40 ದಾಟಿದ ಕೂಡಲೇ ಮಹಿಳೆಯಲ್ಲಿ ಆಗುವ ಬದಲಾವಣೆಗಳು ಅನೇಕ. ಹಾರ್ಮೋನಿನ ಏರುಪೇರು, ಕ್ಯಾಲ್ಶಿಯಂ ಕೊರತೆ, ಭಾವನಾತ್ಮಕ ಸಮಸ್ಯೆಗಳು, ಜೀರ್ಣಕ್ರಿಯೆ ಸಮಸ್ಯೆಗಳೂ ಸೇರಿದಂತೆ ಮಹಿಳೆ ಹಲವು ಮಜಲುಗಳನ್ನು ದೈಹಿಕವಾಗಿ, ಮಾನಸಿಕವಾಗಿ ದಾಟಬೇಕಾಗುತ್ತದೆ. ಕುಟುಂಬದ ಜವಾಬ್ದಾರಿಗಳು, ಕೆಲಸದ ಒತ್ತಡ, ಹೆರಿಗೆ, ಆರೋಗ್ಯದ ಕಡೆಗೆ ಗಮನ ಕಡಿಮೆಯಾದ ಕಾರಣಗಳಿಂದ ಮಹಿಳೆ ತನ್ನ ಆರೋಗ್ಯದಲ್ಲಿ ಈ ವಯಸ್ಸಿನ ನಂತರ ಸಾಕಷ್ಟು ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಇಂಥ ಸಂದರ್ಭ ಮಹಿಳೆಗೆ ಮಾನಸಿಕ ಸಾಂಗತ್ಯದ ಜೊತೆಗೆ ದೈಹಿಕ ಆರೋಗ್ಯಕ್ಕೆ ಪೂರಕವಾದ ಸಲಹೆ, ನೆರವು ಹಾಗೂ ಸಮತೋಲಿತ ಆಹಾರ ಸೇವನೆಯೂ (balanced diet) ಅತ್ಯಂತ ಅಗತ್ಯ. ಬನ್ನಿ, ನೀವು 40 ದಾಟಿದ ಮಹಿಳೆಯಾಗಿದ್ದಲ್ಲಿ, ಆರೋಗ್ಯದ ಕಡೆಗೆ ಗಮನ ಹರಿಸುವ ಜೊತೆಗೆ ಈ ಆಹಾರಗಳ ಸೇವನೆಯನ್ನು (Healthy Food For Women) ಮಾತ್ರ ಮರೆಯಬೇಡಿ.
1. ಸೇಬು: ದಿನಕ್ಕೊಂದು ಸೇಬು ಹಣ್ಣನ್ನು ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಹಳೇ ಗಾದೆ ನೀವು ಕೇಳಿರಬಹುದು. ಅದು ಸತ್ಯ ಕೂಡಾ. ಸೇಬು ಹಣ್ಣೊಂದನ್ನು ನಿತ್ಯವೂ ತಿನ್ನುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ನಾರಿನಂಶ ಹಾಗೂ ಫ್ಲೇವನಾಯ್ಡ್‌ಗಳು ಅಧಿಕವಾಗಿವೆ. ದೇಹದ ಉರಿಯೂತ, ಕೆಟ್ಟ ಕೊಲೆಸ್ಟೆರಾಲ್ ಅನ್ನು ಕಡಿಮೆಗೊಳಿಸುವ ಜೊತೆಗೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ.
2. ಗ್ರೀನ್ ಚಹಾ: ಗ್ರೀನ್ ಟೀ ಎಂಬ ಚಹಾ ಸಾಕಷ್ಟ ಆಂಟಿ ಆಕ್ಸಿಡೆಂಟ್‌ಗಳಿರುವ ಚಹಾ. ಇದು ಸಾಮಾನ್ಯ ಚಹಾಕ್ಕಿಂತ ಭಿನ್ನವಾದ ಪ್ರಯೋಜನಗಳನ್ನು ನೀಡುವುದರಿಂದ ೪೦ ದಾಟಿದ ಮಹಿಳೆ ಮಾತ್ರವಲ್ಲ, ಎಲ್ಲ ಮಹಿಳೆಯರೂ ಪುರುಷರೂ ಕುಡಿಯಬೇಕಾದ್ದು. ದೇಹದ ಚೀರ್ಣಕ್ರಿಯೆಯನ್ನು ಚುರುಕುಗೊಳಿಸಿ ತೂಕವನ್ನು ಸಮತೋಲನಗೊಳಿಸಿ ಆರೋಗ್ಯ ನೀಡುತ್ತದೆ.
3. ಮೆಂತ್ಯಕಾಳು: ಮೆಂತ್ಯ ಕಾಳಿನ ಸೇವನೆ ದೇಹದ ಕೊಬ್ಬನ್ನು ಇಳಿಸಲು ಅತ್ಯಂತ ಸುಲಭ ಸರಳವಾದ ಉಪಾಯ. ಇದು ದೇಹದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ರಸಗಳ ಉತ್ಪಾದನೆಗೆ ಪ್ರಚೋದನೆ ನೀಡಿ, ಚಯಾಪಚಯ ಕ್ರಿಯೆಯನ್ನು ಪ್ರಚೋದಿಸುತ್ತದೆ.
4. ಅಗಸೆ ಬೀಜ: ಫ್ಲ್ಯಾಕ್ ಸೀಡ್ ಅಥವಾ ಅಗಸೆ ಬೀಜದಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿದ್ದು, ಇದು ಹೃದಯದ ಆರೋಗ್ಯಕ್ಕೆ ಅತ್ಯಂತ ಅಗತ್ಯವಾದ ಕೊಬ್ಬಾಗಿದೆ. ಜೊತೆಗೆ ೪೦ ದಾಟಿದ ಮಹಿಳೆಯರಲ್ಲಿ ಸಾಮಾನಯವಾಗಿ ಕಂಡು ಬರುವ ಹಾರ್ಮೋನ್ ಸಮಸ್ಯೆಗಳು ಹಾಗೂ ಮುಟ್ಟಿನ ತೊಂದರೆಗಳಿಗೂ ಇದು ಅತ್ಯಂತ ಒಳ್ಳೆಯದು.
5. ಬೆಣ್ಣೆ ಹಣ್ಣು: ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಪೊಟಾಶಿಯಂ ಹಾಗೂ ಆರೋಗ್ಯಕರ ಕೊಬ್ಬು ನಮ್ಮ ದೇಹಕ್ಕೆ ಅಗತ್ಯ ಪ್ರಮಾಣದಲ್ಲಿದೆ. ಚರ್ಮದ ಕಾಂತಿಗೆ, ಚರ್ಮ ಸುಕ್ಕಾಗದಂತೆ ತಡೆಯಲು, ಹೊಳಪಿನ ಕೂದಲಿಗೆ ಹಾಗೂ ರಕ್ತದೊತ್ತಡದ ಸಮತೋಲನಕ್ಕೆ ಬೆಣ್ಣೆ ಹಣ್ಣು ಅತ್ಯಂತ ಯೋಗ್ಯವಾದ ಹಣ್ಣು.
6. ಬೀಜಗಳು: ಒಣಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ನಾರಿನಂಶ ಹೇರಳವಾಗಿದ್ದು, ಹೃದಯದ ಆರೋಗ್ಯಕ್ಕೆ, ಮಧುಮೇಹ ಹಾಗೂ ರಕ್ತದೊತ್ತಡದಂತಹ ಸಮಸ್ಯೆಗಳಿಗೆ ಇವುಗಳು ಒಳ್ಳೆಯದನ್ನೇ ಮಾಡುತ್ತದೆ.
ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ
7. ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳಲ್ಲಿ ವಿಟಮಿನ್ ಕೆ ಹೇರಳವಾಗಿದ್ದು, ಇದರ ಜೊತೆಗೆ ಫೋಲೇಟ್, ಕ್ಯಾಲ್ಶಿಯಂ, ಬೀಟಾ ಕೆರೋಟಿನ್‌ಗಳೂ ಸಾಕಷ್ಟು ಪ್ರಮಾಣದಲ್ಲಿವೆ. ಪಾಲಕ್, ಬಸಳೆ, ಮೆಂತೆ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಹಸಿರು ಸೊಪ್ಪುಗಳೂ ಕೂಡಾ, ಪೋಷಕಾಂಶಗಳ ಭಂಡಾರವನ್ನೇ ಹೊಂದಿರುವುದರಿಂದ ಮಹಿಳೆಯರು ಆಗಾಗ ತಿನ್ನಲೇಬೇಕಾದ ಆಹಾರ ಇವು.
8. ಮೊಸರು: ಪ್ರತಿ ದಿನವೂ ಒಂದು ಕಪ್ ಗಟ್ಟಿಯಾದ ಮೊಸರಿನ ಸೇವನೆ ಮಹಿಳೆಯರಿಗೆ ಒಳ್ಳೆಯದು. ಮಹಿಳೆಯರು 40 ದಾಟಿದ ಮೇಲೆ ನಿಧಾನವಾಗಿ ಕ್ಯಾಲ್ಶಿಯಂ ಮತ್ತಿತರ ಪೋಷಕಾಂಶಗಳ ಕೊರತೆಯಿಂದ ಮೂಳೆಗಳು ಶಕ್ತಿ ಕುಂದಿ, ಅನುಭವಿಸುವ ಆರೋಗ್ಯ ಸಮಸ್ಯೆಗಳಿಗೆ ನಿಸರ್ಗದತ್ತವಾದ ಕ್ಯಾಲ್ಶಿಯಂ ಮೂಲಗಳಿರುವ ಆಹಾರ ಸೇವನೆ ತ್ಯಂತ ಅಗತ್ಯ. ಮೊಸರಿನಲ್ಲಿ ಕ್ಯಾಲ್ಶಿಯಂ ಸೇರಿದಂತೆ ಪ್ರೊಬಯಾಟಿಕ್ ಗುಣಗಳಿರುವುದರಿಂದ ಜೀರ್ಣಕ್ರಿಯೆಗೂ ಇದು ಒಳ್ಳೆಯದು. ಈ ಎಲ್ಲ ಆಹಾರಗಳೂ ಹಿತಮಿತವಾಗಿದ್ದರೆ ಆರೋಗ್ಯವೂ ಸರಿಯಾದ ಹಾದಿಯಲ್ಲಿರುತ್ತದೆ ಎಂಬುದನ್ನು ಮಾತ್ರ ಮರೆಯದಿರಿ.
ಇದನ್ನೂ ಓದಿ: Healthy Food: ಈ ಎಲ್ಲ ರಾಸಾಯನಿಕಗಳು ನೀವು ತಿನ್ನುವ ಆಹಾರದಲ್ಲಿದೆಯೇ? ಹಾಗಾದರೆ ಎಚ್ಚರ!