Site icon Vistara News

Namakwali: ʻನಮಕ್‌ವಾಲಿʼ ಮಹಿಳೆಯರ ವಿಶೇಷ ಸ್ವಾದದ ಉತ್ತರಾಖಂಡದ ಉಪ್ಪು ವಿದೇಶದಲ್ಲೂ ಜನಪ್ರಿಯ!

namakwali Women achievers

ತಾಯಿಗಿಂತ ಬಂಧುವಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಎಂಬ ಮಾತಿದೆ. ಅಂದರೆ ಉಪ್ಪಿಲ್ಲದೆ ಯಾವ ಊಟವೂ ರುಚಿಸದು. ಆದರೆ ಎಲ್ಲ ಉಪ್ಪೂ ಒಂದೇ ಅಲ್ಲ. ಉಪ್ಪಿನಲ್ಲೂ ಬೇರೆ ಬೇರೆ ಬಗೆಗಳಿವೆ. ಸಮುದ್ರದ ನೀರಿನಿಂದ ಪಡೆವ ಬೆಳ್ಳನೆಯ ಉಪ್ಪು ಒಂದಾದರೆ, ಹಿಮಾಲಯದ ನೆಲದಲ್ಲಿ ಸಿಗುವ ಪಿಂಕ್‌ ಬಣ್ಣದ ಕಲ್ಲುಪ್ಪು ಇನ್ನೊಂದೆಡೆ. ಇವಿಷ್ಟಲ್ಲದೆ, ಇರಾನಿನ ನೀಲಿ ಉಪ್ಪು, ಫ್ರಾನ್ಸ್‌ನ ಕಪ್ಪು ಲಾವಾ ಉಪ್ಪು ಸೇರಿದಂತೆ ಪ್ರಪಂಚದಲ್ಲಿ ಹಲವು ಬಗೆಯ ಉಪ್ಪುಗಳಿವೆ. ಆದರೆ, ಇಲ್ಲಿ ಇಂದು ಹೇಳುತ್ತಿರುವ ಉಪ್ಪು ಮಾತ್ರ ವಿಶೇಷವಾದದ್ದು. ತಲೆತಲಾಂತರಗಳಿಂದ ಹಿಮಾಲಯದ ತಪ್ಪಲಲ್ಲಿ ಜನರು ತಮಗಾಗಿ ಮಾಡುವ ಬಣ್ಣಬಣ್ಣದ ವಿವಿಧ ಘಮದ ಉಪ್ಪುಗಳಿವು.

ಹೌದು. ಇಲ್ಲಿ ಒಂದಿಷ್ಟು ತಾಯಂದಿರೆಲ್ಲ ಸೇರಿ ತಮ್ಮ ತಲೆತಲಾಂತರದಿಂದ ಬಂದ ಉಪ್ಪಿನ ವಿವಿಧ ಬಗೆಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸ ಮಾಡುತ್ತಿರುವ ಜೊತೆಗೆ ಅದನ್ನೇ ಒಂದು ಉದ್ದಿಮೆಯಾಗಿ ಪರಿವರ್ತಿಸಿ ಹೆಸರು ಮಾಡುತ್ತಿದ್ದಾರೆ. ಉತ್ತರಾಖಂಡದ ಹಿಮಾಲಯದ ತಪ್ಪಲ ಮಂದಿಗೆ ಮಾತ್ರವೇ ಗೊತ್ತಿರುವ ತಲೆತಲಾಂತರಗಳಿಂದ ಬೆಳೆದು ಬಂದ ಪದ್ಧತಿಯಿಂದ ಉಪ್ಪನ್ನು ಮಾಡುತ್ತಿದ್ದಾರೆ. ಇದು ಬಣ್ಣಬಣ್ಣದ ಉಪ್ಪಾಗಿದ್ದು, ಇದು ಹಿಮಾಲಯದ ಉಪ್ಪಿಗೆ ವಿವಿಧ ಬಗೆಯ ಮೂಲಿಕೆಗಳನ್ನು ಸೇರಿಸಿ ಮಾಡುವ ಉಪ್ಪಾಗಿದೆ.

ʻಪಿಸ್ಯು ಲೂನ್‌ʼ ಉಪ್ಪು ಎಂಬ ಹೆಸರಿನಲ್ಲಿ ಕಲರ್‌ಫುಲ್‌ ಹಾಗೂ ಬಗೆಬಗೆಯ ಘಮದ ಉಪ್ಪು ಉತ್ತರಾಖಂಡದ ಘಡ್‌ವಾಲ್‌ ಪ್ರಾಂತ್ಯದ ಪಹಾಡಿ ಉಪ್ಪನ್ನು ನಮಕ್‌ವಾಲಿ ಎಂಬ ಮಹಿಳೆಯರ ಗುಂಪು ತಯಾರಿಸುತ್ತಿದೆ. ವಿವಿಧ ಬಗೆಯ ಸ್ವಾದಗಳಲ್ಲಿ ಲಭ್ಯವಿರುವುದೇ ಈ ಉಪ್ಪಿನ ವಿಶೇಷ, ಕೊತ್ತಂಬರಿ, ಸಾಸಿವೆ, ಅರಿಶಿನ, ಪುದಿನ, ಶುಂಠಿ, ಬೆಳ್ಳುಳ್ಳಿ, ಮೆಣಸು ಹಾಗೂ ಇನ್ನೂ ಅನೇಕ ಬಗೆಯ ಸ್ವಾದಗಳಲ್ಲಿ ಈ ಉಪ್ಪು ದೊರೆಯುತ್ತದೆ. ನಂಬಿಕೆಗಳ ಪ್ರಕಾರ, ಇಂತಹ ಉಪ್ಪನ್ನು ಪರ್ವತ ಪ್ರದೇಶಗಳಲ್ಲಿ ವಾಸಿಸುವ ಮಂದಿ ಸೇವಿಸುವುದರಿಂದ ಹೆಚ್ಚು ನೀರು ಕುಡಿಯುವಂತೆ ಮಾಡುತ್ತದೆ. ಪರ್ವತ ಪ್ರದೇಶದಲ್ಲಿ ವಾಸಿಸುವ ಮಂದಿ ಕಡಿಮೆ ನೀರು ಕುಡಿವ ಅಭ್ಯಾಸ ಇಟ್ಟುಕೊಳ್ಳುವುದರಿಂದ ಅಂತಹ ಮಂದಿಯಲ್ಲಿ ನೀರಿನ ಸೇವನೆ ಹೆಚ್ಚು ಮಾಡುವ ಉಪಾಯವೂ ಇದು ಎಂಬ ವಾದವೂ ಇದೆ. ಇನ್ನೊಂದು ವಾದದ ಪ್ರಕಾರ, ಈ ಉಪ್ಪಿನಲ್ಲಿ ಸಾಮಾನ್ಯ ಉಪ್ಪಿಗಿಂತ ಹೆಚ್ಚು ಜೀರ್ಣಕಾರಿ ಗುಣಗಳಿದ್ದು, ಇವು ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತವೆ.

ಇದನ್ನೂ ಓದಿ: Women achievers | ನೈಕಾ, ಝಿವಾಮೆ ಆನ್‌ಲೈನ್‌ ಉದ್ದಿಮೆಯ ಹಿಂದಿನ ಇಬ್ಬರು ಮಹಿಳೆಯರ ಸ್ಫೂರ್ತಿ ಕತೆ!

ಪರ್ವತ ಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ತೆಹ್ರಿ ಹಾಗೂ ಗಡ್‌ವಾಲ್‌ ಪ್ರಾಂತ್ಯದ ಹಿಮಾಲಯದ ತಪ್ಪಲಲ್ಲಿ ವಾಸಿಸುವ ಮಂದಿ ಇಂತಹ ಉಪ್ಪನ್ನು ತಲೆತಲಾಂತರದಿಂದ ತಮ್ಮ ಮನೆಗಳಲ್ಲಿ ಬಳಸುತ್ತಾ ಬಂದಿದ್ದು, ಈಗ ಇವುಗಳು, ಕೇವಲ ಪಹಾಡಿ ಮಂದಿಯಷ್ಟೇ ಅಲ್ಲದೆ ದೆಹಲಿ, ಬೆಂಗಳೂರು, ಮುಂಬೈ, ಪುಣೆ, ಕೋಲ್ಕತ್ತಾ ಸೇರಿದಂತೆ ಹಲವು ನಗರಗಳ ಮಂದಿಯ ಮನೆಗಳನ್ನು ತಲುಪುತ್ತಿದೆ. ವಿದೇಶಕ್ಕೂ ರವಾನೆಯಾಗುತ್ತದೆ. ಈ ಉಪ್ಪು ಯಾವುದೇ ಸಪ್ಪೆಯಾಗಿರುವ ದಾಲ್‌, ರಸಂ, ರೈತಾ ಸೇರಿದಂತೆ ಅಡುಗೆಗೆ ತಾಜಾ ಸ್ವಾದವನ್ನು ಸೇರಿಸುವಲ್ಲಿ ಯಶಸ್ವಿಯಾಗುತ್ತದೆ. ಬೇಸಿಗೆಯಲ್ಲಿ, ಲಸ್ಸಿ, ಮಜ್ಜಿಗೆ, ಹಣ್ಣಿನ ನ್ಯೂಸ್‌ ಮತ್ತಿತರ ಪಾನೀಯಗಳಿಗೂ ಇವುಗಳನ್ನು ಸೇರಿಸಿ ಕುಡಿಯುವುದರಿಂದ ತಾಜಾ ಅನುಭೂತಿ ಪಡೆಯಬಹುದಂತೆ.

ಕುಮಾಂವ್‌, ತೆಹ್ರಿ ಹಾಗೂ ಗಡ್‌ವಾಲ್ ಪ್ರಾಂತ್ಯದ ಮಹಿಳೆಯರು ತಮ್ಮ ಮನೆಗಳಲ್ಲಿ ಮಾಡಿ ಇರುವ ಉಪು ಇಂದು ಹೀಗೆ ಬೆಳಕಿಗೆ ಬರುವಲ್ಲಿ ಅದರ ಹಿಂದಿನ ಪ್ರೇರಕ ಶಕ್ತಿಯಾಗಿದ್ದು ಡೆಹ್ರಾಡೂನ್‌ ಮೂಲದ ಎನ್‌ಜಿಒ ಮಹಿಳಾ ನವ ಜಾಗರಣ ಸಮಿತಿ. ಈ ಸ್ವಯಂಸೇವಾ ಸಂಸ್ಥೆಯ ಮುಖ್ಯಸ್ಥೆ ಶಶಿ ರತೋಡಿ ಅವರು ಒಂದಿಷ್ಟು ಮಹಿಳೆಯರನ್ನು ಸೇರಿಸಿ ಉಪ್ಪು ತಯಾರಿಸಿ ಆನ್‌ಲೈನ್‌ ಮೂಲಕ ದೇಶವಿದೇಶದ ಮೂಲೆಮೂಲಗಳಲ್ಲಿ ಆಸಕ್ತರ ಮನೆಮನೆ ಸೇರುವಂತೆ ಮಾಡುತ್ತಿದೆ. ಈ ಮಹಿಳೆಯರಿಗೆ ಪೂರ್ಣ ಪ್ರಮಾಣದ ಉದ್ಯೋಗ ನೀಡಿರುವುದೂ ಅಲ್ಲದೆ, ಪರ್ವತ ಪ್ರದೇಶದ ಜನರ ಮನೆಗಳಲ್ಲಿ ತಲೆತಲಾಂತರದಿಂದ ನಡೆದು ಬಂದ ಇಂತಹ ಅಪರೂಪಗಳನ್ನು ಇನ್ನೂ ಮುಂದಿನ ಪೀಳಿಗೆಗೆ ಉಳಿಯುವಂತೆ ಮಾಡುತ್ತಿದೆ. ನಮಕ್‌ವಾಲಿ ಎಂಬ ಇನ್‌ಸ್ಟಾಗ್ರಾಂ ಖಾತೆಯ ಮೂಲಕವೂ ಈ ಉಪ್ಪನ್ನು ಆರ್ಡರ್‌ ಮಾಡಿಕೊಂಡು ರುಚಿ ನೋಡಬಹುದು. ಸಣ್ಣ ಉದ್ಯಮವಾದರೂ ಮಹಿಳೆಯರೇ, ಸೇರಿಕೊಂಡು ತಮ್ಮ ಹಳೆಯ ಆಹಾರದ ವಿಧಾನವನ್ನು ಹೀಗೆ ಪ್ರಚಾರಕ್ಕೆ ತರುತ್ತಿರುವುದು ಈ ಗೃಹೋದ್ಯಮದ ವಿಶೇಷ.

ಇದನ್ನೂ ಓದಿ: Weight Lifting Exercises For Women: ಭಾರ ಎತ್ತುವ ವ್ಯಾಯಾಮ ಮಹಿಳೆಯರಿಗೂ ಬೇಕು! ಯಾಕೆ ಗೊತ್ತೇ?

Exit mobile version