ಈ ಕಥೆಯನ್ನು ಇಲ್ಲಿ ಕೇಳಿ :
ಒರಿಸ್ಸಾದ ಜನಪದ ಕಥೆಯಿದು. ಒಂದೂರಿನಲ್ಲಿ ಸುದರ್ಶನ ಎಂಬಾತ ತನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ. ಬಡವನಾಗಿದ್ದ ಆತ ಅವರಿವರ ಮನೆಗಳಲ್ಲಿ ತುಂಬ ಕಷ್ಟಪಟ್ಟು ಕೆಲಸ ಮಾಡ್ತಾ ಇದ್ದರೂ, ಹೆಚ್ಚಿನ ಸಂಪತ್ತು ಗಳಿಸೋದಕ್ಕೆ ಅವನಿಗೆ ಆಗ್ತಾ ಇರಲಿಲ್ಲ. ಗಳಿಸಿದ್ದೆಲ್ಲಾ ಕುಟುಂಬ ನಿರ್ವಹಣೆ ಮಾಡೋದಕ್ಕೆ ಬೇಕಾದರೆ ಕೂಡಿಡೋದು ಎಲ್ಲಿ ಬಂತು?
ಒಂದು ಸಾರಿ ಒಬ್ಬ ಶ್ರೀಮಂತನ ಮನೆಯಲ್ಲಿ ಮದುವೆ ಸಮಾರಂಭವಿತ್ತು. ಅಲ್ಲಿ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ ಆತನಿಗೆ, ಅಕ್ಕಿ, ಬೇಳೆ-ಕಾಳು, ವಸ್ತ್ರಗಳನ್ನೆಲ್ಲಾ ಕೊಟ್ಟಿದ್ದರು. ಸಂತೋಷದಿಂದ ಮನೆಗೆ ಬಂದ ಆತ, ರುಚಿಕಟ್ಟಾಗಿ ಅಡುಗೆ ಮಾಡುವಂತೆ ಮಡದಿಗೆ ಹೇಳಿದ. ಮನೆಮಂದಿಯ ಜೊತೆ ಕುಳಿತು ಹೊಟ್ಟೆ ತುಂಬಾ ಊಟ ಮಾಡಿ ಎಷ್ಟೋ ದಿನಗಳಾಗಿತ್ತು. ಇನ್ನೇನು ತುತ್ತು ಬಾಯಿಗೆ ಇಡಬೇಕು ಅನ್ನುವಷ್ಟರಲ್ಲಿ, ಇವರ ಮನೆಯ ಬಾಗಿಲಲ್ಲಿ ಸನ್ಯಾಸಿಯೊಬ್ಬ ಕಾಣಿಸಿಕೊಂಡ. ಹಸಿದಿರುವ ತನಗೆ ಏನಾದರೂ ಭಿಕ್ಷೆ ನೀಡಿ ಅಂತ ಆತ ಸುದರ್ಶನನಲ್ಲಿ ಕೇಳಿದ. ಹೊಟ್ಟೆ ಖಾಲಿಯಿದ್ದರೆ ಹೇಗಾಗತ್ತೆ ಅನ್ನೋದು ಅವನಿಗೆ ಚನ್ನಾಗಿ ತಿಳಿದಿದ್ದರಿಂದ, ತನ್ನ ಊಟದ ತಟ್ಟೆಯಲ್ಲಿದ್ದ ಆಹಾರವನ್ನೇ ಆತ ಸನ್ಯಾಸಿಗೆ ಕೊಟ್ಟುಬಿಟ್ಟ. ಆತನ ಈ ಕಾರ್ಯದಿಂದ ಸಂತುಷ್ಟನಾದ ಸನ್ಯಾಸಿ, ತನ್ನ ಜೊತೆಗೆ ಬಂದರೆ ಒಳ್ಳೆಯ ಪ್ರತಿಫಲವನ್ನು ಕೊಡ್ತೇನೆ ಅಂತ ಹೇಳಿದ. ಮಾತ್ರವಲ್ಲ, ಜೊತೆಗೆ ಬಂದ ಸುದರ್ಶನನನ್ನು ದೊಡ್ಡ ಕಾಡೊಳಗೆ ಕರೆದೊಯ್ದ.
ಸೂರ್ಯನ ಕಿರಣಗಳು ಭೂಮಿಗೇ ಬೀಳದಂಥ ದೊಡ್ಡ ಮರಗಳಿದ್ದವು ಅಲ್ಲಿ. ನಡೆಯೋದಕ್ಕೆ ಸರಿಯಾದ ದಾರಿಯೂ ಇರಲಿಲ್ಲ. ಇಂಥ ಕಾನನದಲ್ಲಿ, ಖಾಲಿ ಹೊಟ್ಟೆಯಲ್ಲಿ ನಡೆದು ಸುಸ್ತಾದ ಸುದರ್ಶನ ಸ್ಮೃತಿ ತಪ್ಪಿ ಬಿದ್ದೇಬಿಟ್ಟ. ಮತ್ತೆ ಎಚ್ಚರ ಬಂದಾಗ ನೋಡಿದರೆ, ಆ ಸನ್ಯಾಸಿ ಎಲ್ಲೆಲ್ಲೂ ಕಾಣಲಿಲ್ಲ. ಸುತ್ತಲೂ ಘೋರ ಅರಣ್ಯ, ಮನೆಗೆ ಹಿಂದಿರುಗುವ ದಾರಿಯೂ ತಿಳಿಯಲಿಲ್ಲ. ʻಛೇ! ಎಂಥಾ ಮನುಷ್ಯ ಈತ. ಹೊಟ್ಟೆ ತುಂಬಾ ಅನ್ನ ಹಾಕಿದವರಿಗೆ ಹೀಗೆಲ್ಲಾ ಮಾಡುವುದೇʼ ಎಂದು ಸುದರ್ಶನ ದುಃಖಿಸುತ್ತಿದ್ದಾಗ, ಆ ಸನ್ಯಾಸಿ ಮತ್ತೆ ಪ್ರತ್ಯಕ್ಷನಾದ. ಆತನ ಕೈಯಲ್ಲಿ ಒಂದು ಪಾತ್ರೆಯಿತ್ತು. ʻಇದೊಂದು ಮಾಯಾ ಪಾತ್ರೆ. ನಿನಗೆ ಬೇಕಾದ ಆಹಾರವನ್ನೆಲ್ಲಾ ಈ ಪಾತ್ರೆ ಒದಗಿಸುತ್ತದೆ. ಸುಖವಾಗಿರುʼ ಎಂದು ಆ ಪಾತ್ರೆಯನ್ನು ಕೊಟ್ಟು, ಆಶೀರ್ವಾದ ಮಾಡಿ ಹೊರಟುಹೋದ.
ಇದನ್ನು ಪರೀಕ್ಷಿಸಬೇಕೆಂದು ಸುದರ್ಶನನಿಗೆ ಮನಸ್ಸಾಯಿತು. ಹೊಟ್ಟೆ ತುಂಬುವಷ್ಟು ಹೋಳಿಗೆ ಬೇಕೆಂದು ಕೇಳಿದ. ಆ ಪಾತ್ರೆ ರುಚಿಯಾದ ಹೋಳಿಗೆಗಳಿಂದ ತುಂಬಿಹೋಯ್ತು. ಖುಷಿಯಿಂದ ಕುಣಿದಾಡಿಬಿಟ್ಟ ಸುದರ್ಶನ. ಇನ್ನು ತನ್ನ ಮನೆಯಲ್ಲಿ ಯಾರಿಗೂ ಉಪವಾಸ ಮಲಗುವ ಅವಸ್ಥೆಯೇ ಇಲ್ಲ ಎಂದು ಸಮಾಧಾನವಾಯಿತು. ಮರಳಿ ಮನೆಯತ್ತ ನಡೆಯತೊಡಗಿದ. ದಾರಿಯಲ್ಲಿ ಆಯಾಸವಾದ್ದರಿಂದ ಒಂದು ಮರದಡಿಗೆ ಕುಳಿತ. ಬಾಯಾರಿಕೆಯೂ ಅಗಿತ್ತು, ನೀರು ಕೊಡುವಂತೆ ಪಾತ್ರೆಯನ್ನು ಕೇಳಿದ. ಕ್ಷಣಮಾತ್ರದಲ್ಲಿ ಪಾತ್ರೆಯಲ್ಲಿ ನೀರು ತುಂಬಿತು. ತಣಿಯುವಷ್ಟು ನೀರು ಕುಡಿದ ಆತ ಅಲ್ಲೇ ನಿದ್ದೆಹೋದ. ಕಿಲಾಡಿ ಹುಡುಗರ ಗುಂಪೊಂದು ಇದನ್ನೆಲ್ಲಾ ನೋಡುತ್ತಿತ್ತು. ಏನೂ ಇಲ್ಲದ ಪಾತ್ರೆಯಿಂದ ಆತ ನೀರು ಕುಡಿದಿದ್ದು ಕಂಡು ಕುತೂಹಲಗೊಂಡ ಅವರು ಆ ಪಾತ್ರೆಯನ್ನು ಎತ್ತಿಕೊಂಡರು. ತಮ್ಮ ಹಸಿವು-ತೃಷೆಗೆ ಬೇಕೆನಿಸಿದ್ದೆಲ್ಲಾ ಕೊಡುವ ಮಾಯಾ ಪಾತ್ರೆಯಿದು ಎಂಬುದನ್ನು ಅರಿತ ಹುಡುಗರು, ಅಂಥದ್ದೇ ಬೇರೆ ಪಾತ್ರೆಯನ್ನು ತಂದಿಟ್ಟು ಅಲ್ಲಿಂದ ಹೊರಟುಹೋದರು.
ನಿದ್ದೆ ತಿಳಿದೆದ್ದ ಸುದರ್ಶನ ಲವಲವಿಕೆಯಿಂದ ಮನೆಗೆ ಹೋದ. ಮಡದಿಯನ್ನು ಕರೆದು, ನಡೆದದ್ದನ್ನೆಲ್ಲಾ ವಿಸ್ತಾರವಾಗಿ ಹೇಳಿ, ನಿನಗೇನು ಬೇಕು ತಿನ್ನುವುದಕ್ಕೆ ಎಂದು ಕೇಳಿದ. ಆಕೆ ತನಗೆ ಪಾಯಸ ಬೇಕೆಂದು ಕೇಳಿದಳು, ಊಹುಂ ಬರಲಿಲ್ಲ. ಲಾಡು ಸಹ ತನಗಿಷ್ಟವೇ ಎಂದಳು, ಅದೂ ಬರಲಿಲ್ಲ. ಮಾತ್ರವಲ್ಲ, ಯಾರೇನೇ ಕೇಳಿದರೂ ಆ ಪಾತ್ರೆಯಲ್ಲಿ ಏನೂ ಬರಲಿಲ್ಲ. ಸುದರ್ಶನನಿಗೆ ಬಹಳ ದುಃಖವಾಯಿತು. ಹೋಳಿಗೆಯನ್ನು ಕೇಳಿ ತಾನೇ ಪರೀಕ್ಷೆ ಮಾಡಿದ್ದೆನಲ್ಲ, ಇದೇನಾಯಿತು ಎಂದು ಚಿಂತಿಸಿದ. ವಿಷಯವನ್ನು ತಿಳಿಸಲೆಂದು ಸನ್ಯಾಸಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ.
ಕಾಡಲ್ಲಿ ಅಲೆದೂ ಅಲೆದು ಸನ್ಯಾಸಿಯ ತಾಣವನ್ನು ಪತ್ತೆ ಮಾಡಿದ ಸುದರ್ಶನ. ನಡೆದ ವಿಷಯವನ್ನು ಕೇಳಿದ ಆತ, ಸುದರ್ಶನನ ಬೇಜವಾಬ್ದಾರಿತನದಿಂದ ಬೇಸರಗೊಂಡರೂ, ಅವನಿಗೆ ಪೆಟ್ಟಿಗೆಯೊಂದನ್ನು ನೀಡಿದ. ನೋಡುವುದಕ್ಕೆ ಅಷ್ಟೇನೂ ದೊಡ್ಡದಲ್ಲದ ಅದೊಂದು ಮಾಯಾ ಪೆಟ್ಟಿಗೆಯೆಂದೂ, ಬೇಕಾದ ವಸ್ತ್ರಗಳನ್ನೆಲ್ಲಾ ಕೊಡುತ್ತದೆಯೆಂದೂ ತಿಳಿಸಿದ ಸನ್ಯಾಸಿ. ಈ ಬಾರಿ ಆ ಪೆಟ್ಟಿಗೆಯನ್ನು ಜೋಪಾನ ಮಾಡಲೇಬೇಕೆಂದು ಸುದರ್ಶನ ನಿರ್ಧರಿಸಿದ್ದ. ಆದರೆ ಸನ್ಯಾಸಿ ನೀಡಿದ ವಸ್ತು ಎಲ್ಲಿ ಅದಲು ಬದಲಾಯಿತು ಎಂಬುದೇ ಅವನಿಗೆ ಅಂದಾಜಾಗಲಿಲ್ಲ. ಮನೆಯತ್ತ ನಡೆಯತೊಡಗಿದ. ಹಿಂದಿನ ಬಾರಿಯ ಅದೇ ಜಾಗಕ್ಕೆ ಬರುವಷ್ಟರಲ್ಲಿ ಅವನಿಗೆ ಆಯಾಸವಾಗಿತ್ತು. ಮರದಡಿ ಕುಳಿತ. ಸಂಜೆಯ ತಣ್ಣನೆ ಗಾಳಿಗೆ ಚಳಿಯಾಗತೊಡಗಿತು. ಬೆಚ್ಚನೆಯ ವಸ್ತ್ರ ಬೇಕೆಂದು ಪೆಟ್ಟಿಗೆಯನ್ನು ಕೇಳಿದ. ನಯವಾದ ಉಣ್ಣೆಯ ಶಾಲೊಂದು ಪೆಟ್ಟಿಗೆಯನ್ನು ತುಂಬಿತು. ಅದನ್ನು ಹೊದೆಯುತ್ತಿದ್ದಂತೆ ಶರೀರ ಬೆಚ್ಚಗಾಗಿ, ಮೆಲ್ಲಗೆ ತೂಕಡಿಸುವಂತಾಯಿತು. ಇದೆಲ್ಲವನ್ನೂ ಆ ಪೋಕರಿ ಹುಡುಗರ ಗುಂಪು ನೋಡುತ್ತಿತ್ತು. ʻಅರೆ! ಖಾಲಿಪೆಟ್ಟಿಗೆಯಿಂದ ವಸ್ತ್ರ ತೆಗೆದು ಹೊದೆದುಕೊಂಡಿದ್ದು ಹೇಗೆ?ʼ ಎಂಬ ಕುತೂಹಲದಿಂದ ಆ ಪೆಟ್ಟಿಗೆ ತೆಗೆದುಕೊಂಡರು. ತಾವು ಕೇಳಿದ ವಸ್ತ್ರಗಳನ್ನೆಲ್ಲಾ ಕೊಡುವ ಪೆಟ್ಟಿಗೆಯಿದು ಎಂಬುದನ್ನು ಪ್ರಯೋಗ ಮಾಡಿ ತಿಳಿದುಕೊಂಡರು. ಅಂಥದ್ದೇ ಮತ್ತೊಂದು ಪೆಟ್ಟಿಗೆಯನ್ನು ತಂದಿಟ್ಟು, ಅಲ್ಲಿಂದ ಪರಾರಿಯಾದರು. ಇದ್ಯಾವುದನ್ನೂ ಅರಿಯದ ಸುದರ್ಶನ, ಪೆಟ್ಟಿಗೆಯೊಂದಿಗೆ ಮನೆಗೆ ತೆರಳಿದ.
ಇದನ್ನೂ ಓದಿ | ಮಕ್ಕಳ ಕಥೆ | ಖಿಚಡಿ ತಿನ್ನಲು ಬಂದ ಕರಡಿ
ಸುದರ್ಶನನ ಕಥೆ ಕೇಳಿದ ಮನೆಮಂದಿಯೆಲ್ಲಾ ಪೆಟ್ಟಿಗೆಯ ಸುತ್ತ ಕುಳಿತರು. ಅವರಿಗೀಗ ಬಣ್ಣಬಣ್ಣದ ಹೊಸಹೊಸ ವಸ್ತ್ರಗಳನ್ನು ತೊಡುವ ಬಯಕೆಯಾಗಿತ್ತು. ಸದಾ ಹಳೆಯ ಬಟ್ಟೆಗಳನ್ನೇ ತೊಡುತ್ತಿದ್ದ ಅವರಿಗೆ ಇವತ್ತು ಹೊಸಬಟ್ಟೆ ಹಬ್ಬ. ʻನಂಗೊಂದು ಕೆಂಪು ಜರತಾರಿ ಸೀರೆ ಬೇಕುʼ ಎಂದಳು ಸುದರ್ಶನನ ಹೆಂಡತಿ. ಪೆಟ್ಟಿಗೆ ಸುಮ್ಮನಿತ್ತು. ʻನಿನ್ನ ಸೀರೆ ಪೆಟ್ಟಿಗೆಯೊಳಗೆ ಹಿಡಿಸಲ್ಲಮ್ಮ, ನಾನು ಕೇಳ್ತೀನಿʼ ಎಂದ ಮಗಳು, ʻನಂಗೊಂದು ಹಸಿರು ರೇಷ್ಮೆಲಂಗ ಬೇಕುʼ ಎಂದಳು. ಊಹುಂ! ಪೆಟ್ಟಿಗೆಯಲ್ಲಿ ಏನೂ ಬರಲಿಲ್ಲ. ನಿರಾಸೆಯಾದ ಮನೆಮಂದಿ ಮತ್ತೆ ಸುದರ್ಶನನನ್ನು ಬೈದರು. ಈಗಂತೂ ಅವನಿಗೆ ಅಳುವೇ ಬಂತು. ʻಛೇ! ಇದೇನಾಗುತ್ತಿದೆ? ಯಾಕಾಗಿ ಹೀಗಾಗುತ್ತಿದೆ?ʼ ಎಂದುಕೊಂಡ ಆತ ಮತ್ತೆ ಸನ್ಯಾಸಿಯ ಬಳಿಗೆ ಹೋದ.
ನಡೆದಿದ್ದನ್ನೆಲ್ಲಾ ಆಲಿಸಿದ ಸನ್ಯಾಸಿ, ಈತನ ವಸ್ತುಗಳನ್ನು ಯಾರೋ ಕದ್ದೊಯ್ಯುತ್ತಿದ್ದಾರೆ ಎಂದು ತಿಳಿದುಕೊಂಡ. ಈ ಬಾರಿ ಬೆತ್ತವೊಂದನ್ನು ಅವನ ಕೈಗಿತ್ತು, ʻಇದು ಮಾಂತ್ರಿಕ ಬೆತ್ತ. ನೀನು ಹೇಳಿದವರಿಗೆ, ಹೇಳಿದಷ್ಟೂ ಹೊತ್ತು ಬಾರಿಸುತ್ತದೆ. ಮಾತ್ರವಲ್ಲ, ನಿನ್ನ ಹೊರತಾಗಿ ಬೇರೆ ಯಾರೇ ಮುಟ್ಟಿದರೂ ಅವರಿಗೆ ಏಟು ಖಚಿತʼ ಎಂದು ನುಡಿದ. ಈ ಬೆತ್ತವನ್ನೇನು ಮಾಡುವುದೆಂದು ತಿಳಿಯದ ಆತ, ಕೊಟ್ಟಿದ್ದನ್ನು ಬೇಡ ಎನ್ನದೆ ತೆಗೆದುಕೊಂಡು ಹೊರಟ. ದಾರಿ ಮಧ್ಯದಲ್ಲಿ ದಣಿವಾಗಿ, ಮರದಡಿಯಲ್ಲಿ ಕುಳಿತ. ಆಯಾಸದಿಂದ ಅಲ್ಲೇ ನಿದ್ದೆಹೋದ. ಆ ಹುಡುಗರ ತಂಡ ಮತ್ತೆ ಪ್ರತ್ಯಕ್ಷವಾಯಿತು. ಅವನ ಪಕ್ಕದಲ್ಲಿದ್ದ ಬೆತ್ತವನ್ನು ಕಂಡು ಕುತೂಹಲದಿಂದ ಕೈಗೆತ್ತಿಕೊಂಡಿತು. ಅಷ್ಟೆ! ಬೆತ್ತದಿಂದ ಬಿತ್ತು ನೋಡಿ ಬಿಸಿಬಿಸಿ ಕಜ್ಜಾಯ. ನೋವು ತಡೆಯಲಾರದೆ ಎಲ್ಲರೂ ಕೂಗಾಡತೊಡಗಿದರು. ಇವರ ಗದ್ದಲಕ್ಕೆ ಸುದರ್ಶನನಿಗೆ ಎಚ್ಚರವಾಯಿತು. ಎಲ್ಲರೂ ಬಂದು ಅವನಲ್ಲಿ ಬೇಡಿಕೊಳ್ಳತೊಡಗಿದರು. ʻಇದೊಂದು ಸಾರಿ ಈ ಬೆತ್ತದ ಕೈಯಿಂದ ಕಾಪಾಡಿ. ಇನ್ನು ನಿಮ್ಮ ತಂಟೆಗೆ ಬರುವುದಿಲ್ಲ. ನಿಮ್ಮ ಪಾತ್ರೆ ಮತ್ತು ಪೆಟ್ಟಿಗೆಯನ್ನೂ ತಂದು ಕೊಡುತ್ತೇವೆʼ ಎಂದು ಗೋಳಾಡತೊಡಗಿದರು. ಅವರ ಮೈಯೆಲ್ಲಾ ಬಾಸುಂಡೆ ಬಂದಿತ್ತು. ಹೊಡೆಯುವುದನ್ನು ನಿಲ್ಲಿಸುವಂತೆ ಬೆತ್ತಕ್ಕೆ ಹೇಳಿದ ಸುದರ್ಶನ. ಹುಡುಗರ ಸುಪರ್ದಿಯಲ್ಲಿದ್ದ ಪಾತ್ರೆ ಮತ್ತು ಪೆಟ್ಟಿಗೆಗಳು ಈಗ ಸುದರ್ಶನನಿಗೆ ಮರಳಿ ಸಿಕ್ಕವು. ಸನ್ಯಾಸಿ ನೀಡಿದ ಈ ಎಲ್ಲಾ ಉಡುಗೊರೆಗಳೊಂದಿಗೆ ಆತ ಮನೆಗೆ ತೆರಳಿದ. ಆನಂತರ ಎಲ್ಲರೂ ಸುಭಿಕ್ಷವಾಗಿ, ನೆಮ್ಮದಿಯಿಂದ ಬದುಕಿದರು.
ಇದನ್ನೂ ಓದಿ | ಮಕ್ಕಳ ಕಥೆ | ಮರದಡಿ ಬಚ್ಚಿಟ್ಟ ಹಣ ಕೈತಪ್ಪಿ ಹೋಯ್ತು, ಮರಳಿ ಸಿಕ್ಕಿದ್ದು ಹೇಗೆ?