Site icon Vistara News

Siddheshwar swamiji | ಕೋಟ್ಯಂತರ ಮಂದಿಗೆ ಜಗತ್ತನ್ನು, ಅದರ ಸೌಂದರ್ಯವನ್ನು ನೋಡುವ ನಿಜವಾದ ದೃಷ್ಟಿ ನೀಡಿದ ಸಂತ

siddeshwara swamiji

ನಮ್ಮ ನಾಡು ಕಂಡ ಅಪರೂಪದ ಅನುಭಾವಿ ಸಂತರಾದ ವಿಜಯಪುರದ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಭೌತಿಕವಾಗಿ ಇನ್ನಿಲ್ಲವಾದುದು ಅತ್ಯಂತ ದುಃಖದ ಸಂಗತಿ. ಪೂಜ್ಯ ಸ್ವಾಮೀಜಿಯವರು ಪಂಚಭಾಷಾ ಪ್ರವೀಣರಾಗಿದ್ದರು, ವಾಗ್ದೇವಿಯ ಆರಾಧಕರಾಗಿದ್ದರು, ಮಹಾನ್ ಆಧ್ಯಾತ್ಮಿಕ ಜೀವಿಯಾಗಿದ್ದರು. ಸನಾತನ ಶಾಸ್ತ್ರ ಗ್ರಂಥಗಳು ಮತ್ತು ವಚನ ಸಾಹಿತ್ಯವನ್ನು ಆಧುನಿಕ ಸಮಾಜದ ವಿದ್ಯಾವಂತರಿಗೆ ಮನದಟ್ಟಾಗುವಂತೆ ಸರಳವಾಗಿ ಬೋಧಿಸಿ ಅವರ ಆಂತರ್ಯದ ಪರಿವರ್ತನೆಗೆ ಕಾರಣರಾಗಿದ್ದರು. ಕ್ಲಿಷ್ಟಕರವಾದ ವೇದೋಪನಿಷತ್ತುಗಳ ಮಂತ್ರಗಳು ಮತ್ತು ಯೋಗಸೂತ್ರಗಳನ್ನು, ಭಗವದ್ಗೀತೆ ಹಾಗೂ ವಚನ ಶಾಸ್ತ್ರ ಮುಂತಾದುವನ್ನು ಆಧುನಿಕ ವೈಜ್ಞಾನಿಕ ಭಾಷೆಯಲ್ಲಿ ಬೋಧಿಸುತ್ತಿದ್ದರು. ಕಠಿಣವಾದ ತತ್ವಗಳನ್ನು ಜನ ಸಾಮಾನ್ಯರಿಗೆ ನಿಲುಕುವ ಭಾಷೆಯಲ್ಲಿ ಬೋಧಿಸಿ ಪಂಡಿತ ಪಾಮರರಿಗೂ ಜ್ಞಾನ ಸುಧೆಯನ್ನು ಉಣಬಡಿಸುತ್ತಿದ್ದರು.

ಪೂಜ್ಯರು ತೋರುತ್ತಿದ್ದ ನಿಷ್ಕಲ್ಮಶ ಪ್ರೀತಿ, ನಿರ್ಮಲ ಅಂತಃಕರಣ ಸರ್ವರಿಗೂ ಆದರ್ಶ. ಮನದ ಮಲಿನತೆ ಅಳಿದರೆ ನೋಡುವುದೆಲ್ಲವು ದಿವ್ಯವೆ. ಕಾಣುವ ಜಗವೆಲ್ಲವು ದೈವದ ಅಭಿವ್ಯಕ್ತಿಯೇ ಎಂದು ಅರಿತು ಬೋಧಿಸಿದವರು ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು.

ಜಗದ ಎಲ್ಲೆಡೆ ಸಂಚರಿಸಿ ಜ್ಞಾನದ ನುಡಿಗಳನ್ನು ಜಗದ ಜನರಿಗೆ ಬೋಧಿಸಿ, ಅಸಂಖ್ಯಾತ ಭಕ್ತರ ಮನಸ್ಸಿನ ತಮವನ್ನು ಕಳೆದರು. ತಮ್ಮನ್ನು ಆರಾಧಿಸುವ ಬಡವ ಬಲ್ಲಿದರ ನಡುವೆ ತಾವು ತಾವಾಗಿಯೇ ಇದ್ದು ನಿರಾಭಾರಿ ಸಂತರಾಗಿ ಬದುಕಿದರು.

‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಮಹಾ ವಾಕ್ಯಕ್ಕನುಗುಣವಾಗಿ ಪೂಜ್ಯರು ಪ್ರಕೃತಿಯ ಕಣ ಕಣದಲ್ಲಿಯೂ ಪರಬ್ರಹ್ಮ ಚೈತನ್ಯವನ್ನೇ ಕಂಡು ಆನಂದಿಸಿದವರು. ತಮ್ಮ ಪ್ರವಚನಗಳಲ್ಲಿ ಮನುಷ್ಯ ಜನ್ಮದ ಶ್ರೇಷ್ಠತೆಯನ್ನು, ಅವುಗಳಿಂದ ಜನತೆ ಕಲಿಯಬಹುದಾದ ಬದುಕಿನ ಸೂಕ್ಷ್ಮಾತಿ ಸೂಕ್ಷ್ಮ ಪಾಠವನ್ನು ತಿಳಿಸುತ್ತಿದ್ದರು.

ಪೂಜ್ಯರು ತಮ್ಮ ಪ್ರವಚನಗಳ ಮೂಲಕ ಮಹಾವೀರ, ಬುದ್ಧ ಬಸವಾದಿ ಶರಣರ ಹಾಗೂ ನಮ್ಮ ನಾಡಿನ ಎಲ್ಲಾ ದಾರ್ಶನಿಕರ ಶ್ರೇಷ್ಠತೆಯನ್ನು ಆಧುನಿಕರಿಗೆ ಪರಿಚಯಿಸಿದ್ದರು. ಅಂತೆಯೇ ವಿಶ್ವದ ದಾರ್ಶನಿಕರಾದ ಸಾಕ್ರೆಟಿಸ್, ಪ್ಲೇಟೋ, ಅರಿಸ್ಟಾಟಲ್, ಎಪಿಕ್ಯೂರಸ್, ಲಾವೋತ್ಸೆ ಮುಂತಾದ ಪಾಶ್ಚಿಮಾತ್ಯ ತತ್ವಜ್ಞಾನಿಗಳ ತತ್ವಗಳನ್ನು, ಅವುಗಳ ಸಾರ ಸರ್ವಸ್ವವನ್ನು ನಮ್ಮ ಜನರಿಗೆ ಸಾರಿದರು. ಹಾಗೆಯೇ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳು, ಗಣಿತಜ್ಞರು, ಸಮಾಜ ಸುಧಾರಕರು, ರಾಜಕೀಯ ಮುತ್ಸದ್ದಿಗಳು, ತಂತ್ರಜ್ಞರು, ಅರ್ಥ ಶಾಸ್ತ್ರಜ್ಞರು ಮುಂತಾದ ಪುಣ್ಯ ಪುರುಷರ ಶ್ರದ್ಧೆ, ಸಿದ್ಧಿ, ಸಾಧನೆ ಹಾಗೂ ಅವರೆಲ್ಲರ ಜೀವನಾದರ್ಶಗಳನ್ನು ತಮ್ಮ ಪ್ರವಚನಗಳ ಮೂಲಕ ಎಲ್ಲರಿಗೂ ಪರಿಚಯಿಸುತ್ತಿದ್ದುದು ಮಾತ್ರವಲ್ಲ, ಕೋಟ್ಯಂತರ ಮಂದಿಗೆ ಜಗತ್ತನ್ನು ಮತ್ತು ಅದರ ಸೌಂದರ್ಯವನ್ನು ನೋಡುವ ನಿಜವಾದ ದೃಷ್ಟಿಯನ್ನು ನೀಡುತ್ತಿದ್ದರು.

ನಮ್ಮ ಪರಮಪೂಜ್ಯ ಗುರುಗಳಾದ ಜಗದ್ಗುರು ಡಾ. ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರು ಹಾಗೂ ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿರವರು ಪರಸ್ಪರ ಗೌರವಾದರಣೀಯರಾಗಿದ್ದರು. ಪೂಜ್ಯರು ನಮ್ಮ ಶ್ರೀ ಕ್ಷೇತ್ರದಲ್ಲಿ ನಡೆಯುವ ಹಲವಾರು ಧರ್ಮ ಸಮ್ಮೇಳನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳ ದಿವ್ಯ ಸಾನ್ನಿಧ್ಯ ವಹಿಸಿ ತಮ್ಮ ಪ್ರವಚನಗಳ ಮೂಲಕ ಜನರಲ್ಲಿ ಜೀವನ ಮೌಲ್ಯಗಳನ್ನು ಬಿತ್ತುತ್ತಿದ್ದುದು ಎಂದಿಗೂ ಸ್ಮರಣೀಯ.

ಇದನ್ನೂ ಓದಿ | Siddheshwar Swamiji | ಜ್ಞಾನದ ನಿಧಿ, ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ ದೇಹಾಂತ್ಯ

ಹೀಗೆ ನುಡಿದಂತೆ ನಡೆದು ತಮ್ಮ ನಡೆಗೂ ನುಡಿಗೂ ಅಂತರವಿರದಂತೆ ಬಾಳಿದ ನಿಜ ಸಂತರಾದ ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿರವರು ಇನ್ನಿಲ್ಲವಾದುದರಿಂದ ಆಧ್ಯಾತ್ಮಿಕ ಲೋಕಕ್ಕೆ ಭರಿಸಲಾರದ ನಷ್ಟವುಂಟಾಗಿದೆ. ಭಗವಂತನು ಪೂಜ್ಯರ ಅಗಲಿಕೆಯಿಂದ ದುಃಖ ತಪ್ತರಾಗಿರುವ ಭಕ್ತ ವೃಂದಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು, ಪೂಜ್ಯರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲೆಂದು ಆಶಿಸುತ್ತೇವೆ.

-ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ,
ಶ್ರೀ ಆದಿಚುಂಚನಗಿರಿ ಕ್ಷೇತ್ರ, ಮಂಡ್ಯ ಜಿಲ್ಲೆ

Exit mobile version