ರತನ್ ರಮೇಶ್ ಪೂಜಾರಿ
“ಒಂದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆ ಎಂದರೆ ಅರ್ಥ ಮಾಡಿಕೊಳ್ಳಿ, ಆ ದೇಶದ ರಾಜ ಪ್ರಾಮಾಣಿಕನಾಗಿದ್ದಾನೆ ಎಂದು”. ಸಿಎಎ ಕಾಯ್ದೆಗೆ ವಿರುದ್ಧವಾಗಿ ತಿಂಗಳುಗಟ್ಟಲೆ ದೆಹಲಿಯ ರೋಡ್‌ಗಳನ್ನು ಬಂದ್ ಮಾಡಿದ್ದಿರಬಹುದು, ರೈತ ಮಸೂದೆ ಹೆಸರಲ್ಲಿ ಮಾಡಿದ ಹೋರಾಟಗಳಿರಬಹುದು, ದೆಹಲಿಯ ಬೀದಿಗಳಲ್ಲಿ ನಡೆಸಿದ ದಂಗೆಗಳಿರಬಹುದು, ಯುರೋಪಿನಿಂದ ಎರವಲು ಪಡೆದ ಅಸಹಿಷ್ಣುತೆಯಂತಹ (Intolerance) ಶಬ್ದಗಳನ್ನು ಬಳಸಿ ದೇಶಾದ್ಯಂತ ಗೊಂದಲ ಸೃಷ್ಟಿಸುವ ಪ್ರಯತ್ನಗಳು, ಪ್ರಶಸ್ತಿ ವಾಪಸ್ ಗ್ಯಾಂಗ್ ನ ಆಟಾಟೋಪ, ಹೀಗೆ 2014ರಲ್ಲಿ ದೇಶದ ಜನರು ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಆರಿಸಿದ ನಂತರ ವಿವಿಧ ಸ್ತರಗಳಲ್ಲಿ ವಿವಿಧ ರೀತಿಯ ಅರಾಜಕತೆ ಸೃಷ್ಟಿಸುವ ವಿಪರೀತ ಪ್ರಯತ್ನಗಳಾದವು.
ದೇಶದ ಜನರ ಅಪ್ರತಿಮ ಬೆಂಬಲದೊಂದಿಗೆ, ಬಹಳ ಸ್ಥಿತಪ್ರಜ್ಞತೆಯಿಂದ ನರೇಂದ್ರ ಮೋದಿಯವರು ಇವುಗಳನ್ನೆಲ್ಲ ಎದುರಿಸಿ ಯಶಸ್ವಿಯಾಗಿ ಮುಂದೆ ಸಾಗಿಬಂದದ್ದು ಇತಿಹಾಸ. ಆದರೆ ನಾನೀಗ ಬರೆಯ ಹೊರಟಿದ್ದು ನರೇಂದ್ರ ಮೋದಿಯವರ ಬಗ್ಗೆ ಅಲ್ಲ. ಮೇಲಿನ ಮೊದಲ ಪಂಕ್ತಿಯನ್ನು ಎಂದೋ ಹೇಳಿದ್ದ ಭಾರತದ ಮಾಜಿ ಪ್ರಧಾನಿ, ದೇಶದ ಹಲವು ಅಭಿವೃದ್ಧಿ ಕ್ರಾಂತಿಗಳ ಸರದಾರ, ಅಜಾತಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಬಗೆಗೆ.
ಇಂದು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪುಣ್ಯ ಸ್ಮರಣೆ. ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ತಂದೆ ಕೃಷ್ಣ ಬಿಹಾರಿ ವಾಜಪೇಯಿ. ತಾಯಿ ಕೃಷ್ಣ ದೇವಿ. ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದ ನಂತರ, ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಕಲಿಯಲು ಕಾನ್ಪುರದ ಡಿಎವಿ ಕಾಲೇಜಿಗೆ ತೆರಳಿದರು. ಎಲ್‌ಎಲ್‌ಬಿ ಕಲಿಯಲು ಪ್ರಯತ್ನಿಸಿದರೂ, ಪತ್ರಕರ್ತ ಕೆಲಸದ ಮಧ್ಯೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಾಬಾ ಸಾಹೇಬ್ ಆಮ್ಟೆ ಅವರಿಂದ ಪ್ರಭಾವಿತರಾಗಿ 1939 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು. 1942ರಲ್ಲಿ ಮಹಾತ್ಮ ಗಾಂಧೀಜಿಯವರ ಜತೆ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಆಂದೋಲನದಲ್ಲಿ ಭಾಗಿಯಾದರು ಹಾಗೂ ಆ ಸಮಯದಲ್ಲಿ 23 ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದರು. ಈ ಜೈಲುವಾಸವೇ ಅವರನ್ನು ರಾಜಕೀಯ ರಂಗಕ್ಕೆ ಧುಮುಕುವಂತೆ ಪ್ರೇರೇಪಿಸಿತು.
1947ರಲ್ಲಿ ವಾಜಪೇಯಿ ಅವರು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್, ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಆರಂಭಿಸಿದರು. ಶ್ಯಾಮಪ್ರಸಾದ್ ಮುಖರ್ಜಿಯವರಿಂದ ಅತೀವ ಪ್ರಭಾವಿತರಾಗಿ 1951ರಲ್ಲಿ ಭಾರತೀಯ ಜನಸಂಘವನ್ನು ಸೇರಿದರು. 1957ರಲ್ಲಿ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 1968ರಲ್ಲಿ ದೀನದಯಾಳ್ ಉಪಾಧ್ಯಾಯರ ಮರಣಾನಂತರ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಲಾಲ್ ಕೃಷ್ಣ ಆಡ್ವಾಣಿ, ನಾನಾಜಿ ದೇಶಮುಖ್, ಬಾಲರಾಜ್ ಮಧೋಕ್ ಮುಂತಾದವರ ಜತೆ ಕೆಲಸ ಮಾಡಿ ಭಾರತೀಯ ಜನಸಂಘ ಭಾರತೀಯ ರಾಜಕೀಯ ರಂಗದಲ್ಲಿ ಒಂದು ಪ್ರಮುಖ ಪಕ್ಷವಾಗಿ ಹೊರಹೊಮ್ಮಲು ಅಮೋಘ ಕೊಡುಗೆ ನೀಡಿದರು. 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ತಿಂಗಳುಗಳ ಕಾಲ ಜೈಲುವಾಸವನ್ನು ಕೂಡ ಅನುಭವಿಸಿದರು. 1980ರಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಭೈರೋನ್‌ಸಿಂಗ್ ಶೇಖಾವತ್ ಜತೆಗೂಡಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದ್ದಲ್ಲದೆ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.
ವಾಜಪೇಯಿಯವರು ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿ 1996ರಲ್ಲಿ 13 ದಿನ, 1998ರಲ್ಲಿ 13 ತಿಂಗಳು ಹಾಗೂ 1999 ರಲ್ಲಿ ಯಶಸ್ವಿ ಐದು ವರ್ಷಗಳನ್ನು ಪೂರೈಸಿ ದೇಶದ ಇತಿಹಾಸದಲ್ಲಿ ಹಲವಾರು ಹೊಸ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರು. ದೇಶದ ಉದ್ದಗಲವನ್ನು ಜೋಡಿಸಲು ಸುವರ್ಣ ಚತುಷ್ಪಥ ರಸ್ತೆ, ಹಳ್ಳಿ ಹಳ್ಳಿಗಳನ್ನು ಜೋಡಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಮನಸು ಮನಸುಗಳನ್ನು ಬೆಸೆಯಲು ಟೆಲಿಕಾಂ ಕ್ರಾಂತಿ, ದೇಶದ ಸುರಕ್ಷತೆಗೆ ಮೈಲುಗಲ್ಲಾದ ಪೋಖ್ರಾಣ್ ಪರಮಾಣು ಪರೀಕ್ಷೆ, ದೇಶದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ ಸರ್ವ ಶಿಕ್ಷಾ ಅಭಿಯಾನ, ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ (ನಂತರದ ಮನರೇಗಾ) ಫ್ರೀಡಂ ಆಫ್ ಇನ್ಫಾರ್ಮೇಷನ್ ಆಕ್ಟ್ (ನಂತರದ ಆರ್‌ಟಿಐ), ಸರ್ವ ಶಿಕ್ಷಣ ಅಭಿಯಾನ (ನಂತರದ ಆರ್ ಟಿ ಇ), ಮಲ್ಟಿಪರ್ಪಸ್ ನ್ಯಾಷನಲ್ ಐಡೆಂಟಿಟಿ ಕಾರ್ಡ್ ಪ್ರಾಜೆಕ್ಟ್( ನಂತರದ ಆಧಾರ್) ಹೀಗೆ ಹಲವಾರು ಕ್ರಾಂತಿಕಾರಿ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಗಳಿಗೆ ನಾಂದಿ ಹಾಡಿದರು. 1992ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, 1994ರಲ್ಲಿ ಅತ್ಯುತ್ತಮ ಸಂಸದೀಯ ಪಟು ಎಂಬ ಗೌರವ ಹಾಗೂ 2015ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಆರ್ಹವಾಗಿ ಪಾತ್ರರಾದರು.
Politician beyond politics ಎಂಬ ಒಂದು ವಿಭಿನ್ನ ಸಿದ್ಧಾಂತವನ್ನು ವಾಜಪೇಯಿ ಅವರು ಮೈಗೂಡಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ಐದು ವರ್ಷ ಪೂರೈಸಿದ ದೇಶದ ಮೊದಲ ಪ್ರಧಾನಿಯಾಗಿದ್ದರು. ಎನ್‌ಡಿಎ ಸರ್ಕಾರವನ್ನು ಅವರು ಮುನ್ನಡೆಸುತ್ತಿದ್ದಾಗ 24 ಪಕ್ಷಗಳನ್ನು ಜತೆಗೆ ತೆಗೆದುಕೊಂಡು ಹೋಗಬೇಕಾದ ಕ್ಲಿಷ್ಟ ಪರಿಸ್ಥಿತಿ ಅವರದಾಗಿತ್ತು. 24 ಪಕ್ಷಗಳು ಎಂದರೆ 24 ಬೇರೆ ಬೇರೆ ಸಿದ್ಧಾಂತಗಳು, 24 ಬೇರೆ ಬೇರೆ ತರಹದ ಯೋಚನೆಗಳು. ಇವರೆಲ್ಲರನ್ನೂ ಒಟ್ಟಿಗೆ ಮುನ್ನಡೆಸಿಕೊಂಡು ಹೋಗುವಲ್ಲಿ ಸಫಲತೆ ಕಂಡರು. ಬಿಹಾರದ ಎರಡು ಪಕ್ಷಗಳನ್ನೇ ತೆಗೆದುಕೊಳ್ಳಿ. ಜೆಡಿಯು ಹಾಗೂ ಎಲ್‌ಜೆಪಿ ಪಕ್ಷಗಳು ಒಬ್ಬರಿಗೊಬ್ಬರು ವಿರೋಧಿಯಾಗಿದ್ದರು. ಆದರೆ ವಾಜಪೇಯಿ ಅವರ ಜತೆ ಇಬ್ಬರೂ ಮೌನವಾಗಿ ಮುಂದೆ ಸಾಗುತ್ತಿದ್ದರು. ‘ಸ್ಥಾನಕ್ಕಿಂತ ಉದ್ದೇಶ ದೊಡ್ಡದು’ ಎಂದು ಮನವರಿಕೆ ಮಾಡಿಸುವಲ್ಲಿ ಸಫಲರಾಗಿ ಎಲ್ಲರನ್ನೂ ಮುಂದೆ ತೆಗೆದುಕೊಂಡು ಹೋಗುವ ಚಾಕಚಕ್ಯತೆ ವಾಜಪೇಯಿ ಅವರಿಗೆ ಸಿದ್ಧಿಸಿತ್ತು.
1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಉಳಿದ ವಿಪಕ್ಷದವರು ದೇಶದ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯನ್ನು ವಿರೋಧಕ್ಕಾಗಿ ವಿರೋಧಿಸುತ್ತಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ವಿಷಯ ಬಂದಾಗ ವಿಪಕ್ಷದವರು ನಾವೆಲ್ಲ ಒಗ್ಗಟ್ಟಾಗಿ ನಿಮ್ಮ ಜತೆ ನಿಲ್ಲುತ್ತೇವೆ ಎಂಬ ವಾಗ್ದಾನ ನೀಡಿ ಹಾಗೆಯೇ ನಡೆದುಕೊಂಡರು. ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ನೀಡಿ ಎಂದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು, ಚೀನಾದ ಸೈನಿಕರು ನಮ್ಮ ಸೈನಿಕರಿಗೆ ಹೊಡೆಯುತ್ತಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ, ಚೀನಾ ಭಾರತವನ್ನು ಪ್ರವೇಶಿಸಿದಂತೆಯೇ ನಾವೂ ಕರ್ನಾಟಕದ ಗಡಿ ನುಗ್ಗುತ್ತೇವೆ ಎಂಬ ಸಂಜಯ್ ರಾವತ್ ಅವರ ಬಾಲಿಶ ಹೇಳಿಕೆಗಳು, ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಕೊಡಲು ಕೂಡ ಎರಡನೇ ಯೋಚನೆ ಮಾಡದ ಇಂದಿನ ವಿರೋಧ ಪಕ್ಷದ ನಾಯಕರುಗಳ ಹಲವು ನಡೆಗಳನ್ನು ನೋಡುತ್ತೇವೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಹಾಗೂ ತತ್ವಗಳು ಕೇವಲ ರಾಷ್ಟ್ರವಾದಿಗಳು ಹಾಗೂ ಭಾರತೀಯ ಜನತಾ ಪಕ್ಷದವರಿಗೆ ಪ್ರೇರೇಪಣೆ ನೀಡುವುದಷ್ಟೇ ಅಲ್ಲದೆ, ದೇಶದ ವಿಚಾರ ಬಂದಾಗ ವಿರೋಧ ಪಕ್ಷಗಳೂ ಕೂಡ ಹೇಗೆ ವರ್ತಿಸಬೇಕು ಎಂಬ ಬಗ್ಗೆ ದಿಕ್ಕುದೆಶೆ ನೀಡುತ್ತದೆ.
“ಸರ್ಕಾರಗಳು ಬರುತ್ತವೆ ಹೋಗುತ್ತವೆ. ಪಕ್ಷಗಳು ಆಗುತ್ತವೆ ಹೋಗುತ್ತವೆ. ಆದರೆ ಈ ದೇಶ ಎಂದೆಂದಿಗೂ ಉಳಿಯಬೇಕು. ಈ ದೇಶದ ಪ್ರಜಾಪ್ರಭುತ್ವ ಅಮರವಾಗಿರಬೇಕು” ಎಂದ ಈ ಮಹಾನ್ ನಾಯಕನ ಜನ್ಮದಿನದಂದು ನಾವೆಲ್ಲರೂ ಮತ್ತೊಮ್ಮೆ ಪುಣ್ಯ ಸ್ಮರಣೆಯನ್ನು ಮಾಡುತ್ತಾ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ.
ಲೇಖಕರು: ರಾಜ್ಯ ಮಾಧ್ಯಮ ಸಮಿತಿ ಸದಸ್ಯರು, ಬಿಜೆಪಿ ಕರ್ನಾಟಕ