ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ವರ್ಷದ ತುಂಬಿದ ಹಿನ್ನೆಲೆಯಲ್ಲಿ ಸರ್ಕಾರ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಇತ್ತ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ʻವರುಷ ಎಂಟು, ಅವಾಂತರಗಳು ನೂರೆಂಟುʼ ಎಂಬ ೪೦ ಪುಟದ ಕಿರುಪುಸ್ತಕ ಸಿದ್ಧಪಡಿಸಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಪುಸ್ತಕವನ್ನು ಸಿದ್ದರಾಮಯ್ಯ ಶನಿವಾರ ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಸಿದ್ದರಾಮಯ್ಯ, ನರೇಂದ್ರ ಮೋದಿ ಅವರು 2014 ಮೇ 28 ರಂದು ಪ್ರಧಾನಿಯಾಗಿದ್ದು, ಈ ವರ್ಷದ ಮೇ 28ಕ್ಕೆ ಅವರು 8 ವರ್ಷಗಳು ತುಂಬಿದೆ. ಈ ಎಂಟು ವರ್ಷಗಳಲ್ಲಿ ದೇಶದಲ್ಲಿ ಸುಭಿಕ್ಷೆ ತಂದಿದ್ದೇವೆ, ಸೌಹಾರ್ದ ವಾತಾವರಣ ನಿರ್ಮಾಣ ಮಾಡಿದ್ದೇವೆ ಎಂದು ದೊಡ್ಡ ದೊಡ್ಡ ಜಾಹೀರಾತು ಕೊಟ್ಟಿದ್ದಾರೆ.
ನರೇಂದ್ರ ಮೋದಿ ಅವರು 12 ವರ್ಷ ಗುಜರಾತ್ ಮುಖ್ಯಮಂತ್ರಿಯಾಗಿದ್ದರು, ಈಗ ಪ್ರಧಾನಿಯಾಗಿ ಎಂಟು ವರ್ಷಗಳು ತುಂಬಿದೆ. ಮೋದಿ ಅವರು 2014 ರಲ್ಲಿ ಗುಜರಾತ್ ಮಾದರಿ ಮಾಡುತ್ತೇವೆ ಎಂದು ದೇಶದ ಉದ್ದಗಲಕ್ಕೆ ಭ್ರಮೆಯನ್ನು ಹುಟ್ಟಿಸಿದ್ದರು. ವಿದೇಶದಲ್ಲಿರುವ ಕಪ್ಪು ಹಣ ತಂದು 15 ಲಕ್ಷದಂತೆ ಪ್ರತಿ ಕುಟುಂಬಕ್ಕೆ ಹಂಚುತ್ತೇವೆ, ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತೇವೆ, ಯುವಕರಿಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ, ಬೆಲೆ ಏರಿಕೆಯನ್ನು ತಡೆಗಟ್ಟಿ ಅಚ್ಚೇ ದಿನ್ ತರುತ್ತೇವೆ ಎಂದಿದ್ದರು.
ಇದನ್ನೂ ಓದಿ | Modi In Karnataka | ಮೋದಿ ಕಾರ್ಯಕ್ರಮದ ಸಮಯಕ್ಕೇ ಸುದ್ದಿಗೋಷ್ಠಿ ಕರೆದ ಸಿದ್ದರಾಮಯ್ಯ
ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದೂ ಭರವಸೆಯೂ ಈಡೇರಿಲ್ಲ. ಇವರ ಮಾತು ನಂಬಿ 2014 ರಲ್ಲಿ 83.4 ಕೋಟಿ ಮತದಾರರಲ್ಲಿ 17 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. 2019ರಲ್ಲಿ ಈ ಯಾವ ಭರವಸೆಗಳೂ ಈಡೇರದಿದ್ದ ಕಾರಣಕ್ಕೆ ಜನ ಬೇಸರಗೊಂಡಿದ್ದರು. ಹಾಗಾಗಿ ಪುಲ್ವಾಮಾ ಮತ್ತು ಬಾಲಾಕೋಟ್ ವಿಷಯಗಳನ್ನು ಮುಂದಕ್ಕೆ ತಂದು ಜನರನ್ನು ವಾಸ್ತವ ಸಮಸ್ಯೆಗಳಿಂದ ಬೇರೆ ಕಡೆ ತಿರುಗಿಸಿ ಮತ್ತೆ ಅಧಿಕಾರಕ್ಕೆ ಬಂದರು. 2019ರ ಚುನಾವಣೆಯಲ್ಲಿ 92 ಕೋಟಿ ಮತದಾರದಲ್ಲಿ 22.9 ಕೋಟಿ ಮತದಾರರು ಬಿಜೆಪಿಗೆ ಮತ ನೀಡಿದ್ದರು. ಇಡೀ ದೇಶದ ಮತದಾರರು ತಮಗೆ ಬೆಂಬಲಿಸಿದ್ದಾರೆ ಎಂದು ಬಿಂಬಿಸುವ ಕೆಲಸ ಮಾಡಿದ್ದಾರೆ ಎಂದರು.
ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ನೋಟು ರದ್ದತಿ, ಜಿಎಸ್‌ಟಿ ಜಾರಿ, ಕೊರೊನಾ ಬರುವ ಪೂರ್ವದಲ್ಲಿ ದೇಶದ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗಗಳು ಇದ್ದವು. ಈಗ ಅವುಗಳಲ್ಲಿ 2.5 ಕೋಟಿ ಉದ್ಯೋಗ ಉಳಿದಿವೆ. ವಿದ್ಯಾವಂತ ಯುವಜನತೆ ಕೆಲಸ ಕೇಳಿದರೆ ಪಕೋಡ ಮಾರಿ ಎಂದರು, ವಿದ್ಯಾವಂತರು ಪಕೋಡ ಮಾರೋಕೆ ಹೋದರೆ ಮೊದಲು ಪಕೋಡ ಮಾರುತ್ತಿದ್ದವರು ಎಲ್ಲಿ ಹೋಗಬೇಕು? ಇಂದು ದೇಶದ ನಿರುದ್ಯೋಗ ಮಿತಿಮೀರಿದೆ. ಸರ್ಕಾರದ ಉದ್ಯೋಗಗಳನ್ನು ಭರ್ತಿ ಮಾಡುತ್ತಿಲ್ಲ.
ಮೋದಿ ಸರ್ಕಾರದ 8 ವರ್ಷಗಳ 8 ಅನಾಹುತಗಳು:
1. ದೇಶ ಹಿಂದೆಂದೂ ಇಲ್ಲದಷ್ಟು ಸಾಲದ ಸುಳಿಗೆ ಸಿಲುಕಿದೆ. ರೂಪಾಯಿ ಬೆಲೆ ಪಾತಾಳಕ್ಕೆ ಕುಸಿಯುತ್ತಿದೆ.
2. ಬೆಲೆಯೇರಿಕೆ ಹಿಂದೆಂದು ಇಲ್ಲದ ಮಟ್ಟಕ್ಕೆ ಮುಟ್ಟಿದೆ. ಹಣದುಬ್ಬರ ಕಳೆದ 17 ವರ್ಷಗಳಲ್ಲಿ ತೀವ್ರ ಗತಿಗೆ ಮುಟ್ಟಿದೆ.
3. ನಿರುದ್ಯೋಗ ತಾರಕಕ್ಕೇರಿದೆ.
4. ರಾಜ್ಯಗಳ ಆರ್ಥಿಕತೆ ಕುಸಿದುಹೋಗುತ್ತಿದೆ.
5. ಒಕ್ಕೂಟ ವ್ಯವಸ್ಥೆ ಶಿಥಿಲವಾಗುತ್ತಿದೆ ಇದರ ಜೊತೆಯಲ್ಲಿ ದೇಶದ ಪ್ರಜಾಪ್ರಭುತ್ವ ಭಯಬೀತವಾಗಿದೆ.
6. ಜಿಎಸ್‌ಟಿ, ನೋಟು ಅಮಾನ್ಯೀಕರಣ, ಕೊರೊನಾ ನಿರ್ವಹಣೆಯ ಎಡಬಿಡಂಗಿ ನಿಲುವುಗಳು ದೇಶದ ಬೆನ್ನುಮೂಳೆಯನ್ನು ಟೊಳ್ಳು ಮಾಡಿದೆ.
7. ದೇಶದ ಜನರು ಕಷ್ಟಪಟ್ಟು ಕಟ್ಟಿದ್ದ ಲಾಭದಾಯಕ ಸಂಸ್ಥೆ, ಕಾರ್ಖಾನೆಗಳನ್ನು ಬಿಡಿಗಾಸಿಗೆ ಖಾಸಗಿಯವರಿಗೆ ಮಾರಾಟ ಮಾಡಲಾಗುತ್ತಿದೆ.
8. ರೈತರು, ಕಾರ್ಮಿಕ, ಮಹಿಳೆ, ಯುವ ಜನರ ವಿರೋಧಿ ಕಾನೂನುಗಳನ್ನು ಜಾರಿಗೆ ತಂದು ಅದರ ಮೂಲಕ ಜನರನ್ನು ಶತ್ರುಗಳಂತೆ ಭಾವಿಸಿ, ಧಮನಿಸಲಾಗುತ್ತಿದೆ. ಜನರನ್ನು ಬಡತನಕ್ಕೆ ತಳ್ಳಲಾಗುತ್ತಿದೆ, ಅಂಬಾನಿ, ಅದಾನಿಗಳಂತಹಾ ಕಾರ್ಪೋರೇಟ್ ಬಂಡವಾಳಿಗರನ್ನು ಕೊಬ್ಬಿಸಿ ಮೆರೆಸಲಾಗುತ್ತಿದೆ.
ಬಿಜೆಪಿ ನಾಯಕರು ಉತ್ತರಿಸಲಿ
ಈ ಎಂಟು ವರ್ಷಗಳ ಸಂಭ್ರಮಾಚರಣೆ, ಸುಳ್ಳಿನ ಆಚರಣೆ. ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಲಾಗದೆ, ಜನದ್ರೋಹದ ಕೆಲಸ ಮಾಡಿದ್ದಾರೆ. ಇವುಗಳ ಬಗ್ಗೆ ಮಾಹಿತಿ ಸಹಿತವಾದ ಒಂದು ಕಿರು ಹೊತ್ತಿಗೆಯನ್ನು ತರುತ್ತಿದ್ದೇವೆ. ಹೈದರಾಬಾದ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಣಿ ಸಭೆ ನಡೆಯುತ್ತಿದೆ. ಈ ಪುಸ್ತಕದಲ್ಲಿರುವ ವಿಷಯಗಳಿಗೆ ಬಿಜೆಪಿಯವರು ಉತ್ತರ ನೀಡಬೇಕು. ಕಾರ್ಯಕಾರಿಣಿ ಸಭೆಯಲ್ಲಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ ನಡ್ಡಾ ಅವರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ನೋಡೋಣ ಎಂದರು.
ಇದನ್ನೂ ಓದಿ | ಭಾಷಾ ರಾಜಕಾರಣದ ಹಸುವಿನ ಕೆಚ್ಚಲಿಗೆ ಕೈ ಹಾಕಿದೆ BJP: ಸಿದ್ದರಾಮಯ್ಯ ವಾಗ್ದಾಳಿ