Site icon Vistara News

Budget 2024: ಇಂದು ಕೇಂದ್ರ ಬಜೆಟ್, ಕರ್ನಾಟಕದ ನಿರೀಕ್ಷೆಗಳೇನು?

nirmala seetharaman state

ಬೆಂಗಳೂರು: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Finanance Minister Nirmala Seetharaman) ಅವರು ಮಧ್ಯಂತರ ಬಜೆಟ್‌ (Interim Budget 2024) ಮಂಡಿಸಲಿದ್ದು, ಈ ಚುನಾವಣಾ ಪೂರ್ವ ಬಜೆಟ್‌ನಲ್ಲಿ ಕರ್ನಾಟಕ್ಕೆ ಏನೇನು ಕೊಡುಗೆ ನೀಡಲಿದ್ದಾರೆ ಎಂಬ ಕುತೂಹಲ ಗರಿಗೆದರಿದೆ.

ಬೆಂಗಳೂರಿನ ಸಬ್ ಹರ್ಬನ್ ರೈಲಿಗೆ ಹೆಚ್ಚಿನ ಅನುದಾನ, ರಾಯಚೂರಿಗೆ ಏಮ್ಸ್ ಆಸ್ಪತ್ರೆ ಮಂಜೂರು ಮಾಡುವ ಬಗ್ಗೆ ಬೇಡಿಕೆಗಳಿದ್ದವು. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ 5495 ಕೋಟಿ ವಿಶೇಷ ಅನುದಾನದ ನಿರೀಕ್ಷೆಯಿದೆ. ಭದ್ರ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಮಾನ್ಯತೆ, ಮೇಕೆದಾಟು, ಎತ್ತಿನಹೊಳೆ, ಮಹದಾಯಿ ಯೋಜನೆಗಳಿಗೆ ಹೆಚ್ಚಿನ ನೆರವು ನಿರೀಕ್ಷಿಸಲಾಗಿದೆ.

ಹೊಸ ರೈಲ್ವೆ ಯೋಜನೆಗಳು, ಹೊಸ ರೈಲುಗಳ ಘೋಷಣೆ, ಹೊಸ ಹೆದ್ದಾರಿ ಯೋಜನೆಗಳ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಇದೆ. ಗುಂಡ್ಲುಪೇಟೆ, ನಂಜನಗೂಡು, ಮತ್ತು ಮೈಸೂರು ಮೂಲಕ ಕೊಳ್ಳೆಗಾಲ, ಕೇರಳ ಸಂಪರ್ಕಿಸುವ ಎನ್‌ಎಚ್- 766 ರಸ್ತೆ ಅಗಲೀಕರಣ ಆಗಬೇಕಿದೆ. ಮಳವಳ್ಳಿ ಮತ್ತು ಕೊಳ್ಳೆಗಾಲ ಮೂಲಕ ಕರ್ನಾಟಕದ ಕನಕಪುರ ಮತ್ತು ತಮಿಳುನಾಡು ಸಂಪರ್ಕಿಸುವ ಎನ್ಎಚ್ 948 ಯೋಜನೆ ಘೋಷಿಸುವ ನಿರೀಕ್ಷೆ ಆಗಬೇಕು.

ಬೆಳಗಾವಿ ನಗರದಲ್ಲಿ ಚತುಷ್ಪಥ ಎಲಿವೇಟೆಡ್ ರಸ್ತೆ ಕಾರಿಡಾರ್ ಯೋಜನೆ ಹಾಗೂ ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗಗಳು ಘೋಷಣೆಗೆ ಬಾಕಿ ಇವೆ. ಪುಣೆ ಬೆಂಗಳೂರು ರಸ್ತೆಯಲ್ಲಿ ಎಲಿವೇಟೆಡ್ ಕಾರಿಡಾರ್ ಯೋಜನೆ ಘೋಷಣೆಯಾಗಬೇಕಿದೆ. 60 ಕಿಲೋ ಮೀಟರ್ ಉದ್ದದ ಬೆಂಗಳೂರು ಟನೆಲ್ ಯೋಜನೆಗೆ ಅನುದಾನ ನೀಡಬೇಕು. ಹೆಬ್ಬಾಳ ಸರ್ಜಾಪುರ ಮೆಟ್ರೋ ಮಾರ್ಗ ಹಾಗೂ ಬಿಡದಿವರೆಗೆ ವಿಸ್ತರಣೆ ಮಾಡಲು ಕೇಳಿಕೊಳ್ಳಲಾಗಿದೆ.

ಬೆಂಗಳೂರಲ್ಲಿ ನೆರೆ ನಿಗ್ರಹ ಮೂಲಸೌಕರ್ಯ ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್‌ದ 3000 ಕೋಟಿ ಆರ್ಥಿಕ ನೆರವು ಬರಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನವನ್ನು 100 ದಿನಗಳಿಂದ 150 ದಿನಗಳಿಗೆ ಹೆಚ್ಚಿಸುವ, ರಾಜ್ಯಕ್ಕೆ ಬರ ಪರಿಹಾರ ಘೋಷಣೆ ಮಾಡುವರೆಂದು ನಿರೀಕ್ಷಿಸಲಾಗಿದೆ.

ಜಲ ಜೀವನ್ ಮಿಷನ್‌ಗೆ ಹೆಚ್ಚಿನ ಅನುದಾನ, ಹೊಸ ರೈಲ್ವೆ ಮಾರ್ಗ, ರಾಜ್ಯ ರೈಲ್ವೆ ಹಳಿ ಡಬ್ಲಿಂಗ್, ರೈಲ್ವೆ ನಿಲ್ದಾಣಗಳ ಆಧುನೀಕರಣ, ರೈಲ್ವೆ ಲೈನ್ ವಿದ್ಯುದೀಕರಣ, ಕಾಫಿ ಬೆಳೆಗಾರರು ಪಡೆದಿರುವ ಸಾಲದ ಮೇಲಿನ ಬಡ್ಡಿಗೆ ಸಬ್ಸಿಡಿ, ಬೇರೆ ಬೆಳೆಗಳಂತೆ ಹವಾಮಾನ ಆಧಾರಿತ ಬೆಳೆ ವಿಮೆಯ ವ್ಯಾಪ್ತಿಗೆ ಕಾಫಿ ಬೆಳೆ ಸೇರಿಸುವ ನಿರೀಕ್ಷೆ, ಕೊಬ್ಬರಿ ಬೆಳೆಗೆ ಬೆಂಬಲ ಬೆಲೆ, ಸೂಕ್ತ ದರ ನಿಗದಿ ದೊರೆಯಬೇಕಿದೆ.

ಸ್ವಾಮಿನಾಥನ್ ಕಮಿಷನ್ ರಿಪೋರ್ಟ್ ಅನುಷ್ಠಾನ ಆಗಬೇಕು. ಕೃಷಿ ಸಲಕರಣೆಗಳ ಮೇಲಿನ ಜಿಎಸ್‌ಟಿ ತೆಗೆಯಬೇಕಿದೆ. ಕಬ್ಬಿನ ದರ ಟನ್‌ಗೆ 4000 ರೂಪಾಯಿ ಘೋಷಣೆ ನಿರೀಕ್ಷೆ ಮಾಡಲಾಗಿದೆ.

ಇದನ್ನೂ ಓದಿ: Budget 2024: ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್ ನಡುವಿನ ವ್ಯತ್ಯಾಸಗಳೇನು?

Exit mobile version