ನಿಮಗೆ ನಿಮ್ಮ ಮಕ್ಕಳ ಮೇಲೆ ಪ್ರೀತಿ ಇದೆಯೇ? ಅರೆ, ಇದೆಂಥಾ ಪ್ರಶ್ನೆ, ನಮ್ಮ ಮಕ್ಕಳ ಮೇಲೆ ಪ್ರೀತಿ ಇಲ್ಲದೆ ಇನ್ಯಾರ ಮೇಲೆ ಇದ್ದೀತು ಎಂದು ಹೇಳಬೇಡಿ. ನಿಮಗೆ ನಿಜವಾಗಿ ನಿಮ್ಮ ಮಕ್ಕಳ ಮೇಲೆ ಪ್ರೀತಿ ಇದ್ದರೆ, ಮಕ್ಕಳು ಸತ್ಪ್ರಜೆಗಳಾಗಿ ಒಳ್ಳೆಯ ಬದುಕು ಕಾಣಬೇಕು ಎಂಬ ಆಸೆಯಿದ್ದರೆ, ಖಂಡಿತವಾಗಿಯೂ ನೀವು ನಿಮ್ಮ ಮಕ್ಕಳ ವಿಚಾರದಲ್ಲಿ ಈ ಕೆಳಗಿನ 12 ತಪ್ಪುಗಳನ್ನು ನೀವು ಮಾಡಲಾರಿರಿ. ಮಾಡಬಾರದು ಕೂಡಾ. ಅವು ಯಾವುವು ಎಂದು ನೋಡೋಣ.
೧. ಊಟದ ವಿಷಯದಲ್ಲಿ ಮಕ್ಕಳು ಹಠ ಮಾಡುತ್ತಿದ್ದರೆ ಅದನ್ನು ಪ್ರೋತ್ಸಾಹಿಸಬೇಡಿ. ಮಕ್ಕಳಿಗೆ ಇಷ್ಟವಿಲ್ಲ ಎಂಬ ಕಾರಣಕ್ಕೆ ಮಕ್ಕಳಿಗೆ ಪ್ರತ್ಯೇಕವಾದ ಅವರಿಷ್ಟದ ತಿಂಡಿಯನ್ನೇ ಮಾಡಿ ಬಡಿಸುವುದನ್ನು ಮಾಡಬೇಡಿ.
೨. ತುಂಡಾದ, ಮುರಿದ ಆಟದ ಸಾಮಾನಿನ ಬದಲಿಗೆ ಹೊಸತೊಂದನ್ನು ಖರೀದಿಸಿ ತರಬೇಡಿ. ಮಕ್ಕಳು ಅವರ ವಸ್ತುಗಳನ್ನು ಜಾಗ್ರತೆಯಾಗಿ ಇಟ್ಟುಕೊಳ್ಳುವುದನ್ನು ಕ್ರಮೇಣ ಕಲಿಯುತ್ತಾರೆ. ಒಡೆದ, ಮುರಿದು ಹೋದ ಆಟಿಕೆಯನ್ನು ನೋಡಿ ಇನ್ನು ನಾನು ನನ್ನ ವಸ್ತುಗಳನ್ನು ಹಾಳು ಮಾಡಬಾರದು ಎಂಬ ಅರಿವು ಅವರಿಗಾಗಬೇಕು. ಪ್ರತಿ ಬಾರಿಯೂ ಮುರಿದಾಗ ಹೊಸ ಆಟಿಕೆ ಆ ಜಾಗಕ್ಕೆ ಬಂದರೆ, ಖಂಡಿತವಾಗಿಯೂ ಮಕ್ಕಳು ವಸ್ತುಗಳ ಮೌಲ್ಯವನ್ನು ತಿಳಿದುಕೊಳ್ಳುವುದಿಲ್ಲ. ಸುಲಭವಾಗಿ ಆಟಿಕೆ ಸಿಗುತ್ತದೆ, ಮುರಿದರೇನು ತೊಂದರೆಯಿಲ್ಲ ಎಂಬ ಭಾವನೆ ಅವರಲ್ಲಿ ಮೊಳೆಯುತ್ತದೆ.
೩. ಮಕ್ಕಳ ಹೋಂವರ್ಕನ್ನು ನೀವು ಮಾಡಬೇಡಿ. ಕೊನೆಯ ಕ್ಷಣದಲ್ಲಿ ಮಕ್ಕಳು ಹೋಂವರ್ಕು ಮುಗಿಸಿಲ್ಲ, ನಾಳೆ ಸ್ಕೂಲಿನಲ್ಲಿ ಮಗು ಟೀಚರು ಹಾಗೂ ಮಕ್ಕಳ ಎದುರು ಅವಮಾನ ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಅವರ ಹೋಂವರ್ಕನ್ನು ನೀವು ಕೂತು ಮಾಡಬೇಡಿ. ಮಕ್ಕಳು ಅವರ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಿ ಮುಗಿಸುವುದನ್ನು ಕಲಿಯಬೇಕು. ಕಷ್ಟಪಟ್ಟರೆ ಫಲ ಸಿಗುತ್ತದೆ ಎಂಬ ಪಾಠ ಅವರಿಗೆ ಒಂದೊಂದೇ ಹಂತದಲ್ಲಿ ಸಿಗುತ್ತಾ ಹೋಗಬೇಕು. ಇವೆಲ್ಲ ಬೆಳೆಯುತ್ತಾ ಹೋಗುತ್ತಾ, ತಪ್ಪು ಮಾಡಿ ಎಡವಿ ಮಕ್ಕಳು ಕಲಿಯುತ್ತಾರೆ. ಕಲಿಯಬೇಕು ಕೂಡಾ.
೪. ಟಿವಿ, ಗ್ಯಾಜೆಟ್ ಒಳ್ಳೆಯದಲ್ಲ ಎಂದುಕೊಂಡು ಅವರನ್ನು ಅದರಿಂದ ಪೂರ್ಣ ಪ್ರಮಾಣದಲ್ಲಿ ವಿಮುಖರಾಗುವಂತೆ ಮಾಡಬೇಡಿ. ಮಕ್ಕಳು ಟಿವಿ ನೋಡಲಿ. ಆದರೆ, ಅವರೇನು ನೋಡುತ್ತಿದ್ದಾರೆ ಹಾಗೂ ಎಷ್ಟು ಹೊತ್ತು ನೋಡುತ್ತಾರೆ ಎಂಬುದರ ಮೇಲಿ ನಿಮ್ಮ ಅಂಕೆಯಿರಲಿ. ಆದರೆ, ಮಕ್ಕಳಿಗೆ ಪ್ರತ್ಯೇಕ ಗ್ಯಾಜೆಟ್‌ಗಳನ್ನು ೧೮ ವರ್ಷದೊಳಗೆ ತೆಗೆದುಕೊಡಬೇಡಿ.
೫. ಮಕ್ಕಳ ಜಗಳಗಳನ್ನು ಅವರೇ ಆಡಲಿ. ನೀವು ಅವರ ಮಧ್ಯೆ ಬಾಯಿ ತೂರಿಸಬೇಡಿ. ಅವರಿಗಾದ ಅನ್ಯಾಯಕ್ಕೆ ಅವರು ಹೋರಾಡುವುದನ್ನು ಕಲಿಯಲಿ. ಆದರೆ ತೆರೆಯ ಹಿಂದಿನಿಂದ ನಿಮ್ಮ ಸಪೋರ್ಟ್ ಇರಲಿ.
೬. ಮಕ್ಕಳು ಅವರ ವಸ್ತುಗಳನ್ನು ಅವರೇ ಸರಿಯಾದ ಜಾಗದಲ್ಲಿಡುವುದನ್ನು ಕಲಿಯಲಿ. ಮೂರು ವರ್ಷ ದಾಟಿದರೆ ಮಕ್ಕಳು ಅವರ ವಸ್ತುಗಳನ್ನು ಸರಿಯಾದ ಜಾಗದಲ್ಲಿ ಇಟ್ಟುಕೊಳ್ಳುವುದನ್ನು ನಿಧಾನವಾಗಿ ಕಲಿಯುತ್ತಾರೆ. ಅವರಷ್ಟಕ್ಕೆ ಅವರು ಇದನ್ನು ಮಾಡಲು ಕಲಿಯಲಿ. ಪ್ರತಿಯೊಂದನ್ನು ಅವರಿಗೆ ನೀವು ಮಾಡಿಕೊಡಬೇಡಿ.
೭. ಮಕ್ಕಳಿಗೆ ಕೆಲವೊಮ್ಮೆ ಏನಾದರೂ ಖರೀದಿಸಿಕೊಂಡು ಬರಲು ದುಡ್ಡು ಕೊಡಿ. ಅವರೇ ಹೋಗಿ ಖರೀದಿಸಲಿ. ದುಡ್ಡಿನ ಮಹತ್ವವನ್ನು ಅವರು ಅರಿಯಲಿ. ಹಾಗಂತ ಅವರು ಕೇಳಿದಾಗಲೆಲ್ಲ ದುಡ್ಡುಕೊಡುವ ತಪ್ಪು ಮಾಡಬೇಡಿ.
೮. ಅವರ ಶಾಲೆಯ ವಸ್ತು ಮರೆತುಹೋಯಿತೆಂದು ಓಡಿ ಹೋಗಿ ಶಾಲೆಗೆ ಕೊಟ್ಟು ಬರಬೇಡಿ. ಇದು ಅಭ್ಯಾಸವಾಗುತ್ತದೆ. ಅವರವರ ವಸ್ತುಗಳನ್ನು ನಿತ್ಯವೂ ಬ್ಯಾಗಿಗೆ ತುಂಬಿಸುವ ಕೆಲಸ ಅವರೇ ಮಾಡಿಕೊಳ್ಳಲಿ.
ಇದನ್ನೂ ಓದಿ: Parenting Tips: ಪ್ರತಿ ಬ್ಯುಸಿ ತಾಯಿಯೂ ಮಕ್ಕಳಿಗೆ ಮಾಡಿಕೊಡಲೇಬೇಕಾದ ದಿಢೀರ್ ಪರಾಠಾಗಳಿವು!
೯. ಮಕ್ಕಳು ಅವರ ಗೆಳೆಯರೊಡನೆ ಶಾಲಾ ಪ್ರವಾಸಕ್ಕೆ ಹೋಗಲು ಬಿಡಿ. ಆದರೆ, ನಿಮ್ಮದೇ ವಾಹನ ಚಲಾಯಿಸಿಕೊಂಡು ಗೆಳೆಯರ ಜೊತೆಗೆ ತಿರುಗಾಡಲು ಬಿಡಬೇಡಿ. 18 ವರ್ಷವಾಗದ ಹೊರತು ಇವೆಲ್ಲ ಅಗತ್ಯವಿಲ್ಲ.
೧೦. ಮಕ್ಕಳ ಗೆಳೆಯರ ಬಳಿ ಇದೆ ಎಂದು ಅವರು ಕೇಳಿದ್ದನ್ನೆಲ್ಲ ತೆಗೆದುಕೊಡಬೇಡಿ. ಎಷ್ಟೇ ಶ್ರೀಮಂತರಾಗಿದ್ದರೂ ದುಬಾರಿ ಉಡುಗೊರೆಗಳನ್ನು ಕೊಡುವ ಮೊದಲು ಯೋಚಿಸಿ. ಮಕ್ಕಳಿಗೆ ಹಣ ಉಳಿತಾಯ ಮಾಡುವುದನ್ನು ಹೇಳಿ ಕೊಡಿ. ಅವರೇ ಕಷ್ಟಪಟ್ಟು ಉಳಿಸಿದ ದುಡ್ಡಲ್ಲಿ ತೆಗೆದುಕೊಳ್ಳಬಹುದೆಂದು ಹೇಳಿ.
೧೧. ನಿದ್ದೆಯೆಂಬುದು ವರ. ಮಕ್ಕಳನ್ನು ನಿದ್ದೆ ಮಾಡಲು ಬಿಡಿ. ಆದರೆ, ರಾತ್ರಿ ನಿದ್ದೆಗೆಟ್ಟು ಬೆಳಗ್ಗೆ ನಿದ್ದೆ ಹೊಡೆಸುವ ಅಭ್ಯಾಸ ಮಾಡಿಸಬೇಡಿ. ಒಂದು ನಿಗದಿತ ಸಮಯಕ್ಕೆ ರಾತ್ರಿ ಮಲಗಲೇಬೇಕೆಂಬ ನಿಯಮ ಮನೆಯಲ್ಲಿ ಪಾಲಿಸುತ್ತಿರಲಿ.
೧೨. ಅವರ ಕೋಣೆಯನ್ನು ಕ್ಲೀನಾಗಿ ಇಟ್ಟುಕೊಳ್ಳುವ ಕೆಲಸ ಅವರಿಗೇ ಬಿಡಿ. ವಾರಕ್ಕೊಮ್ಮೆಯಾದರೂ ಕೋಣೆಯನ್ನು, ಅವರ ವಸ್ತುಗಳನ್ನು ಸರಿಯಾದ ಓರಣವಾಗಿಡಲಿ.
ಇದನ್ನೂ ಓದಿ: Parenting Tips: ಮಕ್ಕಳ ಆತ್ಮವಿಶ್ವಾಸಕ್ಕೆ ಪ್ರೇರಕ ಶಕ್ತಿಯಾಗುವ ಹೆತ್ತವರಾಗಿ!