Site icon Vistara News

Menstrual Hygiene day: ಮುಟ್ಟು ಕಳಂಕವಲ್ಲ, ಕೊಳಕೂ ಅಲ್ಲ; ಮೌಢ್ಯ ಬಿಟ್ಟು ಸ್ವಚ್ಛತೆಯತ್ತ ಗಮನಕೊಡಿ

Menstrual Hygiene Day

ಇಂದು ಋತುಚಕ್ರ ನೈರ್ಮಲ್ಯ ದಿನ (World Menstrual Hygiene Day 2022). ಮುಟ್ಟು ಸ್ತ್ರೀಯರಲ್ಲಿ ನಿಸರ್ಗ ಸಹಜ ಪ್ರಕ್ರಿಯೆ. ಆ ವಿಭಿನ್ನತೆಯ ಕಾರಣಕ್ಕೇ ಆಕೆ ತಾನು ಸ್ತ್ರೀ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ದುರದೃಷ್ಟವೆಂದರೆ ಮುಟ್ಟಿನೊಂದಿಗೆ ಒಂದಷ್ಟು ಕಳಂಕ, ಮಿಥ್ಯೆ, ಮೂಢನಂಬಿಕೆಗಳು ಅಂಟಿಕೊಂಡುಬಿಟ್ಟಿವೆ. ಋತುಚಕ್ರವೆಂಬುದು ಕೊಳಕು, ಅದರ ಬಗ್ಗೆ ಸಾರ್ವಜನಿಕವಾಗಿ ಮಾತನಾಡಬಾರದು ಎಂಬಿತ್ಯಾದಿ ಭಾವಗಳು ಬಲವಾಗಿ ಬೇರೂರಿಬಿಟ್ಟಿವೆ. ಹಾಗಾಗಿಯೇ ಮಹಿಳೆ ಮುಟ್ಟಾದಾಗ ಆಕೆಯನ್ನು ದೂರ ಇಡುವುದು, ಮನೆಯೊಳಗೆ ಸೇರಿಸದೆ ಇರುವುದು, ಹೊರಗೆ ಮಲಗಿಸುವುದೆಲ್ಲ ಇನ್ನೂ ದೇಶದ ಅನೇಕ ಭಾಗಗಳಲ್ಲಿ ನಡೆಯುತ್ತಲೇ ಇದೆ. ಇಂಥ ಹತ್ತು-ಹಲವು ಅಸಹಜ ಆಚರಣೆಗಳು ತಪ್ಪು ಎಂಬ ಅರಿವು ಮೂಡಿಸಿ, ಮುಟ್ಟಿನ ದಿನಗಳಲ್ಲಿ ಸ್ವಚ್ಛತೆ, ಆರೋಗ್ಯ ಮಾತ್ರ ಆದ್ಯತೆಯಾಗಬೇಕು ಎಂಬುದನ್ನು ತಿಳಿಸಲೆಂದೇ ಈ ಋತುಚಕ್ರ ನೈರ್ಮಲ್ಯ ದಿನವನ್ನು ಆಚರಿಸಲಾಗುತ್ತಿದೆ. ಇದನ್ನು ಮೊಟ್ಟ ಮೊದಲಿಗೆ ಶುರು ಮಾಡಿದ್ದು ಜರ್ಮನ್‌ ಮೂಲದ ಎನ್‌ಜಿಒ ವಾಶ್‌ ಯುನೈಟೆಡ್‌. 2014ರಿಂದ ಪ್ರಾರಂಭವಾದ ಆಚರಣೆಯೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ.

ಮುಟ್ಟಿನ ದಿನದಲ್ಲಿ ಸ್ವಚ್ಛತೆ ಇರಲಿ
ಮಹಿಳೆಯರಿಗೆ ತಿಂಗಳಲ್ಲಿ ಮೂರರಿಂದ-ಐದುದಿನಗಳವರೆಗೆ ಜನನಾಂಗದ ಮೂಲಕ ರಕ್ತಸ್ರಾವ ಆಗುತ್ತದೆ. ಈ ಕ್ರಿಯೆ ಪ್ರಕೃತಿ ಕೊಟ್ಟ ಉಡುಗೊರೆ ಮತ್ತು ಮನುಷ್ಯರಲ್ಲಿ ಸಂತಾನೋತ್ಪತ್ತಿಗೆ ಪೂರಕವಾಗಿರುವುದು. ಒಬ್ಬಳು ಹುಡುಗಿ ಮುಟ್ಟಾದಾಗ ಆಕೆ ಗರ್ಭ ಧರಿಸಲು ಯೋಗ್ಯವಾಗಿದ್ದಾಳೆ ಎಂದಾಗುತ್ತದೆ. ಅದೊಂದು ಬದುಕಿನ ಇನ್ನೊಂದು ಸ್ತರ ಏರುವ ಕ್ಷಣ. ಹೀಗಾಗಿ ಮುಟ್ಟನ್ನು ಪ್ರತಿ ಹೆಣ್ಣೂ ಸಂಭ್ರಮಿಸಬೇಕು ಮತ್ತು ಗಂಡು ಅದನ್ನು ಗೌರವಿಸಬೇಕು.

ಇದನ್ನೂ ಓದಿ: ಚಹಾಕ್ಕೆ ಬೆಲ್ಲ ಬೆರೆಸಿ ಕುಡೀತಿದ್ದೀರಾ?-ಈ ಅಭ್ಯಾಸ ಬೇಡ ಎನ್ನುತ್ತಿದ್ದಾರೆ ಆಯುರ್ವೇದ ತಜ್ಞರು !

ಹೀಗೆ ರಕ್ತಸ್ರಾವ ಆಗುತ್ತಿರುವ ದಿನಗಳಲ್ಲಿ ಮಹಿಳೆಯರು ಸ್ವಚ್ಛತೆಗೆ ತುಂಬ ಮಹತ್ವ ಕೊಡಬೇಕು ಎನ್ನುತ್ತಾರೆ ತಜ್ಞ ವೈದ್ಯರು. ಮುಟ್ಟಾದಾಗ ಸ್ವಚ್ಛತೆಯನ್ನು ಸರಿಯಾಗಿ ಪಾಲನೆ ಮಾಡದೆ ಇದ್ದರೆ, ಅದರಿಂದ ಉಂಟಾಗುವ ಸೋಂಕು ಹಲವು ರೋಗಗಳಿಗೆ ಕಾರಣವಾಗುತ್ತದೆ ಎಂಬುದು ಪುಣೆಯ ಸ್ತ್ರೀರೋಗ ತಜ್ಞ ಡಾ. ನಿತಿನ್‌ ಗುಪ್ತೆ ಹೇಳಿಕೆ. ಹಾಗೇ, ಇನ್ನೊಬ್ಬ ತಜ್ಞರಾದ ಡಾ. ಸುರಭಿ ಸಿದ್ಧಾರ್ಥ್‌ ಕೂಡ ಇದನ್ನೇ ಹೇಳಿದ್ದಾರೆ. ಅದೆಷ್ಟೋ ಯುವತಿಯರು ಮುಟ್ಟಾದಾಗ ಅವರಿಗೆ ಸೂಕ್ತವಾದ ಪ್ಯಾಡ್‌, ಕಪ್‌, ಟ್ಯಾಂಪೂನ್‌ಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲ. ಕಾಟನ್‌ ಬಟ್ಟೆಗಳನ್ನೇ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸೂಕ್ಷ್ಮ ಭಾಗದಲ್ಲಿ ಅಲರ್ಜಿ, ಸೋಂಕು, ದದ್ದುಗಳಂತ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನೊಂದಷ್ಟು ಜನರಿಗೆ ತಾವು ಮುಟ್ಟಾದಾಗ ಧರಿಸಿದ ಪ್ಯಾಡ್‌, ಟ್ಯಾಂಪೂನ್‌ಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಅರಿವೇ ಇಲ್ಲ. ಹೇಗೆಂದರೆ ಹಾಗೆ ಬಿಸಾಡುತ್ತಾರೆ. ಶೌಚಗೃಹಗಳಿಗೆ ಹಾಕುತ್ತಾರೆ. ಇದೂ ಕೂಡ ತಪ್ಪಾದ ಕ್ರಮ. ಪ್ಯಾಡ್‌ಗಳೆಲ್ಲ ಪರಿಸರಕ್ಕೆ ಹಾನಿ ಉಂಟು ಮಾಡುತ್ತವೆ ಎಂದಿದ್ದಾರೆ.

ಋತುಚಕ್ರದ ದಿನಗಳಲ್ಲಿ ಹೀಗಿರಲಿ ದಿನಚರಿ
ಮಹಿಳೆಯರು ತಮ್ಮ ಪೀರಿಯಡ್ಸ್‌ ದಿನಗಳಲ್ಲಿ ಹೇಗಿರಬೇಕು? ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂಬುದಕ್ಕೆ ಡಾ. ಮನೀಶಾ ಸಿಂಗ್‌ ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವು ಹೀಗಿವೆ..

  1. ಪ್ಯಾಡ್‌, ನ್ಯಾಪ್‌ಕಿನ್‌ ಅಥವಾ ಟ್ಯಾಂಪೋನ್‌ಗಳು ಆಗಾಗ ಬದಲಿಸುತ್ತಿರಿ
    ಇದು ಬಹಳ ಮುಖ್ಯವಾದ ವಿಚಾರ. ಪ್ರತಿ ಮಹಿಳೆಯರ ರಕ್ತಸ್ರಾವದ ಪ್ರಮಾಣ, ಅವಧಿಗಳೆಲ್ಲ ಬೇರೆಯದೇ ಆಗಿರುತ್ತವೆ. ಸಾಮಾನ್ಯವಾಗಿ ಮುಟ್ಟಾದ ಎರಡನೇ ದಿನ ಬ್ಲೀಡಿಂಗ್‌ ಜಾಸ್ತಿಯಾಗಿಯೇ ಇರುತ್ತದೆ. ಹಾಗಾಗಿ ಮೊದಲು ಮಹಿಳೆಯರು ಪ್ಯಾಡ್‌ಗಳ ಆಯ್ಕೆಯನ್ನು ಸೂಕ್ತವಾಗಿ ಮಾಡಿಕೊಳ್ಳಬೇಕು. ಈಗಂತೂ ಮಾರುಕಟ್ಟೆಯಲ್ಲಿ ತುಂಬ ವಿಧದ ಸ್ಯಾನಿಟರಿ ಪ್ಯಾಡ್‌ಗಳು ಸಿಗುತ್ತವೆ. ಅದರ ಹೊರತಾಗಿ ಟ್ಯಾಂಪೋನ್‌ಗಳ, ಕಪ್‌ಗಳ ಬಳಕೆಯೂ ಹೆಚ್ಚುತ್ತಿದೆ. ಮೊದಲನೇದಾಗಿ ಯಾವುದು ಕಂಫರ್ಟ್‌ ಆಗುತ್ತದೆಯೋ ಅದನ್ನು ನಾವು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಪ್ಯಾಡ್‌, ಟ್ಯಾಂಪೋನ್‌ಗಳನ್ನೆಲ್ಲ ಪ್ರತಿ 4-6 ತಾಸುಗಳಿಗೆ ಒಮ್ಮೆ ಬದಲಿಸಬೇಕು. ಇಲ್ಲದೆ ಹೋದರೆ ಜನನಾಂಗದಲ್ಲಿ ಅಲರ್ಜಿಯಾಗಬಹುದು. ಮೂತ್ರನಾಳ ಸೋಂಕಿಗೂ ಕಾರಣವಾಗಬಹುದು.
  2. ಜನನಾಂಗವನ್ನು ಸ್ವಚ್ಛಗೊಳಿಸಿಕೊಳ್ಳುತ್ತಿರಿ
    ಮುಟ್ಟಾದಾಗ ಮಹಿಳೆಯರು ತಮ್ಮ ಜನನಾಂಗ, ಯೋನಿಯ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನಕೊಡಬೇಕು. ಮುಟ್ಟಾದಾಗ ಹೊರಬರುವ ರಕ್ತ ಕೊಳಕು ಅಲ್ಲದೆ ಇದ್ದರೂ, ಅದರಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಧರಿಸುವ ಪ್ಯಾಡ್‌ ಆ ರಕ್ತವನ್ನು ಹಿಡಿದಿಟ್ಟರೂ, ಅದು ಜನನಾಂಗಕ್ಕೇ ತಾಗಿಕೊಂಡೇ ಇರುತ್ತದೆ. ಹೀಗಾಗಿ ಪ್ರತಿಸಲ ನ್ಯಾಪ್‌ಕಿನ್‌ ಬದಲಾಯಿಸಿದಾಗಲೂ ಸೂಕ್ಷ್ಮಭಾಗವನ್ನು ಚೆನ್ನಾಗಿ ತೊಳೆದು, ಸ್ವಚ್ಛ ಮಾಡಿಕೊಳ್ಳಬೇಕು. ಕಾಟನ್‌ ಬಟ್ಟೆಯಲ್ಲಿ ಒರೆಸಿ, ನಂತರ ಮತ್ತೊಂದು ಪ್ಯಾಡ್‌ ಧರಿಸಬೇಕು.
  3. ಸೋಪ್‌ ಅಥವಾ ಇನ್ಯಾವುದೇ ನೈರ್ಮಲ್ಯ ಉತ್ಪನ್ನಗಳನ್ನು ಬಳಸಬೇಡಿ
    ಪ್ರತಿನಿತ್ಯ ಜನನಾಂಗ ಸ್ವಚ್ಛವಾಗಿಸಿಕೊಳ್ಳಲು ನೈರ್ಮಲ್ಯ ವಸ್ತುಗಳನ್ನು ಬಳಸಬಹುದು. ಆದರೆ ಹೆಚ್ಚಿಗೆ ರಾಸಾಯನಿಕ ಇರುವ ಸೋಪ್‌, ದ್ರವ್ಯಗಳನ್ನು ಯಾವಾಗಲೂ ಬಳಸುವಂತಿಲ್ಲ. ಅದರಲ್ಲೂ ಮುಟ್ಟಿನ ದಿನಗಳಲ್ಲಿ ಆ ಭಾಗಗಳನ್ನು ಸ್ವಚ್ಛಗೊಳಿಸಿಕೊಳ್ಳಲು ಸಾಬೂನು ಮತ್ತಿತರ ಪದಾರ್ಥಗಳನ್ನು ಬಳಸಿಕೊಳ್ಳುವುದರಿಂದ ಸಮಸ್ಯೆಯೇ ಹೆಚ್ಚು. ಮುಟ್ಟಿನ ದಿನಗಳಲ್ಲಿ ಯೋನಿ ಭಾಗಕ್ಕೆ ತಾನೇ ತನ್ನನ್ನು ಸ್ವಚ್ಛಗೊಳಿಸುವ ವಿಶೇಷ ಸಹಜ ಗುಣವಿದೆ. ಹೀಗಿದ್ದಾಗ ಸೋಪ್‌ ಅಥವಾ ಇನ್ಯಾವುದೇ ಕೃತಕ ಪದಾರ್ಥವನ್ನು ಹಾಕಿದಾಗ ಸಹಜತೆ ಮತ್ತು ಕೃತಕತೆ ಒಂದಕ್ಕೊಂದು ಸಂಘರ್ಷವಾಗಿ ಕೆಟ್ಟ ಬ್ಯಾಕ್ಟೀರಿಯಾ ಬೆಳೆದು, ಸೋಂಕು ಉಂಟಾಗಬಹುದು.
  4. ಪ್ಯಾಡ್‌ ವಿಲೇವಾರಿ ಸರಿಯಾಗಿ ಮಾಡಿ
    ಮುಟ್ಟಿನ ಅವಧಿಯಲ್ಲಿ ಬಳಸುವ ಪ್ಯಾಡ್‌, ಟ್ಯಾಂಪೋನ್‌ಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡದೆ ಇದ್ದರೆ, ಉಳಿದವರ ಆರೋಗ್ಯಕ್ಕೂ ತೊಂದರೆಯಾಗುತ್ತದೆ. ಬಳಸಿದ ಪ್ಯಾಡ್‌/ಟ್ಯಾಂಪೋನ್‌ಗಳನ್ನು ಒಂದು ಪೇಪರ್‌ನಲ್ಲಿ ಸರಿಯಾಗಿ ಸುತ್ತಿ ಮಣ್ಣಿನಲ್ಲಿ ಹುಗಿಯಬಹುದು. ಆದರೆ ಕೆಲವು ಮಾದರಿಯ ಪ್ಯಾಡ್‌ಗಳು ಮಣ್ಣಿನಲ್ಲಿ ಕರಗುವುದಿಲ್ಲ. ಪರಿಸರಕ್ಕೆ ಹಾನಿಯೇ ಆಗಿವೆ. ಆದರೆ ಅವುಗಳನ್ನು ಕಂಡಕಂಡಲ್ಲಿ ಎಸೆಯುವುದಕ್ಕಿಂತ ಹುಗಿಯುವುದು ಉತ್ತಮ. ಆದರೆ ಹೀಗೆ ಪ್ಯಾಡ್‌ಗಳನ್ನು ವಿಲೇವಾರಿ ಮಾಡಿದ ಮೇಲೆ ಕೈ ತೊಳೆಯುವುದನ್ನು ಮರೆಯಬೇಡಿ.
  5. ಕಪ್‌ಗಳನ್ನು ಬಳಸಿ
    ಮುಟ್ಟಿನ ಕಪ್‌ಗಳು ಈಗೀಗ ಪ್ರಚಲಿತವಾಗುತ್ತಿವೆ. ಆದರೆ ಇದು ತುಂಬ ಉತ್ತಮವಾದ ಮುಟ್ಟು ನೈರ್ಮಲ್ಯ ಉತ್ಪನ್ನ ಎನ್ನುತ್ತಾರೆ ತಜ್ಞರು ಮತ್ತು ಈಗಾಗಲೇ ಬಳಕೆ ಮಾಡುತ್ತಿರುವವರು. ನಿಮ್ಮ ಯೋನಿಯ ಅಳತೆಗೆ ಅನುಗುಣವಾದ ಕಪ್‌ಗಳು ಮಾರ್ಕೆಟ್‌ನಲ್ಲಿ ಸಿಗುತ್ತವೆ. ಒಮ್ಮೆ ನಿಮಗೆ ಪರಿಚಯ ಇರುವ ಸ್ತ್ರೀರೋಗ ತಜ್ಞೆಯ ಬಳಿ ಚರ್ಚಿಸಿ, ನಿಮಗೆ ಹೊಂದುವ ಕಪ್‌ ಬಳಸಲು ಪ್ರಯತ್ನಿಸಿ. ಇದು ವೈಯಕ್ತಿಕ ಸ್ವಚ್ಛತೆ ಮತ್ತು ವಿಲೇವಾರಿ ದೃಷ್ಟಿಯಿಂದಲೂ ಸುಲಭ ಸಾಧನ.

ಇದನ್ನೂ ಓದಿ: ವಿಟಮಿನ್‌ ಡಿ ಕೊರತೆ ನೀಗಿಸಲು ಹಾಲು, ನೀರು ಪರಿಣಾಮಕಾರಿ; ಅಧ್ಯಯನ ವರದಿ

Exit mobile version