ಬೆಂಗಳೂರು: ಕಾಂಗ್ರೆಸ್ ನಾಯಕರ ವರ್ತನೆಗೆ ಬೇಸತ್ತು ಶುಕ್ರವಾರ ಸಮಾವೇಶ ನಡೆಸಿರುವ ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ದೇವರು ಅವರಿಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಿ.ಕೆ. ಶಿವಕುಮಾರ್, ಎಂ.ಆರ್. ಸೀತಾರಾಮ್ ನಮ್ಮ ಪಕ್ಷದ ಹಿರಿಯ ನಾಯಕರು. ಅವರು ಶಾಸಕರಾಗಿ, ಮಂತ್ರಿಯಾಗಿ ಜತೆಗೆ ಸದನದಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು. ಪಕ್ಷ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿತ್ತು. ಆದರೆ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಳೆದ ಬಾರಿ ವಿಧಾನ ಪರಿಷತ್‌ನ 2 ಸ್ಥಾನಗಳ ಪೈಕಿ ಹಿರಿಯರಾದ ನಾಸಿರ್ ಹಾಗೂ ಬಿ.ಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದೆವು. ಈ ಬಾರಿ ಜೈರಾಮ್ ರಮೇಶ್ ಅವರಿಗೆ ನೀಡಿದ್ದೇವೆ. ಇದರಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ ಎಂದರು.
ಅಸಮಾಧಾನಿತರ ಸಭೆ ಶಿಸ್ತು ಉಲ್ಲಂಘನೆ ಆಗುವುದಿಲ್ಲವೇ ಎಂಬುದಕ್ಕೆ ಉತ್ತರಿಸಿದ ಡಿ ಕೆ ಶಿವಕುಮಾರ್, ಆ ವಿಚಾರವಾಗಿ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ. ನಮ್ಮ ಪಕ್ಷ ಅವರನ್ನು ಗುರುತಿಸಿ ಶಾಸಕ, ಮಂತ್ರಿಯನ್ನಾಗಿ ಹಾಗೂ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ಒಳ್ಳೆಯದು ಮಾಡಲಿ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದಾರೆ. ಬಿಜೆಪಿಯವರು ಯಾರನ್ನೂ ಬಿಡುವುದಿಲ್ಲ. ಬಿಜೆಪಿಯವರು ಯಾವ ರೀತಿ ಪ್ರಯತ್ನಿಸುತ್ತಿದ್ದಾರೆ, ಚಿಕ್ಕಬಳ್ಳಾಪುರದಿಂದ ಯಾರನ್ನು ಕಳುಹಿಸಿದ್ದರು ಎಂಬ ಮಾಹಿತಿ ನನ್ನ ಬಳಿ ಇದೆ. ಅವರದು ಬಹಳ ಗೌರವಯುತ ಕುಟುಂಬ ಅವರು ಈ ರೀತಿ ಮಾಡುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | ಕೈ ಪಕ್ಷದಿಂದ ಒಂದು ಕಾಲು ಹೊರಗಿಟ್ಟ ಎಂ.ಆರ್. ಸೀತಾರಾಮ್: ಡಿಕೆಶಿ ವಿರುದ್ಧ ಆಕ್ರೋಶ
ಅಗ್ನಿಪಥ್‌ಗೆ ರಾಜ್ಯಾದ್ಯಂತ ವಿರೋಧ
ಅಗ್ನಿಪಥ್ ಯೋಜನೆಯಿಂದ ಯುವಕರಿಗೆ ದೊಡ್ಡ ಅನ್ಯಾಯವಾಗುತ್ತಿದ್ದು, ಪ್ರತಿಭಟನೆ ಮಾಡುವುದು ಅನಿವಾರ್ಯ. ಎಷ್ಟು ಸಾಧ್ಯವೋ ಅಷ್ಟು ಜನರನ್ನು ಸೇರಿಸಿ ಈ ಅನ್ಯಾಯ ವಿಚಾರವನ್ನು ಜನರಿಗೆ ಮುಟ್ಟಿಸುತ್ತೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಇದನ್ನೂ ಓದಿ | Agneepath | ನೀವೂ ʼಅಗ್ನಿಪಥ್ʼನಲ್ಲಿ ಸಾಗಿ ಸೇನೆ ಸೇರಬೇಕೇ? ನೇಮಕ ಹೇಗೆ ನಡೆಯುತ್ತದೆ ಗೊತ್ತೆ?
ಯೋಜನೆ ಕೈಬಿಡುವ ಚಿಂತನೆ ಇಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಸರ್ಕಾರ ಏನಾದರೂ ಹೇಳಲಿ, ನಾವು ನಮ್ಮ ವಿಚಾರವನ್ನು ವ್ಯಕ್ತಪಡಿಸುತ್ತೇವೆ. ನಮ್ಮ ಮಕ್ಕಳು ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ನಂತರ ಬೇರೆಯವರಿಗೆ ಸೆಕ್ಯುರಿಟಿ ಗಾರ್ಡ್ ಆಗಲು ಬಿಡುವುದಿಲ್ಲ. ಬೇಕಿದ್ದರೆ ಬಿಜೆಪಿ ನಾಯಕರ ಮಕ್ಕಳು ಅಗ್ನಿಪಥ್ ಮೂಲಕ ಸೇನೆ ಸೇರಲಿ.
ಅವರ ಮಕ್ಕಳು ಮಾತ್ರ ವೈದ್ಯರು, ಇಂಜಿನಿಯರ್, ಪ್ರೊಫೆಸರ್ ಆಗಬೇಕು, ಬಡವರ ಮಕ್ಕಳು ಸೆಕ್ಯೂರಿಟಿ ಗಾರ್ಡ್ ಆಗಬೇಕಾ? ಇದು ಸರಿಯಿಲ್ಲ. ಸೇನೆಗೆ ಯುವಕರನ್ನು ತೆಗೆದುಕೊಳ್ಳಲಿ, ಆದರೆ ಪೂರ್ಣಾವಧಿಗೆ ತೆಗೆದುಕೊಂಡು ಅವರು ನಿವೃತ್ತಿಯಾಗುವವರೆಗೂ ಸೇವೆಗೆ ಅವಕಾಶ ನೀಡಲಿ. ಇಷ್ಟು ದಿನ ಹೇಗಿತ್ತೋ ಹಾಗೆಯೇ ನೇಮಕ ಮಾಡಲಿ. ಯೋಧರ ವೇತನ ಹಾಗೂ ಪಿಂಚಣಿಗೆ ಸಮಸ್ಯೆ ಇದ್ದರೆ, ಸರ್ಕಾರ ಬೇರೆ ವಿಚಾರಗಳಿಗೆ ಸೆಸ್ ಹಾಕುತ್ತಿರುವಂತೆ ಇದಕ್ಕೂ ಹಾಕಲಿ ಎಂದು ತಿಳಿಸಿದರು.
ಇದನ್ನೂ ಓದಿ | ಅಗ್ನಿಪಥ್‌ನಿಂದ ಭಾರತೀಯ ರೈಲ್ವೆಗಾದ ನಷ್ಟ ಎಷ್ಟು?; ದಶಕದಲ್ಲಿ ಇಷ್ಟು ಲಾಸ್ ಆಗಿರಲಿಲ್ಲ !