Site icon Vistara News

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

karnataka weather forecast karnataka rains

ಬೆಂಗಳೂರು: ಮರಾಠಾವಾಡದಿಂದ ಕೊಮೊರಿನ್ ಪ್ರದೇಶದವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಇದು ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ (Karnataka Weather Forecast) ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ (Karnataka Rains) ಭಾರಿ ಮಳೆಯಾಗುವ (Rain News) ಸಾಧ್ಯತೆ ಇದೆ. ಕೆಲವು ಸ್ಥಳಗಳಲ್ಲಿ ಗಾಳಿ ವೇಗವು 40-50 ಕಿ.ಮೀನಲ್ಲಿ ಇರಲಿದ್ದು, ಇದರೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ಮುಖ್ಯವಾಗಿ ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಮಂಡ್ಯ, ದಾವಣಗೆರೆಯಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಇನ್ನೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಜತೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಬಾಗಲಕೋಟೆ, ಗದಗ, ಕೊಪ್ಪಳ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬೀಸುವ ಗಾಳಿಯೊಂದಿಗೆ ಮಧ್ಯಮ ಮಳೆಯಾಗುವ ನಿರೀಕ್ಷೆ ಇದೆ. ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ತುಮಕೂರು, ವಿಜಯನಗರದಲ್ಲೂ ಇದೇ ಪರಿಸ್ಥಿತಿ ಇರಲಿದೆ.

ಇದನ್ನೂ ಓದಿ: Road Accident : ತಂದೆ ಜತೆಗೆ ಕಾರ್‌ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ ಮಗು ಅಪ್ಪಚ್ಚಿ

ಚಿಕ್ಕಮಗಳೂರಲ್ಲಿ ಮಳೆಗೆ ಮರ ಬಿದ್ದು ಮಹಿಳೆ ಸಾವು

ನಿನ್ನೆ ಭಾನುವಾರ ಚಿಕ್ಕಮಗಳೂರಲ್ಲಿ ಸುರಿದ ಭಾರಿ ಮಳೆಗೆ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜೋರಾಗಿ ಸುರಿದ ಮಳೆಗೆ ಬೃಹತ್‌ ಗಾತ್ರದ ಮರವೊಂದು ರಸ್ತೆ ಬದಿ ನಡೆದು ಹೋಗುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮರದ ಅಡಿ ಸಿಲುಕಿದ ಮಹಿಳೆ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಸವಿತಾ (48) ಮೃತ ದುರ್ದೈವಿ. ಚಿಕ್ಕಮಗಳೂರಿನ ಎನ್‌ಆರ್‌ ಪುರ ‌ತಾಲೂಕಿನ ಕಟ್ಟಿಮನಿ ಗ್ರಾಮದ ಬಳಿ ಘಟನೆ ನಡೆದಿದೆ.

ಇದೇ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ‌ಕಾರಿನ ಮೇಲೂ ಮರ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ‌ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮರ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ಜಖಂಗೊಂಡಿದೆ. ಸ್ಥಳೀಯರು ಗಾಯಾಳುಗಳ ರಕ್ಷಣೆ ಮಾಡಿ ಆಸ್ಪತ್ರೆಗೆ ರವಾನಿಸಿದ್ದರು. ಸ್ಥಳಕ್ಕೆ ಎನ್ ಆರ್ ಪುರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು.

ಹುಬ್ಬಳ್ಳಿಯಲ್ಲಿ ಮಳೆ ಅವಾಂತರಕ್ಕೆ ಬೈಕ್‌ಗಳಿಗೆ ಹಾನಿ

ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಕಮರ್ಷಿಯಲ್ ಕಾಂಪ್ಲೆಕ್ಸ್‌ನಲ್ಲಿದ್ದ 40ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿಯಾಗಿದೆ. ಕಮರ್ಷಿಯಲ್ ಕಾಂಪ್ಲೆಕ್ಸ್‌ನ ಬೇಸ್ಮೇಂಟ್‌ನಲ್ಲಿ ಮಳೆ ನೀರು ನುಗ್ಗಿದ್ದು, ತಡೆಗೋಡೆ ಕುಸಿದು ಕೆಲವು ಬೈಕ್‌ಗಳಿಗೆ ಹಾನಿಯಾಗಿದೆ. ಕಾಂಪ್ಲೆಕ್ಸ್‌ ಸಿಬ್ಬಂದಿ ಮೆಕ್ಯಾನಿಕಲ್ ಕರೆದುಕೊಂಡು ಬಂದು ಬೈಕ್ ರೀಪೇರಿ ಮಾಡಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ‌ದಲ್ಲಿ ನೆಲಕಚ್ಚಿದ ಪಪ್ಪಾಯಿ ಬೆಳೆ

ಮಳೆಯ ಆರ್ಭಟಕ್ಕೆ ಎರಡು ಎಕರೆ ಪಪ್ಪಾಯಿ ಬೆಳೆ ನೆಲಕಚ್ಚಿದೆ. ಕಟಾವಿಗೆ ಬಂದಿದ್ದ ಪಪ್ಪಾಯಿ‌ ಬೆಳೆ ಮಣ್ಣುಪಾಲಾಗಿದೆ, ಚಿಕ್ಕಬಳ್ಳಾಪುರದ ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ. ದೇವರಗುಡಿಪಲ್ಲಿ ಗ್ರಾಮದ ವೆಂಕಟಶಿವಪ್ಪ ಎಂಬುವರಿಗೆ ಸೇರಿದ ಪಪ್ಪಾಯಿ ಬೆಳೆ ಕೊಯ್ಲಿಗೆ ಬಂದಿತ್ತು. ಇದೀಗ ಗುಡುಗು‌ ಸಿಡಿಲು ಸಮೇತ ಸುರಿದ ಮಳೆಗೆ ಬೆಳೆ ನಾಶವಾಗಿದ್ದು, ರೈತ ಕಂಗಲಾಗಿದ್ದಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆಗೆ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

ತರೀಕೆರೆ, ಅಜ್ಜಂಪುರ ತಾಲೂಕಿನ ಹಲವು ಭಾಗಗಳಲ್ಲೂ ಮಳೆ ಸುರಿಯುತ್ತಿತ್ತು. ಚಿಕ್ಕಮಗಳೂರು ನಗರದ ಕೋಟೆ, ಹಿರೇಮಗಳೂರು, ಜಯನಗರ ಶಂಕರಪುರ ಭಾಗದಲ್ಲಿ ಧಾರಾಕಾರ ಮಳೆಯಾಗಿತ್ತು. ಕಳಸಾಪುರ, ಬೆಳವಾಡಿ, ಮರ್ಲೆ, ತಿಳಿದಂತೆ ಹಲವು ಗ್ರಾಮಗಳಲ್ಲಿ ಮಳೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version