Site icon Vistara News

Dr Sudha Murthy : ಸುಧಾ ಮೂರ್ತಿ, ಇವರು ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ!

Raja marga Column Dr Sudha Murthy

ಬೆಂಗಳೂರು: ‌ಇನ್ಫೋಸಿಸ್‌ (Infosys Company) ಎಂಬ ಮಹಾಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹೆಗಲೆಣೆಯಾಗಿ ದುಡಿದ, ಪರೋಪಕಾರ, ಸಜ್ಜನಿಕೆ, ವಿನಮ್ರತೆಗೆ ಮತ್ತೊಂದು ಹೆಸರಾಗಿ, ಎಲ್ಲರಿಂದಲೂ ಅಮ್ಮ ಎಂದೇ ಕರೆಸಿಕೊಳ್ಳುವ ಡಾ. ಸುಧಾ ಮೂರ್ತಿ ಅವರನ್ನು ರಾಜ್ಯಸಭೆಗೆ ನಾಮ ನಿರ್ದೇಶನ (Nominated to Rajya sabha) ಮಾಡಲಾಗಿದೆ. ಸರಳತೆ, ವಿನಮ್ರತೆಗಳನ್ನೇ ಆವಾಹಿಸಿಕೊಂಡ ಡಾ. ಸುಧಾ ಮೂರ್ತಿ (Dr Sudha Murthy) ಎಂಬ ಸಾತ್ವಿಕ ಸಾಧಕಿಯ ಬದುಕಿನ ಸಾಧನೆಯ ಹೆಜ್ಜೆ ಗುರುತುಗಳು ಇಲ್ಲಿವೆ.

ಇವರು ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕ ಪಡೆದ ಏಕೈಕ ಮಹಿಳಾ ವಿದ್ಯಾರ್ಥಿನಿ

ಸುಧಾ ಮೂರ್ತಿ (ಹಿಂದೆ ಸುಧಾ ಕುಲಕರ್ಣಿ- Sudha Kulkarni)) ಅವರು ಹುಟ್ಟಿದ್ದು 1950ರ ಆಗಸ್ಟ್‌ 19ರಂದು. ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಗ್ರಾಮದ ಕುಲಕರ್ಣಿ ಮನೆತನ ಇವರದು. ಇವರ ತಂದೆ ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು ಮ್ತು ಪ್ರಾಧ್ಯಾಪಕರಾಗಿದ್ದರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದ ಸಾಧಕಿ.

ರಾಮಚಂದ್ರ ಕುಲಕರ್ಣಿ ಮತ್ತು ವಿಮಲಾ ಕುಲಕರ್ಣಿ ದಂಪತಿಯ ನಾಲ್ಕು ಮಕ್ಕಳಲ್ಲಿ ಇವರು ಒಬ್ಬರು ಸುಧಾ. ಹುಟ್ಟೂರಾದ ಶಿಗ್ಗಾಂವಿಯಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪಡೆದ ಅವರು‌ ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಪಡೆದು ಟಾಪರ್‌ ಆಗಿದ್ದರು.

1972ರಲ್ಲಿ ಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜ್‌ ಆಫ್ ಎಂಜಿನಿಯರಿಂಗ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ ಮಾಡಿದ ಅವರು, 1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್‌ ಪದವಿ ಪೂರೈಸಿದರು. ಬೆಂಗಳೂರಿನ ಟಾಟಾ ಇನ್‌ಸ್ಟಿಟ್ಯೂಟ್‌ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿ ಗಳಿಸಿದರು. ಟಾಟಾ ಸಂಸ್ಥೆಯಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ ಇವರು.

Sudhamurty ddd

ಟಾಟಾ ಕಂಪನಿಯಲ್ಲಿ ಉದ್ಯೋಗ ಪಡೆದ ಮೊದಲ ಮಹಿಳೆ!

ಸುಧಾ ಮೂರ್ತಿ ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಎಂಜಿನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಮುಂದೆ ಅವರು ಪುಣೆಯ ವಾಲಚಂದ್‌ ಗ್ರೂಪ್ ಆಫ್ ಇಂಡಸ್ಟ್ರೀಸ್‌ನಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ಆಗಿದ್ದರು.

ಇನ್ಫೋಸಿಸ್‌ ಎಂಬ ಮಹಾ ಕನಸು ನನಸಾದ ಬಗೆ..

1970ರ ಫೆಬ್ರವರಿ 10ರಂದು ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಅವರ ವಿವಾಹ ನಡೆಯಿತು. ತಾವು ದುಡಿದ ಅಷ್ಟೂ ಹಣವನ್ನು, ತಮ್ಮಲ್ಲಿದ್ದ ಚಿನ್ನಾಭರಣಗಳೆಲ್ಲವನ್ನೂ ಮಾರಿ ಇನ್ಫೋಸಿಸ್‌ ಎಂಬ‌ ಸಾಫ್ಟ್‌ವೇರ್‌ ಸಂಸ್ಥೆಯನ್ನು ಕಟ್ಟಿದರು. ತಾವು ಹಗಲು ರಾತ್ರಿ ದುಡಿದು ಅದನ್ನು ಎತ್ತರಕ್ಕೆ ಬೆಳೆಸಿದರು. ಲಕ್ಷಾಂತರ ಮಂದಿಗೆ ಉದ್ಯೋಗ ನೀಡುವಷ್ಟು ಮಟ್ಟಕ್ಕೆ ಬೆಳೆಸಿದರು.

Sudhamurty ddd

ಸಾರ್ವಜನಿಕ ಸೇವೆಯಲ್ಲಿ ಮಮತೆಯ ತಾಯಿಯಾದರು

ಎಂಜಿನಿಯರ್‌ ಆಗಿದ್ದರೂ, ದೊಡ್ಡ ಸಂಸ್ಥೆಯನ್ನೇ ಕಟ್ಟಿದರೂ ಅವರ ತುಡಿತ ಇದ್ದಿದ್ದು ಸಮಾಜಸೇವೆಯಲ್ಲಿ. ಹೀಗಾಗಿ ಅವರು 1996ರಲ್ಲಿ ಸಾರ್ವಜನಿಕ ಚಾರಿಟೇಬಲ್ ಟ್ರಸ್ಟ್ ಅನ್ನು ಸ್ಥಾಪಿಸಿದರು. ಸುಧಾ ಮೂರ್ತಿ ಅವರು ದೇವದಾಸಿಯರ ಬದುಕಿನಲ್ಲಿ ಬದಲಾವಣೆ ಮಾಡಿದರು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಿದರು. ಅವರ ಟ್ರಸ್ಟ್ ಇದುವರೆಗೆ 2,300 ಮನೆಗಳನ್ನು ನಿರ್ಮಿಸಿದೆ. ಟ್ರಸ್ಟ್​ ಮೂಲಕ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣ ಮಾಡಿದ್ದಾರೆ. ಇದುವರೆಗೆ 70,000 ಗ್ರಂಥಾಲಯಗಳನ್ನು ನಿರ್ಮಾಣಮಾಡಿದ್ದಾರೆ. ಇವರ ಸಂಸ್ಥೆ ಇದುವರೆಗೆ 16,000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿದೆ.

Sudhamurty ddd

ಅಪೂರ್ವ ಸಾಹಿತ್ಯ ಸೇವೆ, ಅವರು ಪುಸ್ತಕಗಳಿಂದಲೇ ಗಳಿಸಿದ್ದು 300 ಕೋಟಿ

ಸುಧಾ ಮೂರ್ತಿ ಅವರು ಸಾಧಕಿ, ಸಮಾಜಸೇವಕಿ ಮಾತ್ರವಲ್ಲ ಅಪರೂಪದ ಲೇಖಕಿ, ಬರಹಗಾರ್ತಿ. ಅವರು ಕನ್ನಡ ಮತ್ತು ಇಂಗ್ಲೀಷ್​ ಭಾಷೆಗಳಲ್ಲಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ನಿಜವೆಂದರೆ, ಅವರು ಈಗಾಗಲೇ ಪುಸ್ತಕಗಳಿಂದಲೇ 300 ಕೋಟಿ ರೂ. ಆದಾಯ ಗಳಿಸಿದ್ದಾರೆ.

ಸುಧಾ ಮೂರ್ತಿಯವರ ಕನ್ನಡ ಕೃತಿಗಳು ಇವು

ಹಕ್ಕಿಯ ತೆರದಲಿ, ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್, ಕಾವೇರಿಯಿಂದ ಮೇಕಾಂಗಿಗೆ, ಡಾಲರ್ ಸೊಸೆ, ಮಹಾಶ್ವೇತೆ, ಅತಿರಿಕ್ತೆ, ಪರಿಧಿ, ಮನದ ಮಾತು (ಅಂಕಣ ಬರಹಗಳ ಸಂಗ್ರಹ), ಗುಟ್ಟೊಂದು ಹೇಳುವೆ, ಸಾಮಾನ್ಯರಲ್ಲಿ ಅಸಾಮಾನ್ಯರು, ದಿ ಸರ್ಪೆಂಟ್ಸ್ ರಿವೇಂಜ್, ತುಮುಲ, ಋಣ, ಯಶಸ್ವಿ, ಸಾಫ್ಟ್ ಮನ, ಏರಿಳಿತದ ದಾರಿಯಲ್ಲಿ, ನೂನಿಯ ಸಾಹಸಗಳು

Sudhamurty ddd

ಸುಧಾ ಮೂರ್ತಿಯವರ ಇಂಗ್ಲಿಷ್‌ ಪುಸ್ತಕಗಳು

The Serpent’s Revenge, How I Taught My Grandmother to Read., Something Happened on the Way to Heaven, The Old Man and His God: Discovering the Spirit of India, The Day I Stopped Drinking Milk, Wise and Otherwise, Gently Falls the Bakula, The Accolades Galore, The Bird with Golden Wings: Stories of Wit and Magic, Dollar Bahu, Grandma’s Bag of Stories (children’s fiction), The Magic Drum And Other Favourite Stories (children’s stories), House of Cards
The Mother I Never Knew (two novellas), Three thousand stitches, The Man from the Egg
Here, There, Everywhere, Magic of the lost Temple, How the earth got its beauty

ಬ್ರಿಟನ್‌ ಪ್ರಧಾನಿಯ ಅತ್ತೆಯಾದರೂ ಕಿಂಚಿತ್ತೂ ಹಮ್ಮಿಲ್ಲ, ಬಿಮ್ಮಿಲ್ಲ!

ಇನ್ಫೋಸಿಸ್‌ ಕಟ್ಟಿದ ಗರಿಮೆಯ ಸುಧಾ ಮೂರ್ತಿ ಅವರಿಗೆ ಇಬ್ಬರು ಮಕ್ಕಳು. ಮಗ ರೋಹನ್‌ ಮೂರ್ತಿ ಮತ್ತು ಮಗಳು ಅಕ್ಷತಾ ಮೂರ್ತಿ. ಅಕ್ಷತಾ ಮೂರ್ತಿ ಅವರ ಗಂಡ ರಿಷಿ ಸುನಕ್‌ ಬ್ರಿಟನ್‌ ಪ್ರಧಾನಿ. ಇಷ್ಟೆಲ್ಲ ದೊಡ್ಡ ಹಿನ್ನೆಲೆ ಹೊಂದಿದ್ದರೂ ಸುಧಾ ಮೂರ್ತಿ ಸರಳತೆಯ ಸಾಕಾರ ಮೂರ್ತಿಯಾಗಿದ್ದಾರೆ. ಯಾವುದೇ ಆಭರಣ ಹಾಕಿಕೊಳ್ಳದೆ, ಕೇವಲ ಸರಳ ಸಾದಾ ಸೀರೆಯಲ್ಲಿ ಮಿಂಚುವ ಇವರು ಆಭರಣ ಖರೀದಿ ಮಾಡಿಯೇ ಇಲ್ಲವಂತೆ.

Sudhamurty ddd

ಚೆನ್ನಾಗಿ ತಲೆ ಬಾಚಿ ಕಟ್ಟಿ, ಹೂವಿಟ್ಟುಕೊಂಡು, ದೊಡ್ಡದೊಂದು ತಿಲಕವಿಟ್ಟು ಪುಟಪುಟನೆ ನಡೆಯುವ ಇವರನ್ನು ನೋಡಿದರೆ ಎಲ್ಲರಿಗೂ ಅಮ್ಮನೋ, ಅಕ್ಕನೋ ಎಂಬ ಆಪ್ತ ಭಾವ. ಅವರೂ ಅಷ್ಟೆ ದೇವಾಲಯಗಳಿಗೆ ಹೋಗಿ ತರಕಾರಿ ಹೆಚ್ಚುತ್ತಾರೆ, ಭಜನೆ ಹೇಳುತ್ತಾರೆ, ಯಾವುದೋ ಅಂಗಡಿಗೆ ಹೋಗಿ ಖರೀದಿ ಮಾಡುತ್ತಾರೆ.. ಹೀಗೆ ಸರಳತೆಯಿಂದಲೇ ಬದುಕು ಸಾಗಿಸುವ ಅವರು ಸಾಧನೆ, ಸರಳತೆ, ಸಜ್ಜನಿಕೆಯ ಸಾಕಾರ ಮೂರ್ತಿ.

ಸುಧಾ ಮೂರ್ತಿ ಅವರಿಗೆ ದೇಶವು ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. ಇದೀಗ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಮೂಲಕ ದೊಡ್ಡ ಗೌರವ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸುಧಾ ಮೂರ್ತಿ ಅವರ ಸಾಧನೆಯನ್ನು ಕೊಂಡಾಡಿದ್ದಾರೆ.

ಇದನ್ನೂ ಓದಿ: Sudha Murty: ರಾಜ್ಯಸಭೆಗೆ ಕನ್ನಡತಿ ಸುಧಾ ಮೂರ್ತಿ ನಾಮನಿರ್ದೇಶನ; ನಾರಿ ಶಕ್ತಿ ಎಂದ ಮೋದಿ

Exit mobile version