ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ದರ್ಶನ್‌ನನ್ನು (Actor Darshan) ಪೊಲೀಸ್ ಬಂದೋಬಸ್ತ್‌ನಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ಇನ್ಮುಂದೆ ನಟ ದರ್ಶನ್ ಭೇಟಿಗೆ ಬಳ್ಳಾರಿ ಜೈಲಿಗೆ ಸೆಲೆಬ್ರೆಟಿಗಳಿಗೆ ಅವಕಾಶ ಇಲ್ಲ ಎನ್ನಲಾಗಿದೆ.
ಕೇವಲ ಕೈದಿಯ ಧರ್ಮಪತ್ನಿ, ರಕ್ತಸಂಬಂಧಿಗಳು ಮತ್ತು ವಕಾಲತ್ತು ವಹಿಸಿದ ವಕೀಲರಿಗೆ ಮಾತ್ರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಚಿತ್ರರಂಗದ ಕಲಾವಿದರು, ಅಭಿಮಾನಿಗಳು, ರಾಜಕೀಯ ವ್ಯಕ್ತಿಗಳು ಯಾರಿಗೂ ದರ್ಶನ್ ಭೇಟಿಗೆ ಅವಕಾಶ ಇರುವುದಿಲ್ಲ. ಇನ್ನೂ ಸಾಮಾನ್ಯ ಖೈದಿಯಂತೆ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರಲಿದ್ದು, ಗೃಹ, ಮನರಂಜನೆ ಸೌಲಭ್ಯಗಳು, ಕಾರಾಗೃಹದ ನಿಯಮದಂತೆ ಒದಗಿಸಲಾಗುತ್ತದೆ. ನಿಯಮ ಉಲ್ಲಂಘನೆ ಮಾಡುವ ಆಗಿಲ್ಲ. ಬೇರೆ ಕೈದಿಗಳ ಜತೆ ಬೆರೆಯದಂತೆ ಸೂಕ್ತ ಭದ್ರತೆ ನೀಡಲಾಗಿದೆ.
ದರ್ಶನ್‌ಗಿಲ್ಲ ವಿವಿಐಪಿ ಟ್ರೀಟ್ಮೆಂಟ್; ಸಾಮಾನ್ಯ ಖೈದಿಗೆ ಸಿಸಿಟಿವಿ ಕಣ್ಗಾವಲು
ಈಗಾಗಲೇ ನಟ ದರ್ಶನ್ ಬಳ್ಳಾರಿ ಜೈಲಿಗೆ ಸ್ಥಳಾಂತರವಾಗಿದ್ದು, ಸಾಮಾನ್ಯ ಖೈದಿಯಂತೆ ಇರಬೇಕಾಗಿದೆ. ಪರಪ್ಪನ ಅಗ್ರಹಾರದಲ್ಲಿದ್ದ ವಿವಿಐಪಿ ಟ್ರೀಟ್ಮೆಂಟ್ ಬಳ್ಳಾರಿ ಜೈಲಿನಲ್ಲಿ ಇರುವುದಿಲ್ಲ. ಇನ್ನೂ ದಿನದ 24/7 ದರ್ಶನ್ ಮೇಲೆ ಸಿಸಿಟಿವಿ ಕ್ಯಾಮೆರಾಗಳ ಕಣ್ಗಾವಲು ಇರಲಿದೆ. ದಿನನಿತ್ಯ ದರ್ಶನ್ ಸಿಸಿಟಿವಿ ಫೂಟೇಜ್ ಪ್ರತ್ಯೇಕವಾಗಿ ಶೇಖರಿಸಿಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ದರ್ಶನ್ ಇರುವ ಕೊಠಡಿಗೆ ಮುಖ್ಯ ವೀಕ್ಷಕ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ಅನುಭವವುಳ್ಳ ಸಿಬ್ಬಂದಿ ವರ್ಗ ನಿಯೋಜನೆ ಮಾಡಲಾಗಿದೆ. ಭದ್ರತೆ ಹಾಗೂ ದರ್ಶನ್ ಚಲನವಲನಗಳ ಬಗ್ಗೆ ತೀವ್ರ ನಿಗಾ ಇಡಲಾಗುತ್ತದೆ. ಕಾರಾಗೃಹದ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿನಿತ್ಯ ಬೀಗ ತೆರೆಯುವ ಹಾಗೂ ಬೀಗ ಮುದ್ರೆ ಮಾಡುವ ಸಮಯದಲ್ಲಿ ಕೂಲಂಕುಷವಾಗಿ ತಪಾಸಣೆ ಮಾಡುವಂತೆ ಸೂಚನೆನೀಡಲಾಗಿದೆ. ಯಾವುದೇ ನಿಷೇಧಿತ ವಸ್ತುಗಳು ದೊರಕದ ಹಾಗೆ ಪ್ರತ್ಯೇಕ ವಹಿಯನ್ನು ನಿರ್ವಹಿಸಬೇಕು. ಪಹರೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ವರ್ಗದವರಿಗೆ ಬಾಡಿ ವೋರ್ನ್ ಕ್ಯಾಮೆರಾ ಧರಿಸಬೇಕು ಎನ್ನಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ