Site icon Vistara News

Women achievers | ನೈಕಾ, ಝಿವಾಮೆ ಆನ್‌ಲೈನ್‌ ಉದ್ದಿಮೆಯ ಹಿಂದಿನ ಇಬ್ಬರು ಮಹಿಳೆಯರ ಸ್ಫೂರ್ತಿ ಕತೆ!

ಭಾರತದಲ್ಲಿ ಮಹಿಳಾ ಉದ್ಯಮಿಗಳಿಗೇನೂ ಕೊರತೆಯಿಲ್ಲ. ನಮ್ಮ ನಡುವೆ ಸಣ್ಣ ಸಣ್ಣ ಗೃಹೋದ್ಯಮಗಳನ್ನು ಕಟ್ಟಿ ಬೆಳೆಸಿ ಬದುಕಿನಲ್ಲಿ ಯಶಸ್ವಿಯಾದ ಮಹಿಳೆಯರಿಂದ ಹಿಡಿದು ವಿಶ್ವವಿಖ್ಯಾತ ಬ್ರ್ಯಾಂಡ್‌ಗಳವರೆಗೂ ಮಹಿಳೆಯರ ಸಾಧನೆಯ ಸ್ಪೂರ್ತಿಕತೆಗಳು ಒಂದೆರಡಲ್ಲ. ಇವರ ನಡೆದು ಬಂದ ಹಾದಿ, ಸಣ್ಣ ಹೂಡಿಕೆಯಿಂದ ಬ್ರಾಂಡ್‌ ಕಟ್ಟಿದಂತಹ ಸಾಧನೆಯ ಹಾದಿ ಕೇಳಿದರೆ, ಏನಾದರೊಂದು ಬದುಕಿನಲ್ಲಿ ಸಾಧಿಸಬೇಕು ಎಂದು ಹೊರಟವರಿಗೆ ದಾರಿದೀಪವಾಗುತ್ತದೆ. ಪುರುಷ ಪ್ರಧಾನ ವ್ಯವಸ್ಥೆ ಆಳವಾಗಿ ಬೇರೂರಿರುವ ಭಾರತದಂತಹ ದೇಶದಲ್ಲಿ ಮಹಿಳೆ ತನ್ನ ಚೌಕಟ್ಟಿನಿಂದ ಹೊರಗೆ ಬಂದು ಹೊಸದಾಗಿ ಚಿಂತಿಸುವುದು, ಅದನ್ನು ಕಾರ್ಯರೂಪಕ್ಕೆ ತರುವುದೂ ಕೂಡಾ ಸವಾಲೇ ಸರಿ.

ಈಗ ಕಾಲ ಬದಲಾಗಿದೆ. ಮಹಿಳೆಯರು ಹೊಸ ಹೊಸ ಐಡಿಯಾಗಳೊಂದಿಗೆ ಉದ್ಯಮ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ ಕೂಡಾ. ಇದೆಲ್ಲ ಪುರುಷರಿಗೆ ಮಾತ್ರ ಎಂಬ ವಿಭಾಗಗಳಲ್ಲೂ ಮಹಿಳೆಯರು ಹೊಸತೊಂದು ಬೆಳಕಿಂಡಿ ತೆರೆದು ಹಲವರ ಆಶಾವಾದಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಇಬ್ಬರು ಮಹಿಳೆಯರಿವರು!

೧. ಫಲ್ಗುಣಿ ನಾಯರ್, ಸಂಸ್ಥಾಪಕಿ, ನೈಕಾ:‌ ಕೇವಲ ಫ್ಯಾಷನ್‌ ಪ್ರಿಯರೇಕೆ, ಹಳ್ಳಿಹಳ್ಳಿಯಲ್ಲೂ ನೈಕಾ ಹೆಸರು ಕೇಳದವರಿರಲಿಕ್ಕಿಲ್ಲ. ಅಷ್ಟರಮಟ್ಟಿಗೆ ಮನೆಮಾತಾಗಿರುವ ನೈಕಾ ಎಂಬ ಫ್ಯಾಷನ್‌ ಆನ್‌ಲೈನ್ ಬ್ರ್ಯಾಂಡ್‌ನ ಯಶಸ್ಸಿನ ಹಿಂದೆ ಇರುವುದು ಫಲ್ಗುಣಿ ನಾಯರ್.‌ ೫೦ ವಯಸ್ಸಿನಲ್ಲಿ ಕೋಟಕ್‌ ಮಹಿಂದ್ರಾ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ಹೊಸ ಉದ್ಯಮವನ್ನು ಸೊನ್ನೆಯಿಂದ ಶುರುಮಾಡಿದ ಗಟ್ಟಿಗಿತ್ತಿ ಈಕೆ. ಐಐಎಂ ಅಹ್ಮದಾಬಾದ್‌ನ ಓದು ಕೂಡಾ ಈಕೆಯ ಬೆನ್ನಿಗಿತ್ತು ಎಂಬುದೂ ನಿಜವೇ. ತನ್ನ ಅಪ್ಪ ಮಾಡುತ್ತಿದ್ದ ಸಣ್ಣ ಸಣ್ಣ ಉದ್ಯಮ ಮಗಳಿಗೆ ಸ್ಪೂರ್ತಿಯಾಗಿದ್ದು ಹೀಗೆ.

೨೦೦೫ರಲ್ಲಿ ಕೋಟಕ್‌ ಮಹಿಂದ್ರಾ ಕ್ಯಾಪಿಟಲ್‌ಗೆ ವ್ಯವಸ್ಥಾಪಕ ನಿರ್ದೇಶಕಿಯಾಗಿ ಸೇರಿದ ಫಲ್ಗುಣಿ ನಾಯರ್‌ ಹೊಸತನ್ನು ಮಾಡುವ ಅಂತಹ ಅನಿವಾರ್ಯತೆಯೇನೂ ಇರಲಿಲ್ಲ. ಒಂದೊಳ್ಳೆ ಕೆಲಸವಿತ್ತು, ಕೈತುಂಬ ಸಂಬಳವಿತ್ತು. ಆದರೂ, ತನ್ನದೇ ಸಂಸ್ಥೆಯೊಂದನ್ನು ಕಟ್ಟಬೇಕು ಎಂದು ಮನಸ್ಸು ಮಾಡಿದ ಆಕೆ, ೨೦೧೨ರಲ್ಲಿ ನೈಕಾ ಎಂಬ ಯಶಸ್ವೀ ಆನ್‌ಲೈನ್‌ ಫ್ಯಾಷನ್‌ ಪ್ರಾಡಕ್ಟ್‌ಗಳ ಉದ್ಯಮವನ್ನು ಕಟ್ಟುತ್ತಾರೆ. ಇಂದು ನೈಕಾ ಬೆಳೆದ ಪರಿಯೇ ವಿಸ್ಮಯ ಹುಟ್ಟಿಸುವಂಥದ್ದು. ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಫ್ಯಾಷನ್‌/ಬ್ಯೂಟಿ/ಲಕ್ಷುರಿ ಬ್ರ್ಯಾಂಡ್‌ಗಳಿರುವ ಬೃಹತ್‌ ಆನ್‌ಲೈನ್‌ ಉದ್ಯಮವಾಗಿ ಇದೀಗ ಬೆಳೆದಿದೆ.

ಇದನ್ನೂ ಓದಿ | B.Tech Chaiwali | ಓದುವ ಹುಡುಗಿಯ ಚಹಾದಂಗಡಿಯೆಂಬ ಸ್ಫೂರ್ತಿ!

೨. ರಿಚಾ ಕರ್‌, ಸಹ ಸಂಸ್ಥಾಪಕಿ ಹಾಗೂ ಕಾರ್ಯ ನಿರ್ವಹಣಾಧಿಕಾರಿ, ಝಿವಾಮೆ: ನೈಕಾದಂತೆಯೇ ಇಂದು ಆನ್‌ಲೈನ್‌ ಫ್ಯಾಷನ್‌ ಉದ್ಯಮದಲ್ಲಿ ಮತ್ತೊಂದು ಮಿಂಚುತ್ತಿರುವ ಬ್ರ್ಯಾಂಡ್‌ ಝಿವಾಮೆ.‌ ಇದರ ಹಿಂದಿನ ಶಕ್ತಿ ಜೆಮ್‌ಶೆಡ್‌ಪುರದ ರಿಚಾ ಕರ್.‌ ಎಂಜಿನಿಯರಿಂಗ್‌ ಪದವಿ ಪಡೆದು ಕೆಲ ಕಾಲ ಐಟಿ ಉದ್ಯೋಗಿಯಾಗಿದ್ದ ರಿಚಾ, ಅದನ್ನು ತ್ಯಜಿಸಿ ೨೦೦೭ರಲ್ಲಿ ಮ್ಯಾನೇಜ್‌ಮೆಂಟ್‌ನಲ್ಲಿ ಹೆಚ್ಚಿನ ಶಿಕ್ಷಣವನ್ನೂ ಪಡೆಯುತ್ತಾರೆ. ಇದಾಗಿ ರಿಟೇಲ್‌ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿದ ಆಕೆಗೆ ತನ್ನ ಸಂಸ್ಥೆಯ ವೃತ್ತಿಯ ಭಾಗವಾಗಿ ಖ್ಯಾತ ಒಳ ಉಡುಪುಗಳ ಬ್ರ್ಯಾಂಡ್‌ ವಿಕ್ಟೋರಿಯನ್‌ ಸೀಕ್ರೆಟ್‌ ಜೊತೆ ಕೈಜೋಡಿಸುವ ಅವಕಾಶ ಸಿಗುತ್ತದೆ. ಹೀಗಾಗಿ ಒಳ ಉಡುಪುಗಳ ಲೋಕ ಪ್ರವೇಶಿಸಿದ ಆಕೆಗೆ, ಇಂದಿಗೂ ಭಾರತದಲ್ಲಿ ಮಹಿಳೆಯರು, ಒಳ ಉಡುಪುಗಳ ಖರೀದಿಯ ಸಂದರ್ಭ, ಆಯ್ಕೆಯ ಸಂದರ್ಭ ಮುಜುಗರಕ್ಕೀಡಾಗುವ ಸಂದರ್ಭಗಳು ಹೆಚ್ಚಿದೆ ಎಂದು ಮನವರಿಕೆಯಾಗುತ್ತದೆ. ಹೀಗಾಗಿ ತನ್ನದೇ ಒಂದು ಒಳ ಉಡುಪುಗಳ ಆನ್‌ಲೈನ್‌ ಬ್ರ್ಯಾಂಡ್‌ ಯಾಕೆ ಮಾಡಬಾರದು ಎಂಬ ಯೋಚನೆಯನ್ನು ಮಾಡಿದ ರಿಚಾಗೆ ಈ ಕನಸನ್ನು ಸಾಕಾರಗೊಳಿಸಲು ನೆರವಾಗಿದ್ದು ಆಕೆಯ ಫ್ರೆಂಡ್‌ ಕಪಿಲ್‌ ಕಾರೇಕರ್.

ಆದರೆ, ಸಾಂಪ್ರದಾಯಿಕ ಮನಸ್ಥಿತಿಯ ಸಮಾಜದಲ್ಲಿ ಇದ್ದಕ್ಕಿದ್ದಂತೆ ಇದ್ದ ಕೆಲಸ ಬಿಟ್ಟು ಹೊಸತೊಂದು ಅದರಲ್ಲೂ ಒಳ ಉಡುಪಿನ ಆನ್‌ಲೈನ್‌ ಬ್ರ್ಯಾಂಡ್‌ ಕಟ್ಟುವುದು ನಿಜಕ್ಕೂ ಆಕೆಗೆ ಸವಾಲಾಗಿತ್ತು. ಆದರೂ, ಈ ಸಂದರ್ಭ ತನ್ನ ಗೆಳೆಯರು, ಬಂಧುಗಳು ಹಾಗೂ ಹಿತೈಷಿಗಳಿಂದ ೩೦ ಲಕ್ಷ ರೂಪಾಯಿಗಳ ಸಾಲ ಪಡೆದು ೨೦೧೧ರಲ್ಲಿ ಅದರಿಂದ ಉದ್ಯಮ ಕಟ್ಟಿದ ಹೆಗ್ಗಳಿಕೆ ಈಕೆಯದು. ಸಂಸ್ಥೆ ಕಟ್ಟಿದ ಕೇವಲ ಮೂರೇ ವರ್ಷಗಳಲ್ಲಿ ೨೦೦ ಜನರ ತಂಡವಾಗಿ ಬೆಳೆದಿತ್ತು. ಸದ್ಯ ಝಿವಾಮೆ ಭಾರತದ ಒಳಉಡುಪುಗಳ ಖ್ಯಾತ ಬ್ರ್ಯಾಂಡ್‌ ಹಾಗೂ ರಿಚಾ ಭಾರತದ ಟಾಪ್‌ ಮಹಿಳಾ ಉದ್ಯಮಿಗಳಲ್ಲಿ ಒಬ್ಬರು!

ಇದನ್ನೂ ಓದಿ | Life story | ಕಳ್ಳತನ ಮಾಡಿದಾತನೇ ಪೊಲೀಸ್‌ ಪ್ರಶಸ್ತಿ ಪಡೆದು ಹಲವರಿಗೆ ಸ್ಫೂರ್ತಿಯಾದ ಕಥೆ!

Exit mobile version