Site icon Vistara News

ಸಣ್ಣ ಕಥೆ | ಕಾಲ ವಟಿ

short story

| ಡಾ. ಅಜಿತ್ ಹರೀಶಿ

‘ರಾತ್ರಿಯಿಡೀ ಒಂದು ಹನಿ ಕಣ್ಣು ಮುಚ್ಚಲಿಲ್ಲ. ಅರಮನೆ, ಐಶ್ವರ್ಯ ಕೊಡಿ ಅಂತೇನೂ ನಾನು ನಿಮಗೆ ಕೇಳಲಿಲ್ಲ. ಒಂದು ನೆಮ್ಮದಿಯ ನಿದ್ದೆಯನ್ನು ಕೇಳಿ ಪಡೆದು ಬಂದಿಲ್ಲ ನಾನು ಈ ಮನೆಗೆ. ಬೆಳಿಗ್ಗೆ ಏನೂ ಮಾಡಿ ಹಾಕುವ ವಶ ಸಾ ಇರಲಿಲ್ಲ ನಂಗೆ. ಆದರೆ ದುಡಿಯೋ ಗಂಡಸಿಗೆ ಕೈಲಾಗಿದ್ದು ಬೇಯಿಸಿ ಹಾಕಬೇಕು ಅನ್ನುವಷ್ಟು ಸಂಸ್ಕಾರ ನಮ್ಮಮ್ಮ ನನಗೆ ಕೊಟ್ಟಿದ್ದಾರೆ.’ ಹೆಂಡತಿ ಮಾಡಿದ ಬಿಸಿ ಒಗ್ಗರಣೆ ಅವಲಕ್ಕಿಯ ತುತ್ತು ಗಂಟಲಿನಲ್ಲಿ ಇಳಿಯದೇ ಒದ್ದಾಡುತ್ತಿದ್ದ ಕೈಲಾಜಿ, ಅವಳಿಗೆ ಗೊತ್ತಾಗದಂತೆ ಪ್ಲೇಟಿನಲ್ಲಿದ್ದ ಅವಲಕ್ಕಿಯನ್ನು ಚೆಲ್ಲಲು ಹೋಗಿ ಮತ್ತಷ್ಟು ಅವಾಂತರ ಮಾಡಿಕೊಂಡಿದ್ದ. ನಿಜಕ್ಕೂ ಆತನಿಗೆ ಅವಲಕ್ಕಿ ಎಂದರೆ ಅಲರ್ಜಿಯಾಗಿತ್ತು. ಅದನ್ನು ಬೆಳಿಗ್ಗೆ ತಿಂದರೆ ಹೊಟ್ಟೆ ನಿಬ್ಬರ, ಗ್ಯಾಸು ಆಗುತ್ತಿತ್ತು. ಆದರೆ ಹಿಂದಿನ ದಿನ ಮಾಡಿದ ತಪ್ಪಿಗಾಗಿ ಆತ ಸುಮ್ಮನೆ ತಿಂದು ಎದ್ದು ಹೋಗಿದ್ದರೆ ಒಳಿತಾಗುತ್ತಿತ್ತು. ಒಳಿತು- ಪದವನ್ನು ಭಗವಂತ ತನ್ನ ಬದುಕಿನ ನಿಘಂಟಿನಿಂದ ಎಗುರಿಸಿ ಯಾವುದೋ ಕಾಲವಾಯಿತು ಎಂಬ ಯೋಚನೆ ಒಮ್ಮೆ ಕೈಲಾಜಿಯ ಮನಸ್ಸಿನಲ್ಲಿ ಸುಳಿದು ಹೋಯಿತು.

ʻಏನೋ… ಸಂಸಾರ ಎಂದಮೇಲೆ ಒಂದು ಮಾತು ಬರುತ್ತದೆ, ಹೋಗುತ್ತದೆ. ಆಹಾರದ ಮೇಲೆ, ಅದರಲ್ಲಿಯೂ ಸುಧಾಮನ, ಕೃಷ್ಣನ ಪ್ರೀತಿಯ ಅವಲಕ್ಕಿ ಮೇಲ್ಯಾಕೆ ಸಿಟ್ಟು ತೀರಿಸ್ತೀರಿ? ನಿನ್ನೆ ರಾತ್ರಿನೂ ನಾನು ಬೈತಾ ಇದ್ದೆ. ಗ್ಲಾಸಿನಲ್ಲಿದ್ದ ನಿಮ್ಮ ಪರಮಾತ್ಮನ್ನ ಚೆಲ್ಲಿ ಬರಬಹುದಿತ್ತಲ್ವಾ? ಸಿಟ್ಟು ಬಂದರೆ ಮೂಡಾಫ್ ಆದರೆ ಅದು ಒಳಕ್ಕೆ, ಇದು ಹೊರಕ್ಕೆ ಯಾಕೋ? ಒಟ್ನಲ್ಲಿ ನಮ್ ಪ್ರಾಣ ತಿಂತೀರ. ನಂಗಂತೂ ಸಾಕಾಯ್ತು ಬದುಕು. ಮಕ್ಕಳ ಮುಖ ನೋಡ್ಕೊಂಡು ಬದುಕಿದೀನಿ.’ ಮರುದಿನ ಅವಳ ಮಾತು ಕೇಳುವಾಗಲೆಲ್ಲ ಕೈಲಾಶ್ ಕೈಲಾಜಿಗೆ ಇನ್ನೆಂದೂ ಕುಡಿಯಬಾರದು ಅನ್ಸುತ್ತಿತ್ತು. ಆದರೆ ಸದ್ಯದ ತನ್ನ ಪರಿಸ್ಥಿತಿ ಹಾಗಿದೆ ಎಂಬ ಸಮರ್ಥನೆಯೂ ಸೆಲ್ಫ್ ಡಿಫೆನ್ಸ್‌ಗೆ ಬರುತ್ತಿತ್ತು. ಮಾತಿಗೆ ಮಾತು ಎಂದೂ ಮುಗಿಯದ್ದು ಎಂದುಕೊಳ್ಳುತ್ತಾ ಎದ್ದು ಹೋದ. ‘ಟಿಫನ್ ಕ್ಯಾರಿಯರ್ ಟೇಬಲ್ ಮೇಲಿದೆ. ಬರ್ತಾ ಕೊತ್ತಂಬರಿ ಸೊಪ್ಪು ತರಲು ಮರೆಯಬೇಡಿ. ಈ ಜಗತ್ತಿನಲ್ಲಿ ನೀವೊಬ್ಬರೇ ಬ್ಯಾಂಕ್ ಕೆಲಸ ಮಾಡೋದು ಅಂತ ಕಾಣುತ್ತೆ’ ಧ್ವನಿ ದೂರವಾಗಲು ಆತ ಬೈಕಿನ ಕಿಕ್ ಹೊಡೆದು, ಎಕ್ಸಲರೇಟರ್ ಮತ್ತಷ್ಟು ತಿರುಪಿ ಕ್ಲಚ್ ಬಿಟ್ಟ.

ಕೈಲಾಶ್ ಕೈಲಾಜಿ ಗ್ರಾಮೀಣ ಬ್ಯಾಂಕ್ ಒಂದರಲ್ಲಿ ಕ್ಲರ್ಕ್ ಹುದ್ದೆಗೆ ಸೇರಿ ಹತ್ತಾರು ಕಡೆ ನೌಕರಿ ಮಾಡಿ, ಮುಂಬಡ್ತಿ ಪಡೆದು ಮ್ಯಾನೇಜರ್ ಆಗಿದ್ದ. ಮೊದಮೊದಲು ಸಣ್ಣ ಹಳ್ಳಿಗಳಲ್ಲಿ ಕೆಲಸ ಮಾಡಿದ್ದ ಆತನಿಗೆ ಒಳ್ಳೆಯ ಹೆಸರಿತ್ತು. ಹೋದಲ್ಲೆಲ್ಲಾ ಹೊಸಬರನ್ನು ಬೇಗ ಪರಿಚಯ ಮಾಡಿಕೊಳ್ಳುತ್ತಿದ್ದ. ಬ್ಯಾಂಕಿನಲ್ಲಿ ಜನರನ್ನು ಕಾಯಿಸುತ್ತಿರಲಿಲ್ಲ. ಹಳ್ಳಿಗಳಲ್ಲಿ ಬ್ಯಾಂಕುಗಳು ಆಗಷ್ಟೇ ಸ್ಥಾಪಿತವಾಗುತ್ತಿದ್ದವು. ಶಿಕ್ಷಕರು, ವೈದ್ಯರ ಜೊತೆಗೆ ಊರವರು ಇವರಿಗೂ ವಿಶೇಷ ಗೌರವ ಕೊಡುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಮಧ್ಯಾಹ್ನದ ಊಟಕ್ಕೆ ಕರೆಯ ಬರುತ್ತಿತ್ತು. ಮಧ್ಯಾಹ್ನ ಆಗದಿದ್ದರೆ ಸಂಜೆ ಆದರೂ ಬನ್ನಿ ಎಂದಾಗ ಅದರ ಗಮ್ಮತ್ತು ಕೈಲಾಜಿಗೆ ತಿಳಿಯಿತು. ಆಮೇಲೆ ಆತ ಮಧ್ಯಾಹ್ನ ಊಟಕ್ಕೆ ಹೋಗುವುದು ಕಡಿಮೆಯಾಯಿತು. ಮೂತ್ರಪಿಂಡದಲ್ಲಿ ಕಲ್ಲಿನ ಫಾರ್ಮೇಶನ್ ಆಗುವ ಬಗೆಯಂತೆ, ಊಟಕ್ಕೆ ಹಿಂದೆ ಮುಂದೆ ತೀರ್ಥ ಮತ್ತು ಇಸ್ಪೀಟಾಟಗಳು ಸೇರಿಕೊಂಡವು. ರಾತ್ರಿ ಅವಕ್ಕೆ ಕೈಲಾಜಿ ಬರುತ್ತಾನೆಂಬ ಸೂಟು ಸಿಕ್ಕ ಕೂಡಲೇ ಸಾಲ ಮಂಜೂರಾತಿ ಪಡೆಯುವವರ ಮನೆಯಲ್ಲಿ ದೇವಕಾರ್ಯಗಳು ಯೋಜಿತಗೊಳ್ಳತೊಡಗಿದವು. ಅದು ಶಾಕಾಹಾರಿ ಕೈಲಾಜಿಯನ್ನು ಆರಿದ್ರಾ ಮಳೆಯ ಹಬ್ಬದ ಬೋನಿನವರೆಗೂ ತಂದುಬಿಟ್ಟಿತ್ತು. ಕ್ರಮೇಣ ಆತ ವರ್ಷಾಂತ್ಯದಲ್ಲಿ ಲೋನ್ ರಿನೀವಲ್ ಮಾಡಿಕೊಟ್ಟು ಬಡ್ಡಿ ಪೀಕುವ ಮಾಫಿಯಾ ಹೆಗಲ ಮೇಲೆ ಕೈಯಿಟ್ಟ. ಪ್ರತಿ ವ್ಯವಸ್ಥೆಯೂ ಸಣ್ಣದೋ, ದೊಡ್ಡದೋ ರೂಪದಲ್ಲಿ ಸರ್ವಾಂತರ್ಯಾಮಿ ಎಂಬ ಸತ್ಯ ಕೈಲಾಜಿಗೆ ಅರಿವಾಗತೊಡಗಿತ್ತು. ಮದುವೆಯಾದ ಮೇಲೆ, ಹತ್ತಿರದ ಪೇಟೆಯಲ್ಲಿ ಸಂಸಾರ ಹೂಡಿದ್ದು, ಹೆಂಡತಿಗೆ ಪ್ರೆಸ್ಟೀಜೂ, ಕೈಲಾಜಿಯ ಕಾರುಬಾರಿಗೆ ನಿರ್ವಿಘ್ನವೂ ಆಗಿತ್ತು. ವಾರಕ್ಕೊಮ್ಮೆ ಪೇಟೆಗೆ ಹೋದರಾಗಿತ್ತು. ಮಕ್ಕಳು, ವಿದ್ಯಾಭ್ಯಾಸ ಅಂತ ಅವನ ಖರ್ಚು ಏರತೊಡಗಿತ್ತು. ಅವನ ವ್ಯಾಪ್ತಿಯೂ ವಿಸ್ತರಿಸುತ್ತಾ, ಕೆಲಸ ಮಾಡಿದ ಬ್ರಾಂಚುಗಳ ವಿಶೇಷ ಕಸ್ಟಮರುಗಳೆಲ್ಲಾ ಆಗಾಗ ಕರೆಯ ಕಳಿಸುತ್ತಿದ್ದರು. ಸಂಬಳವನ್ನು ಬಿಟ್ಟು ಬೇರೆ ಆಮದನಿ ಹುಡುಕಿಕೊಳ್ಳುವುದು ಕೈಲಾಜಿಗೆ ಅನಿವಾರ್ಯವಾಗತೊಡಗಿತು. ಆತ ಪಳಗತೊಡಗಿದ. ಬಾಹುಗಳು ವಿಸ್ತಾರವಾದವು. ಸ್ವಲ್ಪ ಮುಂಚೆಯೇ ಮ್ಯಾನೇಜರ್ ಆಗಿ ಭಡ್ತಿ ಪಡೆದುಕೊಂಡ. ಸ್ವತಃ ಒಂದು ಹಂತದ ಲೋನ್ ಸ್ಯಾಂಕ್ಷನ್ ಮಾಡುವ ಪವರ್ ಬಂತು. ಹೆಡ್ಡಾಫೀಸಿನ ಲೋನ್ ಸ್ಯಾಂಕ್ಷನ್ ವಿಭಾಗದ ಜೊತೆ ಬೈಠಕ್ ಕನೆಕ್ಷನ್ ಆದಮೇಲೆ ಎಲ್ಲವೂ ಸರಾಗವಾಗಿತ್ತು. ಬಹುಶಃ ಆ ದಿನಗಳು ಕೈಲಾಜಿಯ ಬದುಕಿನ ಸುವರ್ಣ ಯುಗವಾಗಿತ್ತು.

ಕೈಲಾಜಿಯು ಕೈಗೆ ಮದರಂಗಿ ಹಚ್ಚಿಕೊಂಡಿದ್ದು ಎಂದು ಭಾವಿಸಿದ್ದು ಇಡೀ ದೇಹಕ್ಕೆ, ಬದುಕಿಗೆ ಮೆತ್ತಿಕೊಂಡ ಬಣ್ಣವಾಗಿತ್ತು. ಮೊದಮೊದಲು ಎದ್ದು ಕಾಣುತ್ತಿದ್ದ ಗಾಢವಾದ ವರ್ಣಗಳು ಕಪ್ಪುಗೂಡತೊಡಗಿದ್ದವು. ರಂಜನೆಗೆ ಎಂದು ಶುರುವಾದ ಹವ್ಯಾಸಗಳು ಪ್ರಜ್ಞಾಪರಾಧದ ಬೇಗುದಿಗೆ ಸಿಕ್ಕು, ಅದೇ ಮರೆಯುವ ಮತ್ತಾಗಿದ್ದು ಆತನ ಗಮನಕ್ಕೆ ಬಂದಿರಲಿಲ್ಲ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದವನೊಬ್ಬ ಇದೇ ವೇಳೆಗೆ ಮಂದ ಬೆಳಕಿನಲ್ಲಿ ಭೇಟಿಯಾದ ಹೊಸ ಸ್ನೇಹಿತನಾಗಿದ್ದ. ಕೈಲಾಜಿಯ ಬ್ಯಾಂಕಿನ ಬ್ರಾಂಚಿದ್ದ ಊರಿನ ಹತ್ತಿರವೇ ಉದ್ಯಮಿಯ ಜಮೀನಿತ್ತು. ಆದರೆ ಆತನಿಗೆ ಬೇಕಾಗಿದ್ದು ಅದರ ಹತ್ತುಪಟ್ಟು ಮೊತ್ತ. ಅದನ್ನು ಮಂಜೂರಾತಿ ಪಡೆಯುವವರೆಗಿನ ಖರ್ಚುವೆಚ್ಚಗಳನ್ನು ಮತ್ತು ಕೈಲಾಜಿಗೆ ದೊಡ್ಡ ಮೊತ್ತದ ಕಮಿಷನ್ ನೀಡುವ ಆಮಿಷವನ್ನು ಅವನು ನೀಡಿದ್ದ. ಬೆಂಗಳೂರಿನ ಫೈನಾನ್ಸ್ ಫಂಟರುಗಳನ್ನು ಹ್ಯಾಂಡಲ್ ಮಾಡಿದ್ದ ಹುಲಿ ಅವನು. ಆದರೆ ಮಂಜೂರಾತಿ ವಿಭಾಗದಲ್ಲಿ ಯಾಕೋ ಫೈಲ್ ಮೂವ್ ಆಗಿರಲಿಲ್ಲ. ಉದ್ಯಮಿಯ ಸಿಬಿಲ್ ಸ್ಕೋರ್ ಗೋತಾ ಹೊಡೆದಿತ್ತು. ಅದರ ವಿವರ ತೆಗೆಯಲಾಗಿ ಕ್ರೆಡಿಟ್ ಕಾರ್ಡ್ ರೀಪೇಮೆಂಟ್ ಬಾಕಿ ಉಳಿದಿತ್ತು. ಕೈಲಾಜಿ ಅವನಿಗೆ ವಿಷಯ ತಿಳಿಸಿದಾಗ ‘ನೀವು ಅದೊಂದು ತುಂಬಿ, ರೆಡಿ ಮಾಡಿ ಪ್ಲೀಸ್. ನಂದೊಂದು ಪ್ರಾಪರ್ಟಿ ಡೀಲ್ ಆದರೆ ನಿಮಗೊಂದು ಸೈಟ್ ಫ್ರೀ ಕೊಡೋಣ. ನಿಮ್ಮ ಕೈಗುಣ ಚೆನ್ನಾಗಿದೆ ಅಂತ ಜನ ಹೇಳ್ತಾರೆ, ಹಾಗಾಗಲಿ. ಸದ್ಯ ನಿಮ್ಮ ಬಾಯಿಗೆ ಬೆಲ್ಲ ಹಾಕಿಸುವ ಬನ್ನಿ.’

ಆನೆಗಾತ್ರದ ಕಾರನ್ನು ನಿಲ್ಲಿಸುತ್ತಾ ಉದ್ಯಮಿ ಕೇಳಿದ ‘ನೀವು ಕಲ್ಯಾಣಿ ನೋಡಿದ್ದೀರಾ?’
‘ಈ ಊರಿನಲ್ಲಿ ಕಲ್ಯಾಣಿಯಾ ಇಲ್ವಲ್ಲ?’
‘ಆ ಕಲ್ಯಾಣಿಯಲ್ಲ. ಅವಳು… ಅವಳು… ಬಕ್ಕೆ ಕಲ್ಯಾಣಿ, ಗೊತ್ತಿಲ್ವಾ?’

‘ಓಹ್! ಕೇಳಿದ್ದೇನೆ ಅಷ್ಟೇ. ಅವತ್ತೊಬ್ಬ ರೈತ ಕಾಡಿನಿಂದ ಹಲಸಿನ ಹಣ್ಣು ತಂದುಕೊಟ್ಟಿದ್ದ. ಮನೆಗೆ ಒಯ್ದಿದ್ದೆ. ಒಳ್ಳೆಯ ಚಂದ್ರಬಕ್ಕೆ. ಅದರ ತೊಳೆಗಳ ಕಲರ್ ಬಣ್ಣಿಸೋದು ಕಷ್ಟ. ಕವಿಯಾಗಿರಬೇಕಿತ್ತು ಅಂತ ಅನ್ನಿಸಿಬಿಡ್ತು. ಬಿಳಿಯಾ? ಬಿಳಿಯಲ್ಲ! ಮುಟ್ಟಿದರೆ ಕೆಂಪಾಗಿ ಬಿಡಬಹುದು ಅನ್ನಿಸಿತು. ಕಿತ್ತಳೆ ಅನ್ನೊದು ಕಷ್ಟ. ಜೇನು ತುಪ್ಪದಲ್ಲಿ ಅದ್ದಿ ಬಾಯಿಗಿಟ್ಟರೆ ಎಂತಹ ರುಚಿ ಅಂತೀರಾ! ಆಮೇಲೆ ಒಂದು ದಿನ ಮತ್ತೆ ತಿನ್ನಬೇಕೆಂಬ ಆಸೆಯಾಗಿ, ಸ್ನೇಹಿತರೊಬ್ಬರಿಗೆ ಕೇಳ್ದೆ. ಅವರು ನಗಲಿಕ್ಕೇ ಶುರುಮಾಡಿದರು. ಬೇಣದಲ್ಲಿ ಒಂಟಿಯಾಗಿರುವ ಆ ಮರವನ್ನು ಹತ್ತಿ, ಯಾರು ಬೇಕಾದರೂ ತಿನ್ನಬಹುದು. ಹಾಗೇ ಈ ಊರಿನಲ್ಲಿ ಇರುವ ಕಲ್ಯಾಣಿ ಎಂಬ ಹೆಂಗಸನ್ನೂ… ಎಂದರು. ಅಷ್ಟು ಮಾತ್ರ ಗೊತ್ತು’

‘ಅವೆಲ್ಲ ಪೂರ್ತಿ ನಿಜವಲ್ಲ ಕೈಲಾಜಿ ಸಾಹೇಬ್ರೇ. ಕಲ್ಯಾಣಿ ಹಾಗೆಲ್ಲ ಅಡ್ನಾಡಿಗಳಿಗೆ ಆಹಾರವಾದವಳಲ್ಲ. ಅವರು ಹೊಟ್ಟೆಕಿಚ್ಚಿನಿಂದ ಹೇಳೋದು ಅದು. ಅವಳು ಸೆಲೆಕ್ಟಿವ್ ಮತ್ತು ಕಾಸ್ಟ್ಲೀ. ಇನ್ನು ಅವಳನ್ನು ವರ್ಣಿಸೋದು, ನೀವು ಹೇಳಿದ ಹಣ್ಣಿನ ವರ್ಣನೆಯ ಹಾಗೆ. ಬನ್ನಿ ಬನ್ನಿ…’ ಆತ ಡೋರ್ ತೆಗೆದು ಇಳಿದ.

ಕಲ್ಯಾಣಿಯ ಮನೆಯ ಬಾಗಿಲು ತೆರೆದುಕೊಂಡೇ ಇತ್ತು. ಡೋರ್ ಲಾಕ್ ಸದ್ದು ಕೇಳಿ ಅವಳು ಹೊರಗೆ ಬಂದಿದ್ದಳು. ಅವನನ್ನು ನೋಡಿ ನಕ್ಕು ಕೈಲಾಜಿಗೆ ನಮಸ್ಕಾರ ಮಾಡಿದಳು. ʻʻಇವರು ಕೈಲಾಜಿ ಸಾಹೇಬ್ರು. ಬ್ಯಾಂಕ್ ಮ್ಯಾನೇಜರ್. ಬ್ಯಾಂಕ್ ಕೆಲಸ ಟೆನ್ಶನ್ ನೋಡು, ರಿಲಾಕ್ಸ್ ಆಗೋಕೆ ಸಮಯವೇ ಇರುವುದಿಲ್ಲ. ಕಲ್ಯಾಣಿ ಬಕ್ಕೆ ರಾಶಿ ಇಷ್ಟ ಆಯ್ತಂತೆ. ಕೊಡು ಅವ್ರಿಗೆ’ʼ

ʻʻನಾನು ಬ್ಯಾಂಕಿಗೆ ಹೋಗೋದು ಕಮ್ಮಿ, ಆದರೂ ಇವರನ್ನು ನೋಡಿದ್ದೆ. ಸಾಹೇಬರು ಈ ಬಡವಿಯನ್ನು ನೋಡಿಲ್ಲ. ಕ್ಯಾಶ್ ಕೌಂಟರ್‌ನಲ್ಲಿ ಕೆಲಸ ಅಷ್ಟೇ ಅಲ್ಲವ್ರಾ ನಮಿಗೆ! ಬನ್ನಿ ದೊರೆ ಒಳಗೆ.’ ಕೈಲಾಜಿ ಕಲ್ಯಾಣಿಯನ್ನು ಹಿಂಬಾಲಿಸಿದ.

ಉದ್ಯಮಿ ಫೋನ್ ಬಂದ ನೆವದಲ್ಲಿ ಹೊರಗೆ ಹೋದ. ಹಲಸಿನ ಹಣ್ಣು ಹೊರಗಿನಿಂದ ಆಕರ್ಷಕವಾಗಿಯೇನೂ ಕಾಣಲಿಲ್ಲ ಕೈಲಾಜಿಗೆ. ಬಲಿತಿದ್ದು, ಸೀಳಿದ ಯಾಂತ್ರಿಕವಾಗಿ. ತಿನ್ನಬೇಕು ಅನ್ನಿಸಲಿಲ್ಲ. ಒಂದು ತೊಳೆಯನ್ನು ತಿಂದರೂ ಮೇಣ ಕೈಗೆ ಅಂಟಿತ್ತು. ರುಚಿಯನ್ನು ರಸನೇಂದ್ರಿಯ ಗ್ರಹಿಸಲಿಲ್ಲವೋ, ಮೆದುಳಿಗೆ ರವಾನಿಸಲಿಲ್ಲವೋ ತಿಳಿಯದಾಯಿತು. ಎಣ್ಣೆ ಹಚ್ಚಿಕೊಳ್ಳಬೇಕಿತ್ತು, ತಿನ್ನದೆಯೂ ಇರಬಹುದಿತ್ತು ಎಂದೆಲ್ಲಾ ಅನ್ನಿಸಿತ್ತು. ಕ್ರಿಯೆ ಯಾಂತ್ರಿಕವಾಗಿತ್ತು. ಕಲ್ಯಾಣಿ ಗ್ರಹಿಸಿದ್ದಳು, ಜೇನುತುಪ್ಪದ ಪ್ರಯೋಗ ಮಾಡಿದ್ದಳು. ‘ಪ್ರೀತಿ ಹುಟ್ಟಿದವರು ಕಲಾ ಅಂತ ಕರೆಯಬಹುದು’ ಕಲ್ಯಾಣಿ ಹೇಳುತ್ತಿದ್ದಾಗ, ಕೈಲಾಜಿಗೆ ಫೋನ್ ಕರೆ ಬಂದು ಬಚಾವಾದೆ ಎಂದುಕೊಂಡು, ಅವಳಿಗೆ ಬೈ ಎಂದು ಸನ್ನೆ ಮಾಡುತ್ತಾ ಕಾರಿನ ಬಳಿ ಬಂದಿದ್ದ. ‘ಬೇಗ ಬಂದ್ರಿ, ಈಗಲೇ ಹೀಗೆ ಆಕೆ. ಇಪ್ಪತ್ತು ವರ್ಷಗಳ ಹಿಂದೆ ಹೇಗಿರಬೇಡ. ಜನರಿಗೆ ಅಸೂಯೆ ಅವಳ ಬಗ್ಗೆ” ಆತನ ಪ್ರವರಕ್ಕೆ ಗಮನ ಕೊಡದೇ ವಾಹನ ಚಲಾಯಿಸಲು ಸಿಗ್ನಲ್ ಮಾಡಿ, ಕೈಲಾಜಿ ಇನ್ನೊಂದು ಕರೆ ಸ್ವೀಕರಿಸಿದ. ‘ಪೇಟೆಯ ಕ್ಲಬ್ಬಿನಲ್ಲಿ ಎಲೆ ಹಿಡಿಯುವ ಬನ್ನಿ’ ಉದ್ಯಮಿ ಪಟ್ಟು ಸಡಿಲಿಸಲಿಲ್ಲ.

*

ಆ ಕೋಟಿ ವ್ಯವಹಾರದ ಕೇಸಿನಲ್ಲಿ ಕೈಲಾಜಿ ಸಿಕ್ಕಿಬಿದ್ದ, ರಿಯಲ್ ಎಸ್ಟೇಟ್ ಕುಳ ಕೈಯೆತ್ತಿ ಬಿಟ್ಟ. ಅತ್ತ ಲೋನ್ ಕಂತುಗಳು ಹಾಗೆ ಉಳಿದವು, ಅದು ಸಾಯಲಿ, ಕೈಲಾಜಿಯ ಸ್ವಂತ ದುಡ್ಡೂ ಕೈಬಿಟ್ಟಿತ್ತು. ಅಲ್ಲಿಂದ ಶುರುವಾದ ಸಣ್ಣ ಹೊಂಡ ಮುಚ್ಚುವ ಕೆಲಸ, ಕೈಲಾಜಿಗೆ ಬದುಕಿನ ಕಂದಾಯ ಕಟ್ಟುವಂತೆ ಮಾಡಿತ್ತು. ಆತನ ಹಣಕಾಸಿನ ಪರಿಸ್ಥಿತಿಯನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಸಾಲ ಸಾಗರದಷ್ಟಾಗಿತ್ತು. ಹಾರಲು ಹತ್ತಿರ ಕಡಲೂ ಇರಲಿಲ್ಲ. ಮೇಲಧಿಕಾರಿಗಳಿಗೆ ದೂರು ಹೋಗತೊಡಗಿದವು. ಒಂದು ದಿನ ಬಂದು ಕುಳಿತ ಅವರು ಎಲ್ಲ ಲೆಕ್ಕ ತೆಗೆದು ಡಿಸ್ಮಿಸ್ ಮಾಡುವುದು ಅನಿವಾರ್ಯವಾಗುತ್ತದೆ. ಯಪರಾತಪರಾ ಆದ ಹಣವನ್ನು ಸೈಲೆಂಟ್ ಆಗಿ ಕಟ್ಟಿ ಬಿಟ್ಟುಹೋಗಿ. ರಿಸೈನ್ ಮಾಡಿದೆ, ಬ್ಯುಸಿನೆಸ್ ಮಾಡುವೆ ಅಂತ ಹೇಳಿಕೊಳ್ಳಲು ನಮ್ಮ ಅಭ್ಯಂತರವಿಲ್ಲ ಎಂದರು. ಒಂದಿಷ್ಟು ಆತ್ಮೀಯರು ತಾತ್ಪೂರ್ತಿಕ ಸಮಸ್ಯೆ ಬಗೆಹರಿಸಿದರು. ಕೈಲಾಜಿ ಬ್ಯಾಂಕಿನಿಂದ ಬಿಡುಗಡೆಯಾದ. ಆದರೆ ಮನೆಯಲ್ಲಿ ಹೇಳಲಿಲ್ಲ, ಧಗೆಯನ್ನು ಮುಚ್ಚಿಟ್ಟ. ಸಂಭಾವ್ಯ ದಾರಿಗಳನ್ನು ಹುಡುಕತೊಡಗಿದ. ಸಾಯುವುದೇ ಮೇಲು ಎಂದು ಅನ್ನಿಸತೊಡಗಿದಾಗ, ಅವನಿಗೆ ಗೆಳೆಯರ ಬಳಗದ ಅದ್ಯಾರೋ ಸೂಚಿಸಿದ್ದು ಕುಂಟ ಪಂಡಿತರ ಹೆಸರನ್ನ!

*

ಕುಂಟ ಪಂಡಿತರು ಪೇಟೆಯ ಹೊರವಲಯದ ಕಾಲೋನಿಯೊಂದರಲ್ಲಿ ವಾಸಿಸುತ್ತಿದ್ದರು. ಅವರು ಪಾರಂಪರಿಕ ಔಷಧಿಗಳನ್ನು ತಯಾರಿಸಿ ಕೊಡುತ್ತಿದ್ದರು. ಇದು ತಲೆತಲಾಂತರದಿಂದ ಬಂದ ವೃತ್ತಿ. ಜೊತೆಗೆ ಜಾತಕ, ಹಸ್ತ ಸಾಮುದ್ರಿಕಾಶಾಸ್ತ್ರದ ಜ್ಞಾನವಿತ್ತು. ಅವತ್ತು ಹೆಂಡತಿಯ ಏರು ಧ್ವನಿಯಿಂದ ದೂರವಾಗುತ್ತ ಹೊರಟ ಕೈಲಾಜಿ ಬಂದು ತಲುಪಿದ್ದು ಇವರ ಧನ್ವಂತರಿ ದವಾಖಾನೆಗೆ. ಅಷ್ಟು ಮುಂಚೆ ಸಾಮಾನ್ಯವಾಗಿ ಪಂಡಿತರ ದವಾಖಾನೆಯ ಮುಂದೆ ಜನರು ಇರುತ್ತಿರಲಿಲ್ಲ. ಹಾಗಾಗಿ ಅವರಿಗೆ ಕೈಲಾಜಿಯೊಂದಿಗೆ ಪ್ರತಿಸ್ಪಂದನಕ್ಕೆ ಹೆಚ್ಚು ಸಮಯ ದೊರಕಿತು. ಅವರು ಒಂದು ಮಣೆಯ ಮೇಲೆ ಕುಳಿತಿದ್ದರು. ಮುಖ್ಯವಾದ ಔಷಧಿಗಳನ್ನು ಅವರು ಕೈಗೆಟುಕುವ ದೂರದಲ್ಲಿ ಇಟ್ಟುಕೊಂಡಿದ್ದರು. ಬಿಳಿಯಾದ ಉದ್ದನೆಯ ಕೂದಲನ್ನು ಗಂಟುಕಟ್ಟಿ ಸ್ವಲ್ಪ ಇಳಿಬಿಟ್ಟಿದ್ದರು. ಮೀಸೆಯು ತುಟಿಗಳನ್ನು ಆವರಿಸಿತ್ತು ಮತ್ತು ಗಡ್ಡವನ್ನು ಹಣಿಗೆಯಲ್ಲಿ ಬಾಚಿ ಕೆಳಗೆ ಬಿಟ್ಟಂತೆ ನೀಟಾಗಿತ್ತು. ಆ ಗಡ್ಡದ ಕೆಲವು ಕೂದಲುಗಳ ತುದಿ ಚಕ್ರಾಸನ ಹಾಕಿ ಕುಳಿತ ಸ್ಥಿತಿಯಲ್ಲಿ ತೊಡೆಗೆ ತಾಗುತ್ತಿತ್ತು.

ಮೊದಲ ನೋಟಕ್ಕೆ ಗೌರವ ಭಾವನೆ ಕೈಲಾಜಿಗೆ ಉಂಟಾಯಿತು. ಸೋತು ಸೊರಗಿದಾಗ ಹೀಗಾಗಬಹುದು ಎಂದುಕೊಂಡ. ಇಂತಹವರ ಬಳಿ ಹೆಚ್ಚು ಬಾಯಿಬಿಡಬಾರದು ಎಂದುಕೊಂಡ. ಅವರು ‘ಏನಾಯ್ತು ತಮ್ಮಾ’ ಎಂದು ಕೇಳಿದಾಗಲೂ, ‘ಸ್ವಲ್ಪ ನಿದ್ದೆ ಬರ್ತಿಲ್ಲ. ವಿಚಿತ್ರ ಯೋಚನೆಗಳು ಕಾಡುತ್ತವೆ. ಹೀಗಾದಾಗ ಬೆಳಿಗ್ಗೆ ಕೆಲಸಕ್ಕೆ ಹೋಗಲು ತೊಂದರೆ ಆಗುತ್ತದೆ’ ಅಂದ. ಅವರು ಇವನನ್ನೇ ದಿಟ್ಟಿಸಿ ನೋಡುತ್ತಾ ಇದ್ದರು. ಮುಂದೆ ಆತನಿಗೆ ತನ್ನನ್ನು ತಾನು ನಿಗ್ರಹಿಸಿಕೊಳ್ಳಲು ಆಗಲಿಲ್ಲ. ಎಲ್ಲವನ್ನೂ ಕಾರಿದ, ಬಿಕ್ಕಿ ಬಿಕ್ಕಿ ಅತ್ತ, ಕುಸಿದು ಕುಳಿತ. ಪಂಡಿತರು ಅವರ ತಲೆಯನ್ನು ನೇವರಿಸಿದರು. ಹಣೆಯನ್ನು ಹೆಬ್ಬೆಟ್ಟಿನ ತುದಿಯಿಂದ ಒತ್ತಿ ಏನನ್ನೋ ಗುನುಗುನಿಸಿದರು. ‘ಸಮಾಧಾನ’ ಎನ್ನುತ್ತಾ ಎದ್ದು ಒಳಗಡೆ ಹೋಗಿ ಬಂದರು. ಜನ ಹೇಳುವಷ್ಟು ತೀರಾ ಕುಂಟರಲ್ಲ ಅವರು ಎಂಬುದನ್ನು ಕೈಲಾಜಿ ಗಮನಿಸಿದ್ದ. ‘ಕುಂಟ ಅಂದರೆ ಕುಂಟ ಅಂತಲ್ಲ ಅರ್ಥ! ನಡಿಗೆ ಸರಿಯಿಲ್ಲ ಎಂಬರ್ಥವೂ ಇರಬಹುದು. ಸಾಮಾನ್ಯವಾಗಿ ಸಮಾಜಕ್ಕೆ ನ್ಯೂನತೆಯನ್ನು ಹುಡುಕುವ ಚಪಲ. ಅದಕ್ಕೆ ಅನುಕಂಪ ವ್ಯಕ್ತಪಡಿಸುವ ಹಂಬಲ, ಕೊನೆಗೆ ಹಂಗಿಸುವ ಮನೋಭಾವ’ ಇವನ ನೋಟವನ್ನು ಗಮನಿಸಿ ಪಂಡಿತರು ಹೇಳಿದ್ದರು.

ಇದನ್ನೂ ಓದಿ | ಸಾಲಭಂಜಿಕೆ ಅಂಕಣ | ಬಂಗಾರದಂಥ ಹುಡುಗಿ ನಗ ಬಯಸಿದಳೇ?

ಕೈಯಲ್ಲಿ ಕಾಕೆಹಣ್ಣಿನ ಬಣ್ಣದ, ಗುಲಗಂಜಿ ಗಾತ್ರದ ಗುಳಿಗೆಗಳನ್ನು ಹಿಡಿದುಕೊಂಡು ಬಂದು, ಒಂದು ಕಾಗದದಲ್ಲಿ ಹಾಕಿ, ಮಡಚಿ ಪಟ್ಟಲ ಮಾಡಿ ಕೊಡುತ್ತಾ ಪಂಡಿತರು ‘ಇದರಲ್ಲಿನ ಎರಡು ಮಾತ್ರೆಗಳನ್ನು ವಿಶ್ರಾಂತಿ ಮಾಡಬಹುದಾದ ಸ್ಥಳದಲ್ಲಿ ಸೇವಿಸು. ಸದ್ಯಕ್ಕೆ ನಿನ್ನ ಮಾನಸಿಕ ಪರಿಸ್ಥಿತಿಗೆ ಮೂರು ಹೊತ್ತು ತೆಗೆದುಕೊಳ್ಳಬೇಕು. ನಂತರ ಎರಡು ಬಾರಿ, ಆಮೇಲೆ ದಿನಕ್ಕೆ ಒಂದು ಬಾರಿ ಮಾಡುತ್ತಾ, ಎರಡರಿಂದ ಒಂದು ಮಾತ್ರೆಗೆ ತರೋಣ. ಇದಕ್ಕೆ ಆರೆಂಟು ತಿಂಗಳು ಬೇಕಾಗಬಹುದು’ ಎಂದರು. ‘ಗುರುಗಳೇ…’ ಅಯಾಚಿತವಾಗಿ ಕೈಲಾಜಿಯ ಬಾಯಿಯಿಂದ ಈ ಶಬ್ದ ಅವನ ಊಹೆಗೂ ಮೀರಿ ಬಂದಿತ್ತು. ‘ನಾನು ಮನೆಗಾಗಲಿ, ಬ್ಯಾಂಕಿಗಾಗಲಿ ಹೋಗುವಂತಿಲ್ಲ. ಬೇರೆ ಸ್ಥಳವಿಲ್ಲ!’

‘ಸರಿ ಹಾಗಾದರೆ, ಅಡುಗೆ ಮನೆಯಲ್ಲಿ ಕೊಡದಲ್ಲಿ ನೀರಿದೆ ನೋಡು, ಮಾತ್ರೆ ಸೇವಿಸಿ, ಹಿಂಬದಿ ಪಕ್ಕದಲ್ಲಿರುವ ಕೋಣೆಗೆ ಹೋಗಿ ವಿಶ್ರಾಂತಿ ಪಡೆ. ಆಮೇಲೆ ನೋಡೋಣ’ ಪಂಡಿತರು ಪರಿಹಾರ ತೋರಿದರು. ನಿಧಾನವಾಗಿ ಬೇರೆ ಬೇರೆ ಸಮಸ್ಯೆ ಇದ್ದವರು, ಅಲ್ಲಿಗೆ ಬರಲು ಆರಂಭಿಸಿದ್ದರು. ಕೈಲಾಜಿ ಮಾತ್ರೆ ಸೇವಿಸಿ, ಒಳಗೆ ಕೋಣೆಯಲ್ಲಿದ್ದ ಚಾಪೆ ಹಾಸಿ ಮಲಗಿದ. ಅರೆನಿದ್ರಾವಸ್ಥೆ ಅಥವಾ ಕನಸಿನ ಸ್ಥಿತಿಯಲ್ಲಿ ಅವನ ಬದುಕು, ಸಿನಿಮಾ ದೃಶ್ಯಗಳಂತೆ ಒಂದಿಷ್ಟು ಚಲಿಸಿ, ರೀಲ್ ಕಟ್ ಆದಂತಾಗಿ ಗಾಢಾಂಧಕಾರ ಆವರಿಸಿತು. ಮತ್ತೆ ಎಷ್ಟು ಕಣ್ಣು ಮುಚ್ಚಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ಪಂಡಿತರು ಬಂದು ಕೇಳಿದರು. ತನಗಾದ ಅನುಭವವನ್ನು ಕೈಲಾಜಿ ಹೇಳಿದ. ‘ಮನೆಯ ಹಿಂದುಗಡೆ ಒಂದಿಷ್ಟು ಬೇರುಗಳಿವೆ. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಮಾಡಲು ಬರುತ್ತದಾ?’ ಎಂದು ಪಂಡಿತರು ಕೇಳಿದಾಗ, ಹೂಂ ಎಂದು ತಲೆಯಾಡಿಸಿದ. ಮಧ್ಯಾಹ್ನ ಊಟವನ್ನು ಒಟ್ಟಿಗೆ ಮಾಡುತ್ತಾ ‘ಅಡಿಗೆ ಮಾಡಲು ಬರುತ್ತದೆಯೇ?’ ಎಂದು ಕೇಳಿದರು. ‘ಮದುವೆಗಿಂತ ಮುಂಚೆ ಸ್ವಂತ ಅಡುಗೆ ಮಾಡಿಕೊಳ್ಳುತ್ತಿದ್ದೆ. ನಾಳೆಯಿಂದ ನಾನೇ ಮಾಡ್ಲಾ?’ ಕೊನೆಯ ಸಾಲು ಹೆಚ್ಚಾಯಿತು ಅಂತ ತುಟಿ ಕಚ್ಚಿಕೊಂಡ ಕೈಲಾಜಿ. ‘ಹಾಗೇ ಮಾಡು’ ಕೊನೆಯಲ್ಲಿ ಉಳಿದ ಮಜ್ಜಿಗೆ ಸುರಿಯುತ್ತಾ ಪಂಡಿತರು ಹೇಳಿದ್ದರು. ಊಟವಾದ ಮೇಲೆ ಮತ್ತೆರಡು ಮಾತ್ರೆಗಳನ್ನು ನುಂಗಿದರೂ ಕೈಲಾಜಿಗೆ ಪರಿಣಾಮ ಕಾಣಲಿಲ್ಲ. ಬ್ಯಾಂಕ್ ಬಿಡುವ ಸಮಯಕ್ಕೆ ಮನೆಗೆ ಹೊರಟ ಕೈಲಾಜಿಗೆ ಪಂಡಿತರು ಕೇಳಿದ್ದರು ‘ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಮನದಲ್ಲಿ ಸುಳಿಯುತ್ತಿದೆಯೇ?’. ಕೈಲಾಜಿ ತಲೆತಗ್ಗಿಸಿದ್ದ. ‘ಆಗುವುದು ಆಗಿಹೋಯಿತು, ಬದುಕಿದ್ದರೆ ಸಂಸಾರ ದಡ ಸೇರುತ್ತದೆ. ಇಲ್ಲಾಂದ್ರೆ ನೀನು ಹೋಗುವುದರ ಜೊತೆಗೆ ಆ ಹೆಣ್ಣುಮಗಳು, ಹಸುಳೆಗಳನ್ನು ಮುಳುಗಿಸಿ ಹೋಗುತ್ತಿ. ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಸಲುವಾಗಿ ಬದುಕು. ದುಡಿದು ದುಡಿದು ಪರಿಹಾರ ಕಂಡುಕೋ. ನಿನ್ನ ಸಮಸ್ಯೆ ಹೆಚ್ಚೆಂದರೆ ಐದು ವರ್ಷಗಳಲ್ಲಿ ಬಗೆಹರಿಯುತ್ತದೆ. ನಿಧಾನವಾಗಿ ಕುಟುಂಬಕ್ಕೆ ಸತ್ಯ ಹೇಳು. ಜಗತ್ತನ್ನು ಎದುರಿಸು. ನಾಳೆ ಬಾ. ದೃಢವಾಗಿ ಸಾಯುವುದಿಲ್ಲ ಎಂದು ನಿರ್ಧರಿಸಿ ಬಾ.’

ಇದನ್ನೂ ಓದಿ | ಕೇರಂ ಬೋರ್ಡ್‌ ಅಂಕಣ | ಉಸಿರು ಹಿಡಿದು ಹಾಡುವೆ, ಕೇಳಡಿ ಕಣ್ಮಣಿ!

ಮರುದಿನದಿಂದ ಅಡುಗೆ, ದಿನನಿತ್ಯದ ಕೆಲಸ, ಔಷಧ ತಯಾರಿಕೆಯಲ್ಲಿ ಪಂಡಿತರಿಗೆ ಕೈಲಾಜಿ ಸಹಾಯ ಮಾಡತೊಡಗಿದ್ದ. ಆನಂತರ ಅವನಿಗೆ ಕ್ರಮೇಣವಾಗಿ ಔಷಧಿ ಕೆಲಸ ಮಾಡತೊಡಗಿತು. ಅವನಿಗೆ, ಕಾಲದಿಂದ ಮುಂದಕ್ಕೆ ಹೋಗಿ ತನ್ನ ಜೀವನವನ್ನು ಕಾಣುವ ಅಪರೂಪದ ಶಕ್ತಿ ಪ್ರಾಪ್ತವಾಯಿತು. ದಿನಾಲೂ ಅಷ್ಟಷ್ಟೇ ಮುಂದಿನ ದಿನಮಾನಗಳು ಕಣ್ಮುಂದೆ ಬರಲಾರಂಭಿಸಿದವು. ಆ ದೃಶ್ಯಗಳಲ್ಲಿ ಆತ ನಿಧಾನವಾಗಿ ಸಹಜ ಸ್ಥಿತಿಗೆ ಬರಲಾರಂಭಿಸಿದ್ದ. ಸಂಸಾರದಲ್ಲಿ ಸಾಮರಸ್ಯ ಸಾಧ್ಯವಾಗಿತ್ತು. ಬ್ಯಾಂಕ್ ಬಿಟ್ಟು ಪಂಡಿತರ ಜೊತೆ ಔಷಧ ತಯಾರಿಕೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಹೆಂಡತಿಗೆ ಹೇಳಿದ. ಆಕೆ ಒಂದೆರಡು ದಿನ ಅಸಮಾಧಾನ ವ್ಯಕ್ತಪಡಿಸಿದಳು. ನಂತರ ಬದಲಾದ ಕೈಲಾಜಿಯ ಮನಸ್ಥಿತಿ ಆಕೆಯನ್ನು ಒಲಿಸಿತು. ಮುಂದೊಂದು ದಿನ ಆಕೆಗೆ ನಿಜವಾದ ವಿಷಯವನ್ನು ಅರುಹಿದಾಗಲೂ ಅದನ್ನು ಆಕೆ ಸಮಾಧಾನ ಚಿತ್ತದಿಂದಲೇ ಸ್ವೀಕರಿಸಿದಳು.

ನಿಧಾನವಾಗಿ ಪಂಡಿತರು ಗುಳಿಗೆಯ ಅವಧಿಯನ್ನು ಇಳಿಸಿದರು. ಪ್ರತಿ ಹಂತದಲ್ಲೂ ಕೈಲಾಜಿ ಅವರ ವಿಶ್ವಾಸ ಗಳಿಸಿದ್ದ. ‘ಗುರುಗಳೇ ಈ ಗುಳಿಗೆಯ ಹೆಸರೇನು?’

ʻಇಲ್ಲಿಯವರೆಗೆ ಬಹಳ ಕಡಿಮೆ ಜನರಿಗೆ ಈ ಔಷಧ ಕೊಟ್ಟಿದ್ದೇನೆ. ಇದರ ಹೆಸರನ್ನು ಯಾರೂ ಕೇಳಲಿಲ್ಲ. ಕೇಳಿದ್ದರೆ ಹೇಳುತ್ತಿದ್ದೆನೋ, ಇಲ್ಲವೋ. ಎಷ್ಟು ಹೇಳುತ್ತಿದ್ದೆನೋ ಗೊತ್ತಿಲ್ಲ! ಕೇಳು ಇವತ್ತು ಎಲ್ಲ ಹೇಳಿಬಿಡುತ್ತೇನೆ.’ ದೀರ್ಘವಾಗಿ ಉಸಿರನ್ನು ಒಳಗೆ ಎಳೆದುಕೊಂಡು ಹೇಳಿದ್ದರು. ದವಾಖಾನೆ ಮುಚ್ಚಿ, ಒಳಬಂದು ದೇವರ ಕೋಣೆಯಲ್ಲಿ ಜಮಖಾನ ಹಾಸಿ ಕುಳಿತುಕೊಂಡು, ಕೈಲಾಜಿಗೆ ಕುಳಿತುಕೊಳ್ಳಲು ಹೇಳಿದರು.

ʻಐವತ್ತು ವರ್ಷಗಳ ಹಿಂದೆ ನಾನು ಹೀಗೆ ಸೋತು ಬಂದು ನಿನ್ನ ಹಾಗೆ ನನ್ನ ಗುರುಗಳ ಎದುರು ಕುಳಿತಿದ್ದೆ. ನಾನು ಅವತ್ತಿನ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಪಾಸಾದವ. ಬಿಸಿರಕ್ತದ ಯುವಕ, ಏನೋ ಸಾಹಸ ಮಾಡಲು ಹೋಗಿ ಇನ್ನೇನೋ ಆಗಿತ್ತು. ಅವಿಭಕ್ತ ಕುಟುಂಬ, ಮನೆಯಿಂದ ಹೊರಗೆ ಹಾಕಿದರು. ಅವೆಲ್ಲ ಒಂದು ದೊಡ್ಡ ಕಥೆ, ಅದು ಬಿಡು. ಗುರುಗಳು ಕಲಿಸಿದ್ದು ಕಲಿಯುತ್ತಾ ಹೋದೆ. ಒಂದು ದಿನ ಅವರ ಬಳಿಯಿದ್ದ ಗ್ರಂಥದಲ್ಲಿ ಒಂದು ಅಪರೂಪದ ವಟಿಯ ವಿವರಣೆ ಇತ್ತು. ಅದನ್ನು ಆ ಗ್ರಂಥದಲ್ಲಿ ವಯ ವಟಿ ಎಂದು ಕರೆದಿದ್ದರು. ನಾನು ಅದರಲ್ಲಿ ಹೇಳಿದ್ದ ಗಿಡಮೂಲಿಕೆಗಳನ್ನು ಗುರುಗಳ ಸಹಾಯದಿಂದ ತಿಳಿದು, ಈ ವಟಿಯನ್ನು ತಯಾರಿಸಿದೆ. ನನ್ನ ಮೇಲೆಯೇ ಪ್ರಯೋಗಿಸಿಕೊಂಡೆ. ಅದು ಕಾಲವನ್ನು ಮುಂದೆ ಹೋಗಿ ನೋಡುವ ವಿಶಿಷ್ಟ ಅನುಭವವನ್ನು ನೀಡಿತ್ತು. ಅದನ್ನು ತಯಾರಿಸಿ, ಪ್ರಯೋಗಿಸಿದಾಗ ನನಗೆ ಒಂದು ಭ್ರಮೆ ಆವರಿಸಿತು. ಏನೋ ಆಗುತ್ತದೆ ಅನ್ನಿಸುತ್ತಿತ್ತು, ಹುಚ್ಚು ಹಿಡಿದ ಹಾಗೆ! ಅಪರೂಪದ್ದು ಸಿದ್ಧಿಸುವಾಗ ಹೀಗಾಗುತ್ತದೆ ಎಂದು ಗುರುಗಳು ಧೈರ್ಯ ತುಂಬಿದರು. ಆದರೂ ಏನೋ ಹಸಿವು, ಅರ್ಥವಾಗದ ಕ್ಷೋಭೆ. ಏನು ಮಾಡಲಿ, ಏನು ಬಿಡಲಿ, ಎನ್ನುವಾಗ ಗುರುಗಳನ್ನು ಹುಡುಕಿಕೊಂಡು ಒಂದು ಸುಂದರ ತರುಣಿ ಬಂದಿದ್ದಳು. ಎಂತಹ ಚೆಂದವದು ಎಂದು ಬಾಯಿಮಾತಿನಲ್ಲಿ ಹೇಳಲಾಗದು. ಅಧ್ಯಯನ ಮಾಡುತ್ತಿದ್ದವನ ಮನಸ್ಸು ಚಂಚಲವಾಯಿತು. ಅವಳನ್ನು ಹೊಂದುವುದು ಪರಮ ಗುರಿಯಾಯಿತು. ಅವಳಿಗೆ ಏನೂ ತಿಳಿಯದ ವಯಸ್ಸು. ನಾನು ಕಾಮಿಸಿದೆ. ಅವಳು ಆರಾಧಿಸಿದಳು. ಗುರುಗಳು ಸಾಕು ಬಿಡು ಎಂದು ಎಚ್ಚರಿಸುವವರೆಗೂ ಮುಂದುವರೆದಿತ್ತು. ಅವಳನ್ನು ಮುಂದೆಂದೂ ಭೇಟಿಯಾಗಲಿಲ್ಲ. ಆಕೆ ಮತ್ತೆ ಇಲ್ಲಿ ಬರದಿದ್ದುದು ಅಚ್ಚರಿ ಮೂಡಿಸಿತ್ತು. ಅದನ್ನು ಮರೆಯಲೆಂಬಂತೆ ಈ ಅಪರೂಪದ ವಟಿಯ ಮೇಲೆ ಮತ್ತಷ್ಟು ಪ್ರಯೋಗ ನಡೆಸಿದೆ. ಗುರುಗಳ ಸಹಾಯದಿಂದ ರಸೌಷಧ ಸೇರಿಸಿದೆ. ಈ ಕಾರಣದಿಂದಾಗಿ, ಇನ್ನೊಂದಿಷ್ಟು ಹೆಚ್ಚಿನ ಪ್ರಯೋಜನ ಈ ವಟಿಯಿಂದ ಜನರಿಗೆ ಸಿಗುವ ಹಾಗಾಯಿತು. ಗ್ರಂಥದಿಂದ ಹೊರತಾಗಿ ಇದನ್ನು ತಯಾರಿಸಿದ್ದರಿಂದ ಬೇರೆಯದೇ ಹೆಸರಿಡುವಂತೆ ಗುರುಗಳು ಸೂಚಿಸಿದರು. ಬಹಳ ಆಲೋಚನೆ ಮಾಡಿದೆ. ಆ ತರುಣಿಯ ಮೋಹ ಕೆಲಸ ಮಾಡಿತೋ, ಪಶ್ಚಾತ್ತಾಪದಿಂದ ಆಯಿತೋ ಒಂದು ನಾಮವನ್ನು- ಕಲಾ ವಟಿ- ನಿದ್ದೆಯಲ್ಲಿ ಉಚ್ಛರಿಸಿದ್ದೆ ಎಂದು ಗುರುಗಳು ಹೇಳಿದ್ದರು’ ಒಮ್ಮೆ ಪಂಡಿತರು ಮೌನ ತಾಳಿದರು.

ಇದನ್ನೂ ಓದಿ | ಸವಿಸ್ತಾರ ಅಂಕಣ | ‘ಭಾರತದ ಜಾತ್ಯತೀತತೆʼ ಎನ್ನುವುದು ʼತುಷ್ಟೀಕರಣʼಕ್ಕೆ ಹೊದಿಸಿದ ಕವಚ

‘ಆ ತರುಣಿಯ ಹೆಸರು ಕಲಾ ಎಂದಾಗಿತ್ತೆ?’ ಕೈಲಾಜಿ ಕುತೂಹಲ ತಡೆಯಲಾಗದೆ ಕೇಳಿದ್ದ. ‘ಅವಳ ಹೆಸರನ್ನು ಹೇಳುವುದು ತಪ್ಪಾಗುತ್ತದೆ. ಅದು ಅವಳ ಹೆಸರಲ್ಲ. ನಾನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು.’ ಕೈಲಾಜಿ ಒಮ್ಮೆ ನಡುಗಿಹೋದ. ಅವತ್ತು ರಾತ್ರಿ ಅವನಿಗೆ ವಿಪರೀತ ಜ್ವರ ಬಂದಿತ್ತು. ಆತ ಜ್ವರ ಏರಿ ಏನೇನೋ ಬಡಬಡಿಸಿದ್ದ ಎಂದು ಮರುದಿನ ಬೆಳಿಗ್ಗೆ ಅವನ ಹೆಂಡತಿ ಹೇಳಿದ್ದಳು.

ಮರುದಿನ ಊಟ ಮಾಡುವಾಗ ಕೈಲಾಜಿ, ಪಂಡಿತರ ಬಳಿ ಕೇಳಿದ, `ಹಾಗಾದರೆ ಈ ಮಾತ್ರೆಯನ್ನು ಕಲಾ ವಟಿ ಎಂದು ಕರೆಯಬೇಕೇ?’

ಗಡ್ಡವನ್ನು ಎಡಗೈಯಿಂದ ನೀವುತ್ತಾ ಪಂಡಿತರು ಹೇಳಿದ್ದರು ‘ಇಲ್ಲ, ಗುರುಗಳು ತಿದ್ದಿದ್ದರು. ಕಾಲ ವಟಿ ಅಂತ. ಆಂಗ್ಲ ಭಾಷೆಯಲ್ಲಿ ಅದನ್ನು ಬರೆದು ನೋಡು, ಎಲ್ಲಾ ಒಂದೇ! ಆಮೇಲೆ ನಾನು ಅದನ್ನೆಂದೂ ಉಪಯೋಗಿಸಲಿಲ್ಲ. ನಿನಗೆ ಪ್ರಯೋಜನ ತಂದಿತಲ್ಲ. ಅಷ್ಟು ಸಾಕು. ಇನ್ನೊಂದು ವಿಶೇಷವೆಂದರೆ ಇದು, ಈಗಿನ ಹೊಸ ತಲೆಮಾರಿಗೆ ಬೇರೆಯದೇ ಪರಿಣಾಮ ಬೀರುತ್ತಿದೆ ಎಂದು ತಿಳಿಯಿತು, ಕೆಲವು ಯುವಕರಿಗೆ ಕೊಟ್ಟಾಗ. ಅದು ಅವರನ್ನು ವರ್ತಮಾನದಲ್ಲಿ ಮಾತ್ರ ಇಡುತ್ತದೆ. ಭೂತ, ಭವಿಷ್ಯದ ಭಾರದಿಂದ ಮುಕ್ತರಾಗಿ, ತುಂಬಾ ಉತ್ಸಾಹದಿಂದ ಆರೋಗ್ಯವಂತರಾಗಿ ಜೀವನ ನಡೆಸುತ್ತಿದ್ದಾರೆ. ಇವಿಷ್ಟು ನಾನು ಹೇಳಬೇಕಿತ್ತು. ಇನ್ನು ಕೊನೆಯ ದಿನ ನೀನು ಈ ಮಾತ್ರೆ ಸೇವಿಸಬೇಕು. ಅಲ್ಲಿಗೆ ಈ ಚಿಕಿತ್ಸೆ ನಿನಗೆ ಕೊನೆಗೊಳ್ಳುತ್ತದೆ. ಸ್ವಾರ್ಥಕ್ಕೆ ಸೇವಿಸಿದರೆ ಇನ್ನೆಂದೂ, ಈ ವಿದ್ಯೆ ಒಲಿಯದು.’ ಎಂದು ಹೇಳುತ್ತಾ ದೇವರ ಮುಂದೆ ಪ್ರಮಾಣ ಮಾಡಿಸಿ, ತಯಾರಿಯ ವಿಧಾನವನ್ನು ಕೈಲಾಜಿಗೆ ಧಾರೆ ಎರೆದಿದ್ದರು. ಮೊದಲ ಬಾರಿಗೆ ಕೈಲಾಶ್ ಕೈಲಾಜಿಗೆ ಕಾಲ ವಟಿ ಸೇವಿಸದೆಯೂ, ತನ್ನ ಭವಿಷ್ಯ ಕಣ್ಮುಂದೆ ಗೋಚರಿಸತೊಡಗಿತ್ತು….. ಎಲ್ಲಿದ್ದೇನೆ ಎಂದು ಅರೆಕ್ಷಣ ಯೋಚಿಸುವಂತಾಯಿತು. ಒಮ್ಮೆಲೇ ಕೈಲಾಜಿಗೆ ಪತ್ನಿಯು ಕೊತ್ತಂಬರಿ ಸೊಪ್ಪು ತರಲು ಹೇಳಿದ್ದು ನೆನಪಾಯಿತು. ಆದರೆ ಯಾವಾಗ ಹೇಳಿದ್ದು ಎಂಬುದು ಮರೆತುಹೋಗಿತ್ತು. ಯಾವುದಕ್ಕೂ ಇರಲಿ, ಒಂದು ಕಟ್ಟು ಕೊತ್ತಂಬರಿ ಸೊಪ್ಪು ಒಯ್ದರೆ ಗಂಟೇನೂ ಹೋಗುವುದಿಲ್ಲ ಎಂದು ತಲೆ ಕೆರೆದುಕೊಳ್ಳುತ್ತಾ, ಕೈಲಾಜಿ ಮುಂದೆ ಹೆಜ್ಜೆ ಹಾಕತೊಡಗಿದ.

(ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು. ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಮತ್ತು ಕೃತಿಕರ್ಷ (ವಿಮರ್ಶಾ ಕೃತಿ) ಪ್ರಕಟಗೊಂಡಿವೆ.)

Exit mobile version