Site icon Vistara News

ಸ್ವಾತಂತ್ರ್ಯ ಅಮೃತ ಮಹೋತ್ಸವ | ಬ್ರಿಟಿಷರ ಗುಂಡಿಗೆ ಎದೆ ಕೊಟ್ಟಿದ್ದ ಹುಬ್ಬಳ್ಳಿಯ ಧೀರ ಬಾಲಕ

Azadi ka amrit Mahotsav Naryan doni hubli

ಪರಶುರಾಮ್ ತಹಸೀಲ್ದಾರ್, ಹುಬ್ಬಳ್ಳಿ
ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಾಡಿನ ನೂರಾರು ಮಂದಿ ಬಲಿದಾನ ಮಾಡಿದ್ದಾರೆ. ಅವರಲ್ಲಿ ವೀರ ಬಾಲಕ ನಾರಾಯಣ ಡೋಣಿ ಕೂಡ ಒಬ್ಬರು. ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂದು ಗರ್ಜಿಸಿ ಗುಂಡೇಟಿಗೆ ಬಲಿಯಾಗಿದ್ದ ಗಂಡುಮೆಟ್ಟಿದ ನಾಡಿನ ವೀರ ಬಾಲಕ ನಾರಾಯಣ ಡೋಣಿ. ಆ ದೇಶ ಪ್ರೇಮಿ ಬಾಲಕನ ಅಪೂರ್ವ ತ್ಯಾಗವನ್ನು ಸರ್ಕಾರ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಸ್ಮರಿಸಿ ಗೌರವಿಸಬೇಕಿದೆ.

ಆಂಗ್ಲರೇ ಭಾರತ ಬಿಟ್ಟು ಹೋಗಿ ಎಂದು ಇಡೀ ದೇಶಕ್ಕೆ ದೇಶವೇ ಗರ್ಜಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ನಡೆದು ಈಗ್ಗೆ 80 ವರ್ಷ ಕಳೆದಿವೆ. ಅಂದು ಹುಬ್ಬಳ್ಳಿಯ ಬಾಲಕನೊಬ್ಬ ಬ್ರಿಟಿಷರ ಲಾಠಿ ಮತ್ತು ಬೂಟಿನ ಸದ್ದಿಗೆ ಹೆದರದೆ ಚಳವಳಿಯಲ್ಲಿ ಭಾಗಿಯಾಗಿದ್ದ. ದೇಶವನ್ನು ದಾಸ್ಯದ ಸಂಕೋಲೆಯಿಂದ ಬಿಡಿಸಲು ವೀರಮರಣವಪ್ಪಿದ ಬಾಲಕನ ಬಲಿದಾನವನ್ನುಈ ಸಂದರ್ಭದಲ್ಲಿ ನಾವು ಸ್ಮರಿಸೋಣ.

ಅದು 1942ರ ಆಗಸ್ಟ್‌ ಒಂಭತ್ತು. ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೊಟ್ಟಿದ್ದ ದೇಶ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಸಿಡಿದೆದ್ದಿತ್ತು.ಹುಬ್ಬಳ್ಳಿಯಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯ ಕಿಚ್ಚು ತೀವ್ರಗೊಂಡಿತ್ತು. ದೇಶವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಬೇಕು ಎನ್ನುವ ಕೂಗಿಗೆ ಧ್ವನಿಗೂಡಿಸಿದ್ದ ಹುಬ್ಬಳ್ಳಿಯ ಜನ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಘೋಷಣೆಗಳನ್ನು ಕೂಗುತ್ತಾ ದುರ್ಗದಬೈಲ್‌ ವೃತ್ತಕ್ಕೆ ಮೆರವಣಿಗೆಯಲ್ಲಿ ಸಾಗಿದ್ದರು. ಬ್ರಾಡ್‌ವೇ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಪುಟ್ಟ ಬಾಲಕನೊಬ್ಬ ರಾಷ್ಟ್ರಧ್ವಜ ಹಿಡಿದು ಮೆರವಣಿಗೆಗೆ ಜತೆಯಾಗಿದ್ದ. ಮನೆಯವರು, ದೊಡ್ಡವರು ಬೇಡವೆಂದರೂ ಕೇಳದೆ ಹೋರಾಟದ ಮುಂಚೂಣಿಯಲ್ಲಿ ಸಾಗಿದ್ದ ಪುಟ್ಟ ಬಾಲಕ. ಆತನ ಹೆಸರು ನಾರಾಯಣ ಡೋಣಿ. ತನ್ನ ಹದಿನಾಲ್ಕನೆಯ ವಯಸ್ಸಿನಲ್ಲಿ ದೇಶಪ್ರೇಮದ ಕಿಚ್ಚು ಅವನನ್ನು ಹೋರಾಟದಲ್ಲಿ ಭಾಗವಹಿಸುವಂತೆ ಮಾಡಿತ್ತು.

ದೇಶಪ್ರೇಮಿ ಬಾಲಕ ನಾರಾಯಣ ಡೋಣಿ ಭಾರತ್‌ ಮಾತಾ ಕೀ ಜೈ, ವಂದೇ ಮಾತರಂ, ಜೈ ಹಿಂದ್‌ ಎಂದು ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆಯಲ್ಲಿ ಸಾಗಿದ್ದ. ಭಾರೀ ಸಂಖ್ಯೆಯಲ್ಲಿ ಜನರು ಮೆರವಣಿಗೆ ಮೂಲಕ ಹುಬ್ಬಳ್ಳಿ ಶಹರ ಪೊಲೀಸ್‌ ಠಾಣೆಯ ಬಳಿ ತೆರಳುತ್ತಿದ್ದಂತೆ ಬ್ರಿಟಿಷ್ ಅಧಿಕಾರಿಗಳು ಬೆಚ್ಚಿ ಬಿದ್ದರು. ಬೃಹತ್‌ ಜನಸ್ತೋಮವನ್ನು ನಿಯಂತ್ರಿಸಲಾಗದೆ ಲಾಠಿ ಚಾರ್ಜ್‌ಗೆ ಆದೇಶಿಸಿದರು. ಲಾಠಿ ಏಟನ್ನು ಲೆಕ್ಕಿಸದೆ ಹಲವು ಸ್ವಾತಂತ್ರ್ಯ ವೀರರು ಮುನ್ನುಗ್ಗುತ್ತಿದ್ದರು. ಅದರಲ್ಲಿ ಬಾಲಕ ನಾರಾಯಣ ಡೋಣಿ ಕೂಡ ಮುಂಚೂಣಿಯಲ್ಲಿದ್ದ. ಯಾರಿಗೂ ಅಂಜದೆ ಲಾಠಿ ಏಟನ್ನೂ ಲೆಕ್ಕಿಸದೆ ಮೆರವಣಿಗೆ ಬಿಟ್ಟು ಕದಲದೇ ಆತ ಮುನ್ನುಗ್ಗುತ್ತಲೇ ಇದ್ದ. ಆದರೆ ಬ್ರಿಟಿಷರು ಏಕಾಏಕಿ ಗೋಲಿಬಾರ್‌ ಆರಂಭಿಸಿದರು. ದುರ್ದೈವವಶಾತ್ ಒಂದು ಗುಂಡು ನಾರಾಯಣ ಡೋಣಿಯ ಎದೆಯನ್ನು ಸೀಳಿತು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿದ ನಾರಾಯಣ ಡೋಣಿಯನ್ನು ಚಿಟಗುಪ್ಪಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ವೀರ ಬಾಲಕ ವೀರಮರಣವನ್ನಪ್ಪಿದ.

ಗುಂಡೇಟಿಗೆ ಬಲಿಯಾದ ವೀರ ಬಾಲಕನ ಅಂತ್ಯ ಸಂಸ್ಕಾರಕ್ಕೆ ಹುಬ್ಬಳ್ಳಿ ಶಹರದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಜನಸಾಗರ ಸೇರಿತ್ತು. ಬಾಲಕನ ರಾಷ್ಟ್ರ ಪ್ರೇಮವನ್ನು ಇಡೀ ದೇಶವೇ ಕೊಂಡಾಡಿತ್ತು. ಕೆಲವು ದೇಶ ಪ್ರೇಮಿಗಳ ಹೋರಾಟದ ಫಲವಾಗಿ ನಾರಾಯಣ ಡೋಣಿ ಗುಂಡೇಟು ತಿಂದ ಜಾಗದಲ್ಲಿ ಒಂದು ಕಂಚಿನ ಪುತ್ಥಳಿ ನಿರ್ಮಿಸಲಾಗಿದೆ. ಆತ ಓದುತ್ತಿದ್ದ ಲ್ಯಾಮಿಂಗ್ಟನ್‌ ಶಾಲೆಯ ಬಳಿ ವೀರಗಲ್ಲು ಸ್ಥಾಪಿಸಲಾಗಿದೆ. ಅಷ್ಟಕ್ಕೇ ನಾರಾಯಣ ಡೋಣಿ ನೆನಪು ಸೀಮಿತಗೊಂಡಿದೆ.

ನಾರಾಯಣ ಡೋಣಿಯ ಪುತ್ಥಳಿಯ ಸುತ್ತಲಿನ ಜಾಗವನ್ನು ಕೆಲವು ವ್ಯಾಪಾರಿಗಳು ಅತಿಕ್ರಮಣ ಮಾಡಿದ್ದಾರೆ. ಧೂಳು ಹಿಡಿಯುವ ಪುತ್ಥಳಿಯನ್ನು ಸ್ಥಳೀಯರೇ ಆಗಾಗ ಸ್ವಚ್ಛಗೊಳಿಸುತ್ತಾರೆ. ಆದರೆ ಬಾಲಕನ ತ್ಯಾಗವನ್ನು ಸ್ಮರಿಸುವ ಕೆಲಸವನ್ನು ಯಾರೂ ಮಾಡದಿರುವುದು ವಿಪರ್ಯಾಸ. ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಯದಲ್ಲಾದರೂ ಸ್ಥಳೀಯ ಆಡಳಿತ ಮತ್ತು ಸರ್ಕಾರ ನಾರಾಯಣ ಡೋಣಿ ಪುತ್ಥಳಿಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು. ಅಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬೇಕು. ವಿದ್ಯಾರ್ಥಿಗಳ ಭೇಟಿಗೆ ಅವಕಾಶ ಮಾಡಬೇಕು. ಬಾಲಕನ ದೇಶಪ್ರೇಮ ಮತ್ತು ವೀರಗಾಥೆಯನ್ನು ನಾನಾ ಮಾಧ್ಯಮಗಳ ಮೂಲಕ ಎಲ್ಲರಿಗೂ ತಲುಪಿಸಬೇಕು. ಕ್ವಿಟ್‌ ಇಂಡಿಯಾ ಚಳವಳಿ, ಸ್ವಾತಂತ್ರ್ಯೋತ್ಸವದ ದಿನವಾದರೂ ಜಿಲ್ಲಾಡಳಿತದಿಂದ ಹುತಾತ್ಮ ನಾರಾಯಣ ಡೋಣಿ ಪುತ್ಥಳಿಗೆ ಗೌರವ ಸಮರ್ಪಣೆಯಾಗಬೇಕು ಎನ್ನುವುದೇ ಎಲ್ಲ ದೇಶ ಪ್ರೇಮಿಗಳ ಆಶಯ.

ಇದನ್ನೂ ಓದಿ | ರಾಮನಗರಕ್ಕೆ ವಿದೇಶಾಂಗ ಸಚಿವ ಎಸ್​​. ಜೈಶಂಕರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮ

Exit mobile version