Site icon Vistara News

Kangaroo care | ಅವಧಿಪೂರ್ವದಲ್ಲಿ ಜನಿಸಿದ ಮಗುವಿಗೆ ಬೆಚ್ಚಗಿನ ಅಪ್ಪುಗೆ: ವಿಶ್ವ ಆರೋಗ್ಯ ಸಂಸ್ಥೆ ಸೂಚನೆ

kangaroo care

ಅವಧಿಪೂರ್ವದಲ್ಲಿ ಜನಿಸಿದ ಶಿಶುಗಳು ಮತ್ತು ಹುಟ್ಟುವಾಗ ೨.೫ ಕೆ.ಜಿ.ಗಿಂತ ಕಡಿಮೆ ತೂಕವಿರುವ ಶಿಶುಗಳನ್ನು ʻಕಾಂಗರೂ ಕೇರ್‌ʼ ಪದ್ಧತಿಯ ಮೂಲಕ ಸಂರಕ್ಷಿಸಿ, ಆರೋಗ್ಯಪೂರ್ಣವಾಗಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಅವಧಿಪೂರ್ವದಲ್ಲಿ (೩೭ ವಾರಗಳಿಗೂ ಮುನ್ನ) ಜನಿಸುವ ಶಿಶುಗಳ ಬಗೆಗಿನ ಜಾಗೃತಿಗಾಗಿಯೇ ನವೆಂಬರ್‌ ತಿಂಗಳ ೭ನೇ ದಿನವನ್ನು ಮೀಸಲಿರಿಸಿದ್ದು, “ಅವಧಿಪೂರ್ವದಲ್ಲಿ ಜನಿಸಿದ ಶಿಶುಗಳು ಬಾಳಿ, ಬೆಳಗುತ್ತವೆ. ಆದರೆ ಅಂಥ ಅವಕಾಶವನ್ನು ಪ್ರತಿ ಶಿಶುವಿಗೂ ನೀಡಬೇಕಾಗುತ್ತದೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ. ತೆದ್ರೋಸ್‌ ಆಂಡನೋಮ್‌ ಗೇಬ್ರೆಯೇಸಸ್‌ ಹೇಳಿದ್ದಾರೆ.

ತಾಯಿ ಮತ್ತು ಶಿಶುವಿನ ಮೈಗೆ ಮೈ ತಾಗುವಂತೆ ಇರಿಸುವುದನ್ನು ಮಗು ಹುಟ್ಟಿದ ಕೂಡಲೇ ಮಾಡಬೇಕು. ಆರೋಗ್ಯ ಸಮಸ್ಯೆಗಳು ಇಲ್ಲದಿದ್ದಲ್ಲಿ, ಇನ್ಕ್ಯುಬೇಟರ್‌ನಲ್ಲಿ ಇರಿಸುವುದಕ್ಕಿಂತ, ತಾಯಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಇರಿಸುವ ʻಕಾಂಗರೂ ಕೇರ್‌ʼ ಪದ್ಧತಿ ಹೆಚ್ಚು ಪರಿಣಾಮಕಾರಿ ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆ. ಈವರೆಗಿನ ಕ್ಲಿನಿಕಲ್‌ ಕ್ರಮಗಳ ಪ್ರಕಾರ, ಅತಿಕಡಿಮೆ ತೂಕದ ಅಥವಾ ಅವಧಿಪೂರ್ವದಲ್ಲಿ ಜನಿಸಿದ ಶಿಶುಗಳನ್ನು ಇನ್ಕ್ಯುಬೇಟರ್‌ನಲ್ಲಿ ಇರಿಸುವ ಪದ್ಧತಿ ಚಾಲ್ತಿಯಲ್ಲಿತ್ತು. ಆದರೆ ʻಕಾಂಗರೂ ಕೇರ್‌ʼ ಶಿಶುಗಳಿಗೆ ಹೆಚ್ಚು ಲಾಭದಾಯಕ ಎನಿಸುತ್ತಿದೆ. ಭಾರತದಲ್ಲಿರುವ ಆರೋಗ್ಯ ಪರಿಣಿತರ ಪ್ರಕಾರ, ದೇಶದ ಹಲವೆಡೆಗಳಲ್ಲಿ ಈ ಕ್ರಮ ಈಗಾಗಲೇ ಚಾಲ್ತಿಯಲ್ಲಿದೆ.

“ತಾಯಿಯ ಅಪ್ಪುಗೆಯಲ್ಲೇ ಶಿಶುವಿನಲ್ಲಿ ಅತ್ಯಧಿಕ ಚೇತರಿಕೆ ಕಂಡುಬಂದಿದೆ. ಮಾತ್ರವಲ್ಲ, ಆರು ತಿಂಗಳವರೆಗೆ ಸಂಪೂರ್ಣವಾಗಿ ತಾಯಿಯ ಹಾಲನ್ನೇ ಶಿಶುವಿಗೆ ಉಣಿಸಬೇಕು. ಇದು ಎಲ್ಲಾ ಮಕ್ಕಳ ವಿಷಯದಲ್ಲಿ ಹೌದಾದರೂ, ಅವಧಿಪೂರ್ವ ಜನಿಸಿದ ಮತ್ತು ಕಡಿಮೆ ತೂಕದ ಶಿಶುಗಳಿಗಂತೂ ಅತ್ಯಂತ ಮಹತ್ವದ್ದು. ತಾಯಿಯ ಹಾಲು ಮಗುವಿಗೆ ಅಗತ್ಯ ಪೋಷಣೆ ನೀಡುವುದರ ಜೊತೆಗೆ ಸೋಂಕುಗಳಿಂದ ರಕ್ಷಿಸುತ್ತದೆ” ಎಂಬುದು ವೈದ್ಯಲೋಕದ ಅಭಿಪ್ರಾಯ.

ಇನ್ಕ್ಯುಬೇಟರ್‌ನಲ್ಲಿ ಇರಿಸುವುದಕ್ಕಿಂತ ಕಾಂಗರೂ ಕೇರ್‌ ಪದ್ಧತಿ ಅತ್ಯಂತ ಕಡಿಮೆ ಖರ್ಚಿನದ್ದು ಮತ್ತು ಹೆಚ್ಚು ಪ್ರಯೋಜನ ತರುವಂಥದ್ದು. ಬಹಳಷ್ಟು ಅವಧಿಪೂರ್ವ ಪ್ರಸವ ಪ್ರಕರಣಗಳಲ್ಲಿ ಕಾಂಗರೂ ಕೇರ್‌ ಮೂಲಕ ಶಿಶುವನ್ನು ಉಳಿಸಲಾಗಿದೆ. ಆದರೆ ಇಂಥ ಪ್ರಕರಣಗಳಲ್ಲಿ ತಾಯಿ-ಶಿಶುವಿನ ಕುಟುಂಬದ ಮತ್ತು ಆಪ್ತರ ಸಂಪೂರ್ಣ ಸಹಕಾರದ ಅಗತ್ಯವಿರುತ್ತದೆ. ಮಾತ್ರವಲ್ಲ, ಆ ಕುಟುಂಬಕ್ಕೆ ಭಾವನಾತ್ಮಕ ಮತ್ತು ಆರ್ಥಿಕವಾದ ಸ್ಥಿರತೆಯ ಅಗತ್ಯವೂ ಬೇಕಾಗುತ್ತದೆ.

ಇದನ್ನೂ ಓದಿ | Winter care | ಚಳಿಗಾಲದ ಶಿಸ್ತುಬದ್ಧ ಜೀವನಕ್ಕಿಲ್ಲಿದೆ ಏಳು ಸೂತ್ರಗಳು!

ಹುಟ್ಟಿದ ಕ್ಷಣದಿಂದ ಹಿಡಿದು ಮೊದಲಾರು ತಿಂಗಳು ಈ ಶಿಶುಗಳು ಎದೆಹಾಲನ್ನೇ ಉಣ್ಣುವುದು ಅತ್ಯಂತ ಮಹತ್ವದ್ದು ಹೌದಾದರೂ, ತಾಯಿಗೆ ಹಾಲಿಲ್ಲದಿದ್ದರೆ ಅಥವಾ ಇನ್ನಾವುದಾದರೂ ಆರೋಗ್ಯ ಸಮಸ್ಯೆ ಇದ್ದ ಪಕ್ಷದಲ್ಲಿ, ದಾನಿಗಳಿಂದ ಎದೆಹಾಲು ಸ್ವೀಕರಿಸಬಹುದು. ಅದೂ ಸಾಧ್ಯವಾಗದಿದ್ದರೆ ಪ್ರೀ ಟರ್ಮ್‌ ಫಾರ್ಮುಲಾಗಳನ್ನು ಎಳೆಗೂಸುಗಳಿಗೆ ನೀಡಬಹುದು. ಉಳಿದೆಲ್ಲ ಶಿಶುಗಳಂತೆಯೇ ಈ ಶಿಶುಗಳಿಗೂ ಸೂಕ್ಷ್ಮವಾಗಿ ಎಣ್ಣೆಯನ್ನು ನೀವಬಹುದು.

ಅವಧಿಪೂರ್ವ ಪ್ರಸವ ಮತ್ತು ಅತಿಕಡಿಮೆ ತೂಕದ ಜನನದಿಂದಾಗಿ ಸರಿಯಾಗಿ ಬೆಳವಣಿಗೆಯಾಗದೆ ಉಂಟಾಗುವ ಸಮಸ್ಯೆಗಳೇ ೫ ವರ್ಷದೊಳಗಿನ ಮಕ್ಕಳ ಸಾವಿಗೆ ಜಾಗತಿಕ ಮಟ್ಟದಲ್ಲಿ ದೊಡ್ಡ ಕಾರಣವಾಗುತ್ತಿದೆ. ಮುಂದುವರೆದ ದೇಶಗಳಲ್ಲಿ ೨೮ ವಾರಗಳ ನಂತರ ಜನಿಸಿದ ಮಕ್ಕಳು ಬಾಳಿ-ಬದುಕುವ ಸಾಧ್ಯತೆ ಅತಿ ಹೆಚ್ಚು. ಇದೇ ಪ್ರಮಾಣ ಅಭಿವೃದ್ಧಿಶೀಲ ದೇಶಗಳಲ್ಲಿ ಕೇವಲ ಶೇ. ೧೦ರಷ್ಟು. ಹಾಗಾಗಿ ಇಂಥ ಶಿಶುಗಳ ಬದುಕು ಸುರಕ್ಷಿತಗೊಳಿಸಲು ಈ ಮಹತ್ವದ ನಿರ್ದೇಶನವನ್ನು ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿದೆ.

ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ

Exit mobile version