Site icon Vistara News

ಅಫ್ಘಾನಿಸ್ತಾನದಲ್ಲಿ ಮತ್ತೆ ಹೆಣ್ಣುಮಕ್ಕಳ ಭೂಗತ ಶಾಲೆಗಳು ಚಾಲೂ: ಹೇಗೆ ನಡೀತಿದೆ?

afghanisthan school

ಆಕ್ಸಾನಾ ಸುಲ್ತಾನಾ ಎಂಬಾಕೆ ಅಫ್ಘಾನಿಸ್ತಾನದವಳು. 1990ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ತಮ್ಮ ಕ್ರೂರ ಆಡಳಿತವನ್ನು ದೇಶದಲ್ಲಿ ಹರಡಿದಾಗ, ಹೆಣ್ಣುಮಕ್ಕಳ ಶಿಕ್ಷಣವನ್ನು ನಿಷೇಧಿಸಿದರು. ಆಗ ಕಲಿಕೆಯ ಹಂಬಲ ಹೊಂದಿದ್ದ ಕೆಲವು ಹೆಣ್ಣುಮಕ್ಕಳು ಸೇರಿಕೊಂಡು, ರಹಸ್ಯವಾಗಿ ಶಿಕ್ಷಣ ಪಡೆಯುವ ದಾರಿ ಕಂಡುಕೊಂಡರು. ಹೀಗೆ ಕಲಿತಾಕೆ ಅಕ್ಸಾನಾ ಸುಲ್ತಾನಾ. ಈಗ ಮತ್ತದೇ ರೀತಿಯ ಭೂಗತ ಶಾಲೆಗಳು ಅಸ್ತಿತ್ವಕ್ಕೆ ಬಂದಿವೆ. ಅವು ಹೇಗೆ ನಡೆಯುತ್ತಿವೆ ಎನ್ನುವುದನ್ನು ಆಕ್ಸಾನಾ ಸುಲ್ತಾನಾ ಮಾತುಗಳಲ್ಲೇ ಕೇಳಿ:

ನಾನು 1990ರ ದಶಕದಲ್ಲಿ ಅಫ್ಘಾನಿಸ್ತಾನದಲ್ಲಿ ಬೆಳೆದೆ. ಆಗಿನ ತಾಲಿಬಾನ್‌ ಆಡಳಿತ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕ್ರೂರವಾಗಿತ್ತು. ಎಲ್ಲ ಬಗೆಯ ಸ್ತ್ರೀ ಸ್ವಾತಂತ್ರ್ಯ, ಸಮಾನತೆಗಳನ್ನು ಹತ್ತಿಕ್ಕಲಾಗಿತ್ತು. ಹೆಣ್ಣು ಮಗು ಓದು ಬರಹ ಕಲಿಯಲು ಮುಂದಾದರೆ ಆಕೆಯನ್ನೂ ಆಕೆಯ ಹೆತ್ತವರನ್ನೂ ಅತ್ಯಂತ ಕಠಿಣವಾಗಿ ಶಿಕ್ಷಿಸಲಾಗುತ್ತಿತ್ತು.

ನನ್ನ ಸಹೋದರರು ಪ್ರತಿ ಮುಂಜಾನೆ ಬ್ಯಾಗ್‌ ಹೆಗಲಿಗೇರಿಸಿಕೊಂಡು ಶಾಲೆಗೆ ಹೋಗುತ್ತಿದ್ದರು. ನಾನು ಅಸಹಾಯಕವಾಗಿ ಅವರನ್ನೇ ನೋಡುತ್ತ, ಮನೆಯಲ್ಲಿ ಅವರಿಗಾಗಿ ಅಡುಗೆ ಮಾಡುತ್ತ ಇರುತ್ತಿದ್ದೆ. ನನ್ನಲ್ಲಿ ಮೂಡುತ್ತಿದ್ದ ಕಲಿಕೆಯ ಹಂಬಲವನ್ನು ನನ್ನ ಹೆತ್ತವರು ಗುರುತಿಸಿದರು.

ಆಕ್ಸಾನಾ ಸುಲ್ತಾನ್

ನನ್ನ ತಾಯಿ ಧೈರ್ಯಶಾಲಿಯಾಗಿದ್ದಳು. ನನಗೆ 7 ವರ್ಷ ತುಂಬಿದಾಗ ಅವಳು ನನ್ನ ಪುಸ್ತಕಗಳನ್ನು ಒಂದು ದಿನಸಿ ಸಾಮಗ್ರಿಯ ಬ್ಯಾಗಿನಲ್ಲಿ ತುಂಬಿ, ನನ್ನ ಅಣ್ಣದ ಉಡುಪನ್ನು ನನಗೆ ತೊಡಿಸಿ, ಹೆಣ್ಣುಮಕ್ಕಳಿಗಾಗಿ ನಡೆಯುತ್ತಿದ್ದ ಒಂದು ಭೂಗತ ಶಾಲೆಗೆ ನನ್ನನ್ನು ಕಳಿಸಿದಳು.

ರಹಸ್ಯವಾದ ಸ್ಕೂಲು

ಆ ಶಾಲೆ ಹೊರಜಗತ್ತಿನ ಕಣ್ಣಿಗೆ ಕಾಣದಂತೆ ರಹಸ್ಯವಾಗಿತ್ತು. ಕಪ್ಪು ಪರದೆಗಳು ಅದರ ಕಿಟಕಿಗಳನ್ನು ಮುಚ್ಚಿದ್ದವು. ಅದೊಂದು ನೆಲಮಹಡಿಯಲ್ಲಿತ್ತು. ಕಿಟಕಿಗಳು, ಬಾಗಿಲುಗಳನ್ನು ಭದ್ರವಾಗಿ ಸರಪಳಿಗಳಿಂದ ಬಂಧಿಸಲಾಗಿತ್ತು. ಫಾರ್ಸಿ ಕಲಿಸುತ್ತಿದ್ದ ಟೀಚರ್‌ ಇದ್ದರು. ನನ್ನ ತಾಯಿ ಕೂಡ ಆಗಾಗ ಕಲಿಸಲು ಬರುತ್ತಿದ್ದರು. ಆ ನೆಲಮಹಡಿ, ತಮ್ಮ ಜೀವವನ್ನೇ ಪಣಕ್ಕಿಟ್ಟು ಕಲಿಯಲು ಬರುತ್ತಿದ್ದ ಸುಮಾರು 50 ಹೆಣ್ಣು ಮಕ್ಕಳಿಗೆ ನೆಲೆಯಾಗಿತ್ತು. ಅಲ್ಲಿ ಕುರ್ಚಿ, ಡೆಸ್ಕು ಯಾವುದೂ ಇರಲಿಲ್ಲ. ವೃತ್ತಾಕಾರವಾಗಿ ನೆಲದಲ್ಲಿ ಕೂರುತ್ತಿದ್ದೆವು.

ನಾವು ಶಾಲೆಗೆ ಹೋಗುತ್ತಿದ್ದ ಸಮಯ ಪ್ರತಿದಿನವೂ ಭಿನ್ನವಾಗಿರುತ್ತಿತ್ತು. ನಾನೂ ಹಾಗೂ ನನ್ನ ತಂಗಿ ಜೊತೆಯಾಗಿ ಹೋಗುತ್ತಿರಲಿಲ್ಲ. ಯಾರೂ ಒಂದೇ ಸಮಯಕ್ಕೆ ಬರುತ್ತಿರಲಿಲ್ಲ. ಕೈಯಲ್ಲಿ ಪುಸ್ತಕದ ಬ್ಯಾಗು ಹಿಡಿದಿರುತ್ತಿರಲಿಲ್ಲ. ತಾಲಿಬಾನಿಗಳ ಗಮನ ಸೆಳೆಯದೆ ಇರಲು ಇದು ಮುಖ್ಯವಾಗಿತ್ತು. ಪತ್ತೆಯಾದರೆ ನಮಗೆ ಕಠಿಣ ಶಿಕ್ಷೆಯಾಗುವುದು ಮಾತ್ರವಲ್ಲ, ಶಾಲೆ ನಡೆಸುತ್ತಿದ್ದವರಿಗೆ ಮರಣ ದಂಡನೆಯೇ ಗತಿಯಾಗಿತ್ತು. ನನ್ನ ತಾಯಿಯ ಧೈರ್ಯಕ್ಕೆ ಎಣೆಯೇ ಇಲ್ಲ. ʼಕಲಿತ ನಾರಿ ಅತ್ಯಂತ ಶಕ್ತಿವಂತೆʼ ಎನ್ನುತ್ತಿದ್ದಳು ಅವಳು.

ಆದರೆ, ಪರಿಸ್ಥಿತಿ ಬಿಗಡಾಯಿಸಿತು. ಸುತ್ತಮುತ್ತ ಇದ್ದವರಿಗೆ ಅನುಮಾನದ ವಾಸನೆ ಬಡಿಯಿತು. ಇದು ನಮ್ಮ ಹೆತ್ತವರಿಗೂ ಗೊತ್ತಾಯಿತು. ಹೆಣ್ಣುಮಕ್ಕಳ ಶಿಕ್ಷಣದಲ್ಲಿ ದೃಢ ನಂಬಿಕೆ ಇಟ್ಟಿದ್ದ ನನ್ನ ತಂದೆ ತಾಯಿ, ಕೈಯಲ್ಲಿ ಮೂರು ಕಾಸು ಸಹ ಇಲ್ಲದೆ, ನಮ್ಮನ್ನು ಕರೆದುಕೊಂಡು ತಜಿಕಿಸ್ತಾನದ ಗಡಿಗೆ ಬಂದುಬಿಟ್ಟರು. ನಾವು ನಿರಾಶ್ರಿತರಾಗಿದ್ದೆವು. ಅಲ್ಲೂ ಶಾಲೆಗಳಿರಲಿಲ್ಲ. ಕಿತ್ತು ತಿನ್ನುವ ಬಡತನ. ಕಾಯಿಲೆಗಳು. ಡಾಕ್ಟರ್‌ ಇರಲಿಲ್ಲ. ಕುಡಿಯುವ ನೀರೂ ಇಲ್ಲ, ಸ್ವಚ್ಛತೆಯೂ ಇಲ್ಲ.

ನಂತರದ ಹಲವು ವರ್ಷ ನಾವು ತಜಿಕಿಸ್ತಾನ, ಉಜ್ಬೆಕಿಸ್ತಾನಗಳಲ್ಲಿ ಕಳೆದೆವು. ನನಗೆ 13 ವರ್ಷವಾದಾಗ ವಿಶ್ವಸಂಸ್ಥೆ ಮೂಲಕ ನಾವು ಅಮೆರಿಕಕ್ಕೆ ಪ್ರವೇಶ ಪಡೆದೆವು. ನನ್ನ ಬದುಕು ಬದಲಾಯಿತು. ಈಗ ನಾನು ಬಡಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಇತ್ಯಾದಿಗಳ ಬಗ್ಗೆ ಕೆಲಸ ಮಾಡುವ ಸಂಸ್ಥೆ ಸ್ಥಾಪಿಸಿ ನಡೆಸುತ್ತಿದ್ದೇನೆ.

ಇದನ್ನೂ ಓದಿ: ಬಿಸಿಬಿಸಿ ದೃಶ್ಯಗಳಿಗೆ ಹೊಸ ಟ್ರೇನರ್!

ಇಂದು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವುದೂ ಅಂದಿನಿಂತೆಯೇ ಇದೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳನ್ನು ಮರಳಿ ಕಳಿಸಲಾಗುತ್ತಿದೆ. ಅಲ್ಲಿರುವ ನನ್ನ ಕಸಿನ್‌ ಒಬ್ಬಳು ಫೋನ್‌ ಮಾಡಿದ್ದಳು. ʼʼಅಕ್ಕಾ ಏನು ಮಾಡಬೇಕು ಅಂತ ಗೊತ್ತಾಗ್ತಿಲ್ಲ. ತಾಲಿಬಾನಿಗಳು ಸಣ್ಣ ಸಣ್ಣ ಹೆಣ್ಣುಮಕ್ಕಳನ್ನು ನಮಗೆ ಮದುವೆ ಮಾಡಿ ಕೊಡಬೇಕು ಎಂದು ಆರ್ಡರ್‌ ಮಾಡಿದಾರೆ.ʼʼ ಎಂದು ಅತ್ತಳು. ಅಷ್ಟರಲ್ಲಿ ಫೋನ್‌ ಕಟ್ಟಾಯಿತು. ಅಂದರೆ ಹೆಣ್ಣು ಮಕ್ಕಳ ಭವಿಷ್ಯ ಇನ್ನಷ್ಟು ಭಯಂಕರವಾಗಿದೆ. ಬಹುಶಃ ಅವರಿಗೆ ಭೂಗತ ಸ್ಕೂಲುಗಳಿಗೆ ಹೋಗಲೂ ಈಗ ಕಷ್ಟವಾಗಬಹುದು.

ಆದರೆ ನಾವು ಪ್ರಪಂಚದ ಸ್ತ್ರೀಯರು, ಇಷ್ಟಕ್ಕೆಲ್ಲ ಸೋಲುವವರಲ್ಲ. ಮತ್ತೆ ಮೇಲೆದ್ದೇ ಏಳುತ್ತೇವೆ. ನಮ್ಮ ಜ್ಞಾನದ ಹಸಿವನ್ನು ನಾವು ಹೇಗಾದರೂ ಹಿಂಗಿಸಿಕೊಳ್ಳಲಿದ್ದೇವೆ. ಅಲ್ಲಿನ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವ ಪ್ರಯತ್ನಗಳು ಈಗಾಗಲೇ ಜಾರಿಯಲ್ಲಿವೆ.

Exit mobile version