Site icon Vistara News

Mother’s Day: ಆಕೆಗಾಗಿ ಕೊಂಚ ಸಮಯ ನೀಡೋಣ; ತಾಯಂದಿರ ದಿನ ಅರ್ಥಪೂರ್ಣವಾಗಿ ಆಚರಿಸೋಣ

Mother's Day

ತಾಳ್ಮೆ, ಸಹನೆ, ಶಾಂತಿ, ಪರಸ್ಪರ ಹೊಂದಾಣಿಕೆ ಇವನ್ನೆಲ್ಲ ಹೆಣ್ಣು (girl) ಮಕ್ಕಳಿಗೆ (child) ಯಾರೂ ಕಲಿಸಬೇಕಾಗಿಲ್ಲ. ಅದು ಅವರಿಗೆ ಹುಟ್ಟಿನಿಂದಲೇ ಬಂದಿರುತ್ತದೆ. ಎಂತಹ ಕಠಿಣ ಪರಿಸ್ಥಿತಿಯಾಗಿರಲಿ ತಾಯಿ (Mother’s Day) ಅದನ್ನು ಎದುರಿಸಲು ಕ್ಷಣ ಮಾತ್ರದಲ್ಲಿ ಸಜ್ಜಾಗುತ್ತಾಳೆ. ತಮ್ಮ ಮಕ್ಕಳ ವಿಚಾರಕ್ಕೆ ಬಂದರೆ ಆಕೆ ಯಾವುದೇ ತ್ಯಾಗಕ್ಕೂ ಸಜ್ಜಾಗುತ್ತಾಳೆ, ತನ್ನ ಪ್ರಾಣವನ್ನು ಒತ್ತೆ ಇಟ್ಟಾದರೂ ಸರಿ ಮಕ್ಕಳನ್ನು ಎಲ್ಲ ರೀತಿಯ ಸಂಕಷ್ಟದಿಂದ ಪಾರು ಮಾಡುತ್ತಾಳೆ.

ಎಲ್ಲರಿಗೂ ತಮ್ಮ ತಾಯಿಯ ಬಗ್ಗೆ ಹೇಳಬೇಕಾದ ಸಾವಿರಾರು ವಿಷಯಗಳಿರುತ್ತವೆ. ಇದಕ್ಕೆ ತಾಯಂದಿರ ದಿನಕ್ಕಿಂತ ಉತ್ತಮ ದಿನ ಬೇರೆ ಯಾವುದಿದೆ. ಹೆಣ್ಣು ತಾಯಿಯಾಗಿ, ಅಕ್ಕನಾಗಿ, ಅಜ್ಜಿಯಾಗಿ, ಮಗಳಾಗಿ, ಸ್ನೇಹಿತೆಯಾಗಿ ತನ್ನ ಕರ್ತವ್ಯವನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಹೀಗಾಗಿಯೇ ತಾಯಂದಿರ ದಿನದ ಈ ಶುಭ ಸಂದರ್ಭದಲ್ಲಿ ಆಕೆಗೊಂದು ಶುಭ ಸಂದೇಶ ಕಳುಹಿಸಲು ಮರೆಯದಿರಿ.

ಸಿಹಿ ಶುಭಾಶಯಗಳೊಂದಿಗೆ ಆಕೆಯನ್ನು ಗೌರವಿಸುವ ಜೊತೆಗೆ ಸುಂದರವಾದ ಹೂಗೊಂಚಲು, ಅರ್ಥಪೂರ್ಣವಾದ ಉಡುಗೊರೆ ಅಥವಾ ಅವಳೊಂದಿಗೆ ಸಮಯ ಕಳೆಯುವ ಮೂಲಕ ಮೆಚ್ಚುಗೆಯನ್ನು ತೋರಿಸಿ. ಇದು ಯಾವಾಗಲೂ ಆಕೆಯನ್ನು ಸಂತೋಷದಲ್ಲಿ ಇರುವಂತೆ ಮಾಡುತ್ತದೆ ಮತ್ತು ಸದಾ ಆಕೆಯ ನೆನಪಿನಲ್ಲಿ ಇರುವಂತೆ ಮಾಡುತ್ತದೆ.

ತಾಯಂದಿರ ದಿನದ ವಿಶೇಷವಾಗಿ ತಾಯಿಗೆ ವಿಶೇಷ ಅಡುಗೆ ಮಾಡಿ ಬಡಿಸಿ, ಇಲ್ಲವಾದರೆ ಅವರ ನೆಚ್ಚಿನ ರೆಸ್ಟೋರೆಂಟ್ ಗೆ ಹೋಗಿ ಊಟ ಮಾಡಿಸಿ. ಇದರಿಂದ ಸಾಕಷ್ಟು ಸಮಯವನ್ನು ಆಕೆಗೆ ನೀವು ಕೊಟ್ಟಂತಾಗುತ್ತದೆ.


ತಾಯಂದಿರ ದಿನ ಯಾವಾಗ?

ತಾಯಂದಿರ ದಿನವನ್ನು ಪ್ರತಿ ವರ್ಷ ಮೇ ತಿಂಗಳ ಎರಡನೇ ಭಾನುವಾರ ಆಚರಿಸಲಾಗುತ್ತದೆ. ರಜಾ ದಿನದಲ್ಲಿ ಇದು ಬರುವುದರಿಂದ ಈ ದಿನವನ್ನು ಹೆಚ್ಚು ವಿಶೇಷವಾಗಿ ಆಚರಿಸಬಹುದಾಗಿದೆ.

ತಾಯಿಯಂದಿರ ದಿನವು ಈ ಬಾರಿ ಮೇ 12ರಂದು ಭಾನುವಾರ ಆಚರಿಸಲಾಗುತ್ತಿದೆ. ಪ್ರಪಂಚದಾದ್ಯಂತ ಈ ದಿನವನ್ನು ಬೇರೆಬೇರೆ ದಿನಗಳಂದು ಆಚರಿಸಲಾಗುತ್ತಿದೆ.

ಆಸ್ಟ್ರೇಲಿಯಾ, ಕೆನಡಾ, ಡೆನ್ಮಾರ್ಕ್, ಇಟಲಿ, ಫಿನ್‌ಲ್ಯಾಂಡ್, ಸ್ವಿಟ್ಜರ್ಲೆಂಡ್ ಮತ್ತು ಟರ್ಕಿ ಯಲ್ಲಿ ಈ ಬಾರಿ ಮೇ 12ರಂದು ಅಮ್ಮಂದಿರನ್ನು ಗೌರವಿಸಲಾಗುತ್ತಿದೆ. ಯುಕೆಯಲ್ಲಿ ಮಾರ್ಚ್‌ನಲ್ಲಿ ತಾಯಂದಿರ ದಿನವನ್ನು ಆಚರಿಸಲಾಗುತ್ತದೆ. ಮೆಕ್ಸಿಕೋ ಈ ವರ್ಷ ಮೇ 10 ರಂದು ತಾಯಂದಿರ ದಿನವನ್ನು ಆಚರಿಸಲಾಗಿದೆ. ಥೈಲ್ಯಾಂಡ್ ಆಗಸ್ಟ್ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಯಾಕೆಂದರೆ ಈ ದಿನ ಇಲ್ಲಿ ರಾಣಿ ಸಿರಿಕಿಟ್ ಅವರ ಜನ್ಮದಿನವಾಗಿದೆ.

ಯಾಕೆ ಆಚರಣೆ ?

ತಾಯಂದಿರ ದಿನದ ಆಚರಣೆಯು 1800 ರ ದಶಕದ ಅಂತ್ಯದಲ್ಲಿ ಪ್ರಾರಂಭಿಸಲಾಯಿತು. ಹಲವಾರು ವಿಭಿನ್ನ ಘಟನೆಗಳ ಸಂಯೋಜನೆಯಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತೆ ಮತ್ತು ಸಮುದಾಯ ಸಂಘಟಕಿ ಅನ್ನಾ ಮಾರಿಯಾ ರೀವ್ಸ್ ಜಾರ್ವಿಸ್ ಅವರು ಮೊದಲ ಬಾರಿಗೆ ತಾಯಂದಿರ ದಿನದ ಪ್ರಸ್ತಾಪವನ್ನು ಮುಂದಿಟ್ಟರು.

ತಾಯಂದಿರು ತಮ್ಮ ಮಕ್ಕಳನ್ನು ನೋಡಿಕೊಳ್ಳಲು ಸಹಾಯ ಮಾಡುವ ಮಹಿಳಾ ಕ್ಲಬ್‌ಗಳ ಸ್ಥಾಪಕರಾದ ಜಾರ್ವಿಸ್ ಅವರು 1868 ರಲ್ಲಿ ತಾಯಂದಿರ ಸ್ನೇಹ ದಿನವನ್ನು ಆಯೋಜಿಸಿದರು, ಇದು ಅಂತರ್ಯುದ್ಧದ ಅನಂತರ ಒಕ್ಕೂಟ ಮತ್ತು ಒಕ್ಕೂಟದ ಸೈನಿಕರ ತಾಯಂದಿರನ್ನು ಸಾಮರಸ್ಯದಿಂದ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿತ್ತು.

ಬಳಿಕ ಎರಡು ವರ್ಷಗಳ ಅನಂತರ 1870 ರಲ್ಲಿ ಜೂಲಿಯಾ ವಾರ್ಡ್ ಹೋವ್ ಅವರು ವಿಶ್ವ ಶಾಂತಿಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ತಾಯಿಯ ದಿನದ ಘೋಷಣೆಯನ್ನು ಮಾಡಿ ಜೂನ್‌ನಲ್ಲಿ ತಾಯಿಯ ದಿನವನ್ನು ಆಚರಿಸಲು ಒತ್ತಾಯಿಸಿದರು. ಆ ಸಮಯದಲ್ಲಿಯೇ ತಾಯಂದಿರನ್ನು ಗೌರವಿಸಲು ಕೆಲವು ರೀತಿಯ ಕಲ್ಪನೆಯನ್ನು ಅವರು ಮಂಡಿಸಿದ್ದರು. ಆದರೆ ಅದು ಸುಮಾರು 35 ವರ್ಷಗಳವರೆಗೆ ಸಾಧ್ಯವಾಗಲಿಲ್ಲ.

1905 ರಲ್ಲಿ ಜಾರ್ವಿಸ್ ಅವರ ಮರಣದ ಅನಂತರ ಅವರ ಮಗಳು ಅನ್ನಾ ಪತ್ರ ಬರೆಯುವ ಅಭಿಯಾನವನ್ನು ಪ್ರಾರಂಭಿಸಿದರು. ತನ್ನ ತಾಯಿಯ ಕೆಲಸವನ್ನು ಮಾತ್ರವಲ್ಲದೆ ಎಲ್ಲಾ ತಾಯಂದಿರಿಗೆ ಮತ್ತು ಅವರ ಮಕ್ಕಳ ಪರವಾಗಿ ಅವರು ಮಾಡುವ ತ್ಯಾಗವನ್ನು ಗೌರವಿಸಲು ತಾಯಂದಿರ ದಿನಾಚರಣೆಗೆ ಕರೆ ನೀಡಿದರು.

ತಾಯಂದಿರ ದಣಿವರಿಯದ ಕೆಲಸವನ್ನು ಗೌರವಿಸುವ ಸಲುವಾಗಿ ಅಧ್ಯಕ್ಷ ವುಡ್ರೊ ವಿಲ್ಸನ್ ಅವರು 1914 ರಲ್ಲಿ ಘೋಷಣೆಗೆ ಸಹಿ ಹಾಕಿ ಅಧಿಕೃತವಾಗಿ ಮೇ ತಿಂಗಳ ಎರಡನೇ ಭಾನುವಾರವನ್ನು ತಾಯಂದಿರ ದಿನವೆಂದು ಘೋಷಿಸಿದರು.

ಇದನ್ನೂ ಓದಿ: Viral News: ಇಂತಹ ಅಮ್ಮಂದಿರೂ ಇರ್ತಾರಾ? ಈ ಶಾಕಿಂಗ್‌ ವಿಡಿಯೊ ನೋಡಿದರೆ ನಿಮ್ಮ ರಕ್ತ ಕುದಿಯುವುದು ಖಚಿತ

ಪ್ರಾರಂಭದಲ್ಲಿ ತಾಯಂದಿರ ದಿನಚರಣೆಯ ಉದ್ದೇಶವೇ ಬೇರೆಯಾಗಿತ್ತು. ಆದರೆ ಇವತ್ತು ವ್ಯಾಪಾರೀಕರಣವಾಗಿದೆ. ಹೀಗಾಗಿ ರಜಾ ದಿನದಂದೇ ಎಲ್ಲರೂ ತಮ್ಮ ತಾಯೊಂದಿಗೆ ಸ್ವಲ್ಪ ಸಮಯ ಕಳೆಯಲಿ ಎನ್ನುವ ಉದ್ದೇಶದಿಂದ ಎಲ್ಲರೂ ಮೇ ತಿಂಗಳ ಎರಡನೇ ಭಾನುವಾರ ಈ ದಿನಾಚರಣೆಗೆ ಇಷ್ಟಪಡುತ್ತಾರೆ. ಹೀಗಾಗಿ ಇಂದು ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತಿದೆ.

ನಿತ್ಯದ ಕೆಲಸದ ಜಂಜಾಟದಲ್ಲಿರುವ ಎಲ್ಲರಿಗೂ ಇವತ್ತು ತಾಯಂದಿರ ದಿನ ಆಚರಿಸುವುದು ಅನಿವಾರ್ಯವಾಗಿರುವುದರಿಂದ ಈ ದಿನ ಅಮೂಲ್ಯವಾದ ದಿನವಾಗಿ ಉಳಿದಿದೆ. ಹೀಗಾಗಿ ಈ ದಿನವನ್ನು ಅರ್ಥಪೂರ್ಣವಾಗಿ ಆಚರಿಸೋಣ. ಎಲ್ಲ ತಾಯಂದಿರಿಗೂ ಶುಭ ಹಾರೈಸೋಣ.

Exit mobile version