Site icon Vistara News

ದಶಮುಖ ಅಂಕಣ | ಕೋವಿದ ಗಿರಿಜೆಯ ವರಸುತನಾ

ganesha

ಭೂಮಿಯತ್ತ ಗಣಪತಿಯ ಪಯಣ ಆರಂಭವಾಗಿರಬಹುದು. ಇನ್ನೇನು ಬರಲಿರುವ ಅವನನ್ನು ಸ್ವಾಗತಿಸಲು ನಮ್ಮಲ್ಲಿಯೂ ಉತ್ಸಾಹ ರಂಗೇರಿದೆ. ಇಂಥದ್ದೇ ಸಿದ್ಧತೆಯ ಭಾಗವಾಗಿ ಏನನ್ನೋ ಹುಡುಕುತ್ತಿರುವಾಗ ಈ ಶ್ಲೋಕವೊಂದು ಕಣ್ಣಿಗೆ ಬಿತ್ತು:

ವಿಪ್ರಾಣಾಂ ದೈವತಂ ಶಂಭುಃ/ ಕ್ಷತ್ರಿಯಾಣಾಂ ತು ಮಾಧವಃ

ವೈಶ್ಯಾಣಾಂ ತು ಭವೇತ್‌ ಬ್ರಹ್ಮಾ/ ಶೂದ್ರಾಣಾಂ ಗಣನಾಯಕಃ

ಮನುವಿನದ್ದು ಎಂದು ಹೇಳಲಾಗಿರುವ ಈ ಶ್ಲೋಕ ಕುತೂಹಲ ಕೆರಳಿಸಿದ್ದು ನಿಜ. ಗಣಪತಿ ಎಂದರೆ ವಿಘ್ನ ವಿನಾಶಕ, ಪ್ರಥಮ ವಂದಿತ, ವಿದ್ಯೆ, ನಾಟ್ಯ, ಸಂಗೀತಗಳಿಗೆ ಅಧಿದೇವತೆ, ಸಿದ್ಧಿ ಪ್ರದಾಯಕ, ಯೋಗಿಗಳ ಪಾಲಿಗೆ ಮೂಲಾಧಾರ ಚಕ್ರದ ಮೂಲದೈವ, ವ್ಯಾಸರ ಪಾಲಿಗೆ ಮಹಾಕಾವ್ಯ ಸಂಪಾದಕ, (ಸಾರ್ವಜನಿಕ ಗಣೇಶೋತ್ಸವಗಳ ಮೂಲಕ) ಸಮಾಜ ಸಂಘಟನೆಯ ಮೂಲ ಪುರುಷ… ಇತ್ಯಾದಿ ಬಹಳಷ್ಟು ವಿಶೇಷಣಗಳುಂಟು. ಅವೆಲ್ಲವನ್ನೂ ಮೀರಿ ಗಣಪತಿಯನ್ನು ಧಾನ್ಯಾಧಿದೇವತೆ, ಕೃಷಿದೇವತೆ, ಕಷ್ಟಸಹಿಷ್ಣುಗಳ ಭಗವಂತ ಎಂಬಂತೆ ವರ್ಣಿಸಿರುವುದು ಆಸಕ್ತಿಕರ ಎನಿಸಿತು. ಹಾಗೆಂದೇ ಒಂದು ಲಹರಿಯನ್ನಾಗಿ ವಿಸ್ತರಿಸುವ ಈ ಚೇಷ್ಟೆಗೆ ಮೂಲವಾಯಿತು.

ನಮ್ಮ ಗ್ರಾಮ್ಯ ಜೀವನದ ಜೀವನಾಡಿಯಾದ ಕೃಷಿ ಮತ್ತದರ ಫಸಲಿನ ಸಾಂಕೇತಿಕ ರೂಪವು ಗಣಪತಿಯ ಕಲ್ಪನೆಗೂ ಮೂಲಾಧಾರ ಎಂಬ ವಾದವೂ ಇದೆ. ಹೇಗೆಂದರೆ, ಗಣೇಶನ ಅಪ್ಪ-ಅಮ್ಮನನ್ನು ಸೂರ್ಯ ಮತ್ತು ಭೂಮಿಯ ದ್ಯೋತಕವೆಂದು ಭಾವಿಸಿ, ಮುಂದಿನದನ್ನು ಕಲ್ಪಿಸಿಕೊಳ್ಳೋಣ. ಮಳೆಗಾಲದಲ್ಲಿ ಸೂರ್ಯ ಮೋಡಗಳಲ್ಲಿ ಮರೆಯಾಗಿದ್ದಾನೆ, ಅಂದರೆ ಶಿವ ಮನೆಯೊಳಗಿಲ್ಲದೆ ಕಣ್ಮರೆಯಾಗಿದ್ದಾನೆ. ಋತುಮಾನಕ್ಕೆ ಸರಿಯಾಗಿ ಭೂಮಾತೆಗೆ ಸ್ನಾನ, ಇತ್ತ ಲೋಕಮಾತೆಯೂ ಸ್ನಾನಕ್ಕೆ ಹೋಗಿದ್ದಾಳೆ. ಈ ಭೂಮಿಯಲ್ಲಿ ಫಸಲು ಮೂಡುತ್ತದೆ, ಪಾರ್ವತಿಯಲ್ಲಿ ಗಣಪತಿ ಮೂಡಿದಂತೆ. ಕೆಲಕಾಲದ ನಂತರ ಶಿವ ಮರಳುತ್ತಾನೆ, ಋತುಮಾನದ ಅಂತ್ಯಕ್ಕೆ ಮೋಡ ಚದುರಿ ಸೂರ್ಯ ಮರಳಿದಂತೆ. ಈಗ ಭೂಮಿಯನ್ನು ಸೂರ್ಯ ಸ್ಪರ್ಶಿಸುವುದಕ್ಕೆ ಅಡ್ಡ ನಿಂತಿರುವುದು ಅಲ್ಲಿ ಬೆಳೆದ ಫಸಲು, ಅಂದರೆ ಗಣಪ! ಫಸಲಿನ ಕಟಾವಾಗಲೇ ಬೇಕು, ಆಗಿದೆ. ಕತ್ತರಿಸಿ ರಾಶಿ ಹಾಕಿದ ಬೆಳೆ ಆನೆಯಂತೆ ಕಂಡರೆ ಅಚ್ಚರಿಯೇನು? ಹೀಗೆ ʻಮಣ್ಣಿನ ಮಗʼ ನಮ್ಮ ಗಣಪ ಧಾನ್ಯಾಧಿದೇವತೆಯೂ ಹೌದಲ್ಲವೇ? ಇಷ್ಟಕ್ಕೇ ಮುಗಿಯಲಿಲ್ಲ, ನಮ್ಮ ಈ ಕುಶಾಲಿನ ಕಲ್ಪನೆಯನ್ನು ಇನ್ನೂ ಮುಂದುವರಿಸೋಣ.

ಬೆಳೆಯನ್ನು ದಾಸ್ತಾನು ಮಾಡುವ ಕಣಜಕ್ಕೆ ಲಂಬೋದರ ಎಂದು ಹೆಸರಿಡೋಣ. ಕಣಜ ಮಗುಚಬಾರದೆಂಬ ಕಾಳಜಿಯೇ? ಕೆಳಗೊಂದು ಪೀಠ ಇಟ್ಟು ಮೇಲೆ ಲಂಬೋದರನನ್ನು ಕೂರಿಸಿ. ಕಣಜದ ಬಾಯಿಗೆ ಕೊಳಗವನ್ನಿಟ್ಟು ಮುಚ್ಚಿದರೆ ಮುಖವಾದೀತು. ಈ ಕೊಳಗ ಕಣಜದ ಒಳಗೆ ಇಳಿಯದಂತೆ ತಡೆಯಲು ನೇಗಿಲ ಕುಳವನ್ನು ಅಡಕಿದರೆ ಆನೆಯ ಮುಖಕ್ಕೆ ದಂತವೂ ಮೂಡೀತು. ಕೊಳಗದ ಮೇಲ್ಭಾಗಕ್ಕೆ ಇಕ್ಕೆಲಗಳಲ್ಲಿ ಒಂದೊಂದು ಮೊರ ಸಿಕ್ಕಿಸಿದರೆ ಬಂದನಲ್ಲ ಶೂರ್ಪಕರ್ಣ! ಇನ್ನು ಧಾನ್ಯ ಇರುವಲ್ಲಿ ಇಲಿಗಳೂ ಇರಲೇಬೇಕಲ್ಲ. ಅವುಗಳ ಬೆನ್ನಿಗೆ ಹಾವು! ಹೀಗೆ ಕಣಜ, ಕೊಳಗ, ನೇಗಿಲ ಕುಳ, ಮೊರ ಮುಂತಾದ ಕೃಷಿ ಸಲಕರಣೆಗಳಿಂದಲೂ ಮೂಡಿಬರುವಷ್ಟು ಸರಳ ದೇವರೆಂದರೆ ಗಣಪನೇ ಇರಬಹುದು. ಅದರಲ್ಲೂ ಗಣಪನಿಗೆ ಗರಿಕೆಯೇ ಶ್ರೇಷ್ಠವಾಗುವುದು, ದುಡಿಯುವವರಿಗೆ ಪೌಷ್ಟಿಕ ಆಹಾರ ಬೇಕು ಎಂಬಂತೆ ಉಂಡೆ, ಮೋದಕ, ಕಡುಬುಗಳನ್ನು ಆತನ ಕೈಯಲ್ಲಿರಿಸುವುದು, ಕಬ್ಬು, ಬತ್ತದ ತೆನೆಗಳನ್ನು ಆತನಿಗೆ ನೀಡುವುದು, ಮಣ್ಣಿನ ಮೂರ್ತಿ ನಿಸರ್ಗದಲ್ಲಿ ಲೀನವಾಗುವಂತೆ ನೀರಿನಲ್ಲಿ ವಿಸರ್ಜಿಸುವುದು…ಇಂಥವನ್ನೆಲ್ಲ ನೋಡಿದರೆ ಗಣಪತಿ ಕೃಷಿಗೂ ದೇವತೆಯೆಂಬ ಕಲ್ಪನೆ ಅತಿಶಯವೇನಲ್ಲ.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ: ಸ್ಪರ್ಶದಲ್ಲಿ ಸರ್ವಸ್ವ

ಗಣಪನೇ ಇಷ್ಟಾದ ಮೇಲೆ ಅವರಮ್ಮ ಎಷ್ಟಿರಬೇಡ? ಬಹಳಷ್ಟು ಕಡೆಗಳಲ್ಲಿ ಗೌರಮ್ಮನನ್ನು ಕೂರಿಸುವಲ್ಲಿ ಫಲವಳಿಗೆ ಕಟ್ಟುವ ಕ್ರಮವಿದೆ. ಅಂದರೆ ಮತ್ತೇನಲ್ಲ, ಹಣ್ಣು ಮತ್ತು ತರಕಾರಿಗಳಿಂದ ಮಾಡಿದ ಸರಳ ಅಲಂಕರಣ. ಕೆಲವು ಕಡೆಗಳಲ್ಲಿ ಗೌರಿಯನ್ನು ಮಣ್ಣಿನಲ್ಲಿ ಮಾತ್ರವಲ್ಲದೆ, ಅರಿಶಿನದಲ್ಲಿ ಮಾಡುವ ಪರಿಪಾಠವೂ ಇದೆ. ಈ ಹಬ್ಬದಲ್ಲಿ ದೇವತೆಗೆ ನೈವೇದ್ಯಕ್ಕಿಂತಲೂ ಮುಖ್ಯವಾಗುವುದು ಮೊರದ ಬಾಗಿನ. ಅರಿಶಿನ-ಕುಂಕುಮ-ಬಳೆ-ವಸ್ತ್ರಗಳ ಹೊರತಾಗಿ ಈ ಬಾಗಿನದಲ್ಲಿರುವುದು ಹಣ್ಣು, ತೆಂಗಿನಕಾಯಿ ಮತ್ತು ಧಾನ್ಯಗಳು.

ನಮ್ಮ ದೇಶದಲ್ಲಿ ಚಾಲ್ತಿಯಲ್ಲಿರುವ ಕೆಲವು ಆಚರಣೆಗಳ ಪ್ರಕಾರ, ಗೌರಿ ಪೌರಾಣಿಕ ದೇವತೆಯೇ ಅಲ್ಲ. ಅವಳೊಂದು ಸಸಿಗಳ ಕಟ್ಟು, ಈ ಕಟ್ಟಿನೊಂದಿಗೆ ಕನ್ಯೆಯರ ಆರಾಧನೆಯೂ ನಡೆಯುತ್ತದಂತೆ. ಎಲ್ಲೆಡೆ ಇರುವ ಹಾಗೆ ಇಲ್ಲೂ ಪೂಜೆಗಾಗಿ ಒಂದು ವ್ರತ. ಈ ವ್ರತ-ಕಥೆಗಳು ಮುಕ್ತಾಯ ಆಗುವಾಗ, ರೂಢಿಯಂತೆ ಇಲ್ಲಿಯೂ ಹೇಳಲಾಗುವ ಕಥೆಯೊಂದು ಕುತೂಹಲ ಕೆರಳಿಸುವಂತಿದೆ. ಒಬ್ಬ ಬಡವನಿದ್ದ. ಬಡತನದ ಬೇಗೆ ಸಹಿಸಲಾರದೆ ನೀರಿಗಾದರೂ ಹಾರಿಕೊಳ್ಳುವೆನೆಂದು ನದಿಯತ್ತ ಹೋದ. ಅಲ್ಲೊಬ್ಬಳು ವೃದ್ಧ ಮುತ್ತೈದೆ ಆತನನ್ನು ತಡೆದಳು. ಮನೆಗೆ ಹಿಂದಿರುಗುವಂತೆ ಅವನ ಮನವೊಲಿಸಿ, ತಾನೂ ಅವನೊಂದಿಗೆ ಅವನ ಮನೆಗೆ ನಡೆದಳು. ಅವಳೊಂದಿಗೆ ಸಮೃದ್ಧಿಯೂ ಮನೆತುಂಬಿತು. ಕೆಲವು ದಿನಗಳ ನಂತರ ತನಗೆ ಹೋಗುವುದು ಅನಿವಾರ್ಯ ಎಂದು ಆಕೆ ಹೇಳಿದಳು. ಮಾತ್ರವಲ್ಲ, ಅವನನ್ನು ತನ್ನೊಂದಿಗೆ ನದಿಗೆ ಕರೆದೊಯ್ದು, ನದಿಯಿಂದ ಒಂದು ಹಿಡಿ ಮಣ್ಣನ್ನು ಎತ್ತಿ ಅವನ ಕೈಯಲ್ಲಿಟ್ಟಳು. ಆ ಮಣ್ಣನ್ನು ನಿನ್ನ ಭೂಮಿಯ ಮೇಲೆಲ್ಲಾ ಸಿಂಪಡಿಸಿದರೆ ಸಮೃದ್ಧಿ ಉಳಿದೀತು ಎಂದಳು. ಭಾದ್ರಪದ ಮಾಸದಲ್ಲಿ ಗೌರಿಯ ಸಲುವಾಗಿ ಇದನ್ನು ತಪ್ಪದೇ ಮಾಡಬೇಕು ಎಂಬುದು ಈ ವ್ರತ-ಕಥೆಯ ಸಾರಾಂಶ.

ಈ ಕಥೆಯ ತಾತ್ಪರ್ಯವನ್ನು ಹೀಗೂ ಹೇಳಬಹುದಲ್ಲ. ಬೇಸಿಗೆಯ ಬೇಗೆ ತಾಳಲಾರದೆ ಆತ ನೀರಿನತ್ತ ತೆರಳಿದ. ಅಲ್ಲಿ ಅವನೆದುರು ಬರುವ ವೃದ್ಧ ಮಹಿಳೆಯನ್ನು ಅಂತ್ಯಗೊಳ್ಳುತ್ತಿರುವ ಋತು ಎಂದೋ ಅಥವಾ ಗೌರಿಯಂತೆ ಬಂದು ಹೋಗುವವಳು ಎಂದರೂ ಆದೀತು. ಪೂಜಿಸಿಕೊಳ್ಳುವ ಕನ್ಯೆಯರು ಹೊಸ ಋತು ಎಂದುಕೊಂಡರೆ, ಸಸಿಗಳ ಕಟ್ಟು ಸಮೃದ್ಧಿ ಎನಿಸಬಹುದಲ್ಲ. ಹೊಳೆಯಿಂದ ಎತ್ತಿಕೊಡುವ ಮೆಕ್ಕಲು ಮಣ್ಣು ಬೆಳೆಗಳ ಪೋಷಕ. ಹಾಗಾಗಿ ಗೌರಿಯನ್ನೂ ಗಣಪನಂತೆಯೇ ಕೃಷಿ ದೇವತೆ ಎಂಬ ಕಲ್ಪನೆಯಲ್ಲಿ ತೊಡಗಿಸಿಕೊಳ್ಳಬಹುದು.

ಯಾವುದೇ ಜಾತಿ, ಭಾಷೆ, ಪಂಗಡದ ಬೇಧವಿಲ್ಲದಂತೆ ದೇಶದ ಉದ್ದಗಲಕ್ಕೆ ಪೂಜಿಸಿಕೊಳ್ಳುವವ ಗಣಪ. ವ್ಯಾಖ್ಯೆ, ಕ್ರಿಯೆ ಮತ್ತು ಆಚರಣೆಗಳು ನಂನಮ್ಮ ಭಾವಕ್ಕೆ ಬಿಟ್ಟ ವಿಷಯ. ಆತ ಮಾತ್ರ ಭಾವಜ ವಿಷಯಗಳಿಗೆ ಸಿಲುಕದವ.

ಇದನ್ನೂ ಓದಿ | ಶಬ್ದಸ್ವಪ್ನ ಅಂಕಣ | ಭಾಷಾ ಬೋಧನೆಯ ಸೃಜನಶೀಲ ನೆಲೆಗಳು

Exit mobile version