Site icon Vistara News

ಅವರು ಮಕ್ಕಳಂತಿರಲೇ ಇಲ್ಲ: Elon Musk ತಾಯಿ ಹೇಳಿದ್ದೇನು?

ಮುಂದಿರುವುದು ಏಲಾನ್‌ ಮಸ್ಕ್‌ ಅವರ ತಾಯಿ ಮಾಯೆ ಮಸ್ಕ್‌ (Maye Musk) ಅವರ ಮಾತುಗಳು:

ಇಷ್ಟು ಯಶಸ್ವಿಯಾಗಿರುವ ಮಕ್ಕಳನ್ನು ನೀನು ಬೆಳೆಸಿದ್ದು ಹೇಗೆ ಅಂತ ನನ್ನನ್ನು ಜನ ಕೇಳುತ್ತಿರುತ್ತಾರೆ. ಇದಕ್ಕೆ ಒಂದೇ ಉತ್ತರ ಹೇಳುತ್ತೀನಿ- ಪರಿಶ್ರಮಪಡೋಕೆ ಕಲಿಸುವುದು ಹಾಗೂ ಅವರ ಆಸಕ್ತಿಗಳ ಬೆನ್ನು ಹತ್ತಲು ಹೇಳಿಕೊಡುವುದು.

ನನಗೆ 31 ವರ್ಷ ಆಗಿದ್ದಾಗ, ಮೂವರು ಮಕ್ಕಳನ್ನಿಟ್ಟುಕೊಂಡು ನಾನು ಸಿಂಗಲ್‌ ಮದರ್‌ ಆದೆ. ಫುಲ್‌ಟೈಮ್‌ ಉದ್ಯೋಗದಲ್ಲಿದ್ದೆ. ಅದರ ಬಗ್ಗೆ ಗಿಲ್ಟ್‌ ಇರಲಿಲ್ಲ. ಯಾಕೆಂದರೆ ನನಗೆ ಬೇರೆ ಆಯ್ಕೆಯೇ ಇರಲಿಲ್ಲ. ಮಕ್ಕಳನ್ನು ಬೆಳೆಸುವುದು ನನ್ನ ಮುಖ್ಯ ಆದ್ಯತೆಯಾಗಿತ್ತು. ತಲೆ ಮೇಲೊಂದು ಸೂರು, ಹೊಟ್ಟೆಗೆ ಕೂಳು, ಮೈಮೇಲೆ ಚೂರು ಬಟ್ಟೆಗಾಗಿ ನಾನು ದುಡಿದೆ.

ನನಗೆ ಎಂಟು ವರ್ಷವಿದ್ದಾಗ ನನ್ನ ತಂದೆಗಾಗಿ ದುಡಿಯಲು ಆರಂಭಿಸಿದ್ದೆ. ಆತ ಮುರಿದ ಮೂಳೆಗಳನ್ನು ಜೋಡಿಸುವ ವೈದ್ಯಕೀಯ ಮಾಡುತ್ತಿದ್ದ. ತಾಯಿ ಕೂಡ ಸಹಕರಿಸುತ್ತಿದ್ದಳು. ನನ್ನ ಅವಳಿ ಸೋದರಿ ಕಾಯೆ ಮತ್ತು ನಾನು ತಂದೆಗೆ ಸಹಾಯ ಮಾಡಿ ಗಂಟೆಗೆ 5 ಸೆಂಟ್ಸ್‌ ಪಡೆಯುತ್ತಿದ್ದೆವು. 12 ವರ್ಷವಾದಾಗ ನಾವು ಅಲ್ಲಿ ರೆಸೆಪ್ಷನಿಸ್ಟ್‌ಗಳಾಗಿ ಕೆಲಸ ಮಾಡಿದೆವು.

ನಮ್ಮ ತಂದೆ ತಾಯಿ ನಮ್ಮನ್ನು ಎಂದೂ ಸಣ್ಣ ಮಕ್ಕಳಂತೆ ಕಾಣಲೇ ಇಲ್ಲ- ಬದಲಾಗಿ ತಾವು ನಂಬಿಕೆ ಇಡಬಹುದಾದ ವಯಸ್ಕ ವ್ಯಕ್ತಿಗಳಂತೆಯೇ ಪರಿಗಣಿಸಿದರು. ನಾನು ನನ್ನ ಮಕ್ಕಳನ್ನು ಹೇಗೆ ಬೆಳೆಸಿದೆ ಎಂಬುದರಲ್ಲೂ ಇದರ ಪ್ರಭಾವವನ್ನು ಕಾಣಬಹುದು. ಸಣ್ಣ ಪ್ರಾಯದಿಂದಲೇ ಮೂವರೂ ನನ್ನ ನ್ಯೂಟ್ರಿಷನ್‌ ಉದ್ಯಮದಲ್ಲಿ ಕೈ ಜೋಡಿಸಿದರು. ಟೋಸ್ಕಾ ನನ್ನ ಕಚೇರಿಯಲ್ಲಿ ಕುಳಿತು ವೈದ್ಯರಿಗೆ ಲೆಟರ್‌ಗಳನ್ನು ಬರೆದಳು. ಎಲಾನ್‌ ವರ್ಡ್‌ ಪ್ರೊಸೆಸ್ಸರ್‌ ಬಳಸುವುದರಲ್ಲಿ ಮುಂದಿದ್ದ, ನನಗೆ ಅದನ್ನು ಹೇಳಿಕೊಟ್ಟ. ಕಿಂಬಾಲ್‌ ಕೂಡ ಸಹಾಯ ಮಾಡುತ್ತಿದ್ದ.

ಬ್ಲೊಮ್‌ಫಾಂಟೈನ್‌ನಲ್ಲಿದ್ದಾಗ ಟೋಸ್ಕಾಳನ್ನು ನಾನು ನನ್ನದೇ ಇಮೇಜ್‌ ಸ್ಕೂಲ್‌ನಲ್ಲಿ ಮಾಡೆಲಿಂಗ್‌ಗೆ ಹಚ್ಚಿದೆ. ಎಂಟು ವರ್ಷದ ಆಕೆ ವಿದ್ಯಾರ್ಥಿಗಳಿಗೆ ವಾಕಿಂಗ್‌, ಕೊರಿಯೋಗ್ರಫಿ ಹೇಳಿಕೊಡುತ್ತಿದ್ದಳು.

ನನ್ನ ಹೆತ್ತವರು ನಮ್ಮನ್ನು ಬೆಳೆಸಿದಂತೆಯೇ ನಾನು ನನ್ನ ಮಕ್ಕಳನ್ನು ಬೆಳೆಸಲು ಯತ್ನಿಸಿದೆ- ಸ್ವತಂತ್ರ, ಕಾರುಣ್ಯಪರ, ಪ್ರಾಮಾಣಿಕ, ವಿನಯವಂತ. ಕಷ್ಟಪಡುವುದು ಹಾಗೂ ಒಳ್ಳೆಯದನ್ನು ಮಾಡುವುದರ ಪ್ರಾಮುಖ್ಯ ಹೇಳಿಕೊಟ್ಟೆ. ಅವರನ್ನು ಬೇಬಿಗಳಂತೆ ಕಾಣಲಿಲ್ಲ. ಬಯ್ಯಲಿಲ್ಲ. ಏನು ಕಲಿಯಬೇಕು ಎಂದು ಹೇಳಲಿಲ್ಲ. ಅವರ ಹೋಮ್‌ವರ್ಕ್‌ ಪರಿಶೀಲಿಸಲಿಲ್ಲ. ಅದು ಅವರ ಹೊಣೆಯಾಗಿತ್ತು.

ಅವರು ದೊಡ್ಡವರಾದಂತೆ, ತಮ್ಮ ಹೊಣೆಯನ್ನೂ ತಾವೇ ತೆಗೆದುಕೊಂಡರು. ತಮ್ಮ ನಿರ್ಧಾರಗಳನ್ನು ತಾವೇ ಮಾಡಿಕೊಂಡರು. ತಮ್ಮದೇ ಯೂನಿವರ್ಸಿಟಿಗಳನ್ನೂ ಆಯ್ದುಕೊಂಡು ತಾವೇ ಸ್ಕಾಲರ್‌ಶಿಪ್‌ಗೂ ಅಪ್ಲೈ ಮಾಡಿ ಸಾಲ ಪಡೆದು ಕಲಿತರು.

ಮಕ್ಕಳನ್ನು ವಾಸ್ತವದಿಂದ ಮತ್ತು ಹೊಣೆಗಾರಿಕೆಯಿಂದ ದೂರ ಇಡಬೇಕಿಲ್ಲ. ನಾನು ಕಷ್ಟಪಡುವುದನ್ನು ಮಕ್ಕಳು ನೋಡಿದ್ದಾರೆ. ಅವರೂ ಬಡತನದಲ್ಲಿ ಬೆಳೆದಿದ್ದಾರೆ. ನೆಲದ ಮೇಲೆ ಮಲಗಿದ್ದಾರೆ. ನಿಮ್ಮ ಮಕ್ಕಳು ಲಕ್ಷುರಿಯಲ್ಲಿ ಬೆಳೆಯದಿದ್ದರೆ, ಅವರು ಬದುಕುಳಿಯುತ್ತಾರೆ. ನಾವು ಅವರನ್ನು ಹಾಳು ಮಾಡುವುದಿಲ್ಲ.

ಇದನ್ನೂ ಓದಿ: Explainer: ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಖರೀದಿಸಿದ್ದೇಕೆ?

ಹೆಚ್ಚಿನ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಒತ್ತಡ ಮಾಡಿಕೊಳ್ಳುತ್ತಾರೆ. ಅಪ್ಪ ಅಥವಾ ಅಮ್ಮ ತಮ್ಮ ಮಕ್ಕಳ ಸ್ಕೂಲ್‌ ಕಾಲೇಜು ಫಾರಂಗಳನ್ನು ತಲೆ ಕೆಡಿಸಿಕೊಳ್ಳುತ್ತಾ ತುಂಬಿಸುತ್ತಿರುತ್ತಾರೆ. ನನ್ನ ಉಪದೇಶ ಏನೆಂದರೆ, ಅವರೇ ತುಂಬಿಕೊಳ್ಳಲಿ ಬಿಡಿ. ಅವರ ಭವಿಷ್ಯಕ್ಕೆ ಅವರೇ ಹೊಣೆ.

ಮಕ್ಕಳಿಗೆ ಒಳ್ಳೆಯ ವರ್ತನೆಗಳನ್ನು ಕಲಿಸಿ. ಆದರೆ ತಾವು ಏನಾಗಬೇಕು ಎಂಬುದನ್ನು ಅವರೇ ನಿರ್ಧರಿಸಲಿ.

Exit mobile version