Site icon Vistara News

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

Actor Darshan

ಬಳ್ಳಾರಿ/ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Chitradurga Renukaswamy murder case) ಬಂಧಿಯಾಗಿರುವ ನಟ ದರ್ಶನ್ (Actor Darshan) ರಾಜಾತಿಥ್ಯ ಪಡೆದ ಹಿನ್ನೆಲೆಯಲ್ಲಿ ಇದೀಗ ಕೋರ್ಟ್‌ ಆದೇಶದ ಮೇರೆಗೆ ಬಳ್ಳಾರಿ ಜೈಲಿಗೆ (bellary jail) ಸ್ಥಳಾಂತರ ಆಗಿದ್ದಾರೆ. ಬಿಗಿ ಭದ್ರೆತೆಯೊಂದಿಗೆ ಪರಪ್ಪನ ಅಗ್ರಹಾರದಿಂದ ಬಳ್ಳಾರಿಗೆ ಜೈಲಿಗೆ ದರ್ಶನ್‌ನನ್ನು ಕರೆತರಲಾಯಿತು.

ಪೊಲೀಸರು ದರ್ಶನ್ ಇದ್ದ ವಾಹನಕ್ಕೆ ಸಂಪೂರ್ಣ ಬಟ್ಟೆ ಕಟ್ಟಿ ಯಾರಿಗೂ ಕಾಣಿಸಬಾರೆಂದು ಕರೆತಂದಿದ್ದರು. ಬಳ್ಳಾರಿ ಜೈಲಿಗೆ ಬಂದ ನಟ ದರ್ಶನ್‌ರಿಗೆ ಮೊದಲು ಮೆಡಿಕಲ್ ಚೆಕಪ್‌ಗೆ ಕರೆದೊಯ್ದಲಾಗಿತ್ತು. ಬಳಿಕ ದರ್ಶನ್‌ಗೆ ನಿಗದಿ ಮಾಡಿದ್ದ ಸೆಲ್‌ಗೆ ಬಿಡಲಾಗಿದೆ.

ಗಾಡಿಗೆ ಅಡ್ಡ ಬಂದ ಹಸುಗಳು

ನಟ ದರ್ಶನ್‌ ಕರೆತರುವಾಗ ಸೆಂಟ್ರಲ್ ಜೈಲ್ ರಸ್ತೆಯಲ್ಲಿ ಹತ್ತಾರು ಹಸುಗಳು ಅಡ್ಡಬಂದಿದ್ದವು. ಬಳಿಕ ಪೊಲೀಸ್‌ ಸಿಬ್ಬಂದಿಯೇ ಹಸುಗಳು ಬೇಗ ಹೋಗಲಿ ಎಂದು ಓಡಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಓಡಿಸುವ ವೇಳೆ ಬೆದರಿದ ಘಟನೆಯು ನಡೆದಿದೆ.

ಹೈದರ್‌ಬಾದ್‌ ರಸ್ತೆ ಮೂಲಕ ಬಳ್ಳಾರಿ ತಲುಪಿದ ಪೊಲೀಸರು

ಇನ್ನೂ ಪೊಲೀಸರು ಮಾಧ್ಯಮಗಳ ಕಣ್ತಪ್ಪಿಸಿ ದರ್ಶನ್‌ನನ್ನು ಹೈದರ್‌ಬಾದ್ ರಸ್ತೆಯಲ್ಲಿ ಕರೆದುಕೊಂಡು ಹೋದರು. ಬಳ್ಳಾರಿಗೆ ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಮಾರ್ಗವಾಗಿ ಕರೆದುಕೊಂಡು ಹೋಗಿದ್ದಾರೆ. ಎರಡು ಬೊಲೇರೋ ಹಾಗೂ ಒಂದು ಟಿಟಿ ವಾಹನ ಪ್ರತ್ಯೇಕವಾಗಿ ಗುರುವಾರ ಬೆಳಗ್ಗೆ 5:28ಕ್ಕೆ ದೇವನಹಳ್ಳಿ ಟೋಲ್ ಪಾಸ್ ಆದ ದೃಶ್ಯ ಲಭ್ಯವಾಗಿದೆ. ದೇವನಹಳ್ಳಿ ಸಾದಹಳ್ಳಿ ಟೋಲ್‌ನಲ್ಲಿ ಪೊಲೀಸರಿಂದ ದರ್ಶನ್ ಕರೆದುಕೊಂಡು ಹೋಗುತ್ತಿರುವ ವಾಹನಗಳು ಪಾಸ್ ಮಾಡಿಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಹಿನ್ನೆಲೆಯಲ್ಲಿ ಕಲಬುರಗಿ ಜೈಲಿಗೆ ಗುರುವಾರ ಆರೋಪಿ ನಾಗರಾಜ್ ಶಿಫ್ಟ್ ಆಗಲಿದ್ದಾರೆ. ನಟ ದರ್ಶನ ಮ್ಯಾನೇಜರ್ ಆಗಿದ್ದ ನಾಗರಾಜ್ A-11 ಆಗಿದ್ದು, ಬೆಂಗಳೂರಿನಿಂದ ಕಲಬುರಗಿ ಜೈಲಿಗೆ ಸಂಜೆ 4 ಗಂಟೆ ತಲುಪಲಿದ್ದಾರೆ. ಈಗಾಗಲೆ ಬೆಂಗಳೂರಿನಿಂದ ಕಲಬುರಗಿಗೆ ಬಿಗಿ ಭದ್ರತೆಯಲ್ಲಿ ಕರೆತರಲಾಗುತ್ತಿದೆ. ಇತ್ತ ಶಿವಮೊಗ್ಗ ಜೈಲಿಗೆ A6 ಆರೋಪಿ ಜಗದೀಶ್ ಹಾಗೂ ಆ12 ಲಕ್ಷ್ಮಣ ಕರೆತರಲಿದ್ದಾರೆ. ರಾಜ್ಯದಲ್ಲೇ ಹೈ ಟೆಕ್ ಕಾರಾಗೃಹ ಎಂಬ ಖ್ಯಾತಿ ಹೊಂದಿರುವ ಶಿವಮೊಗ್ಗ ಜೈಲು ಕೊರಿಯನ್ ಮಾದರಿಯಲ್ಲಿದೆ. 270 ಕೊಠಡಿ ಹೊಂದಿರುವ ಕೇಂದ್ರ ಕಾರಗೃಹದಲ್ಲಿ 773 ಜನ ಖೈದಿಗಳು ಇದ್ದಾರೆ.

ಬಳ್ಳಾರಿ ಜೈಲಿಗೆ ಶಿಫ್ಟ್‌ ಮಾಡಿದ್ದು ಯಾಕಾಗಿ?

ಪರಪ್ಪನ ಅಗ್ರಹಾರ ಜೈಲಿನೊಳಗೆ ಕಾಫಿ ಕಪ್‌ ಹಿಡಿದು ಸಿಗರೇಟು ಸೇದುತ್ತಾ ಕೈದಿಗಳ ಜತೆಗೆ ಕುಳಿತಿರುವ ನಟ ದರ್ಶನ್‌ನ (Actor Darshan) ಫೋಟೊಗಳು ವೈರಲ್‌ ಆಗಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಎ2 ಆರೋಪಿ ಆಗಿರುವ ನಟ ದರ್ಶನ್‌ ಮತ್ತು ಗ್ಯಾಂಗ್‌ ಬಂಧಿಯಾಗಿದೆ.

ಜೈಲಿನ ಒಳಗೆ ದರ್ಶನ್‌ ಬಿಂದಾಸ್‌ ಆಗಿದ್ದರು. ಬ್ಯಾರಕ್‌ನಿಂದ ಹೊರಗೆ ಚೇರ್‌ನಲ್ಲಿ ಕುಳಿತಿರುವ ನಟ ದರ್ಶನ್‌ ಬಲಗೈನಲ್ಲಿ ಕಪ್‌, ಎಡಗೈನಲ್ಲಿ ಸಿಗರೇಟ್‌ ಸೇದುವ ಫೋಟೋ ವೈರಲ್‌ ಆಗಿತ್ತು. ದರ್ಶನ್‌ ಜತೆಗೆ ವಿಲ್ಸನ್‌ ಗಾರ್ಡನ್‌ ನಾಗ, ಎ11 ಆರೋಪಿ ದರ್ಶನ್‌ ಮ್ಯಾನೇಜರ್‌ ನಾಗರಾಜ್‌, ಕುಳ್ಳ ಸೀನಾ ಒಟ್ಟಾಗಿ ಕೂತು ಹರಟೆ ಹೊಡೆದಿದ್ದರು.

ಯಾವ್ಯಾವ ಜೈಲಿಗೆ ಯಾರು?

  1. 1.ಬಳ್ಳಾರಿ‌ ಜೈಲಿಗೆ ದರ್ಶನ್
    2.ಮೈಸೂರು ಜೈಲಿಗೆ ಪವನ್, ರಾಘವೇಂದ್ರ ನಂದೀಶ್
  2. 3.ಶಿವಮೊಗ್ಗ ಜೈಲಿಗೆ ಜಗದೀಶ್, ಲಕ್ಷ್ಮಣ್
  3. 4.ಧಾರವಾಡ ಜೈಲಿಗೆ ಧನರಾಜ್
  4. 5.ವಿಜಯಪುರ ಜೈಲಿಗೆ ವಿನಯ್
  5. 6.ಕಲಬುರುಗಿ ಜೈಲಿಗೆ ನಾಗರಾಜ್
  6. 7.ಬೆಳಗಾವಿ ಜೈಲಿಗೆ ಪ್ರದೂಶ್

ಜೈಲು ಸಿಬ್ಬಂದಿ ಜತೆ ಅಳಲು ತೋಡಿಕೊಂಡ ದರ್ಶನ್

ಈಗಾಗಲೇ ಸೆರೆಮನೆ ವಾಸದ ಕಷ್ಟ ಅನುಭವಿಸಿರುವ ನಟ ದರ್ಶನ್ ಈ ಕುರಿತು ಜೈಲು ಸಿಬ್ಬಂದಿ ಜತೆ ದುಃಖ ವ್ಯಕ್ತಪಡಿಸಿದ್ದರು. ಇದೆಲ್ಲಾ ಬೇಕಿತ್ತಾ ನಂಗೆ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.

ನಟ ದರ್ಶನ್ ಅಭಿನಯದ ಚೌಕ ಚಿತ್ರವನ್ನು ಈ ಹಿಂದೆ ಬಳ್ಳಾರಿ ಜೈಲಿನಲ್ಲಿಯೇ ಚಿತ್ರೀಕರಣ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿನ ಖೈದಿಗಳ ಜೊತೆ ನಟ ಸಹಜ ಮಾತುಕತೆ ನಡೆಸಿದ್ದರು. ಬಳ್ಳಾರಿ ಜೈಲಿನ ಕಷ್ಟಗಳು, ಅಲ್ಲಿನ ವಾತಾವರಣದ ಬಗ್ಗೆ ಅಲ್ಲಿನ ಖೈದಿಗಳಿಂದ ತಿಳಿದುಕೊಂಡಿರುವ ದರ್ಶನ್‌ಗೆ ಈಗ ತಾನೇ ಆ ಜೈಲಿಗೆ ಖೈದಿಯಾಗಿ ವರ್ಗಾವಣೆಯಾಗುತ್ತಿರುವುದು ಆತಂಕ ಹೆಚ್ಚಿಸಿದೆ ಎನ್ನಲಾಗಿದೆ.

ಸಾಮಾನ್ಯ ಸೆಲ್ ನಲ್ಲಿ ದರ್ಶನ್ ?

ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ವಿಐಪಿ ಸೆಲ್‌ಗಳು ಇಲ್ಲ. ಇಲ್ಲಿ ಎಲ್ಲವೂ ಸಾಮಾನ್ಯ ಸೆಲ್‌ಗಳಾಗಿದೆ. ಹೀಗಾಗಿ ದರ್ಶನ್ ಕೂಡ‌ ಇಲ್ಲಿರುವ ಎಲ್ಲ ಕೈದಿಗಳಂತೆಯೇ ಸಾಮಾನ್ಯ ಕೈದಿಯಾಗಿ‌ ಮುಂದುವರಿಯಬೇಕಿದೆ. ಕೇಂದ್ರ ಕಾರಾಗೃಹದ ಹೊರ ಭದ್ರತಾ ವಿಭಾಗದ ಸೆಲ್‌ನಲ್ಲಿ ನಟ ದರ್ಶನ್ ಅವರನ್ನು ಇರಿಸಲಾಗುತ್ತದೆ. ಹೊರ ಭದ್ರತಾ ವಿಭಾಗದಲ್ಲಿ ಒಟ್ಟು 11 ಸೆಲ್‌ಗಳಿದ್ದು, ಒಂದು ಸೆಲ್‌ನಲ್ಲಿ ಇಬ್ಬರು ಕೈದಿಗಳು ಇರುವ ವ್ಯವಸ್ಥೆ ಇದೆ. ಪ್ರತಿಯೊಂದು ಸೆಲ್ 10/10 ಅಡಿ ಅಗಲವನ್ನು ಹೊಂದಿದೆ.

ಇಲ್ಲಿರುವ ಹನ್ನೊಂದು ಸೆಲ್‌ಗಳಿಗೆ ದಿನದ 24 ಗಂಟೆಯೂ ಭದ್ರತೆ ವ್ಯವಸ್ಥೆ ಮಾಡಲಾಗುತ್ತದೆ. ಸೆಲ್ ಮುಂಭಾಗ 20 ಅಡಿ ಅಗಲ 60 ಅಡಿ ಉದ್ದದ ಜಾಗದಲ್ಲಿ ವಾಕಿಂಗ್ ಮಾಡಬಹುದು. ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡಲು 15 ನಿಮಿಷ ಅವಕಾಶವಿದೆ. ಈ ವೇಳೆ ಭದ್ರತೆ ಸಿಬ್ಬಂದಿ ಕೂಡ ಹಾಜರಿರುತ್ತಾರೆ. ಸೆಲ್‌ನ ಒಳಗಡೆ ಬಾತ್ ರೂಂ, ಶೌಚಾಲಯದ ವ್ಯವಸ್ಥೆ ಇದ್ದು, ಸ್ನಾನ ಮಾಡಲು ತಣ್ಣೀರು ಮಾತ್ರ ಇರುತ್ತದೆ. ಈ ಸೆಲ್‌ಗೆ ಎರಡು ಗೇಟ್‌ಗಳಿರುತ್ತವೆ. ಇಲ್ಲಿರುವ ಹನ್ನೊಂದು ಸೆಲ್ ಗಳಲ್ಲಿ ಸದ್ಯ ಶಿವಮೊಗ್ಗ, ಹಾಸನ,ಬೆಂಗಳೂರು, ಮಂಗಳೂರು ಮೂಲದ ಕೈದಿಗಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version