:: ಬಿ.ಎಂ ಹನೀಫ್
‘ಅಬ್ಬಾ.. ಇಲ್ಲಿ ಕೇಳಿ. 30 ವರ್ಷಗಳಿಂದ ಆ ಮಸೀದಿಯಲ್ಲಿ ಇಮಾಮ್ ಆಗಿ ಕೆಲಸ ಮಾಡಿದ್ರೀ.. ಏನ್ ನಿಮ್ಮನೆಗೆ ಬಂದು ಜುಜುಬಿ ಶಾಲು ಹಾಕಿಯಾದ್ರೂ ಸನ್ಮಾನ ಮಾಡಿದ್ರಾ? 30 ವರ್ಷ ದುಡಿದದ್ದಕ್ಕೆ ಸರ್ವಿಸ್, ಗ್ರಾಚ್ಯುಟಿ ಕೊಡ್ತಾರಾ? ಇದ್ಯಾವುದೂ ಇಲ್ಲ. ಈಗಲೂ ಜುಜುಬಿ ಸಂಬಳ. ಅದೂ ಕುಗ್ರಾಮದಲ್ಲಿ ಕಾಡಿನ ನಡುವೆ ಬದುಕಬೇಕು. ಒಂದು ಸರಿಯಾದ ಆಸ್ಪತ್ರೆ ಇಲ್ಲ. ಇರೋದೊಂದು ಉರ್ದು ಶಾಲೆ. ಜಮಾತ್‌ನ ಒಳರಾಜಕೀಯದ ಸುಳಿಯಲ್ಲಿ ನೀವ್ಯಾಕೆ ಸಿಕ್ಕಿ ಬೀಳ್ತೀರಿ? ಸಾಕು ಜಮಾತನ್ನು ಉದ್ಧಾರ ಮಾಡಿದ್ದು. ಮುಂಬೈಗೆ ಬಂದು ಇಲ್ಲೇ ನಮ್ಜೊತೆಗೆ ಇದ್ದುಬಿಡಿ. ಉಮ್ಮನಿಗೆ ಹೇಳಿದ್ದೇನೆ, ಅವರು ಬರೋದಕ್ಕೆ ರೆಡಿ. ನಿಮ್ದೇ ಪ್ರಾಬ್ಲಮ್ಮು…!’
– ರಾತ್ರಿ ಫೋನ್ ಮಾಡಿದ ಮಗ ಸಿದ್ದೀಕ್ ಸಿಟ್ಟಿಗೆದ್ದು ಹೇಳಿದ ಮಾತುಗಳು ಅಬ್ದುಲ್ ಖಾದರ್ ಮುಸ್ಲಿಯಾರರ ಕಿವಿಯಲ್ಲಿ ಬೆಳಿಗ್ಗೆಯಿಂದಲೂ ಗುಂಯ್‌ಗುಡುತ್ತಿವೆ. ಒಂದು ವರ್ಷದಿಂದ ಇದನ್ನೇ ಸೌಮ್ಯವಾಗಿ ಹೇಳುತ್ತಿದ್ದ. ಈಗ ಅವನಿಗೂ ಹತಾಶೆ ಉಕ್ಕೇರಿದ್ದಕ್ಕೆ ಕಾರಣಗಳಿವೆ. ಜಮಾತಿನ ಪ್ರೆಸಿಡೆಂಟ್ ಕಂಟ್ರಾಕ್ಟರ್ ಅಬ್ದುಲ್ಲಾ ಹಾಜಿ ಮತ್ತು ತನ್ನ ನಡುವೆ ಕಳೆದ ಶುಕ್ರವಾರ ಜುಮಾ ನಮಾಜಿನ ಬಳಿಕ ಮಸೀದಿಯಲ್ಲಿ ನಡೆದ ಖಡಾಖಡಿ ಜಗಳದ ಸುದ್ದಿ ಅವನಿಗೂ ಮುಟ್ಟಿದೆ.
‘ಯಾವ ಸಬೂಬನ್ನೂ ಈ ಸಲ ನಾನು ಕೇಳಿಸಿಕೊಳ್ಳುವುದಿಲ್ಲ ಅಬ್ಬಾ. ಅಲ್ಲಿರೋದು ಮಸೀದಿಯವರ ಬಾಡಿಗೆ ಮನೆ, ಸ್ವಂತದ್ದಲ್ಲ. ಬಿಟ್ಟು ಬರಲು ಸಂಬಂಧಿಕರೂ ಇಲ್ಲವಲ್ಲ! ಇಲ್ಲಿ ಸಣ್ಣದಾದರೂ ಸ್ವಂತ ಫ್ಲ್ಯಾಟ್ ಇದೆ. ಮುಂದಿನ ತಿಂಗಳು ಬರುತ್ತೇನೆ. ಊರು ಬಿಡಲು ರೆಡಿಯಾಗಿ. 20 ವರ್ಷಗಳಿಂದ ಅಲ್ಲಿದ್ದೀನಿ ಅಂತೆಲ್ಲಾ ಎಮೋಷನಲ್ ಆಗಬೇಡಿ. ಮಸೀದಿ ಅಧ್ಯಕ್ಷರಿಗೆ ಈಗಲೇ ಹೇಳಿ. ಅವರು ಬೇಕಿದ್ರೆ ಬೇರೆ ಮುಸ್ಲಿಯಾರರ ವ್ಯವಸ್ಥೆ ಮಾಡಿಕೊಳ್ತಾರೆ.. ಅಷ್ಟೇ..’– ನಿರ್ಧಾರದ ಧ್ವನಿಯಲ್ಲಿ ಹೇಳಿ ಮರುಮಾತಿಗೂ ಅವಕಾಶವಿಲ್ಲದಂತೆ ಫೋನ್ ಕಟ್ ಮಾಡಿದ್ದ.
***
60 ದಾಟಿದ ಅಜಾನುಬಾಹು ಖಾದರ್ ಮುಸ್ಲಿಯಾರ್ ಕಣ್ಣು ಮುಚ್ಚಿಕೊಂಡು ಯೋಚನೆಯ ಮಡುವಿಗೆ ಬಿದ್ದರು. ಅರ್ಧ ಕಾಡು, ಅರ್ಧ ಊರು ಎನ್ನುವಂತಿದ್ದ ಈ ಪುಟ್ಟ ಗ್ರಾಮಕ್ಕೆ 30 ವರ್ಷಗಳ ಹಿಂದೆ ಅವರು ಬಂದಿಳಿದದ್ದು ಒಂದು ಅನಿರೀಕ್ಷಿತ ಸನ್ನಿವೇಶದಲ್ಲಿ. ಈ ಊರಿಗೇ ಬರಬೇಕೆಂದು ಬಂದವರಲ್ಲ. ಹೆದ್ದಾರಿಯಲ್ಲಿ ಬಸ್ಸಿಳಿದಾಗ ಕಂಡ ತಿರುವಿನಲ್ಲಿ ಊರಿನ ಬೋರ್ಡ್ ಕಾಣಿಸಿತು. ಇಲ್ಲೊಂದು ಪುರಾತನ ಮಸೀದಿ ಇದೆಯೆಂದೂ ಶೇಕಡಾ 90ರಷ್ಟು ಮುಸ್ಲಿಮರೇ ಇದ್ದಾರೆಂದೂ ಕೇಳಿದ್ದು ನೆನಪಿತ್ತು. ಅಷ್ಟೇ.. ಬೆಳ್ಳಂಬೆಳಿಗ್ಗೆಯ ಹೊತ್ತು ಪರಮ ದಯಾಮಯನು ದಾರಿ ತೋರಿಸಿದಂತೆ ಜಮಾತ್ ಪ್ರೆಸಿಡೆಂಟರ ಮನೆಯ ಮುಂದೆ ಬ್ಯಾಗು ಹಿಡಿದು ನಿಂತಿದ್ದರು.
ತೀಕ್ಷ್ಣ ಕಣ್ಣು. ಸಹೃದಯಿ. ಸದಾ ಉದ್ದನೆಯ ಬಿಳಿಜುಬ್ಬಾ, ಬಿಳೀ ಮುಂಡು ಮತ್ತು ತಲೆಗೊಂದು ಬಿಳಿ ಮುಂಡಾಸು. ಕಾಲಲ್ಲಿ ಚರ್ ಎನ್ನುವ ಚರ್ಮದ ಚಡಾವು. ಸ್ವಲ್ಪ ದೊಡ್ಡದೇ ಎನ್ನಬಹುದಾದ ಹೊಟ್ಟೆಯಿದ್ದರೂ, ಪ್ರತಿದಿನ ಐದು ಹೊತ್ತು ನಮಾಜಿನ ಸಾಷ್ಟಾಂಗದಲ್ಲಿ ನೆತ್ತಿ ನೆಲಕ್ಕೆ ಚುಂಬಿಸಿ ಮೇಲೇಳುವಾಗ ಎಂದೂ ಏದುಸಿರು ಬಿಟ್ಟಿಲ್ಲ ಎನ್ನುವಷ್ಟು ಕಳಕಳೆಯ ಗಟ್ಟಿ ಆರೋಗ್ಯ. ಸ್ವಚ್ಛಂದ ಗಾಳಿಗೆ ಅಲ್ಲಾಡಿ ನಿಲುವಂಗಿಯ ಮೊದಲ ಬಟನನ್ನು ಸದಾ ಬ್ರಶ್ಶು ಮಾಡುವ ನೀಳಗಡ್ಡ. ಅವರ ಜೊತೆಗೇ ಬಂದವರು ಬೆಳ್ಳಾನೆ ಬೆಳದಿಂಗಳ ಮೈಬಣ್ಣದ ತುಂಬು ಸುಂದರಿ ಧರ್ಮಪತ್ನಿ ನಫೀಸಮ್ಮ. ಎಲ್ಲಿಂದ ಬಂದರೆಂದು ಕೇಳಿದಾಗ, ಚಂದ್ರಗಿರಿ ನದಿಯಾಚೆಗಿನ ಕಾಡುಗುಡ್ಡದ ಕೊನೆಯ ಕೇರಳದ ಕುಗ್ರಾಮವೊಂದರ ಹೆಸರು ಹೇಳಿದ್ದರೂ, ಆ ಹೆಸರನ್ನು ಆವರೆಗೆ ಈ ಊರಿನ ಒಬ್ಬರೂ ಕೇಳಿರಲಿಲ್ಲ.
ನೂರು ವರುಷಗಳ ಹಿಂದೆ ಕಟ್ಟಿಸಿದ ಚಂದದ ಮರದ ಕೆತ್ತನೆಯ, ಆರುಮೂಲೆಗಳ, ಸಾವಿರದ ಆರುನೂರು ಹೆಂಚುಗಳ, ನೋಡಿದರೆ ಶೈವ ದೇವಸ್ಥಾನವೋ ಎಂಬಂತೆ ಕಾಣಿಸುವ ಪುರಾತನ ಮಸೀದಿಯಲ್ಲಿ ಇಮಾಮರಾಗಿ ಕೆಲಸ ಕೇಳಿ ಅಬ್ದುಲ್ ಖಾದರ್ ಮುಸ್ಲಿಯಾರರು ಬರುವುದಕ್ಕೂ, ಈ ಹಿಂದೆ ಇದ್ದ ಮುಸ್ಲಿಯಾರರು ಹೇಳದೆ ಕೇಳದೆ ಕೆಲಸ ಬಿಟ್ಟು ಹೋಗುವುದಕ್ಕೂ ಸರಿ ಹೋಗಿತ್ತು. ಪ್ರೆಸಿಡೆಂಟರೂ ಹೂಂ ಎಂದು ಮಾರು ದೂರದಲ್ಲಿದ್ದ ಮಸೀದಿಯ ಬಾಡಿಗೆ ಮನೆಯ ಕೀಲಿಕೈ ಕೊಟ್ಟರು. ಸುಲಭವಾಗಿ ಕೆಲಸವೊಂದು ಸಿಕ್ಕಿ ಹೊಟ್ಟೆ ಬಟ್ಟೆಗೆ ತಾಪತ್ರಯವಿಲ್ಲ ಎನ್ನುವಂತಾಯಿತು. ಬೆಳಿಗ್ಗೆ ಮತ್ತು ರಾತ್ರಿ ಮಕ್ಕಳಿಗೆ ಮಸೀದಿಯಲ್ಲೇ ಮುಸಾಬು, ಕಿತಾಬು ಓದಿಸುತ್ತಾ ಐದು ಹೊತ್ತಿನ ನಮಾಜಿಗೆ ಮುಂಚೂಣಿಯಲ್ಲಿ ಇಮಾಮರಾಗಿ ನಿಲ್ಲುತ್ತಾ ಕೆಲವೇ ತಿಂಗಳಲ್ಲಿ ಮುಸ್ಲಿಯಾರರು ಊರಿನವರೇ ಆಗಿಬಿಟ್ಟಿದ್ದರು. ವರ್ಷಗಳು ಉರುಳಿದರೂ, ಅವರ ಸಂಬಂಧಿಕರೆಂಬ ಒಂದು ನರಪಿಳ್ಳೆಯೂ ಈ ಊರಿಗೆ ಬಂದದ್ದಿಲ್ಲ. ಮುಸ್ಲಿಯಾರರೂ ಸಂಬಂಧಿಕರ ಮನೆಗೆಂದು ಒಂದು ದಿನವೂ ಹೋಗಿ ಬಂದವರಲ್ಲ. ಹೀಗೆ ಅಚಾನಕ್ಕಾಗಿ ಬಂದವರನ್ನು ನೋಡಿ ಕೆಲವರು ಊಹೆಗಳನ್ನು ಹರಿಯಬಿಟ್ಟದ್ದೂ ಸುಳ್ಳಲ್ಲ. ಅದರಲ್ಲೊಂದು – ‘ಯಾರೋ ನಂಬೂದಿರಿಯ ಮನೆಯ ಹೆಣ್ಣುಮಗಳನ್ನು ಪ್ರೀತಿಸಿ ನಿಖಾಹ್ ಮಾಡಿಕೊಂಡು ಊರು ಬಿಟ್ಟು ಓಡಿಬಂದಂತಿದೆ’ ಎಂಬ ಗುಸುಗುಸು. ನಫೀಸಾಳ ದಂತದ ಮೈಬಣ್ಣ ಮತ್ತು ಅಪರೂಪದ ನಿಲುವು ಕೂಡಾ ಅದಕ್ಕೆ ತಕ್ಕಂತೆಯೇ ಇತ್ತು. ಆದರೆ ಒಂದು ಮಾತು ಹೆಚ್ಚಿಲ್ಲ, ಒಂದು ಮಾತು ಕಡಿಮೆಯಿಲ್ಲ ಎಂಬಂತೆ ತಾನಾಯಿತು, ತನ್ನ ಕೆಲಸವಾಯಿತು ಎನ್ನುವ ಸ್ವಭಾವ ಆಕೆಯದ್ದು. ಆಡುವ ಬಾಯಿಗಳಿಗೆ ಯಾವತ್ತೂ ಮೇವು ಒದಗಿಸಲಿಲ್ಲ.
ಸದಾ ಸಮಾಧಾನದಿಂದ ಇರುತ್ತಿದ್ದ ಮುಸ್ಲಿಯಾರರು ಕೆಲವೊಮ್ಮೆ ಸಿಟ್ಟಿಗೆದ್ದಾಗ ಮಾತ್ರ ಇಸ್ಲಾಮಿನ ಎರಡನೇ ಖಲೀಫಾ ಉಮರ್ ಬಿನ್ ಖತ್ತಾಬರಂತೆ ರೌದ್ರಾವತಾರಿ ಆಗುತ್ತಿದ್ದುದುಂಟು. ಒಮ್ಮೆ ಮದ್ರಸಾದಲ್ಲಿ ಕುರಾನಿನ ಫಾತಿಹಾ ಎಂಬ ಪುಟ್ಟ ಅಧ್ಯಾಯವನ್ನು ಕಂಠಪಾಠ ಮಾಡದೆ ಕುಂಟುತ್ತಿದ್ದ ಒಂಭತ್ತು ವರ್ಷದ ಹುಡುಗನೊಬ್ಬನಿಗೆ ಹುಣಿಸೆ ಮರದ ಬಡಿಯಿಂದ ಹೇಗೆ ಬಡಿದರೆಂದರೆ, ಆತ ಮನೆಗೆ ಹೋಗುವಾಗ ಕುಂಟಲಾಗದೆ ಕುಂಟುತ್ತಾ ಹೋಗಿ, ಕ್ರುದ್ಧನಾದ ಅವನಪ್ಪ ಅದ್ದುರ್ರಹ್ಮಾನ್ ಮನೆಯಲ್ಲಿದ್ದ ಪಿಕಾಸಿಯ ಬಡಿಗೆಯನ್ನೇ ಕಿತ್ತು ಕೈಯಲ್ಲಿ ಹಿಡಿದು ಮಸೀದಿಗೆ ಬಂದು ಉಸ್ತಾದರ ತಲೆ ಒಡೆಯುತ್ತೇನೆಂದು ಶರಂಪರ ಜಗಳವಾಡಿದ್ದ. ಇನ್ನೊಮ್ಮೆ ಮಾರ್ನಮಿಯ ವೇಷದ ಸಮಯದಲ್ಲಿ ಮನೆ ಬಾಗಿಲಿಗೆ ಬಂದ ಪರವೂರಿನ ಸ್ತ್ರೀವೇಷಧಾರಿಯೊಬ್ಬ ‘ಎಲ್ಲಿದ್ದೀರಿ ಉಸ್ತಾದರೇ, ಅಲ್ಲಿ ನಮ್ಮ ಮಗು ಅಪ್ಪ ಬೇಕೂ ಅಂತ ನಿಮ್ಮನ್ನೇ ನೆನೆಸಿ ಅಳುತ್ತಿದೆಯಲ್ಲ…’ ಎಂದು ಕುಶಾಲು ಮಾತನಾಡಿ ಕುಣಿಯುತ್ತಾ ಕಾಸು ಕೇಳತೊಡಗಿದಾಗ ಸಿಟ್ಟಿಗೆದ್ದ ಉಸ್ತಾದರು ಕೈಗೆ ಸಿಕ್ಕಿದ ಹಿಡಿಸೂಡಿಯಲ್ಲಿ ಆ ವೇಷಧಾರಿಗೆ ರಪರಪನೆ ಬಾರಿಸಿ, ಆತ ಕಂಯ್ ಕುಂಯ್ ಎನ್ನುತ್ತಾ ನೆಲದಲ್ಲುರುಳಿ, ಎದ್ದು ಬಿದ್ದು ಹಿಂತಿರುಗಿ ನೋಡದೇ ಓಟಕಿತ್ತಿದ್ದ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್
ಕೆಲವೊಮ್ಮೆ ಐದಾರು ದಿನ ಯಾರ ಜೊತೆಗೂ ಮಾತನಾಡದೆ ಮುಸ್ಲಿಯಾರರು ಮೌನವಾಗಿರುವುದುಂಟು. ರಾತ್ರಿ ಅಂಗಳದಲ್ಲಿ ಕುರ್ಚಿಯೊಂದನ್ನು ಹಾಕಿ ಆಕಾಶದ ನಕ್ಷತ್ರಗಳನ್ನು ನೋಡುತ್ತಾ ಕೈಬೆರಳುಗಳಲ್ಲಿ ಏನನ್ನೋ ಲೆಕ್ಕ ಹಾಕುವುದುಂಟು. ಹೀಗೆ ಆಕಾಶ ನೋಡುತ್ತಾ ಕುಳಿತಿರುತ್ತಿದ್ದ ಉಸ್ತಾದರನ್ನು ಊರವನೊಬ್ಬ ಹೊಗಳುತ್ತಾ ‘ಇವರು ಖಗೋಳಶಾಸ್ತ್ರದ ಮಹಾಜ್ಞಾನಿಯೆಂದೂ, ಲಕ್ಷದ್ವೀಪದಿಂದ ಬಂದಿರುವ ಸೂಫಿಸಂತರೇ ಇರಬೇಕೆಂದೂ, ಸುಲೇಮಾನ್ ಎಂಬ ಕ್ರಿಸ್ತಪೂರ್ವ ನೆಬಿಯ ಕಾಲದ ವೃದ್ಧ ಜಿನ್ನೊಂದು ಇವರಿಗೆ ಹಸ್ತಗತವಾಗಿದೆಯೆಂದೂ’ ಊರೆಲ್ಲಾ ಪ್ರಚಾರ ಮಾಡತೊಡಗಿದ್ದ. ಇದ್ದರೂ ಇರಬಹುದೆಂದು ಅನೇಕರು ನಂಬತೊಡಗಿದ್ದ ಒಂದು ದಿನ, ಆ ಹೊಗಳುಭಟನನ್ನು ಮಸೀದಿಯ ಅಂಗಳದಲ್ಲೇ ಮುಸ್ಲಿಯಾರರು ಅಟ್ಟಾಡಿಸಿಕೊಂಡು ಎಲ್ಲೆಂದರಲ್ಲಿ ಗುದ್ದಿ, ‘ಇನ್ನೊಮ್ಮೆ ಇಂತಹ ಸುಳ್ಳು ಪ್ರಚಾರ ಮಾಡಿದರೆ, ಶುಕ್ರವಾರ ಜುಮಾ ನಮಾಜಿನ ದಿನ ಉಪನ್ಯಾಸಕ್ಕೆಂದು ಕೈಯಲ್ಲಿ ಹಿಡಿದುಕೊಳ್ಳುವ ಬಡ್ಡು ತಲವಾರಿನಿಂದಲೇ ಕೊರಳು ಕತ್ತರಿಸಿಬಿಡುತ್ತೇನೆಂದು’ ಅಬ್ಬರಿಸಿದ್ದರು. ಹೊಡೆತಕ್ಕೆ ನಡುಗಿಹೋಗಿದ್ದ ಆತ ಗೋಗರೆದು ಕ್ಷಮೆ ಕೇಳಿ ಬಚಾವಾಗಿದ್ದ. ಆದರೆ ಬಿಗಿಮುಷ್ಠಿಯ ಹೊಡೆತ ತಿಂದ ಬಳಿಕ ನಿಜಕ್ಕೂ ಅವರ ದೇಹದಲ್ಲಿ ಯಾವುದೋ ಒಂದು ಜಿನ್ನ್ ನೆಲೆಸಿದೆಯೆಂದು ಆತನಿಗೆ ಖಾತ್ರಿಯಾಗಿತ್ತು. ಅದನ್ನು ಊರಲ್ಲಿ ಯಾರ ಬಳಿಯೂ ಬಾಯಿಬಿಟ್ಟು ಹೇಳಲಾಗದೆ, ಒಳಗೂ ಇರಿಸಿಕೊಳ್ಳಲಾಗದೆ ಆತ ವೇದನೆ ಅನುಭವಿಸುತ್ತಿದ್ದ.
ಮುಸ್ಲಿಯಾರರ ಕಂಠಸಿರಿ ಅದ್ಭುತವಾಗಿತ್ತು. ಉಪನ್ಯಾಸಕ್ಕೆಂದು ನಿಂತರೆ ಮಲಾಮೆ ಮಿಶ್ರಿತ ಮಲಯಾಳಂನಲ್ಲಿ ಸುಶ್ರಾವ್ಯವಾಗಿ ಪ್ರವಾದಿ ನೂಹ್, ಈಸಾ, ಮೂಸಾ, ಹಾರೂನ್, ದಾವೂದ್, ಸುಲೈಮಾನ್ ಮುಂತಾದವರ ಕಿಸ್ಸಾಗಳಿಗೆ ನವರಸಗಳನ್ನು ತುಂಬಿ, ನಡುನಡುವೆ ನಫೀಸತ್ ಮಾಲಾ, ಮಂಕೂಸ್ ಮೌಲೂದುಗಳ ಹಾಡುಗಳನ್ನು ರಾಗವಾಗಿ ಹಾಡುತ್ತಾ ಇತಿಹಾಸದ ಪಾತ್ರಗಳಿಗೆ ಜೀವ ತುಂಬುತ್ತಿದ್ದುದನ್ನು ಕೇಳಿ ಜನರು ತನ್ಮಯರಾಗುತ್ತಿದ್ದರು. ಅವರ ಕುರಾನ್ ಪಾರಾಯಣವೂ ಮೃದುಮಧುರ. ಎರಡೂ ಅಂಗೈಗಳನ್ನು ಆಕಾಶಕ್ಕೆ ಎತ್ತಿ ಅವರು ಗದ್ಗದ ಕಂಠದಿಂದ ಕಣ್ಣಂಚಿನಲ್ಲಿ ನೀರು ಜಿನುಗಿಸುತ್ತಾ ದುವಾ ಮಾಡಿದರೆ ಅಲ್ಲಾಹು ಆ ಪ್ರಾರ್ಥನೆಗೆ ತಕ್ಷಣವೇ ಉತ್ತರ ಕೊಡುತ್ತಾನೆಂದು ಬಹುತೇಕರು ನಂಬಿದ್ದರು. ನಂಬಿಕೆಗೆ ಅನುಗುಣವಾಗಿಯೇ ಮುಸ್ಲಿಯಾರರ ದುವಾದ ಬಳಿಕ ಹಲವರ ವ್ಯಾಪಾರ ಕುದುರಿತ್ತು, ಕೈಯಲ್ಲಿ ಕಾಸು ಓಡಾಡುತ್ತಿತ್ತು. ಕೆಲವು ಮಹಿಳೆಯರು ತಮಗೆ ಮಕ್ಕಳಾದದ್ದೂ ಉಸ್ತಾದರ ವಿಶೇಷ ದುವಾದ ಫಲ ಎಂದು ನಂಬಿಕೊಂಡದ್ದುಂಟು. ಜಮಾತ್ ಕಮಿಟಿಯ ಪದಾಧಿಕಾರಿಗಳು ಮುಸ್ಲಿಯಾರರ ಫ್ಯಾನ್‌ಗಳೇ ಆಗಿದ್ದ ಹಿನ್ನೆಲೆಯಲ್ಲಿ ಅವರ ರೌದ್ರಾವತಾರದ ಘಟನೆಗಳಿಗೂ ಊರವರಿಂದ ಮಾಫಿ ದೊರಕುತ್ತಿತ್ತು. ಊರಲ್ಲಿರುವ ಕೆಲವು ಕೆಳಜಾತಿಯ ಅಮ್ಮಂದಿರು ಅಳುವ ಪುಟ್ಟ ಕಂದಮ್ಮಗಳನ್ನು ಎತ್ತಿಕೊಂಡು ಮಸೀದಿಯ ಅಂಗಳಕ್ಕೆ ಬರುತ್ತಿದ್ದರು. ಈ ಗುರುಗಳು ಅರಬೀಯಲ್ಲಿ ಮಣಮಣ ಮಂತ್ರ ಹೇಳಿ, ಕಂದಮ್ಮಗಳ ತಲೆಯ ಮೇಲೆ ಕೈಬೆರಳಾಡಿಸಿ ಇಸುಫ್… ಎಂದೊಮ್ಮೆ ಊದಿದರೆ ಮಕ್ಕಳು ಚಂಡಿ ಹಿಡಿದ ಅಳು ನಿಲ್ಲಿಸುತ್ತಿದ್ದುದನ್ನು ಕಣ್ಣಾರೆ ಕಂಡ ಅಮ್ಮಂದಿರೂ ಗೌರವದಿಂದ ನಡೆದುಕೊಳ್ಳುತ್ತಿದ್ದರು. ಹೀಗೆ ಊರವರಿಗೆಲ್ಲ ಪ್ರಿಯವಾಗಿದ್ದ ಮುಸ್ಲಿಯಾರರ ಮನಸ್ಸಿನಲ್ಲಿ ಮಾತ್ರ, ಆಮೆಯೊಂದು ಮರಳತೀರಕ್ಕೆ ಬಂದು ಗುಂಡಿ ತೋಡಿ ಮೊಟ್ಟೆಯಿಟ್ಟು ಮರಳಿ ಸಮುದ್ರಕ್ಕೆ ಓಡಿಹೋಗುವಂತೆ, ಜಿನುಗುವ ದುಃಖವೊಂದು ಒಸರುತ್ತಿತ್ತು. ಇಲ್ಲಿಗೆ ಬಂದು ನೆಲೆಸಿ ಐದು ವರ್ಷಗಳಾದರೂ ತನ್ನ ಪ್ರೀತಿಯ ನಫೀಸಾ ಒಂದು ಕರುಳಕುಡಿಯನ್ನು ಹೆತ್ತು ಕೊಡಲಿಲ್ಲವೇ ಎಂಬ ವೇದನೆಯು ಮುಸ್ಲಿಯಾರರ ಮನಸೊಳಗೇ ಮರಕುಟುಕದಂತೆ ಕುಟುಕುತ್ತಿತ್ತು.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು
ಕೊನೆಗೊಂದು ದಿನ ಅಲ್ಲಾಹು ಅವರ ವೇದನೆಗೂ ಪರಿಹಾರವೊಂದನ್ನು ಒದಗಿಸಿಕೊಟ್ಟಂತೆ ನಫೀಸಾ, ಶಾಬಾನ್ ತಿಂಗಳ 21ರಂದು ಬೆಳದಿಂಗಳ ತುಂಡಿನಂತಹ ಗಂಡು ಮಗುವೊಂದಕ್ಕೆ ಜನ್ಮ ನೀಡಿದಳು. ಮಗುವನ್ನು ಇಸ್ಲಾಮಿನ ಪ್ರಕಾಂಡ ಪಂಡಿತನಾಗಿ ಬೆಳೆಸಬೇಕೆಂದು ಅಂದೇ ನಿರ್ಧರಿಸಿದ್ದ ಉಸ್ತಾದರು ಮಗುವಿಗೆ ಮೊದಲ ಖಲೀಫಾ ಅಬೂಬಕರ್ ಸಿದ್ದೀಕರ ಹೆಸರನ್ನೇ ಇಟ್ಟಿದ್ದರು. ಅಂಗಳಕ್ಕೆ ಒಯ್ದರೆ ಕಾಗೆ ಎತ್ತೊಯ್ಯಬಹುದು, ಮನೆಯೊಳಗೆ ಮಲಗಿಸಿದರೆ ಇರುವೆ ಕಚ್ಚಬಹುದು ಎಂಬಂಥ ಮುಚ್ಚಟೆಯಲ್ಲಿ ಮಗುವನ್ನು ಸದಾ ಹೆಗಲಲ್ಲಿ ಹೊತ್ತುಕೊಂಡು ಇಬ್ಬರೂ ಓಡಾಡಿದರು. ಮದ್ರಸಾ ಶಿಕ್ಷಣದ ಜೊತೆಜೊತೆಗೇ ಉರ್ದು ಶಾಲೆಯಲ್ಲಿ ಏಳನೇವರೆಗೆ ಓದಿದ ಸಿದ್ದೀಕನನ್ನು ಕಲ್ಲಿಕೋಟೆಯ ಅರೆಬಿಕ್ ಕಾಲೇಜಿಗೆ ಸೇರಿಸಬೇಕೆಂದು ಮುಸ್ಲಿಯಾರ್ ನಿರ್ಧರಿಸಿದ್ದರು. ನಫೀಸಾ ಬಿಲ್‌ಕುಲ್ ಒಪ್ಪಲಿಲ್ಲ. ತಿಂಗಳ ಕಾಲ ಗಂಡನ ಜೊತೆಗೆ ಮುನಿದು ಮನವೊಲಿಸಿದ ನಫೀಸಾ ಮಗನನ್ನು ಕೊನೆಗೂ 120 ಮೈಲಿ ದೂರದಲ್ಲಿದ್ದ ಮಂಗಳೂರಿನ ಖಾಸಗಿ ಹೈಸ್ಕೂಲಿಗೆ ಸೇರಿಸುವಲ್ಲಿ ಯಶಸ್ವಿಯಾದಳು. ಮಂಗಳೂರಿನಲ್ಲಿ ಯಾರು ಯಾರದೋ ಕೈಕಾಲು ಹಿಡಿದು ಮುಸ್ಲಿಂ ಹಾಸ್ಟೆಲ್‌ನಲ್ಲಿ ಕೂರಿಸಿದರು. ಹೊಟ್ಟೆಬಟ್ಟೆ ಕಟ್ಟಿ ಮಗನ ಓದಿಗೆ ದುಡ್ಡು ಹೊಂದಿಸಿದರು. ಎಸೆಸೆಲ್ಸಿ ಮುಗಿದ ಬಳಿಕ ಸಿದ್ದೀಕ್ ಅಲ್ಲೇ ಐಟಿಐ ಮಾಡುತ್ತೇನೆಂದ. ಕೋರ್ಸ್ ಮುಗಿಸಿದ ತಕ್ಷಣವೇ ಕೆಲಸ ಸಿಗುತ್ತದಂತೆ ಎಂದ. ಮುಸ್ಲಿಯಾರರು ತಾನು ದುಡಿದ ಅಲ್ಪಹಣವನ್ನು ಅಲ್ಲಲ್ಲಿಗೇ ಹೊಂದಿಸಿಕೊಂಡರು. ಹಾಗೆ ಮಂಗಳೂರಿನಲ್ಲಿ ಐಟಿಐ ಮುಗಿಸಿದ ಸಿದ್ದೀಕನನ್ನು ಮುಷ್ತಾಕ್ ಸಾಹೇಬ್ ಎಂಬವರೊಬ್ಬರು ಮುಂಬೈಗೆ ಕರೆದೊಯ್ದು ಫ್ಯಾಕ್ಟರಿಯೊಂದರಲ್ಲಿ ಕೆಲಸವನ್ನೂ ಕೊಡಿಸಿದರು. ಕರೆದೊಯ್ದವರು ಕೆಲಸ ಮಾತ್ರ ಕೊಡಿಸಲಿಲ್ಲ, ಮದುವೆಗೆಂದು ತನಗಿದ್ದ ಒಬ್ಬಳೇ ಮಗಳನ್ನೂ ಕೊಟ್ಟುಬಿಟ್ಟರು!
ಅದಾದದ್ದೂ ಸ್ವಲ್ಪ ವಿಚಿತ್ರವಾಗಿಯೇ. ಮುಂಬೈಯಿಂದ ಆಗಾಗ್ಗೆ ವ್ಯಾಪಾರಕ್ಕೆ ಮಂಗಳೂರಿಗೆ ಬರುತ್ತಿದ್ದ ಮುಷ್ತಾಕ್ ಸಾಹೇಬರು ಸಿದ್ದೀಕನ ಮುಸ್ಲಿಂ ಹಾಸ್ಟೆಲ್ ಪಕ್ಕದ ಹೋಟೆಲಲ್ಲಿ ಉಳಿದುಕೊಳ್ಳುತ್ತಿದ್ದರಂತೆ. ಸಹಜವಾಗಿ ಪರಿಚಯವಾಯಿತು. ಆಮೇಲಾಮೇಲೆ ಬರುವಾಗ ಅವರು ಸಿದ್ದೀಕನಿಗೆಂದು ಬಟ್ಟೆ ಬರೆ, ಸೆಂಟುಗಳನ್ನು ತರುವುದು ವಾಡಿಕೆಯಾಯಿತು. ಮೈಯದ್ದಿ ಬ್ಯಾರಿಯ ಮೂನ್‌ಲೈಟ್ ಹೋಟೆಲ್ಲಿಗೆ ಕರೆದೊಯ್ದು ಪರೋಟ ಮತ್ತು ಬೀಫ್ ಸುಕ್ಕ ತಿನ್ನಿಸುವುದೂ ಅಭ್ಯಾಸವಾಯಿತು. ನಿಕಟವಾದ ಮುಷ್ತಾಕ್ ಸಾಹೇಬರು ಐಟಿಐ ಮುಗಿಸಿದ ತಕ್ಷಣ ಮುಂಬೈಗೆ ಜೊತೆಯಲ್ಲಿ ಬರಬೇಕೆಂದೂ ಒಳ್ಳೆಯ ಕೆಲಸ ಕೊಡಿಸುವುದಾಗಿಯೂ ಭರವಸೆ ನೀಡಿದರು. ಅವರ ಪೂರ್ವಜರೂ ಮಂಗಳೂರಿನವರಂತೆ. ಉರ್ದು ಮನೆಮಾತು. ಇವರು ಬಾಲ್ಯದಲ್ಲೇ ಮನೆಬಿಟ್ಟು ಮುಂಬೈಗೆ ಹೋಗಿ ಅಲ್ಲೇ ಬದುಕು ಕಟ್ಟಿಕೊಂಡರಂತೆ. ಮುಂಬೈಯಲ್ಲಿ ಕೆಲಸಕ್ಕೆ ಸೇರಿದ ಬಳಿಕ ಮುಷ್ತಾಕ್ ಸಾಹೇಬರ ಏಕೈಕ ಪುತ್ರಿಯನ್ನು ಕಂಡು ಸಿದ್ದೀಕನಿಗೆ ಅಲ್ಲೇ ಸೆಟ್ಲ್ ಆಗುವುದರಲ್ಲಿ ಅರ್ಥವಿದೆ ಅನ್ನಿಸಿದ್ದೂ, ಅದನ್ನು ಊರಿಗೆ ಬಂದಾಗ ಹೆತ್ತವರಲ್ಲಿ ಯಾವ ಹಿಂಜರಿಕೆಯಿಲ್ಲದೇ ಹೇಳಿದ್ದನ್ನೂ ಬರೆಯಲು ಹೋದರೆ ಅದೇ ಇನ್ನೊಂದು ದೊಡ್ಡ ಕತೆಯಾಗುತ್ತದೆ. ಸೊಸೆಯ ಮುದ್ದುಮುಖದ ಫೋಟೊ ಮತ್ತು ಮಗನ ಪ್ರೇಮಮಯಿ ಮುಖವನ್ನು ನೋಡಿದ ಬಳಿಕ ನಫೀಸಾಗೂ ಮಗನ ಮಾತು ಸರಿಯೆನ್ನಿಸಿತ್ತು. ಆದರೆ ಮುಚ್ಚಟೆಯಿಂದ ಬೆಳೆಸಿದ ಮಗನನ್ನು ಹೀಗೆ ಯಾರೋ ಅಚಾನಕ್ಕಾಗಿ, ಕೋಳಿಮರಿಯನ್ನು ಹದ್ದು ಎಗರಿಸಿದಂತೆ ಕೊಂಡೊಯ್ದದ್ದು ಹೇಗೆಂದು ಆಕೆಗೆ ಅರ್ಥವಾಗಲಿಲ್ಲ. ಮಗನಿಲ್ಲದೇ ತಾವು ಊರಿನಲ್ಲೇ ಉಳಿಯುವುದೇ? ‘ಮುಂಬೈಗೆ ಬಂದು ಜೊತೆಗೇ ಇದ್ದುಬಿಡಿ’ ಎಂದು ಸಿದ್ದೀಕ ಒತ್ತಾಯಿಸಿದ. ಆದರೆ ಮುಸ್ಲಿಯಾರರು ಒಪ್ಪಲಿಲ್ಲ. ಎಲ್ಲಿಂದಲೋ ವಲಸೆ ಬಂದವನಿಗೆ ಗೌರವದ ಬದುಕು ಕೊಟ್ಟ ಊರಿದು, ಇದನ್ನು ಬಿಟ್ಟು ಇನ್ನೆಲ್ಲಿಗೂ ಬರುವುದಿಲ್ಲ ಎಂದು ಕಲ್ಲುಮನಸ್ಸು ಮಾಡಿಕೊಂಡರು. ಹಾಗೆ ಅವಸರವಸರವಾಗಿ ಊರ ಮಸೀದಿಯಲ್ಲೇ ನಿಖಾಹ್ ನಡೆಯಿತು. ಸಿದ್ದೀಕನಿಗೂ ಫ್ಯಾಕ್ಟರಿಯಲ್ಲಿ ಹೆಚ್ಚು ರಜೆ ಇರಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ
ವಯಸ್ಸಿಗೆ ಬಂದ ಮುದ್ದಿನ ಮಗ ತಮ್ಮನ್ನೊಂದು ಮಾತೂ ಕೇಳದೆ ಬದುಕಿನ ಪ್ರಮುಖ ನಿರ್ಧಾರಗಳನ್ನು ಕೈಗೊಂಡು ಮುಂಬೈಗೆ ಹಾರಿಹೋದದ್ದು ಮುಸ್ಲಿಯಾರರಲ್ಲಿ ಉಂಟು ಮಾಡಿದ ತಳಮಳ ಅಷ್ಟಿಷ್ಟಲ್ಲ. ಯಾರೊಂದಿಗೂ ಹೇಳುವ ಸ್ವಭಾವವೂ ಅವರದ್ದಲ್ಲ. ಅಂಗಳದಲ್ಲಿ ಕುರ್ಚಿ ಹಾಕಿಕೊಂಡು ತಡರಾತ್ರಿಯವರೆಗೆ ಆಕಾಶದ ನಕ್ಷತ್ರಗಳನ್ನು ನೋಡುವುದು ಅವರಿಗೆ ಇನ್ನಷ್ಟು ಪ್ರಿಯವಾಯಿತು. ಮನುಷ್ಯನ ವಲಸೆ ಎನ್ನುವುದು ಎಷ್ಟು ವಿಚಿತ್ರ! ಹುಟ್ಟಿದೂರನ್ನು ಬಿಟ್ಟು ನಫೀಸಾಳನ್ನು ಕಟ್ಟಿಕೊಂಡು ಇಲ್ಲಿಗೆ ಬಂದೆ. ಬಳಿಕ ಹುಟ್ಟಿದೂರಿಗೆ ಒಮ್ಮೆಯೂ ಹೋಗಲಿಲ್ಲ. ಈಗ ಮಗ ಈ ಊರನ್ನು ಬಿಟ್ಟು ಮುಂಬೈಗೆ ವಲಸೆ ಹೋಗಿದ್ದಾನೆ. ಅಲ್ಲೇ ಬದುಕು ಕಟ್ಟಿಕೊಂಡಿದ್ದಾನೆ. ಮರಳಿ ಬರುವ ಸಾಧ್ಯತೆಯೇ ಇಲ್ಲ! ಮುಂಬೈಗೆ ಬನ್ನಿ ಎಂದೀಗ ಒತ್ತಾಯಿಸುತ್ತಿದ್ದಾನೆ. ಹಾಗೆ ಒತ್ತಾಯಿಸಲು ಬಲವಾದ ಕಾರಣವೂ ಕೂಡಿಬಂದಿದೆ.
****
ಮಸೀದಿಯಲ್ಲಿ ಅವತ್ತು ಪ್ರೆಸಿಡೆಂಟ್ ಅಬ್ದುಲ್ಲಾ ಹಾಜಿ ಮತ್ತು ಖಾದರ್ ಮುಸ್ಲಿಯಾರ್ ನಡುವಣ ಖಡಾಖಡಿ ಜಗಳಕ್ಕೆ ಮುಖ್ಯ ಕಾರಣ ಜಮಾತಿಗೆ ಬಂದ ಬ್ಯಾಂಕಿನ ಪತ್ರದಲ್ಲಿ ನಮೂದಿಸಿದ್ದ ಬಡ್ಡಿಯ ಹಣ ಐವತ್ತು ಸಾವಿರ ರೂಪಾಯಿ!
ಬೇರೆ ಮುಸ್ಲಿಂ ಜಮಾತ್‌ಗಳಲ್ಲಿ ಮುಸ್ಲಿಯಾರರೆಂದರೆ ಸಂಬಳಕ್ಕಿರುವವರೇ ಹೊರತು, ಜಮಾತ್ ಕಮಿಟಿಯಲ್ಲಿ ಸ್ಥಾನವಿರುವುದಿಲ್ಲ. ಆದರೆ ಊರಿನ ವಿಶೇಷವೆಂದರೆ ಮುಸ್ಲಿಯಾರರು ಜಮಾತ್ ಕಮಿಟಿಯ ಪರ್ಮನೆಂಟ್ ಉಪಾಧ್ಯಕ್ಷರು. ಅಧ್ಯಕ್ಷರು ಮತ್ತು ಕಮಿಟಿ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿದ್ದರೂ ಮುಸ್ಲಿಯಾರರು ಶಾಶ್ವತ ಉಪಾಧ್ಯಕ್ಷರೆಂದು ಜನರಲ್ ಬಾಡಿಯಲ್ಲಿ ಇಪ್ಪತ್ತು ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು.
ಪಕ್ಕದೂರಿನ ಬ್ಯಾಂಕಿನಲ್ಲಿ ಎಷ್ಟೋ ವರ್ಷಗಳ ಹಿಂದೆ ಇಟ್ಟಿದ್ದ ಫಿಕ್ಸೆಡ್ ಡೆಪಾಸಿಟ್‌ನ ಹಣವೊಂದು ಮರಿ ಹಾಕುತ್ತಾ ಹೋಗಿದ್ದುದನ್ನು ಜಮಾತಿನವರು ಗಮನಿಸಿರಲಿಲ್ಲ. ಹೊಸದಾಗಿ ಬ್ಯಾಂಕಿಗೆ ಬಂದ ಮುಸ್ಲಿಂ ಮ್ಯಾನೇಜರ್ ಗಮನಿಸಿ, ವಿವರವಾದ ಪತ್ರವೊಂದನ್ನು ಜಮಾತ್‌ಗೆ ಬರೆದಿದ್ದರು. ‘ಸಾಮಾನ್ಯವಾಗಿ ಮಸೀದಿಯವರು ಬಡ್ಡಿಯ ಹಣವನ್ನು ಪಡೆಯುವುದಿಲ್ಲ. ನಿಮ್ಮ ಬಡ್ಡಿ ಹಣವನ್ನು ಏನು ಮಾಡಬೇಕೆಂದು ಸೂಚಿಸಿ’ ಎಂದಿದ್ದ ಪತ್ರ, ಜಮಾತಿನಲ್ಲಿ ಹೊಸ ಚರ್ಚೆ ಹುಟ್ಟುಹಾಕಿತ್ತು. ಜೊತೆಗೆ ಅಬ್ದುಲ್ಲಾ ಮತ್ತು ಮುಸ್ಲಿಯಾರರ ಮಧ್ಯೆ ಜಗಳವನ್ನೂ.
ಮೀಟಿಂಗಿನಲ್ಲಿ ಮುಸ್ಲಿಯಾರರು ಖಡಾಖಂಡಿತವಾಗಿ ಹೇಳಿದ್ದು– ‘ಇಸ್ಲಾಮಿನಲ್ಲಿ ಬಡ್ಡಿಯ ಹಣ ಹರಾಮ್. ಅದನ್ನು ಕೈಯಿಂದ ಮುಟ್ಟುವುದಲ್ಲ, ಕಣ್ಣೆತ್ತಿಯೂ ನೋಡುವಂತಿಲ್ಲ. ಬಡ್ಡಿಯ ಹಣ ತಿಂದವನು ಯಾವ ಕಾರಣಕ್ಕೂ ಉದ್ಧಾರ ಆಗುವುದಿಲ್ಲ. ಆ ಹಣದಲ್ಲಿ ಊಟ ಮಾಡಿದ ಅವನ ಸಂತಾನಕ್ಕೂ ಕಷ್ಟಗಳು ತಪ್ಪಿದ್ದಲ್ಲ. ಮರಣದ ಬಳಿಕ ಜಹನ್ನಮಾ ಎಂಬ ರೌರವ ನರಕದ ಬೆಂಕಿಯಲ್ಲಿ ಧಗಧಗನೆ ಆತ ಉರಿದು ನರಳುತ್ತಾನೆ..!’
ಮುಸ್ಲಿಯಾರರ ಮಾತು ಅಲ್ಲಿದ್ದ ಹಲವರ ಮುಖದಲ್ಲಿ ರಕ್ತ ಬತ್ತಿಸಿದ್ದು ಸುಳ್ಳಲ್ಲ. ಅಲ್ಲಿರುವ ಬಹುತೇಕರು ಬ್ಯಾಂಕಿನ ಸಾಲಕ್ಕೆ ಬಡ್ಡಿ ಕಟ್ಟುವವರೇ. ಮಂಗಳೂರಿನಲ್ಲಿ ಬ್ಯಾಂಕೊಂದರಲ್ಲಿ ಕ್ಲಾರ್ಕ್ ಆಗಿದ್ದ ಅಬ್ದುಲ್ಲಾ ಹಾಜಿಯ ಬಾಮೈದನೊಬ್ಬ ಅವತ್ತು ಸಭೆಯಲ್ಲಿದ್ದವನು ಮುಸ್ಲಿಯಾರರ ಮಾತಿಗೆ ಉರಿಯತೊಡಗಿದ್ದ. ಆದರೆ ಯಾರೂ ಎದುರು ಮಾತನಾಡುವಂತಿರಲಿಲ್ಲ.
ಕೊನೆಗೊಬ್ಬ ಕೇಳಿದ– ‘ಅದೇನೋ ಸರಿ ಮುಸ್ಲಿಯಾರರೇ, ಈಗ ಬಡ್ಡಿ ಹಣವನ್ನು ಏನು ಮಾಡಬೇಕು?’
‘ಷರೀಯತ್‌ನಲ್ಲಿ ಅದಕ್ಕೂ ದಾರಿಗಳಿವೆ. ಹಣವನ್ನು ಎಲ್ಲರೆದುರೇ ಬೆಂಕಿಯಲ್ಲಿ ಹಾಕಿ ಸುಡಬೇಕು. ಅಥವಾ ದೂರ ಸಮುದ್ರಕ್ಕೆ ತೆರಳಿ ಚೂರುಚೂರಾಗಿ ಕತ್ತರಿಸಿ ನೀರಿನಲ್ಲಿ ವಿಸರ್ಜಿಸಬೇಕು’ ಎಂದರು ಮುಸ್ಲಿಯಾರ್.
ಸಭೆಯಲ್ಲಿ ಗುಜುಗುಜು ಶುರುವಾಯಿತು.
‘ಸೈಲೆನ್ಸ್ ಪ್ಲೀಸ್..’ ಎಂದರು ಪ್ರೆಸಿಡೆಂಟ್ ಅಬ್ದುಲ್ಲಾ ಹಾಜಿ. ‘ನಮ್ಮ ಹಿಂದಿನವರು ಎಫ್‌ಡಿಯಲ್ಲಿ ಎಷ್ಟೋ ವರ್ಷಗಳ ಹಿಂದೆ ಹಣ ಇಟ್ಟಿದ್ದಾರೆ. ಅವರೇನೋ ಬಡ್ಡಿಯ ಆಸೆಗೆ ಇಟ್ಟದ್ದಲ್ಲ. ಯಾರೋ ದಾನಿಗಳು ಕೊಟ್ಟ ಡೊನೇಷನ್ನು ಅದು. ಬ್ಯಾಂಕಿನವರು ಅವರಾಗಿ ಬಡ್ಡಿ ಕೊಟ್ಟಿದ್ದಾರೆ. ನೋಟುಗಳನ್ನು ಸುಡುವುದಕ್ಕಿಂತ ಮಂಗಳೂರಿಗೆ ಹೋಗಿ ಬೋಟ್‌ನಲ್ಲಿ ಸಮುದ್ರದ ಮಧ್ಯೆ ನೀರಿಗೆಸೆಯೋಣ. ನಾನೇ ಕೊಂಡೊಯ್ಯುತ್ತೇನೆ. ನನ್ನ ಸ್ನೇಹಿತರೊಬ್ಬರ ಫಿಷಿಂಗ್ ಬೋಟಿದೆ. ಸಮಸ್ಯೆಯೇ ಇಲ್ಲ!’
‘ನಿಮಗೆ ಅಷ್ಟೆಲ್ಲ ಕಷ್ಟ ಯಾಕೆ? ಜಮಾತಿನ ಎಲ್ಲ ಸದಸ್ಯರ ಕಣ್ಣೆದುರೇ ಖರ್ಚಿಲ್ಲದೆ ಸುಟ್ಟು ಹಾಕಿದರೇನು ತೊಂದರೆ?’ ಮುಸ್ಲಿಯಾರರು ಪಟ್ಟು ಹಿಡಿದರು.
‘ಏನು.. ನನ್ನ ಮೇಲೆಯೇ ವಿಶ್ವಾಸವಿಲ್ಲವೇ? ನಾನೇನು ಕಳ್ಳನ ತರಹ ಕಾಣಿಸ್ತೀನಾ?’ ಪ್ರೆಸಿಡೆಂಟರು ಗರಂ ಆದರು.
‘ಹಾಗಂತ ನಾನೆಲ್ಲಿ ಹೇಳಿದೆ? ಇದು ಷರೀಯತ್ತಿಗೆ ಸಂಬಂಧಿಸಿದ ಪ್ರಶ್ನೆ. ಏನು ಮಾಡುವುದಿದ್ದರೂ ಎಲ್ಲರಿಗೂ ಗೊತ್ತಾಗಲಿ..’ ಮುಸ್ಲಿಯಾರರು ಪಟ್ಟು ಬಿಡಲಿಲ್ಲ.
ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು
‘ಮುಸ್ಲಿಯಾರರೇ.. ಬರೀ ಷರೀಯತ್ತಿನ ಪ್ರಶ್ನೆ ಅಲ್ಲವಿದು. ಕಾನೂನಿನ ಪ್ರಶ್ನೆಯೂ ಇದೆ. ಅದೆಲ್ಲ ನಿಮಗರ್ಥ ಆಗಲ್ಲ. ನೋಟುಗಳಿಗೆ ಬೆಂಕಿ ಹಾಕಿ ಪೊಲೀಸ್ ಕೇಸಾಗಿ, ನಮ್ಮನ್ನೆಲ್ಲ ಮತ್ತೆ ಸ್ಟೇಷನ್ನಿಗೆ ಓಡಾಡಿಸಬೇಕೆಂದು ಮಾಡಿದ್ದೀರಾ? ಕಳೆದ ವರ್ಷ ಹೀಗೇ ನಿಮ್ಮ ಮೂರ್ಖತನದಿಂದ ಜೈಲು ಪಾಲಾಗುತ್ತಿದ್ದಿರಿ. ಸ್ಟೇಷನ್ನಿಗೆ ಹೋಗಿ ಇನ್ಸ್‌ಪೆಕ್ಟರ್ ಕಾಲು ಹಿಡಿದು ನಿಮ್ಮನ್ನು ರಕ್ಷಿಸಿದವನು ನಾನು! ನನಗೇ ಉಲ್ಟಾ ಮಾತನಾಡ್ತೀರಾ?’ ಪ್ರೆಸಿಡೆಂಟರ ಧ್ವನಿ ತಾರಕಕ್ಕೆ ಏರಿತು.
ಇನ್ನೇನು ಮುಸ್ಲಿಯಾರರೂ ಸಿಟ್ಟಿಗೆದ್ದು ಕೂಗಾಡಿದರೆ ಏನೇನು ಅನಾಹುತವಾಗುತ್ತೋ ಅಂತ ಒಂದಿಬ್ಬರು ಸದಸ್ಯರು ಕುಳಿತಲ್ಲಿಂದ ಎದ್ದು ನಿಂತರು. ಎಲ್ಲರೂ ಮುಸ್ಲಿಯಾರರ ಬಿಗಿಯುತ್ತಿದ್ದ ಮುಷ್ಠಿಗಳತ್ತ ನೋಡುತ್ತಿದ್ದರು.
ಅಬ್ದುಲ್ಲಾ ಹಾಜಿ ಮತ್ತು ಮುಸ್ಲಿಯಾರರ ಸಂಘರ್ಷಕ್ಕೆ ಕಾರಣವಾದ ಆ ಹಳೆಯ ಪ್ರಕರಣಕ್ಕೆ ಹತ್ತು ತಿಂಗಳೂ ತುಂಬಿಲ್ಲ. ಮಸೀದಿಯ ಸುತ್ತಲೂ ಬೆಳೆದು ನಿಂತಿದ್ದ ತೇಗದ ತರಗೆಲೆಗಳು ನೆಲಕ್ಕುದುರುತ್ತಿದ್ದ ಚಳಿಗಾಲದ ದಿನಗಳವು. ಮುಸ್ಲಿಯಾರರು ಬೆಳಿಗ್ಗೆದ್ದು ಮಸೀದಿಯಲ್ಲಿ ಸಾಮೂಹಿಕ ನಮಾಜ್ ಮುಗಿಸಿ, ಕುರಾನ್ ಪಠಿಸಿ, ಊರ ಹೊರಗಿನ ಹಳೇ ಕಾಲುಸಂಕದ ರಸ್ತೆಯಲ್ಲಿ ಎಂದಿನಂತೆ ವಾಕಿಂಗ್ ಹೊರಟಿದ್ದರು. ಚಳಿ ಸ್ವಲ್ಪ ಹೆಚ್ಚಿದ್ದುದರಿಂದಲೋ ಏನೋ ಅವತ್ತು ವಾಕಿಂಗಿಗೆ ಹೆಚ್ಚು ಜನರಿರಲಿಲ್ಲ. ನೀರಿಲ್ಲದ ಹಳ್ಳದ ಕಾಲುಸಂಕ ದಾಟಿದರೆ ಸ್ವಲ್ಪ ದೂರ ನಿರ್ಜನ ದಾರಿ. ಮುಳ್ಳುಕಂಟಿಗಳ ದಾರಿಯಲ್ಲಿ ಒಂದು ಪಾಳುಬಿದ್ದ ಮನೆಯಿತ್ತು. ಪಕ್ಕದಲ್ಲೊಂದು ಸಣ್ಣ ಬುಗುರಿ ಮರ. ಇನ್ನೂ ಸರಿಯಾಗಿ ಬೆಳಕು ಮೂಡಿರಲಿಲ್ಲ. ಮಸ್ಲಿಯಾರ್ ಬೀಸುಗಾಲಲ್ಲಿ ನಡೆಯುತ್ತಾ ಸಹಜವಾಗಿ ಬಲಕ್ಕೆ ನೋಡಿದರೆ ಮರದ ಕೊಂಬೆಗೆ ನೇತು ಬಿದ್ದಿದೆ ಒಂದು ಹೆಣ್ಣುಜೀವ!
ಮುಸ್ಲಿಯಾರಿಗೆ ಜೀವ ಧಿಗ್ಗೆಂದಿತು. ದೂರದಿಂದ ನೋಡಿದರೆ ಇನ್ನೂ ಜೀವ ಹೋಗಿಲ್ಲ ಎಂಬಂತಿತ್ತು. ನೇತಾಡುತ್ತಿದ್ದ ಎರಡೂ ಕೈಗಳು ಸ್ವಲ್ಪ ಚಲಿಸಿದಂತೆಯೂ, ಕಾಪಾಡಿ ಎಂಬಂತೆ ಬೆರಳುಗಳನ್ನು ಅಲ್ಲಾಡಿಸುತ್ತಿರುವಂತೆಯೂ ಕಾಣಿಸಿ ಮುಸ್ಲಿಯಾರರು ಮರದತ್ತ ಉಸಿರು ಬಿಗಿಹಿಡಿದು ಓಡಿದರು. ಆ ಹೆಣ್ಣುಜೀವದ ಎರಡೂ ತೊಡೆಗಳನ್ನು ಅಪ್ಪಿ ಹಿಡಿದು ಕುತ್ತಿಗೆಯ ಕುಣಿಕೆ ಸಡಿಲಾಗುವಂತೆ ದೇಹವನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದರು. ಒಬ್ಬರೇನು ಮಾಡಲಾಗುತ್ತದೆ? ಹೇಗೆ ಇಳಿಸುವುದೆಂದು ತಿಳಿಯದೆ ಗೊಂದಲದಿಂದ ಮುಸ್ಲಿಯಾರರು ಏದುಸಿರು ಬಿಡುತ್ತಾ ದೇಹವನ್ನು ಹಿಡಿದು ನಿಂತಿದ್ದಾಗ ಪಕ್ಕದ ಊರಿನಿಂದ ರಸ್ತೆಯಲ್ಲಿ ಈ ಕಡೆಗೆ ಬರುತ್ತಿದ್ದವನನೊಬ್ಬ ಕಿಟಾರನೆ ಕಿರುಚುತ್ತಾ ವಾಪಸ್ ಓಟಕಿತ್ತ! ಮುಸ್ಲಿಯಾರ್ ಗಾಬರಿಯಾದರೂ ಹೆಣ್ಣುಜೀವವನ್ನು ಬಿಡಲಿಲ್ಲ. ಮೇಲುಸಿರು ಬಿಡುತ್ತಾ ಎಷ್ಟೋ ಹೊತ್ತು ದಿಗ್ಮೂಢರಂತೆ ನಿಂತೇ ಇದ್ದರು. ಆಗಾಗ್ಗೆ ಕೊರಳೆತ್ತಿ ಆ ಹೆಣ್ಣು ಜೀವದ ಮುಖದ ಕಡೆಗೆ ನೋಡುತ್ತಿದ್ದರು.
ಪಕ್ಕದೂರಿನಲ್ಲಿ ಸುದ್ದಿ ಹಬ್ಬಿ, ಅಲ್ಲಿಂದ ಹತ್ತಿಪ್ಪತ್ತು ಮಂದಿ ಓಡೋಡಿ ಬಂದು ಬುಗುರಿ ಮರದ ಬಳಿ ಸೇರಿದರು. ಮುಸ್ಲಿಯಾರರ ಬಿಗಿಮುಷ್ಟಿಯಿಂದ ಮೃತದೇಹವನ್ನು ಬಿಡಿಸಿ ಮರದಿಂದ ಕೆಳಗಿಳಿಸಿದರು. ಮೈಮೇಲೆ ಪರಿವೆಯೇ ಇಲ್ಲದಂತಿದ್ದ ಮುಸ್ಲಿಯಾರ್ ಜನರ ಗುಂಪನ್ನು ಸೀಳಿ ಮಸೀದಿಯತ್ತ ಸರಸರನೆ ನಡೆದರು. ಈ ಮಧ್ಯೆ ಮುಸ್ಲಿಯಾರನ್ನು ನೋಡಿ ಓಡಿ ಹೋಗಿದ್ದ ವ್ಯಕ್ತಿ, ‘ಅವರು ಆಕೆಯ ಕತ್ತಿಗೆ ಉರುಳು ಹಾಕಿ ಕೊಂಬೆಗೆ ನೇತಾಡಿಸಿ ಹಗ್ಗ ಎಳೆಯುತ್ತಿದ್ದುದನ್ನು ‘ಕಣ್ಣಾರೆ’ ಕಂಡೆ ಎಂದು ಊರವರ ಮುಂದೆ ಬಣ್ಣಿಸಿ ಹೇಳತೊಡಗಿದ. ಜನರೂ ಕ್ರುದ್ಧರಾಗಿದ್ದರು. ಕೇಸರಿ ಲುಂಗಿಯವನೊಬ್ಬ ‘ನೋಡಲು ಸಂಭಾವಿತರಂತೆ ಕಾಣುತ್ತಾರೆ.. ಈ ಗಡ್ಡದವರೆಲ್ಲ ಮಾಡುವುದು ಇಂತಹ ಹಲ್ಕಾ ಕೆಲಸವೇ..’ ಎಂದು ಕಿಡಿಕಾರಿದ. ಗುಂಪು ಸೇರಿದವರಲ್ಲಿ ಅಬ್ದುಲ್ಲಾ ಹಾಜಿಯ ಮೇಸ್ತ್ರಿಯೂ ಇದ್ದವನು ಧಣಿಗಳ ಮನೆಗೋಡಿ ಸುದ್ದಿ ಮುಟ್ಟಿಸಿದ. ಮಸೀದಿಯಲ್ಲೂ ಜನ ಸೇರತೊಡಗಿದರು. ಸಣ್ಣ ಧ್ವನಿಯಲ್ಲಿ ಶುರುವಾದ ಎರಡೂ ಕಡೆಯವರ ಮಾತುಕತೆ ಸೂರ್ಯ ಮೇಲೇಳುತ್ತಿದ್ದಂತೆಯೇ ಜೋರಾಗಿ ಇನ್ನೇನು ಹೊಯ್‌ಕೈ ಆಗಬೇಕೆನ್ನುವಾಗ ಯಾರೋ ಒಬ್ಬ ಸತ್ತು ಮಲಗಿದ್ದ ಆ ಹೆಣ್ಣುಜೀವದ ಗಂಡನೆಂಬ ತೆಳ್ಳನೆಯ ಪ್ರಾಣಿಯನ್ನು ಎಳೆದುಕೊಂಡು ಬಂದ.
ರಾತ್ರಿಯಿಡೀ ಗಡಂಗಿನ ಹೊರಗೆ ಬರಿಮೈಯಲ್ಲಿ ಮಲಗಿದ್ದ ಆ ಗಂಡ ಎಳೆದೊಯ್ದು ಬಂದ ರಭಸಕ್ಕೆ ಮತ್ತಿನಿಂದ ಪೂರ್ತಿ ಎಚ್ಚರವಾಗಿದ್ದ. ಹೆಗಲ ಮೇಲಿದ್ದ ಸಣ್ಣ ಬೈರಾಸಿನಿಂದ ಕಣ್ಣೀರು ಒರೆಸಿಕೊಳ್ಳುತ್ತಾ ಹೇಳಿದ. ‘ರಾತ್ರಿ ಕಂಠಪೂರ್ತಿ ಕುಡಿದು ಹೆಂಡತಿಯನ್ನು ಬಾಸುಂಡೆ ಬರುವಂತೆ ಬಡಿದೆ. ಎಷ್ಟು ಹೊಡೆದರೂ ಅವಳು ಹಣ ಕೊಡಲಿಲ್ಲ. ಸಿಟ್ಟಿನಿಂದ ಕೂಗಾಡಿ ಜೀವ ಕಳೆದುಕೊಳ್ಳುತ್ತೇನೆಂದು ಚೀರುತ್ತಾ ಮನೆಯಿಂದ ಓಡಿ ಹೋದಳು. ನಾನು ಮತ್ತೆ ಗಡಂಗಿನ ಕಡೆಗೆ ತೆರಳಿದೆ.. ಬೆಳಿಗ್ಗೆ ಯಾರೋ ಬಂದು ಎಬ್ಬಿಸಿದಾಗಲೇ ವಿಷಯ ಗೊತ್ತಾದದ್ದು.. ’ ಎಂದಾತ ಕೈಮುಗಿದು ನಿಂತಿದ್ದ. ಅವತ್ತು ಎರಡೂ ಊರಿನವರಿಗೆ ಮುಸ್ಲಿಯಾರರ ಮೇಲಿನ ನಂಬಿಕೆ ಇಮ್ಮಡಿಯಾಗಿತ್ತು. ಆದರೆ ಅಬ್ದುಲ್ಲಾ ಹಾಜಿ ಮಾತ್ರ ‘ಈ ಮುಸ್ಲಿಯಾರ್ ನಮ್ಮ ಮಸೀದಿಗೆ ಬೇಡ. ನಾಳೆ ಪೊಲೀಸರು ಮಸೀದಿಗೆ ಬಂದು ತನಿಖೆಯ ಹೆಸರಲ್ಲಿ ಕಿರುಕುಳ ಕೊಡುತ್ತಾರೆ. ಅವರ ಸಂಬಳದ ಲೆಕ್ಕಾ ಚುಕ್ತಾ ಮಾಡಿ ಕಳಿಸಿಬಿಡೋಣ..’ ಎಂದು ಹಠ ಹಿಡಿದು ಕೂತಿದ್ದು ಊರವರಿಗೆ ಸರಿಯೆನ್ನಿಸಲಿಲ್ಲ. ಜಮಾತಿನ ಸದಸ್ಯರು ಪ್ರೆಸಿಡೆಂಟರ ಒತ್ತಡಕ್ಕೆ ಮಣಿದಿರಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಅಬ್ಬುಲ್ಲಾ ಹಾಜಿ ಗೊಣಗುತ್ತಾ ತನ್ನ ಒತ್ತಾಯದಿಂದ ಹಿಂದೆ ಸರಿದು, ಪೊಲೀಸ್ ಠಾಣೆಗೆ ತಾನೇ ಹೋಗಿ ಅಧಿಕಾರಿಗಳ ಜೊತೆಗೆ ಮಾತನಾಡಿ ಕೇಸು ಗೀಸು ಆಗದಂತೆ ತಡೆದಾಗಿತ್ತು.
ಈಗ ಬಡ್ಡಿಯ ಹಣದ ಚರ್ಚೆ ತಾರಕಕ್ಕೇರಿದಂತೆಯೇ ಅಬ್ದುಲ್ಲಾ ಹಾಜಿ ಹಳೆಯ ಪ್ರಕರಣಕ್ಕೆ ಜೀವ ಕೊಡಲು ಹೊರಟಿದ್ದು ಹಲವರಲ್ಲಿ ಕಸಿವಿಸಿ ಉಂಟುಮಾಡಿತು. ಮುಸ್ಲಿಯಾರರನ್ನು ಮಸೀದಿಯಿಂದ ಹೊರಗೆ ಅಟ್ಟಲೇಬೇಕೆಂದು ಹಾಜಿ ನಿರ್ಧರಿಸಿದಂತಿತ್ತು. ‘ಮುಸ್ಲಿಯಾರರೇ ಇಲ್ಲಿ ಕೇಳಿ. ಷರೀಯತ್ತು ನಿಮಗೆ ಮಾತ್ರ ಗೊತ್ತಿರುವುದಲ್ಲ. ಬಡ್ಡಿಯ ಹಣವನ್ನು ಬೆಂಕಿಗೆ ಹಾಕುವುದೋ, ಸಮುದ್ರದಲ್ಲಿ ವಿಸರ್ಜಿಸುವುದೋ ಸಾಧ್ಯವಿಲ್ಲದಿದ್ದರೆ ಇನ್ನೊಂದು ದಾರಿಯಿದೆ. ಆ ಹಣದಿಂದ ಸಾರ್ವಜನಿಕ ಪಾಯಿಖಾನೆ ಕಟ್ಟಿಸಬಹುದು. ಕಳೆದ ವಾರ ಮಂಗಳೂರಿನ ದೊಡ್ಡ ಮಸೀದಿಯಲ್ಲಿ ಖಾಜಿಯವರ ಉಪನ್ಯಾಸದಲ್ಲಿ ಅದನ್ನೇ ಹೇಳಿದ್ದಾರೆ. ಹೇಗೂ ಉರ್ದು ಶಾಲೆಯಲ್ಲಿ ಪಾಯಿಖಾನೆ ಇಲ್ಲ. ಮಕ್ಕಳು ಅಕ್ಕಪಕ್ಕದ ಮನೆಗಳಿಗೆ ಹೋಗಿ ಬೇಡುತ್ತಾರೆ. ಅದಕ್ಕೊಂದು ಪರಿಹಾರವೂ ಆಯಿತು. ಈಗಲೇ ಖಾಜಿಗಳಿಗೊಂದು ಫೋನ್ ಮಾಡಿ, ಅವರೇನು ಹೇಳುತ್ತಾರೋ ಅದರಂತೆ ಮಾಡುವ..’– ಅಬ್ದುಲ್ಲಾ ಹಾಜಿಯ ಧ್ವನಿ ತಾರಕಕ್ಕೆ ಏರಿತ್ತು.
ಮುಸ್ಲಿಯಾರರು ಇಕ್ಕಟ್ಟಿಗೆ ಸಿಲುಕಿದರು. ಬಡ್ಡಿಯ ಕುರಿತ ಈ ಫಿಕ್ಹ್ ವಿಧಿಯನ್ನು ಅವರೂ ಓದಿಕೊಂಡಿದ್ದವರೇ. ಅಬ್ದುಲ್ಲಾ ಹಾಜಿಯ ಹಣ ಮಾಡುವ ದಂಧೆಯ ಕುರಿತೂ ಅವರಿಗೆ ಮಾಹಿತಿಗಳಿದ್ದವು. ಆದರೆ ಅದನ್ನು ಊರವರ ಎದುರು ಸಾಕ್ಷಿಯಿಲ್ಲದೆ ಹೇಳಿದರೆ ಜನ ನಂಬಬೇಕಲ್ಲ? ‘ಉರ್ದು ಶಾಲೆಗೆ ಶೌಚಾಲಯ ಬೇಕಿದ್ದರೆ ಶಿಕ್ಷಣ ಇಲಾಖೆಗೆ ನಾವೇ ಅರ್ಜಿ ಸಲ್ಲಿಸುವ. ಈಗ ಜಮಾತಿಗೆ ಬರುವ ಬಡ್ಡಿ ಹಣವನ್ನು ಖುದ್ದಾಗಿ ತರಿಸಿಕೊಂಡು ಬೆಂಕಿಗೆ ಹಾಕುವುದೊಂದೇ ದಾರಿ. ಅದರ ಹೊರತಾಗಿ ಬೇರೆ ಯಾವುದಕ್ಕೂ ನಾನು ಒಪ್ಪುವುದಿಲ್ಲ’ ಎಂದಂದು ಉದ್ವೇಗದಿಂದ ಎದ್ದು ನಿಂತ ಮುಸ್ಲಿಯಾರ್, ಪಂಚೆಯನ್ನು ಸೊಂಟಕ್ಕೆ ಬಲವಾಗಿ ಕಟ್ಟಿಕೊಂಡರು.
‘ಯಾವುದೋ ಊರಿಂದ ಹಿಂದುಮುಂದಿಲ್ಲದೆ ಓಡಿಬಂದು ಮಸೀದಿಯಲ್ಲಿ ನೌಕರಿಗೆ ಸೇರಿಕೊಂಡ ನಿಮಗೇ ಮುಂಡಾಸಿನ ಅಹಂಕಾರ ಇಷ್ಟಿದೆಯೆಂದರೆ…, ಅದ್ಯಾವ ಗಂಡಸು ಬ್ಯಾಂಕಿಗೆ ಹೋಗಿ ಹಣ ತಂದು ಇಲ್ಲಿ ಮಸೀದಿಯ ಮುಂದೆ ಸುಟ್ಟು ಬಿಡುತ್ತಾನೋ ನಾನೂ ನೋಡ್ತೀನಿ. ಪೊಲೀಸ್ ಕಂಪ್ಲೇಂಟ್ ಕೊಟ್ಟು ಒದ್ದು ಒಳಗೆ ಹಾಕಿಸ್ತೀನಿ. ಅವತ್ತು ಹುಣಸೇ ಮರಕ್ಕೆ ನೇಣು ಹಾಕಿಕೊಂಡ ಆ ಕಾಫಿರ ಹೆಣ್ಣಿಗೂ ಈ ಮುಸ್ಲಿಯಾರಿಗೂ ಏನು ಸಂಬಂಧವಿತ್ತು ಎನ್ನುವುದೂ ನನಗೆ ಗೊತ್ತಿದೆ. ಎಲ್ಲವನ್ನೂ ಬಯಲು ಮಾಡ್ತೀನಿ. ಸೂಸೈಡ್ ಕೇಸಿನ ಫೈಲು ರಿಓಪನ್ ಮಾಡಿಸ್ತೀನಿ. ಈ ಮುಸ್ಲಿಯಾರ್ ಮುಂಡಾಸು ಬಿಚ್ಚಿ ಮಸೀದಿಯಲ್ಲಿ ಇಟ್ಟು ಊರು ಬಿಡುವಂತೆ ಮಾಡದಿದ್ದರೆ ನಾನು ತಲ್ವಾರ್ ಖಾದರ್ ಹಾಜಿಯ ಮಗನೇ ಅಲ್ಲ…’ ಎನ್ನುತ್ತಾ ಅಬ್ದುಲ್ಲಾ ಹಾಜಿಯೂ ಎದ್ದು ಶರ್ಟಿನ ತೋಳನ್ನು ಮಡಚತೊಡಗಿದ.
****
ಮುಂಬೈಯ ಅಂಧೇರಿಯಿಂದ ಜುಹೂಗೆ ಹೋಗುವ ದಾರಿಯಲ್ಲಿ ತಲೆಯೆತ್ತಿ ನಿಂತಿದ್ದ 40 ಮಹಡಿಗಳ ಹಳೆಯ ಕಟ್ಟಡವದು. 30ನೇ ಮಹಡಿಯ ಬಲಪಾರ್ಶ್ವದ 610 ನಂಬರಿನ ಮನೆಯ ಬಾಲ್ಕನಿಯಲ್ಲಿ ಕುಳಿತು ಅಬ್ದುಲ್ ಖಾದರ್ ಮುಸ್ಲಿಯಾರ್ ಶುಭ್ರ ಆಕಾಶದಲ್ಲಿ ಮಿನುಗುತ್ತಿದ್ದ ನಕ್ಷತ್ರಗಳನ್ನು ತದೇಕಚಿತ್ತರಾಗಿ ನೋಡುತ್ತಿದ್ದರು. ಅಬೂಬಕರ್ ಸಿದ್ದೀಕ್ ಅಪ್ಪನ ಮುಖವನ್ನೇ ದಿಟ್ಟಿಸುತ್ತಾ ಕುಳಿತಿದ್ದ.
‘ಅಬ್ಬಾ.. ನೀವು ಸತ್ಯದ ಪರವಾಗಿ ಗಟ್ಟಿಯಾಗಿ ನಿಲ್ಲಲು ಯಾವತ್ತೂ ಹೆದರಿದವರಲ್ಲ. ಅವತ್ತು ಮಸೀದಿಯ ಮೀಟಿಂಗಿನಲ್ಲಿ ಅಬ್ದುಲ್ಲಾ ಹಾಜಿ ಅಷ್ಟೊಂದು ಸೊಕ್ಕಿನಿಂದ ಮಾತನಾಡಿದಾಗ ನೀವು ಏನನ್ನೂ ಹೇಳದೆ ಹಠಾತ್ತಾಗಿ ಎದ್ದುಬಂದು ಮನೆ ಸೇರಿದ್ದೇಕೆ? ನೀವು ಹಾಗೆ ಬಿಟ್ಟುಕೊಡುವವರಲ್ಲವಲ್ಲ…?’
‘ಯಾಕೋ ಯಾವುದೂ ಬೇಡವೆನ್ನಿಸಿತು ಮೋನೇ. ಯಾವ ಜಗಳಕ್ಕೂ ಇಲ್ಲಿ ಅರ್ಥವಿಲ್ಲ. ಅಮ್ಮನ ಗರ್ಭದೊಳಗಿಂದ ಈ ಬಾಡಿಗೆಯ ಭೂಮಿಗೆ ವಲಸೆ ಬರುವವರು ನಾವು. ಸತ್ತ ಬಳಿಕ ಇಲ್ಲಿಂದ ಭೂಗರ್ಭದೊಳಕ್ಕೆ ಮತ್ತೆ ವಲಸೆ. ಈ ಮಹಾವಲಸೆಯ ನಡುವೆ ಊರಿಂದ ಊರಿಗೆ ಎಷ್ಟೊಂದು ವಲಸೆಗಳು! ಅಲ್ಲಿ ದೂರದಲ್ಲಿ ಕಾಣಿಸುತ್ತಿರುವ ಜುಹೂ ಏರ್‌ಪೋರ್ಟ್‌ನಲ್ಲಿ ಇಡೀ ರಾತ್ರಿ ಎಷ್ಟೊಂದು ವಿಮಾನಗಳು ಯಾವಯಾವುದೋ ದೇಶಗಳಿಂದ ವಲಸಿಗರನ್ನು ತಂದು ಇಳಿಸುತ್ತಿವೆ ನೋಡು! ಇವರಲ್ಲಿ ಎಷ್ಟು ಮಂದಿ ಕೆಲಸಕ್ಕಿದ್ದ ದೇಶವನ್ನು ತೊರೆದು ಬಂದವರೋ? ಎಷ್ಟು ಮಂದಿ ಹುಟ್ಟಿದ ದೇಶವನ್ನೇ ಬಿಟ್ಟು ವಲಸೆ ಹೋಗುವವರೋ..!’
‘ಅಬ್ಬಾ… ಮಾತು ಮರೆಸಬೇಡಿ. ಸತ್ಯ ಹೇಳಿ. ನೀವ್ಯಾಕೆ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಲು ಆ ಬಡ್ಡಿಯ ಹಣ ಕೊಡಲು ಒಪ್ಪಲಿಲ್ಲ? ಫಿಕ್ಹ್ ನಿಮಗೂ ಗೊತ್ತಿತ್ತಲ್ವಾ?’
‘ಅಬ್ದುಲ್ಲಾ ಹಾಜಿ ಪರಮನೀಚ. ಕಳೆದ ವರ್ಷ ಉರ್ದು ಶಾಲೆಯಲ್ಲಿ ಪಾಯಿಖಾನೆ ಕಟ್ಟಿಸಲೆಂದು 50,000 ರೂಪಾಯಿ ಸರ್ಕಾರದ ಅನುದಾನ ಪಡೆದು ನುಂಗಿ ಹಾಕಿದ್ದ. ಅದು ಜಿಲ್ಲಾ ಪಂಚಾಯ್ತಿಯಿಂದ ಎನ್‌ಕ್ವೈರಿಗೆ ಬಂದಿತ್ತು. ಎರಡು ವಾರದ ಹಿಂದೆ ನನ್ನ ಬಳಿ ಬಂದು ಇದನ್ನೆಲ್ಲ ಹೇಳಿ ಕಣ್ಣೀರು ಸುರಿಸಿ ದುವಾ ಮಾಡಲು ಬೇಡಿಕೊಂಡಿದ್ದ. ಈಗ ಮಸೀದಿಯ ಬಡ್ಡಿಯ ಹಣ ಸಿಕ್ಕಿದರೆ ಅದರಲ್ಲೇ ಪಾಯಿಖಾನೆ ಕಟ್ಟಿ ಸರಕಾರಕ್ಕೆ ಲೆಕ್ಕ ತೋರಿಸುವುದು ಅವನ ದುರುದ್ದೇಶವಾಗಿತ್ತು.’
‘ಅದನ್ಯಾಕೆ ನೀವು ಎಲ್ಲರೆದುರು ಹೇಳಲಿಲ್ಲ? ಅವನ ಸೊಕ್ಕು ಇಳಿಸಬಹುದಾಗಿತ್ತಲ್ಲ?’
‘ನನ್ನಲ್ಲಿ ಸಾಕ್ಷಿ ಇರಲಿಲ್ಲ ಮೋನೇ..? ಹಾಗೆಯೇ ಹೇಳಿದರೆ ಜನ ನಂಬುತ್ತಿದ್ದರಾ? ಜಮಾತಿನಲ್ಲಿ ಬಹುತೇಕ ಎಲ್ಲರೂ ಬ್ಯಾಂಕ್ ಬಡ್ಡಿಯ ವ್ಯವಹಾರ ಮಾಡುವವರೇ. ನಾನು ಇದನ್ನೆಲ್ಲ ಹೆಚ್ಚು ಮಾತನಾಡಿದರೆ ಅವರಿಗೆ ರುಚಿಸುವುದೂ ಇಲ್ಲ..’
‘ಅದ್ಸರಿ. ಅವತ್ತು ನೇಣು ಹಾಕಿಕೊಂಡ ಮಹಿಳೆ ಯಾರು? ಅಬ್ದುಲ್ಲಾ ಹಾಜಿಗೆ ಆ ವಿಷಯದಲ್ಲಾದರೂ ಎದುರುತ್ತರ ಕೊಡಬೇಕಿತ್ತಲ್ವಾ?’
‘ಮೋನೇ… ಕೆಲವು ದಾರುಣ ದುಃಖಗಳನ್ನು ಎದೆಯೊಳಕ್ಕೆ ಎಷ್ಟು ಒತ್ತಿ ಹಿಡಿದರೂ ಒಂದಲ್ಲ ಒಂದು ದಿನ ಅವು ಆಕಾಶಕ್ಕೆ ಚಿಮ್ಮುವುದನ್ನು ತಡೆಯಲಾಗದು….’ ದೀರ್ಘ ನಿಟ್ಟುಸಿರು ಬಿಡುತ್ತಾ ಮುಸ್ಲಿಯಾರ್ ನೆನಪಿನ ಲೋಕವೊಂದಕ್ಕೆ ಜಾರಿದರು. ‘ನಾನು ಅವತ್ತು ಬೆಳಿಗ್ಗೆ ನಸುಬೆಳಕಿನಲ್ಲಿ ಬಿರುಸಾಗಿ ನಡೆಯುತ್ತಿದ್ದೆ. ಸಣ್ಣದಾಗಿ ಮಂಜು. ಹಠಾತ್ತಾಗಿ ಹುಣಸೆ ಮರದಲ್ಲಿ ನೇತಾಡುತ್ತಿದ್ದ ದೇಹ ಕಾಣಿಸಿತು. ಒಮ್ಮೆಲೆ ಅಲ್ಲಿ ನನಗೆ ನನ್ನ ಹೆತ್ತು ಹೊತ್ತು ಬೆಳೆಸಿದ ಉಮ್ಮಾ ಕಾಣಿಸಿದಳು. 30 ವರ್ಷಗಳ ಹಿಂದೆ ಅವತ್ತೊಂದು ದಿನ… ನನ್ನ ಉಮ್ಮಾ ಹೀಗೆಯೇ ನಡುರಾತ್ರಿ ಮನೆಯ ಜಂತಿಗೆ ಸೀರೆ ಕಟ್ಟಿ ನೇಣು ಬಿಗಿದುಕೊಂಡಿದ್ದಳು. ಇನ್ನೊಂದು ಕೋಣೆಯಲ್ಲಿ ಮಲಗಿದ್ದ ನಫೀಸಾಗೆ ಎಚ್ಚರವಾಗದ ನಿದ್ರೆ. ನಾನು ಪರವೂರಿಗೆ ವ್ಯಾಪಾರಕ್ಕೆಂದು ಹೋದವನು ಬೆಳಿಗ್ಗೆಯ ಜಾವ ರೈಲು ಇಳಿದು ಮನೆಯ ಬಳಿ ಬಂದಾಗ ಎದುರಿನ ಬಾಗಿಲು ಸ್ವಲ್ಪ ತೆರೆದಿತ್ತು. ಅವತ್ತೂ ಹಾಗೆಯೇ ಕತ್ತಲು.. ಸಣ್ಣಗೆ ಮಂಜು ಆವರಿಸಿತ್ತು. ಬಾಗಿಲನ್ನು ತಳ್ಳಿ ಮನೆಯೊಳಕ್ಕೆ ಹೋದರೆ ನನ್ನ ಉಮ್ಮಾ ನೇತಾಡುತ್ತಿದ್ದಳು… ಗಂಡನ ಜೊತೆ ಸಂಸಾರ ನಡೆಸಿದ್ದು ಎರಡೇ ವರ್ಷ. ಇದ್ದ ಒಬ್ಬನೇ ಮಗನಿಗಾಗಿ ಜೀವ ಸವೆಸಿದಳು. ಗಂಡ ತೀರಿಕೊಂಡು ವರ್ಷಗಳಾದ ಬಳಿಕ ಶುರುವಾದದ್ದು ಅಸಾಧ್ಯ ಹೊಟ್ಟೆನೋವು. ಅವಳಿಗೆ ಯಾವ ಔಷಧಿಯೂ ನಾಟುತ್ತಿರಲಿಲ್ಲ. ಕೆಲವೊಮ್ಮೆ ರಾತ್ರಿಯಿಡೀ ನರಳುತ್ತಿದ್ದಳು. ಅವತ್ತು ಸಹಿಸಲಾಗದೆ ನಿರ್ಧಾರ ಮಾಡಿಬಿಟ್ಟಿದ್ದಳು. ಆ ಹುಣಸೇ ಮರದಲ್ಲಿ ನೇತಾಡುತ್ತಿದ್ದ ದೇಹವನ್ನು ನನ್ನ ಅಮ್ಮನದ್ದೆಂದೇ ಭಾವಿಸಿ ನಾನು ದಿಗ್ಭ್ರಾಂತನಾಗಿದ್ದೆ. ಬಹಳ ಹೊತ್ತು ನಾನು ಈ ಲೋಕದಲ್ಲೇ ಇರಲಿಲ್ಲ…’ ದೀರ್ಘ ನಿಟ್ಟುಸಿರು ಬಿಟ್ಟು ಆಕಾಶ ನೋಡಿದರು ಮುಸ್ಲಿಯಾರ್.
ಸಿದ್ದೀಕ್ ಎರಡೂ ಹಸ್ತಗಳಲ್ಲಿ ತನ್ನ ಕಣ್ಣುಗಳನ್ನು ಉಜ್ಜಿ ಕೆನ್ನೆಯ ಮೇಲೆ ಹಸ್ತಗಳನ್ನು ನೀವುತ್ತಾ ಕೆಳಗಿಳಿಸಿ ಅಪ್ಪನನ್ನು ನೋಡಿ ದೀರ್ಘ ಉಸಿರೆಳೆದ. ‘ಅಬ್ಬಾ… ಉಮ್ಮನ ಬಗ್ಗೆ ಅಜ್ಜಿಗೆ ಅಸಹನೆ ಇತ್ತಾ? ಅವರಿಬ್ಬರಿಗೂ ಜಗಳವಾಗುತ್ತಿತ್ತಾ?’
‘ಹೌದು ಮೋನೇ. ನಿನ್ನ ಉಮ್ಮ, ನನ್ನ ನಫೀಸಾ ಕೂಡಾ ವಲಸೆ ಬಂದವಳೇ.. ಆ ಧರ್ಮದಿಂದ..’
ದೂರದ ಏರ್‌ಪೋರ್ಟಿನ ಆಕಾಶದಲ್ಲಿ ಮತ್ತೊಂದು ವಿಮಾನ ಹೊಟ್ಟೆಯ ತಳಭಾಗದಲ್ಲಿ ಬೆಳಕು ಮಿನುಗಿಸುತ್ತಾ ನಿಧಾನಕ್ಕೆ ಕೆಳಗಿಳಿಯತೊಡಗಿತ್ತು.
******