ಬೆಂಗಳೂರು: ಬುಧವಾರ (ನ.22) ಸಂಜೆ ರಾಜಧಾನಿ ಬೆಂಗಳೂರಿನಲ್ಲಿ (Bengaluru Rains) ವರ್ಷಧಾರೆ ಶುರುವಾಗಿದೆ. ಕೆ.ಆರ್ ಸರ್ಕಲ್, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ರೇಸ್ ಕೋರ್ಸ್, ಶೇಷಾದ್ರಿಪುರಂ, ಮಲ್ಲೇಶ್ವರ, ರಾಜಾಜಿನಗರ ಸೇರಿ ಹಲವೆಡೆ ಸಾಧಾರಣ (Karnataka Weather Forecast) ಮಳೆಯಾಗಿದೆ. ಕಳೆದೆರಡು ದಿನಗಳಿಂದಲ್ಲೂ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇತ್ತು. ಸಂಜೆ ಸುರಿದ ದಿಢೀರ್ ಮಳೆಗೆ (Rain News) ವಾಹನ ಸವಾರರು ಹಾಗೂ ಸಾರ್ವಜನಿಕರು ಕಿರಿಕಿರಿ ಅನುಭವಿಸಿದರು.
ನ. 23-24ರಂದು ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ, ಕರಾವಳಿಯ ಕೆಲವು ಕಡೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲೂ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ.
ಭಾರಿ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಮುಂದಿನ 48 ಗಂಟೆಯಲ್ಲಿ ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಚಾಮರಾಜನಗರ, ಮಂಡ್ಯ, ಮೈಸೂರು, ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಮನಗರ, ಚಿಕ್ಕಬಳ್ಳಾಪುರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಒಳನಾಡಿನ ಹಾವೇರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆ ಸಾಧ್ಯತೆ ಇದೆ. ಉಳಿದಂತೆ ಒಣಹವೆ ಇರಲಿದೆ.
ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರಲ್ಲಿ ವ್ಯಾಪಕ ಮಳೆಯಾಗಲಿದ್ದು, ಶಿವಮೊಗ್ಗದಲ್ಲಿ ಸಾಧಾರಣ ಮಳೆಯಾಗಬಹುದು. ಕರಾವಳಿಯ ದಕ್ಷಿಣ ಕನ್ನಡ ಭರ್ಜರಿ ಮಳೆಯಾದರೆ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ.
ಇದನ್ನೂ ಓದಿ: Anganawadi workers: ಕನಿಷ್ಠ ವೇತನಕ್ಕಾಗಿ ಅಂಗನವಾಡಿ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ
ಮೋಡ ಕವಿದ ವಾತಾವರಣ
ಬೆಂಗಳೂರಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಬಹುದು. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಇನ್ನು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಇತ್ತು. ಕಡಿಮೆ ಉಷ್ಣಾಂಶ 15.6 ಡಿ.ಸೆ ವಿಜಯಪುರದಲ್ಲಿ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.