Site icon Vistara News

Malaika Arora | ಚಿರಯುವತಿ ಮಲೈಕಾ ಬ್ಯೂಟಿ ಸೀಕ್ರೆಟ್‌ ನಿಮ್ಮನೆಯಲ್ಲೂ ಇದೆ!

malaika

ಸೆಲೆಬ್ರಿಟಿಗಳು ನಿಂತರೂ, ಕೂತರೂ, ಜಿಮ್‌ಗೆ ಹೋದರೂ, ಏರ್‌ಪೋರ್ಟ್‌ಗೆ ಹೋದರೂ ಸುದ್ದಿಯೇ. ಇಂಥದ್ದರಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳ ಬಗ್ಗೆ ಪ್ರತ್ಯೇಕ ಮಾತಿಲ್ಲ. ಅವರಲ್ಲಿ, ಸದ್ಯಕ್ಕೀಗ ವಯಸ್ಸಿನ ಹಂಗಿಲ್ಲದೆ, ಸುದ್ದಿಯಾಗುವ, ಟ್ರೋಲ್‌ಗಳಿಗೆ ಬಲಿಯಾಗುವ ಸುಂದರಿಯರಲ್ಲಿ ಮಲೈಕಾ ಅರೋರಾ (Malaika Arora) ಕೂಡಾ ಒಬ್ಬರು. ವಯಸ್ಸು ಇನ್ನೇನು ೫೦ರ ಆಸುಪಾಸಿಗೆ ತಲುಪಿದರೂ, ಸದಾ ತನ್ನ ಮೈಮಾಟದಿಂದ, ಫಿಟ್‌ನೆಸ್‌ನಿಂದ ಹಾಗೂ ಎಂದೂ ಮಾಸದ ಸೌಂದರ್ಯದಿಂದ ಸುದ್ದಿಯಾಗುತ್ತಿರುವವರ ಪೈಕಿ ಮಲೈಕಾಗೆ ಅಗ್ರಸ್ಥಾನವಿದೆ. ಹಾಗಾದರೆ, ಮಲೈಕಾರ ಇಂಥಾ ಸೌಂದರ್ಯದ ಗುಟ್ಟು ಯಾವುದರಲ್ಲಿ ಅಡಗಿದೆ ಎಂದು ಕುತೂಹಲವಿದ್ದರೆ, ಅದಕ್ಕೆ ಉತ್ತರ ಇಲ್ಲಿದೆ.

ಮಲೈಕಾಗೆ ಸೌಂದರ್ಯ ಎಂದರೆ ಕೇವಲ ಬಾಹ್ಯವಾದುದು ಅಲ್ಲವಂತೆ. ವ್ಯಕ್ತಿಯ ಆಂತರಿಕ ಸೌಂದರ್ಯ ಹಾಗೂ ಬಾಹ್ಯ ಎರಡೂ ಬಹಳ ಮುಖ್ಯ ಎನ್ನುತ್ತಾರೆ ಅವರು. ಹಾಗಾಗಿ, ಮುಖ್ಯವಾಗಿ ನಮ್ಮನ್ನು ನಾವು ಸಂತೋಷವಾಗಿ ಇಟ್ಟುಕೊಳ್ಳುವುದು ನಮ್ಮ ಒಟ್ಟು ಸೌಂದರ್ಯದ ಸೀಕ್ರೆಟ್‌ ಆಗಿರುತ್ತದೆ ಎಂಬುದನ್ನು ಒಪ್ಪಿಕೊಳ್ಳಬೇಕು ಎನ್ನುತ್ತಾರೆ ಅವರು. ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಕಾಳಜಿ ಎಲ್ಲಕ್ಕಿಂತ ಮುಖ್ಯವಾದುದು. ಇವೆರಡರ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ನಮ್ಮ ಮುಖದ ಸೌಂದರ್ಯದ ಮೂಲಕ ಪ್ರತಿಫಲಿಸುತ್ತದೆ. ಜೊತೆಗೆ ಚರ್ಮದ ಕಾಳಜಿಯೂ ಬಹುಮುಖ್ಯವಾದದ್ದು ಎಂಬುದು ಅರೋರಾ ಸೌಂದರ್ಯದ ಮಂತ್ರ.

ಈಕೆ ಹೇಳುವಂತೆ. ಚರ್ಮದ ಸೌಂದರ್ಯ ಕಾಪಾಡಿಕೊಳ್ಳುವ ಕೀಲಿಕೈ ನಮ್ಮ ನಮ್ಮ ಅಡುಗೆ ಮನೆಯಲ್ಲಿಯೇ ಇದೆ. ಮಹಿಳೆಯರು, ಮಾರುಕಟ್ಟೆಯ ವಸ್ತುಗಳಿಗಿಂತಲೂ, ತಮ್ಮ ಅಡುಗೆಮನೆಯಲ್ಲೇ ಸಿಗುವ ವಸ್ತುಗಳ ಮೂಲಕ ತಮ್ಮ ಚರ್ಮದ ಆರೈಕೆಯನ್ನು ಮಾಡಿಕೊಳ್ಳಬಹುದು ಎನ್ನುತ್ತಾರೆ. ಮೇಕಪ್‌ ಇಲ್ಲದ ಲುಕ್ಕನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಕೆಲವೇ ಕೆಲವು ಸೆಲೆಬ್ರಿಟಿಯರಲ್ಲಿ ಈಕೆಯೂ ಒಬ್ಬರು. ಈಕೆಯೇ ಬಳಸುವ ಮ್ಯಾಜಿಕ್‌ ವಸ್ತುಗಳೆಂದರೆ ಚೆಕ್ಕೆ, ಜೇನುತುಪ್ಪವಂತೆ. ತಾನೇ ಸ್ವತಃ ಬಳಸಿ ಉಪಯೋಗ ಕಂಡುಕೊಂಡಿರುವ ಮಲೈಕಾ ಕೆಲವೊಂದು ಬ್ಯೂಟಿ ಸೀಕೆಟ್‌ಗಳನ್ನು ಮಹಿಳೆಯರಿಗಾಗಿ ಹೇಳಿದ್ದಾರೆ.

ಇದನ್ನೂ ಓದಿ | Online Trend: ಬ್ಯೂಟಿಪ್ರಿಯರ ಹುಬ್ಬೇರಿಸಿದ ಗಾರ್ಡನ್‌ ಐಬ್ರೋ!

ಮೊಡವೆ ತೊಂದರೆ ಇರುವ ಮಂದಿ ಆಗಾಗ ಈ ಫೇಸ್‌ ಮಾಸ್ಕ್‌ ಮಾಡಿ ಹಚ್ಚಿಕೊಳ್ಳಬಹುದು ಎನ್ನುತ್ತಾರೆ ಮಲೈಕಾ. ಒಂದು ಚಮಚ ಚೆಕ್ಕೆ ಪುಡಿಯನ್ನು ಜೇನುತುಪ್ಪದಲ್ಲಿ ಕಲಸಿ, ಅದಕ್ಕೆ ಒಂದೆರಡು ಹನಿ ನಿಂಬೆರಸ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬಹುದು. ಹೆಚ್ಚು ನಿಂಬೆರಸ ಇದಕ್ಕೆ ಸೇರಿಸಬಾರದು. ಒಂದೆರಡು ಹನಿಯಷ್ಟೇ ಸೇರಿಸಿದರೆ ಉತ್ತಮ. ೧೦ ನಿಮಿಷ ಬಿಟ್ಟು ಈ ಮಾಸ್ಕನ್ನು ತೊಳೆದುಕೊಳ್ಳುವ ಮೂಲಕ ಮೊಡವೆಯ ತೊಂದರೆಯಿಂದ ಪಾರಾಗಬಹುದು. ಜೊತೆಗೆ ಹೊಳಪಿನ ಚರ್ಮವನ್ನೂ ಪಡೆಯಬಹುದು. ಆದರೆ, ಚೆಕ್ಕೆಯನ್ನು ಬಳಸುವಾಗ ತನ್ನ ಚರ್ಮಕ್ಕೆ ಹೊಂದಿಕೊಳ್ಳುತ್ತದೆಯೋ ಎಂದು ಕೈಯ ಯಾವುದಾದರೂ ಭಾಗಕ್ಕೆ ಹಚ್ಚಿ ಪರೀಕ್ಷೆ ಮಾಡಿಕೊಳ್ಳಬಹುದು. ಯಾಕೆಂದರೆ, ಕೆಲವರ ಚರ್ಮಕ್ಕೆ ಇದು ಹೊಂದುವುದಿಲ್ಲ. ಉರಿಯನ್ನು ತರಬಹುದು.

ಚರ್ಮದ ಆರೈಕೆಯ ಬಹುಮುಖ್ಯ ಭಾಗವೆಂದರೆ ಮುಖವನ್ನು ಆಗಾಗ ಸ್ಕ್ರಬ್‌ ಮಾಡಿಕೊಳ್ಳುವುದು. ಇದಕ್ಕೆ ಮಾರುಕಟ್ಟೆಯ ಸ್ಕ್ರಬರ್‌ ಬಳಕೆಯೇ ಆಗಬೇಕೆಂದಿಲ್ಲ. ನಿಮ್ಮ ಸ್ಕ್ರಬರ್‌ ಅನ್ನು ನೀವೇ ತಯಾರಿಸಿಕೊಳ್ಳಬಹುದು. ಒಂದು ಚಮಚ ಉಪ್ಪು, ಎರಡು ಚಮಚ ಆಲಿವ್‌ ಅಥವಾ ಬಾದಾಮಿ ಎಣ್ಣೆ, ಒಂದು ಚಮಚ ಜೇನುತುಪ್ಪ ಹಾಗೂ ಒಂದು ಚಮಚ ಚೆಕ್ಕೆ ಪುಡಿಯನ್ನು ಮಿಕ್ಸ್‌ ಮಾಡಿ, ಮುಖ ಹಾಗೂ ದೇಹದ ಚರ್ಮದ ಮೇಲೆ ಸ್ಕ್ರಬರ್‌ ಆಗಿ ಬಳಸಬಹುದು. ಇದು ಸತ್ತ ಚರ್ಮಗಳನ್ನು ಹೊಡೆದೋಡಿಸಿ, ಚರ್ಮವನ್ನು ನುಣುಪಾಗಿಸುತ್ತದೆ.

ಚರ್ಮದ ಆರೈಕೆಯ ಇನ್ನೊಂದು ಪ್ರಮುಖ ಘಟ್ಟವೆಂದರೆ, ಚರ್ಮಕ್ಕೆ ಸೂಕ್ತ ಪ್ರಮಾಣದಲ್ಲಿ ಹೈಡ್ರೇಶನ್‌ ಒದಗಿಸುವುದು. ಅತಿಯಾಗಿ ತೊಳೆದುಕೊಳ್ಳುವುದು, ಸ್ಕ್ರಬ್‌ ಮಾಡುವುದು, ಮಾಸ್ಕ್‌ ಹಚ್ಚಿಕೊಳ್ಳುವುದರಿಂದ ಚರ್ಮಕ್ಕೆ ಅಗತ್ಯವಿರುವ ಎಣ್ಣೆಯಂಶವನ್ನೂ ಕಳೆದುಕೊಂಡು, ಚರ್ಮ ಒಣಗುತ್ತದೆ. ಅದಕ್ಕಾಗಿ ಚರ್ಮದಲ್ಲಿ ಸರಿಯಾದ ಪ್ರಮಾಣದ ಹೈಡ್ರೇಶನ್‌ ಅನ್ನು ಉಳಿಸಿಕೊಂಡು ಚರ್ಮಕ್ಕೆ ಹೊಳಪನ್ನು ನೀಡಲು ಈ ಮಾಸ್ಕ್‌ ಉಪಯುಕ್ತ. ಒಂದು ಚಮಚ ಚೆಕ್ಕೆ ಪುಡಿಯನ್ನು ಒಂದು ಚಮಚ ಮೊಸರಿನೊಂದಿಗೆ ಕಲಸಿಕೊಂಡು ದಪ್ಪ ಪೇಸ್ಟ್‌ ಮಾಡಿ ಮುಖಕ್ಕೆ ಹಚ್ಚಿ ೧೦ ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇದರಿಂದ ಚರ್ಮ ನಯವಾಗಿ, ಬೇಕಾದ ಜಿಡ್ಡಿನಂಶವನ್ನು ಪಡೆದುಕೊಂಡು ನಳನಳಿಸುತ್ತದೆ ಎನ್ನುತ್ತಾರೆ ಮಲೈಕಾ.

ಇದನ್ನೂ ಓದಿ | Beauty Care: ನೆಕ್‌ ಬ್ಯೂಟಿಗೆ ಇಲ್ಲಿದೆ 5 ಐಡಿಯಾ

Exit mobile version