“ಬಣ್ಣಬಣ್ಣದ ಚಂದನೆಯ ಅಂಗಿ ತೊಡಲೂ ವಯಸ್ಸಿನ ಹಂಗಿದೆಯೇ? ಅಜ್ಜಿಯಾದ ಮಾತ್ರಕ್ಕೆ ದೊಗಳೆ ದೊಗಳೆಯಾದ ಸಾದಾ ಬಣ್ಣದ ಸಾಮಾನ್ಯ ಬಟ್ಟೆಯೇ ತೊಡಬೇಕೇ? ತಾನೂ ಸುಂದರವಾಗಿ ಕಾಣಿಸಬೇಕೆಂಬ ಆಸೆ ಅಜ್ಜಿಯರಿಗೆ ಇರುವುದಿಲ್ಲವೇ?” ಎಂದು ದಿಟ್ಟವಾಗಿ ಕೇಳಿ ರಾತ್ರೋರಾತ್ರಿ ಇಂಟರ್ನೆಟ್ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಅಜ್ಜಿ ಹೆಲೆನ್ ರುತ್ ವ್ಯಾನ್ ವಿಂಕಲ್.
ಈ ಅಜ್ಜಿ ಕಾಮನಬಿಲ್ಲಿನಂತೆ ಢಾಳಾಗಿ ಏಳು ಬಣ್ಣಗಳಿರುವ ಟೋಪಿ ಹಾಕಿಕೊಂಡು, ತುಟಿಯನ್ನು ಪೌಟ್ ಮಾಡಿ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಸ್ವಿಮ್ ಸೂಟ್ ಹಾಕಿಕೊಂಡು ಮಾದಕವಾಗಿ ಫೋಟೋಗಳಿಗೆ ಪೋಸ್ ಕೊಡುತ್ತಾರೆ. ಚಂದ ಚಂದದ ತಂಪು ಕನ್ನಡಕ ಧರಿಸಿ ಬೇಸಗೆಯಲ್ಲಿ ಜಗತ್ತನ್ನು ತಂಪಾಗಿಯೇ ನೋಡುತ್ತಾರೆ. ಕಲರ್ ಕಲರ್ ಕೂದಲು, ಕಲರ್ ಕಲರ್ ತುಟಿಗಳ ರಂಗು ಹೀಗೆ ಒಟ್ಟಿನಲ್ಲಿ ಕಲರ್‌ಫುಲ್ ಆಗಿರುವ ಈ ಅಜ್ಜಿಯೀಗ ಇಂಟರ್ನೆಟ್‌ನಲ್ಲಿ ಸ್ಟೈಲ್ ಐಕಾನ್!
ಯುಎಸ್‌ನಲ್ಲಿ ನೆಲೆಸಿರುವ ಅಜ್ಜಿಗೆ ಈಗ ೯೪ರ ಹರೆಯ. ಈಕೆ ಸದ್ಯಕ್ಕೀಗ ಇಂಟರ್ನೆಟ್ ಸೆಲೆಬ್ರಿಟಿ. ಖ್ಯಾತ ಹಾಲಿವುಡ್ ಸಲೆಬ್ರಿಟಿ ರಿಹ್ಹಾನಾ ಕೂಡಾ ಈ ಅಜ್ಜಿಯ ಇನ್‌ಸ್ಟಾ ಖಾತೆಯನ್ನು ಫಾಲೋ ಮಾಡುತ್ತಾರಂತೆ. ಈಕೆಯ ಡ್ರೆಸ್ಸಿಂಗ್ ಸ್ಟೈಲಿಗೆ ಫಿದಾ ಆದ ಮಂದಿ ಮಿಲಿಯಗಟ್ಟಲೆ ಮಂದಿ ಈಕೆಯಿಂದ ಸ್ಪೂರ್ತಿ ಪಡೆದಿದ್ದಾರೆ! ವಯಸ್ಸಾದರೂ ಖುಷಿಯಾಗಿರುವುದು ಹೇಗೆ ಎಂಬುದನ್ನು ಈಕೆ ತನ್ನ ಬಣ್ಣ ಬಣ್ಣದ ಅಂಗಿಗಳ ಮೂಲಕ, ಹಂಚುವ ಜೊತೆಗೆ ಎಲ್ಲರ ಹಾಟ್ ಫೇವರಿಟ್!
ಅಜ್ಜಿಯರೆಂದರೆ, ದೊಗಳೆ ದೊಗಳೆಯಾಗಿರುವ ಸಾಮಾನ್ಯ ಬಣ್ಣದ ದಿರಿಸುಗಳನ್ನು ಧರಿಸೋದು ರೂಢಿ. ಅಜ್ಜಿಯರ ಅಂಗಿ, ಚಪ್ಪಲಿ, ಬ್ಯಾಗು, ಸ್ಟೈಲನ್ನೆಲ್ಲ ಯಾರು ನೋಡುತ್ತಾರೆ ಎಂಬುದು ಸಾಮಾನ್ಯರ ಭಾವನೆ. ಹಾಗಾದರೆ, ವಯಸ್ಸಾದರೇನಂತೆ, ಬದುಕುವಾಗ ಅನಿಸಿದಂತೆ, ಇಷ್ಟಪಟ್ಟದ್ದು ಧರಿಸಿಕೊಂಡು ಖುಷಿಯಾಗಿರುವುದು ಸಮಾಜಕ್ಕೆ ಬೇಕಾಗಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ವಯಸ್ಸಾದವರಿಗೂ ಆಸೆಗಳು, ಬಯಕೆಗಳೂ ಇರುತ್ತವೆ, ಆಸೆಪಟ್ಟಂತೆ ಬದುಕಬೇಕು ಅಷ್ಟೆ ಎಂದು ಈ ಅಜ್ಜಿ ತನ್ನಿಷ್ಟದಂತೆ ಡ್ರೆಸ್ ತೊಡಲು ಬಯಸುತ್ತಾರೆ! ಈಕೆಗೆ ಬಣ್ಣಬಣ್ಣದ ಅಂಗಿಗಳೆಂದರೆ ಪ್ರಿಯ. ಅದಕ್ಕಾಗಿಯೇ ಯಾವುದೇ ಮುಚ್ಚುಮರೆಯಿಲ್ಲದೆ, ನಾಚಿಕೆ ಬಿಗುಮಾನಗಳಿಲ್ಲದೆ ಧೈರ್ಯವಾಗಿ ತಾನಿಚ್ಛೆ ಪಡುವ ಅಂಗಿಗಳನ್ನು ಈಕೆ ಧರಿಸುತ್ತಾರೆ.
ಇದನ್ನೂ ಓದಿ: ಪತ್ರಿಕೆಯಲ್ಲಿ ಒಂದಿಡೀ ಪುಟದ ಜಾಹೀರಾತು ಹಾಕಿ ಮಾಜಿ ಸಂಗಾತಿಗೆ ಬಿಸಿ ಮುಟ್ಟಿಸಿದ ಮಹಿಳೆ!
ಹದಿಹರೆಯದ ಹೆಣ್ಣುಮಕ್ಕಳು ಇಷ್ಟ ಪಡುವ ಮಾದರಿಯ ಬಟ್ಟೆಗಳನ್ನೇ ಧರಿಸುವ ಈಕೆ ಯಾವ ಬಾರ್ಬಿ ಡಾಲ್‌ಗೂ ಕಡಿಮೆಯಿಲ್ಲ. ಈಕೆ ತನ್ನ ಡ್ರೆಸ್ಸಿಂಗ್ ಸ್ಟೈಲ್ ಮೂಲಕ ಕೇವಲ ವಯಸ್ಸಾದ ಮಂದಿಗಲ್ಲ, ಯುವಕರಿಗೂ ಉತ್ಸಾಹದ ಸ್ಪೂರ್ತಿ ಚಿಲುಮೆಯಾಗಿದ್ದಾರೆ. ೨೦೧೪ರಲ್ಲಿ ತನ್ನದೇ ಮೊಮ್ಮಗಳ ಪುಟ್ಟ ಶಾರ್ಟ್ಸ್ ಹಾಗೂ ಟೀ ಶರ್ಟ್ ಧರಿಸಿದಾಗ, ತನ್ನ ಅಜ್ಜಿ ಮುದ್ದಾಗಿ ಕಾಣಿಸುತ್ತಿದ್ದಾಳೆ ಎಂದು ಆಕೆಯ ಮೊಮ್ಮಗಳು ಫೋಟೋ ತೆಗೆದು, ಟ್ವಿಟರ್/ ಇನ್ಸ್ಟಾಗ್ರಾಂ ಖಾತೆ ತೆರೆದು ಅಲ್ಲಿ ಅಪ್‌ಲೋಡ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ಜಗತ್ತಿಗೆ ಕಾಲಿಟ್ಟ ಅಜ್ಜಿ ಆಮೇಲೆ ಹಿಂತಿರುಗಿ ನೋಡಿಲ್ಲ. ಒಂದೇ ವರ್ಷದಲ್ಲಿ ಮಿಲಿಯನ್ ಫಾಲೋವರ್‌ಗಳನ್ನು ದಾಟಿದ ಅಜ್ಜಿಗೆ ಸಾಮಾಜಿಕ ಜಾಲತಾಣಗಳ ರುಚಿ ಸಿಕ್ಕಿ ತಾನೇ ತನ್ನ ಫೋಟೋಗಳನ್ನು ಅಪ್‌ಲೋಡ್ ಮಾಡತೊಡಗಿದ್ದಾಳೆ. ಸದ್ಯ ಇಂಟರ್ನೆಟ್ ಜಗತ್ತಿನ ಸೆಲೆಬ್ರಿಟಿಯೇ ಆಗಿಹೋಗಿದ್ದು, ಅಜ್ಜಿಯೂ ತನ್ನ ಪ್ರಸಿದ್ಧಿಯನ್ನು ಎಂಜಾಯ್ ಮಾಡುತ್ತಿದ್ದಾಳೆ!
ಬ್ಯಾಡೀ ವಿಂಕಲ್ ಎಂಬ ಹೆಸರಿನಿಂದಲೇ ಖ್ಯಾತಿವೆತ್ತ ಈಕೆಯ ಹೆಸರಿನೊಂದಿಗೆ ʻಬ್ಯಾಡ್ʼ ಸೇರಿಕೊಂಡಿದೆ. ಅಜ್ಜಿಯರು ಹೇಗಿರಬೇಕೆಂದು ಬಯಸುವ ಸಮಾಜದ ಪರಿಕಲ್ಪನೆಯಿಂದ ಈಕೆ ಬಹಳಷ್ಟು ಡಿಫರೆಂಟ್ ಆಗಿರುವುದರಿಂದ ಹಾಗೂ ಅಜ್ಜಿಯರು ಹೀಗಿರುವುದೇ ಬ್ಯಾಡ್ ಎಂಬ ಚಿಂತನೆ ಇರುವುದರಿಂದ ಈಕೆಯ ಹೆಸರೇ ಬ್ಯಾಡೀ ವಿಂಕಲ್ ಆಗಿಬಿಟ್ಟಿದೆ. ಆದರೆ, ಈಕೆಗೆ ಆ ಬಗ್ಗೆ ಬೇಸರವೇನಿಲ್ಲ. ʻನಾನು ಬ್ಯಾಡ್ ವುಮನ್ ಎಂದು ಒಪ್ಪಿಕೊಳ್ಳುವೆ. ಮೊದಲಿನಿಂದಲೂ ನಾನು ಬಂಡಾಯ ಪ್ರಿಯೆ. ಸಮಾಜ ಮಹಿಳೆಯರು ಹೇಗಿರಬೇಕೆಂದು ಬಯಸುತ್ತಿತ್ತೋ, ಹಾಗೆ ನಾನು ಯಾವತ್ತೂ ಇರಲಿಲ್ಲ. ಹಾಗಾಗಿ ನನ್ನ ಈ ಅಡ್ಡ ಹೆಸರಿನ ಬಗ್ಗೆ ನನಗೇನೂ ಬೇಸರವಿಲ್ಲ. ಅದೇ ಬಹಳ ಪ್ರಸಿದ್ಧವಾಗಿದೆʼ ಎಂದು ಆಕೆ ಯಾವುದೇ ಮುಜುಗರವಿಲ್ಲದೆ ಒಪ್ಪಿಕೊಳ್ಳುತ್ತಾರೆ.
ಇದನ್ನೂ ಓದಿ: Woman style | ಎಂಥ ಮಹಿಳೆಯರನ್ನು ಕಂಡರೆ ಪುರುಷರಿಗೆ ಇಷ್ಟವೇ ಆಗುವುದಿಲ್ಲ?!
ಹೆಲೆನ್ ಹುಟ್ಟಿದ್ದು ೧೯೨೮ ಜುಲೈ ೧೮ರಂದು. ಈಕೆ ಹೇಳುವಂತೆ ಜೀವನವೇನೂ ಸುಲಭವಾಗಿರಲಿಲ್ಲ. ಈಕೆಯ ೩೫ನೇ ವಿವಾಹ ವಾರ್ಷಿಕೋತ್ಸವದ ದಿನದಂದೇ ಗಂಡ ಕಾರು ಅಫಘಾತದಲ್ಲಿ ತೀರಿಕೊಂಡರು. ಕ್ಯಾನ್ಸರ್‌ನಿಂದಾಗಿ ಮಗನನ್ನೂ ಕಳೆದುಕೊಂಡಿದ್ದಾರೆ. ಇಂಥ ಬೇಸರವನ್ನು ಕಳೆಯಲು ತನಗೆ ಖುಷಿಯಿರುವಂತೆ ಬದುಕಲು ಬಯಸಿದ ಬ್ಯಾಡಿ ವಿಂಕಲ್ ಹೀಗೆ ತನಗಿಷ್ಟದ ಬಟ್ಟೆ ಧರಿಸುವುದು, ಖುಷಿಯಾಗಿರುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ, ಇದನ್ನು ಬಹುತೇಕರು ಇಷ್ಟಪಡುವುದಿಲ್ಲ ಎಂಬುದು ಗೊತ್ತಿದ್ದರೂ, ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ, ʻಇರುವ ಬದುಕನ್ನು ಸಂತೋಷದಿಂದ ಕಳೆಯಬೇಕು. ಎಲ್ಲರಿಗೂ ಖುಷಿಯನ್ನು ಹಂಚಬೇಕು. ನಾನು ನನ್ನ ಬಣ್ಣಬಣ್ಣದ ಬಟ್ಟೆಗಳ ಮೂಲಕ ಖುಷಿಪಟ್ಟು ಎಲ್ಲರಿಗೂ ಸಂತೋಷ, ಉತ್ಸಾಹವನ್ನು ಹಂಚುತ್ತೇನೆʼ ಎನ್ನುತ್ತಾರೆ.