Site icon Vistara News

Beauty secret: ಹೆಣ್ಮಕ್ಕಳ ನಿಜವಾದ ಸೌಂದರ್ಯ ಅಡಗಿರುವುದೆಲ್ಲಿ? ಇಲ್ಲಿವೆ 6 Secret points

indian woman

ಸೌಂದರ್ಯ ಇರುವುದೆಲ್ಲಿ? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಬಹುಶಃ ಮನುಷ್ಯ ಹುಟ್ಟಿದಲ್ಲಿಂದಲೇ ಆರಂಭವಾಗಿದೆ. ಅದರಲ್ಲೂ ಹೆಣ್ಮಕ್ಕಳ ಸೌಂದರ್ಯ ವರ್ಣನೆಗೆ ಮೀಮಾಂಸೆಗಳೇ ಹುಟ್ಟಿಕೊಂಡಿವೆ. ಆದರೂ ಅದಕ್ಕೊಂದು ಮೂರ್ತ ರೂಪ ಇನ್ನೂ ಸಿಕ್ಕಿಲ್ಲ. ಕೆಲವರನ್ನು ಸಹಜ ಸುಂದರಿಯರು ಅನ್ನುತ್ತೇನೆ, ಕೆಲವರನ್ನು ಸಿಂಪಲ್‌ ಬ್ಯೂಟಿ ಅನ್ನುತ್ತೇವೆ. ಕೆಲವರು ಮೇಕಪ್‌ ಮೂಲಕ ಸೌಂದರ್ಯವನ್ನು ಆವಾಹಿಸಿಕೊಳ್ಳುತ್ತಾರೆ. ಇನ್ನು ಕೆಲವರು ಪ್ರಸಾಧನದ ಮೂಲಕ ಸೌಂದರ್ಯಕ್ಕೆ ಗರಿ ಮೂಡಿಸಿಕೊಳ್ಳುತ್ತಾರೆ.

ಉಡುವ ಬಟ್ಟೆ, ತೊಡುವ ಒಡವೆ, ಮಾಡಿಕೊಳ್ಳುವ ಅಲಂಕಾರಗಳಲ್ಲಿ ಸೌಂದರ್ಯ ಹುಡುಕುವುದು ಸಾಮಾನ್ಯವಾದ ವಿಧಾನ. ಆದರೆ, ಒಬ್ಬ ಹೆಣ್ಮಗಳ ನಿಜವಾದ ಸೌಂದರ್ಯ ಅದೆಲ್ಲವನ್ನೂ ಮೀರಿದ ಅಂಶಗಳಲ್ಲಿ ಪ್ರಕಟಗೊಳ್ಳುತ್ತದೆ. ಅದು ಹೊರಗಿನ ಚೆಲುವಷ್ಟೇ ಅಲ್ಲ. ಹೊರಗಿನ ಚೆಲುವಿಗೆ ಮೆರುಗು ನೀಡುವ ಆಂತರಿಕ ಸೌಂದರ್ಯ. ಅಂದರೆ, ಉಕ್ಕುವ ಆತ್ಮವಿಶ್ವಾಸ, ತಾನೆಲ್ಲಿ ಯಾವಾಗ ಹೇಗಿರಬೇಕು ಎಂಬುದರ ಸ್ಪಷ್ಟ ಅರಿವು, ನಿಲ್ಲುವ ಭಂಗಿ, ಮಾತಿನಲ್ಲಿನ ಸ್ಪಷ್ಟತೆ, ವಿಷಯ ತಿಳುವಳಿಕೆಯಲ್ಲಿನ ಆಳ, ಭಾಷೆಯ ಮೇಲಿನ ಹಿಡಿತ ಇದು ಒಬ್ಬ ಮಹಿಳೆಯ ನಿಜವಾದ ಸೌಂದರ್ಯವನ್ನು ತೀರ್ಮಾನ ಮಾಡುತ್ತದೆ. ದೇಹದ ಸೌಂದರ್ಯ ನಾಳೆ ಕಳೆಗುಂದಬಹುದು. ಆದರೆ, ಈ ಒಳಗಿನಿಂದ ಚಿಮ್ಮುವ ಚೆಲುವು ಶಾಶ್ವತವಾಗಿ ಉಳಿಯುತ್ತದೆ.

ಇದನ್ನೂ ಓದಿ | ವಿಸ್ತಾರ Explainer: ಅಬಾರ್ಷನ್‌- ಎಲ್ಲಿ ಓಕೆ, ಎಲ್ಲಿ ನಾಟ್‌ ಓಕೆ?

ಹಾಗಾದರೆ ಒಬ್ಬ ಮಹಿಳೆಯಾಗಿ ನಮ್ಮ ವ್ಯಕ್ತಿತ್ವವನ್ನು ಆಕರ್ಷಕವಾಗಿ ಕಾಣುವಂತೆ ಹೇಗೆ ಪ್ರಸ್ತುತಪಡಿಸಬಹುದು ಎಂಬುದನ್ನು ನೋಡೋಣ.

೧. ಭಾಷೆಯಲ್ಲಿ ಶುದ್ಧತೆ

ಯಾವುದೇ ಭಾಷೆ ಮಾತಾಡುತ್ತಿರಬಹುದು ಆದರೆ, ಆ ಭಾಷೆಯ ಮೇಲಿನ ಹಿಡಿತ ಮುಖ್ಯ. ಅದು ಆಂಗ್ಲಭಾಷೆಯೇ ಆಗಬೇಕಿಲ್ಲ. ನೀವು ನಿತ್ಯ ವ್ಯವಹರಿಸುವ ಭಾಷೆಯ ಮೇಲಿನ ಪ್ರೀತಿ, ಹಾಗೂ ಅದರ ಮೇಲಿನ ಹಿಡಿತ ನಿಮ್ಮ ಆತ್ಮವಿಶ್ವಾಸವನ್ನು ತೋರಿಸುತ್ತದೆ. ಭಾಷೆಯೊಂದನ್ನು ಬಳಸುವಾಗಿನ ಧೈರ್ಯ, ಅಸಭ್ಯ ಪದಗಳನ್ನು ಬಳಸದಿರುವುದು, ಪದಜೋಡಣೆ ಎಲ್ಲವೂ ವ್ಯಕ್ತಿತ್ವವನ್ನು ಇನ್ನಷ್ಟು ಸುಂದರಗೊಳಿಸುತ್ತದೆ.

೨. ದೇಹದ ಭಂಗಿ
ನಮ್ಮ ನಡಿಗೆ, ನಿಲ್ಲುವ ಇಲ್ಲವೇ ಕುಳಿತುಕೊಳ್ಳುವ ಭಂಗಿ ನಮ್ಮ ವ್ಯಕ್ತಿತ್ವವನ್ನು ಹೇಳುತ್ತದೆ. ಕಚೇರಿಗೆ ಬಂದು ಅರ್ಧ ಗಂಟೆಯಾಗುವ ಮೊದಲೇ ಬೆನ್ನು ಬಾಗಿಸಿ, ಅಯ್ಯೋ ಅನ್ನುವಂತೆ ಮೈಚಾಚಿ ಕುಳಿತುಕೊಂಡರೆ ನೋಡಿದವರು ನಮ್ಮ ಬಗ್ಗೆ ಕ್ಷುಲ್ಲಕ ನೋಟವನ್ನು ಬೀರುತ್ತಾರೆ. ಇನ್ನೊಬ್ಬರು ಹಾಗಿದ್ದಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ ಎನ್ನುವುದರ ಆಧಾರದ ಮೇಲೆ ನಮ್ಮ ಭಂಗಿಗಳನ್ನು ನಾವೇ ಗಮನಿಸಿ ತಿದ್ದಿಕೊಳ್ಳಬೇಕು. ಬಾಗಿದ ಬೆನ್ನು, ಹೇಗೆ ಹೇಗೋ ಕುಳಿತುಕೊಳ್ಳುವುದು, ಉತ್ಸಾಹವಿಲ್ಲದ ನೀರಸ ಭಂಗಿಗಳು.. ಒಂದು ಕ್ಷಣಕ್ಕೆ ತಮಾಷೆ ಅನಿಸಿ ನಗು ಉಕ್ಕಿಸಬಹುದು. ದೀರ್ಘಕಾಲೀನವಾಗಿ ಅದು ನಮ್ಮ ಬಗ್ಗೆ ನೆಗೆಟಿವ್‌ ಅಭಿಪ್ರಾಯಗಳಿಗೆ ಕಾರಣವಾಗುತ್ತದೆ.

೩. ಆತ್ಮವಿಶ್ವಾಸ
ಯಾವುದೇ ಕೆಲಸ ಕೊಟ್ಟರೂ ತಾನು ನಿಭಾಯಿಸಬಲ್ಲೆ ಎಂಬ ನಡೆನುಡಿಯೇ ಆಕೆಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಕಚೇರಿಯಲ್ಲಿರಲಿ, ಮನೆಯಲ್ಲಿರಲಿ, ತುಂಬು ಸಂಸಾರವನ್ನು ನಿಭಾಯಿಸಿಕೊಂಡು ಮಾಡುವ ಕೆಲಸಗಳಿರಬಹುದು ಆಕೆಯೆಡೆಗೆ ಒಂದು ಮೆಚ್ಚುಗೆಯ ನೋಟವನ್ನು ಬೀರುವಂತೆ ಮಾಡುತ್ತದೆ.

೪. ಸುಸಂಪನ್ನ ನಡೆನುಡಿ, ಗೌರವ
ಈ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತಗ್ಗಿಬಗ್ಗಿ ನಡೆಯಬೇಕು ಎಂಬುದನ್ನು ತಲೆತಲಾಂತರಗಳಿಂದ ಸಂಸ್ಕೃತಿಯ ಭಾಗವೋ ಎಂಬಂತೆ ಕಲಿಸಿಕೊಂಡೇ ಬರಲಾಗಿದೆ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ಓದು, ಬರೆಹ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಎಂದು ಮುಂದುವರಿದಿದ್ದಾಳೆ. ಇತರರಿಗೆ ಗೌರವಿಸಿ ತಾನು ಗೌರವ ಪಡೆದುಕೊಳ್ಳುವುದು ಹೇಗೆಂದು ಅವಳಿಗೆ ಚೆನ್ನಾಗಿ ಗೊತ್ತಿದೆ. ಆಚಾರ ವಿಚಾರಗಳನ್ನು ಗೌರವಿಸುತ್ತಲೇ ತಾನು ಬೆಳೆಯುವುದನ್ನೂ ಕಲಿತಿದ್ದಾಳೆ. ಅದೇ ಆಕೆಯ ಸೌಂದರ್ಯವನ್ನು ನೂರ್ಮಡಿಸುತ್ತದೆ.

೫. ಖಚಿತ ಮಾತು
ಮಾತಿನಲ್ಲಿರುವ ಖಚಿತತೆ ನಮ್ಮ ಆತ್ಮವಿಶ್ವಾಸವನ್ನು ತೋರುತ್ತದೆ. ನಮ್ಮ ನಂಬಿಕೆಗಳು, ತಿಳಿವಳಿಕೆಗಳನ್ನು ಸ್ಪಷ್ಟವಾಗಿ ಹೇಳಬೇಕಾದ ಸಂದರ್ಭದಲ್ಲಿ ಅಧೀರರಾಗದೆ ಪ್ರಸ್ತುತ ಪಡಿಸಬಹುದಾದ ಆತ್ಮವಿಶ್ವಾಸ, ಚಾಕಚಕ್ಯತೆಯೂ ನಮ್ಮ ಆಕರ್ಷಕ ವ್ಯಕ್ತಿತ್ವದ ಮೂಲ ಗುಟ್ಟು ಎಂಬುದು ನೆನಪಿರಲಿ. ಇದರ ಅರ್ಥ, ನಮ್ಮ ವಾದವನ್ನು ಮಂಡಿಸುತ್ತಾ ಎಲ್ಲೆಡೆ ಜಗಳಗಂಟರಾಗಬೇಕು ಎಂದಲ್ಲ. ಎಲ್ಲಿ, ಹೇಗೆ, ವಸ್ತುನಿಷ್ಠವಾಗಿ ವಿಷಯ ಮಂಡಿಸಬಹುದು ಎಂಬುದರ ಸ್ಪಷ್ಟ ಕಲ್ಪನೆಯೇ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.

೬.ಇತರರಿಗೆ ಮಾದರಿಯಾಗಿ
ನಮ್ಮ ವ್ಯಕ್ತಿತ್ವ, ಮಾಡುವ ಕೆಲಸ ಒಂದಿಷ್ಟು ಇತರೆ ಮಹಿಳೆಯರಿಗೆ ಸ್ಫೂರ್ತಿಯಾಗುವಂತಿದ್ದರೆ ಅದು ಆಕೆಯ ಗೆಲುವು. ಆಕೆಯ ಆಕರ್ಷಕ ವ್ಯಕ್ತಿತ್ವದ ಗೆಲುವು. ಮಹಿಳೆ ಕುಟುಂಬದ ಕಣ್ಣು ಎಂಬುದು ನಿಜವಾದಲ್ಲಿ, ಆಕೆ ಸಮಾಜದ ಕಣ್ಣೂ ಹೌದು. ಮಾದರಿ ವ್ಯಕ್ತಿತ್ವವೇ ಒಂದು ಹೆಣ್ಣಿನ ಸೌಂದರ್ಯದ ನಿಜವಾದ ಗುಟ್ಟು.

ಇದನ್ನೂ ಓದಿ | Beauty Care: ತ್ವಚೆಯ ಸೌಂದರ್ಯ ಹೆಚ್ಚಿಸುವ ಸ್ಟ್ರಾಬೆರಿ

Exit mobile version