Site icon Vistara News

Cyclone Asani ದುರ್ಬಲವಾದರೂ ಮೂರ್ನಾಲ್ಕು ದಿನ ಭಾರೀ ಮಳೆ: ಉತ್ತಮ ಮುಂಗಾರಿನ ಮುನ್ಸೂಚನೆ

Cyclone mocha

ಬೆಂಗಳೂರು: ಅಸಾನಿ ಚಂಡಮಾರುತ(Cyclone Asani) ದುರ್ಬಲಗೊಂಡಿದೆ. ಆದರೆ ಅದೇ ಜಾಗದಲ್ಲಿ ಮೇಲ್ಮೈ ಸುಳಿಗಾಳಿಯೊಂದು ರೂಪುಗೊಂಡಿದ್ದು, ಇನ್ನೂ ಮೂರ್ನಾಲ್ಕು ದಿನ ರಾಜ್ಯದಲ್ಲಿ ಮಳೆಯಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆಯ(IMD) ಹವಾಮಾನ ತಜ್ಞ ಸದಾನಂದ ಅಡಿಗ ಮಾಹಿತಿ ನೀಡಿದ್ದಾರೆ.
ಮೇ 15 ರಿಂದ ಮೇ 17ರವರೆಗೆ ರಾಜ್ಯದಲ್ಲಿ ಮಳೆ ಆಗಲಿದೆ. ಬೀದರ್‌ ಮತ್ತು ಕಲಬುರಗಿ ಜಿಲ್ಲೆ ಹೊರತು ಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿ, ಹಳದಿ ಅಲರ್ಟ್‌ ಘೋಷಣೆ ಮಾಡಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ | Cyclone Asani | ಪಥ ಬದಲಿಸುತ್ತಿದೆ ಚಂಡಮಾರುತ: ಆಂಧ್ರ ಪ್ರದೇಶದಲ್ಲಿ ರೆಡ್‌ ಅಲರ್ಟ್‌

ಮುಂಗಾರು ಕುರಿತು ಮಾಹಿತಿ ನೀಡಿದ ಸದಾನಂದ ಅಡಿಗ, ರಾಜ್ಯದಲ್ಲಿ ವಾಡಿಕೆಗಿಂತ ಮೊದಲೇ ಈ ಬಾರಿ ಮಾನ್ಸೂನ್‌ ಮಳೆ ಆಗುತ್ತಿದೆ. ಪ್ರತಿ ವರ್ಷ ಜೂನ್‌ 1 ಅಥವಾ ಅದರ ಬಳಿಕ ಕೇರಳದ ಕರಾವಳಿಗೆ ಮುಂಗಾರು ಬರುತ್ತಿತ್ತು. ಈ ವರ್ಷ ಮೇ ಅಂತ್ಯಕ್ಕೇ ರಾಜ್ಯಕ್ಕೆ ಮುಂಗಾರು ಪ್ರವೇಶ ಸಾಧ್ಯತೆ ಇದೆ.

ಮೇ 27ಕ್ಕೆ ಕೇರಳಕ್ಕೆ ಬರಲಿರುವ ಮುಂಗಾರು, ಬಳಿಕ 3 ದಿನದಲ್ಲಿ ರಾಜ್ಯಕ್ಕೆ ಬರಲಿದೆ. ಇದರ ಪರಿಣಾಮವಾಗಿ ನಂತರದ 3-4 ದಿನದ ಒಳಗಾಗಿ ಮಾನ್ಸೂನ್‌ ಮಾರುತ ರಾಜ್ಯವನ್ನು ಪ್ರವೇಶಿಸಲಿದೆ. ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರು ಮೂಲಕ ಪ್ರವೇಶಿಸಲಿದ್ದು, ಬಳಿಕ 3 ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡನ್ನು ಮಾನ್ಸೂನ್‌ ಪ್ರವೇಶಿಸುತ್ತದೆ. ಹೀಗಾಗಿ ಈ ವರ್ಷ ಮುಂಗಾರಿನಲ್ಲಿ ರಾಜ್ಯದಲ್ಲಿ ಉತ್ತಮ ಮಳೆ ಆಗುತ್ತದೆ ಎಂಬ ಮುನ್ಸೂಚನೆಯನ್ನು ಐಎಂಡಿ ನೀಡಿದೆ.

ಇದನ್ನೂ ಓದಿ| Bangalore Rain | ಬೆಂಗಳೂರಲ್ಲಿ ನಿನ್ನೆ ರಾತ್ರಿಯಿಂದಲೂ ಮಳೆ; 22 ವರ್ಷಗಳಲ್ಲಿ ಮೇನಲ್ಲಿ ಇಷ್ಟು ಚಳಿ ಆಗಿರಲಿಲ್ಲ!

ಎರಡು ದಿನ ಮಳೆ

Cyclone Asani ದುರ್ಬಲಗೊಂಡರೂ, ಆಂಧ್ರಪ್ರದೇಶದ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ವಿಸ್ತರಿಸಿದೆ. ಮುಂಗಾರು ಮಾರುತವು ದಕ್ಷಿಣ ಅಂಡಮಾನ್ ಸಮುದ್ರ ಹಾಗೂ ಆಗ್ನೇಯ ಬಂಗಾಳಕೊಲ್ಲಿಯತ್ತ ನಾಳೆವೇಳೆಗೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಸದಾನಂದ್‌ ಅಡಿಗ ಮಾಹಿತಿ ನೀಡಿದ್ದಾರೆ.

ಶನಿವಾರವೂ ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ, ಪಶ್ಚಿಮ ಘಟ್ಟದ ಜಿಲ್ಲೆಗಳಿಗೆ ಭಾರೀ ಮಳೆ, ಗುಡುಗು ಹಾಗೂ ಸಿಡಿಲಿನ ಮುನ್ನೆಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.

50 ವರ್ಷದ ಕಡಿಮೆ ಉಷ್ಣಾಂಶ

ವಾತಾವರಣದಲ್ಲಿ 50 ವರ್ಷಗಳ ದಾಖಲೆಯ ಅತ್ಯಂತ ಕಡಿಮೆ ಉಷ್ಣಾಂಶ ದಾಖಲಾಗಿದೆ ಎಂದು ತಿಳಿಸಿರುವ ಸದಾನಂದ ಅಡಿಗ, ಬೇಸಿಗೆ ಮೈಸುಡುವ ಕಾಲವಾದ ಮೇ ತಿಂಗಳಲ್ಲಿ ಮೈಕೊರೆಯುವ ಚಳಿ ಆರಂಭವಾಗಿದೆ. ಬೆಂಗಳೂರಿನಲ್ಲಿ ಉಷ್ಣಾಂಶ ಶುಕ್ರವಾರ ಗರಿಷ್ಠ 23, ಕನಿಷ್ಟ 20 ಸೆಲ್ಸಿಯಸ್ ದಾಖಲಾಗಿದೆ‌. ಚಂಡಮಾರುತದ ಕಾರಣ ಸಾಮಾನ್ಯಕ್ಕಿಂತ 10 ಡಿಗ್ರಿ ಕಡಿಮೆ ಉಷ್ಣಾಂಶ ದಾಖಲಾಗಿದೆ. 1972 ರ ನಂತರ ಇದೇ ಮೊದಲು ಇಷ್ಟು ಪ್ರಮಾಣದ ಚಳಿ ವಾತಾವರಣ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ| Early Mansoon: ಈ ಬಾರಿ ಒಂದು ವಾರ ಮೊದಲೇ ಮುಂಗಾರು ಪ್ರವೇಶ?

Exit mobile version