ಪ್ರತಿ ದೇಶದಲ್ಲೂ ತಾಯ್ತನ ಅಂದರೆ ವಿಶೇಷ ಸ್ಥಾನ. ಗರ್ಭಿಣಿಯಾದರೆ ಸಾಕು, ವೈದ್ಯರು ಹೇಳುವಂತೆ ಕೇಳುವ ಜೊತೆಗೆ, ಮನೆಯ ಆರೈಕೆಗಳು, ಹಿರಿಯರಿಂದ ಬಾಯಿಂದ ಬಾಯಿಗೆ ಹರಿದು ಬಂದ ನಂಬಿಕೆಗಳು ಪದ್ಧತಿಗಳು ದಾಟಿಯೇ ದಾಟುತ್ತವೆ. ಎಷ್ಟೇ ವಿದ್ಯಾವಂತರೇ ಆಗಿರಲಿ, ಗರ್ಭಿಣಿಯಾದ ತಕ್ಷಣ ಮನೆಯ ಹಿರಿಯರ ಮಾರ್ಗದರ್ಶನ, ಆಯಾ ಕುಟುಂಬ ನಂಬಿರುವ ಕೆಲ ಪದ್ಧತಿಗಳು ಆಚರಣೆಗಳನ್ನು ಪಾಲಿಸಲೇಬೇಕಾಗುವ ಸಂದರ್ಭ ಬರುತ್ತವೆ. ಕೆಲವಕ್ಕೆ ವೈಜ್ಞಾನಿಕ ಕಾರಣ ಹಿನ್ನೆಲೆ ಇರಬಹುದು, ಇನ್ನೂ ಕೆಲವು ಅರ್ಥಹೀನ ಆಚರಣೆ ಎಂದೂ ಅನಿಸಬಹುದು.
ವಿಚಿತ್ರವೆಂದರೆ, ನಮ್ಮ ಭಾರತದಲ್ಲಷ್ಟೇ ಇಂತಹ ಆಚರಣೆಗಳು ಎಂದು ನಾವು ಅಂದುಕೊಂಡರೆ ಅದು ತಪ್ಪು. ಪ್ರಪಂಚದ ಎಲ್ಲ ದೇಶಗಳೂ ನಮ್ಮಂತೆಯೇ ಒಂದಿಲ್ಲೊಂದು ಇಂತಹ ಚಿತ್ರ ವಿಚಿತ್ರ ನಂಬಿಕೆ ಆಚರಣೆಗಳನ್ನು ನಂಬುತ್ತಲೇ ಬಂದಿವೆ. ಕೆಲವೊಂದು ನಂಬಿಕೆಗಳು ನಮ್ಮನ್ನು ʻಅರೆ ನಿಜಕ್ಕೂ ಹೀಗೂ ಇದೆಯಾ?ʼ ಎಂದು ಆಶ್ಚರ್ಯ ಚಕಿತರನ್ನಾಗಿಸಿದರೆ, ಇನ್ನೂ ಕೆಲವು, ʻನಾವೂ ಇಂಥದ್ದನ್ನೇ ಮಾಡುತ್ತೇವಲ್ಲʼ ಎಂಬ ಸಾಮ್ಯತೆಯೂ ತೋರಿಸಿಬಿಡುತ್ತವೆ. ಉದಾಹರಣೆಗೆ ಗರ್ಭಿಣಿ ಸ್ತ್ರೀ ತಾನು ಮಲಗುವ ಹಾಸಿಗೆಯ ಕೆಳಗೆ ಕಬ್ಬಿಣದ ಕತ್ತಿಯೊಂದನ್ನು ಸದಾ ಇರಿಸಿಕೊಳ್ಳಬೇಕು ಎಂಬ ನಂಬಿಕೆ ಕೇವಲ ಭಾರತದಲ್ಲಲ್ಲ. ಚೀನಾ ಸೇರಿದಂತೆ ಹಲವು ದೇಶಗಳಲ್ಲಿವೆ. ಅಂತಹ ಚಿತ್ರ ವಿಚಿತ್ರ ಸಂಬಂಧವೇ ಇಲ್ಲ ಅನಿಸುವಂತಹ ತಮಾಷೆಯಾಗಿಯೂ ಕಾಣುವ ಹಲವು ದೇಶಗಳ ನಂಬಿಕೆಗಳ ಉದಾಹರಣೆಗಳು ಇಲ್ಲಿವೆ.
೧. ಟರ್ಕಿಯಲ್ಲಿ ಗರ್ಭಿಣಿಯರು ಕರಡಿ, ಕೋತಿ ಹಾಗೂ ಒಂಟೆಗಳನ್ನು ನೋಡಬಾರದಂತೆ!
೨. ಚೀನಾದಲ್ಲಿ ಗರ್ಭಿಣಿಯರು ಯಾವುದೇ ಅಂಟನ್ನು ಬಳಸಬಾರದಂತೆ. ಬಳಸಿದರೆ ಹುಟ್ಟುವ ಮಗುವಿಗೆ ತೊಂದರೆ ಎಂಬ ನಂಬಿಕೆಯಂತೆ.
೩. ಕೊರಿಯಾದಲ್ಲಿ ಗರ್ಭಿಣಿಯಾಗಿದ್ದನ್ನು ಮೊದಲು ಗಂಡನಿಗೆ ಹೇಳಬಾರದಂತೆ. ಗಂಡನ ತಾಯಿಗೆ ಹೇಳಬೇಕಂತೆ.
೪. ಬಾಲಿಯಲ್ಲಿ, ಗರ್ಭಿಣಿಯರು ಆಕ್ಟೋಪಸ್ ತಿನ್ನಬಾರದಂತೆ.
೫. ಗ್ವಾಟೆಮಾಲಾದಲ್ಲಿ ಗರ್ಭಿಣಿಯರು ಒಂಬತ್ತೂ ತಿಂಗಳು ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಬಾರದು, ಹೋದರೆ, ಕೆಟ್ಟ ದೃಷ್ಟಿ ಬಿದ್ದು, ಹೆರಿಗೆ ಕಷ್ಟವಾಗುತ್ತದೆ ಎಂಬ ನಂಬಿಕೆಯಂತೆ.
೬. ಇಟಲಿಯಲ್ಲಿ ಸ್ತ್ರೀ ತಾನು ಗರ್ಭಿಣಿ ತಾನು ಗರ್ಭಿಣಿ ಎಂದು ಎಲ್ಲರಿಗೂ ಮೊದಲು ಹೇಳಿಬಿಡಬೇಕಂತೆ. ಇಲ್ಲವಾದಲ್ಲಿ, ಹುಟ್ಟುವ ಮಗುವಿಗೆ ಮಾತು ಬರುವುದು ತಡವಾಗುತ್ತದೆ ಎಂಬ ನಂಬಿಕೆಯಿದೆ.
೭. ರಷ್ಯಾದಲ್ಲಂತೂ ತಮಾಷೆಯ ಆಚರಣೆಯಿದೆ. ಇಲ್ಲಿ ಗರ್ಭಿಣಿ ಹಾಗೂ ಆಕೆಯ ಗಂಡ ಇಬ್ಬರೂ ಒಬ್ಬರಿಗೊಬ್ಬರು ತಮ್ಮ ಹಳೆಯ ಪ್ರೇಮಿಯ ಹೆಸರು ಹೇಳಿಕೊಳ್ಳಬೇಕಂತೆ. ಹೇಳಿದರೆ, ಹೆರಿಗೆ ಸುಲಭವಾಗುತ್ತದೆ ಎಂಬ ನಂಬಿಕೆಯಂತೆ!
೮. ಪೋರ್ಚುಗಲ್‌ನಲ್ಲಂತೂ ನಾಯಿ ಬೆಕ್ಕುಗಳಿಂದ ಗರ್ಭಿಣಿ ದೂರ ಇರಬೇಕಂತೆ. ಹುಟ್ಟುವ ಮಗುವಿಗೆ ನಾಯಿ ಬೆಕ್ಕಿನಂತೆ ಮೈತುಂಬಾ ಕೂದಲು ಇರುತ್ತದೆ ಎಂಬ ನಂಬಿಕೆಯಂತೆ.
೮. ಮಂಗೋಲಿಯಾದಲ್ಲಿ ಇಬ್ಬರು ಗರ್ಭಿಣಿಯರು ಎದುರಾದರೆ ಅವರು ಒಬ್ಬರನ್ನೊಬ್ಬರು ಮುಟ್ಟಬಾರದಂತೆ. ಮುಟ್ಟಿದರೆ, ಹೊಟ್ಟೆಯಲ್ಲಿರುವ ಮಗುವಿನ ಲಿಂಗ ಅದಲು ಬದಲಾಗುತ್ತದಂತೆ!
೯. ಕೆನ್ಯಾದಲ್ಲಿ ಗರ್ಭಿಣಿ ಶವವನ್ನು ನೋಡಬಾರದಂತೆ. ನೋಡಿದರೆ, ಶವದಲ್ಲಿರುವ ಆತ್ಮ ಆಕೆಯ ಹೊಟ್ಟೆ ಸೇರುತ್ತದೆ ಎಂಬ ನಂಬಿಕೆಯಿದೆ.
೧೦. ಸ್ವಿಜರ್‌ಲ್ಯಾಂಡ್‌ನಲ್ಲಿ ಮಗು ಹುಟ್ಟುವ ಮೊದಲೇ ಹೆಸರು ಯೋಚನೆ ಮಾಡಿದರೆ ಅದು ಬ್ಯಾಡ್ ಲಕ್ ಎಂದು ನಂಬಲಾಗುತ್ತದೆ.
೧೧. ಫಿಲಿಪೈನ್ಸ್‌ನಲ್ಲಿ ಹೆರಿಗೆಗೆ ಸ್ವಲ್ಪ ಸಮಯ ಮೊದಲು ಗರ್ಭಿಣಿಗೆ ಹಸಿ ಮೊಟ್ಟೆಯನ್ನು ತಿನ್ನಿಸುತ್ತಾರಂತೆ. ಮೊಟ್ಟೆಯ ಲೋಳೆಯಿಂದಾಗಿ, ಮಗು ಸುಲಭವಾಗಿ ಜಾರಿಕೊಂಡು ಹೊರಬರುತ್ತದೆ ಎಂಬ ನಂಬಿಕೆಯಂತೆ.
೧೨. ಮೆಕ್ಸಿಕೋನಲ್ಲಿ ಮೇಲಿನದಕ್ಕೆ ವಿರುದ್ಧ ನಂಬಿಕೆಯಿದೆ. ಗರ್ಭಿಣಿ ಮೊಟ್ಟೆ ತಿಂದರೆ, ಹುಟ್ಟಲಿರುವ ಮಗು ಕೆಟ್ಟ ವಾಸನೆ ಬೀರುತ್ತದೆ ಎಂದು ನಂಬುತ್ತಾರೆ. ಹಾಗಾಗಿ ಗರ್ಭಿಣಿಯನ್ನು ಮೊಟ್ಟೆ ತಿನ್ನಲು ಬಿಡುವುದಿಲ್ಲ.
೧೩. ಜಪಾನ್‌ನಲ್ಲಿ ಗರ್ಭಿಣಿಯ ಊಟದಲ್ಲೊಂದು ಹಸಿ ಮೀನು ಇದ್ದೇ ಇರುತ್ತದಂತೆ! ಅವರು ಅದನ್ನು ಹಾಗೆಯೇ ನಿತ್ಯವೂ ತಿನ್ನಬೇಕಂತೆ.
ಇದನ್ನೂ ಓದಿ: ಹೃದಯ ಆರೋಗ್ಯ ಚೆನ್ನಾಗಿರಬೇಕಾ? ಸಾಕಷ್ಟು ನಿದ್ರೆ ಮಾಡಿ!