Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ನೆಲೆ

short story nele deepa hiregutthi

:: ದೀಪಾ ಹಿರೇಗುತ್ತಿ

ದೂರದ ಮುಂಬೈನಲ್ಲಿದ್ದ ಪ್ರತಿಭಾ ಮತ್ತೂ ಯಾರಿಗೂ ಗೊತ್ತು ಮಾಡದೇ ಇನ್ನೂ ದೂರದ ದಿಲ್ಲಿಗೆ ಓಡಿಹೋಗಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಬೆಂಗಳೂರಿಗೆ ಬಂದಿದ್ದಾಳೆ ಎಂಬ ವಿಷಯ ಅವಳ ತವರಿನಲ್ಲಿ ಯಾರಿಗೂ ಗೊತ್ತಾಗುವ ಸಾಧ್ಯತೆಯೇ ಇರಲಿಲ್ಲ. ಅಕಾಸ್ಮಾತ್ ಗೊತ್ತಾದರೂ ಯಾರೊಬ್ಬರೂ ತಲೆಕೆಡಿಸಿಕೊಳ್ಳುವ ಪ್ರಶ್ನೆಯೂ ಇರಲಿಲ್ಲ. ಗಂಡ, ಅತ್ತೆ ಮತ್ತು ಎರಡು ವರ್ಷದ ಮಗಳನ್ನು ಬಿಟ್ಟು ತನ್ನ ಸುಖದ ಹಾದಿ ತಾನು ನೋಡಿಕೊಂಡವಳ ಬಗ್ಗೆ ಇಡೀ ಕುಟುಂಬದ ವಲಯದಲ್ಲೇ ಒಂದು ನಮೂನೆಯ ತಿರಸ್ಕಾರದ ಭಾವ ಮಡುಗಟ್ಟಿತ್ತು. ಅದು ಆಗಾಗ್ಗೆ ಮಾತಿನಲ್ಲಿ ನುಸುಳಿ, ಕೆಲವೊಮ್ಮೆ ಹೆಚ್ಚೇ ಆಗಿ ಹೊರಚೆಲ್ಲಿ ತಾವೆಷ್ಟು ಸಾಚಾಗಳು, ಸಹನಾಮಯಿಗಳು ಎಂಬ ಕ್ಷಣಿಕ ಆತ್ಮತೃಪ್ತಿಯನ್ನು ಕುಟುಂಬದ ಕೆಲವು ಹೆಂಗಸರಿಗೆ ಕೊಟ್ಟು ಹೋಗುತ್ತಿದ್ದುದ್ದನ್ನು ಬಿಟ್ಟರೆ ಅವರೆಲ್ಲರ ಪಾಲಿಗೆ ಆಕೆ ಇದ್ದೂ ಸತ್ತಂತಾಗಿದ್ದಳು. ಅಸಲಿಗೆ ಪ್ರತಿಭಾಳ ಬಗ್ಗೆ ಯಾರಿಗೂ ಇತ್ತೀಚಿನ ಮಾಹಿತಿ ಇರಲೂ ಇಲ್ಲ. ಆದರೆ ಈ ಬಾರಿ ಅವಳ ತವರಿನ ದೊಡ್ಡ ಕುಟುಂಬದ ಒಂದೊಂದು ನರಹುಳುವಿಗೂ ಅವಳ ಬರುವಿಕೆಯ ಮಾಹಿತಿ ಇತ್ತು. ಅವಳ ಬರುವಿಕೆಯ ಬಗೆಗಿನ ಅಚ್ಚರಿಗಿಂತ ವಾಟ್ಸಾಪ್ ಗುಂಪಿನಲ್ಲಿ ಯಾವಾಗಲೂ ಗುಂಪಿಗೆ ಸೇರದ ಪದದಂತೆ ಇರುವ, ಒಂದೇ ಒಂದು ಸಂದೇಶವನ್ನೂ ಕಳಿಸದ ಚಿತ್ರಲೇಖಾ ಈ ಮಾಹಿತಿ ಒದಗಿಸಿದವಳು ಎನ್ನುವುದು ಇನ್ನಷ್ಟು ಸೋಜಿಗಕ್ಕೆ ಕಾರಣವಾಗಿತ್ತು.

“ಕ್ಷಮಿಸು ಎನ್ನಲಾರೆ. ಕ್ಷಮೆಗೆ ನಾನು ಅರ್ಹಳಲ್ಲ ಎಂಬುದು ನಿನಗೆ ಗೊತ್ತಿದೆ. ಇಷ್ಟು ದಿನ ಅನಿವಾರ್ಯವಾಗಿ ತಡೆದುಕೊಂಡಿದ್ದೆ. ಇವತ್ತು ಚಿತ್ರಲೇಖಾ ಎನ್ನುವ ಹೆಸರನ್ನು ಫೇಸ್‍ಬುಕ್‍ನಲ್ಲಿ ಹುಡುಕಿದೆ. ನಿನ್ನ ಡಿಪಿ ನಾನೇ ತೆಗೆಸಿದ್ದ ನಿನ್ನ ಕೆಂಪಂಗಿಯ ಫೋಟೋ ಎಂಬುದನ್ನು ನೋಡಿ ಖುಶಿಯಿಂದ ನನ್ನ ಹೃದಯದ ಬಡಿತ ನಿಂತೇ ಹೋದಂತಾಯಿತು. ಆ ಫೋಟೋ ನೀನು ಹಾಕಿಕೊಂಡಿರುವುದಕ್ಕೆ ಹುಚ್ಚು ಧೈರ್ಯದಿಂದ ಈ ಸಂದೇಶ ಕಳುಹಿಸುತ್ತಿದ್ದೇನೆ. ನಾನಿಟ್ಟ ಹೆಸರನ್ನು ಹಾಗೆಯೇ ಇಟ್ಟುಕೊಂಡಿರುವುದಕ್ಕೆ ಥ್ಯಾಂಕ್ಸ್. ನಿನ್ನನ್ನು ಎದುರಿಸುವ ಧೈರ್ಯವಿಲ್ಲದಿದ್ದರೂ ಒಂದೇ ಒಂದು ಸಲ ನಿನ್ನನ್ನು ನೋಡಿ ಹೋಗುವ ಆಸೆ. ನಾನು ಒಂದು ತಿಂಗಳ ಮಟ್ಟಿಗೆ ಬೆಂಗಳೂರಿನಲ್ಲಿ ಇರುತ್ತೇನೆ. ದಯವಿಟ್ಟು ಉತ್ತರಿಸು” ಎಂಬ ಸಂದೇಶವೊಂದು ಮಧು ಎಂಬ ಹೆಸರಿನ, ಪ್ರೊಫೈಲ್ ಚಿತ್ರ ಇಲ್ಲದ, ಮ್ಯುಚುವಲ್ ಫ್ರೆಂಡ್ಸ್ ಯಾರೂ ಇಲ್ಲದ ಹೊಸ ಫೇಸ್‍ಬುಕ್ ಅಕೌಂಟ್‍ನಿಂದ ತನ್ನ ಮೆಸೆಂಜರಿಗೆ ಬಂದಾಗ ಗೊಂದಲಕ್ಕೊಳಗಾದ ಚಿತ್ರಲೇಖಾ ಮರುಕ್ಷಣವೇ ಅದು ತನ್ನ ಹೆತ್ತ ತಾಯಿಯ ಸಂದೇಶ ಎಂಬುದು ಅರಿವಿಗೆ ಬಂದು ಕೋಪದಿಂದ ಉರಿಯುತ್ತಲೇ ಹಿಂದೆ ಮುಂದೆ ಯೋಚಿಸದೇ ಅದರ ಸ್ಕ್ರೀನ್‍ಶಾಟ್ ತೆಗೆದು ತನ್ನ ಫ್ಯಾಮಿಲಿ ಗುಂಪಿಗೆ ಹಾಕಿಬಿಟ್ಟಿದ್ದಳು. ದೊಡ್ಡಮ್ಮಂದಿರು, ಚಿಕ್ಕಮ್ಮ, ಮಾವಂದಿರು, ಅವರ ಮಕ್ಕಳು ಎಲ್ಲರೂ ಇದ್ದ ಆ ಗುಂಪಿನಿಂದ, ಮತ್ತೆ ಅವರವರ ಕಸಿನ್‍ಗಳಿಗೆ, ಅವರು ಮತ್ತೊಬ್ಬರಿಗೆ ಹೀಗೆ ಆ ಸ್ಕ್ರೀನ್‍ಶಾಟ್ ಪ್ರತಿಭಾಳ ಇದ್ದಬದ್ದ ಸಂಬಂಧಿಕರ ಮೊಬೈಲುಗಳೆಲ್ಲವಕ್ಕೂ ಹೋಲ್ಸೇಲಾಗಿ ತಲುಪಿ ಹೊಸ ಚರ್ಚೆಗೆ ಕಾರಣವಾಗಿತ್ತು. ಕಂಬಳಿಹುಳುವನ್ನು ನೋಡಿದರೆ ಹೇಗೆ ಮೈ ಮನಸ್ಸು ಮುರುಟಿದಂತಾಗುತ್ತದೆಯೋ ಅದೇ ರೀತಿ ನೆಂಟರಿಷ್ಟರೂ ತನ್ನ ಹೆಸರು ಕೇಳಿದರೆ ಮುಖ ಹಿಂಡುತ್ತಾರೆಂಬುದು ಪ್ರತಿಭಾಳಿಗೂ ಗೊತ್ತಿಲ್ಲದ ವಿಚಾರವೇನೂ ಆಗಿರಲಿಕ್ಕಿಲ್ಲ ಎಂಬುದನ್ನು ಊಹಿಸಬಹುದಾಗಿದ್ದರಿಂದ ಇಷ್ಟು ನಾಚಿಕೆ ಬಿಟ್ಟು ಮಗಳ ಮುಖ ನೋಡಬೇಕೆಂದು ಮೆಸೇಜ್ ಮಾಡಿದ ಅವಳ ಭಂಡ ಧೈರ್ಯದ ಬಗ್ಗೆಯೇ ಎಲ್ಲರೂ ಈಗ ಚರ್ಚಿಸುತ್ತಿದ್ದರು.

ಇವರೆಲ್ಲ ಹೀಗೆ ಯಾರೋ ತಮ್ಮ ಕೈಕಟ್ಟಿಹಾಕಿ, ಬೆನ್ನೊಳಗೆ ಹಿಮದ ತುಂಡು ಹಾಕಿದಂತೆ ಆಡುತ್ತಿರುವ ಹೊತ್ತಿನಲ್ಲಿಯೇ ಬೆಂಗಳೂರಿನ ಐಶಾರಾಮೀ ಹೋಟೆಲೊಂದರ ಈಜುಕೊಳದ ಪಕ್ಕದ ಈಸಿಚೇರಿನಲ್ಲಿ ಕೂತು ಲ್ಯಾಪ್‍ಟಾಪಿನಲ್ಲಿ ಚಿತ್ರಲೇಖಾಳ ಬಾಲ್ಯದ ಡಿಪಿಯನ್ನೂ ಅವಳು ನಾಲ್ಕು ವರ್ಷದ ಹಿಂದೆ ಪೋಸ್ಟ್ ಮಾಡಿದ್ದ ಅರ್ಧಮರ್ಧ ಕಾಣುವ ಮುಖದ ಫೋಟೋವನ್ನೂ ತದೇಕಚಿತ್ತದಿಂದ ನೋಡುತ್ತ ಕುಳಿತಿದ್ದ ಮಧುವಿನ ಕಣ್ಣೆದುರು ಪ್ರತಿಭಾ ಎಂಬ ಹೆಸರಿನ ತನ್ನ ಬದುಕು ಯಾವುದೋ ಅಪರಿಚಿತವೆನ್ನಿಸುವ ಹುಡುಗಿಯ ಬದುಕಿನಂತೆ, ಪೂರ್ವಜನ್ಮದ ನೆನಪಿನಂತೆ, ಚಲನಚಿತ್ರದ ದೃಶ್ಯಗಳಂತೆ ಹಾದು ಹೋಗುತ್ತಿತ್ತು.

ಹಾಗೆ ನೋಡಿದರೆ ಪ್ರತಿಭಾಳ ಕುಟುಂಬದ ಹಿನ್ನೆಲೆ ಭರ್ಜರಿಯಾದದ್ದೇ. ಪ್ರತಿಭಾಳ ಮುತ್ತಜ್ಜನ ಮೂಲ ಉತ್ತರ ಕರ್ನಾಟಕದ ಒಂದು ಸಂಸ್ಥಾನ. ಇರುವೆಗಳ ತಂಡದ ದಾಳಿಗೆ ಸಿಕ್ಕ ಮುಷ್ಠಿ ಸಕ್ಕರೆ ಕ್ಷಣಾರ್ಧದಲ್ಲಿ ಮಾಯವಾಗುವಂತೆ ದುರದೃಷ್ಟವಶಾತ್ ಹತ್ತಾರು ಕಾರಣಗಳಿಂದ ಅವರ ಆಸ್ತಿಯೆಲ್ಲ ಕರಗಿ ಜೀವನೋಪಾಯಕ್ಕಾಗಿ ಪ್ರತಿಭಾಳ ಅಜ್ಜ ಮಲೆನಾಡಿನ ಹಳ್ಳಿಯೊಂದರಲ್ಲಿ ಬಂದು ನೆಲೆಸಬೇಕಾದ ಪ್ರಸಂಗ ಬಂದೊದಗಿತ್ತು. ದೊಡ್ಡ ಕುಟುಂಬವನ್ನು ಸಾಕಲು ಅವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಹಾಸಿಗೆ ಯಾವಾಗಲೂ ಗಿಡ್ಡವೇ. ಒಂದು ಸಲ ತಲೆ ನೆಲದ ಮೇಲಾದರೆ ಇನ್ನೊಂದು ಸಲ ಕಾಲು. ಪ್ರತಿಭಾಳ ಅಪ್ಪ ಅಮ್ಮನಿಗೂ ಇಬ್ಬರು ಗಂಡುಮಕ್ಕಳು, ಐದು ಹೆಣ್ಣುಮಕ್ಕಳು. ಹೆಸರಿಗೆ ಸಂಸ್ಥಾನದ ಮನೆತನ, ತಿನ್ನಲು ಅನ್ನಕ್ಕೆ ತತ್ವಾರ. ಹೆಣ್ಣು ಮಕ್ಕಳಿಗೆ ಯೋಗ್ಯ ಗಂಡನ್ನು ಹುಡುಕುವ ಆಸೆ ಇದ್ದರೂ ಅದು ನನಸಾಗುವ ಪ್ರಶ್ನೆಯೇ ಇಲ್ಲ. ಗಂಡು ಸಿಕ್ಕಿದ್ದೇ ತಡ ಎನ್ನುವಂತೆ ಮದುವೆ ಮಾಡಿ ಹುಡುಗಿಯರನ್ನು ದಾಟಿಸುವುದೇ ಅಪ್ಪ ಅಣ್ಣ ತಮ್ಮಂದಿರ ಕೆಲಸವಾಗಿತ್ತು. ಮೂರನೇ ಮಗಳಾದ ಪ್ರತಿಭಾ ಮುಂಬಯಿಯಲ್ಲ್ಲಿ ನೆಲೆಸಿದ್ದ ದೂರದ ಸಂಬಂಧದ ನೆಂಟರ ಹುಡುಗನ ಹೆಂಡತಿಯಾದದ್ದು ಹಾಗೆ. ಪಿಯುಸಿ ಮುಗಿಸಿ ಡಿಗ್ರಿಗೆ ಹೋಗುವ ಆಸೆಯಿದ್ದರೂ ಬಡತನದಿಂದ ಓದಲಾಗದೇ ಮನೆಯಲ್ಲಿಯೇ ಇದ್ದ ಪ್ರತಿಭಾ ಮಾತಿನ ಮಲ್ಲಿ. ಕಲ್ಲನ್ನೂ ಮಾತಾಡಿಸುವವಳು, ವಟವಟಸುಬ್ಬಿ ಎಂದೆಲ್ಲ ಅವಳ ಅಡ್ಡ ಹೆಸರು. ‘ಪ್ರತಿಭಾಂದು ಮರದ ಬಾಯಿಯಾಗಿದ್ದರೆ ಯಾವತ್ತೋ ಒಡೆದು ಹೋಗುತ್ತಿತ್ತು’ ಎಂದು ಹತ್ತಿರದವರೆಲ್ಲ ತಮಾಷೆ ಮಾಡುವುದೇ ಮಾಡುವುದು. ಒಂದು ಹೊತ್ತು ಊಟವಿಲ್ಲದಿದ್ದರೂ ತೊಂದರೆಯಿಲ್ಲ ಅವಳಿಗೆ ಮಾತು ಬೇಕು. ಅವಳಿಗೆ ಯಾರಾದರೂ ಏನಾದರೂ ಪ್ರಶ್ನೆ ಕೇಳಿದರೆ ಒಂದು ಅಂಕದ ಉತ್ತರಕ್ಕೆ ಆಸ್ಪದವೇ ಇಲ್ಲ. ಎಲ್ಲ ಹತ್ತು ಅಂಕಗಳ ದೀರ್ಘ ಉತ್ತರಗಳೇ! ಇಂತಹ ಚಿನಕುರಳಿಯಂತಹ ಹುಡುಗಿಗೆ ಭಾಷೆ ಬಾರದ ಹೊಸ ಊರೇ ಎಂದು ತಾಯಿ ಕಣ್ಣೀರು ಹಾಕಿದ್ದರು. ಆದರೆ ಮನೆಯಿಂದ ಬಲುದೂರ ಬಂದಿದ್ದರ ಬಗ್ಗೆ ಪ್ರತಿಭಾಳಿಗೆ ಬೇಸರವಿರಲಿಲ್ಲ, ಮನೆಯ ಜನರನ್ನು ಬಿಟ್ಟರೆ ಬೇರೆ ಮನುಷ್ಯರ ಮುಖವನ್ನು ನೋಡುವುದೇ ಅಪರೂಪವಾಗಿದ್ದ ಕಾಡಿನ ನಡುವಿನ ಮನೆಯಿಂದ ಮುಂಬಯಿಯ ಜನಾರಣ್ಯಕ್ಕೆ ಹೋಗುವುದು ಅವಳಿಗೆ ಖುಶಿಯೇ ಆಗಿತ್ತು. ಆದರೆ ಮದುವೆಯ ದಿನವೂ ಒಂದೂ ಮಾತಾಡದ ಗಂಡನ ಬಗ್ಗೆ ಅವಳಿಗೆ ಮುನಿಸಿತ್ತು. ಆ ಮುನಿಸು ಹತಾಶೆಯಾಗಿ ಬದಲಾದದ್ದು ಮುಂಬೈಗೆ ಬಂದ ಮೇಲೆ! ತನ್ನ ಅಣ್ಣನ ಹಾಗೆ ಬಹಳ ಶಾಂತ ಸ್ವಭಾವದವನಿರಬೇಕು, ತನ್ನಂತೆ ಅವನಿಗೂ ಸಂಕೋಚವಿರಬೇಕು ಎಂದುಕೊಂಡಿದ್ದ ಪ್ರತಿಭಾಗೆ ಗಂಡ ಕಿವುಡ ಮೂಕ ಎಂದು ಗೊತ್ತಾದ ಮೇಲೆ ಅವಳÀ ಕನಸಿನಲೋಕ ಇಸ್ಫೀಟಿನ ಎಲೆಗಳ ಮನೆಯಂತೆ ಕುಸಿದು ಬಿದ್ದಿತ್ತು! ಮಾಡುವುದಾದರೂ ಏನನ್ನು? ಹೇಳುವುದಾದರೂ ಯಾರಿಗೆ? ಹೇಗೋ ಕಷ್ಟಪಟ್ಟು ಟ್ರಂಕ್‍ಕಾಲ್ ಮಾಡಿ ಯಾರದೋ ಮನೆಗೆ ವಿಷಯ ತಿಳಿಸಿ ಅಪ್ಪ ಅಣ್ಣಂದಿರಿಗೆ ಹೇಳಲು ಹೇಳಿದ್ದಳು, ಪತ್ರವನ್ನೂ ಬರೆದು ಹಾಕಿದ್ದಳು. ನೂರಾರು ಮೈಲಿ ದೂರವಿರುವ ಅಪ್ಪ ಅಣ್ಣಂದಿರು ನೋಡಲೂ ಬರಲಿಲ್ಲ, ಕನಿಷ್ಠ ಒಂದು ಪತ್ರವನ್ನೂ ಹಾಕಲಿಲ್ಲ. ತನ್ನ ಬದುಕೇ ಒಂದು ಮೂಕಿಚಿತ್ರವಾಗಿ ಬಿಟ್ಟಿತಲ್ಲ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಬಹು ಕಷ್ಟಪಟ್ಟಳಾಕೆ. ಹಿಂದಿನ ಕಾಲದಲ್ಲಿ ಕಣ್ಣು ಕಟ್ಟಿ ಹೆಣ್ಣುಮಕ್ಕಳನ್ನು ಕಾಡಿಗೆ ಬಿಡುತ್ತಿದ್ದ ಕಥೆ ಪ್ರತಿಭಾಳ ವಿಚಾರದಲ್ಲಿ ನಿಜವಾಗಿತ್ತು. ಆದರೆ ಅವಳು ಏನೂ ಮಾಡುವ ಹಾಗಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್

ಮೊದಲ ದಿನಗಳು ತಳಮಳ, ಅಳು, ಉಪವಾಸದಲ್ಲಿ ಕಳೆದರೂ ಕ್ರಮೇಣ ಕಾಲ ಕರುಣೆ ತೋರಿ ತಾನೇ ಮದ್ದಾಯಿತು. ಕಿವಿ ಕೇಳದಿದ್ದರೂ, ಬಾಯಿ ಬರದಿದ್ದರೂ ರವಿ ನೇಟುಪಾಟಾದ ದೇಹದ ಚೆಂದದ ಮುಖದ ಹುಡುಗ. ದಟ್ಟ ಹುಬ್ಬು ಜೇನುಗಣ್ಣು ನೇರ ಮೂಗು ತೆಳು ಮೀಸೆಯ ನಗು ಸೂಸುವ ಚೆಲುವ. ಇವಳು ಬಿಕ್ಕಳಿಸಿ ಅಳುವಾಗಲೆಲ್ಲ ಪಕ್ಕ ಕೂತು ಚಡಪಡಿಸುವ ಅವನ ಮೈಮನಸಿನ ಬಿಸುಪಿಗೆ ಇಪ್ಪತ್ತರ ಹುಡುಗಿ ಕರಗಿದಳು. ತಬ್ಬಿದ ಬಳ್ಳಿ ಹಬ್ಬಿಕೊಂಡು ಹೂ ಬಿಟ್ಟಿತು. ವರ್ಷದೊಳಗೇ ಹುಟ್ಟಿದ ಮುದ್ದಾದ ಹೆಣ್ಣುಮಗುವಿಗೆ ಮಹಾಭಾರತದಲ್ಲಿ ತನಗೆ ಇಷ್ಟವಾದ ಪಾತ್ರಗಳಲ್ಲೊಂದಾದ ಚಿತ್ರಲೇಖೆಯ ಹೆಸರಿಟ್ಟಿದ್ದಳು ಪ್ರತಿಭಾ. ಅಡೆತಡೆಗಳನ್ನು ಮೀರಿ ಬದುಕು ಹರಿಯುತ್ತಲಿತ್ತು. ನೀರಲ್ಲಿ ಮುಳುಗಿದ ವ್ಯಕ್ತಿ ಗಾಳಿಗಾಗಿ ಕಾತರಿಸುವಂತೆ ಹೊಟ್ಟೆಪಾಡೇ ದೊಡ್ಡದಾದಾಗ ಇತರ ಸಂಗತಿಗಳು ಹಿನ್ನೆಲೆಗೆ ಸರಿದವು. ಅತ್ತೆಯ ದುಡಿಮೆ ಮಗುವಿನ ಹಾಲುಪುಡಿಗೂ ಸಾಲದಾದಾಗ ಹೆರಿಗೆಯಾಗಿ ಆರು ತಿಂಗಳಾಗುತ್ತಿದ್ದಂತೆ ವಕೀಲರ ಕಛೇರಿಯೊಂದರಲ್ಲಿ ಸಹಾಯಕಿಯಾಗಿ ಸೇರಿಕೊಂಡಳು ಪ್ರತಿಭಾ. ಅತ್ತೆ ಹಪ್ಪಳ ಸಂಡಿಗೆ ಮಾಡಿ ಮಾರಿ ಹೊಟ್ಟೆ ಹೊರೆಯುತ್ತಿದ್ದರು. ಆಗೆಲ್ಲ ಕಿವುಡ ಮೂಕರಿಗೆ ಶಾಲೆಗಳು ಹೆಚ್ಚಿಗೆ ಇರಲೂ ಇಲ್ಲ, ಜನರಿಗೆ ಅದರ ಮಹತ್ವ ಗೊತ್ತಿರಲೂ ಇಲ್ಲ. ಗೊತ್ತಿದ್ದರೂ ರವಿಯನ್ನು ಅಲ್ಲಿಗೆಲ್ಲ ಕಳಿಸುವ ಚೈತನ್ಯ ಇವರಿಗೆ ಇರಲೂ ಇಲ್ಲ. ಹಾಗಾಗಿ ತಮ್ಮ ಮಗನಿಗೆ ಮನೆಯಿಂದ ಹೊರಹೋಗಿ ಕೆಲಸ ಮಾಡಲು ಹೇಗೂ ಆಗುವುದಿಲ್ಲ ಎಂದು ಆಕೆ ರವಿಗೆ ಮನೆಯೊಳಗಿನ ಸಕಲ ಕೆಲಸಗಳನ್ನೂ ಅಚ್ಚುಕಟ್ಟಾಗಿ ಮಾಡಲು ಕಲಿಸಿಟ್ಟಿದ್ದರು. ಮುಂದೆ ಅದೃಷ್ಟವಿದ್ದರೆ ಮದುವೆ ಗಿದುವೆ ಆದರೆ ಹೆಂಡತಿ ಹೊರಗಡೆ ನಾಲ್ಕು ಕಾಸು ದುಡಿದರೆ ಇವನು ಈ ಕಡೆ ಮನೆ ನೋಡಿಕೊಳ್ಳಬಹುದಲ್ಲ ಎಂಬ ದೂರಾಲೋಚನೆಯ ಹೆಂಗಸಾಗಿದ್ದಳಾಕೆ. ಆದ ಕಾರಣ ಮನೆಯಲ್ಲಿ ಪ್ರತಿಭಾಗೆ ಮಗು ನೋಡಿಕೊಳ್ಳುವ ಕೆಲಸವೂ ಇರಲಿಲ್ಲ.

ಹಾಗಾಗಿ ಆಕೆ ಕೆಲಸದಿಂದ ಬಂದವಳೇ ಮನೆಯ ಪಕ್ಕದಲ್ಲಿ ಶಾರ್ಟ್‍ಹ್ಯಾಂಡ್ ಕಲಿಯಲು ಹೋಗುತ್ತಿದ್ದಳು. ಮೊದಲೇ ಚೆಲುವೆ, ಇದೀಗ ಕೆಲಸಕ್ಕೆ ಹೋಗಿ ನಾಲ್ಕು ಕಾಸು ದುಡಿವ ಆತ್ಮವಿಶ್ವಾಸದಿಂದಲೂ ಸರಳ ಅಲಂಕಾರದಿಂದಲೂ ಬಹಳ ಆಕರ್ಷಕವಾಗಿ ಕಾಣುತ್ತಿದ್ದಳು. ಮೋಡದಿಂದ ಸುತ್ತುವರೆದಾಗ ಮಸುಕಾಗಿ ಕಾಣುವ ಚಂದ್ರ ನಿಚ್ಚಳ ಆಕಾಶದಲ್ಲಿ ವಿಶಿಷ್ಟವಾಗಿ ಕಾಣುವಂತೆ ಮಹಾನಗರದ ನಯನಾಜೂಕುಗಳನ್ನು ಕಲಿತು ಅದ್ವಿತೀಯವಾಗಿ ಕಾಣತೊಡಗಿದಳು. ಆಗತಾನೇ ಇಪ್ಪತ್ತೆರಡು ದಾಟಿದ ಹುಡುಗಿ ಮಗುವೊಂದರ ತಾಯಿ ಎಂದು ಆಣೆ ಮಾಡಿ ಹೇಳಿದರೂ ಯಾರೂ ನಂಬದ ಹಾಗಿದ್ದಳು. ಮೊದಲು ತನ್ನ ಪುಟ್ಟ ಹಳ್ಳಿಯಲ್ಲಿ, ನಂತರ ಮುಂಬಯಿಯ ಕೊಳಕು ಬೀದಿಯೊಂದರ ಇಕ್ಕಟ್ಟಾದ ಬಿಡಾರವೆಂಬ ಬಾವಿಯಲ್ಲಿ ಕಪ್ಪೆಯಂತೆ ಇದ್ದವಳಿಗೆ ಕೆಲಸಕ್ಕೆ ಹೋಗಲು ಶುರು ಮಾಡಿದ ಮೇಲೆ ತನ್ನ ಕಛೇರಿಯ ಪಕ್ಕದ ಸಮುದ್ರದಂತೆ ಬದುಕು ದೊಡ್ಡದಾಗಿ ಕಂಡಿತ್ತು. ತನ್ನೊಳಗನ್ನು ಎಂದೂ ಮಾತಿನ ಮೂಲಕ ಸ್ಪರ್ಶಿಸಲಾಗದ, ಕೇಳುವ ಕಿವಿಯಾಗಿ ಸಾಂತ್ವನ ನೀಡಲಾಗದ ಗಂಡ, ಪೂರ್ತಿಯಾಗಿ ತಾನು ತನ್ನನ್ನೆಂದೂ ಅವನೆದುರು ತೆರೆದುಕೊಳ್ಳಲಾಗದ ವಾಸ್ತವ ಈಗೀಗ ಅವಳೆದುರು ಢಾಳಾಗಿ ಗೋಚರಿಸತೊಡಗಿತ್ತು. ಈ ವಾಸ್ತವದ ಬಿಸಿಲು ಸುಡಲಾರಂಭಿಸಿದ ಮೇಲೆ ಪ್ರತಿಭಾ ಒಂದೊಂದು ದಿನವನ್ನೂ ತಳಮಳದಿಂದ ಕಳೆಯಲಾರಂಭಿಸಿದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪರವೇಶ್ಮಸ್ಥನ ಫಿಕ್ಹ್‌ ಪ್ರಸಂಗವು…

ತಾನಿನ್ನೂ ಖರೀದಿಸಬೇಕೆಂದುಕೊಂಡಿದ್ದ ವಸ್ತುವನ್ನು ಕಳೆದುಕೊಂಡ ಹಾಗೆ, ನೆನಪು ಮೂಡುವ ಮುನ್ನವೇ ಮಾಸುವ ಹಾಗೆ ಭ್ರಮಿಸಿ ಯೋಚಿಸಿ ನರಳಿ ತನ್ನ ತಲೆಬುಡವಿಲ್ಲದ ಯೋಚನೆಗೆ ತಾನೇ ಕಂಗೆಟ್ಟಳು. ಯೋಚಿಸಿ ಯೋಚಿಸಿ ತಲೆ ಸಿಡಿದು ಹೋಗಬಹುದೆಂದು ಅನ್ನಿಸಿದ ಕ್ಷಣವೊಂದರಲ್ಲಿ ಈಗ ನಡೆಯುತ್ತಿರುವ ಹಾದಿಯನ್ನು ಬಿಟ್ಟು ಬೇರೆ ಹಾದಿಯೆಡೆ ಹೊರಳಿಕೊಳ್ಳಲೂಬಹುದು ಎಂಬ ಯೋಚನೆ ಹುಟ್ಟಿಕೊಂಡಿತ್ತು. ಆದರೆ ತನ್ನನ್ನು ಹೊರದೂಡಿ ಮರೆತ ಹಾದಿಗೆ ಮರಳಲು ಅವಳು ತಯಾರಿರಲಿಲ್ಲ. ಅದಾದ ಕೆಲ ವಾರಗಳ ನಂತರ ಬಾಸ್ ದೆಹಲಿಯಲ್ಲಿ ಹೊಸ ಕಛೇರಿಯೊಂದನ್ನು ತೆರೆಯುವ ಮಾತಾಡುತ್ತಿದ್ದಾಗ ಕೇಳಿಸಿಕೊಂಡ ಅವಳಲ್ಲಿ ಹೊಸ ಕನಸೊಂದು ಮೊಳಕೆಯೊಡೆದಿತ್ತು. ಸಾಧ್ಯವಾದರೆ ತನ್ನನ್ನು ಹೊಸ ಕಛೇರಿಗೆ ಕಳಿಸುವಂತೆ ಒಂದು ಕೋರಿಕೆಯನ್ನು ಬಾಸ್ ಕಿವಿಗೆ ಹಾಕಿಯೂ ಇಟ್ಟಿದ್ದಳು. ಕೈಕಾಲು ಮೂಡದ ಆ ಅಸ್ಪಷ್ಟ ಕನಸಿಗಾಗಿಯೇ ಅವಳು ಇನ್ನಿಲ್ಲದ ಶೃದ್ಧೆಯಿಂದ ಶಾರ್ಟ್‍ಹ್ಯಾಂಡ್ ಟೈಪಿಂಗ್ ಎಲ್ಲವನ್ನೂ ಕರಗತ ಮಾಡಿಕೊಂಡಳು. ಸ್ಪೋಕನ್ ಇಂಗ್ಲಿಷ್ ತರಗತಿಗಳಿಗೂ ಹೋಗಿ ತಕ್ಕಮಟ್ಟಿಗೆ ಮಾತಾಡುವುದನ್ನೂ ಕಲಿತಳು, ಹೇಗೂ ಮರಾಠಿ, ಹಿಂದಿ ರೂಢಿಯಾಗಿತ್ತು. ಯುದ್ಧವಿಲ್ಲದ ಕಾಲದಲ್ಲೂ ಸೈನಿಕನೊಬ್ಬ ಕತ್ತಿವರಸೆಯ ತನ್ನ ಕೌಶಲ್ಯವನ್ನು ಸದಾ ಹೆಚ್ಚಿಸಿಕೊಳ್ಳುವಂತೆ, ಬೆಂಕಿಯಲ್ಲಿ ಬೆಂದು ಕತ್ತರಿಸಿಕೊಂಡು ಬಡಿಯಲ್ಪಟ್ಟು ಆಭರಣವಾದ ಚಿನ್ನ ಕೊಳ್ಳುವವರಿಗಾಗಿ ಕಾಯುವಂತೆ ದೆಹಲಿಯ ಕಚೇರಿಯ ಸುದ್ದಿ ಮತ್ತೆ ಯಾವಾಗ ಬಾಸ್ ಎತ್ತುತ್ತಾರೆಂದು ಎದುರು ನೋಡತೊಡಗಿದಳು.

ಭೂತವನ್ನು ಹೊತ್ತುಕೊಂಡು ತಾನು ಉಜ್ವಲ ಭವಿಷ್ಯವನ್ನು ಪ್ರವೇಶಿಸಲಾಗದೆಂಬುದು ಅವಳಿಗೆ ಚೆನ್ನಾಗಿ ಗೊತ್ತಿತ್ತು. ಮತ್ತು ಮುಂಬಯಿ ಬಿಡುವವರೆಗೆ ಅತೀತ ತನ್ನ ಬೆನ್ನು ಬಿಡುವುದಿಲ್ಲ ಎಂದೂ ಅರಿವಿತ್ತು. ಅಷ್ಟೇ, ತನ್ನ ಕಥೆಯಲ್ಲಿ ಅತ್ತೆ, ಗಂಡ, ಮಗಳು, ತವರಿನವರು ಎಂಬೆಲ್ಲ ಪಾತ್ರಗಳನ್ನು ಇಟ್ಟುಕೊಳ್ಳುವ ಯಾವ ಇರಾದೆಯೂ ಪ್ರತಿಭಾಗೆ ಇರಲಿಲ್ಲ. ಏಕೆಂದರೆ ಅವಳು ಕನಸಿದ್ದ ಬಯಸಿದ್ದ ಬದುಕು ಇವರು ಯಾರಿಗೂ ಸಂಬಂಧಿಸಿರಲಿಲ್ಲ. ಜತೆಗೆ ಮತ್ತೊಬ್ಬ ವಕೀಲರ ಕಚೇರಿಯ ಮೂಲಕ ಆಕೆ ತನ್ನ ಹೆಸರನ್ನು ಕಾನೂನುಬದ್ಧವಾಗಿ ಮಧು ಎಂದು ಬದಲಾಯಿಸಿಕೊಂಡು ಒಂದು ಪುಟ್ಟ ಸ್ಥಳೀಯ ಮರಾಠಿ ಪತ್ರಿಕೆಯಲ್ಲಿ ಇಂಗ್ಲಿಷಿನಲ್ಲಿ ಜಾಹೀರಾತು ಕೊಟ್ಟು ಅದನ್ನು ಜೋಪಾನವಾಗಿ ಕಾದಿಟ್ಟುಕೊಂಡಿದ್ದಳು. ಟ್ರ್ಯಾಕಿನಲ್ಲಿ ಓಡಲು ಸಿದ್ಧವಾಗಿ ನಿಂತ ಓಟಗಾರ್ತಿ ‘ರೆಡಿ ಸ್ಟಾರ್ಟ್’ ಎಂಬ ಆದೇಶಕ್ಕಾಗಿ ಕಾಯುತ್ತಿರುವಂತೆ ಆತಂಕಭರಿತ ಉದ್ವೇಗದಲ್ಲಿ ಪ್ರತಿಭಾ ತನ್ನ ಮುಂದಿನ ಹೆಜ್ಜೆಗಾಗಿ ತಾನೇ ಕಾಯುತ್ತಿದ್ದಳು.

ದೀಪಾವಳಿಗೆ ಎರಡು ದಿನ ಮುಂಚಿನಿಂದಲೇ ಪ್ರತಿಭಾ ಬಿಡುವಿಲ್ಲದ ಕೆಲಸದಲ್ಲಿ ತೊಡಗಿದ್ದಳು. ಮನೆಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಸಾಮಾನನ್ನು ಟ್ಯಾಕ್ಸಿಯಲ್ಲಿ ತೆಗೆದುಕೊಂಡು ಬಂದಳು. ಗಂಡನಿಗೆ ಅತ್ತೆಗೆ ಮಗಳಿಗೆ ನಾಲ್ಕು ನಾಲ್ಕು ಜತೆ ಬಟ್ಟೆ ತಂದಳು. ಜತೆಗೆ ಬೆಡ್‍ಶೀಟು, ಟವೆಲ್ಲುಗಳನ್ನೂ ತಂದಿಟ್ಟಳು. ಕರೆಂಟು ನೀರಿನ ಬಿಲ್ಲುಗಳನ್ನು ಮುಂಚಿತವಾಗಿ ಹೋಗಿ ಕಟ್ಟಿ ಬಂದಳು. ಇವಳು ಇಷ್ಟೆಲ್ಲ ಮಾಡುತ್ತಿರುವಾಗ ಅತ್ತೆ ಒಂದೇ ಸಮನೆ ಒಟಗುಡುತ್ತಿದ್ದರು, “ದುಡಿವಾಗ ನಾಕು ಕಾಸು ಉಳಿಸದೇ ಹೀಗೆ ಖರ್ಚು ಮಾಡಿದರೆ ಮುಂದೇನು ಗತಿ?”
ಅವತ್ತು ದೀಪಾವಳಿಯ ದಿನ. ಅವಳೇ ಎಲ್ಲರಿಗೂ ಹಬ್ಬದಡಿಗೆ ಮಾಡಿ ಬಡಿಸಿದಳು. ಮಗಳಿಗೆ ಹೊಸ ಬಟ್ಟೆ ತೊಡಿಸಿ ಖುಶಿ ಪಟ್ಟಳು. ಹತ್ತಿರದ ಸ್ಟುಡಿಯೋಗೆ ಹೋಗಿ ಮಗಳ ಫೋಟೋ ತೆಗೆಸಿ ಸಂಜೆಯೇ ತೊಳೆದು ಕೊಡಲು ಹೇಳಿದಳು. ಎಲ್ಲರಿಗೂ ಊಟ ಬಡಿಸಿಯಾದ ಮೇಲೆ ಮಗುವನ್ನು ಕಾಲ ಮೇಲೆ ಹಾಕಿಕೊಂಡು ಮಲಗಿಸುತ್ತಿದ್ದಾಗ ಗಂಡನೂ ಬಂದು ಇವಳನ್ನು ತಬ್ಬಿ ಹಿಡಿದು ಹೆಗಲಿಗೊರಗಿದ. ಪ್ರತಿಭಾಳ ಕಣ್ಣಿಂದ ಎರಡು ಹನಿಗಳುರುಳಿದವು. ಒಂದು ಕ್ಷಣ “ಈ ಕ್ಷಣದಲ್ಲಿಯೇ ಇದ್ದು ಬಿಡಲೇ” ಯೋಚಿಸಿದಳು. ಆದರೆ ಅದು ಆಗುಹೋಗದ ಮಾತೆಂಬುದು ಅವಳಿಗೂ ಗೊತ್ತಿದ್ದ ಕಾರಣ ಗಂಟಲೊಳಗೆ ಕಟ್ಟಿ ಬಂದ ಸಂಕಟವನ್ನು ಸದ್ದಾಗದಂತೆ ನುಂಗಿ ಒಂದು ದೀರ್ಘ ಉಸಿರೆಳೆದುಕೊಂಡು ಮಗಳ ಜತೆ ಗಂಡನ ತೋಳನ್ನೂ ಮೃದುವಾಗಿ ತಟ್ಟತೊಡಗಿದಳು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಬೆಳಿಗ್ಗೆ ಇವರು ಏಳುವ ವೇಳೆಗಾಗಲೇ ತಡರಾತ್ರಿ ಬಿಡುವ ದೆಹಲಿಯ ರೈಲು ಬಹುದೂರ ತಲುಪಿತ್ತು. ಹುಡುಕುವುದಾದರೂ ಎಲ್ಲಿ? ಪ್ರತಿಭಾ ಕೆಲಸಮಾಡುವ ಕಚೆರಿಯ ವಿಳಾಸ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಮನೆಯಲ್ಲಿದ್ದ ಮದುವೆಯ ಒಂದಿಷ್ಟು ಫೋಟೋಗಳೂ ನಾಪತ್ತೆಯಾಗಿದ್ದವು. ಅವಳ ಫೋಟೋ ಆಗಲೀ ಕಾಗದಪತ್ರವಾಗಲೀ ಬಟ್ಟೆಬರೆಯಾಗಲೀ ಯಾವುದೂ ಇರಲಿಲ್ಲ. ಊರಿಗೆ ಫೋನ್ ಮಾಡಿದರೆ ತನ್ನೆಲ್ಲ ಫೋಟೋಗಳನ್ನು, ಕ್ಯಾಮರಾದ ರೋಲ್ ಸಮೇತ, ಕಾಪಿ ಮಾಡಿಸಿಕೊಡುತ್ತೇನೆ ಎಂದು ತೆಗೆದುಕೊಂಡು ಹೋಗಿದ್ದಾಳೆ ಎಂದರು. ಚಾಣಾಕ್ಷ ಕಳ್ಳ ತನ್ನ ಯಾವುದೇ ಸುಳಿವು ಬಿಡದೆ ಇರಲು ತೋರುವ ಎಚ್ಚರಿಕೆಯನ್ನು ಎಲ್ಲದರಲ್ಲೂ ತೋರಿಸಿದ್ದಳು. ಸುಮ್ಮನೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ನದಿ ಹುಚ್ಚೆದ್ದು ದಿಕ್ಕು ಬದಲಿಸಿ ಎಲ್ಲವನ್ನೂ ಕೊಚ್ಚಿಕೊಂಡು ಹೋದಂತೆ, ಹಳೆಯ ಕಥೆಯ ಪಾತ್ರಗಳ ಬಗ್ಗೆ ಕಿಂಚಿತ್ತೂ ಕರುಣೆ ಇಲ್ಲದೇ ಬರೆಯುತ್ತಿದ್ದ ಕತೆಯನ್ನು ಅರ್ಧಕ್ಕೇ ನಿಲ್ಲಿಸಿ ಹಾಳೆಯನ್ನು ಮುದ್ದೆ ಮಾಡಿ ಕಸದ ಬುಟ್ಟಿಗೆ ಬಿಸಾಕಿ ಹೊಸ ಕತೆ ಶುರು ಮಾಡಿದ ಕತೆಗಾರನಂತೆ, ಅತ್ತೆ, ಗಂಡ, ಮಗಳು, ಮನೆ ಎಲ್ಲವನ್ನೂ ಬಿಟ್ಟು ಪ್ರತಿಭಾ ಮುಂಬೈನ ಬೋರಿವಿಲಿಯ ಚಾಳಿನಿಂದ ನಾಪತ್ತೆಯಾಗಿದ್ದಳು.
ಲ್ಯಾಪ್‍ಟಾಪ್ ಮುಚ್ಚಿ ಕುರ್ಚಿಗೊರಗಿದಳು ಮಧು. ತನ್ನ ಅತೀತವನ್ನು ಯಾರೊಬ್ಬರಿಗೂ ಹೇಳದೇ ಇಪ್ಪತ್ನಾಲ್ಕು ವರ್ಷಗಳಿಂದ ಎದೆಯೊಳಗೇ ಇಟ್ಟುಕೊಂಡಿದ್ದಾಳಾಕೆ. ಪ್ರತಿಭಾ ಎನ್ನುವ ಹಳ್ಳಿಯ ಹುಡುಗಿ ಅವಳಿಗೇ ಅಪರಿಚಿತೆಯಾಗಿ ಬಹಳ ಕಾಲವಾಗಿದೆ. ಚಿತ್ರಲೇಖಾ ಎಂಬ ಕಳೆದುಹೋದ ಮುದ್ರೆಯುಂಗುರದ ನೆನಪೊಂದು ಇಲ್ಲದೇ ಹೋಗಿದ್ದರೆ ಪ್ರತಿಭಾ ಕಳೆದೇ ಹೋಗುತ್ತಿದ್ದಳೇನೋ! ದೆಹಲಿಯಲ್ಲಿ ಒಂದು ನೆಲೆ ಕಂಡುಕೊಂಡ ಮೇಲೆ ಮುಂಬೈಗೆ ಹೋಗಿ ಮಗಳನ್ನು ಕರೆದುಕೊಂಡು ಬರಬೇಕೆಂದಿದ್ದವಳ ಬದುಕಿನ ನಾಟಕದಲ್ಲಿ ರಜತನೆಂಬ ಪಾತ್ರ ಆಕಸ್ಮಿಕವಾಗಿ ಆಗಮಿಸಿ ಎಲ್ಲ ಹಿಂದುಮುಂದಾಗಿ ಹೋಯಿತು. ಅವಳು ಮುಂಬೈ ವಕೀಲರ ದೆಹಲಿಯ ಹೊಸ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಸಂಜೆಕಾಲೇಜಿನಲ್ಲಿ ಡಿಗ್ರಿ ಮಾಡುವಾಗ ಸಿಕ್ಕವನವ. ಅವನೂ ಪಕ್ಕದ ಸಂಜೆಕಾಲೇಜಿನಲ್ಲಿ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿದ್ದ. ಉತ್ತರಪ್ರದೇಶದ ಸಂಪ್ರದಾಯಸ್ಥ ಕುಟುಂಬದ ಹುಡುಗನಿಗೂ ಮಹಾರಾಷ್ಟ್ರದಿಂದ ಮಲತಾಯಿಯ ಕಾಟ ತಾಳದೇ ಓಡಿಬಂದ ಹುಡುಗಿಯೆಂದು ಹೇಳಿಕೊಂಡ ಮಧುಗೂ ಪ್ರೀತಿ ಹುಟ್ಟಿ ಮದುವೆಯೂ ಆಯಿತು. ಹಾಗಾಗಿ ಪ್ರತಿಭಾಗೆ ಮಧುವಿನ ಪಾತ್ರದ ಬಣ್ಣ ಕಳಚಲಾಗಲೇ ಇಲ್ಲ. ಹಾಗಂತ ಆಕೆಗೆ ಪ್ರತಿಭಾ ಮಧುವಾದ ಬಗ್ಗೆ ಹೆಮ್ಮೆಯಿಲ್ಲವೆಂದಲ್ಲ. ಆದರೆ ಆ ಬಣ್ಣದ ಆಳದಲ್ಲೆಲ್ಲೋ ಉಸಿರಾಡಲಾಗದೇ ಒದ್ದಾಡುತ್ತಿರುವ ಪ್ರತಿಭಾಳ ಬಗ್ಗೆ ಮಧುವಿಗೆ ಮರುಕ ಹುಟ್ಟುವುದಿದೆ. ಆಗಾಗ್ಗೆ ಚಿತ್ರಲೇಖಾಳೆಡೆಗಿನ ತನ್ನ ಕರ್ತವ್ಯದ ವೈಫಲ್ಯದ ತಪ್ಪಿತಸ್ಥ ಭಾವನೆಯಿಂದ ಸುಧಾರಿಸಿಕೊಳ್ಳಲಾಗದಷ್ಟು ಒದ್ದಾಡಿಬಿಡುವ ಪ್ರತಿಭಾಳನ್ನು ಸಂತೈಸಲಾಗದೇ ಮಧು ಕೂಡ ಕೊರಗುತ್ತಾಳೆ.

ರಜತನ ಸಣ್ಣ ಸ್ಟಾರ್ಟ್ ಅಪ್ ಬೇಗನೇ ವರ್ಷಕ್ಕೆ ಹತ್ತಾರು ಕೋಟಿ ವ್ಯವಹಾರ ಮಾಡುವಂತಾಯಿತು. ಮಧುವಿನ ಕಾಲ್ಗುಣದಿಂದಲೇ ಎಲ್ಲ ಎಂದು ಗಂಡ, ಗಂಡನ ಕುಟುಂಬದವರೆಲ್ಲರ ಅಂಬೋಣ. ಆಕೆಯೂ ಕಂಪನಿಯ ನಿರ್ದೇಶಕರಲ್ಲೊಬ್ಬಳು. ಒಮ್ಮೆಯಾದರೂ ಮುಂಬೈಗೆ ಹೋಗಿ ಮಗಳನ್ನು ಹುಡುಕಬೇಕು ಏನಾದರೂ ಕಥೆ ಕಟ್ಟಿ ತಾನೇ ತಂದುಸಾಕಬೇಕು ಎಂದೆಲ್ಲ ಅಂದುಕೊಂಡಿದ್ದು ಅದೆಷ್ಟೋ ಸಲ. ಅದಕ್ಕಾಗಿಯೇ ಹೆಣ್ಣುಮಕ್ಕಳಿಗೆ ಸಹಾಯ ಮಾಡುವ ಒಂದು ಎನ್‍ಜಿಓ ಕೂಡ ಶುರು ಮಾಡಿದ್ದಳು. ಆದರೆ ಒಂದು ಹೆಜ್ಜೆ ಪಕ್ಕಕ್ಕಿಟ್ಟರೂ ಗುಟ್ಟು ರಟ್ಟಾಗಿ ತಾನೇ ಕಟ್ಟಿಕೊಂಡ ಗಾಜಿನ ಮನೆಯಲ್ಲಿ ಬೆತ್ತಲಾಗುವ ಭಯ. ಹಾಗಾಗಿ ಯಾವ ಸಾಮಾಜಿಕ ಜಾಲತಾಣದಲ್ಲೂ ಅವಳಿಲ್ಲ. ಅವಳ ಎನ್‍ಜಿಓಗೆ ಪ್ರಶಸ್ತಿ ಬಂದಾಗಲೂ ಅವಳು ವೇದಿಕೆಗೆ ಹೋಗಲಿಲ್ಲ. ಕೇಳಿದರೆ ತನ್ನ ಮಲ ತಂದೆತಾಯಿಗೆ ಗುರುತು ಸಿಕ್ಕುವುದೇ ಬೇಡ ಎಂದಿದ್ದಳು. ಬತ್ತಿದ ಕೆರೆಯಲ್ಲಿ ಹೊಂಡ ತೋಡಿ ಹನಿಹನಿಯಾಗಿ ಒಸರುವ ನೀರಿಗಾಗಿ ತಾಳ್ಮೆಯಿಂದ ಕಾದು ಕೊಡ ತುಂಬಿಸಿಕೊಳ್ಳಲು ಯತ್ನಿಸುವ ಬರಗಾಲದೂರಿನ ಹೆಣ್ಣುಗಳಂತೆ ತನ್ನ ಮಗಳನ್ನು ಹುಡುಕಿ ಕರೆದುಕೊಂಡು ಬರಲು ದಶಕದಶಕಗಳ ಕಾಲ ಮಾಡಿದ ಪ್ರಯತ್ನ ಒಂದೇ ಎರಡೇ! ಸ್ವಂತ ಅಪ್ಪ ಅಮ್ಮನಂತೆ ಪ್ರೀತಿಸುವ ಅತ್ತೆ ಮಾವನಿಗೆ ಆಘಾತವಾಗಬಾರದೆಂದು ಎಷ್ಟೋ ಸಲ ಹೆಜ್ಜೆ ಹಿಂದಿಟ್ಟಳು. ಈ ಎರಡು ದಶಕದಲ್ಲಿ ಅವರೂ ಕೃಷ್ಣನ ಪಾದ ಸೇರಿ ಆಯಿತು. ತಾನೆಂದರೆ ದೇವತೆ ಎಂದುಕೊಂಡಿರುವ ರಜತನಿಗೆ ಸತ್ಯ ಹೇಳಿಬಿಡಲೇ ಎಂದು ತವಕಿಸುವ ನಾಲಿಗೆಯನ್ನು ಸಂಭಾಳಿಸುತ್ತ ಕತ್ತಿಯಂಚಿನ ಮೇಲೆ ನಡೆಯುವವಳಂತೆ ನಡೆದಳು. ಒಳಗೊಳಗೇ ನವೆಯುತ್ತಾ ನವೆಯುತ್ತಾ ಮೇಲ್ಗಡೆ ಚೆಂದದ ಚಿತ್ರದಂತೆ ಕಂಡರೂ ಆಗಾಗ್ಗೆ ಒಳಗೆ ಬಣ್ಣ ಕಲಸಿ ರಾಡಿಯಾದ ಅಸ್ತವ್ಯಸ್ತ ಕ್ಯಾನ್‍ವಾಸ್ ಆಗಿಬಿಡುವ ತನ್ನ ಬದುಕನ್ನು ನೆನೆದು ಮಧು ಅದೆಷ್ಟು ನಿಟ್ಟುಸಿರಿಟ್ಟಿದ್ದಳೋ. ಎಲ್ಲವೂ ತಾನು ಬಯಸಿದಂತೆಯೇ ಆಗಿದ್ದ ಬದುಕಿನಲ್ಲಿ ಚಿತ್ರಲೇಖಾಳ ಮುಗ್ಧ ಮುಖ ಒಮ್ಮೊಮ್ಮೆ ಎದೆಯಲ್ಲಿ ಹರಿತವಾದ ಚೂರಿಯನ್ನಾಡಿಸಿದಂತೆ ನೋಯಿಸುವುದು. ಮತ್ತು ಆ ಒಮ್ಮೊಮ್ಮೆ ದಿನದಲ್ಲಿ ಒಮ್ಮೆಯಾದರೂ ಬರುವುದು. ಇವತ್ತು ನಾಳೆ ಎಂದು ದಿನದಿನವೂ ಮಗಳನ್ನು ಹುಡುಕಲು ಯೋಚಿಸುವುದು ಮತ್ತೆ ಹಿಂಜರಿಯುವುದು ಮಾಡುತ್ತ ಭರ್ತಿ ಇಪ್ಪತ್ನಾಲ್ಕು ವರ್ಷಗಳು ಕಳೆದ ಮೇಲೆ ಕರ್ನಾಟಕಕ್ಕೆ ಕಾಲಿಟ್ಟಿದ್ದಾಳೆ ಪ್ರತಿಭಾ. ಅದೂ ನಾಲ್ಕು ವರ್ಷ ಶ್ವಾಸಕೋಶಕ್ಕೆ ಸಂಬಂಧಿಸಿದ ಅಪರೂಪದ ಖಾಯಿಲೆಯಿಂದ ನರಳಿ ಇನ್ನಿಲ್ಲವಾದ ರಜತನ ಹದಿಮೂರನೇ ದಿನದ ಕ್ರಿಯಾಕರ್ಮವನ್ನು ಗೋಕರ್ಣದಲ್ಲಿಯೇ ಮಾಡಿಬರುತ್ತೇನೆಂದು ಹಠ ಹಿಡಿದು ಹತ್ತೊಂಭತ್ತರ ಹರಯದ ತನ್ನ ಏಕೈಕ ಪುತ್ರನನ್ನು ಕರೆದುಕೊಂಡು ಬಂದಿದ್ದಾಳೆ.

ಝೋಮು ಹಿಡಿದ ಕಾಲನ್ನು ತುಸುವೇ ಎತ್ತಿದರೂ ಉಂಟಾಗುವ ಸಹಿಸಲಸಾಧ್ಯವಾದ ಸಂಕಟದ ಹಾಗೆ, ಸಿಡಿಯುವ ತಲೆನೋವಿಗೆ ಯಾವ ಸದ್ದೂ ಹಿತವೆನಿಸದ ಹಾಗೆ, ಆಘಾತಗೊಂಡ ಮನಸ್ಸಿಗೆ ಏನೂ ಬೇಡೆನಿಸುವ ಹಾಗೆ, ಜ್ವರ ಬಂದ ನಾಲಿಗೆಗೆ ಯಾವುದೂ ರುಚಿಸದ ಹಾಗೆ, ಸ್ಲೇಟಿನ ತುಂಬ ಗೀಚಿದ ಮಗು ಬರೆಯಲು ಜಾಗವಿಲ್ಲವೆಂದು ಅಳುವಂತೆ ಚಿತ್ರಲೇಖಾ ಮೊಬೈಲ್ ಹಿಡಿದುಕೊಂಡು ಎಂದಿಗಿಂತ ಹೆಚ್ಚು ಮಂಕಾಗಿ ಕುಳಿತಿದ್ದಳು.

ಪ್ರತಿಭಾ ಮನೆ ಬಿಟ್ಟುಹೋಗಿದ್ದು, ಬಿಟ್ಟುಹೋದ ಮೇಲೆ ಏನಾಯಿತೆಂಬ ಯಾವ ನೆನಪೂ ಚಿತ್ರಳಿಗಿಲ್ಲ. ಅವಳಿಗೆ ನೆನಪಿರುವುದು ಮನೆ ಮನಸ್ಸು ತುಂಬಿದ್ದ ಮೌನ, ಮೌನ ಮತ್ತು ಮೌನ. ಮೊದಲೇ ಮುಂಬೈ ಮಹಾನಗರ. ಅವರವರ ತಾಪತ್ರಯವೇ ಅವರವರಿಗೆ. ಚಿತ್ರಳನ್ನು ಅಜ್ಜಿ ಮೂರು ವರ್ಷ ಹಾಗೂ ಹೀಗೂ ನೋಡಿಕೊಂಡರು. ಸದಾ ಕಣ್ಣೊರೆಸಿಕೊಳ್ಳುತ್ತ ಕೆಲಸ ಮಾಡುತ್ತಲೇ ಇರುತ್ತಿದ್ದ ಅಜ್ಜಿ, ಶೂನ್ಯವನ್ನೇ ದಿಟ್ಟಿಸುತ್ತಿರುತ್ತಿದ್ದ ಅಪ್ಪ ಇವರ ಜತೆ ಮಾತು ತುಟ್ಟಿಯಾಗಿದ್ದ ಮನೆಯಲ್ಲಿ ಐದು ವರ್ಷವಾಗುವವರೆಗೆ ಬೆಳೆದ ಅವಳಿಗೆ ಮಾತಾಡಲು ಬಂದಿದ್ದೇ ಒಂದು ಸೋಜಿಗ. ಕಿವಿ ಕೇಳದ ಚಿತ್ರಳ ಅಪ್ಪ ರಸ್ತೆ ಅಪಘಾತವೊಂದರಲ್ಲಿ ತೀರಿಕೊಂಡದ್ದೇ ತಡ, ಅಜ್ಜಿ ಹಾಸಿಗೆ ಹಿಡಿದವರು ಮತ್ತೆ ಮೇಲೇಳಲಿಲ್ಲ. ಯಾರೋ ದೂರದ ಸಂಬಂಧಿಕರು ಬಂದು ಐದು ವರ್ಷದ ಹುಡುಗಿಯನ್ನು ಅನಾಥಾಶ್ರಮಕ್ಕೆ ಸೇರಿಸಿದರು. ಮನೆಯಲ್ಲಿ ಒಂಟಿಯಾಗಿದ್ದ ಚಿತ್ರಲೇಖಾ ಒಮ್ಮೆಲೇ ಸಿಕ್ಕಿದ ನಲವತ್ತೂ ಚಿಲ್ಲರೆ ಮಕ್ಕಳ ಸಾಂಗತ್ಯದಿಂದ ಮತ್ತಷ್ಟು ಚಿಪ್ಪಿನೊಳಗೆ ಸೇರಿಕೊಂಡಳು. ನೀರೇ ಇಳಿಯದ ಗಂಟಲಲ್ಲಿ ಗಟ್ಟಿ ಚಕ್ಕುಲಿಯನ್ನು ಒಮ್ಮೆಲೇ ತುರುಕಿದಂತೆ ಚಡಪಡಿಸಿಹೋದಳು. ಅಮ್ಮನ ನೆನಪು ಇಲ್ಲದೇ ಹೋದರೂ, ತಂದೆಯ ಜತೆ ಅಂತಹ ಬಾಂಧವ್ಯ ಇರದಿದ್ದರೂ, ಅಜ್ಜಿಯ ನೆನಪು ಅವಳನ್ನು ಆಗಾಗ ಕಾಡುತ್ತಿರುತ್ತದೆ. ದಢೂತಿ ದೇಹದ ಅಜ್ಜಿ ಅಕ್ಕಿ, ಕುಂಬಳಕಾಯಿ, ಸಾಬೂದಾನಾ ಮುಂತಾದವುಗಳ ಸಂಡಿಗೆಗೆ ತಯಾರಿ ಮಾಡಿಕೊಂಡು ತಮ್ಮ ಮನೆಯೆದುರಿನ ಪುಟ್ಟ ಜಾಗದಲ್ಲಿ ಒಣಗಿಸಲು ಆಗದೇ ತುಸು ದೂರದಲ್ಲಿದ್ದ ಮನೆಯೊಂದರ ಟೆರೆಸ್ ಮೇಲೆ ಒಣಹಾಕಿ ಅವನ್ನು ಕಾಪಾಡಿಕೊಳ್ಳಲು ಪಡಬಾರದ ಪರಿಪಾಟಲು ಪಡುತ್ತಿದ್ದ ದೃಶ್ಯ ಸ್ಪಷ್ಟವಾಗಿಯೇ ಅವಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆ ಮನೆಯವರು ಊರಲ್ಲಿ ಇಲ್ಲದಾಗ ಗೇಟಿಗೆ ಬೀಗ ಹಾಕಿರುತ್ತಿತ್ತು. ಅಂತಹ ಸಂದರ್ಭದಲ್ಲೊಮ್ಮೆ ಇನ್ನೊಬ್ಬರ ಮನೆಯ ಟೆರೆಸ್ ಮೇಲೆ ಹೋಗಲು ಅನುಮತಿ ಕೇಳಿ ಅವರು ಚೆನ್ನಾಗಿ ಬೈದು ಅಜ್ಜಿ ಮನೆಗೆ ಬಂದು ಕಣ್ಣೀರು ಹಾಕುತ್ತ ಗೋಳಾಡಿದ ನೆನಪೂ ಅವಳಿಗೆ ಮರೆತು ಹೋಗಿಲ್ಲ. ಹಗಲೆಲ್ಲ ಮೂಲೆ ಸೇರಿಕೊಂಡಿದ್ದು ಸಂಜೆಯಾದ ಕೂಡಲೇ ಕಾಡುವ ಒಂಟಿತನದ, ಅಸಹಾಯಕತೆಯ ಅನಾಥಭಾವವಲ್ಲ ಚಿತ್ರಲೇಖೆಯನ್ನು ಕಾಡುತ್ತಿರುವುದು. ಅದು ಪ್ರತಿ ಉಚ್ವಾಸ ನಿಚ್ವಾಸದಲ್ಲೂ ಬೆರೆತು ಹೋದ ತಾನೆಲ್ಲೂ ಸೇರದವಳು, ಎಲ್ಲಿಯೂ ನೆಲೆಯಿಲ್ಲದವಳೆಂಬ ಪರಕೀಯತೆಯ ಭಾವನೆ, ಕಬ್ಬಿನ ಹಾಲಿನೊಳಗಿನ ಸಿಹಿಯಂತೆ ಹಾಗಲಕಾಯಿಯ ಕಹಿಯಂತೆ ಬೇರ್ಪಡಿಸಲಾಗದೇ ಬೆರೆತು ಹೋದದ್ದು. ಈ ಬೆಸೆದುಹೋದ ಪರಕೀಯತೆಯೆಂಬ ಕಲ್ಪನೆಯೇ ಎಷ್ಟು ಪರಸ್ಪರ ವಿರುದ್ಧವಾದುದೆಂದು ಯೋಚಿಸಿ ಕ್ಷೀಣವಾಗಿ ಆಕೆ ತನ್ನಷ್ಟಕ್ಕೆ ತಾನು ನಗುವುದೂ ಉಂಟು. ತನ್ನ ಬಾಲ್ಯದ ನೆನಪಿನ ಕೌದಿಯ ಒಂದೇ ಒಂದು ಎಳೆಯಾದರೂ ಖುಶಿಯದ್ದು ಯಾಕಿಲ್ಲ ಎಂದು ಅವಳು ಆಗಾಗ ಕೇಳಿಕೊಳ್ಳುವುದಿದೆ. ಕೌದಿಯ ತುಂಬ ಸಂಕಟದ ಒದ್ದೆ ಎಳೆಗಳೇ ತುಂಬಿ ಹೋಗಿರುವುದರಿಂದ ಹಳೆಯ ನೆನಪುಗಳು ಅವಳನ್ನು ಎಂದೂ ಬೆಚ್ಚಗಾಗಿಸಿಲ್ಲ. ಪ್ರತಿಭಾ ಅದು ಹೇಗೆ ಗಟ್ಟಿ ಮನಸ್ಸು ಮಾಡಿ ತನ್ನನ್ನು ಬಿಟ್ಟು ಹೋದಳೆಂಬುದು ಅವಳಿಗೆ ಇಂದಿಗೂ ಅರ್ಥವಾಗದ ಸಂಗತಿ. ತಾಯಿಯ ಕುರಿತ ಉಕ್ತಿಗಳೆಲ್ಲ ಅದೆಷ್ಟು ಅತಿಶಯೋಕ್ತಿಯ ಮಾತುಗಳೆಂದು ಅನ್ನಿಸಿ ಬುಲ್‍ಶಿಟ್ ಎಂದುಕೊಳ್ಳುವಳು. ಹಾಗಾಗಿ ತಾಯಿಯ ಬಗ್ಗೆ ಯೋಚಿಸುವಾಗಲೆಲ್ಲ ಪ್ರತಿಭಾ ಎಂದೇ ಯೋಚಿಸುತ್ತಾಳೆಯೇ ಹೊರತು ಅಮ್ಮ ಎಂದು ಎಂದಿಗೂ ಮನಸಲ್ಲೂ ಹೇಳಿಕೊಂಡಿಲ್ಲ ಆಕೆ.

ಪ್ರತಿಭಾಳ ಅಕ್ಕನ ಮದುವೆಯಾಗಿ ಹದಿನೈದು ವರ್ಷವಾದರೂ ಮಕ್ಕಳಿಲ್ಲದೇ ದತ್ತು ತೆಗೆದುಕೊಳ್ಳಲು ಮಗುವನ್ನು ಹುಡುಕುತ್ತಿದ್ದಾಗ ಯಾರೋ ಈ ಹುಡುಗಿಯ ನೆನಪು ಮಾಡಿದರು. ಇವರು ಹೌದಲ್ಲ ಎಷ್ಟೆಂದರೂ ತಮ್ಮದೇ ರಕ್ತ, ಅಮ್ಮ ಮಾಡಿದ ಹಲ್ಕಾ ಕೆಲಸಕ್ಕೆ ಮಗಳೇನು ಮಾಡಿಯಾಳು ಎಂದು ಮಾತಾಡಿಕೊಂಡು ಹೋಗಿ ಹುಡುಕಿ ಅನಾಥಾಶ್ರಮದಲ್ಲಿದ್ದ ಚಿತ್ರಲೇಖೆಯನ್ನು ಅದು ಹೇಗೋ ಪತ್ತೆ ಮಾಡಿ ಅವಳ ಮುಲ್ಕಿ ಪರೀಕ್ಷೆ ಮುಗಿಯುವ ವೇಳೆಗೆ ಕರೆದುಕೊಂಡು ಬಂದರು. ಅಲ್ಲಿಗೆ ಅನಾಥಾಶ್ರಮದಲ್ಲಿ ಅವಳಿದ್ದುದು ಏಳು ವರ್ಷ. ಚಿತ್ರ ಹೂ ಅನ್ನಲಿಲ್ಲ, ಉಹೂ ಅನ್ನಲಿಲ್ಲ. ಕಾಡಿನ ನಡುವಿನ ಕಿರುದಾರಿ ಕರೆದುಕೊಂಡು ಹೋದತ್ತ ಹೋಗುವುದು ಬೇರೆ ದಾರಿಯೇ ಇಲ್ಲದವರ ಹಣೆಬರಹವೆಂದು ಅವಳು ನಿರ್ಧರಿಸಿಯಾಗಿತ್ತು. ಅನಾಥಾಶ್ರಮ ಬಿಟ್ಟು ಹೋಗಲು ಅವಳಿಗೆ ಬೇಜಾರೂ ಆಗಲಿಲ್ಲ, ಖುಶಿಯೂ ಆಗಲಿಲ್ಲ. ಏನೇ ಆದರೂ ದೊಡ್ಡಮ್ಮ ದೊಡ್ಡಪ್ಪನನ್ನು ಅಪ್ಪ ಅಮ್ಮ ಎಂದು ಕರೆಯಲು ಅವಳಿಗೆ ಆಗಲೇ ಇಲ್ಲ. ಬೆಂಗಳೂರಿನಲ್ಲಿ ಸಣ್ಣದೊಂದು ದರ್ಶಿನಿ ನಡೆಸುತ್ತಿದ್ದ ದೊಡ್ಡಪ್ಪ ದೊಡ್ಡಮ್ಮ ಅಂತಹ ಸ್ಥಿತಿವಂತರೇನೂ ಅಲ್ಲ. ಆದರೂ ಸಮಾಜದಲ್ಲಿ, ಮನೆಯೊಳಗೆ ತನ್ನ ಅಸ್ತಿತ್ವವೇ ಇಲ್ಲವೆಂಬಂತೆ ಮೌನಕ್ಕೆ ಆತುಕೊಂಡು ಬದುಕುತ್ತಿದ್ದ ಆಕೆಯನ್ನು ಬದಲಾಯಿಸಲು ಅವರು ತಮ್ಮಿಂದಾದ ಪ್ರಯತ್ನ ಪಟ್ಟರು. ಹಗಲು ಮುಗಿದರೂ ಮುಗಿಯದಂತಹ ಇರುಳು ಶುರುವಾದರೂ ತಿಳಿಯದಂತಹ ಒಂದು ಗೊಂದಲದ ಮುಸ್ಸಂಜೆಯಲ್ಲಿ ಹಚ್ಚಿಟ್ಟ ತುಯ್ದಾಡುವ ದೀಪದಂತಹ ಹುಡುಗಿಯಾಗಿದ್ದಳು ಚಿತ್ರಲೇಖೆ.

ಆದರೆ ಅದೆಷ್ಟೇ ಅಂತರ್ಮುಖಿಯಾದರೂ ಮೊದಲಿನಿಂದಲೂ ಅವಳು ಬುದ್ಧಿವಂತೆ. ತರಗತಿಯಲ್ಲಿ ಯಾವಾಗಲೂ ಮೊದಲ ಮೂರು ಸ್ಥಾನದಲ್ಲಿಯೇ ಇರುತ್ತಿದ್ದ ಯಾರೊಂದಿಗೂ ಬೆರೆಯದ ಚಿತ್ರಲೇಖಾ ಗೊತ್ತಿದ್ದವರಿಗೆ ಪಾಪದ ಹುಡುಗಿಯಾಗಿಯೂ ಒಂದು ಅಂತರದಿಂದ ನೋಡುವವರಿಗೆ ಅಹಂಕಾರಿಯಾಗಿಯೂ ಕಾಣುತ್ತಿದ್ದಳು. ಆದರೆ ಅವೆಲ್ಲ ಅವಳ ಹೊರಗಿನ ರೂಪಗಳು ಮಾತ್ರ ಆಗಿದ್ದವು. ಅವಳೊಳಗನ್ನು ಹೊಕ್ಕು ನೋಡುವ ಶಕ್ತಿ ಯಾರಿಗಾದರೂ ಇದ್ದಿದ್ದರೆ, ಎಷ್ಟು ಹತ್ತಿರ ತಂದರೂ ವಿರುದ್ಧ ದಿಕ್ಕಿಗೆ ಸೆಳೆಯಲ್ಪಡುವ ಆಯಸ್ಕಾಂತದ ಸಜಾತೀಯ ಧ್ರುವಗಳಂತೆ ಅವಳೊಳಗಿನ ಅವಳದೇ ವ್ಯಕ್ತಿತ್ವದ ಚೂರುಗಳು ಅವಳು ಅದೆಷ್ಟೇ ಪ್ರಯತ್ನ ಪಟ್ಟರೂ ಒಂದಾಗದೇ ಬೇರೆಬೇರೆಯಾಗಿಯೇ ಇರುವುದನ್ನು ನೋಡಬಹುದಿತ್ತು.

ಬೆಂಗಳೂರಿನಲ್ಲಿಯೇ ಹೈಸ್ಕೂಲು ಸೇರಿ ಸರಕಾರಿ ಕೋಟಾದಲ್ಲಿಯೇ ಇಂಜಿನಿಯರಿಂಗ್ ಮುಗಿಸಿ ಒಳ್ಳೆಯ ಕಂಪನಿಯಲ್ಲಿ ಕೆಲಸ ಹಿಡಿದು ಮೂರು ವರ್ಷವಾಗಿದೆ. ಆದರೂ ಅವಳ ಎದೆಯ ತುಂಬ ಕಹಿ ನೆನಪುಗಳ ಜಾತ್ರೆಯೇ. ಜಾತ್ರೆ ಎಂದೇನೂ ಹೇಳುವಂತಿಲ್ಲ, ಏಕೆಂದರೆ ಜಾತ್ರೆಯಂತೆ ಗಮ್ಮತ್ತಿನ ಕ್ಷಣಗಳು ಅವಳ ನೆನಪುಗಳಲ್ಲಿ ಇಲ್ಲ. ನೆನಪುಗಳ ಶವಯಾತ್ರೆ ಎಂದು ಕರೆದರೆ ಸರಿಯಾದೀತೇನೋ. ಸ್ನೇಹಿತರಾರೂ ಇಲ್ಲದ ಚಿತ್ರಲೇಖಾ ತನ್ನ ಅಂತರಂಗವನ್ನು ಎಂದೂ ಎಲ್ಲೂ ತೋಡಿಕೊಳ್ಳದ ಕಾರಣಕ್ಕೆ ಯಾವಾಗಲೂ ಭಾರವಾದ ಕಲ್ಲೊಂದನ್ನು ಹೊತ್ತುಕೊಂಡಂತೆ, ದೂರದ ಮ್ಯಾರಾಥಾನ್ ಮುಗಿಸಿ ಬಂದು ಸುಸ್ತಾದ ಹೊಸ ಓಟಗಾರ್ತಿಂತೆ ಇರುತ್ತಿದ್ದಳು.
ತಾನು ಶೇರ್ ಮಾಡಿದ ಸ್ಕ್ರೀನ್‍ಶಾಟ್‍ಗೆ ‘ಹೌ ಶೇಮ್‍ಲೆಸ್’ ಎಂದು ದೊಡ್ಡ ಮಾವನ ಎರಡನೇ ಮಗ ಹಾಕಿದ ಮೆಸೇಜಿಗೆ ಇಪ್ಪತ್ಮೂರು ಲೈಕ್ ಬಿದ್ದದ್ದನ್ನು ಮತ್ತು ಚಿಗುರು ಮೀಸೆಯೂ ಮೂಡದ ಕಸಿನ್‍ಗಳು ‘ಶೇಮ್ ಆನ್ ಹರ್’ ಎಂಬ ಮೆಸೆಜುಗಳನ್ನು ಎಗ್ಗಿಲ್ಲದೇ ಹಾಕುತ್ತಿರುವುದನ್ನು ನೋಡಿದ ಚಿತ್ರಾಳಿಗೆ ತಾನು ಸ್ಕ್ರೀನ್ ಶಾಟ್ ಹಾಕಿ ಸರಿಯಾದ ಕೆಲಸ ಮಾಡಿದೆನಾ ತಪ್ಪು ಮಾಡಿದೆನಾ ಎಂಬ ಗೊಂದಲ ಕಾಡತೊಡಗಿತು. ದೊಡ್ಡಪ್ಪ ದೊಡ್ಡಮ್ಮನಿಗೆ ಬೇಜಾರಾಗಬಹುದೆಂಬ ಕಾರಣಕ್ಕೆ ಅವಳು ಇನ್ನೂ ‘ಹೋಂ ಅವರ್ ಕೋಸಿ ನೆಸ್ಟ್’ ಎಂಬ ಹೆಸರಿನ ಆ ಫ್ಯಾಮಿಲಿ ವಾಟ್ಸಾಪ್ ಗುಂಪಿನಲ್ಲಿ ಇದ್ದಾಳೆ ಅಷ್ಟೇ. ಸ್ವಂತ ಮಕ್ಕಳಿದ್ದಿದ್ದರೆ ತನ್ನನ್ನೀಗ ಸಾಕಿದ ದೊಡ್ಡಮ್ಮನಿಗೆ ತಾನೆಲ್ಲಿದ್ದೇನೆ ಎಂಬ ವಿಷಯ ಅಮುಖ್ಯವೇ ಆಗಿರುತ್ತಿತ್ತು ಎಂಬುದು ಚಿತ್ರಳಿಗೆ ಚೆನ್ನಾಗಿ ಗೊತ್ತು. ಯಾವ ಮಾವ ದೊಡ್ಡಮ್ಮ ಚಿಕ್ಕಮ್ಮನಿಗೂ ಕೂಡ ತನ್ನ ಮುಖ ನೋಡಬೇಕೆಂದು ಅನ್ನಿಸಿರಲಿಲ್ಲ ಎಂಬ ವಾಸ್ತವ ಅವಳನ್ನು ಘಾಸಿಗೊಳಿಸುವುದೂ ಈಗ ಹಳೆಯದಾಗಿ ಅವಳಿಗೆ ನೋವಾಗುವುದಿಲ್ಲ. ಹತ್ತಿರ ಹತ್ತಿರ ಮೂವತ್ತು ಜನರಿರುವ ಈ ವಾಟ್ಸಾಪ್ ಗುಂಪಿನಲ್ಲಿ ತಾನೊಬ್ಬಳು ಇಲ್ಲದಿದ್ದರೆ ಹರಿವ ತೊರೆಯಲ್ಲಿ ಒಂದು ತರಗೆಲೆ ಕಡಿಮೆಯಾದರೆ ಆಗುವ ವ್ಯತ್ಯಾಸವೇ ಆಗುತ್ತಿತ್ತೆಂಬುದು ಅವಳಿಗೆ ಗೊತ್ತಿದೆ. ಹರಿವ ನದಿಗೂ ಸಾಗರ ಸೇರುವ ನಂಬಿಕೆಯಿದೆ, ತರಗೆಲೆಗೂ ಮಣ್ಣಲ್ಲಿ ಮಣ್ಣಾಗುವುದು ಗೊತ್ತಿದೆ ಅದೇ ರೀತಿ ತಾನು ಯಾರ ಮನಸ್ಸಿನಲ್ಲೂ ಇಲ್ಲ ಎಂಬ ಸತ್ಯವೂ ಅವಳಿಗೆ ತಿಳಿದಿದೆ. ‘ಕಿವುಡ ಮೂಕನಿಗೆ ತನ್ನನ್ನು ಕಟ್ಟಿದ್ದೀರಿ ತಾನು ಇಲ್ಲಿರುವುದಿಲ್ಲ ಕರೆದುಕೊಂಡು ಹೋಗಿ’ ಎಂದು ಪ್ರತಿಭಾ ಬರೆದ ಪತ್ರ ಓದಿ ತಾನೆಷ್ಟು ಅತ್ತು ಕರೆದರೂ ಗಂಡ, ಗಂಡುಮಕ್ಕಳು ಕ್ಯಾರೇ ಎನ್ನದೇ ಕವಡೆ ಕಿಮ್ಮತ್ತು ಕೊಡದೇ ಇದ್ದುದನ್ನೂ ಅಜ್ಜಿ ಒಮ್ಮೆ ಅಳುತ್ತ ಚಿತ್ರಾಳಿಗೆ ಹೇಳಿದ ಮೇಲಂತೂ ಯಾರಲ್ಲೂ ಅವಳಿಗೆ ವಾತ್ಸಲ್ಯ ಮೊಳೆಯಲಿಲ್ಲ.

ಆದರೆ ಈಗ ಈ ಕ್ಷಣ ತನ್ನ ಸ್ಕ್ರೀನ್‍ಶಾಟಿಗೆ ಇದ್ದಬಿದ್ದವರ ಪ್ರತಿಕ್ರಿಯೆ ನೋಡಿದ ಮೇಲೆ ತನ್ನ ಬದುಕಿನ ವೃತ್ತದ ಪರಿಧಿ, ವ್ಯಾಸ ಎಲ್ಲವೂ ತಾನೇ ಆಗಿದ್ದ ಚಿತ್ರಾ, ಈಗ ತಾನಿರುವುದಕ್ಕಿಂತ ಕಿರಿಯಳಾಗಿದ್ದ ಪ್ರತಿಭಾ ಎಂಬ ಅಸಹಾಯಕ ಹುಡುಗಿಯ ಬಗ್ಗೆ ಒಂದು ಕ್ಷಣ ಕರುಣೆಯಿಂದ ಯೋಚಿಸತೊಡಗಿದಳು. ಇಪ್ಪತ್ತು ವರ್ಷ ಜತೆ ಇದ್ದವರು ತಿಳಿಸಾರಿನಲ್ಲಿನ ಬೇವಿನೆಲೆಯನ್ನು ತೆಗೆದು ಬಿಸಾಕಿದಂತೆ ಮರೆತುಬಿಟ್ಟಾಗ ಅವಳಾದರೂ ಏನು ಮಾಡಬಹುದಿತ್ತು? ಅದೇನೇ ಇದ್ದರೂ ತನ್ನನ್ನು ಎತ್ತಿಕೊಂಡು ಹೋಗಲಿಲ್ಲ, ಹೋದವಳು ಮತ್ತೆ ಬರಲಿಲ್ಲ ಎಂಬುದು ನೆನಪಾಗಿ ಮತ್ತೆ ಮನಸ್ಸು ಬಿಗಿದುಕೊಳ್ಳಲಾರಂಭಿಸಿದರೂ ಈಗ ಬಂದಿದ್ದಾಳಲ್ಲ ಎಂದು ಅದೇ ಮನಸ್ಸು ಗಂಟುಗಳನ್ನು ಸಡಿಲಗೊಳಿಸತೊಡಗಿತು. ಆಘಾತದಿಂದ ಗೋಳಾಡಿ ಫೋನ್ ಮಾಡಿ ಪತ್ರ ಬರೆದು ತವರಿಂದ ಬರುವ ಉತ್ತರಕ್ಕಾಗಿ ಕಾತರದಿಂದ ಕಾಯುತ್ತಿದ್ದ ಹುಡುಗಿಯ ನೆನಪಾಗಿ ಕರುಳು ಹಿಂಡಿದಂತಾಗಿ ನಡುಗುವ ಕೈಗಳಿಂದ ಮೆಸೆಂಜರ್ ತೆರೆದು ಲ್ಯಾಪ್‍ಟಾಪಿನ ಎ ಅಕ್ಷರದ ಮೇಲೆ ಎಡಗೈನ ಕಿರುಬೆರಳಿಟ್ಟಳು ಚಿತ್ರಲೇಖಾ. ತಕ್ಷಣ ಅರೆ ಎಂದು ಅಚ್ಚರಿಪಟ್ಟು ಉದ್ವೇಗದಿಂದ ಮೆಲ್ಲನೆ ಕಂಪಿಸಿದಳು. ಒಂದು ಕ್ಷಣ ಎದೆ ಬೆಚ್ಚಗಾಗಿ ಎಂದೂ ದಕ್ಕದ ಹೊಸ ಅನುಭವಕ್ಕೆ ತಾನೇ ಬೆರಗಾದಳು. ಮುಂದಿನ ಅಕ್ಷರ ಒತ್ತುವ ಮುನ್ನ ಮತ್ತೇನೋ ಯೋಚಿಸಿ ವಾಟ್ಸಾಪ್ ತೆರೆದು ತಾನು ಗುಂಪಲ್ಲಿ ಹಂಚಿದ್ದ ಸ್ಕ್ರೀನ್‍ಶಾಟ್ ಅನ್ನು ಸೆಲೆಕ್ಟ್ ಮಾಡಿ ಡಿಲೀಟ್ ಫಾರ್ ಎವ್ರಿಒನ್ ಒತ್ತಿಬಿಟ್ಟಳು.

                                                                                                                                                                      
Exit mobile version