Site icon Vistara News

Women’s Day 2023: ಮಹಿಳೆಯರನ್ನು ಸದ್ದಿಲ್ಲದೆ ಕಾಡುವ 5 ಕಾಯಿಲೆಗಳಿವು

Womens Day 2023

ಮಲ್ಟಿಟಾಸ್ಕಿಂಗ್‌ ಎಂಬುದು ಇತ್ತೀಚಿನ ಹೆಸರು. ಹಾಗೆಂದು ಹಲವಾರು ಕೆಲಸಗಳನ್ನು ಒಟ್ಟೊಟ್ಟಿಗೆ ನಿಭಾಯಿಸುವ ಕಲ್ಪನೆ ಹೊಸದಲ್ಲ. ಆಫೀಸಿನ ಕೆಲಸ, ಮನೆಯಲ್ಲಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುವ ಹೊಣೆಗಾರಿಕೆ, ತಾಯ್ತನ ಜವಾಬ್ದಾರಿಗಳು, ಸಾಮಾಜಿಕ ಒತ್ತಡಗಳು- ಇವೆಲ್ಲ ಮಹಿಳೆಯರ ಪಾಲಿಗೆ ಎಂದಿನಿಂದಲೋ ಇದ್ದಂಥವು- ಮಲ್ಟಿಟಾಸ್ಕಿಂಗ್‌ ಎಂಬ ಪದ ಹುಟ್ಟುವ ಮೊದಲಿನಿಂದಲೇ.

ಹೀಗೆ ಎಲ್ಲದರ ಹೊಣೆ ಹೊರುವವರಿಗೆ ತಮ್ಮ ಬಗೆಗಿನ ಕಾಳಜಿಗೆ ಸಮಯವೇ ದೊರೆಯುದೆ ಹೋಗುವುದು ಎಲ್ಲರಿಗೂ ಗೊತ್ತಿರುವ ರಹಸ್ಯ. ರಕ್ತದೊತ್ತಡ, ಮಧುಮೇಹದಂಥ ಹಲವಾರು ಸಮಸ್ಯೆಗಳು ಸದ್ದಿಲ್ಲದೆ ಬಂದು ಅಮರಿಕೊಳ್ಳುತ್ತವೆ. ಸಮಸ್ಯೆ ಇದೆ ಎಂಬುದು ತಿಳಿಯುವಷ್ಟರಲ್ಲಿ ರೋಗ ಸಾಕಷ್ಟು ಉಲ್ಭಣಿಸಿರುತ್ತದೆ, ರೋಗಿ ನರಳುವಂತಾಗುತ್ತದೆ. ಕೆಲವೊಮ್ಮೆ ಪ್ರಾಣಘಾತುಕವೂ ಆಗಬಹುದು. ಹೀಗೆ ಗೊತ್ತಾಗದಂತೆ ಬಂದೆರಗುವ ಐದು ರೋಗಗಳ ಬಗ್ಗೆ ಇಲ್ಲಿದೆ ಮಾಹಿತಿ. ಇವುಗಳ ಬಗ್ಗೆ ಎಚ್ಚರ ವಹಿಸಿ, ಆರೋಗ್ಯ ರಕ್ಷಿಸಿಕೊಳ್ಳಿ.

ಅಂಡಾಶಯದ ಕ್ಯಾನ್ಸರ್‌

ಸುಮಾರು 75 ಮಹಿಳೆಯರಲ್ಲಿ ಒಬ್ಬರಿಗೆ ಈ ಅಪಾಯಕಾರಿ ರೋಗ ಕಾಣಿಸಿಕೊಳ್ಳುತ್ತಿದೆ. ರೋಗ ಉಲ್ಭಣಿಸುವವರೆಗೆ ತನ್ನ ಇರುವಿಕೆಯನ್ನೇ ತೋರಿಸಿಕೊಳ್ಳದಿರುವ ಈ ರೋಗ ಪತ್ತೆಯಾಗುವಷ್ಟರಲ್ಲಿ ಚಿಕಿತ್ಸೆಯೇ ಕಷ್ಟ ಎನ್ನುವಂತಾಗುತ್ತಿದೆ. ಪ್ರಾರಂಭದಲ್ಲಿ ಪತ್ತೆಯಾದರೆ ಮಹಿಳೆಯರು ಸಂಪೂರ್ಣ ಗುಣಮುಖರಾಗುವುದಕ್ಕೆ ಸಾಧ್ಯ. ಆದರೆ ರೋಗ ಮುಂದುವರಿದರೆ, ಮುಂದಿನ ಐದು ವರ್ಷ ಬದುಕುವ ಸಾಧ್ಯತೆಯೂ ಶೇ. 46ರಷ್ಟು ಮಾತ್ರ. ಈ ರೋಗದ ಲಕ್ಷಣಗಳು ಕೆಲವೊಮ್ಮೆ ಎಷ್ಟೊಂದು ಸೌಮ್ಯವಾಗಿರುತ್ತವೆ ಎಂದರೆ, ವೈದ್ಯರುಗಳನ್ನೂ ಯಾಮಾರಿಸುವಷ್ಟು! ಹಾಗಾಗಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ.

ಹೃದ್ರೋಗಗಳು

ದೇಹದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ಗ್ರಹಿಸದಿರುವ ಅಥವಾ ಗ್ರಹಿಸಿದರೂ ನಿರ್ಲಕ್ಷ ಮಾಡುವ ಸ್ವಭಾವ ಮಹಿಳೆಯರದ್ದು. ಹಾಗಾಗಿ ಎದೆ ಅಥವಾ ಭುಜ ನೋವು, ಉಸಿರು ಹಿಡಿದಂತಾಗುವುದು, ಹೊಟ್ಟೆ ತೊಳೆಸುವುದು, ಆಯಾಸ- ಇಂಥ ಲಕ್ಷಣಗಳನ್ನು ನಿರ್ಲಕ್ಷಿಸುವಂತಿಲ್ಲ. ಅದರಲ್ಲೂ ಕುಟುಂಬದ ಹತ್ತಿರದ ಸಂಬಂಧಿಗಳಲ್ಲಿ ಇಂಥ ಕಾಯಿಲೆಗಳಿದ್ದರೆ ಎಚ್ಚರ ವಹಿಸುವುದು ಸೂಕ್ತ.

ಲೂಪಸ್

ಇದೊಂದು ಆಟೊಇಮ್ಯೂನ್‌ ಕಾಯಿಲೆ. ಆಟೊಇಮ್ಯೂನ್‌ ಕಾಯಿಲೆಯೆಂದರೆ, ತನ್ನದೇ ದೇಹದ ಅಂಗಗಳನ್ನು ಆಗಂತುಕನೆಂದು ತಿಳಿದ ದೇಹದ ಪ್ರತಿರೋಧಕ ವ್ಯವಸ್ಥೆ, ಅದರ ಮೇಲೆ ದಾಳಿ ಮಾಡುತ್ತದೆ. ಇಂಋ ಕಾಯಿಗೆಳಲ್ಲಿ ಸಾಮಾನ್ಯವಾಗಿ, ಶರೀರದ ಪ್ರತಿರೋಧಕ ಶಕ್ತಿಯನ್ನು ತಗ್ಗಿಸುವಂಥ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಲೂಪಸ್ ದೇಹದ ಯಾವುದೇ ಭಾಗವನ್ನು ಬಾಧಿಸಬಹುದಾದ, ಗುಣಪಡಿಸಲಾಗದ ರೋಗವಿದು. ‌ಆಗಾಗ ಜ್ವರ, ಕೀಲು ನೋವು, ಬಾಯಿ ಹುಣ್ಣು, ಬಿಸಿಲಿಗೆ ಒಡ್ಡಿದ ಭಾಗಗಳಲ್ಲಿ ಕೆಂಪು ದದ್ದುಗಳು, ಮುಖದ ಮೇಲೆ ಚಿಟ್ಟೆಯಾಕಾರದ ದದ್ದುಗಳು, ಕೂದಲು ಉದುರುವುದು, ಮೈಗ್ರೇನ್- ಇವೆಲ್ಲಾ ಲೂಪಸ್‌ನ ಲಕ್ಷಣಗಳು. ಪುರುಷರಿಗಿಂತ ಮಹಿಳೆಯರನ್ನೇ ಹೆಚ್ಚಾಗಿ ನರಳಿಸುವ ರೋಗವಿದು.

ಮಧುಮೇಹ

ಇದಂತೂ ಆಬಾಲವೃದ್ಧರಾದಿಯಾಗಿ ಯಾರನ್ನೂ ಯಾವಾಗಲೂ ಬಾಧಿಸಬಹುದಾದ ರೋಗ. ಈ ಬಗ್ಗೆ ಎಲ್ಲೆಡೆ ಬೇಕಾದಷ್ಟು ಮತ್ತು ಬೇಕಾಬಿಟ್ಟಿ ಮಾಹಿತಿಗಳು ಲಭ್ಯವಿರುವುದರಿಂದ, ಸೂಕ್ತ ಚಿಕಿತ್ಸೆಯಂತೂ ದೊರೆಯದೆ ಹೋಗುವ ಪ್ರಶ್ನೆಯಿಲ್ಲ. ಆದರೆ ರೋಗದ ಲಕ್ಷಣಗಳನ್ನು ಪ್ರಾರಂಭದಲ್ಲೇ ಗ್ರಹಿಸಿದರೆ, ಮಧುಮೇಹ ಉಲ್ಭಣಿಸಿ ದೇಹದ ಇತರ ಅಂಗಗಳು ಜಖಂ ಆಗದಂತೆ ರಕ್ಷಿಸಿಕೊಳ್ಳುವುದು ಸಾಧ್ಯವಿದೆ. ಮಾತ್ರವಲ್ಲ, ಸರಿಯಾದ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ಹತೋಟಿಯಲ್ಲಿ ಇಡುವುದು ಅಸಾಧ್ಯವಲ್ಲ.

ಪಾರ್ಕಿನ್ಸನ್‌ ಕಾಯಿಲೆ

ನರ ಸಂಬಂಧಿ ಸಂಕೀರ್ಣ ಕಾಯಿಲೆಯಿದು. ಒಮ್ಮೆ ಈ ಕಾಯಿಲೆ ಆರಂಭವಾದರೆ ಅದನ್ನು ಸರಿಪಡಿಸಲು ಸಾಧ್ಯವಾಗದು. ಕೈ, ಕಾಲು, ತಲೆಗಳೆಲ್ಲಾ ತಮ್ಮಷ್ಟಕ್ಕೆ ಕಂಪಿಸುವುದಕ್ಕೆ, ನಡುಗುವುದಕ್ಕೆ ಪ್ರಾರಂಭಿಸುತ್ತವೆ. ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ರೋಗಿಯ ಚಲನ-ವಲನ, ಸಂವಹನಕ್ಕೆ ಸಮಸ್ಯೆಯಾಗಬಹುದು. ಮೆದುಳಿನ ನರಗಳು ನಶಿಸುವುದಕ್ಕೆ ಪ್ರಾರಂಭವಾದಾಗ, ಮೊದಲಿಗೆ ಲಕ್ಷಣಗಳು ಸೌಮ್ಯವಾಗಿಯೇ ಇರುತ್ತವೆ. ಕ್ರಮೇಣ ಕೈಕಾಲುಗಳ ಕಂಪನ ವಿಷಮಿಸುತ್ತದೆ. ಆನುವಂಶಿಕವಾಗಿಯೂ ಬರಬಹುದಾದ ಇದನ್ನು ಗುಣಪಡಿಸುವಂಥ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ, ನಡುಕವನ್ನು ಹತೋಟಿಯಲ್ಲಿಟ್ಟು ರೋಗಿಯ ಬದುಕನ್ನು ಆದಷ್ಟೂ ಸಾಮಾನ್ಯಗೊಳಿಸುವಂಥ ಔಷಧಿಗಳು ಲಭ್ಯವಿದೆ.

ಇದನ್ನೂ ಓದಿ: International Women’s Day : ಕಾರ್ಪೋರೇಟ್‌ ವಲಯಕ್ಕೆ ಕಣ್ಮಣಿಗಳಾಗಿ ದೇಶಕ್ಕೆ ಕೀರ್ತಿ ಈ ಮಹಿಳಾ ಉದ್ಯಮಿಗಳು

Exit mobile version