ಟೆಸ್ಟೋಸ್ಟೀರಾನ್ (testosterone) ಹಾರ್ಮೋನು ಎಂದ ಕೂಡಲೇ ನೆನಪಾಗುವುದು ಪುರುಷರು, ಯಾಕೆಂದರೆ ಇದು ಪುರುಷರ ಮುಖ್ಯವಾದ ಸೆಕ್ಸ್ ಹಾರ್ಮೋನು (sex hormone) . ಆದರೆ, ಮಹಿಳೆಯರ ದೇಹವೂ ಟೆಸ್ಟೋಸ್ಟೀರಾನ್ ಹಾರ್ಮೋನನ್ನು ಉತ್ಪತ್ತಿ ಮಾಡುತ್ತದೆ. ಆದರೆ ಇದು ಎಷ್ಟು ಪ್ರಮಾಣದಲ್ಲಿದೆ ಎನ್ನುವುದು ಮಹಿಳೆಯರ ಆರೋಗ್ಯದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಟೆಸ್ಟೋಸ್ಟೀರಾನ್ ಪ್ರಮಾಣ ಮಹಿಳೆಯರ ದೇಹದಲ್ಲಿ ಅತೀ ಹೆಚ್ಚಾದರೆ ಹಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. ಟೈಪ್ 2 ಮಧುಮೇಹ, ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ (ಪಿಸಿಒಎಸ್) ಇವುಗಳಲ್ಲಿ ಪ್ರಮುಖವಾದವು. ಹಾಗಾಗಿ ಈ ಹಾರ್ಮೋನನ್ನು ಸರಿಯಾದ ಮಟ್ಟಕ್ಕೆ ಇಳಿಸಿಕೊಳ್ಳುವುದೂ ಕೂಡಾ ಬಹುಮುಖ್ಯವಾಗುತ್ತದೆ. ನಮ್ಮ ದಿನನಿತ್ಯದ ಆಹಾರದಲ್ಲೂ ಕೊಂಚ ಬದಲಾವಣೆ ಮಾಡಿಕೊಂಡರೆ (women health tips) ಟೆಸ್ಟೋಸ್ಟೀರಾನಿನ ಪ್ರಮಾಣವನ್ನು ತಗ್ಗಿಸುವಂತೆ ಮಾಡಬಹುದು.
ಸಂಶೋಧನೆಗಳ ಪ್ರಕಾರ, ಟೆಸ್ಟೋಸ್ಟೀರಾನ್ ಹಾರ್ಮೋನು, ಇಸ್ಟ್ರೋಜನ್ ಜೊತೆಗೆ ಸೇರಿ ಎಲುಬಿನ ಆರೋಗ್ಯ, ಮಾನಸಿಕ ಸ್ವಾಸ್ಥ್ಯದಲ್ಲೂ ಮುಖ್ಯ ಪಾತ್ರ ವಹಿಸುತ್ತದೆ. ಆರೋಗ್ಯವಂತ ಪುರುಷರಲ್ಲಿ ಈ ಟೆಸ್ಟೋಸ್ಟೀರಾನಿನ ಪ್ರಮಾಣ 264ರಿಂದ 916 ಎನ್‌ಜಿ/ಡಿಎಲ್‌ವರೆಗೆ ಇರುತ್ತದೆ. ಮಹಿಳೆಯರಲ್ಲಿ ಇದು 15ರಿಂದ 46 ಎನ್‌ಜಿ/ಡಿಎಲ್‌ವರೆಗೆ ಇರುತ್ತದೆ. ಇದಕ್ಕಿಂತ ಹೆಚ್ಚಾದರೆ ಮಹಿಳೆಯರಲ್ಲಿ ಮುಖದಲ್ಲಿ ಅತಿಯಾದ ಕೂದಲ ಬೆಳವಣಿಗೆ ಹೆಚ್ಚುವುದು, ಮೊಡವೆ ಸಮಸ್ಯೆ, ಋತುಚಕ್ರದಲ್ಲಿ ಏರುಪೇರು, ಅಲ್ಲಲ್ಲಿ ಚರ್ಮ ಕಪ್ಪಾಗುವುದು, ವಿಪರೀತ ಕೂದಲು ಉದುರುವುದು, ಬೊಕ್ಕತಲೆ ಸಮಸ್ಯೆ, ಅತಿಯಾದ ಕೋಪ ಮತ್ತಿತರ ಸಮಸ್ಯೆಗಳನ್ನು ತಂದೊಡ್ಡಬಹುದು. ಇಂತಹ ವೈಪರೀತ್ಯಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇದಲ್ಲದೆ, ಇತ್ತೀಚೆಗೆ ಮಹಿಳೆಯರನ್ನು ಅತಿಯಾಗಿ ಕಾಡುವ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್‌ಗೂ ಕೂಡಾ ಹಾರ್ಮೋನಿನ ಹೆಚ್ಚಳವೂ ಕಾರಣವಾಗಬಹುದು. ಕಾನ್‌ಜೆನಿಟಲ್ ಅಡ್ರೆನಾಲಿನ್ ಹೈಪರ್‌ಪ್ಲಾಸಿಯಾ (ಸಿಎಹೆಚ್), ಮಹಿಳೆಯ ಎದೆ, ಮುಖ, ಬೆನ್ನು ಹಾಗೂ ಇತರ ಭಾಗಗಳಲ್ಲಿ ಅಧಿಕವಾಗುವ ಕೂದಲ ಬೆಳವಣಿಗೆಯ ಹಿರ್ಸುಟಿಸಂಗೂ ಇದೇ ಕಾರಣವಾಗುತ್ತದೆ.
ಈ ಹಾರ್ಮೋನಿನ ಉತ್ಪಾದನೆಯನ್ನು ಕಡಿಮೆಗೊಳಿಸಲು ಚಿಕಿತ್ಸೆಯೂ ಇದೆ. ಆದರೆ, ಆರಂಭದಲ್ಲಿ, ನಾವು ತಿನ್ನುವ ಆಹಾರದ ಮೂಲಕವೂ ಈ ಹಾರ್ಮೋನನ್ನು ಸಮತೋಲನದಲ್ಲಿಡಲು ಸಾಧ್ಯವಿದೆ. ಯಾವ ಆಹಾರಗಳನ್ನು ನಿಯಮಿತವಾಗಿ ಬಳಸುವುದರ ಮೂಲಕ ಹಾರ್ಮೋನಿನ ಅತಿಯಾದ ಉತ್ಪತ್ತಿಯನ್ನು ಸಮತೋಲನಲ್ಲಿಟ್ಟುಕೊಳ್ಳಬಹುದು ನೋಡೋಣ.
1. ಸೋಯಾಬೀನ್: ಸೋಯಾಬೀನ್‌ಗೆ ಟೆಸ್ಟೋಸ್ಟೀರಾನ್ ಹಾರ್ಮೋನನ್ನು ಕಡಿಮೆಗೊಳಿಸುವ ತಾಕತ್ತಿದೆ. ಸಂಶೋಧನೆಗಳ ಪ್ರಕಾರ 54 ದಿನಗಳ ಕಾಲ ನಿಯಮಿತವಾಗಿ ಸೋಯಾಬೀನ್ ಪ್ರೊಟೀನನ್ನು ಸೇವಿಸುತ್ತಿದ್ದ ಪುರುಷರಲ್ಲಿ ಟೆಸ್ಟೋಸ್ಟೀರಾನ್ ಇಳಿಕೆಯಾಗಿದೆ. ಹೀಗಾಗಿ ಸೋಯಾವನ್ನು ವಿವಿಧ ರೂಪದಲ್ಲಿ ಸೇವಿಸುತ್ತಾ ಬಂದಲ್ಲಿ ಮಹಿಳೆಯರು ಈ ಹಾರ್ಮೋನನ್ನು ಸಮತೋಲನಕ್ಕೆ ತರಬಹುದು.
2. ಪುದಿನ: ಹೊಟ್ಟೆಯ ಸಮಸ್ಯೆಗಳಿಗೆ ಪುದಿನ ಸೂದಿಂಗ್ ಏಜೆಂಟ್ ಆಗಿ ಕೆಲಸ ಮಾಡುವುದು ಎಲ್ಲರಿಗೂ ತಿಳಿದ ಅಂಶವಾದರೂ, ಟೆಸ್ಟೋಸ್ಟೀರಾನ್ ಲೆವೆಲನ್ನೂ ಇಳಿಸುವಲ್ಲಿ ಪುದಿನದ ಪಾತ್ರವಿದೆ. ಸುಮಾರು 30 ದಿನಗಳ ಕಾಲ ಪುದಿನ ಚಹಾವನ್ನು ಸೇವಿಸುತ್ತಾ ಬಂದ ಪಿಸಿಒಎಸ್ ಸಮಸ್ಯೆಯಿದ್ದ ಮಹಿಳೆಯರಲ್ಲಿ ಟೆಸ್ಟೋಸ್ಟೀರಾನ್ ಇಳಿಕೆಯಾಗಿದ್ದು ಸಂಶೋಧನೆಯಿಂದ ದೃಢಪಟ್ಟಿದೆ.
೩. ಯಷ್ಟಿಮಧು (ಮುಲೇತಿ): ಚೀನಾದ ವೈದ್ಯಕೀಯ ನಂಬಿಕೆಗಳ ಪ್ರಕಾರ ಲೈಕೋರೈಸ್ (ಯಷ್ಟಿಮಧು/ಮುಲೇತಿ) ಮಹಿಳೆಯರ ಋತುಚಕ್ರದ ಸಂಬಂಧೀ ತೊಂದರೆಗಳಿಗೆ ಹಲವು ಪರಿಹಾರ ಒದಗಿಸುತ್ತದೆ. ಋತುಚಕ್ರದ ಸಂದರ್ಭ ಯಷ್ಟಿಮಧುವಿನ ಬಳಕೆಯಿಂದ, ಈ ಸಂಬಂಧೀ ಸಮಸ್ಯೆಗಳಲ್ಲಿ ಬದಲಾವಣೆ ಕಂಡಿರುವುದು ಕೂಡಾ ಸಂಶೋಧನೆಗಳಿಂದ ದೃಢಪಟ್ಟಿದೆ. ಇದರ ನಿಯಮಿತ ಸೇವನೆಯಿಂದ ಈ ಹಾರ್ಮೋನಿನ ಇಳಿಕೆ ಮೊದಲ ತಿಂಗಳಲ್ಲೇ ಕಂಡುಬಂದಿದೆ.
ಇದನ್ನೂ ಓದಿ: Skin Care Tips: ಹೊಳಪಿನ ಚರ್ಮಕ್ಕೆ ಈ ಐದು ಬೀಜಗಳನ್ನು ಸೇವಿಸಿ!
4. ಮೀನು: ಒಮೆಗಾ ೩ ಫ್ಯಾಟಿ ಆಸಿಡ್ ಹೇರಳವಾಗಿರುವ ಮೀನಿಗೂ ಮಹಿಳೆಯರ ಆಂಡ್ರೋಜನ್ ಮಟ್ಟದ ಇಳಿಕೆಗೂ ಖಂಡಿತ ಸಂಬಂಧವಿದೆ. ಪಿಸಿಒಎಸ್‌ನ ಬೊಜ್ಜಿನ ತೊಂದರೆಯಿಂದ ಬಳಲುವ ಮಂದಿಗೂ ಒಮೆಗಾ 3 ಸಪ್ಲಿಮೆಂಟ್‌ಗಳು ಫಲ ನೀಡುತ್ತವೆ.
5. ಅಗಸೆ ಬೀಜ (ಫ್ಲ್ಯಾಕ್ ಸೀಡ್): ಅಗಸೆ ಬೀಜದ ನಿಯಮಿತ ಸೇವನೆ ಹೆಚ್ಚಿನ ಟೆಸ್ಟೋಸ್ಟೀರಾನ್ ಹಾರ್ಮೋನನ್ನು ಇಳಿಕೆಯತ್ತ ಕೊಂಡೊಯ್ಯುತ್ತದೆ. ವರದಿಗಳ ಪ್ರಕಾರ ನಾಲ್ಕು ತಿಂಗಳ ಕಾಲ ಫ್ಲ್ಯಾಕ್‌ಸೀಡ್ ಸಪ್ಲಿಮೆಂಟ್ ತೆಗೆದುಕೊಂಡವರಲ್ಲಿ ಹಾರ್ಮೋನಿನ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ.
ಇದನ್ನೂ ಓದಿ: Health Tips: ನಿಮ್ಮ ಬಾಯಿಚಪಲದ ನಿಗ್ರಹ ನಿಮ್ಮ ಕೈಯಲ್ಲಿದೆಯಾ?