೊಕೊಲಿಯವರೆಗೆ ಹಸಿರು ತರಕಾರಿಗಳನ್ನು ಭರಪೂರ ಸೇವಿಸಿ. ಚಳಿಗಾಲದಲ್ಲಿ ಏರುವ ತೂಕಕ್ಕೆ ಕಡಿವಾಣ ಹಾಕುವುದರಿಂದ ಹಿಡಿದು, ಮಧುಮೇಹ ನಿಯಂತ್ರಣ, ರಕ್ತದೊತ್ತಡ ಹತೋಟಿಯವರೆಗೆ ಹಲವು ರೀತಿಯಲ್ಲಿ ಇವು ಉಪಕಾರ ಮಾಡುತ್ತವೆ.

ಲಾಭವೇನು?

ಹಸಿರು ತರಕಾರಿಗಳಲ್ಲಿ ಬೀಟಾ ಕ್ಯಾರೊಟಿನ್‌ ಎಂಬ ಉತ್ಕರ್ಷಣ ನಿರೋಧಕ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಉದ್ದೀಪಿಸಲು ಅಗತ್ಯ. ಇದಲ್ಲದೆ ಕಬ್ಬಿಣ ಮತ್ತು ಫೋಲೇಟ್ ಅಂಶಗಳು ಹೇರಳವಾಗಿವೆ. ಇವುಗಳು ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ರಕ್ತದಲ್ಲಿ ಆಮ್ಲಜನಕದ ಪೂರೈಕೆಗೆ ಆವಶ್ಯಕವಾದವು. ಜೊತೆಗೆ ಈ ತರಕಾರಿಗಳಲ್ಲಿರುವ ನಾರಿನಂಶ. ಹಲವು ರೀತಿಯ ರೋಗಗಳಿಂದ ನಾರು ನಮ್ಮನ್ನು ದೂರ ಇರಿಸುತ್ತದೆ.

ಬೇರು ಗಡ್ಡೆ ಗೆಣಸುಗಳು

ಗಿಡಗಳ ಬೇರು ಮತ್ತು ಗಡ್ಡೆಗಳು ಪೋಷಕಾಂಶಗಳ ಖಜಾನೆಯಂತೆ ವರ್ತಿಸುತ್ತವೆ. ಅದರಲ್ಲೂ ಚಳಿಗಾಲವೆಂದರೆ ಬಹಳಷ್ಟು ಗಡ್ಡೆಗಳು ಬೆಳೆದು-ಕೀಳುವ ದಿನಗಳು. ಈರುಳ್ಳಿ, ಅರಿಶಿನ, ಶುಂಠಿ, ಸುವರ್ಣ ಗಡ್ಡೆ, ಗೆಣಸು, ಬೀಟ್‌ರೂಟ್‌, ಗಜ್ಜರಿ ಗಡ್ಡೆ, ಟರ್ನಿಪ್‌ ಮುಂತಾದವುಗಳನ್ನು ಧಾರಾಳವಾಗಿ ಬಳಸಿ. ದೇಹಕ್ಕೆ ಉತ್ತಮ ಗುಣಮಟ್ಟದ ಪೋಷಕಾಂಶಗಳನ್ನು ಈ ಗಡ್ಡೆ-ಗೆಣಸುಗಳು ಒದಗಿಸಬಲ್ಲವು.

ಲಾಭಗಳೇನು?

ಗೆಣಸು ತಿನ್ನುವಾಗ ಅದರ ಸಿಪ್ಪೆ ಸಮೇತ ತಿನ್ನಿ. ಇದರಿಂದ ವಿಟಮಿನ್‌ ಎ ಅಂಶ ಸಮೃದ್ಧವಾಗಿ ದೇಹಕ್ಕೆ ದೊರೆಯುತ್ತದೆ. ಬೀಟ್‌, ಕ್ಯಾರೆಟ್‌ಗಳಿಂದ ವಿಟಮಿನ್‌ ಎ, ಬೀಟಾ ಕ್ಯಾರೊಟಿನ್‌ಗಳು ದೊರೆಯುತ್ತವೆ. ಉಳಿದ ತರಕಾರಿಗಳಿಗೆ ಹೋಲಿಸಿದರೆ ಗಡ್ಡೆಗಳಲ್ಲಿ ಕ್ಯಾಲರಿ ಸ್ವಲ್ಪ ಹೆಚ್ಚು. ಆದರೆ ಚಳಿಗಾಲಕ್ಕೆ ಕೊಂಚ ಹೆಚ್ಚಾಗಿಯೇ ದೇಹ ಬಯಸುತ್ತದೆ ಎಂಬುದನ್ನು ಗಮನಿಸಿದರೆ, ಪೌಷ್ಟಿಕಾಂಶಯುಕ್ತ ಆಹಾರವನ್ನು ಸ್ವಲ್ಪ ಹೆಚ್ಚು ನೀಡುವುದಲ್ಲಿ ಮೋಸವಿಲ್ಲ ತಾನೇ?

ಇಡೀ ಧಾನ್ಯಗಳು

ಅಂದರೆ ಹೆಚ್ಚು ಸಂಸ್ಕರಿಸದೆ ಇರುವಂಥ ಧಾನ್ಯಗಳಿವು. ಅವುಗಳ ತೌಡು, ಸಿಪ್ಪೆಗಳೆಲ್ಲಾ ಬೇರ್ಪಡದೆ- ಎಲ್ಲವುಗಳ ಸಮೇತ ತಿನ್ನುವಂಥವು. ಇವುಗಳು ದೇಹಕ್ಕೆ ಅತ್ಯಗತ್ಯವಾದ ಸಂಕೀರ್ಣ ಪಿಷ್ಟವನ್ನು ನಾರಿನ ಸಮೇತ ಒದಗಿಸಬಲ್ಲವು. ಅದರಲ್ಲೂ ಜೋಳ, ಸಜ್ಜೆ, ರಾಗಿ ಮುಂತಾದ ಸಿರಿ ಧಾನ್ಯಗಳೆಲ್ಲಾ ಆಹಾರದಲ್ಲಿ ಇರಬೇಕು. ಇವು ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ತೆಗೆದುಕೊಂಡು, ದೀರ್ಘ ಕಾಲದವರೆಗೆ ಶರೀರಕ್ಕೆ ಅಗತ್ಯವಾದ ಶಕ್ತಿಯನ್ನು ಪೂರೈಸುತ್ತಲೇ ಇರುತ್ತವೆ.

ಲಾಭಗಳೇನು?

ಇವುಗಳಲ್ಲಿ ಹಲವು ರೀತಿಯ ಬಿ ಜೀವಸತ್ವಗಳು, ನಾರು, ಕಬ್ಬಿಣ, ಜಿಂಕ್‌, ತಾಮ್ರ ಮುಂತಾದ ಖನಿಜಗಳು ಸಾಂದ್ರವಾಗಿವೆ. ಇಂಥ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ಮಧುಮೇಹ, ಹೃದಯ ರೋಗಗಳು ಮತ್ತು ಪಾರ್ಶ್ವವಾಯುವಿನಂಥ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ದೇಹದಲ್ಲಿ ಕೆಟ್ಟ ಕೊಬ್ಬನ್ನು ಕತ್ತರಿಸಿ, ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳ ವೃದ್ಧಿಗೂ ಇವು ಕಾರಣವಾಗುತ್ತವೆ

ಬೀಜಗಳು

ಬೀಜ ಮತ್ತು ಕಾಯಿಗಳು ನಿಜಾರ್ಥದಲ್ಲಿ ಸತ್ವಗಳ ಪುಟ್ಟ ಗುಡಾಣಗಳಿದ್ದಂತೆ. ಅವುಗಳೆಲ್ಲ ಒಂದಿಲ್ಲೊಂದು ಕಾರಣಕ್ಕೆ ಸೂಪರ್‌ಫುಡ್‌ ಎಂದು ಕರೆಸಿಕೊಳ್ಳುವಂಥವು. ಇವುಗಳನ್ನು ಸರ್ವ ಋತುಗಳಲ್ಲೂ ತಿನ್ನುವುದು ಅಗತ್ಯವಾದರೂ, ಚಳಿಗಾಲದಲ್ಲಿ ಇನ್ನಷ್ಟು ಆವಶ್ಯಕ. ದೇಹಕ್ಕೆ ಬೇಕಾಗುವ ಹೆಚ್ಚುವರಿ ಪೋಷಕಾಂಶಗಳು ಮತ್ತು ಕ್ಯಾಲರಿಗಳನ್ನು ಆರೋಗ್ಯಕರ ರೀತಿಯಲ್ಲಿ ಇವು ಪೂರೈಸಬಲ್ಲವು.

ಲಾಭಗಳೇನು?

ಬೀಜ-ಕಾಯಿಗಳಲ್ಲಿ ಕೊಬ್ಬು ಹೆಚ್ಚಿದ್ದರೂ ಸ್ಯಾಚುರೇಟೆಡ್‌ ಕೊಬ್ಬು ಅತಿ ಕಡಿಮೆ. ಹಾಗಿರುವ ಇರುವಂಥ ಕೊಬ್ಬಿನಂಶವೆಲ್ಲವೂ ದೇಹಕ್ಕೆ ಬೇಕಾದ ಉತ್ತಮ ಕೊಬ್ಬುಗಳೇ. ಉತ್ಕೃಷ್ಟ ಗುಣಮಟ್ಟದ ಪ್ರೊಟೀನ್‌ ಇವುಗಳಲ್ಲಿದೆ. ಅಧಿಕ ಪ್ರಮಾಣದ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ದೊರೆಯುತ್ತವೆ. ವಿಟಮಿನ್‌ ಇ, ಬಿ೬, ನಿಯಾಸಿನ್‌, ಫೋಲೇಟ್‌, ಮೆಗ್ನೀಶಿಯಂ, ಸತು, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಸೆಲೆನಿಯಂ, ಫಾಸ್ಫರಸ್‌, ಪೊಟಾಶಿಯಂ… ಇನ್ನೆಷ್ಟು ಬೇಕು ಸತ್ವಗಳು? ಇಷ್ಟಾದರೂ ಸಾಮಾನ್ಯವಾಗಿ ಒಂದು ಮಿತಿಯಲ್ಲಿ ಇವುಗಳನ್ನು ತಿಂದರೆ ದೇಹದ ತೂಕ ಹೆಚ್ಚುವುದಿಲ್ಲ ಎಂಬುದು ಇವುಗಳ ವಿಶೇಷತೆ.

ಸಾಂಬಾರ ಪದಾರ್ಥಗಳು

ಆಡುನುಡಿಯಲ್ಲಿ ಮಸಾಲೆಗಳು ಎಂದೇ ಇವು ಕರೆಸಿಕೊಳ್ಳುತ್ತವೆ. ಬೆಳ್ಳುಳ್ಳಿ, ಶುಂಠಿ, ಚಕ್ಕೆ, ಲವಂಗ, ಏಲಕ್ಕಿ, ಅರಿಶಿನ, ಕಾಳುಮೆಣಸು, ಚಕ್ರಮೊಗ್ಗು ಮುಂತಾದವು ನಮ್ಮ ಆಹಾರದ ರುಚಿ, ಘಮ ಹೆಚ್ಚಿಸುವುದು ಮಾತ್ರವಲ್ಲ, ಸತ್ವಗಳನ್ನೂ ಹೆಚ್ಚಿಸುತ್ತವೆ.

ಲಾಭಗಳೇನು?

ದಾಲ್ಚಿನ್ನಿ ಚಕ್ಕೆಯಂಥವು ಕೊಲೆಸ್ಟ್ರಾಲ್‌ ಕಡಿಮೆ ಮಾಡಿ, ರಕ್ತದಲ್ಲಿ ಸಕ್ಕರೆಯಂಶ ಹೆಚ್ಚದಂತೆ ಮಾಡುವಲ್ಲಿ ನೆರವಾಗಬಲ್ಲವು. ಅರಿಶಿನವು ಅತ್ಯಂತ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಪ್ರತಿರೋಧಕ ಶಕ್ತಿ ಹೆಚ್ಚಿಸುವುದರಿಂದ ಹಿಡಿದು ಮೆದುಳಿನ ರಕ್ಷಣೆಯವರೆಗೆ ಅದರ ಗುಣಗಳು ಹತ್ತಾರಿವೆ. ಬೆಳ್ಳುಳ್ಳಿಗೆ ಸೋಂಕು ನಿರೋಧಕ ಸಾಮರ್ಥ್ಯ, ಶುಂಠಿಗೆ ಜೀರ್ಣಾಂಗಗಳ ಕಾರ್ಯ ವೃದ್ಧಿ- ಹೀಗೆ ಪ್ರತಿಯೊಂದು ಮಸಾಲೆಗೂ ಸದ್ಗುಣಗಳು ಹಲವಾರಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version