Site icon Vistara News

ಹೆಣ್ಣು ಮಕ್ಕಳೇ ಗಮನಿಸಿ: 40ರ ನಂತರ ದೇಹ ತೂಕ ಯಾಕೆ ಇಳಿಯಲ್ಲ?

woman diet

ಮಹಿಳೆಯೇ ಆಗಲಿ, ಪುರುಷನೇ ಆಗಲಿ, ಗೊತ್ತೇ ಆಗದಂತೆ ಏರಿಸಿಕೊಂಡ ತೂಕವನ್ನು ಇಳಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಮನೆ- ಮಕ್ಕಳೆಂಬ ಏನೇನೋ ಸಂಸಾರದ ಜವಾಬ್ದಾರಿಗಳು, ವಿಪರೀತ ಕೆಲಸದ ಒತ್ತಡ, ಕುಟುಂಬದ ಹಿರಿಯ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ಸೇರಿದಂತೆ ಎಲ್ಲವನ್ನು ಒಂದೇ ತಕ್ಕಡಿಯಲ್ಲಿಟ್ಟು ಸಂಭಾಳಿಸಿಕೊಂಡು 40 ದಾಟುವಷ್ಟರಲ್ಲಿ ಸೊಂಟದ ಸುತ್ತ ಬೊಜ್ಜು ಬಂದು ಕೂತಾಗಿರುತ್ತದೆ. ಚೆನ್ನಾಗಿ ತಿಂದುಂಡು ಆರಾಮವಿದ್ದಾಗಲೇ ಬಳುಕುವ ಬಳ್ಳಿಗಳಂತಿದ್ದ ದೇಹಗಳೆಲ್ಲ 40 ದಾಟುತ್ತಲೇ ಬೊಜ್ಜು ಬರಿಸಿಕೊಂಡು ಜೀವನೋತ್ಸಾಹ ಕಳೆದುಕೊಳ್ಳುತ್ತವೆ. ಬಹಳ ಮಂದಿಯ ಸಮಸ್ಯೆ ಎಂದರೆ, ಏನೇ ಕಸರತ್ತು ಮಾಡಿದರೂ ತೂಕ ಇಳಿಸೋದು ಕಷ್ಟವಾಗುತ್ತಿದೆ ಎಂಬುದು.

ವಯಸ್ಸಾಗುತ್ತಾ ಆಗುತ್ತಾ ದೇಹ ಹಲವಾರು ಬದಲಾವಣೆಗಳನ್ನು ಕಾಣುತ್ತದೆ. ತೂಕ ಏರಿಕೆಯೂ ಇದರಲ್ಲಿ ಬಹುಮುಖ್ಯವಾದದ್ದು. ಇವಕ್ಕೆ ವಯಸ್ಸಿನ ಕಾರಣವೂ ಒಂದಾದರೆ, ಇನ್ನೂ ಕೆಲವು ಮಹಿಳೆಯರ ಹಾರ್ಮೋನಿನ ವೈಪರೀತ್ಯದಿಂದಲೂ ಆಗಬಹುದು. ಮೆನೋಪಾಸ್‌ ಕೂಡಾ ಇಂತಹ ತೂಕ ಹೆಚ್ಚಳದ ಪ್ರಮುಖ ಕಾರಣಗಳಲ್ಲೊಂದು.

ಪ್ರತಿನಿತ್ಯ ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರವೂ ಬಹಳ ಮುಖ್ಯ. ಮಹಿಳೆಯರಲ್ಲಿ 40ರ ನಂತರ ದಿಢೀರ್‌ ತೂಕ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಅವರ ಜೀರ್ಣಕ್ರಿಯೆ ನಿಧಾನಗತಿಯತ್ತ ಸಾಗುವುದು. ಸಣ್ಣ ವಯಸ್ಸಿನಲ್ಲಿ ಕರಗಿದಷ್ಟು ಸುಲಭದಲ್ಲಿ ಆಹಾರ 40ರ ನಂತರದ ವಯಸ್ಸಿನಲ್ಲಿ ಕರಗದು. 40ಕ್ಕೂ ಮೊದಲು ಕ್ಯಾಲರಿ ಕರಗಿಸಿಕೊಂಡಷ್ಟು ವೇಗವಾಗಿ ಈ ವಯಸ್ಸಿನಲ್ಲಿ ಕರಗಿಸೋದು ಸ್ವಲ್ಪ ಕಷ್ಟ. ಹೀಗಾಗಿ ಮಹಿಳೆ ನಿಯಮಿತ ವ್ಯಾಯಾಮ ಮಾಡಿಕೊಂಡಿದ್ದರೂ ಕೂಡಾ 40ರ ನಂತರ ಸೊಂಟದ ಸುತ್ತ ಬೊಜ್ಜು ಶೇಖರವಾಗಲು ಆರಂಭವಾಗುತ್ತದೆ.

ಹಾಗಾದರೆ, ಆದಷ್ಟೂ 40ರ ನಂತರವೂ ಆರೋಗ್ಯ ಕಾಯ್ದುಕೊಂಡು ಫಿಟ್‌ ಹಾಗೂ ಚುರುಕಾಗಿರಲು ಮಹಿಳೆ ಏನೇನು ಮಾಡಬಹುದು ಎಂಬುದರೆಡೆಗೆ ಗಮನ ನೀಡಿದರೆ ಮೊದಲು ಸಿಗುವ ಉತ್ತರ ಸಮತೋಲಿತ ಆಹಾರ.

1. 40ರ ನಂತರ ನಮಗೆ ಯಾವೆಲ್ಲ ಆಹಾರ ಹಾಗೂ ಆಹಾರಕ್ರಮದಿಂದ ನಮ್ಮನ್ನು ನಾವು ದೂರವಿಡಬೇಕು ಎಂಬುದರ ಸ್ಪಷ್ಟ ಅರಿವಿರಬೇಕು. ಸಕ್ಕರೆ, ಎಣ್ಣೆತಿಂಡಿಗಳು, ಕೆಫಿನ್‌ಯುಕ್ತ ಪೇಯಗಳಿಗೆ ಟಾಟಾ ಹೇಳುವುದು ಉತ್ತಮ. ಮುಖ್ಯ ಆಹಾರದ ನಡುವೆ ಹಸಿವಾದಲ್ಲಿ ಕುರುಕಲು ತಿಂಡಿಗಳಿಗೆ ಬದಲಾಗಿ ಬಾದಾಮಿ, ವಾಲ್‌ನಟ್‌, ಸೂರ್ಯಕಾಂತಿ ಬೀಜ ಮತ್ತಿತರ ಬೀಜಗಳನ್ನು ತಿನ್ನಬಹುದು.

2. ಪ್ರತಿ ದಿನ ಕನಿಷ್ಟ 30 ನಿಮಿಷಗಳ ವ್ಯಾಯಾಮ ಅತೀ ಅಗತ್ಯ. ಅದು ಯೋಗವಾದರೂ ಸರಿಯೇ. ಸಂಸಾರದ ಒತ್ತಡ, ಕುಟುಂಬ ನಿರ್ವಹಣೆ, ಕೆಲಸದೊತ್ತಡ, ಇತರೇ ಜವಾಬ್ದಾರಿಗಳು, ಈ ವ್ಯಾಯಾಮಕ್ಕೆ ಸಮಯ ಹೊಂದಿಸುವಲ್ಲಿ ತೀವ್ರ ಪೈಪೋಟಿ ನೀಡಿದರೂ, ದಿನದ 24 ಗಂಟೆಗಳಲ್ಲಿ ಕನಿಷ್ಟ 30 ನಿಮಿಷ ದೇಹಕ್ಕೆ ವ್ಯಾಯಾಮ ನೀಡುವುದು ಊಟ ನಿದ್ದೆಯಷ್ಟೇ ಅಗತ್ಯ ಎಂಬ ಸತ್ಯ ನಮಗೆ ಅರಿವಾಗಬೇಕು. ಇತರರ ಅಗತ್ಯಗಳನ್ನು ಪೂರೈಸುವಲ್ಲಿ ಮಹಿಳೆ ತೋರಿದಷ್ಟೇ ಉತ್ಸಾಹವನ್ನು ಆಕೆ ತನ್ನ ಆರೋಗ್ಯದತ್ತಲೂ ತೋರಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಎಷ್ಟೇ ಒತ್ತಡಗಳಿದ್ದರೂ ನಮಗಾಗಿ, ನಮ್ಮ ಆರೋಗ್ಯಕ್ಕಾಗಿ ಸಮಯ ಎತ್ತಿಡುವುದನ್ನು ನಾವು ಮರೆಯಬಾರದು.

3. 40ರ ನಂತರದ ಮಹಿಳೆಯ ಬಹುದೊಡ್ಡ ಸಮಸ್ಯೆ ಎಂದರೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್‌, ಕ್ಯಾಲ್ಶಿಯಂ, ಕಬ್ಬಿಣಾಂಶಗಳ ಪೂರೈಕೆ ದೇಹಕ್ಕೆ ಆಗದೆ ಇರುವುದು. ಹಾಗಾಗಿ ಕಾಲಕಾಲಕ್ಕೆ ವೈದ್ಯಪರೀಕ್ಷೆಗಳನ್ನು ನಡೆಸಿ, ಅಗತ್ಯ ಪೋಷಕಾಂಶಗಳನ್ನು ವೈದ್ಯರ ಸಲಹೆಯ ಮೇರೆಗೆ ಸ್ವೀಕರಿಸುವುದು ಒಳ್ಳೆಯದು.

ಇದನ್ನೂ ಓದಿ: World Food Safety Day: ನಿಮ್ಮ ಆಹಾರ ಆರೋಗ್ಯಕರ ಎನಿಸಬೇಕಾದರೆ…

4. ಪ್ರೊಟೀನ್‌ ಅವಶ್ಯಕತೆಯೂ ದೇಹಕ್ಕೆ ಸಾಕಷ್ಟಿರುತ್ತದೆ. ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ಪ್ರೊಟೀನ್‌ಯುಕ್ತ ಆಹಾರವನ್ನು, ಬೇಳೆಕಾಳುಗಳ ಬಳಕೆಯನ್ನು ಹೆಚ್ಚು ಮಾಡಿ ಸಮತೋಲನ ಕಾಯ್ದುಕೊಳ್ಳಬೇಕು. ಹಣ್ಣು ತರಕಾರಿಗಳನ್ನು ದಿನನಿತ್ಯದ ಆಹಾರದಲ್ಲಿ ಹೆಚ್ಚಿಗೆ ಬಳಸಬೇಕು.

5. ನಮ್ಮ ಆಹಾರದ ಮೇಲೊಂದು ನಿಗಾ ಇರಲಿ. ಎಲ್ಲಿ ಯಾವಾಗ, ಏನು ಎಷ್ಟು ತಿನ್ನುತ್ತಿದ್ದೇನೆಂಬ ಅರಿವು ಇದ್ದಲ್ಲಿ, ಸಮತೋಲಿತ ಆಹಾರ ಸುಲಭವಾಗಬಹುದು.

6. ನಿಯಮಿತ ನಿದ್ದೆಯೂ ಕೂಡಾ ತೂಕ ಇಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿದ್ದೆ ಕಡಿಮೆಯಾದಷ್ಟೂ ತಿನ್ನುವ ಬಯಕೆ ಹೆಚ್ಚಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ತಿನ್ನುವ ಮೂಲಕ ಆರೋಗ್ಯ, ತೂಕ ಏರುಪೇರಾಗುತ್ತದೆ. ಮಧ್ಯಾಹ್ನ ನಿದ್ದೆ ಮಾಡುತ್ತಿದ್ದರೆ ಅದನ್ನು ತಪ್ಪಿಸಿ. ಎಂದಿಗಿಂತ ಮೊದಲೇ ರಾತ್ರಿ ನಿದ್ದೆ ಮಾಡಿ. ರಾತ್ರಿ ಹೆಚ್ಚು ಹೊತ್ತು ಸಿನೆಮಾ ನೋಡುವುದು, ಗ್ಯಾಜೆಟ್‌ಗಳ ಮುಂದೆ ಕೂತಿರುವುದೂ ಕೂಡ ಈ ಸಮಸ್ಯೆ ಹೆಚ್ಚಾಗಿರುವುದರ ಪ್ರಮುಖ ಕಾರಣಗಳಲ್ಲೊಂದು.

ಇದನ್ನೂ ಓದಿ: ಯುವಕರೇ ಎಚ್ಚೆತ್ತುಕೊಳ್ಳಿ, ನಿಮ್ಮ ಅರಿವೇ ಇಲ್ಲದೆ ಆಗಿರಬಹುದು Heart Attack!

Exit mobile version