Site icon Vistara News

Relationship tips | ಸ್ನೇಹಾನಾ? ಪ್ರೀತಿನಾ? ಗೊಂದಲಗಳ ಗೂಡಾದ ಹೃದಯಕ್ಕೆ 8 ಟಿಪ್ಸ್!

friendship

ಇಂಥ ಟಾಪಿಕ್ಕು ಇಟ್ಟುಕೊಂಡು ಎಷ್ಟೋ ಸಿನೆಮಾಗಳು ಬಂದು ಹೋಗಿವೆ. ಬರುತ್ತಲೂ ಇವೆ. ಮುಂದೆಯೂ ಬರಲಿವೆ. ಯಾಕೆಂದರೆ ಇದು ಮುಗಿಯದ ಕಥೆ. ಮನುಷ್ಯನಿಗೆ ಇಂಥ ಗೊಂದಲಗಳು ಎಷ್ಟು ಪುಸ್ತಕ ಓದಿದರೂ, ಎಷ್ಟು ಸಿನೆಮಾ ನೋಡಿದರೂ ಮುಗಿಯುವುದೇ ಇಲ್ಲ. ಮನುಷ್ಯನ ಇಂತಹ ಮಾನಸಿಕ ತಳಮಳ, ಗೊಂದಲಗಳ ಬಗ್ಗೆ ಎಷ್ಟು ಸಂಶೋಧನಾ ಪ್ರಬಂಧಗಳು ಮಂಡನೆಯಾದರೂ ಕಡಿಮೆಯೇ. ಯಾಕೆಂದರೆ ಇದನ್ನು ಅರಿತರೂ ಅರಿಯಲಾರೆವು. ತಿಳಿದಷ್ಟೂ ಇನ್ನೂ ಇದೆ ಎನ್ನುವ ಜಿಜ್ಞಾಸೆ. ಹೌದು, ಈಗ ಹೇಳುತ್ತಿರುವ ವಿಚಾರ ಅದೇ. ಸ್ನೇಹಾನಾ ಪ್ರೀತೀನಾ ಎಂಬ ಗೊಂದಲ. ಲವ್ವಾ? ಅಥವಾ ಜಸ್ಟ್‌ ಫ್ರೆಂಡ್ಸಾ? ಎಂಬ ತಳಮಳ.

ಗೆಳೆಯ/ ಗೆಳತಿ ಇತ್ತೀಚೆಗೆ ಫ್ರೆಂಡ್‌ಗಿಂತ ಹೆಚ್ಚಾಗಿ ವರ್ತಿಸುತ್ತಿದ್ದಾರೆ ಅನಿಸುತ್ತಿದೆಯಾ? ಅವರಿಗೆ ನಿಮ್ಮ ಮೇಲೊಂದು ಆಕರ್ಷಣೆ ಬೆಳೆಯುತ್ತಿದೆ ಎಂದು ನಿಮಗೆ ಅನಿಸುತ್ತಿದೆಯಾ? ಇದು ಸ್ವಲ್ಪ ವಿಚಿತ್ರ ಅನಿಸಬಹುದು, ಆದರೆ ಇದು ಸಾಧ್ಯ ಕೂಡಾ. ಬರಿಯ ಗೆಳೆಯನೋ ಗೆಳತಿಯೋ ಆಗಿದ್ದು, ಇದ್ದಕ್ಕಿದ್ದಂತೆ ಅವರ ನಡವಳಿಕೆಯಲ್ಲಿ ಕೊಂಚ ಬದಲಾವಣೆ ಕಾಣಲು ಆರಂಭವಾದರೆ ಖಂಡಿತ ಅವರ ಸ್ನೇಹ ಪ್ರೀತಿಗೆ ತಿರುಗಿರಲು ಸಾಧ್ಯವಿದೆ.

ಪ್ರತಿಯೊಬ್ಬರಿಗೂ ಗೆಳೆಯ ಗೆಳತಿಯರಿದ್ದೇ ಇರುತ್ತಾರೆ. ಆದರೆ, ಎಲ್ಲ ಗೆಳೆತನದ ನಡುವೆಯೂ ಕಂಡೂ ಕಾಣದಂಥ ಒಂದು ಗೆರೆಯಿರುತ್ತದೆ, ಆದರೆ ಇದ್ದಕ್ಕಿದ್ದಂತೆ ಸರಾಗವಾಗಿದ್ದ ಇಂಥ ಗೆಳೆತನದ ನಡುವೆ ಆ ಗೆರೆಯೂ ಮಾಯವಾದಂತೆ ಅನಿಸಬಹುದು. ಸ್ನೇಹವೋ ಪ್ರೀತಿಯೋ ಎಂದು ಗೊಂದಲವಾಗಬಹುದು. ನೇರವಾಗಿ ಕೇಳಲು ಸಂಕೋಚವಾದರೂ ಅವರ ಕೆಲವೊಂದು ನಡವಳಿಕೆಗಳಿಂದಲೇ ಅವರು ನಿಮ್ಮ ಪ್ರೀತಿಯಲ್ಲಿ ಬಿದ್ದಿದ್ದಾರೆಂದು ನೀವು ಕಂಡುಕೊಳ್ಳಬಹುದು. ಅಂಥ ಸೂಕ್ಷ್ಮಗಳನ್ನು ನೀವು ಗಮನಿಸಿದರೆ ಸಾಕು, ಅವರು ನಿಮ್ಮ ಪ್ರೀತಿಯಲ್ಲಿ ಬಿದ್ದಿರುವುದನ್ನು ನಿಮಗೆ ನೀವೇ ಖಚಿತಪಡಿಸಿಕೊಳ್ಳಬಹುದು, ನಿಮಗೂ ಅಂಥದ್ದೇ ಫೀಲಿಂಗ್‌ ಇದ್ದರೆ ಮುಂದುವರಿಯಬಹುದು. ಅಥವಾ ಇಲ್ಲದಿದ್ದರೆ, ಅವರು ಆ ಭಾವನೆಗಳಲ್ಲಿ ಇನ್ನೂ ಕೊಚ್ಚಿಹೋಗದಂತೆ ತಡೆಯಬಹುದು.

೧. ಇದ್ದಕ್ಕಿದ್ದಂತೇ ನಿಮ್ಮೊಂದಿಗೇ ಇರುವುದು ಅವರಿಗೆ ಮುಖ್ಯವೆನಿಸತೊಡಗುತ್ತದೆ. ಸದಾ ನಿಮ್ಮ ಹಿಂದೆ ಮುಂದೆಯೇ ಇರಲು ಬಯಸುತ್ತಾರೆ. ಇತರ ಗೆಳೆಯರ ಜೊತೆಗಿದ್ದಾಗಲೂ ನಿಮ್ಮ ಪಕ್ಕವೇ ನಿಲ್ಲಲು ಬಯಸುತ್ತಾರೆ. ಮಾತನಾಡದೆ ಇದ್ದರೂ, ಸುಮ್ಮನೆ ಹತ್ತಿರ ಇರುವುದಷ್ಟೇ ಮುಖ್ಯವಾಗುತ್ತದೆ. ನೀವು ಪ್ರತ್ಯೇಕವಾಗಿ ಅವರನ್ನು ಭೇಟಿಯಾಗಲಿ ಎಂದು ಬಯಸುತ್ತಾರೆ. ನೀವು ಯಾರಾದರೂ ಇತರರ ಜೊತೆಗೆ ಹೆಚ್ಚು ಫ್ರೆಂಡ್ಲೀ ಅನಿಸಿದರೆ ಅವರಿಗೆ ಹೊಟ್ಟೆಕಿಚ್ಚಾಗುತ್ತದೆ. ಸದಾ ನಿಮ್ಮೊಬ್ಬರ ಜೊತೆಗೇ ಎಲ್ಲಾದರೂ ಹೋಗಲು ಬಯಸುತ್ತಾರೆ. ಏನೇ ಸಣ್ಣ ವಿಚಾರವಿದ್ದರೂ ಮೊದಲು ನಿಮಗೆ ಮೆಸೇಜ್‌ ಮಾಡುತ್ತಾರೆ.

೨. ನಿಮ್ಮ ಜೊತೆ ಆಗಾಗ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಇತರರು ಯಾರೇ ಇದ್ದರೂ ಅವರ ಜೊತೆಗೆ ಸೆಲ್ಫೀ ಮುಖ್ಯವಾಗದೆ ನಿಮ್ಮ ಜೊತೆಗಿನ ಫೋಟೋ ಮುಖ್ಯವೆನಿಸುತ್ತದೆ. ಅವರ ಫೋನ್‌ ಗ್ಯಾಲರಿ ತುಂಬ ನಿಮ್ಮದೆ ಫೋಟೋ ಇರುತ್ತದೆ.

೩. ಎಷ್ಟೇ ದೂರದಲ್ಲಿದ್ದರೂ, ಎಷ್ಟೇ ಕೆಲಸವಿದ್ದರೂ ನೀವು ಭೇಟಿಯಾಗಲು ಕೇಳಿದಿರೆಂದರೆ, ಓಡಿಬರುತ್ತಾರೆ. ನಿಮಗಾಗಿ ಸಮಯ ಹೊಂದಿಸುತ್ತಾರೆ. ಅದಕ್ಕಾಗಿ ಕಷ್ಟವಾದರೂ ಆ ಕಷ್ಟವನ್ನು ಹೇಳಿಕೊಳ್ಳದೆ ಸಿಕ್ಕಿ ಮಾತಾನಾಡುವುದೇ ಅವರ ಪರಮ ಗುರಿಯಾಗಿರುತ್ತದೆ.

೪. ಬೆಳಗ್ಗೆ ಎದ್ದ ಕೂಡಲೇ, ರಾತ್ರಿ ಮಲಗುವ ಮೊದಲು ನಿಮಗೆ ಮೆಸೇಜ್‌ ಮಾಡಲು ಬಯಸುತ್ತಾರೆ. ಏನಾದರೊಂದು ನೆಪದಲ್ಲಿ ಮೆಸೇಜ್‌ ಮಾಡುತ್ತಾರೆ.

ಇದನ್ನೂ ಓದಿ | Personality test | ಈ 10 ಅಭ್ಯಾಸಗಳು ನಿಮ್ಮ ವ್ಯಕ್ತಿತ್ವವನ್ನು ಇನ್ನೊಬ್ಬರ ಮುಂದೆ ಬಿಚ್ಚಿಡುತ್ತವೆ!

೫. ಅವರು ನಿಮ್ಮ ಕಾಳಜಿ ಮಾಡುತ್ತಾರೆ. ನಿಮ್ಮ ಪ್ರತಿಯೊಂದನ್ನೂ ಗಮನಿಸುತ್ತಾರೆ. ಸಣ್ಣ ಸಣ್ಣ ಬದಲಾವಣೆಯೂ ಅವರಿಗೆ ಕಾಣಿಸುತ್ತದೆ. ಹೇರ್‌ಕಟ್‌ ಇರಬಹುದು, ಚಿಕ್ಕದೊಂದು ಗಾಯ, ನೆಗಡಿ ಎಲ್ಲವನ್ನೂ ಗಮನಿಸುತ್ತಾರೆ ಹಾಗೂ ಅವುಗಳ ಬಗ್ಗೆ ಮಾತಿನಲ್ಲಿ ಉಲ್ಲೇಖಿಸುತ್ತಾರೆ. ಹೇರ್‌ಸ್ಟೈಲ್‌ ಬದಲಾದರೆ ಹೊಗಳುತ್ತಾರೆ. ಹೊಸ ಡ್ರೆಸ್‌ ಹಾಕಿದ್ದರೆ ಚೆನ್ನಾಗಿ ಕಾಣುತ್ತಿ ಎನ್ನುತ್ತಾರೆ. ಅಥವಾ ಇನ್ನೇನನ್ನೋ ಸೂಕ್ಷ್ಮವಾಗಿ ಗಮನಿಸಿ ಕಾಂಪ್ಲಿಮೆಂಟ್‌ ಮಾಡಬಹುದು. ಕಣ್ಣಿಗೆ ಅಡ್ಡ ಬರುವ ನಿಮ್ಮ ಕೂದಲನ್ನು ಅವರೇ ಸರಿ ಮಾಡಬಹುದು. ದಿರಿಸಿನ ಮೇಲೆ ಬಿದ್ದ ಏನೋ ಪುಟ್ಟ ಕಸವನ್ನು ತೆಗೆಯಬಹುದು ಇತ್ಯಾದಿ!

೬. ನಿಮ್ಮಿಂದ ಕಣ್ಣು ಕೀಳಲು ಇಷ್ಟಪಡುವುದಿಲ್ಲ. ನಿಮ್ಮ ದೃಷ್ಟಿ ಎಲ್ಲೋ ಇದ್ದಾಗ ಅವರ ದೃಷ್ಟಿ ನಿಮ್ಮ ಮೇಲೆಯೇ ಇರಬಹುದು. ಇದ್ದಕ್ಕಿದ್ದಂತೆ ನೀವು ಅವರನ್ನು ನೋಡಿದಾಗ ಅವರಿಗೆ ನರ್ವಸ್‌ ಆಗಬಹುದು. ಪ್ರೀತಿ ಮಾಡುವವರು ಹತ್ತಿರವೇ ಇರಲಿ ಎಂದು ಮನಸ್ಸು ಬಯಸಿದರೂ ಅವರ ಜೊತೆಗೆ ಹೇಗೆ ಮಾತು ಶುರು ಮಾಡಬೇಕೆಂದು ಬಹಳಷ್ಟು ಸಾರಿ ಇಂತಹ ಗೊಂದಲಮಯ ಆರಂಭದಲ್ಲಿ ವಿಚಿತ್ರ ಸಂಕೋಚದ ಅನುಭವವೂ ಆಗಬಹುದು. ಅವರು ಇದ್ದಕ್ಕಿದ್ದಂತೆ, ಏನು ಮಾತಾಡುವುದೆಂದು ತಿಳಿಯದೆ, ಕೂದಲು ಸರಿ ಮಾಡಿಕೊಳ್ಳುವುದು, ಡ್ರೆಸ್‌ ಸರಿಪಡಿಸುವುದು, ಬೆವರೊರೆಸುವುದು ಇತ್ಯಾದಿ ಇತ್ಯಾದಿ ಮಾಡಬಹುದು. ನಿಮಗೊಂದು ವಿಚಿತ್ರ ಸಂಕೋಚ ಅವರಲ್ಲಿ ಕಾಣಬಹುದು.

೭. ಅವರು ನಿಮ್ಮೆದುರು ಇರುವಾಗ ಎಲ್ಲರಿಂದ ಬೆಸ್ಟ್‌ ಆಗಿರಲು ಪ್ರಯತ್ನಿಸುತ್ತಾರೆ. ಅಂದರೆ ನೋಡಲು ಚೆನ್ನಾಗಿ ಕಾಣಲು ಬಯಸುತ್ತಾರೆ. ನಿಮ್ಮೆದುರು ಪರ್ಫೆಕ್ಟ್‌ ಆಗಿರುವುದು ಅವರ ಉದ್ದೇಶವಾಗಿರುತ್ತದೆ.

ಇದನ್ನೂ ಓದಿ | White hair trend | ನಾವಿರೋದೇ ಹೀಗೆ! ತಲೆಯಲ್ಲಿ ಮೂಡುವ ಬೆಳ್ಳಿಕೂದಲೆಂಬ ಆತ್ಮವಿಶ್ವಾಸ!

೮. ನೀವು ಬೇರೆಯವರ ಪ್ರೀತಿಯಲ್ಲಿ ಬಿದ್ದಿದ್ದರೆ ಅದು ಅವರಿಗೆ ಬೇಸರವನ್ನು ತರಿಸಬಹುದು. ಆ ಬೇಸರವನ್ನು ಅವರು ನೇರವಾಗಿ ಹೇಳದಿದ್ದರೂ, ಅದು ಅವರ ನಡೆಯಲ್ಲಿ ಪ್ರತಿಫಲಿಸಬಹುದು. ನೀವು ಅವರ ಜೊತೆಗೆ ಗುಂಪಿನಲ್ಲಿದ್ದಾಗ ಪ್ರೀತಿಯ ವಿಷಯವೇನಾದರೂ ಮಾತಿನಲ್ಲಿ ಬಂದರೆ ಅವರು ಅದನ್ನು ಅವಾಯ್ಡ್‌ ಮಾಡಲು ಬಯಸುತ್ತಾರೆ. ಇದ್ದಕ್ಕಿದ್ದಂತೆ ನರ್ವಸ್‌ ಆಗುತ್ತಾರೆ. ನಿಮಗೆ ಅವರ ಪ್ರೀತಿಯ ಬಗ್ಗೆ ಗೊತ್ತೇ ಇಲ್ಲದಿದ್ದಾಗ ಹೀಗಾಗುವ ಸಂಭವ ಹೆಚ್ಚು. ನೇರವಾಗಿ ನಿಮ್ಮ ಬಳಿ, ಪ್ರೀತಿಯ ವಿಚಾರ ಹೇಳಿಕೊಳ್ಳಲು ಸಂಕೋಚವಾಗಿ, ನೀವೇ ಅದನ್ನು ಗ್ರಹಿಸಿದರೆ ಒಳ್ಳೆಯದು ಎಂದೇ ಅವರು ಸುಮ್ಮನಿರುತ್ತಾರೆ.

Exit mobile version