ಬೆಂಗಳೂರು: ಎಲ್ಲೆಡೆ ಅದ್ಧೂರಿ ಪ್ರದರ್ಶನ ಕಾಣುತ್ತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಅಭಿನಯದ ಕೆಜಿಎಫ್-2 ಚಿತ್ರದ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಚಿತ್ರದಲ್ಲಿ ಧೂಮಪಾನವನ್ನು ವೈಭವೀಕರಣ ಮಾಡಿರುವುದು ಸರಿಯಲ್ಲ ಎಂದು ವಾದಿಸಿ ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ಸಂಘ ಸಲ್ಲಿಸಿದ ಅರ್ಜಿ ಇದಾಗಿದೆ. ಚಿತ್ರ ಬಿಡುಗಡೆಗೆ ಮುನ್ನವೇ ಮಾ. 11ರಂದು ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ನಾನಾ ಕಾರಣಗಳಿಗಾಗಿ ಚಿತ್ರ ಬಿಡುಗಡೆಯ ಬಳಿಕ ಅರ್ಜಿ ವಿಚಾರಣೆಗೆ ಬಂದಿದೆ. ಇದೀಗ ಚಿತ್ರ ಬಿಡುಗಡೆಯಾಗಿ ತುಂಬ ಸಮಯ ಆಗಿರುವುದರಿಂದ ಅರ್ಜಿ ಮಾನ್ಯತೆ ಕಳೆದುಕೊಂಡಿದೆ ಎಂದು ಹೇಳಿ ಕೋರ್ಟ್ ಅರ್ಜಿಯನ್ನು ವಜಾ ಮಾಡಿದೆ.
ಬೆಂಗಳೂರಿನ ಕ್ಯಾನ್ಸರ್ ರೋಗಿಗಳ ನೆರವು ಸಂಘ ಮತ್ತು ವರ್ವ್ ಫೌಂಡೇಷನ್ ಸಲ್ಲಿಸಿದ ಅರ್ಜಿಯಲ್ಲಿ, ಕೆಜಿಎಫ್-2 ದಲ್ಲಿ ಧೂಮಪಾನ ಎದ್ದು ಕಾಣುತ್ತಿದೆ. ಚಿತ್ರದಲ್ಲಿ ಸಮಾಜಕ್ಕೆ ಪೂರಕವಾದ ಯಾವುದೇ ಅಂಶಗಳು ಇಲ್ಲ. ಇದರಿಂದಾಗಿ ಸಮಾಜದ ಮೇಲೆ ದುಷ್ಟರಿಣಾಮ ಉಂಟು ಮಾಡುತ್ತದೆ. ಹೀಗಾಗಿ ಚಿತ್ರಕ್ಕೆ ನೀಡಿರುವ ಯು/ಎ ಸೆನ್ಸಾರ್ ಪ್ರಮಾಣ ಪತ್ರ ಹಿಂಪಡೆಯುವಂತೆ ಕೇಂದ್ರ ಸೆನ್ಸಾರ್ ಮಂಡಳಿಗೆ ನಿರ್ದೇಶಿಸಬೇಕೆಂದು ಕೋರಲಾಗಿತ್ತು.
ಇದನ್ನೂ ಓದಿ | Vikram Trailer: ಯಶ್ ಕೈಲಿದ್ದ ʼದೊಡ್ಡಮ್ಮʼ ಇದೀಗ ಕಮಲ್ ಹಾಸನ್ ಕೈಯಲ್ಲಿ!
ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದೆ. ಈಗಾಗಲೇ ಕೆಜಿಎಫ್-2 ಬಿಡುಗಡೆಗೊಂಡಿದೆ. ಹೀಗಾಗಿ ಅರ್ಜಿ ವಿಚಾರಣಾ ಮಾನ್ಯತೆ ಕಳೆದುಕೊಂಡಿದೆ ಎಂದು ಸರ್ಕಾರದ ಪರ ವಿಜಯಕುಮಾರ್ ಪಾಟೀಲ ವಾದ ಮಂಡಿಸಿದ್ದರು.
ಸಾಧನೆಯ ಹಾದಿಯಲ್ಲಿ
ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರವು ʻಸಾವಿರದʼ ಸಾಧನೆ ಮಾಡಿದ 4ನೇ ಭಾರತೀಯ ಸಿನಿಮಾವಾಗಿ ದಾಖಲಾಗಿದೆ. ಆರ್ ಆರ್ ಆರ್, ದಂಗಲ್ ಮತ್ತು ಬಾಹುಬಲಿ: ದಿ ಕನ್‌ಕ್ಲೂಷನ್ ಸಾವಿರ ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಪಡೆದ ಇತರ ಭಾರತೀಯ ಚಿತ್ರಗಳು.
ಸಂಜಯ್ ದತ್, ಪ್ರಕಾಶ್ ರಾಜ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಅವರೂ ತಾರಾಗಣದಲ್ಲಿರುವ ಕೆಜಿಎಫ್ ಕಳೆದ ಏಪ್ರಿಲ್ 14ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಮೊದಲ ದಿನವೇ ₹134.50 ಕೋಟಿ ದೇಶೀಯ ಕಲೆಕ್ಷನ್ ದಾಖಲಿಸಿ ಸಾಧನೆ ಮಾಡಿತ್ತು. ಅನಾಥ ಬಡತನದಿಂದ ಚಿನ್ನದ ಗಣಿಯ ರಾಜನಾಗುವ ಕಥೆಯನ್ನು ಹೊಂದಿರುವ ಚಿತ್ರ ತನ್ನ ಅದ್ಭುತವಾದ ಮೇಕಿಂಗ್ ಮೂಲಕ ಗಮನ ಸೆಳೆದಿದೆ.
ಇದನ್ನೂ ಓದಿ | ಹಿರಿಯ ಹಾಸ್ಯ ಕಲಾವಿದ KGF ಮೋಹನ್ ಜುನೇಜಾ ವಿಧಿವಶ