ಬಹುತೇಕ ಎಲ್ಲರೂ, ಮಹಿಳೆಯರು ಪುರುಷರೆನ್ನದೆ, ತಮ್ಮ ಸೌಂದರ್ಯದ ಬಗ್ಗೆ ಹೆಚ್ಚು ಚಿಂತಿತರಾಗುವುದು ಕೂದಲುದುರುವುದು ಶುರುವಾದಾಗ. ಕೂದಲ ಆರೋಗ್ಯ ಪ್ರತಿಯೊಬ್ಬರ ಸೌಂದರ್ಯ ಹಾಗೂ ವ್ಯಕ್ತಿತ್ವದಲ್ಲಿ ಮುಖ್ಯವಾಗಿ ಕಾಣುತ್ತದೆ. ಕೂದಲು, ತೆಳ್ಳಗಾಗುತ್ತಾ ಬಂದಾಗ, ಬಹುಬೇಗ ಬೆಳ್ಳಗಾದಾಗ ಚಿಂತೆ ಹೆಚ್ಚುತ್ತದೆ. ಈ ಚಿಂತೆ ಈ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತದೆ. ವಿವಿಧ ಶಾಂಪೂ, ಎಣ್ಣೆಗಳನ್ನೆಲ್ಲ ಉಪಯೋಗಿಸಿ ನೋಡಿ, ಸಮಸ್ಯೆಗೆ ಪರಿಹಾರ ದೊರಕದೆ ಹತಾಶರಾಗುವಂತೆ ಮಾಡುತ್ತದೆ.
ಆದರೆ, ಇವೆಲ್ಲವುಗಳ ಬದಲು, ಕೂದಲ ಆರೈಕೆಯಲ್ಲೇ, ಅದಕ್ಕೆ ನಾವು ಕೊಡುವ ಗಮನದಲ್ಲೇ ಎಲ್ಲೋ ತೊಂದರೆಯಾಗಿದೆ ಎಂಬುದನ್ನೂ ನಾವು ಇಲ್ಲಿ ಗಮನಿಸಬೇಕು. ಬಹಳ ಸಾರಿ ಕೈಯಾರೆ ಪದೇ ಪದೆ ಮಾಡುವ ತಪ್ಪು ಕೂಡಾ ಹಲವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಸದಾ ಒಣ, ಸಿಕ್ಕುಗಟ್ಟಿದ ಪೇಲವ ಕೂದಲ ಸಮಸ್ಯೆ ಎದುರಿಸುತ್ತಿರುವ ಮಂದಿ ನೀವಾಗಿದ್ದರೆ, ನಿಮ್ಮ ಸಮಸ್ಯೆಯ ಮೂಲ ಇದಾಗಿರಲೂಬಹುದು ಎಂಬುದನ್ನು ಗಮನಿಸಿ.
1. ಒದ್ದೆ ಕೂದಲನ್ನು ಬಾಚುವುದು: ತಲೆಗೆ ಸ್ನಾನ ಮಾಡಿದ ತಕ್ಷಣ ಬಹುತೇಕರು ಮಾಡುವ ತಪ್ಪು ಎಂದರೆ, ಸಿಕ್ಕನ್ನು ಸುಲಭವಾಗಿ ಬಿಡಿಸಿಕೊಳ್ಳಲು ಹಾಗೂ ಸೆಟ್ ಮಾಡಲು ಒದ್ದೆಯಿರುವಾಗಲೇ ಬಾಚುವುದು. ಹಾಗಂತ ತೀರಾ ಒಣಗಿದ ಮೇಲೆಯೇ ಬಾಚಬೇಕೆಂದು ಕಾಯುವ ಅಗತ್ಯವೂ ಇಲ್ಲ. ಹದವಾಗಿ ಒಣಗಿದ ಕೂದಲನ್ನು ಅಗಲ ಹಲ್ಲುಗಳ ಬಾಚಣಿಗೆಯಿಂದ ನಿಧಾನವಾಗಿ ಗಂಟುಗಳನ್ನು ಬಿಡಿಸಿಕೊಂಡು ಬಾಚಿ. ಸ್ನಾನ ಮಾಡುವ ಮೊದಲೇ ಸಿಕ್ಕುಗಳನ್ನು ಬಿಡಿಸಿಕೊಂಡರೆ, ಸ್ನಾನದ ನಂತರ ಅಷ್ಟು ಸಿಕ್ಕಾಗುವುದಿಲ್ಲ.
2. ತಲೆಗೆ ಸ್ನಾನ ಮಾಡಿ ಬಂದ ಕೂಡಲೇ ಟವಲ್ ಹಿಡಿದು ಯದ್ವಾತದ್ವಾ ತಲೆಯೊರಸಿಕೊಳ್ಳುವುದು ಕೂಡಾ ಕೂದಲು ಹಾಳಾಗಲು ಕಾರಣವಾಗುತ್ತದೆ. ನೆಗಡಿಯಾಗುತ್ತದೆ, ಥಂಡಿಯಾಗುತ್ತದೆ, ನೆತ್ತಿ ಮೇಲೆ ಒದ್ದೆ ಉಳಿಯಬಾರದು ಎಂದುಕೊಂಡು ಒಮ್ಮೆಲೇ ಇದ್ದ ಒದ್ದೆಯೆಲ್ಲ ಹೋಗಬೇಕು ಎಂದರೆ, ಕೂದಲು ಹಾಳಾಗಿಬಿಡಬಹುದು. ಒದ್ದೆ ಕೂದಲು ಅತ್ಯಂತ ಸೂಕ್ಷ್ಮವಾಗಿರುವುದರಿಂದ ಈ ಸಂದರ್ಭ ಮೆತ್ತಗೆ ಒರಸಿಕೊಂಡು ನೈಸರ್ಗಿಕವಾಗಿ ಹಾಗೆಯೇ ಒಣಗಿಕೊಳ್ಳಲು ಬಿಡಿ.
3. ಬೇಸಗೆಯಲ್ಲಿ ಸ್ನಾನ ಮಾಡಿ ಕೂದಲು ಹರಡಿಕೊಂಡು ಹೊರಬಂದರೆ, ಇನ್ನಷ್ಟು ಸೆಖೆಯಾಗಿ ಕಿರಿಕಿರಿಯಾಗುವುದು ಸಹಜ. ಆದರೆ, ಹಾಗೆಂದು, ಹರಡಿಕೊಂಡ ಕೂದಲನ್ನು ಒದ್ದೆ ಇರುವಾಗಲೇ ಕಟ್ಟಿಬಿಟ್ಟರೆ, ಕೂದಲು ಹಾಳಾಗುತ್ತದೆ. ಸ್ವಲ್ಪ ಒಣಗಿತೆಂದು ಗಂಟು ಹಾಕಿಕೊಳ್ಳಲು ಹೊರಡಬೇಡಿ. ಕೂದಲು ಪೂರ್ತಿ ಒಣಗಲು ಕಾಯಿರಿ.
4. ರಾತಿ ಮಲಗುವ ಮುನ್ನ ತಲೆಗೆ ಸ್ನಾನ ಮಾಡಿ, ಒಣಗಲೂ ಬಿಡದೆ ಹಾಗೆಯೇ, ಸುಸ್ತಾಯ್ತೆಂದು ಮಲಗಿಬಿಡಬೇಡಿ. ನೀರು ತೊಟ್ಟಿಕ್ಕುವ ಕೂದಲನ್ನು ಒಣಗಿಸಲು ಬಿಡುವಾಗದೆ, ಅದು ತಾನಾಗೇ ರಾತ್ರಿ ಒಣಗೀತೆಂದು ಹರಡಿಕೊಂಡು ಮಲಗಿಬಿಟ್ಟರೆ, ಅದಕ್ಕಿಂತ ದೊಡ್ಡ ತೊಂದರೆ ಇನ್ನೊಂದಿಲ್ಲ. ಅದರಲ್ಲೂ ಹತ್ತಿಬಟ್ಟೆಯ ದಿಂಬಿನ ಮೇಲೆ ತಲೆಯಿಟ್ಟರೆ, ಆ ಬಟ್ಟೆಯೂ ಒದ್ದೆಯಾಗಿ, ಬೇಗ ಒಣಗದೆ, ರಾತ್ರಿ ಶೀತ ನೆಗಡಿಯ ಸಮಸ್ಯೆಯಾಗಲೂಬಹುದು. ಅರೆ ಒಣಗಿದ ಕೂದಲೇ ಉಳಿದುಕೊಂಡು, ಬ್ಯಾಕ್ಟೀರಿಯಾ ಸಮಸ್ಯೆಯೂ ಉಂಟಾಗಬಹುದು. ಜೊತೆಗೆ ಮುಖದ ಮೇಲೆ ಮೊಡವೆಗಳೂ ಹೆಚ್ಚಾಗಿ, ಬೆಳಗ್ಗೆ ಎದ್ದು, ಗಂಟುಕಟ್ಟಿದ ಕೂದಲನ್ನು ಸರಿ ಮಾಡಿಕೊಳ್ಳಲು ಪರದಾಡಿ, ಇನ್ನಷ್ಟು ಮತ್ತಷ್ಟು ಕೂದಲು ಉದುರಿ, ಒಣ, ನಿಸ್ತೇಜ ಕೂದಲು ನಿಮ್ಮದಾಗುತ್ತದೆ. ಹಾಗಾಗಿ ರಾತ್ರಿ ತಲೆಗೆ ಸ್ನಾನ ಮಾಡುವ ಅಭ್ಯಾಸವಿದ್ದರೆ, ಮಲಗುವ ಸಮಯಕ್ಕಿಂತ ಸಾಕಷ್ಟು ಮೊದಲೇ ಸ್ನಾನ ಮಾಡಿ ಒಣಗಿದ ಮೇಲೆ ಮಲಗಿ.
5. ಮಳೆಗಾಲದಲ್ಲಿ ಹೊರಗೆ ಓಡಾಡಿ ಮನೆಗೆ ಬರುವಾಗ ಅಕಸ್ಮಾತ್ತಾಗಿ ಮಳೆಯಲ್ಲಿ ನೆನೆದೋ, ಅಥವಾ, ಬೇಸಗೆ ಮುಗಿಸಿ ಮಳೆ ಬಂದ ಸಂಭ್ರಮದಲ್ಲಿ ಮಳೆಯಲ್ಲಿ ಬೇಕುಬೇಕೆಂದೇ ನೆನೆದು ಕೂದಲು ಒದ್ದೆ ಮಾಡಿಕೊಂಡರೂ, ಇವೇ ಮೇಲಿನ ವಿಚಾರಗಳನ್ನು ನೆನಪಿಸಿಕೊಂಡು, ಪಾಲಿಸಿ.