ಬೆಂಗಳೂರು: ರಾಜ್ಯದಲ್ಲಿ ಹಲವು ಕಡೆ ಬುಧವಾರ ಮತ್ತು ಗುರುವಾರ (ಮಾ. 20, 21) ಮಳೆಯಾಗುವ ಮುನ್ಸೂಚನೆ (Rain forecast) ನೀಡಲಾಗಿದೆ. ಹೀಗಾಗಿ ಬಿಸಿಲಿನಿಂದ ಬಸವಳಿದಿರುವ ಜನರಿಗೆ ವರುಣನ ಸಿಂಚನವಾಗಲಿದೆ. ಒಳನಾಡು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (Meteorological Department) ಅಂದಾಜಿಸಿದೆ. ಇನ್ನು ಕರಾವಳಿ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಬಹುದು ಎಂದು ರಾಜ್ಯ ಹವಾಮಾನ ಇಲಾಖೆ ತನ್ನ ಮುನ್ಸೂಚನಾ ವರದಿಯಲ್ಲಿ (Karnataka Weather Forecast) ಹೇಳಿದೆ.
ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದ ಕೆಲವು ಕಡೆ ತಾಪಮಾನದಲ್ಲಿ ಏರಿಕೆ ಆಗಲಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮುಂದಿನ ಒಂದು ವಾರಗಳ ಕಾಲ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಇದು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿಯೂ ಒಂದು ವಾರ ಕಾಲ 34 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಅಂದಾಜಿಸಲಾಗಿದೆ.
ದಕ್ಷಿಣ ಮತ್ತು ಉತ್ತರ ಒಳನಾಡಲ್ಲಿ ಉಷ್ಣಾಂಶ ಹೆಚ್ಚಳ
ದಕ್ಷಿಣ ಒಳನಾಡಿನ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ ಸುತ್ತಲಿನ ಒಂದೆರಡು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1 – 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ. ಹೀಗಾಗಿ ಸೆಕೆಯು ಹೆಚ್ಚಾಗಿ ಬಾಧಿಸಲಿದೆ. ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಅವುಗಳೆಂದರೆ ಬಾಗಲಕೋಟೆ, ಕೊಪ್ಪಳ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ.
ಬೆಂಗಳೂರಲ್ಲಿ ಬಿಸಿಲ ಧಗೆ
ರಾಜಧಾನಿ ಬೆಂಗಳೂರಲ್ಲಿ ಕೆಲವೆಡೆ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು. ಉಳಿದಂತೆ ಬಿಸಿಲ ಧಗೆಯು ಸುಸ್ತು ಮಾಡಲಿದೆ. ರಾತ್ರಿಯಂದು ಬಿಸಿ ಗಾಳಿ ಬೀಸಲಿದೆ. ಗರಿಷ್ಠ ಉಷ್ಣಾಂಶ 34 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಇನ್ನೂ ಓದಿ: Healthy Drinks For Summer: ಬೇಸಿಗೆ ಬರುತ್ತಿದ್ದಂತೆ ನಮ್ಮ ದೇಹ ಬಯಸುವ ಆರೋಗ್ಯಕರ ಪೇಯಗಳಿವು!
ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ
ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್)
ಬೆಂಗಳೂರು ನಗರ: 34 ಡಿ.ಸೆ – 22 ಡಿ.ಸೆ
ಮಂಗಳೂರು: 34 ಡಿ.ಸೆ – 25 ಡಿ.ಸೆ
ಚಿತ್ರದುರ್ಗ: 36 ಡಿ.ಸೆ – 22 ಡಿ.ಸೆ
ಗದಗ: 37 ಡಿ.ಸೆ – 21 ಡಿ.ಸೆ
ಹೊನ್ನಾವರ: 33 ಡಿ.ಸೆ- 22 ಡಿ.ಸೆ
ಕಲಬುರಗಿ: 39 ಡಿ.ಸೆ – 26 ಡಿ.ಸೆ
ಬೆಳಗಾವಿ: 35 ಡಿ.ಸೆ – 21 ಡಿ.ಸೆ
ಕಾರವಾರ: 35 ಡಿ.ಸೆ – 22 ಡಿ.ಸೆ