ಬೆಂಗಳೂರು: ವಾರಾಂತ್ಯದಲ್ಲಿ ಕರಾವಳಿಯ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ (Rain News) ಸಾಧ್ಯತೆಯಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ (Weather report) ಸಾಧ್ಯತೆ ಇದೆ.
ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಅತಿ ಕಡಿಮೆ ಮಳೆಯಾಗುವ ಸಾಧ್ಯತೆ ಇದೆ.
ಉತ್ತರ ಒಳನಾಡಿನ ಜಿಲ್ಲೆಯಾದ ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ, ಬಳ್ಳಾರಿ, ವಿಜಯನಗರ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಚದುರಿದಂತೆ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಭಾಗಗಳಲ್ಲಿ ಚದುರಿದ ಕಡಿಮೆ ಮಳೆಯಾಗುವ ಸಾಧ್ಯತೆಯಿದೆ.
ಭಾರೀ ಮಳೆ ಮುನ್ನೆಚ್ಚರಿಕೆ
ಮುಂದಿನ 24 ಗಂಟೆಯಲ್ಲಿ ಕರಾವಳಿಯ ಎಲ್ಲ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ಇರಲಿದೆ. ಇನ್ನು ಮೀನುಗಾರರಿಗೆ ಎಚ್ಚರಿಕೆ ಇಲ್ಲ.
ಬೆಂಗಳೂರಲ್ಲಿ ಸಂಜೆ ವೇಳೆಗೆ ಮಳೆ ಕಾಟ
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಕೆಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 28 ಮತ್ತು ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ
ಧರೆಗೆ ತಂಪರೆದ ವರುಣ
ಶನಿವಾರ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸುರಿದಿದೆ. ಕಳೆದೊಂದು ವಾರದಿಂದ ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದ ವರುಣ ಧರೆಯನ್ನು ತಂಪಾಗಿಸಿದ್ದಾನೆ. ಕೋಟೆನಾಡು ಚಿತ್ರದುರ್ಗದಲ್ಲಿ ಬಿಸಿಲಿನಿಂದ ಹೈರಾಣಾಗಿದ್ದರು. ಮಧ್ಯಾಹ್ನದ ಬಳಿಕ ಮಳೆಯಾಗಿದೆ. ಮಳೆಗಾಗಿ ಮುಗಿಲತ್ತ ಮುಖಮಾಡಿದ್ದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿತ್ತು. ಮಳೆಯಿಲ್ಲದೆ ಶೇಂಗಾ, ಮೆಕ್ಕೆಜೋಳ ಬೆಳೆಗಳು ಒಣಗುತ್ತಿದ್ದವು. ಇಂದು ಒಂದು ಗಂಟೆ ಸುರಿದ ಮಳೆಗೆ ಇಳೆ ತಂಪಾಗಿದೆ.
ಇತ್ತ ಕಾಫಿನಾಡು ಚಿಕ್ಕಮಗಳೂರಲ್ಲಿ ಭರ್ಜರಿ ಮಳೆಯಾಗಿದೆ. ಬೆಳಗ್ಗೆ ಎಲ್ಲ ಮೋಡ ಕವಿದ ವಾತಾವರಣ ಇತ್ತು. ಮಲೆನಾಡ ಘಟ್ಟಪ್ರದೇಶದ ಕೆಲ ಭಾಗದಲ್ಲಿ ಜೋರು ಮಳೆ ಆಗಿದೆ. ಚಿಕ್ಕಮಗಳೂರು, ಬಾಳೆಹೊನ್ನೂರು, ಮೂಡಿಗೆರೆ, ಎನ್.ಆರ್.ಪುರದಲ್ಲಿ ಮಳೆ ಆಗಿದೆ. ಬರದಿಂದ ಬಳಲಿದ್ದ ಮೈಸೂರಿನಲ್ಲೂ ಮಳೆಯ ಸಿಂಚನವಾಗಿದೆ. ಅರ್ಧ ಗಂಟೆಗೂ ಹೆಚ್ಚು ಸಮಯ ತುಂತುರು ಮಳೆ ಆಗಿದೆ. ಆ ತುಂತುರು ಮಳೆಯಲ್ಲೆ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳುತ್ತಿದ್ದ ದೃಶ್ಯ ಕಂಡು ಬಂತು. ವಿಜಯನಗರದಲ್ಲೂ ಬ್ರೇಕ್ ಕೊಟ್ಟಿದ್ದ ವರುಣ ಕೆಲಹೊತ್ತು ತನ್ನ ಪ್ರದರ್ಶನವನ್ನು ತೋರಿದ್ದ. ಗಾಳಿ ಮಿಶ್ರಿತ ಮಳೆಗೆ ವಾಹನ ಸವಾರರು ಪರದಾಡಿದ್ದರು.
ಇದನ್ನೂ ಓದಿ: Cheating case : ಯರ್ರಾಬಿರ್ರಿ ಚಿತ್ರನಟನಿಗೆ ಮೋಸ ಮಾಡಿದ ಪಾಲಿಕೆ ವಲಯ ಆಯುಕ್ತ!
ರಾಜ್ಯದಲ್ಲಿ ಶುಕ್ರವಾರ ನೈರುತ್ಯ ಮುಂಗಾರು ಸಾಮಾನ್ಯವಾಗಿತ್ತು. ಕರಾವಳಿಯ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಭಾರಿ ಮಳೆ ಪ್ರಮಾಣ ಕೋಟ (ಉಡುಪಿ ಜಿಲ್ಲೆ) 7 ಸೆಂ.ಮೀ ವರದಿ ಆಗಿದೆ. ಉಳಿದಂತೆ ಹೊನ್ನಾವರ 6 ಹಾಗೂ ಕುಂದಾಪುರ, ಮಂಗಳೂರು ವಿಮಾನ ನಿಲ್ದಾಣ , ಮಂಕಿ ಸೇರಿ ಉಡುಪಿಯಲ್ಲಿ ತಲಾ 5 ಸೆಂ.ಮೀ ಮಳೆಯಾಗಿದೆ.
ಮಾಣಿ, ಪಣಂಬೂರು, ಕ್ಯಾಸಲ್ ರಾಕ್, ಗೆರೆಸೊಪ್ಪ, ವಿರಾಜಪೇಟೆಯಲ್ಲಿ ತಲಾ 4 ಸೆಂ.ಮೀ ಹಾಗೂ ಗೋಕರ್ಣ, ಕದ್ರಾ, ಶಿರಾಲಿ, ಕುಮಟಾ, ಕಾರ್ಕಳ, ಸಿದ್ದಾಪುರ , ಪುತ್ತೂರು ಎಚ್ಎಂಎಸ್, ಉಪ್ಪಿನಂಗಡಿ , ಮಂಗಳೂರು, ಭಾಗಮಂಡಲ, ಸೋಮವಾರಪೇಟೆ, ಕೊಟ್ಟಿಗೆಹಾರ, ಲಿಂಗನಮಕ್ಕಿ ಎಚ್ಎಂಎಸ್ ತಲಾ 3 ಸೆಂ.ಮೀ ಮಳೆಯಾಗಿದೆ.
ಕೊಲ್ಲೂರು, ಕಾರವಾರ, ಅಣ್ಣಿಗೆರೆ Ars , ಸಾಂತಾಪುರ , ಹಿಡಕಲ್ ಅಣೆಕಟ್ಟು ಜಯಪುರ, ಕೊಪ್ಪ, ಶೃಂಗೇರಿ Hms , ಉಚ್ಚಂಗಿದುರ್ಗ, ಮೂರ್ನಾಡು, ನಾಪೋಕ್ಲು ತಾಳಗುಪ್ಪದಲ್ಲಿ ತಲಾ 2 ಸೆಂ.ಮೀ ಮಳೆಯಾಗಿದೆ. ಧರ್ಮಸ್ಥಳ, ಮೂಲ್ಕಿ , ಬೆಳ್ತಂಗಡಿ , ಯಲ್ಲಾಪುರ, ಅಂಕೋಲಾ, ಜೋಯಿಡಾ , ಔರಾದ್ , ಬಿ. ಬಾಗೇವಾಡಿ , ರಾಣೆಬೆನ್ನೂರು , ಶಾಹಪುರ ಸೈದಾಪುರ , ಬಾಳೆಹೊನ್ನೂರು, ಎನ್ ಆರ್ ಪುರ, ಕಮ್ಮರಡಿ, ಕಳಸ , ಅರಕಲಗೂಡು , ಪೊನ್ನಂಪೇಟೆ, ಹಾರಂಗಿ ತಲಾ 1 ಸೆಂ.ಮೀ ಮಳೆಯಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ