Site icon Vistara News

ವಿಸ್ತಾರ ಯುಗಾದಿ ಕಥಾಸ್ಪರ್ಧೆ: ಮೆಚ್ಚುಗೆ ಬಹುಮಾನ ಪಡೆದ ಕಥೆ: ಪಿಂಕ್ ಟ್ರಂಪೆಟ್

kannada short story pink trumpet

:: ಚೈತ್ರಿಕಾ ಹೆಗಡೆ

ಶರಾವತಿ ಸಂಜೆಯಾಗುವುದನ್ನೇ ಕಾಯುತ್ತಿದ್ದಳು. ಊರಿನಂತೆ ಬೆಂಗಳೂರಿನಲ್ಲಿ ನಿಧಾನಕ್ಕೆ ಸಂಜೆಯಾಗುವುದಿಲ್ಲ. ಊರಲ್ಲಿದ್ದರೆ ಮೂರು ಗಂಟೆಗೆ ಚಹಾ ಕುಡಿದು, ತಲೆ ಬಾಚಿ, ಒಂದೆರಡು ಗಿದ್ನ ಅಡಕೆ ಸುಲಿದು, ಕೊಟ್ಟಿಗೆಗೆ ಹೋಗಿ ಹಾಲು ಕರೆದು, ಓರಿ ಬಾಗಿಲಿನಿಂದ ಒಳಗೆ ಬರುವಾಗ ಬೆಳಕು ಫೇರಿ ಕೀಳುತ್ತಿರುತ್ತದೆ. ಆದರೆ ಬೆಂಗಳೂರಿನಲ್ಲಿ ಮಧ್ಯಾಹ್ನದ ಮೇಲೆ ಮಲಗಿ, ಎದ್ದು, ನೀರಿಗೆ ಬಿದ್ದ ಚಹಾಪುಡಿ ಬಣ್ಣ ಬಿಡುವಷ್ಟರಲ್ಲಿ ಆಕಾಶದಲ್ಲೂ ಕೆಂಬಣ್ಣ! ಮಜಾ ಎಂದರೆ ಇವತ್ತು ಮಾತ್ರ ಶರಾವತಿಗೆ ಸಂಜೆ ಬೇಗ ಆಗುತ್ತಲೇ ಇಲ್ಲ ಅನಿಸುತ್ತಿತ್ತು. ನಾಲ್ಕುವರೆಗೇ ಚಹಾ ಕುಡಿದು, ಲೆಗ್ಗಿನ್ನು ಕುರ್ತಾ ಹಾಕಿ, ಜಡೆ ಕಟ್ಟಿಕೊಂಡು, ಸೇವಂತಿಗೆ ಎಸಳುಗಳ ಚಿಕ್ಕ ಮಾಲೆಯನ್ನು ಸಿಕ್ಕಿಸಿಕೊಂಡು, ವಾಕಿಂಗ್ ಶೂಗಳನ್ನು ತೊಟ್ಟು ರಸ್ತೆಗಿಳಿಯುವಾಗ ಇನ್ನೂ ಐದಕ್ಕೆ ಐದು ನಿಮಿಷ ಇತ್ತು! ಎಷ್ಟೊತ್ತಿಗೆ ರತ್ನಾಕರನನ್ನು ನೋಡುತ್ತೇನೋ ಎಂದು ಹಪಹಪಿಸುತ್ತ ಪಕ್ಕದ ಬೀದಿ ಕಡೆ ಹೆಜ್ಜೆ ಹಾಕಿದರೆ ಅವಳ ಸ್ವಾಗತಕ್ಕೆ ರತ್ನಾಕರನೇ ಹೂಗಳನ್ನು ಹಾಸಿ ಕಾಯುತ್ತಿರುವನೇನೋ ಎಂಬಂತೆ ಅವನ ಮನೆಯ ಬೀದಿಯ ತುಂಬ ತಿಳಿ ಗುಲಾಬಿ ಬಣ್ಣದ ಟ್ರಂಪೆಟ್ ಹೂಗಳು ಉದುರಿಬಿದ್ದಿದ್ದವು. ಹೂಗಳ ಮೇಲೆ ಹೆಜ್ಜೆ ಇಡದಂತೆ ನಿಗಾ ವಹಿಸುತ್ತ ‘ಗಾಯತ್ರಿ’ ಎಂಬ ಮನೆಯ ಬಳಿ ಬರುವಾಗ ಹೊಟ್ಟೆಯೊಳಗೆಲ್ಲ ವಿಚಿತ್ರ ಸಂಕಟ! ರತ್ನಾಕರ ಇವತ್ತಾದರೂ ಕಾದಂಬರಿಯನ್ನು ತೆರೆದು ನೋಡಿರಬಹುದೇ? ಎಂಬ ಹುಚ್ಚು ಕಾತರ. ಆದರೆ ರತ್ನಾಕರ ಅವನ ಮನೆಯ ಬಳಿ ಕಾಣಿಸದೇ ಹೋಗಿದ್ದರಿಂದ ಒಂದೋ ಮುಂದೆ ಹೋಗಿರಬಹುದು ಇಲ್ಲ ತಡವಾಗಿ ಬರಬಹುದೆಂದು ದೇವಸ್ಥಾನದ ಕಡೆ ತುಸು ನಿರಾಸೆಯಲ್ಲೇ ಹೊರಟಳು ಶರವಾವತಿ.

ಹೋದ ವರ್ಷ ಪುಟ್ಟುವಿಗೆ ಕೆಲಸ ಸಿಕ್ಕು ಆತ ರಾಜರಾಜೇಶ್ವರಿ ನಗರದಲ್ಲಿ ಬಾಡಿಗೆ ಮನೆ ಮಾಡಿದ್ದಾಗ ಒಂದಷ್ಟು ದಿನಕ್ಕೆಂದು ಬಂದ ಶರಾವತಿ ಪುಟ್ಟುವಿನ ಹಠಕ್ಕೆ ಜೂನ್ವರೆಗೂ ಉಳಿದಿದ್ದಳು. ಆಗ ಪರಿಚಯವಾದವನು ರತ್ನಾಕರ. ಸ್ವಲ್ಪ ದಪ್ಪಗೆ, ಎಣ್ಣಗಪ್ಪಿನ ಐವತ್ತರ ಹರೆಯದ ರತ್ನಾಕರ ಇಂಥದ್ದೇ ಸಂಜೆಯಲಿ ಶರವಾತಿ ಪಕ್ಕದ ಬೀದಿಯ ಮಾಲಾ ಮತ್ತು ಸುಜಾತಾ ಜೊತೆ ವಾಕಿಂಗು ಮಾಡುತ್ತಿದ್ದಾಗ ಸಿಕ್ಕವನು. ಅವಳ ಹೆಸರು, ಊರು ಕೇಳಿ ‘ನಿಮ್ ಊರಿನ ಹತ್ತಿರ ಇರೋದು ಅಘನಾಶಿನಿ ನದಿ ಅಲ್ವಾ ಮತ್ಯಾಕೆ ಶರಾವತಿ ಅಂತ ಹೆಸರು ನಿಮ್ಗೆ?’ ಎಂದು ಪಕಪಕನೇ ನಕ್ಕವನು. ‘ಹುಟ್ಟಿದ್ದು ಶರಾವತಿ ನದಿ ಅಂಚಿನ ಹೊನ್ನಾವರದಲ್ಲಿ, ಅಲ್ಲಿಂದ ಹರ್ದು ಬಂದಿದ್ದು ಅಘನಾಶಿನಿ ಅಂಚಿನ ಬಾಳೆಹಳ್ಳಿಗೆ’ ಎನ್ನುತ್ತ ಇವಳೂ ನಕ್ಕಿದ್ದಳು. ಒಮ್ಮೊಮ್ಮೆ ತೀರ ಅಪರಿಚಿತರೊಬ್ಬರು ಏಕ್ದಮ್ ಆಪ್ತರು ಅನಿಸುವುದಕ್ಕೆ ಯಾವ ಜಾದೂ ಆಗುವುದೂ ಬೇಕಾಗುವುದಿಲ್ಲ! ಏನೂ ಕಾರಣವೇ ಇಲ್ಲದೆ ಹತ್ತಿರವಾಗಿಬಿಡುತ್ತಾರೆ.

ಶರಾವತಿಗೂ ರತ್ನಾಕರ ಹತ್ತಿರವಾಗಿದ್ದು ಹೀಗೆಯೇ. ಅವತ್ತಿನಿಂದ ಅವರಿಬ್ಬರೂ ಜೊತೆಗೇ ವಾಕಿಂಗ್ ಹೋಗುವುದು ಖಾಯಮ್ ಆಯಿತು! ಮಾಲಾ, ಸುಜಾತ, ಫಸ್ಟ್ ಕ್ರಾಸಿನ ಬಾಬು ಇವರೆಲ್ಲ ಬರಲಿ ಬಿಡಲಿ ಶರವಾತಿ ಬರುವುದು ಕಾಣಿಸಿದರೆ ರತ್ನಾಕರ ಅವಳ ಜೊತೆಯೇ ನಡೆಯುತ್ತಿದ್ದ. ಅಲ್ಲಿಂದ ಪಕ್ಕದ ಬೀದಿಗೆ ಹೋಗಿ ಬಲಕ್ಕೆ ತಿರುಗಿದರೆ ದೇವಸ್ಥಾನವೊಂದಿತ್ತು, ಅಲ್ಲೊಂದಷ್ಟು ಹೊತ್ತು ಕೂತು ಮರಳುವುದು ರೂಢಿ. ಒಮ್ಮೊಮ್ಮೆ ಮೇಯ್ನ್ ರೋಡಿಗೆ ಹೋಗಿ ನರ್ಸರಿ ಹೊಕ್ಕು ಗಿಡಗಳನ್ನು ಚೌಕಾಶಿ ಮಾಡಿ ಮಾಡಿ ರತ್ನಾಕರ ಕೊಳ್ಳುತ್ತಿದ್ದ. ಆಗೆಲ್ಲ ಶರಾವತಿಗೆ ‘ನಮ್ಮನೆಗೆ ಬನ್ನಿ ಚಂದ್ ಚಂದದ ಹೂವಿನ್ ಗಿಡ ಕೊಡ್ತೇನೆ, ಒಂದ್ ರೂಪಾಯೂ ಬೇಡ ಮತ್ತೆ’ ಎಂದು ಹೇಳಬೇಕೆನಿಸುತ್ತಿತ್ತು. ಆದರೆ ಅವನು ಕೊಳ್ಳುತ್ತಿದ್ದ ಕಳ್ಳಿ ಗಿಡಗಳನ್ನೆಲ್ಲ ಅವಳು ಅದೇ ಮೊದಲು ನೋಡಿದ್ದಾಗಿತ್ತು. ‘ಇದಕ್ಕೆ ಅಷ್ಟು ದುಡ್ ಕೊಟ್ರ? ಹೂವೂ ಬಿಡೂದಿಲ್ಲ’ ಎಂದಾಗ, ‘ಕ್ಯಾಕ್ಟಸ್ ನಂಗಿಷ್ಟ’ ಎಂದಿದ್ದ . ‘ನಾನಂತೂ ಹೂವಿನ ಮಳ್ಳು’ ಎಂದಿದ್ದಳು ಇವಳು. ‘ಬೆಂಗಳೂರಿನ ಮನೇಲಿ ಹೊತ್ತೇ ಹೋಗಲ್ಲ’ ಅಂದವಳಿಗೆ ‘ನಂಗೆ ಚಪಾತಿ ಮಾಡಿಕೊಡಿ ನನ್ನ ಹೆಂಡತಿಗೂ ಕೆಲಸ ಕಡಿಮೆಯಾಗತ್ತೆ, ಫ್ರೀಯಾಗೆನೂ ಬೇಡ, ಮತ್ತೆ ನೀವು ಇಲ್ಲಿ ಇರೋಷ್ಟು ದಿನ ಸಾಕು’ ಎಂದಿದ್ದ. ಪುಟ್ಟುವಿಗಿದು ಇಷ್ಟವಿಲ್ಲ ಎಂದು ಗೊತ್ತಿದ್ದರೂ ಶರಾವತಿ ಒಪ್ಪಿದ್ದಳು. ಅವತ್ತಿನಿಂದ ದಿನ ಆರು ಚಪಾತಿ, ಒಂದು ಬಗೆಯ ಪಲ್ಯ, ಜೊತೆಗೆ ಮೊಳಕೆ ಕಾಳು ತಯಾರಿಸಿ ರತ್ನಾಕರನ ಮನೆಗೆ ಕೊಟ್ಟು ಬರುತ್ತಿದ್ದಳು. ಆಗಲೇ ಗಾಯತ್ರಿಯ ಪರಿಚಯವಾಗಿತ್ತು. ಮನೆಯ ಗೋಡೆಗೆ ಅಂಟಿಕೊಂಡಿದ್ದ ಗಾಯತ್ರಿಯ ಮಂಡಲ ಚಿತ್ರಗಳು ಆಕರ್ಷಕ ಎನಿಸಿದ್ದವು. ರತ್ನಾಕರ ಬಿಡಿಸಿದ್ದ ಡೂಡಲ್ ಆರ್ಟ್ ಶರಾವತಿಗೆ ಅರ್ಥವೇ ಆಗಿರಲಿಲ್ಲ, ಅವನ ಪುಸ್ತಕಗಳ ಶೆಲ್ಫ್ ನೋಡಿ ಕಣ್ಣರಳಿಸಿದ್ದಳು. ‘ನಿಮಗ್ಯಾವ ಪುಸ್ತಕ ಬೇಕಾದ್ರೂ ತಗೊಂಡೋಗಿ, ತುಂಬ ಜನ ತಗೊಂಡೋಗ್ತಾರೆ ನಮ್ಮನೆಯಿಂದ’ ಎಂದಿದ್ದಕ್ಕೆ ಒಂದು ಕಾದಂಬರಿಯನ್ನು ತಗೊಂಡಿದ್ದಳು. ದಿನವೂ ರತ್ನಾಕರನ ಮನೆಗೆ ಹೋಗುತ್ತ, ಗಾಯತ್ರಿಯ ಜೊತೆ ಹರಟುತ್ತ, ಪದಬಂಧ ತುಂಬುತ್ತ, ಮತ್ತೆ ಐದೂವರೆಗೆ ರತ್ನಾಕರನೊಟ್ಟಿಗೆ ವಾಕಿಂಗು ಮಾಡಲು ರಸ್ತೆಗಿಳಿಯುತ್ತ, ಬೆಂಗಳೂರೆಂಬ ದೊಡ್ಡ ಪ್ರಪಂಚದಲ್ಲಿ ಪುಟ್ಟ ಗೂಡೊಂದನ್ನು ಕಟ್ಟಿಕೊಂಡ ಶರಾವತಿಗೆ ಎರಡು ತಿಂಗಳುಗಳು ಹೇಗೇ ಕಳೆದವೆಂದೇ ಗೊತ್ತಾಗಿರಲಿಲ್ಲ.

ಆದರೆ ಅವತ್ತೊಂದಿನ ಗಾಯತ್ರಿ ರತ್ನಾಕರ ಜೋರು ಜಗಳ ಮಾಡಿಕೊಂಡ ಮೇಲೆ ಅವರ ಮನೆಯೊಳಗೆ ಹೋಗಲಿಕ್ಕೇ ಮನಸ್ಸಾಗಿರಲಿಲ್ಲ. ಗಾಯತ್ರಿಯದು ಯಾವುದೋ ಕಂಪನಿ ಕೆಲಸ, ಒಮ್ಮೊಮ್ಮೆ ಆಫೀಸಿಗೆ ಹೋಗುವುದಿರುತ್ತದೆ ಎಂದು ಅವಳೇ ಹೇಳಿದ್ದಳು. ಆದರೆ ರತ್ನಾಕರನದ್ದು ಒಂದು ಕೆಲಸ ಅಂತ ಇರಲಿಲ್ಲ. ಒಂದಷ್ಟು ದಿನ ಪೇಪರಿಗೆ ಅಂಕಣ ಬರೆಯುತ್ತಾನೆ, ಇನ್ನೊಂದಷ್ಟು ದಿನ ಬುಕ್ ಪಬ್ಲಿಶಿಂಗ್, ಆಮೇಲೇ ತಿಂಗಳಾನುಗಟ್ಟಲೇ ಏನೂ ಕೆಲಸ ಮಾಡದೆ ಇದ್ದುಬಿಡುತ್ತಾನೆ, ಮನಸ್ಸು ಬಂದರೆ ಚಿತ್ರ ಬಿಡಿಸುತ್ತಾನೆ. ತಲೆ ಕೆಟ್ಟರೆ ಕಾರ್ ಎತ್ತಿಕೊಂಡು ಏನೂ ಎತ್ತ ಹೇಳದೇ ಮೂರ್ನಾಲ್ಕು ದಿನ ನಾಪತ್ತೆ. ಇದಿಷ್ಟು ಶರಾವತಿಗೆ ಅವನ ಒಡನಾಟದಿಂದ ಅರ್ಥವಾಗಿತ್ತು. ಈ ವಿಷಯಕ್ಕೇ ಸುಮಾರು ಸಲ ಗಾಯತ್ರಿ ರತ್ನಾಕರ ವಾದ ಮಾಡಿಕೊಂಡು ಅದು ಜಗಳದವರೆಗೂ ಹೋಗುತ್ತಿತ್ತು, ಆಗೆಲ್ಲ ಶರಾವತಿ ಹೊರಟರೆ ಒಂದೋ ಗಾಯತ್ರಿ ‘ಅಯ್ಯೋ ನೀವ್ ಕೂತ್ಕೊಳಿ ನಮ್ದಿದ್ದಿದ್ದೇ’ ಎಂದು ತಡೆಯುತ್ತಿದ್ದಳು, ಇಲ್ಲವೇ ರತ್ನಾಕರ ತಡೆಯುತ್ತಿದ್ದ. ಏನು ಮಾಡುವುದೆಂದೇ ತೋಚದೇ ಯಾವುದೋ ಪುಸ್ತಕ ಓದಿದಂತೆ ಮಾಡುತ್ತ ಅಲ್ಲೇ ಕೂತಿರುತ್ತಿದ್ದಳು. ಆದರೆ ಆ ದಿನ ದೊಡ್ಡ ಜಗಳವಾಗುತ್ತಿರುವಾಗ ಅಲ್ಲಿರಲಾಗದೇ ಹೊರಡಬೇಕಾಯಿತು, ಇಬ್ಬರಲ್ಲಿ ಯಾರೊಬ್ಬರೂ ತಡೆಯಲೂ ಇಲ್ಲ. ಮರುದಿನ ಎಂದಿನಂತೆ ಚಪಾತಿ ಮಾಡಿ ಗಾಯತ್ರಿಗೆ ಫೋನ್ ಮಾಡಿದರೆ ಉತ್ತರವಿರಲಿಲ್ಲ. ಶರವಾತಿ ಬಳಿ ರತ್ನಾಕರನ ಫೋನ್ ನಂಬರೂ ಇರಲಿಲ್ಲ. ಅದಾಗಿ ಒಂದು ವಾರದ ನಂತರ ರತ್ನಾಕರ ಸಿಕ್ಕಾಗಲೇ ಗಾಯತ್ರಿ ಅಮ್ಮನ ಮನೆಗೆ ಹೋದಳೆಂಬ ವಿಚಾರ ತಿಳಿದಿತ್ತು, ಹಿಂದೆ ಹೀಗೆ ಎಷ್ಟೋ ಸಲ ಹೋಗಿ ತಿಂಗಳುಗಟ್ಟಲೇ ಬಂದಿಲ್ಲ, ಯಾವತ್ತೋ ಒಂದಿನ ‘ಸಾರಿ ಡುಮ್ಮ’ ಅಂತ ಬಂದ್ಬಿಡ್ತಾಳೆ ಎಂದು ನಕ್ಕಿದ್ದ. ಆದರೆ ಗಾಯತ್ರಿ ತಿಂಗಳು ಕಳೆದರೂ ಬಂದಿರಲಿಲ್ಲ. ಶರಾವತಿ ರತ್ನಾಕರ ಮಾತ್ರ ಯಾವತ್ತಿನಂತೆ ವಾಕಿಂಗಿಗೆ ಹೋಗುತ್ತಿದ್ದರು.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೃತೀಯ ಬಹುಮಾನ ಪಡೆದ ಕಥೆ: ಅದು ಅವರ ಪ್ರಾಬ್ಲಮ್

ಈ ಬೆಂಗಳೂರಿನಲ್ಲಿ ದಿನಗಳು ಪುಟಗಳಂತೆ ಸರಸರನೇ ಮಗಚುತ್ತಿವೆ ಅನಿಸಿದ್ದರೂ ಇಷ್ಟವಾದ ಪುಟದಲ್ಲೇ ಇದ್ದುಬಿಡಲಾಗುದಿಲ್ಲವಲ್ಲ! ಶರಾವತಿ ಊರಿಗೆ ಹೊರಡುವ ದಿನ ಬಂದಿತ್ತು. ಪುಟ್ಟು ‘ಇನ್ ಸ್ವಲ್ಪ ದಿನ ಉಳ್ಕಳೇ ಅಮ್ಮಾ’ ಎಂದಾಗ ‘ಶೀ.. ತ್ವಾಟಕ್ ಮದ್ ಹೊಡ್ಯಲ್ಲೆ ಬಪ್ಪರತಿಗೆ ಮನಿಗೋಗವು ಪುಟು, ಮತೇ ರಾಶಿ ಡೇರೆ ಗಿಡ ಮಾಡವು ಈಸಲ’ ಎಂದು ಹೊರಟಿದ್ದಳು, ಬ್ಯಾಗಿನ ಜೊತೆ ಅರ್ಥವೇ ಆಗದ ಸಣ್ಣದೊಂದು ನೋವನ್ನೂ ಎದೆಯೊಳಗೆ ತುಂಬಿಕೊಂಡು ಹೊರಟಿದ್ದು ಮಾತ್ರ ಊರಿಗೆ ಹೋದಮೇಲೇಯೇ ಅರಿವಾಗಿತ್ತು! ಪುಟ್ಟುವನ್ನು ಬಿಟ್ಟು ಹೊರಡುವುದು ಒಂದು ತ್ರಾಸಾದರೆ, ರತ್ನಾಕರ ನಾಳೆಯಿಂದ ಸಿಗುವುದಿಲ್ಲ ಎಂಬ ವಿಚಿತ್ರ ತಳವಳ ಶರವಾತಿಯನ್ನು ಆವರಿಸಿದ್ದು ಅವಳಿಗೇ ಅಚ್ಚರಿ ಎನಿಸಿತ್ತು. ಹಳೆ ಕೊಟ್ಟೆಯಲ್ಲಿದ್ದ ಡೇರೆ ಗಡ್ಡೆಗಳನ್ನು ಹೊಸ ಕೊಟ್ಟೆಗೆ ವರ್ಗಾಯಿಸಿ, ಮಣ್ಣು ಹಾಕಿ, ಸಾಲಾಗಿ ಅಂಗಳದಲ್ಲಿಟ್ಟು, ನೇತ್ರಳ ಬಳಿ ಮಾಡಿಸಿಕೊಂಡ ಒಂದೇ ನಮೂನಿಯ ಕೋಲುಗಳನ್ನು ಗಿಡದ ಆಸೆರೆಗೆಂದು ಊರುತ್ತಿದ್ದರೂ ಮನಸ್ಸು ಮಾತ್ರ ಬೆಂಗಳೂರಿನ ಬೀದಿಯಲ್ಲಿ ರತ್ನಾಕರನ ಜೊತೆಗೇ ಹೆಜ್ಜೆ ಹಾಕುತ್ತಿತ್ತು. ‘ವಾಕಿಂಗಿಗೆ ಚಪ್ಪಲಿ ಕಂಫರ್ಟ್ ಅಲ್ಲ ಶೂ ತಗೊಳಿ’ ಎಂದು ಪರಿಚಯವಾದ ಶುರುವಿನಲ್ಲೇ ಹೇಳಿದ್ದ. ಪುಟ್ಟು ಮರುದಿನವೇ ಶೂ ಕೊಡಿಸಿದ್ದ. ಬೆಂಗಳೂರಿನಲ್ಲಿ ಇರುವಷ್ಟು ದಿನವೂ ಅದನ್ನು ಹಾಕಿಯೇ ನಡೆದಿದ್ದಳು ಶರಾವತಿ. ವಾರಕ್ಕೊಂದು ಸಲವಾದರೂ ಅವುಗಳನ್ನು ತೊಳೆದುಕೊಳ್ಳುತ್ತಿದ್ದಳು, ಯುಟ್ಯೂಬ್ ನೋಡಿ ಲೇಸು ಪೋಣಿಸಿಕೊಳ್ಳುತ್ತಿದ್ದಳು. ಊರಿಗೆ ಬರುವಾಗ ಒಂದು ಪ್ಲಾಸ್ಟಿಕ್ ಕವರಿನಲ್ಲಿ ಭದ್ರವಾಗಿಟ್ಟು ಬಂದಿದ್ದಳು. ಮನೆಗೆ ಬರುತ್ತಿದ್ದಂತೆ ಸವೆದು ಹೋದ ಕೊಟ್ಟಿಗೆ ಚಪ್ಪಲಿಗಳನ್ನು ಮೆಟ್ಟಿಕೊಂಡು ತೋಟದ ನಿತ್ಗಟ್ಟೆಯ ಮೇಲೇ ನಡೆಯುತ್ತ ರತ್ನಾಕರನ ಜೊತೆ ವಾಕಿಂಗು ಮಾಡಿದ ದಿನಗಳನ್ನು ಮೆಲಕು ಹಾಕುತ್ತಿದ್ದರೆ ಬೆಂಗಳೂರಿನಲ್ಲಿದ್ದ ಶರಾವತಿ ತಾನೇ ಹೌದೆ ಅನಿಸಿತ್ತು ಶರಾವತಿಗೆ..!

ಮನೆಯಲ್ಯಾವತ್ತೂ ಪತ್ತಲ ಉಡುತ್ತಿದ್ದ ಶರಾವತಿ ಬೆಂಗಳೂರಿಗೆ ಬಂದ ಮೇಲೇಯೇ ಕುರ್ತಾ ಲೆಗ್ಗಿನ್ನು ಹಾಕಲು ಕಲಿತುಕೊಂಡಿದ್ದಾಗಿತ್ತು. ಪುಟ್ಟುವಿನೊಟ್ಟಿಗೆ ಬೈಕಿನಲ್ಲಿ ಓಡಾಡುವಾಗ ಸೀರೆ ಕಷ್ಟವೆಂದು ಕುರ್ತಾಗಳನ್ನು ತಗೊಂಡಿದ್ದಳು. ಆದರೆ ಶರವಾತಿಯ ಆಸೆ ಕುರ್ತಾ ತೊಡವುದಾಗಲಿ, ಶೂಗಳನ್ನು ಹಾಕಿಕೊಳ್ಳುವುದಾಗಲಿ, ಬೈಕಿನಲ್ಲಿ ಸುತ್ತುವುದಾಗಲೀ, ಮಾಲಿನ ಎಸ್ಕಲೇಟರಿನಲ್ಲಿ ಎಡವದೇ ಕಾಲಿಟ್ಟು ಹೋಗಬೇಕೆನ್ನುವುದಾಗಲಿ ಆಗಿರಲಿಲ್ಲ. ಈ ಬೆಂಗಳೂರಿನಲ್ಲಾದರೂ ನಿರ್ಭಿಡೆಯಿಂದ ಹೂವನ್ನು ಸೂಡಿಕೊಳ್ಳಬೇಕೆಂಬುದು ಅವಳ ಕೆಟ್ಟ ಬಯಕೆಯಾಗಿತ್ತು. ಅಷ್ಟೇ! ಸತ್ಯ ಹೋದ ಮೇಲೇ ಅರಿಷಿಣ ಕುಂಕುಮವನ್ನಂತೂ ಯಾರೂ ಅವಳಿಗೆ ಹಚ್ಚುತ್ತಿರಲಿಲ್ಲ ಆದರೆ ಒಂದು ಹೂವು ಸೂಡಿಕೊಂಡರೂ ‘ಗಂಡ ಸತ್ತವು ಹೂ ಸೂಡ್ಕ್ಯಳ್ಳಾಗ’ ಎಂಬ ಮಾತು ಬಾಣದಂತೆ ಬರುತ್ತಿತ್ತು. ಇನ್ನು ಪೂಜೆ ಮುಗಿದ ಮೇಲೆ ಪ್ರಸಾದ ಕೊಡವಾಗಲೂ ಅವಳಿಗೆ ಹುಡುಕಿ ಹುಡುಕಿ ತುಳಸಿ ದಳವನ್ನೇ ಕೊಡುತ್ತಿದ್ದರು. ಮುತ್ತುಮಲ್ಲಿಗೆ ಜೊತೆ ಅಲ್ಲಲ್ಲಿ ಅಬ್ಬಲಿಗೆ ಹೂ ಹಾಕಿ ಮಾಲೆ ಮಾಡಿ ಮನೆಯ ಹೆಂಗಸರಿಗೆಲ್ಲ ಹಂಚಿ ತಾನೂ ಮುಡಿಯುತ್ತಿದ್ದವಳಿಗೆ, ಮಳೆಗಾಲದಲ್ಲಿ ಕಡ್ಡಿ ಡೇರೆ ಹೂಗಳನ್ನು ಆಸೆಯಿಂದ ಸೂಡಿಕೊಳ್ಳುತ್ತಿದ್ದವಳಿಗೆ, ಗುಲಾಬಿ ಹೂವನ್ನು ಎರಡು ಮೂರು ದಿನ ನೀರಿನಲ್ಲಿಟ್ಟು ಬಾಡದಂತೆ ನೋಡಿಕೊಳ್ಳುತ್ತಿದ್ದವಳಿಗೆ ಬದುಕಿನ ಎಲ್ಲ ಕನಸುಗಳೂ ಒಮ್ಮೇಲೇ ಬಾಡಿ ಹೋಗಿದ್ದು ಸತ್ಯ ತೀರಿ ಹೋದ ಮೇಲೆ! ಮತ್ತವು ಯಾವತ್ತೂ ಚಿಗುರುವುದಿಲ್ಲವೆಂದು ಚಿವುಟಿ ಚಿವುಟಿ ಅರ್ಥ ಮಾಡಿಸಿದ್ದು ಅವಳ ಮನೆಯವರೇ. ಸುಮ್ಮನೆ ಹೇಳಿಸಿಕೊಳ್ಳುವುದ್ಯಾಕೆಂದು ಹಬ್ಬ ಗಿಬ್ಬಗಳಲ್ಲಿ ದೇವರ ಮನೇಗೇ ಬರುತ್ತಿರಲಿಲ್ಲ, ವಿಶೇಷದ ಮನೆಗೂ ಹೋಗುತ್ತಿರಲಿಲ್ಲ, ಬಾವಂದಿರ ಮಕ್ಕಳ ಮದುವೆಯಲ್ಲೂ ಮಂಟಪದ ಬಳಿ ಸುಳಿದಿರಲಿಲ್ಲ. ಇನ್ನು ಹೂವಿನ ಆಸೆಯನ್ನಂತೂ ಬಿಟ್ಟೇ ಬಿಟ್ಟಿದ್ದಳು. ಆದರೆ ಬೆಂಗಳೂರು ಊರಿನ ಏಕತಾನತೆಯಿಂದ, ಇಷ್ಟು ವರ್ಷಗಳಿಂದ ಸಿಂಬೆಯಾಗಿ ರಾಶಿ ಬಿದ್ದ ಮೌನದಿಂದ, ಎಲ್ಲ ಇದ್ದೂ ಯಾರೂ ಇಲ್ಲದಂತೆ ಕಂಗೆಡಿಸುವ ಒಂಟಿತನದಿಂದ ತಪ್ಪಿಸಿಕೊಳ್ಳುವ ದಾರಿಯಾಗುತ್ತದೆ ಎಂದಷ್ಟೇ ಅಂದುಕೊಂಡವಳಿಗೆ, ಮನೆಯಲ್ಲಿದ್ದಾಗ ತನ್ನ ಹತ್ತಿರವೂ ಸುಳಿಯದೇ ದೊಡ್ಡಪ್ಪ , ಚಿಕ್ಕಪ್ಪ, ಅಣ್ಣಂದಿರ ಜೊತೆಗೇ ಬೆಳೆದುಬಿಟ್ಟ ಪುಟ್ಟುವಿನ ಹತ್ತಿರ ಮತ್ತೆ ತಾನು ಹೋಗುವಂತೆ ಮಾಡಿದ್ದೇ ಈ ಮಾಯಾನಗರಿ ಎಂದು ಕೃತಜ್ಞತೆ ಇಟ್ಟುಕೊಂಡವಳಿಗೆ ಈ ಊರು, ಈ ಊರಿನ ಯಾವುದೋ ಬೀದಿ ತಾನು ಯಾವತ್ತೂ ಕಾಣದ ಕನಸಿನ ಬೇರೊಂದನ್ನು ಎದೆಗೆ ಇಳಿಸುತ್ತದೆಯೆಂಬ ಅಂದಾಜೂ ಇರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾಸ್ಪರ್ಧೆ: ದ್ವಿತೀಯ ಬಹುಮಾನ ಪಡೆದ ಕಥೆ: ಅಂತಃಕರಣದ ಟಿಪ್ಪಣಿಗಳು

ಬೆಂಗಳೂರಿಗೆ ಬಂದಾಗ ಇಲ್ಲಿ ಎಲ್ಲರೂ ತನಗೆ ಅಪರಿಚಿತರೇ ತಾನೇ? ತಾನು ಹೂವು ಸೂಡಿಕೊಳ್ಳಲಿ ಬಿಡಲಿ ಯಾರ ತಕರಾರು ಇರುವುದಿಲ್ಲವಲ್ಲ ಎಂದು ಪುಟ್ಟುವಿನ ಬಳಿ ಹೂವು ತರಿಸಿಕೊಂಡು, ಫ್ರಿಜ್ಜಿನಲ್ಲಿಟ್ಟುಕೊಂಡು, ದಿನ ಅಷ್ಟಷ್ಟೇ ಹೂವುಗಳನ್ನೆತ್ತಿ ಒಂದೊಂದು ಥರದ ಮಾಲೆ ಮಾಡಿಕೊಂಡು, ಮಧ್ಯಾಹ್ನ ಪಟ್ಟಗೆ ಜಡೆ ಹಾಕಿ ಸೂಡಿಕೊಳ್ಳಲು ಶುರು ಮಾಡಿದ್ದಳು. ನಿಜ ಹೇಳಬೇಕೆಂದರೆ ಅವಳಿದ್ದ ಅಪಾರ್ಟ್ಮೆಂಟಿನ ಹಾಗೂ ಅಕ್ಕಪಕ್ಕದ ಮನೆಯ ಹೆಂಗಸರು ‘ನಿಮ್ಮ ಯಜಮಾನ್ರು?’ ಎಂದು ಕೇಳಿದಾಗ ‘ಅವರಿಲ್ಲ’ ಎನ್ನಲು ಬಾಯೇ ಬರದೇ ಅಥವಾ ಗಂಡ ಇಲ್ಲದವಳೆಂದು ಗೊತ್ತಾದರೆ ತಾನಿಷ್ಟಪಡುವ ಈ ಬೆಂಗಳೂರು ಬದಲೇ ಆಗಿಬಿಡಬಹುದೆಂಬ ಭಯಕ್ಕೋ ಏನೋ “ಯಜಮಾನ್ರು ಊರಲ್ಲಿದ್ದಾರೆ” ಎಂದುಬಿಟ್ಟಿದ್ದಳು. ಅಷ್ಟನ್ನು ಹೇಳುವುದು ಹೇಳಿ ಯಾಕಾದರೂ ಹಾಗೇ ಹೇಳಿದೆನೋ ಎಂದು ಒದ್ದಾಡಿದ್ದಳು. ಕೆಲವೊಂದನ್ನು ಹೇಳಿದ ಮೇಲೆ ಮತ್ತೆ ತಿದ್ದಲಾಗುವುದೇ ಇಲ್ಲ! ಆದರೆ ರತ್ನಾಕರ ಕೇಳಿದಾಗ ಮಾತ್ರ ನಿಜವನ್ನೇ ಹೇಳಿದ್ದಳು, ಆಗ ರತ್ನಾಕರ ಕೇಳಿದ್ದ ಪ್ರಶ್ನೆ ಶರವಾತಿಯ ಇಷ್ಟ ದಿನದ ಬದುಕನ್ನೇ ಅಲ್ಲಾಡಿಸಿಬಿಟ್ಟಿತ್ತು. ‘ನೀವ್ಯಾಕೆ ಮತ್ತೊಂದು ಮದ್ವೆ ಆಗ್ಲಿಲ್ಲ?’ ಎಂದು ಎಷ್ಟು ತಣ್ಣಗೆ, ಎಷ್ಟೊಂದು ಸಹಜವಾಗಿ, ಮತ್ತೆ ಒಂದಿಷ್ಟೂ ಕನಿಕರವಿಲ್ಲದೇ ಪೂರ್ತಿ ಕಾಳಜಿ ಮಾತ್ರದಿಂದ ಆ ಪ್ರಶ್ನೆಯೆತ್ತಿದ್ದನಲ್ಲ ಅವನು..? ಸತ್ಯ ತೀರಿ ಹೋದ ನಂತರದ ಈ ಹದಿನೆಂಟು ವರ್ಷಗಳಲ್ಲಿ ಯಾರೂ ಕೇಳದ, ಸ್ವತಃ ತನಗೇ ತಾನೂ ಕೇಳಿಕೊಳ್ಳದ ಪ್ರಶ್ನೆಯನ್ನು ರತ್ನಾಕರ ಕೇಳಿಬಿಟ್ಟಿದ್ದ. ಆದಿನ ರಾತ್ರಿ ಪೂರ ಶರಾವತಿಗೆ ರೆಪ್ಪೆಗೆ ರೆಪ್ಪೆ ಹಚ್ಚಲು ಆಗಿರಲೇ ಇಲ್ಲ. ‘ಹೌದು ತಾನ್ಯಾಕೆ ಮತ್ತೊಂದು ಮದುವೆ ಆಗಲಿಲ್ಲ?’ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿಕೊಂಡಿದ್ದಳು. ಮೊನ್ನೆ ಮೊನ್ನೆ ಪಕ್ಕದೂರಿನ ಸುಬ್ಬು ಮಾವಿನ ಮರದಿಂದ ಬಿದ್ದು ಹೋಗಿಬಿಟ್ಟಾಗ ಅವನ ಹೆಂಡತಿ ಮತ್ತೊಂದು ಮದುವೆ ಆದಳಲ್ಲ? ಅಷ್ಟೇ ಯಾಕೇ ತನ್ನ ಊರಿನ ಸುಮಾ ಕೂಡ ಮದುವೆ ಆಗಿ ಈಗ ಹುಬ್ಳಿಯಲ್ಲಿದ್ದಾಳೆ. ಗಂಡನ ಜೊತೆ ನಗುತ್ತಿರುವ ಫೊಟೋಗಳ ಸಾಲು ಸಾಲು ಸ್ಟೇಟಸನ್ನು ತಾನೇ ನೋಡುತ್ತಿರುತ್ತೇನಲ್ಲ..? ಮತ್ತೆ ತಾನ್ಯಾಕೆ? ಆಗಿನ ಕಾಲದಲ್ಲಿ ಈ ಎರಡನೆ ಮದುವೆ ಹೆಂಗಸರ ಪಾಲಿಗೆ ಚಾಲ್ತಿಯಲ್ಲಿರಲಿಲ್ಲ ಎಂದೇ..? ಯಾಕೇ? ಯಾಕೇ? ಎಂದು ಎಷ್ಟು ಕೇಳಿಕೊಂಡರೂ ಉತ್ತರವಿರಲಿಲ್ಲ., ಮತ್ತೆ ಮರುಕ್ಷಣವೇ ‘ಶೀ ಇದೆಂಥ ಮಳ್ಳು ಹಿಡತ್ತು ನಂಗೇ’ ಎಂದು ತಲೆ ಕೊಡವಿಕೊಂಡರೂ ಮನಸ್ಸಿಂದ ಆ ಪ್ರಶ್ನೆ ಹೋಗಿರಲಿಲ್ಲ.

ಬಾಳೆಹಳ್ಳಿ ಊರಿಗೆ ಶರಾವತಿ ಬಂದಿದ್ದು ಹೈಸ್ಕೂಲಿಗೆ ಹೋಗಲಿಕ್ಕಾಗಿತ್ತು. ಮನೆಯಲ್ಲಷ್ಟೇನೂ ಅನುಕೂಲವಿಲ್ಲದ ಕಾರಣ ಯಾರ್ಯಾರದ್ದೋ ಪರಿಚಯದಿಂದಾಗಿ ಇಷ್ಟು ದೂರದ ಊರಿಗೆ ಬಂದು ಮಾಬಲಣ್ಣನ ಮನೆಯಲ್ಲಿ ಉಳಿದು ಹೈಸ್ಕೂಲಿಗೆ ಹೋಗುತ್ತಿದ್ದಾಗ ಅದೇ ಊರಿನ ಸತ್ಯನ ಪರಿಚಯವಾಗಿ ಪ್ರೀತಿಯೂ ಆಗಿತ್ತು. ಊರಿನ ಹುಡುಗರ ಜೊತೆ ಲಗೋರಿ ಆಡುತ್ತ, ಹುಣಸೇಹಣ್ಣಿನ ಕಟ್ಟಮಿಟ್ಟ ಮಾಡಿ ಹೊಳೆಯಂಚಲ್ಲಿ ಕೂತು ತಿನ್ನುತ್ತ, ಶಾಲೆಗೆ ಹೋಗಿ ಬರುತ್ತಿದ್ದ ಶರಾವತಿಗೆ ಹೈಸ್ಕೂಲು ಮುಗಿಯುತ್ತಿದ್ದಂತೆಯೇ ಸತ್ಯನೊಟ್ಟಿಗೆ ಮದುವೆ ಮಾಡಿದ್ದರು. ನಾಲ್ಕು ಅಣ್ಣ ತಮ್ಮಂದಿರ ದೊಡ್ಡ ಕುಟುಂಬದಲ್ಲಿ ಶರಾವತಿ ಚಿಕ್ಕವಳೇ ಆದರೂ ಮನೆ ಕೆಲಸಗಳನ್ನೆಲ್ಲ ಕಲಿತು, ಹೊಂದುಕೊಂಡಿದ್ದಳು. ಅಡಕೆ ಸುಲಿಯುವುದನ್ನೂ ಕಲಿತಳು, ಸಂಜೆ ಹೊತ್ತಿಗೆ ಅಕ್ಕಪಕ್ಕದ ಮನೆಯವರೊಟ್ಟಿಗೆ ಚೌಕಾಬಾರ ಆಡುವಾಗ ಅವಳದ್ದೇ ಮೊದಲು ಪಟ್ಟ ಆಗುತ್ತಿತ್ತು, ಇನ್ನು ವೀಶೆಷಗಳಲ್ಲಿ ಇಸ್ಪೀಟು ಮಂಡಲವಿದ್ದಾಗ ದೊಡ್ಡ ಭಾವ ಕವಳ ತುಪ್ಪಿ ಬರಲು ಎದ್ದಾಗ ಅವನ ಕೈ ತಗೊಂಡು ಇಸ್ಪೀಟಿನ ಒಂದಾಟವನ್ನೂ ಆಡಿಬಿಡುತ್ತಿದ್ದಳು. ಅವಳದ್ದು ಚಿಕ್ಕ ವಯಸ್ಸಾಗಿದ್ದರಿಂದ ಅವಳು ಎಲ್ಲರಿಗೂ ಮಗಳಂತೆ ಇದ್ದಳು. ಸತ್ಯನೂ ಸಿಕ್ಕಾಪಟ್ಟೆ ಪ್ರೀತಿಸುತ್ತಿದ್ದ. ಶರು ಎಂದು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಬಾಣಂತನವೂ ಗಂಡನ ಮನೆಯಲ್ಲೇ ಆಗಿತ್ತು. ಆದರೆ ಬೈಕಿನಿಂದ ಬಿದ್ದು ಸತ್ಯ ಸತ್ತು ಹೋದ ಮೇಲೇ ಎಲ್ಲ ಬದಲಾಗಿಹೋಯಿತು. ಅವಳ ಜೊತೆ ಮನೆಯ ಭಾವ ಮೈದುನರು, ಊರಿನ ಗಂಡಸರು ಗಂಡ ಸತ್ತವಳ ಜೊತೆ ಸಲುಗೆಯಿಂದ ಮಾತಾಡಿದರೆ ಬೇರೆ ನಮೂನೇಯ ಹೆಸರು ಬೀಳುತ್ತದೆಯೆಂದು ಮೊದಲಿನಂತೆ ಮಾತಾಡುವುದನ್ನೇ ಬಿಟ್ಟುಬಿಟ್ಟರು. ಆ ಬದಲಾವಣೆಗೆ ಹೊಂದಿಕೊಳ್ಳಲು ಸುಮಾರು ದಿನಗಳೇ ಬೇಕಾಯ್ತು ಅವಳಿಗೆ. ಯಾವ ಗಂಡಸರ ಜೊತೆಯೂ ಮುಖಕ್ಕೆ ಮುಖ ಕೊಟ್ಟು ಎರಡಕ್ಕಿಂತ ಹೆಚ್ಚು ಮಾತಾಡುವಾಗ ಯಾರು ಏನಂದುಕೊಳ್ಳುವರೋ ಎಂದು ಯೋಚಿಸಬೇಕಾದ ಸ್ಥಿತಿ ಅವಳಿಗೆ ಅರಿವಿಲ್ಲದೇ ಏರ್ಪಾಡಾಗಿತ್ತು. ಆದರೆ ರತ್ನಾಕರನ ಜೊತೆ ಹೇಗೇ ಮಾತಿಗಿಳಿದೆ..? ಯೋಚಿಸುತ್ತಿದ್ದಳು. ಗಾಯತ್ರಿ ಬಿಟ್ಟು ಹೋಗಿದಕ್ಕೇ ರತ್ನಾಕರನ ಮೇಲೇ ಮಮತೆಯೇ..? ಅಥವಾ ತಾನು ಇನ್ನೊಂದು ಮದುವೆ ಆಗಬಹುದಿತ್ತು ಎಂಬ ಹೊಸ ಹೊಳಹು ಹುಟ್ಟುಹಾಕಿದ್ದಕ್ಕೇ ಅವನು ವಿಶೇಷ ಎನಿಸಿದನೇ? ಅಥವಾ ಕಾರಣವೇ ಇಲ್ಲದ ಸೆಳೆತವೊಂದು ಅವನನ್ನು ನೋಡಿದಾಗಿನಿಂದ ಇದೆಯೇ? ಉತ್ತರ ಸಿಕ್ಕಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಯುಗಾದಿ ಕಥಾ ಸ್ಪರ್ಧೆ: ಪ್ರಥಮ ಬಹುಮಾನ 55,000 ರೂ. ಪಡೆದ ಕಥೆ: ಸೋಮನ ಕುಣಿತ

ಒಮ್ಮೆ ರತ್ನಾಕರನ ಜೊತೆ ನಡೆಯುತ್ತಿದ್ದಾಗ ರಸ್ತೆಯಲ್ಲಿ ಬಿದ್ದ ತಿಳಿ ಗುಲಾಬಿಯ ಹೂವೊಂದನ್ನು ಶರವಾತಿಯ ಕೈಲಿಡುತ್ತಾ ‘ಈ ಹೂವು ರಾಶಿ ರಾಶಿ ಬಿದ್ದಿದೆ ನೋಡಿ, ಬೇಕಿದ್ರೆ ಮಾಲೆ ಮಾಡ್ಕೊಂಡು ಮುಡ್ಕೊಳಿ’ ಎಂದು ಅವಳ ಹೂವಿನ ಮಳ್ಳನ್ನು ಆಡಿಕೊಂಡು ನಕ್ಕಿದ್ದ. ಅವನು ಮಾಡಿದ್ದು ತಮಾಶೆಯೇ ಆದರೂ ಸತ್ಯ ಹೋದ ಮೇಲೇ ಅವಳ ಕೈಗೊಬ್ಬರು ಹೂವು ಕೊಟ್ಟು ಮುಡಿದುಕೋ ಎಂದಿದ್ದು ಅದೇ ಮೊದಲಾಗಿತ್ತು. ಬಣ್ಣ ಬಿಟ್ಟು ತುಸು ಹಳಸಿದಂತೆ ಕಾಣುವ, ಗಟ್ಟಿ ಮುಟ್ಟಿದರೆ ಹಿಸಿದು ಹೋಗುವಷ್ಟು ಮೆತ್ತಗಿದ್ದ ಆ ಹೂವನ್ನು ಪ್ರೀತಿಯಿಂದ ನೋಡುತ್ತಾ ‘ಇದೆಂತ ಹೂವು’ ಎಂದು ಕೇಳಿದ್ದಳು. ಬೆಂಗಳೂರಿನ ಎಲ್ಲ ಬೀದಿಯಲ್ಲೂ ಗೊಂಚಲು ಗೊಂಚಲಾಗಿ ಹುಚ್ಚಂಪರಿ ಅರಳಿದ್ದ ಆ ಹೂಗಳನ್ನು ದಿನವೂ ನೋಡುತ್ತಿದ್ದರೂ ಅದರ ಹೆಸರೇನೆಂದು ಗೊತ್ತಿರಲಿಲ್ಲ ಅವಳಿಗೆ. ‘ಪಿಂಕ್ ಟ್ರಂಪೆಟ್’ ಎಂದಿದ್ದ ರತ್ನಾಕರ. ‘ನಂಗೆ ಇಂಥ ಹೆಸರೆಲ್ಲ ನೆನಪಿರಲ್ಲ’ ಎಂದು ಅವಳಂದಾಗ, ‘ತಬೆಬುಯಾ ಅಂತ ಇನ್ನೊಂದು ಹೆಸರಿದೆ ಆದ್ರೆ ಪಿಂಕ್ ಟ್ರಂಪೆಟ್ ನೆನಪಿಟ್ಕೊಳೋದೇ ಈಸಿ’ ಎಂದಿದ್ದ. ಆದರೆ ಶರವಾತಿಗೆ ಆ ಹೆಸರನ್ನು ನೆನಪಿಟ್ಟುಕೊಳ್ಳಲು ಹೆಚ್ಚು ಕಷ್ಟಪಡಬೇಕಾಗೇ ಇರಲಿಲ್ಲ. ಎಷ್ಟೋ ವರ್ಷಗಳ ಮೇಲೆ ಅವಳಿಗೊಬ್ಬರು ಹೀಗೇ ಆಪ್ತವಾಗಿ ಹೂವು ಕೊಟ್ಟಿದ್ದು, ಅದರಲ್ಲೂ ರತ್ನಾಕರ, ಅದರಲ್ಲೂ ಮುಡಿದುಕೋ ಎಂದು ಹೇಳುತ್ತ ಕೊಟ್ಟಿದ್ದು ಒಂದು ಅಪರೂಪದ ನೆನಪೇ ಆಗಿತ್ತು. ಅವಳ ಉಸಿರಿರುವಷ್ಟು ದಿನವೂ ಆ ಕ್ಷಣ ನೆನಪಿನಲ್ಲಿರುವಲ್ಲಿ ಅನುಮಾನವೇ ಇರಲಿಲ್ಲ. ಆ ಹೂವನ್ನು ರತ್ನಾಕರನಿಂದ ತಂದುಕೊಂಡಿದ್ದ ಕಾದಂಬರಿಯ ಪುಟದ ನಡುವಲ್ಲೇ ಇಟ್ಟಿದ್ದಳು. ಕಾದಂಬರಿಯನ್ನು ಓದಿ ಮುಗಿಸಿದ್ದರೂ, ದಿನಕ್ಕೊಮ್ಮೆಯಾದರೂ ಆ ಹೂವನ್ನು ನೋಡಿ ಸವರಿ ಪುಳಕಗೊಳ್ಳುವುದು ಮುಗಿಯಲಿಲ್ಲ. ಅವಳ ಜೊತೆ ಆ ಕಾದಂಬರಿ ಆ ಹೂವಿನ ಸಮೇತವಾಗಿ ಊರಿಗೂ ಹೋಗಿತ್ತು. ಭರ್ತಿ ಎಂಟು ತಿಂಗಳುಗಳ ಕಾಲ ಊರಿನಲ್ಲೇ ಮೆತ್ತಿನ ಕೋಣೆಯ ಕಪಾಟಿನ ಮೇಲ್ಬದಿಗೆ ತಣ್ಣಗಿತ್ತು.

ಪುಟ್ಟುವಿಗೆ ಫೋನು ಮಡಿದಾಗಲೆಲ್ಲ ‘ಗಾಯತ್ರಿ ವಾಪಾಸ್ ಬಂದ್ರಾ?’ ಎಂದು ಕೇಳುತ್ತಿದ್ದಳು. ‘ನಂಗೆಂತ ಗೊತ್ತಿದ್ದೆ ಅಮಾ?’ ಎಂದು ಪುಟ್ಟು ಅಲವತ್ತುಕೊಳ್ಳುತ್ತಿದ್ದರೆ ರತ್ನಾಕರನ ನಂಬರೂ ತನ್ನ ಬಳಿ ಇಲ್ಲವಲ್ಲ ಎಂದು ಹಳಹಳಿಸಿದ್ದಳು. ರತ್ನಾಕರನಿಗೂ ತಾನು ನೆನಪಾಗುತ್ತಿದ್ದರೆ ಗಾಯತ್ರಿ ಬಳಿ ನಂಬರ್ ತಗೊಂಡು ಫೋನ್ ಮಾಡಬಹುದಿತ್ತಲ್ಲ ಎಂದೂ ಅನಿಸುತ್ತಿತ್ತು. ಆದರೆ ಇದೆಲ್ಲದರ ಮಧ್ಯೆ ಒಂದಂತೂ ಖಾತ್ರಿಯಾಗಿತ್ತು, ತಾನು ರತ್ನಾಕರನನ್ನು ಇಷ್ಟಪಡುತ್ತಿದ್ದೇನೆ ಎಂಬುದು. ಇಷ್ಟ ಎಂದರೆ.. ಮದುವೆಯಾಗುವುದೇ? ಅಥವಾ ಇಷ್ಟ ಎಂದು ಹೇಳಿಕೊಳ್ಳುವುದೆ? ಹೇಳಿಕೊಳ್ಳದೇ ಸುಮ್ಮನಿರುವುದೇ? ಏನೂ ಈ ಇಷ್ಟ ಎಂದರೆ? ಬೆಳಗಿನ ಹೂ ಬಿಸಿಲಲ್ಲಿ ಅಟ್ಟ ಹತ್ತಿ, ಕಾಟನ್ನು ಸೀರೆ ಹಾಸಿ, ಕಾಳು ಬೇಳೆಗಳನ್ನು ಹರವುತ್ತಿದ್ದಾಗ ಅವನು ಎದುರಿಗೆ ಬಂದು ಕೂತಂತೆ ಭಾಸವಾಗುವುದೇ? ಹೊಳೆಯ ಮುರ್ಕಿಯಲಿ ಪೇಟೆಗೆ ಹೋಗಲು ಬಸ್ಸು ಕಾಯುತ್ತ ನಿಂತಾಗ ಅವನ ದನಿ ಕೇಳಿದಂತೆ ಬೆಚ್ಚಿ ತಿರುಗುವುದೇ? ದೊಡ್ಡ ಬ್ಯಾಣದ ಕಡೆ ಹೋದಾಗೆಲ್ಲ ಸತ್ಯನನ್ನು ಸುಟ್ಟ ಜಾಗ ಕಾಣುತ್ತಿದ್ದಂತೆ ನಿನ್ನೆಗಳಲ್ಲಿ ಮನಸ್ಸನ್ನು ಅದ್ದಿ ಹಿಂಡಲು ರತ್ನಾಕರನ ನೆನಪು ಬಿಡದಿರುವದೇ? ಏನು ಈ ಇಷ್ಟ ಎಂದರೆ? ಗೊತ್ತಿರಲಿಲ್ಲ. ಆದರೂ ಇಷ್ಟ ಅಷ್ಟೇ! ಅವನಿಂದ ದೂರವಿದ್ದಾಗ ಮನಸ್ಸು ಭಾರ, ಹತ್ತಿರದಲ್ಲಿದ್ದರೆ ಏನೋ ಹಿತ, ಅವನು ಪಕ್ಕದಲ್ಲಿ ನಡೆಯುವಾಗ ಒಂದು ಧೈರ್ಯ. ಅವನ ಅಸ್ಥವ್ಯಸ್ಥದ ಬದುಕಿನಲ್ಲಿ ತಾನೂ ಒಂದು ವಸ್ತುವಿನಂತೆ ಕಳೆದು ಹೋಗದೇ, ಆತನ ಹರಗಾಣವನ್ನೆಲ್ಲ ಪಟ್ಟಗಿಡುತ್ತ, ಅವನ ಆಲಸ್ಯವನ್ನು ಬೈಯ್ಯುತ್ತ, ಅವನು ಸುತ್ತುವ ಊರುಗಳಿಗೆ ಸಾಥಿಯಾಗುತ್ತ ಉಳಿದ ಬದುಕನ್ನು ಪ್ರೀತಿಯಿಂದ ಅವನಿಗಾಗಿ ಬದುಕಿಬಿಡಬೇಕಂಬ ಆಸೆ. ಅವಳಲ್ಲಿ ಇಷ್ಟವೆಂಬುದುಕ್ಕೆ ಇರುವ ವ್ಯಾಖ್ಯಾನ ಇದೇ! ತಾನ್ಯಾಕೆ ರತ್ನಾಕರನನ್ನು ಮದುವೆ ಆಗಬಾರದು ಎಂಬ ತಿಳಿ ಯೋಚನೆಯೊಂದು ನಿಧಾನಕ್ಕೆ ಇದರೊಟ್ಟಿಗೆ ಸೇರಿಕೊಂಡಿತು. ಆದರದು ಗಟ್ಟಿಯಾದ ನಿರ್ಧಾರವಾಗಲು ಹೆಚ್ಚು ದಿನ ಹಿಡಿಯಲಿಲ್ಲ. ಮತ್ತೆ ಇದೆಲ್ಲ ಅವಳಂದುಕೊಂಡಷ್ಟೇನು ಸಸಾರವಲ್ಲ ಎಂಬುದರ ಅರಿವೂ ಇತ್ತು. ಗಂಡ ಇಲ್ಲದೇ ಹದಿನೆಂಟು ವರ್ಷ ಕಳೆದವಳಿಗೆ ಈಗೇನಾಯಿತ್ತಪ್ಪ ಎಂದು ಊರು ಮಾತಾಡಿಕೊಳ್ಳುತ್ತದೆ. ಬೆಂಗಳೂರೆಂದು ಕುಣಿಯುವುದೇ ಇದಕ್ಕಾಗಿ ಎಂಬವರೆಗೂ ಹೋಗಿ ಮುಟ್ಟುತ್ತದೆ. ರಸ್ತೆಯ ಒಂದು ತುದಿಯಲ್ಲಿ ತಾನು ಇನ್ನೊಂದು ತುದಿಯಲ್ಲಿ ಅವನು ನಡೆದ ನಿಶ್ಕಲ್ಮಶ ಹೆಜ್ಜೆಗಳನ್ನು ಯಾರಿಗೆ ತೋರಿಸಿ ಅರ್ಥ ಮಾಡಿಸುವುದು? ಮನೆಯವರಿಗಾದರೂ ಅರ್ಥವಾಗಬಹುದೆ? ಇನ್ನು ಅಪ್ಪನ ಮನೆಯವರ ಪ್ರತಿಕ್ರಿಯೆ ಏನಿರಬಹುದು? ಮುಖ್ಯವಾಗಿ ಪುಟ್ಟು ಇದನ್ನು ಹೇಗೇ ತೆಗೆದುಕೊಳ್ಳಬಹುದು? ಇನ್ನೊಂದೆರಡು ವರ್ಷಗಳುರುಳಿದರೆ ಅವನೇ ಮದುವೆಗೆ ಬರುತ್ತಾನೆ, ಈಗ ತಾನು ಮದುವೆ ಆಗುವುದೆ? ಹೀಗೇ ಸಾವಿರ ಪ್ರಶ್ನೆಗಳು. ರತ್ನಾಕರನ ಮಗ್ಗುಲಿಗೆ ಹೊರಳಿದರೆ ಅವನಿಗೆ ತಾನಿಷ್ಟವೋ ಇಲ್ಲವೋ ಎಂಬುದೇ ಖಾತ್ರಿಯಿಲ್ಲ. ಜೊತೆಗೆ ಗಾಯತ್ರಿ ಅವನು ಈಗ ಒಟ್ಟಾಗಿದ್ದರೆ ಎಂಬ ಭಯ ಬೇರೆ.. ಒಂದೊಂದು ಸಲ ತನ್ನ ಯೋಚನೆಯೇ ತಪ್ಪು ಎನಿಸಿ ಶರಾವತಿ ರತ್ನಾಕರನನ್ನು ಮರೆಯಲು ಯತ್ನಿಸಿದ್ದೂ ಇದೆ, ಆದರೆ ಮುರಿದು ಹೋದ ಪ್ರೀತಿಗಿಂತ, ಮರೆಯಬೇಕಾದ ಪ್ರೀತಿಗಿಂತ, ನಿವೇದಿಸಿಕೊಳ್ಳದ ಪ್ರೀತಿಯೇ ಹೆಚ್ಚು ನೋವು ಕೊಡುವುದು, ಭಾರ ಎನಿಸುವುದು, ಒಪ್ಪಲಿ ಬಿಡಲಿ ಹೇಳಿಕೊಂಡು ಬಿಡಬೇಕೆಂಬ ಹುಂಬು ಧೈರ್ಯ ಕೊಡುವುದು. ಏನಾದರಾಗಲಿ ಈ ಸಲ ಬೆಂಗಳೂರಿಗೆ ಹೋದಾಗ ರತ್ನಾಕರನ ಬಳಿ ಇದನ್ನು ಹೇಳಿಕೊಳ್ಳಲೇಬೇಕೆಂದು ನಿರ್ಧರಿಸಿದ್ದಳು.

ಒಂದಿನ ಅಡಕೆ ಸುಲಿಯುತ್ತಿದ್ದಾಗ ನೇತ್ರಳಿಗೆ ಹೇಳಿದಳು “ನೇತ್ರಾ ಯಾವತ್ತೂ ಕನ್ಸಲ್ ಬರ್ದೇ ಹೋಗಿದ್ ಸತ್ಯ ಹೆಗಡ್ರು ಮೊನ್ನೆ ಕನಸಲ್ ಬಂದ್ರು ಮಾರಾಯ್ತಿ, ಒಂಥರ ಹೆದ್ರಕೆ ಆಗೋತು.’ ನೇತ್ರಳಿಗೆ ಏನು ಹೇಳಬೇಕೋ ತೋಚದೆ ‘ಅಮ್ಮ ಹಂಗಿದ್ ಕನಸೆಲ್ಲ ಬೀಳ್ತಾ ಇರ್ತೈತಿ ಬಿಡ್ರೀ’ ಎಂದು ಅದನ್ನು ಸಹಜವಾಗಿ ತೆಗೆದುಕೊಳ್ಳುವಂತೆ ಮಾಡಲು ನೋಡಿದ್ದಳು. ಆದರೆ ಕುರ್ಚಿ ಕಟ್ಟಿಲ ಮೇಲೇ ಸತ್ಯ ಕುಳಿತ ಹಾಗೇ, ತನ್ನನ್ನೇ ಎವೆಯಿಕ್ಕದೇ ನೋಡಿದ ಹಾಗೇ ಬಿದ್ದ ಆ ವಿಚಿತ್ರ ಕನಸನ್ನು ನೆನೆಸಿಕೊಂಡಾಗಲೆಲ್ಲ ಶರಾವತಿಗೆ ನಡುಕ ಬರುತ್ತಿತ್ತು. ರತ್ನಾಕರನ ಕುರಿತು ತಾನು ಯೋಚಿಸುತ್ತಿರುವುದಕ್ಕೇ ಸತ್ಯ ಕನಸಲ್ಲಿ ಬಂದಿದ್ದು ಎನಿಸುತ್ತಿತ್ತು. ಇಷ್ಟು ವರ್ಷಗಳಲ್ಲಿ ಎಷ್ಟೇ ಹಂಬಲು ಮಾಡಿಕೊಂಡರೂ ಸತ್ಯನ ಮುಖ ಸರಿಯಾಗಿ ಕಣ್ಮುಂದೆ ಬರುತ್ತಿರಲಿಲ್ಲ. ಹೆಬ್ಬಾಗಿಲಿನ ಗೋಡೆಗಿದ್ದ ಅವನ ಫೋಟೋ ನಿಧಾನಕ್ಕೆ ಜಗುಲಿಗೆ ಸರಿದು, ಅಲ್ಲಿಂದ ಮೆತ್ತಿಗೆ ಸೇರಿ ಅಲ್ಲಿಂದ ಶರಾವತಿಯ ಕೋಣೆಯ ನಾಗಂದಿಗೆಯ ಪಾಲಾದಲಾಗಾಯ್ತು ದಿನ ಅವನನ್ನು ನೋಡುವುದೇ ಇರುತ್ತಿರಲಿಲ್ಲ, ಎಲ್ಲಾದರೂ ಕೋಣೆ ಚೊಕ್ಕ ಮಾಡುವಾಗ ಧೂಳು ಕೊಡವಿ ಇಡುತ್ತಿದ್ದಳಷ್ಟೆ. ಕಡೆ ಕಡೆಗೆ ಅದಕ್ಕೆ ಸುರುಳಿ ಸುರಿಳಿಯಾಗಿ ಹುಳ ಹಿಡಿದು ಸತ್ಯನ ಮುಖವೇ ಕಾಣದಂತಾಗಿತ್ತು. ಆದರೆ ಕನಸ್ಸಿನಲ್ಲಿ ಮಾತ್ರ ಎಷ್ಟು ನಿಚ್ಚಳವಾಗಿ ಸತ್ಯ ಕಾಣಿಸಿದ್ದನಲ್ಲ..! ಮತ್ತೆ ನೇತ್ರಳನ್ನು ಕೇಳಿಯೇ ಬಿಟ್ಟಳು ‘ನೀನೆಂತಕ್ಕೆ ಶಂಕ್ರ ಸತ್ತೋದ್ಮೇಲೆ ಇನ್ನೊಂದ್ ಮದ್ವೆ ಆಗ್ಲಿಲ್ಲ’ ಎಂದು. ’ಮಳ್ಳನ್ರ ಅಮಾ?’ ಎನ್ನುತ್ತ ದೊಡ್ಡ ನಗೆಯಾಡಿ ನೇತ್ರ ಮತ್ತೆಲ್ಲೋ ನೋಡಿದ್ದಳು. ತಾನು ಹಾಗೆ ಕೇಳಬಾರದಿತ್ತು ಎಂದು ಆಮೇಲೆ ಅನ್ನಿಸಿತ್ತು ಶರವಾತಿಗೆ. ತನ್ನಂತೆ ನೇತ್ರಳ ಎದೆಯೊಳಗೂ ಒಂದು ಬಿರುಗಾಳಿ ಹುಟ್ಟಿದರೆ ಎಂಬ ಭಯವೂ ಆಯಿತು.

ಶರಾವತಿಗೆ ಕೊಂಚ ಬಿಡುವಾಗುವುದೇ ಕೊನೆಕೊಯ್ಲು ಮುಗಿದ ಮೇಲೇ. ಆದರೆ ಅಟ್ಟದ ಮೇಲೆ ಅಡಕೆ ಇರುವಷ್ಟು ದಿನ ಎಲ್ಲಿಗೂ ಹೋಗಲಾಗುತ್ತಿರಲಿಲ್ಲ. ಭಾವಂದಿರು ಮತ್ತವರ ಮಕ್ಕಳೆಲ್ಲ ಆಲೆಮನೆಯತ್ತ ನಡೆದರೆ ಅಟ್ಟದ ಮೇಲಿನ ಅಡಕೆ ಒಬ್ಬಳಿಸುವ ಪಾಳಿ ಶರಾವತಿಯದೇ. ಆದರೂ ಇದೆಲ್ಲ ಮುಗಿದು ಯಾವತ್ತು ಬೆಂಗಳೂರಿಗೆ ಹೋಗುತ್ತೆನೋ ಎಂದು ಅವಳಿಗೂ ಅನಿಸುತ್ತಿತ್ತು. ಪುಟ್ಟುವೂ ಕರೆಯುತ್ತಿದ್ದ. ಫೆಬ್ರುವರಿ ಮೊದಲ ವಾರದಲ್ಲಿದ್ದ ಮಾವನ ಶ್ರಾದ್ಧ ಮುಗಿಸಿ ಕಡೆಗೂ ಬೆಂಗಳೂರಿನ ಬಸ್ಸು ಹತ್ತಿದ್ದಳು. ಹೋಗುವಾಗ ದೊಡ್ಡಕ್ಕ ‘ಈ ಸಲ ಚಾಲಿ ನಾವೇ ಸುಲ್ಯದಡ ಶರು’ ಎಂದಿದ್ದರ ಅರ್ಥ ಈ ಸಲ ಅವಳು ಮೂರ್ನಾಲ್ಕು ತಿಂಗಳುಗಳೆಲ್ಲ ಅಲ್ಲೇ ಉಳಿಯಬಾರದು ಎಂಬುದಾಗಿತ್ತು, ಅದು ಶರಾವತಿಗೂ ಗೊತ್ತಿತ್ತು.

ಬೆಂಗಳೂರಿಗೆ ಬರುತ್ತಿದ್ದಂತೆ ಮತ್ತದೆ ಅವಳಿಷ್ಟದ ದಿನಚರಿ. ಪುಟ್ಟುವನ್ನು ಆಫೀಸಿಗೆ ಕಳುಹಿಸುವ ಗಡಿಬಿಡಿಯ ಬೆಳಗುಗಳು, ಹೂವಿನ ಪರಿಮಳದ ಮಧ್ಯಾಹ್ನಗಳು, ಪಿಂಕ್ ಟ್ರಂಪೆಟ್ ಮರಗಳ ನೆರಳಲ್ಲಿ ಏನೇನೋ ಕತೆ ಹೇಳುತ್ತ ರತ್ನಾಕರನ ಜೊತೆ ಕಳೆವ ವಾಕಿಂಗಿನ ಸಂಜೆಗಳು, ಅವನ ಬಳಿ ಹೇಳುವುದೋ ಬೇಡವೋ ಎಂಬ ಜಿಜ್ಞಾಸೆಯ ರಾತ್ರಿಗಳು ಒಂದಕ್ಕೊಂದು ಖೋ ಕೊಟ್ಟು ಓಡುತ್ತಿದ್ದವು. ಬೆಂಗಳೂರಿಗೆ ಬಂದ ದಿನವೇ ರತ್ನಾಕರನ ಬಳಿ ‘ಗಾಯತ್ರಿಯವ್ರು..?’ ಎಂದು ಕೇಳಿದ್ದಕ್ಕೆ ‘ಮತ್ತೆ ಬರೋ ಆಲೋಚನೇಲಿ ಇಲ್ಲ, ಮೂರ್ನಾಲ್ಕು ಸಲ ಹೋಗಿ ಕರ್ದಿದ್ದಾಯ್ತು’ ಎಂದಿದ್ದ. ಪಾಪ ಅನ್ನಿಸಿದರೂ ಒಳಗೊಳಗೆ ಶರಾವತಿಗೆ ಖುಷಿಯೂ ಆಗಿತ್ತು ಎನ್ನದಿದ್ದರೆ ತಪ್ಪಾಗುತ್ತದೆ. ಮತ್ತಿದರಿಂದ ಅವನ ಬಳಿ ಎರಡನೇ ಮದುವೆ ಬಗ್ಗೆ ಕೇಳುವ ಧೈರ್ಯವೂ ಹೆಚ್ಚಾಗಿತ್ತು. ಒಂದಿನ ಅವಳ ಬಳಿ ಉಳಿದು ಹೋಗಿದ್ದ ಅವನ ಕಾದಂಬರಿಯನ್ನು ಮನೆಗೇ ಹೋಗಿ ಕೊಟ್ಟು ಬಂದಿದ್ದಳು. ‘ಶರಾವತಿ ರತ್ನಾಕರನನ್ನು ಸೇರಬಹುದಾ? ತನ್ನದೆಲ್ಲವನ್ನೂ ಬಗಲಲ್ಲಿ ಅವುಚಿಕೊಂಡೇ ಹರಿಯುತ್ತಾ.. ಅವನದೆಲ್ಲವನ್ನೂ ಇದ್ದಂತೇ ಒಪ್ಪಿಕೊಳ್ಳುತ್ತಾ.. ಶರಾವತಿ ರತ್ನಾಕರನನ್ನು ಸೇರಬಹುದಾ?’ ಎಂದು ಹಾಳೆಯೊಂದರಲ್ಲಿ ಬರೆದು ಅದರಲ್ಲಿಟ್ಟುಬಿಟ್ಟಿದ್ದಳು. ಅದೇ ಕಾದಂಬರಿಯಲ್ಲಿ ಬೆಚ್ಚಗಿದ್ದ ರತ್ನಾಕರನೇ ಕೊಟ್ಟ ಒಣಗಿದ ಪಿಂಕ್ ಟ್ರಂಪೆಟ್ ಹೂವಿಗೆ ಆ ಸಾಲುಗಳನ್ನೋದಿ ಬಣ್ಣ ಬಂದಿತ್ತೇ? ಗೊತ್ತಿಲ್ಲ. ಶೆಲ್ಫಿನಲ್ಲಿಡಲು ಹೋದಾಗ ಪತ್ರ ಸಿಗುತ್ತದೆ, ಓದುತ್ತಾನೆ ಎಂದು ಅಂದಾಜಿಸಿದ್ದ ಶರಾವತಿ ಓದಿ ಏನೂ ಹೇಳುತ್ತಾನೋ ಎಂಬ ಪುಕಪುಕಿಯಲ್ಲಿದ್ದಳು. ಆದರೆ ಮರುದಿನ ಸಿಕ್ಕಾಗ ಒಮ್ಮೆಯೂ ಪತ್ರದ ಪ್ರಸ್ತಾಪವೇ ಬರಲಿಲ್ಲ. ಆದರೂ ಶರಾವತಿ ಮಾತ್ರ ಕಾಯುತ್ತಲೇ ಇದ್ದಳು. ಮಧ್ಯೆ ಮಧ್ಯೆ ಗಾಯತ್ರಿಯ ವಿಷಯ ಬಂದಾಗಲೆಲ್ಲ ಶರಾವತಿ ಮಾತೇ ಆಡುತ್ತಿರಲಿಲ್ಲ. ಒಂದಷ್ಟು ದಿನ ಕಳೆದ ಮೇಲೆ ಸ್ವಪ್ನ ಬುಕ್ ಹೌಸಿಗೆ ಕರೆದುಕೊಂಡು ಹೋಗಿ ಆತ ಪುಸ್ತಕಗಳನ್ನು ಕೊಳ್ಳುತ್ತಿದ್ದಾಗ ಹುಚ್ಚು ಧೈರ್ಯ ಮಾಡಿ ಕೇಳಿಬಿಟ್ಟಳು ‘ನೀವು ಇನ್ನೊಂದ್ ಮದ್ವೆ ಆಗುದಿಲ್ವಾ?’ ಎಂದು. ಅವನೇ ಹಾಗೆ ತಣ್ಣಗೆ ಪ್ರಶ್ನೆ ಕೇಳಲು ಕಲಿಸಿಕೊಟ್ಟಿದ್ದು, ಮತ್ತು ನೇತ್ರಳ ಬಳಿ ಇದೇ ರೀತಿ ಪ್ರಶ್ನಿಸಿ ತಾಲೀಮೂ ಆಗಿದ್ದರಿಂದ ಹಿಂಜರಿಕೆಯಿಲ್ಲದೆ ಕೇಳಿದ್ದಳು. ರತ್ನಾಕರ ಒಂದಷ್ಟು ಕ್ಷಣ ಮೌನವಾಗಿದ್ದು ಕಡೆಗೆ ‘ಅಯ್ಯೋ ಒಂದ್ ಮದ್ವೆ ಸಾಕಾಗಿದೆ’ ಎಂದು ನಕ್ಕಿದ್ದ. ಅವನು ಹೀಗೆಯೇ ಎಲ್ಲ ಮಾತಿಗೂ ನಗುವನ್ನು ಅಂಟಿಸುತ್ತಾನೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಲೇ ಮಾತಾಡುತ್ತಾನೆ. ಆದರೆ ಒಂದಷ್ಟು ಸೆಕೆಂಡು ಮೌನವಾಗಿದ್ದನಲ್ಲ? ಮುಖಕ್ಕೆ ಮುಖ ಕೊಡದೆ ಉತ್ತರಿಸಿದನಲ್ಲ? ಬೇರೆ ಕಾರಣವೇನಾದರೂ ಇರಬಹುದೆ? ಅದು ತಾನೇ? ಎಂದು ಹುಡುಕಾಡಿದ್ದಳು. ಆದರೆ ‘ಈ ಆಥರ್ ಬುಕ್ಕು ಗಾಯತ್ರಿಗಿಷ್ಟ, ಈ ಪೆನ್ನುಗಳು ಅವಳಿಗೆ ಮಂಡಲ ಬಿಡ್ಸೋಕೆ ಬೇಕಾಗತ್ತೆ’ ಎಂದು ಒಂದು ರಾಶಿ ಪೆನ್ನು ಪುಸ್ತಕಗಳನ್ನು ಕೊಂಡು ಕಾರಿಗೆ ಆತ ತುಂಬುತ್ತಿದ್ದರೆ ಈ ಇವುಗಳ ರಾಶಿಯಲ್ಲಿ ತನ್ನ ಪತ್ರವಿರುವ ಕಾದಂಬದರಿ ಕಳೆದು ಹೋಗುವ ಭಯವಾಯಿತು ಶರಾವತಿಗೆ. ತಾನೇ ದುಡುಕಿಬಿಟ್ಟೆ ಎನಿಸುತ್ತಿತ್ತು. ಅವರ ಮನೆಗೆ ಹೋಗಿ ಆ ಪುಸ್ತಕದಲ್ಲಿರುವ ಪತ್ರವನ್ನು ವಾಪಾಸು ತಂದುಬಿಡಲೇ? ಎನಿಸಿದರೂ ಇನ್ನೊಂದು ದಿನ ಕಾಯೋಣ ಕಾಯೋಣ ಎನ್ನುತ್ತಾ ಮುಂದೂಡಿ ದೂಡಿ ಊರಿಗೆ ಮರಳುವ ದಿನವೂ ಬಂದುಬಿಟ್ಟಿತ್ತು.


ಇವತ್ತು ರಾತ್ರಿಗೇ ಬಸ್ಸು ಬುಕ್ಕಾಗಿತ್ತು. ರತ್ನಾಕರನ ಬಳಿ ಊರಿಗೆ ಹೊರಟೆ ಎಂದದರೆ ಅವನಿಗೇನಾದರೂ ಇಷ್ಟೊತ್ತಿನ ಒಳಗೇ ಆ ಪತ್ರ ಸಿಕ್ಕಿ ತನ್ನ ಮನಸ್ಸು ಅರ್ಥವಾಗಿದ್ದರೆ ಅದಕ್ಕೆ ಉತ್ತರ ಕೊಟ್ಟೇ ಕೊಡುತ್ತಾನೆ ಎಂಬ ಆಸೆಯಲ್ಲಿ ದೇವಸ್ಥಾನದ ಬಳಿ ಕಪ್ಪಾಗುಗುವವರೆಗೂ ಕಾದಳು. ರತ್ನಾಕರ ಬರದಿದ್ದಕ್ಕೆ ವಾಪಾಸಾಗುವಾಗ ಅವನ ಮನೆ ಹೊಕ್ಕಳು. ಅವನೇನೋ ಬರೆಯುತ್ತಿದ್ದ. ಇವಳನ್ನು ನೋಡಿದ್ದೆ ‘ಕಾಫಿ ಕುಡಿಯೋಕೊಬ್ರು ಸಿಕ್ರು’ ಎಂದು ಎದ್ದ. ಶರಾವತಿ ಪದಬಂಧ ತುಂಬುತ್ತಾ ‘ಇವತ್ ನಾನು ಊರಿಗ್ ಹೊರ್ಟೆ’ ಎಂದಳು. ‘ಯಾಕೇ..? ಈಸಲ ಇಷ್ಟ್ ಬೇಗ’ ಎಂದು ಅಚ್ಚರಿಯಲ್ಲಿ ಕೇಳಿದ. ‘ಚಾಲಿ ಸುಲಿಯೋದುಂಟು, ಹೋದ್ವರ್ಷ ಮಿಷನ್ನಿಗೆ ಕಳ್ಸಿದ್ರಿಂದ ಗೋಟೇ ಹೆಚ್ಚಾಯ್ತು, ಮತ್ತೆ ಒಡಕು ಅಡಕೆನೇ ಜಾಸ್ತಿ , ಅದ್ಕೇ ಈ ಸಲ ನಾವೇ ಸುಲ್ದು ಮುಗಿಸ್ತೇವೆ’ ಎಂದಳು., ‘ಹಾಗಿದ್ರೆ ಮತ್ತೆ ಬರೋದು ಮುಂದಿನ ವರ್ಷನೇ ಅಲ್ವಾ?’ ಎಂದು ನಕ್ಕ. ಶರಾವತಿ ನಗಲಿಲ್ಲ. ‘ಯಾವುದಾದರೂ ಪುಸ್ತಕ ಬೇಕಿದ್ರೆ ತಗೊಂಡ್ಹೋಗಿ’ ಎಂದಾಗ ಶರಾವತಿಗೂ ಆ ಕಾದಂಬರಿಯಲ್ಲಿ ಪತ್ರ ಹಾಗೇ ಇದೆಯೇ ಎಂದು ನೋಡುವ ಕುತೂಹಲವಾಗಿ ಪುಸ್ತಕದ ಶೆಲ್ಫಿನಲ್ಲಿ ಆ ಕಾದಂಬರಿಯನ್ನು ಹುಡುಕೇ ಹುಡುಕಿದಳು, ಸಿಗಲಿಲ್ಲ. ರತ್ನಾಕರನನ್ನು ಕೇಳಿದರೆ ‘ನೀವ್ ತಂದ್ಕೊಟ್ಟ ಮರುದಿನನೇ ನನ್ ಫ್ರೆಂಡ್ ಒಬ್ರು ತಗೊಂಡೋದ್ರು’ ಎಂದುಬಿಟ್ಟ. ಇನ್ಯಾವತ್ತು ಆ ಪತ್ರ ಸಿಕ್ಕು ಏನು ಬಾನಗಡಿ ಆಗುವುದಿಯೋ ಎಂದು ಭಯವಾಯಿತು, ಒಂದುವೇಳೆ ಗಾಯತ್ರಿ ವಾಪಾಸು ಬಂದು ಅವಳ ಕೈಗೆ ಸಿಕ್ಕರೆ ಎಂದು ಢವ ಢವಗುಟ್ಟಿತು. ಪತ್ರ ಇಟ್ಟಿದ್ದೆ ಎಂದು ಹೇಳಿಬಿಡಲೇ? ಹೇಳುವುದಾರೂ ಹೇಗೇ? ಕೆಲವೊಂದನ್ನು ಬಾಯೊಡೆದು ಹೇಳಲು ಸಾದ್ಯವಿಲ್ಲ. ಅವನು ಮಾಡಿಕೊಟ್ಟಿದ್ದ ಕಾಫಿ ಕುಡಿಯುವಷ್ಟರಲ್ಲಿ ಮೈಯ್ಯೆಲ್ಲ ಬೆವೆತು ಅಲ್ಲಿರಲಾಗದೇ ಹೊರಟುಬಿಟ್ಟಳು. ಹಿಂದೆಯೇ ಬಂದ ರತ್ನಾಕರ ‘ಪರಿಚಯ ಆಗಿ ವರ್ಷ ಆದ್ರೂ ನಿಮ್ ನಂಬರೂ ಇಲ್ಲ, ಬೆಸ್ಟ್ ಫ್ರೆಂಡ್ಸ್ ಅನ್ನೋದು ದಂಡಕ್ಕೆ’ ಎಂದು ನಕ್ಕ. ಶರವಾತಿಯ ಕಣ್ಣಲ್ಲಿ ತೆಳ್ಳಗೆ ನೀರು ಆವರಿಸುತ್ತಿತ್ತು. ಅವಳ ನಂಬರನ್ನು ಸೇವ್ ಮಾಡಿಕೊಂಡು, ನಕ್ಕು, ‘ಪಿಂಕ್ ಟ್ರಂಪೆಟ್’ ಎಂದ. ಶರಾವತಿ ಅಪ್ರತಿಭಳಾಗಿ ನೋಡಲು ‘ಹಾಗೇ ಸೇವ್ ಮಾಡ್ಕೊಂಡಿದೀನಿ.. ನೀವೂ ಈ ಹೂವಿನ್ ಹಾಗೇ ಅಲ್ವಾ? ಫೆಬ್ರುವರಿ ಮಾರ್ಚ್ ಅಂದ್ರೆ ಬರ್ತೀರ, ಒಂದೆರಡ್ ತಿಂಗಳು ಅಬ್ಬರ ಮಾಡ್ತೀರ, ಹೊರಟೋಗ್ತೀರ.. ಮತ್ತೆ ನಿಮ್ಮನ್ನ ನೋಡಬೇಕಂದ್ರೆ ಇನ್ನೊಂದ್ ಪಿಂಕ್ ಟ್ರಂಪೆಟ್ ಸೀಸನ್ ಬರೋತನಕ ಕಾಯಬೇಕು’ ಎಂದು ಜೋರಾಗಿ ನಕ್ಕ. ಶರಾವತಿಯೂ ನೋವನ್ನೆಲ್ಲ ಒಳಗೆಳೆದುಕೊಂಡು ನೇತ್ರಳ ಹಾಗೇ ದೊಡ್ಡಕೆ ನಕ್ಕುಬಿಟ್ಟಳು..


Exit mobile version