Atal Bihari Vajpayee Birthday | ನಿಮ್ಮ ನೆನಪು ಅಟಲ, ಅಮರ - Vistara News

ಅಂಕಣ

Atal Bihari Vajpayee Birthday | ನಿಮ್ಮ ನೆನಪು ಅಟಲ, ಅಮರ

ಮಾಜಿ ಪ್ರಧಾನಿ, ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನದಂದು, ಅವರ ಜೀವನ ಮತ್ತು ಸಾಧನೆ ಕುರಿತು ವಿಶೇಷ ಲೇಖನ ಇಲ್ಲಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರತನ್ ರಮೇಶ್ ಪೂಜಾರಿ
“ಒಂದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆ ಎಂದರೆ ಅರ್ಥ ಮಾಡಿಕೊಳ್ಳಿ, ಆ ದೇಶದ ರಾಜ ಪ್ರಾಮಾಣಿಕನಾಗಿದ್ದಾನೆ ಎಂದು”. ಸಿಎಎ ಕಾಯ್ದೆಗೆ ವಿರುದ್ಧವಾಗಿ ತಿಂಗಳುಗಟ್ಟಲೆ ದೆಹಲಿಯ ರೋಡ್‌ಗಳನ್ನು ಬಂದ್ ಮಾಡಿದ್ದಿರಬಹುದು, ರೈತ ಮಸೂದೆ ಹೆಸರಲ್ಲಿ ಮಾಡಿದ ಹೋರಾಟಗಳಿರಬಹುದು, ದೆಹಲಿಯ ಬೀದಿಗಳಲ್ಲಿ ನಡೆಸಿದ ದಂಗೆಗಳಿರಬಹುದು, ಯುರೋಪಿನಿಂದ ಎರವಲು ಪಡೆದ ಅಸಹಿಷ್ಣುತೆಯಂತಹ (Intolerance) ಶಬ್ದಗಳನ್ನು ಬಳಸಿ ದೇಶಾದ್ಯಂತ ಗೊಂದಲ ಸೃಷ್ಟಿಸುವ ಪ್ರಯತ್ನಗಳು, ಪ್ರಶಸ್ತಿ ವಾಪಸ್ ಗ್ಯಾಂಗ್ ನ ಆಟಾಟೋಪ, ಹೀಗೆ 2014ರಲ್ಲಿ ದೇಶದ ಜನರು ನರೇಂದ್ರ ಮೋದಿ ಅವರನ್ನು ಪ್ರಧಾನ ಮಂತ್ರಿಯಾಗಿ ಆರಿಸಿದ ನಂತರ ವಿವಿಧ ಸ್ತರಗಳಲ್ಲಿ ವಿವಿಧ ರೀತಿಯ ಅರಾಜಕತೆ ಸೃಷ್ಟಿಸುವ ವಿಪರೀತ ಪ್ರಯತ್ನಗಳಾದವು.

ದೇಶದ ಜನರ ಅಪ್ರತಿಮ ಬೆಂಬಲದೊಂದಿಗೆ, ಬಹಳ ಸ್ಥಿತಪ್ರಜ್ಞತೆಯಿಂದ ನರೇಂದ್ರ ಮೋದಿಯವರು ಇವುಗಳನ್ನೆಲ್ಲ ಎದುರಿಸಿ ಯಶಸ್ವಿಯಾಗಿ ಮುಂದೆ ಸಾಗಿಬಂದದ್ದು ಇತಿಹಾಸ. ಆದರೆ ನಾನೀಗ ಬರೆಯ ಹೊರಟಿದ್ದು ನರೇಂದ್ರ ಮೋದಿಯವರ ಬಗ್ಗೆ ಅಲ್ಲ. ಮೇಲಿನ ಮೊದಲ ಪಂಕ್ತಿಯನ್ನು ಎಂದೋ ಹೇಳಿದ್ದ ಭಾರತದ ಮಾಜಿ ಪ್ರಧಾನಿ, ದೇಶದ ಹಲವು ಅಭಿವೃದ್ಧಿ ಕ್ರಾಂತಿಗಳ ಸರದಾರ, ಅಜಾತಶತ್ರು, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಬಗೆಗೆ.

ಇಂದು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪುಣ್ಯ ಸ್ಮರಣೆ. ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924ರಲ್ಲಿ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ತಂದೆ ಕೃಷ್ಣ ಬಿಹಾರಿ ವಾಜಪೇಯಿ. ತಾಯಿ ಕೃಷ್ಣ ದೇವಿ. ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಬಿಎ ವ್ಯಾಸಂಗ ಮಾಡಿದ ನಂತರ, ರಾಜಕೀಯ ಶಾಸ್ತ್ರದಲ್ಲಿ ಎಂ.ಎ ಕಲಿಯಲು ಕಾನ್ಪುರದ ಡಿಎವಿ ಕಾಲೇಜಿಗೆ ತೆರಳಿದರು. ಎಲ್‌ಎಲ್‌ಬಿ ಕಲಿಯಲು ಪ್ರಯತ್ನಿಸಿದರೂ, ಪತ್ರಕರ್ತ ಕೆಲಸದ ಮಧ್ಯೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಬಾಬಾ ಸಾಹೇಬ್ ಆಮ್ಟೆ ಅವರಿಂದ ಪ್ರಭಾವಿತರಾಗಿ 1939 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದರು. 1942ರಲ್ಲಿ ಮಹಾತ್ಮ ಗಾಂಧೀಜಿಯವರ ಜತೆ ‘ಭಾರತ ಬಿಟ್ಟು ತೊಲಗಿ’ (ಕ್ವಿಟ್ ಇಂಡಿಯಾ) ಆಂದೋಲನದಲ್ಲಿ ಭಾಗಿಯಾದರು ಹಾಗೂ ಆ ಸಮಯದಲ್ಲಿ 23 ದಿನಗಳ ಕಾಲ ಜೈಲುವಾಸವನ್ನೂ ಅನುಭವಿಸಿದರು. ಈ ಜೈಲುವಾಸವೇ ಅವರನ್ನು ರಾಜಕೀಯ ರಂಗಕ್ಕೆ ಧುಮುಕುವಂತೆ ಪ್ರೇರೇಪಿಸಿತು.

1947ರಲ್ಲಿ ವಾಜಪೇಯಿ ಅವರು ರಾಷ್ಟ್ರಧರ್ಮ, ಪಾಂಚಜನ್ಯ, ಸ್ವದೇಶ್, ವೀರ್ ಅರ್ಜುನ್ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕೆಲಸ ಆರಂಭಿಸಿದರು. ಶ್ಯಾಮಪ್ರಸಾದ್ ಮುಖರ್ಜಿಯವರಿಂದ ಅತೀವ ಪ್ರಭಾವಿತರಾಗಿ 1951ರಲ್ಲಿ ಭಾರತೀಯ ಜನಸಂಘವನ್ನು ಸೇರಿದರು. 1957ರಲ್ಲಿ ಮೊದಲ ಬಾರಿಗೆ ಮೂರು ಕ್ಷೇತ್ರಗಳಲ್ಲಿ ಲೋಕಸಭೆಗೆ ಸ್ಪರ್ಧಿಸಿ, ಉತ್ತರ ಪ್ರದೇಶದ ಬಲರಾಮಪುರ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. 1968ರಲ್ಲಿ ದೀನದಯಾಳ್ ಉಪಾಧ್ಯಾಯರ ಮರಣಾನಂತರ ಭಾರತೀಯ ಜನಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ಲಾಲ್ ಕೃಷ್ಣ ಆಡ್ವಾಣಿ, ನಾನಾಜಿ ದೇಶಮುಖ್, ಬಾಲರಾಜ್‌ ಮಧೋಕ್ ಮುಂತಾದವರ ಜತೆ ಕೆಲಸ ಮಾಡಿ ಭಾರತೀಯ ಜನಸಂಘ ಭಾರತೀಯ ರಾಜಕೀಯ ರಂಗದಲ್ಲಿ ಒಂದು ಪ್ರಮುಖ ಪಕ್ಷವಾಗಿ ಹೊರಹೊಮ್ಮಲು ಅಮೋಘ ಕೊಡುಗೆ ನೀಡಿದರು. 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ತಿಂಗಳುಗಳ ಕಾಲ ಜೈಲುವಾಸವನ್ನು ಕೂಡ ಅನುಭವಿಸಿದರು. 1980ರಲ್ಲಿ ಲಾಲ್ ಕೃಷ್ಣ ಆಡ್ವಾಣಿ, ಭೈರೋನ್‌ಸಿಂಗ್ ಶೇಖಾವತ್ ಜತೆಗೂಡಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದ್ದಲ್ಲದೆ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

ವಾಜಪೇಯಿಯವರು ಮೂರು ಬಾರಿ ದೇಶದ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಮೊದಲ ಬಾರಿ 1996ರಲ್ಲಿ 13 ದಿನ, 1998ರಲ್ಲಿ 13 ತಿಂಗಳು ಹಾಗೂ 1999 ರಲ್ಲಿ ಯಶಸ್ವಿ ಐದು ವರ್ಷಗಳನ್ನು ಪೂರೈಸಿ ದೇಶದ ಇತಿಹಾಸದಲ್ಲಿ ಹಲವಾರು ಹೊಸ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡರು. ದೇಶದ ಉದ್ದಗಲವನ್ನು ಜೋಡಿಸಲು ಸುವರ್ಣ ಚತುಷ್ಪಥ ರಸ್ತೆ, ಹಳ್ಳಿ ಹಳ್ಳಿಗಳನ್ನು ಜೋಡಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಮನಸು ಮನಸುಗಳನ್ನು ಬೆಸೆಯಲು ಟೆಲಿಕಾಂ ಕ್ರಾಂತಿ, ದೇಶದ ಸುರಕ್ಷತೆಗೆ ಮೈಲುಗಲ್ಲಾದ ಪೋಖ್ರಾಣ್‌ ಪರಮಾಣು ಪರೀಕ್ಷೆ, ದೇಶದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡಿದ ಸರ್ವ ಶಿಕ್ಷಾ ಅಭಿಯಾನ, ಸಂಪೂರ್ಣ ಗ್ರಾಮೀಣ ರೋಜಗಾರ್ ಯೋಜನೆ (ನಂತರದ ಮನರೇಗಾ) ಫ್ರೀಡಂ ಆಫ್ ಇನ್ಫಾರ್ಮೇಷನ್ ಆಕ್ಟ್ (ನಂತರದ ಆರ್‌ಟಿಐ), ಸರ್ವ ಶಿಕ್ಷಣ ಅಭಿಯಾನ (ನಂತರದ ಆರ್ ಟಿ ಇ), ಮಲ್ಟಿಪರ್ಪಸ್ ನ್ಯಾಷನಲ್ ಐಡೆಂಟಿಟಿ ಕಾರ್ಡ್ ಪ್ರಾಜೆಕ್ಟ್( ನಂತರದ ಆಧಾರ್) ಹೀಗೆ ಹಲವಾರು ಕ್ರಾಂತಿಕಾರಿ ಅಭಿವೃದ್ಧಿ ಹಾಗೂ ಕಲ್ಯಾಣ ಕಾರ್ಯಗಳಿಗೆ ನಾಂದಿ ಹಾಡಿದರು. 1992ರಲ್ಲಿ ಭಾರತ ಸರ್ಕಾರ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದರೆ, 1994ರಲ್ಲಿ ಅತ್ಯುತ್ತಮ ಸಂಸದೀಯ ಪಟು ಎಂಬ ಗೌರವ ಹಾಗೂ 2015ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನಕ್ಕೆ ಆರ್ಹವಾಗಿ ಪಾತ್ರರಾದರು.

Politician beyond politics ಎಂಬ ಒಂದು ವಿಭಿನ್ನ ಸಿದ್ಧಾಂತವನ್ನು ವಾಜಪೇಯಿ ಅವರು ಮೈಗೂಡಿಸಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಕಾಂಗ್ರೆಸ್ಸೇತರ ಪ್ರಧಾನಮಂತ್ರಿಯಾಗಿ ಐದು ವರ್ಷ ಪೂರೈಸಿದ ದೇಶದ ಮೊದಲ ಪ್ರಧಾನಿಯಾಗಿದ್ದರು. ಎನ್‌ಡಿಎ ಸರ್ಕಾರವನ್ನು ಅವರು ಮುನ್ನಡೆಸುತ್ತಿದ್ದಾಗ 24 ಪಕ್ಷಗಳನ್ನು ಜತೆಗೆ ತೆಗೆದುಕೊಂಡು ಹೋಗಬೇಕಾದ ಕ್ಲಿಷ್ಟ ಪರಿಸ್ಥಿತಿ ಅವರದಾಗಿತ್ತು. 24 ಪಕ್ಷಗಳು ಎಂದರೆ 24 ಬೇರೆ ಬೇರೆ ಸಿದ್ಧಾಂತಗಳು, 24 ಬೇರೆ ಬೇರೆ ತರಹದ ಯೋಚನೆಗಳು. ಇವರೆಲ್ಲರನ್ನೂ ಒಟ್ಟಿಗೆ ಮುನ್ನಡೆಸಿಕೊಂಡು ಹೋಗುವಲ್ಲಿ ಸಫಲತೆ ಕಂಡರು. ಬಿಹಾರದ ಎರಡು ಪಕ್ಷಗಳನ್ನೇ ತೆಗೆದುಕೊಳ್ಳಿ. ಜೆಡಿಯು ಹಾಗೂ ಎಲ್‌ಜೆಪಿ ಪಕ್ಷಗಳು ಒಬ್ಬರಿಗೊಬ್ಬರು ವಿರೋಧಿಯಾಗಿದ್ದರು. ಆದರೆ ವಾಜಪೇಯಿ ಅವರ ಜತೆ ಇಬ್ಬರೂ ಮೌನವಾಗಿ ಮುಂದೆ ಸಾಗುತ್ತಿದ್ದರು. ‘ಸ್ಥಾನಕ್ಕಿಂತ ಉದ್ದೇಶ ದೊಡ್ಡದು’ ಎಂದು ಮನವರಿಕೆ ಮಾಡಿಸುವಲ್ಲಿ ಸಫಲರಾಗಿ ಎಲ್ಲರನ್ನೂ ಮುಂದೆ ತೆಗೆದುಕೊಂಡು ಹೋಗುವ ಚಾಕಚಕ್ಯತೆ ವಾಜಪೇಯಿ ಅವರಿಗೆ ಸಿದ್ಧಿಸಿತ್ತು.

1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಸಮಯದಲ್ಲಿ ಉಳಿದ ವಿಪಕ್ಷದವರು ದೇಶದ ಆಗಿನ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿಯನ್ನು ವಿರೋಧಕ್ಕಾಗಿ ವಿರೋಧಿಸುತ್ತಿದ್ದರೆ, ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ವಿಷಯ ಬಂದಾಗ ವಿಪಕ್ಷದವರು ನಾವೆಲ್ಲ ಒಗ್ಗಟ್ಟಾಗಿ ನಿಮ್ಮ ಜತೆ ನಿಲ್ಲುತ್ತೇವೆ ಎಂಬ ವಾಗ್ದಾನ ನೀಡಿ ಹಾಗೆಯೇ ನಡೆದುಕೊಂಡರು. ಸರ್ಜಿಕಲ್ ಸ್ಟ್ರೈಕ್‌ಗೆ ಸಾಕ್ಷಿ ನೀಡಿ ಎಂದ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು, ಚೀನಾದ ಸೈನಿಕರು ನಮ್ಮ ಸೈನಿಕರಿಗೆ ಹೊಡೆಯುತ್ತಿದ್ದಾರೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆ, ಚೀನಾ ಭಾರತವನ್ನು ಪ್ರವೇಶಿಸಿದಂತೆಯೇ ನಾವೂ ಕರ್ನಾಟಕದ ಗಡಿ ನುಗ್ಗುತ್ತೇವೆ ಎಂಬ ಸಂಜಯ್ ರಾವತ್ ಅವರ ಬಾಲಿಶ ಹೇಳಿಕೆಗಳು, ರಾಜಕೀಯ ಲಾಭಕ್ಕಾಗಿ ದೇಶದ ಹಿತವನ್ನು ಬಲಿಕೊಡಲು ಕೂಡ ಎರಡನೇ ಯೋಚನೆ ಮಾಡದ ಇಂದಿನ ವಿರೋಧ ಪಕ್ಷದ ನಾಯಕರುಗಳ ಹಲವು ನಡೆಗಳನ್ನು ನೋಡುತ್ತೇವೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಹಾಗೂ ತತ್ವಗಳು ಕೇವಲ ರಾಷ್ಟ್ರವಾದಿಗಳು ಹಾಗೂ ಭಾರತೀಯ ಜನತಾ ಪಕ್ಷದವರಿಗೆ ಪ್ರೇರೇಪಣೆ ನೀಡುವುದಷ್ಟೇ ಅಲ್ಲದೆ, ದೇಶದ ವಿಚಾರ ಬಂದಾಗ ವಿರೋಧ ಪಕ್ಷಗಳೂ ಕೂಡ ಹೇಗೆ ವರ್ತಿಸಬೇಕು ಎಂಬ ಬಗ್ಗೆ ದಿಕ್ಕುದೆಶೆ ನೀಡುತ್ತದೆ.

“ಸರ್ಕಾರಗಳು ಬರುತ್ತವೆ ಹೋಗುತ್ತವೆ. ಪಕ್ಷಗಳು ಆಗುತ್ತವೆ ಹೋಗುತ್ತವೆ. ಆದರೆ ಈ ದೇಶ ಎಂದೆಂದಿಗೂ ಉಳಿಯಬೇಕು. ಈ ದೇಶದ ಪ್ರಜಾಪ್ರಭುತ್ವ ಅಮರವಾಗಿರಬೇಕು” ಎಂದ ಈ ಮಹಾನ್ ನಾಯಕನ ಜನ್ಮದಿನದಂದು ನಾವೆಲ್ಲರೂ ಮತ್ತೊಮ್ಮೆ ಪುಣ್ಯ ಸ್ಮರಣೆಯನ್ನು ಮಾಡುತ್ತಾ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳೋಣ.

ಲೇಖಕರು: ರಾಜ್ಯ ಮಾಧ್ಯಮ ಸಮಿತಿ ಸದಸ್ಯರು, ಬಿಜೆಪಿ ಕರ್ನಾಟಕ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಅಂಕಣ

ರಾಜಮಾರ್ಗ ಅಂಕಣ: ಬಾಲ್ಯದಲ್ಲಿ ಎರಡೂ ಕಾಲು ಪೋಲಿಯೋ ಪೀಡಿತಳಾದ ಹುಡುಗಿ ಮಹೋನ್ನತ ಕ್ರೀಡಾಪಟು ಆದ ಕಥೆ!

ರಾಜಮಾರ್ಗ ಅಂಕಣ: ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಹಾಮಾರಿಗೆ ಸಂತ್ರಸ್ತಳಾದ, ಕಪ್ಪು ಚರ್ಮ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾಸಾಧನೆಗಳ ಮೂಲಕ ಇತಿಹಾಸವನ್ನೇ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಗೌರವಿಸಿತು.

VISTARANEWS.COM


on

wilma rudolph ರಾಜಮಾರ್ಗ ಅಂಕಣ
Koo

ʼಕಪ್ಪು ಜಿಂಕೆ’ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ಯಾರಿಸ್ ನಗರದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ (Olympics) ಸುದ್ದಿಗಳು ಸಮುದ್ರದ ಅಲೆಗಳಂತೆ ತೇಲಿ ಬರುತ್ತಿರುವ ಈ ಹೊತ್ತಲ್ಲಿ ಇನ್ನೋರ್ವ ಮಹಾನ್ ಕ್ರೀಡಾ ಸಾಧಕಿಯ ಪರಿಚಯವು ನಿಮ್ಮ ಮುಂದೆ. ಹಾಗೆಯೇ ಜಗತ್ತಿನ ವರ್ಣ ದ್ವೇಷದ ಬೆಂಕಿಯ ಕುಲುಮೆಯಲ್ಲಿ ಚಂದವಾಗಿ ಅರಳಿದ ಒಂದು ಅದ್ಭುತ ಕ್ರೀಡಾ ಪ್ರತಿಭೆಯನ್ನು ತಮಗೆ ಪರಿಚಯಿಸಲು ಹೆಮ್ಮೆ ಪಡುತ್ತಿರುವೆ.

ಆಕೆಯನ್ನು ಜಗತ್ತು ‘ಕಪ್ಪು ಜಿಂಕೆ’ ಎಂದು ಕರೆಯಿತು

ಆಕೆಯ ಸಾಧನೆಯು ಮುಂದೆ ಸಾವಿರ ಸಾವಿರ ಕಪ್ಪು ವರ್ಣದ ಸಾಧಕರಿಗೆ ಪ್ರೇರಣೆ ನೀಡಿತು. ಆಕೆ ವಿಲ್ಮಾ ರುಡಾಲ್ಫ್ (Wilma Rudolph).

ಆಕೆ ಹುಟ್ಟಿದ್ದು ಅಮೆರಿಕಾದ ಸೈಂಟ್ ಬೆಥ್ಲೆಹೆಮ್ ಎಂಬ ಪುಟ್ಟ ನಗರದಲ್ಲಿ. ಅವಳು Premature Baby ಆಗಿ ಹುಟ್ಟಿದವಳು. ಹುಟ್ಟುವಾಗ ಅವಳ ತೂಕ ನಾಲ್ಕೂವರೆ ಪೌಂಡ್ ಮಾತ್ರ ಆಗಿತ್ತು. ಮಗು ಬದುಕುವ ಭರವಸೆ ವೈದ್ಯರಿಗೇ ಇರಲಿಲ್ಲ! ಅವಳ ಅಪ್ಪ ರೈಲ್ವೆ ನಿಲ್ದಾಣದಲ್ಲಿ ಪೋರ್ಟರ್ ಆಗಿದ್ದರು. ತೀವ್ರ ಬಡತನ. ಜೊತೆಗೆ ಅಪ್ಪನಿಗೆ ಎರಡು ಮದುವೆಯಾಗಿದ್ದು ಹುಟ್ಟಿದ್ದು ಒಟ್ಟು 22 ಮಕ್ಕಳು! ಅದರಲ್ಲಿ ವಿಲ್ಮಾ 20ನೆಯ ಮಗು! ಆದ್ದರಿಂದ ಅವಳು ಅಪ್ಪನಿಗೆ ಬೇಡವಾದ ಮಗಳು. ಅಮ್ಮನ ಮುದ್ದಿನ ಮಗಳು.

ಬಾಲ್ಯದಲ್ಲಿಯೇ ಆಕೆಗೆ ಕಾಡಿತ್ತು ಪೋಲಿಯೋ!

ಅಂತಹ ಹುಡುಗಿಗೆ ಬಾಲ್ಯದಲ್ಲಿ ಸಾಲು ಸಾಲು ಕಾಯಿಲೆಗಳ ಸರಮಾಲೆಯೇ ಎದುರಾಯಿತು. ಎರಡು ವರ್ಷದಲ್ಲಿ ಪುಟ್ಟ ಮಗುವಿಗೆ ನ್ಯೂಮೋನಿಯಾ ಬಂದು ಅವಳ ಅರ್ಧ ಶಕ್ತಿಯನ್ನು ತಿಂದು ಹಾಕಿತ್ತು. ಚೇತರಿಸಲು ಅವಕಾಶ ಕೊಡದೆ ನಂತರ ಬಂದದ್ದು ಸ್ಕಾರ್ಲೆಟ್ ಜ್ವರ. ಮೈ ಮೇಲೆ ರಕ್ತ ವರ್ಣದ ಗುಳ್ಳೆಗಳು ಬಂದು ಕೀವು ತುಂಬುವ ಖಾಯಿಲೆ ಅದು. ಅಮ್ಮ ಮಗಳ ಆರೈಕೆ ಮಾಡಿ ಹೈರಾಣಾಗಿ ಬಿಟ್ಟರು! ಸರಿಯಾಗಿ ಐದನೇ ವರ್ಷ ತುಂಬುವ ಹೊತ್ತಿಗೆ ಮಗುವಿಗೆ ಮತ್ತೆ ತೀವ್ರ ಜ್ವರ ಬಂತು. ಪರೀಕ್ಷೆ ಮಾಡಿದಾಗ ವೈದ್ಯರು ಪತ್ತೆ ಹಚ್ಚಿದ್ದು ಪೋಲಿಯೋ ಎಂಬ ಮಹಾ ಕಾಯಿಲೆ! ಆಗಿನ ಕಾಲದಲ್ಲಿ ಭಯ ಹುಟ್ಟಿಸುವ ಕಾಯಿಲೆ ಅದು!

ಅವಳ ವಯಸ್ಸಿನ ಬೇರೆ ಮಕ್ಕಳು ಶಾಲೆಗೆ ಹೋಗಲು ಆರಂಭ ಮಾಡಿದ್ದರು. ಆದರೆ ವಿಲ್ಮಾ ನೆಲದಲ್ಲಿ ತೆವಳುತಿದ್ದಳು. ವಾಶ್ ರೂಮಿಗೆ ಅವಳನ್ನು ಅಮ್ಮ ಹೊತ್ತುಕೊಂಡು ಹೋಗಬೇಕಾದ ಅನಿವಾರ್ಯತೆ ಇತ್ತು. ಅವರಿದ್ದ ನಗರದಲ್ಲಿ ಆಗ ಕಪ್ಪು ವರ್ಣದವರಿಗೆ ಆಸ್ಪತ್ರೆಗಳಿಗೆ ಪ್ರವೇಶ ಇರಲಿಲ್ಲ. ಎಲ್ಲವೂ ಬಿಳಿ ಚರ್ಮದವರಿಗೆ ಮೀಸಲು. ಆದ್ದರಿಂದ ಅವಳ ಚಿಕಿತ್ಸೆಗೆ ಅಮ್ಮ ಅವಳನ್ನು 50 ಮೈಲು ದೂರದ ನಗರಕ್ಕೆ ಹೋಗಿ ಬರಬೇಕಾಯಿತು. ಅದೂ ಸತತ ಎರಡು ವರ್ಷ! ಏಳು ವರ್ಷದ ಮಗಳನ್ನು ಆ ಮಹಾತಾಯಿಯು ಸೊಂಟದ ಮೇಲೆ ಕೂರಿಸಿ ಆಸ್ಪತ್ರೆಯ ವಾರ್ಡಗಳಿಗೆ ಎಡತಾಕುವುದನ್ನು ನೋಡಿದವರಿಗೆ ‘ಅಯ್ಯೋ ಪಾಪ’ ಅನ್ನಿಸುತಿತ್ತು.

ʼಅಮ್ಮಾ, ನನ್ನ ಮಂಚವನ್ನು ಕಿಟಕಿಯ ಪಕ್ಕ ಸರಿಸು’

‘ಹೊರಗೆ ಮಕ್ಕಳು ಆಡುವುದನ್ನು ನಾನು ನೋಡಬೇಕು ಅಮ್ಮಾ ‘ ಎಂದು ಹೇಳಿದಾಗ ಪ್ರೀತಿಯ ಅಮ್ಮ ಹಾಗೆ ಮಾಡಿದ್ದರು. ಈ ಹುಡುಗಿ ಕಿಟಕಿಯಿಂದ ಹೊರಗೆ ಮೈದಾನದಲ್ಲಿ ಮಕ್ಕಳು ಆಡುವುದನ್ನು, ಓಡುವುದನ್ನು ನೋಡುತ್ತಾ ಸಂಭ್ರಮಿಸುವುದು, ಖುಷಿ ಪಡುವುದನ್ನು ನೋಡುತ್ತಾ ಅಮ್ಮನ ಮುಖದಲ್ಲಿ ಅಪರೂಪದ ನಗುವಿನ ಗೆರೆಯು ಚಿಮ್ಮುತ್ತಿತ್ತು! ಮನೆಯ ಒಳಗೆ ಗೋಡೆ ಹಿಡಿದುಕೊಂಡು ನಡೆಯಲು ಮೊದಲು ಪ್ರಯತ್ನ ನಡೆಯಿತು. ಅದರೊಂದಿಗೆ ಹಲವು ತಿಂಗಳು ಆರ್ಥೋಪೆಡಿಕ್ ಚಿಕಿತ್ಸೆಗಳು ನಡೆದವು. ಮುಂದೆ ದೀರ್ಘ ಕಾಲ ಫಿಸಿಯೋ ತೆರೆಪಿ ನಡೆದು ಬಲಗಾಲಿನ ಶಕ್ತಿಯು ಮರಳಿತು. ಆದರೆ ಎಡಗಾಲಿನ ಶಕ್ತಿ ಇನ್ನೂ ಕುಂಠಿತವಾಗಿತ್ತು. ಇನ್ನೊಂದು ದೊಡ್ಡ ಸಮಸ್ಯೆ ಎಂದರೆ ಅವಳ ಪಾದಗಳು ಅಸಮ ಆಗಿದ್ದವು. ಅವಳ ಸೈಜಿನ ಶೂಗಳು ಎಲ್ಲಿಯೂ ಸಿಗುತ್ತಿರಲಿಲ್ಲ.

ಈ ಸಮಸ್ಯೆಗಳ ನಡುವೆ ಅಮ್ಮನಿಗೆ ಮಗಳ ಶಾಲೆಯ ಚಿಂತೆ. ಅವಳು ಏಳು ವರ್ಷ ಪ್ರಾಯದಲ್ಲಿ ನೇರವಾಗಿ ಎರಡನೇ ತರಗತಿಗೆ ಸೇರ್ಪಡೆ ಆದವಳು. ಎಡಗಾಲನ್ನು ಕೊಂಚ ಎಳೆದುಕೊಂಡು ನಡೆಯುವ ರೀತಿಯನ್ನು ನೋಡಿ ಅವಳ ಓರಗೆಯ ಮಕ್ಕಳಿಗೆ ಒಂಥರಾ ತಮಾಷೆ ಅನ್ನಿಸುತ್ತಿತ್ತು. ಅವರು ಅಣಕು, ಕೀಟಲೆ ಮಾಡಿ ಅವಳ ಕಣ್ಣಲ್ಲಿ ನೀರು ತರಿಸುತ್ತಿದ್ದರು.

ಇದರಿಂದ ನೊಂದುಕೊಂಡ ವಿಲ್ಮಾ ತರಗತಿಗಳಿಗೆ ಚಕ್ಕರ್ ಹೊಡೆದು ಮೈದಾನದಲ್ಲಿ ಹೆಚ್ಚು ಹೊತ್ತನ್ನು ಕಳೆಯುವುದನ್ನು ಅಭ್ಯಾಸ ಮಾಡಿದಳು.ಅದೇ ರೀತಿ ಎಡಗಾಲಿಗೆ ಆಧಾರವನ್ನು ಕೊಡುವ ‘ಲೆಗ್ ಬ್ರೇಸ್’ ಹಾಕಿ ವೇಗವಾಗಿ ನಡೆಯಲು ಆರಂಭ ಮಾಡಿದಳು. ಅವಳ ಒಳಗೆ ಅದಮ್ಯವಾದ ಒಂದು ಚೈತನ್ಯ ಇರುವುದನ್ನು ಒಬ್ಬ ಕೋಚ್ ದಿನವೂ ನೋಡುತ್ತಿದ್ದರು. ಅವರ ಹೆಸರು ಎಡ್ ಟೆಂಪಲ್.

ಕ್ರೀಡಾ ತರಬೇತಿ ಆರಂಭವಾಯಿತು

ಅವಳಿಗೆ ದೇವರು ಅದ್ಭುತ ಎತ್ತರವನ್ನು ಕೊಟ್ಟಿದ್ದರು (5 ಅಡಿ 11 ಇಂಚು). ಪ್ರೌಢಶಾಲೆಯ ಹಂತಕ್ಕೆ ಬಂದಾಗ ಎಡಗಾಲಿನ ಶಕ್ತಿ ಮರಳಿತ್ತು. ನಡೆಯುವಾಗ ಒಂದು ಸಣ್ಣ ಜರ್ಕ್ ಬಿಟ್ಟರೆ ಬೇರೆ ಯಾವುದೇ ವ್ಯತ್ಯಾಸವು ಕಾಣುತ್ತಿರಲಿಲ್ಲ. ಮೊದಲ ಬಾರಿಗೆ ಪ್ರತಿಷ್ಠಿತ ಕಾಲೇಜಿನ ಬಾಸ್ಕೆಟ್ಬಾಲ್ ಟೀಮಿಗೆ ಅವಳು ಆಯ್ಕೆಯಾದಾಗ ಕುಣಿದು ಸಂಭ್ರಮ ಪಟ್ಟಿದ್ದಳು. ಬಾಸ್ಕೆಟ್ಬಾಲ್ ಕೋರ್ಟಲ್ಲಿ ಅವಳು ಮಿಂಚಿನಂತೆ ಓಡುವುದನ್ನು ನೋಡಿದ ಕೋಚ್ ಅವಳನ್ನು ಅಥ್ಲೆಟಿಕ್ಸ್ ತಂಡಕ್ಕೆ ಸೇರಿಸಿ ಕೋಚಿಂಗ್ ಆರಂಭಿಸಿದರು. ಎಡ್ ಟೆಂಪಲ್ ಎಂಬ ಆ ಕೋಚ್ ಅವಳಲ್ಲಿ ಇದ್ದ ಅದ್ಭುತವಾದ ಕ್ರೀಡಾಪ್ರತಿಭೆಯನ್ನು ಪುಟವಿಟ್ಟ ಚಿನ್ನದಂತೆ ಹೊರತಂದರು. ಅವಳು ಮೊದಲ ಬಾರಿಗೆ ಭಾಗವಹಿಸಿದ ಓಪನ್ ಕ್ರೀಡಾಕೂಟದಲ್ಲಿ ಎಲ್ಲಾ ಒಂಬತ್ತು ಸ್ಪರ್ದೆಗಳಲ್ಲಿ ಕೂಡ ಚಿನ್ನದ ಪದಕವನ್ನು ಗೆದ್ದಿದ್ದಳು. ಅವಳ ಒಳಗೆ ಎಂದಿಗೂ ದಣಿಯದ, ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳದ, ಬಿದ್ದಲ್ಲಿಂದ ಪುಟಿದು ಮತ್ತೆ ಎದ್ದುಬರುವ ಚೈತನ್ಯ ಶಕ್ತಿ ಇತ್ತು!

1956ರ ಮೆಲ್ಬೋರ್ನ್ ಒಲಿಂಪಿಕ್ಸ್ ಕಣದಲ್ಲಿ ಅವಳು!

ಅಲ್ಲಿ ವಿಲ್ಮಾ ರುಡಾಲ್ಫ್ ಅಮೇರಿಕಾವನ್ನು ಪ್ರತಿನಿಧಿಸಿ ರಿಲೇ ಓಟದಲ್ಲಿ ಒಂದು ಕಂಚಿನ ಪದಕ ಮಾತ್ರ ಗೆದ್ದಳು. ಆಗ ಅವಳಿಗೆ ಕೇವಲ 16 ವರ್ಷ! ಮತ್ತೆ ಸ್ಪಷ್ಟ ಗುರಿಯೊಂದಿಗೆ ನಾಲ್ಕು ವರ್ಷ ಪ್ರಾಕ್ಟೀಸ್ ಮಾಡಿ ಮುಂದಿನ ಒಲಿಂಪಿಕ್ಸ್ ಸ್ಪರ್ಧೆಗೆ ಪ್ರವೇಶ ಪಡೆದಳು. ಅವಳು ಎಲ್ಲ ನೋವುಗಳನ್ನೂ ಮರೆತು, ಬಾಲ್ಯದ ಕಹಿ ನೆನಪುಗಳನ್ನು ಮರೆತು ಟ್ರಾಕನಲ್ಲಿ ಓಡುವಾಗ ಯಾರಿಗಾದರೂ ರೋಮಾಂಚನ ಆಗುತ್ತಿತ್ತು.

1960ರ ರೋಮ್ ಒಲಿಂಪಿಕ್ಸ್ – ವಿಲ್ಮಾ ವಿಶ್ವದಾಖಲೆ ಬರೆದಳು!

ಜಗತ್ತಿನಾದ್ಯಂತ ಟಿವಿಯ ಕವರೇಜ್ ಆಗ ತಾನೆ ಆರಂಭ ಆಗಿತ್ತು. ಆದ್ದರಿಂದ ಸಹಜವಾಗಿ ಒಲಿಂಪಿಕ್ಸ್ ಕ್ರೇಜ್ ಹೆಚ್ಚಿತ್ತು. ಮೈದಾನದಲ್ಲಿ ಕೂಡ 43 ಡಿಗ್ರಿ ಉಷ್ಣತೆ ಇತ್ತು! ಆ ಒಲಿಂಪಿಕ್ಸ್ ಕಣದಲ್ಲಿ ವಿಲ್ಮಾ ರುಡಾಲ್ಫ್ ಬಿರುಗಾಳಿಯ ಹಾಗೆ ಓಡಿದಳು. 100 ಮೀಟರ್ ಚಿನ್ನದ ಪದಕ, ಜಗತ್ತಿನ ಅತ್ಯಂತ ವೇಗದ ಮಹಿಳೆ ಎಂಬ ಕೀರ್ತಿ ಆಕೆಗೆ ಒಲಿಯಿತು! ಟೈಮಿಂಗ್ 11.2 ಸೆಕೆಂಡ್ಸ್! ಅದು ಕೂಡ ವಿಶ್ವದಾಖಲೆಯ ಓಟ! 200 ಮೀಟರ್ ಓಟದಲ್ಲಿ ಮತ್ತೆ ವಿಶ್ವ ದಾಖಲೆಯ ಜೊತೆಗೆ ಚಿನ್ನದ ಪದಕ! ಟೈಮಿಂಗ್ 22.9 ಸೆಕೆಂಡ್ಸ್! ಮತ್ತೆ 4X100 ಮೀಟರ್ ರಿಲೇ ಓಟದಲ್ಲಿ ಚಿನ್ನದ ಪದಕ! ಹೀಗೆ ಮೂರು ಚಿನ್ನದ ಪದಕ ಒಂದೇ ಕೂಟದಲ್ಲಿ ಪಡೆದ ವಿಶ್ವದ ಮೊದಲ ಮಹಿಳಾ ಅತ್ಲೇಟ್ ಎಂಬ ಕೀರ್ತಿಯು ಅವಳಿಗೆ ದೊರೆಯಿತು!

ವಿಲ್ಮಾ ರುಡಾಲ್ಫ್ ಸ್ಥಾಪಿಸಿದ ಎರಡು ವಿಶ್ವ ಮಟ್ಟದ ದಾಖಲೆಗಳು ಮುಂದೆ ಹಲವು ವರ್ಷಗಳ ಕಾಲ ಅಬಾಧಿತವಾಗಿ ಉಳಿದವು. ಆ ಎತ್ತರದ ಸಾಧನೆಯ ನಂತರ ವಿಲ್ಮಾ ವಿಶ್ವಮಟ್ಟದ ಹಲವು ಕೂಟಗಳಲ್ಲಿ ನಿರಂತರವಾಗಿ ಓಡಿದಳು ಮತ್ತು ಓಡಿದ್ದಲ್ಲೆಲ್ಲ ಪದಕಗಳನ್ನು ಸೂರೆ ಮಾಡಿದಳು.

22ನೆಯ ವರ್ಷಕ್ಕೆ ಕ್ರೀಡಾ ನಿವೃತ್ತಿ

ತನ್ನ 22ನೆಯ ವರ್ಷದಲ್ಲಿ ಕೀರ್ತಿಯ ಶಿಖರದಲ್ಲಿ ಇರುವಾಗಲೇ ವಿಲ್ಮಾ ಕ್ರೀಡೆಗೆ ವಿದಾಯ ಕೋರಿದಳು ! 1964ರ ಟೋಕಿಯೋ ಒಲಿಂಪಿಕ್ಸನಲ್ಲಿ ಭಾಗವಹಿಸುವ ಅವಕಾಶ ಇದ್ದರೂ ಕೂಡ ಸ್ಪರ್ಧೆ ಮಾಡಲೇ ಇಲ್ಲ.

ಭರತ ವಾಕ್ಯ

ತನ್ನ ಬಾಲ್ಯದಲ್ಲಿ ಪೋಲಿಯೋ ಎಂಬ ಮಹಾಮಾರಿಗೆ ಸಂತ್ರಸ್ತಳಾದ, ಕಪ್ಪು ಚರ್ಮ ಎಂಬ ಕಾರಣಕ್ಕೆ ಅಪಮಾನ ಮತ್ತು ತಿರಸ್ಕಾರಕ್ಕೆ ಒಳಗಾದ ವಿಲ್ಮಾ ತನ್ನ ಕ್ರೀಡಾಸಾಧನೆಗಳ ಮೂಲಕ ಇತಿಹಾಸವನ್ನೇ ಬರೆದಳು! ಮುಂದೆ ಅವಳನ್ನು ‘ಶತಮಾನದ ಕ್ರೀಡಾಪಟು’ ಎಂದು ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯು ಗೌರವಿಸಿತು. ಅವಳ ಆತ್ಮಚರಿತ್ರೆಯಾದ ‘ Wilma – The Story of Wilma Rudolph’ ಲಕ್ಷಾಂತರ ಮಂದಿಗೆ ಪ್ರೇರಣೆಯನ್ನು ಕೊಟ್ಟಿತು. ಅವಳ ಸಾಧನೆಗಳ ಬಗ್ಗೆ 21 ಪ್ರಸಿದ್ಧ ಲೇಖಕರು ಪುಸ್ತಕಗಳನ್ನು ಬರೆದಿದ್ದಾರೆ. ಅವಳ ಬದುಕಿನ ಕಥೆ ಅಮೆರಿಕ ಮತ್ತು ಇತರ ದೇಶಗಳ ಕಾಲೇಜಿನ ಪಠ್ಯಪುಸ್ತಕಗಳಲ್ಲಿ ಸ್ಥಾನ ಪಡೆಯಿತು!

ಈಗ ಹೇಳಿ ವಿಲ್ಮಾ ಗ್ರೇಟ್ ಹೌದಾ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

Continue Reading

ಅಂಕಣ

ರಾಜಮಾರ್ಗ ಅಂಕಣ: ಜಗತ್ತಿನ ಯಾರ ಪ್ರೀತಿಯೂ ಇವರ ಪ್ರೀತಿಗೆ ಸಮನಲ್ಲ!

ರಾಜಮಾರ್ಗ ಅಂಕಣ: ಇವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

VISTARANEWS.COM


on

ರಾಜಮಾರ್ಗ ಅಂಕಣ love story
Koo

ರಾಬರ್ಟ್ ಬ್ರೌನಿಂಗ್ ಮತ್ತು ಎಲಿಜೆಬೆತ್ ಬ್ಯಾರೆಟ್ ಪರಸ್ಪರ ಭೇಟಿ ಆಗದೆ ವರ್ಷಾನುಗಟ್ಟಲೆ ಪ್ರೀತಿ ಮಾಡಿದರು!

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಪ್ರೀತಿಗೆ ಕಣ್ಣಿಲ್ಲ (Love is blind) ಅಂತಾರೆ. ಆದರೆ ಇಟಲಿಯಲ್ಲಿ (Italy) ಇರುವ ಅವರ ಸಮಾಧಿಯ ಮೇಲೆ ʼಪ್ರೀತಿ ಕುರುಡಲ್ಲ’ ಎಂದು ಬರೆದಿರುವುದು ಯಾಕೆ? ಇದೆಲ್ಲವೂ ಅರ್ಥ ಆಗಬೇಕಾದರೆ ಈ ಪ್ರೀತಿಯ ಪರಾಕಾಷ್ಠೆಯ ಕಥೆಯನ್ನು ಒಮ್ಮೆ ಫೀಲ್ ಮಾಡಿಕೊಂಡು ಓದಿ.

ಅದು ಲಂಡನ್ ನಗರ. ಆಕೆ ಎಲಿಜೆಬೆತ್ ಬ್ಯಾರೇಟ್ (Elizabeth Barrett). ಆ ಕಾಲಕ್ಕೆ ಅಂತಾರಾಷ್ಟ್ರೀಯ ಖ್ಯಾತಿಯ ಕವಯಿತ್ರಿ. ವಯಸ್ಸು 39ರ ಆಸುಪಾಸು. ಅವಿವಾಹಿತೆ. ಆಕೆಯ ತಂದೆ ಅತ್ಯಂತ ಶ್ರೀಮಂತ ಜಮೀನುದಾರರು. ಅಪ್ಪ ಅಮ್ಮನ 12 ಮಕ್ಕಳಲ್ಲಿ ಆಕೆಯೂ ಒಬ್ಬರು. ಅಪ್ಪನ ಪ್ರೀತಿಯ ಮಗಳು.

ಹದಿಹರೆಯದಿಂದಲೂ ಆಕೆಗೆ ತೀವ್ರ ಅನಾರೋಗ್ಯ ಮತ್ತು ದೇಹವೆಲ್ಲ ನೋವು. ಉಸಿರಾಟದ ತೊಂದರೆ. ಮನೆಯಿಂದಾಚೆ ಹೋಗಲು ಸಾಧ್ಯವೇ ಆಗದ ಸ್ಥಿತಿ. ಆಕೆ ಅಂತರ್ಮುಖಿ. ತನ್ನ ಸ್ಟಡಿ ರೂಮಿನಲ್ಲಿ ಕುಳಿತು ಓದುವುದು ಮತ್ತು ಬರೆಯುವುದು ಬಿಟ್ಟರೆ ಆಕೆಗೆ ಬೇರೆ ಪ್ರಪಂಚವೇ ಇರಲಿಲ್ಲ!

ಆತನು ರಾಬರ್ಟ್ ಬ್ರೌನಿಂಗ್

ಅವನೂ ಲಂಡನ್ ನಗರದವನು. ವಯಸ್ಸು 32. ಆತ ಕೂಡ ಕವಿ ಮತ್ತು ನಾಟಕಕಾರ. ಆತ ಆಕೆಯನ್ನು ಎಂದಿಗೂ ಭೇಟಿ ಮಾಡಿರಲೇ ಇಲ್ಲ. ಆಕೆಯ ಬಗ್ಗೆ ಆತನಿಗೆ ಏನೂ ಗೊತ್ತಿಲ್ಲ. ಆದರೆ ಆಕೆಯ ಕವಿತೆಗಳ ಆರಾಧಕ. ಒಂದು ದಿನ ಧೈರ್ಯ ಮಾಡಿ ಅವಳ ವಿಳಾಸವನ್ನು ಪಡೆದುಕೊಂಡು ‘ನಾನು ನಿಮ್ಮ ಕವಿತೆಗಳನ್ನು ಪ್ರೀತಿ ಮಾಡುತ್ತೇನೆ ‘ಎಂದು ಧೈರ್ಯವಾಗಿ ಪತ್ರ ಬರೆದನು. ಆಶ್ಚರ್ಯ ಪಟ್ಟ ಎಲಿಜೆಬೆತ್ ಧನ್ಯವಾದಗಳು ಎಂದು ಎರಡು ಸಾಲಿನ ಪತ್ರ ಬರೆದಳು. ಯಾರೋ ಒಬ್ಬ ಅಭಿಮಾನಿ ಎಂದು ಆಕೆ ಭಾವಿಸಿದ್ದಳು. ಆದರೆ ರಾಬರ್ಟ್ (Robert Browning) ಬಿಡಬೇಕಲ್ಲ. ಮರುದಿನವೇ ಇನ್ನೊಂದು ಪತ್ರ ಬರೆದು ಪೋಸ್ಟ್ ಮಾಡಿದನು.

ಹೀಗೆ ಮುಂದಿನ 20 ತಿಂಗಳ ಕಾಲ ಅವರಿಬ್ಬರೂ 600 ಪತ್ರಗಳನ್ನು ವಿನಿಮಯ ಮಾಡಿಕೊಂಡರು! ಒಬ್ಬರನ್ನೊಬ್ಬರು ಅಭಿನಂದಿಸಿ ಕೊಂಡರು. ಕವಿತೆಗಳ ಬಗ್ಗೆ ವಿಸ್ತಾರವಾಗಿ ಮಾತಾಡಿದರು. ಎಲ್ಲಿಯೂ ಪ್ರೀತಿಯನ್ನು ಪ್ರಪೋಸ್ ಮಾಡಲಿಲ್ಲ! ಅಥವಾ ಫೋನ್ ಮಾಡಿ ಮಾತನಾಡಲೇ ಇಲ್ಲ!

ಆ ಪತ್ರಗಳ ಪ್ರಭಾವದಿಂದ ಎಲಿಜೆಬೆತ್ ಆರೋಗ್ಯ ಸುಧಾರಣೆ ಆಯ್ತು!

ದೀರ್ಘ ಅವಧಿಗೆ ಅದೃಶ್ಯ ಅಭಿಮಾನಿಯ ಪ್ರೀತಿಪೂರ್ವಕ ಪತ್ರಗಳನ್ನು ಓದುತ್ತಾ, ಅವುಗಳಿಗೆ ಉತ್ತರ ಬರೆಯುತ್ತ ಎಲಿಜೆಬೆತ್ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಆಯ್ತು! ಆಕೆ ಅಫೀಮ್ ಮತ್ತು ಮಾರ್ಫಿನ್ ಡ್ರಗ್ಸ್ ಸೇವನೆಯಿಂದ ನಿಧಾನವಾಗಿ ಹೊರಬಂದಳು. ಒಂದು ದಿನ ಧೈರ್ಯವಾಗಿ ಆತನಿಗೆ ಪತ್ರ ಬರೆದಳು – ನನ್ನಲ್ಲಿ ತುಂಬಾ ಆರೋಗ್ಯ ಸುಧಾರಣೆ ಆಗಿದೆ. ನಾನು ಈಗ ಆರು ವರ್ಷಗಳ ಕತ್ತಲೆಯ ಕೋಣೆಯಿಂದ ಹೊರಬರಬೇಕು ಎಂದು ಆಸೆ ಪಡುತ್ತಾ ಇದ್ದೇನೆ. ನಿನ್ನನ್ನೊಮ್ಮೆ ಭೇಟಿ ಆಗಿ ಥ್ಯಾಂಕ್ಸ್ ಹೇಳಬೇಕು ಅನ್ನಿಸ್ತಿದೆ. ಸಿಗ್ತಿಯಾ?

ಆತ ಒಪ್ಪಿದನು. ಅವರಿಬ್ಬರೂ ಮೊದಲ ಬಾರಿಗೆ ಭೇಟಿ ಆದರು. ʼನಾನು ನಿಮ್ಮನ್ನು ಮದುವೆ ಆಗುತ್ತೇನೆ. ನಿಮ್ಮ ಒಪ್ಪಿಗೆ ಇದೆಯಾ? ‘ಎಂದು ಆಗ ರಾಬರ್ಟ್ ನೇರವಾಗಿ ಕೇಳಿದನು. ಅದನ್ನವಳು ನಿರೀಕ್ಷೆ ಮಾಡಿರಲಿಲ್ಲ. ಈಗ ಎಲಿಜೆಬೆತ್ ಬೆವರಲು ಆರಂಭಿಸಿದಳು.

ಆಕೆಯ ಅಪ್ಪ ಪ್ರೇಮವಿವಾಹಕ್ಕೆ ವಿರೋಧ ಇದ್ದರು

ಆಕೆಯು ಬೆವರಲು ಕಾರಣ ಆಕೆಯ ಅಪ್ಪ ಹಾಕಿದ ನಿರ್ಬಂಧ. ಅವನ ಎರಡು ಮಕ್ಕಳು ಪ್ರೀತಿ ಮಾಡಿ ಓಡಿಹೋಗಿ ಮದುವೆ ಆಗಿದ್ದರು. ಆ ಸಿಟ್ಟಿನಲ್ಲಿ ಆತನು ಎಲಿಜಬೆತ್ ಮಗಳಿಗೆ ಪ್ರೀತಿ ಮಾಡಲೇ ಬಾರದು ಎಂಬ ನಿರ್ಬಂಧವನ್ನು ಹಾಕಿದ್ದನು. ಆಕೆಯ ಸಂದಿಗ್ದವು ರಾಬರ್ಟನಿಗೆ ಅರ್ಥ ಆಯಿತು. ಅವನು ಎಷ್ಟು ಧೈರ್ಯ ತುಂಬಿಸಿದರೂ ಅಪ್ಪನ ಎದುರು ಹೋಗಿ ನಿಂತು ಮಾತಾಡುವ ಧೈರ್ಯ ಅವಳಿಗೆ ಕೊನೆಗೂ ಬರಲಿಲ್ಲ. ಕೊನೆಗೆ 1845ರ ಸೆಪ್ಟೆಂಬರ್ 12ರಂದು ಅವರಿಬ್ಬರೂ ರಹಸ್ಯವಾಗಿ ಮದುವೆ ಆದರು.

ಆಸ್ತಿಯಲ್ಲಿ ಪಾಲು ಕೊಡುವುದಿಲ್ಲ ಎಂದ ಅಪ್ಪ

ಹೇಗೋ ಮದುವೆಯ ರಹಸ್ಯವು ಅಪ್ಪನಿಗೆ ಗೊತ್ತಾಯಿತು. ನಿಮಗೆ ಆಸ್ತಿಯಲ್ಲಿ ಒಂದು ಡಾಲರ್ ಕೂಡ ಕೊಡುವುದಿಲ್ಲ. ಎಲ್ಲಿ ಬೇಕಾದರೂ ಹೋಗಿ ಎಂದು ಗರ್ಜಿಸಿದನು. ಮದುಮಕ್ಕಳನ್ನು ಮನೆಯ ಹೊರಗೆ ನಿಲ್ಲಿಸಿ ದಢಾರ್ ಎಂದು ಬಾಗಿಲು ಹಾಕಿದನು.

ರಾಬರ್ಟ್ ಮತ್ತು ಎಲಿಜಬೆತ್ ಇಬ್ಬರೂ ಬೇಸರ ಮಾಡಿಕೊಳ್ಳಲಿಲ್ಲ. ಬರವಣಿಗೆಯ ಮೂಲಕ ಬದುಕುವ ಶಕ್ತಿ ಇಬ್ಬರಿಗೂ ಇತ್ತು. ತಮ್ಮ ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅವರಿಬ್ಬರೂ ಉಟ್ಟ ಬಟ್ಟೆಯಲ್ಲಿ ಲಂಡನ್ ನಗರವನ್ನು ಬಿಟ್ಟು ಪ್ರೀತಿಯ ಊರಾದ ಇಟಲಿಗೆ ಬಂದರು. ಪೀಸಾದ ವಾಲುವ ಗೋಪುರದ ಮುಂದೆ ನಿಂತು ದಂಪತಿಗಳು ಮೊಟ್ಟಮೊದಲ ಬಾರಿಗೆ ಕಿಸ್ ಮಾಡಿದರು. ಪ್ರೀತಿಯ ಉತ್ಕಟತೆಯನ್ನು ಫೀಲ್ ಮಾಡಿದರು. ಅಲ್ಲಿಯೇ ಮನೆ ಮಾಡಿ ಸಾಹಿತ್ಯದ ಕೆಲಸದಲ್ಲಿ ಮುಳುಗಿದರು.

ಅಲ್ಲಿ ರಾಬರ್ಟ್ ತನ್ನ ಅದ್ಭುತ ಕವಿತೆ ‘ಸಾನೆಟ್ಸ್ ಫ್ರಮ್ ಪೋರ್ಚುಗೀಸ್ ‘ ಬರೆದು ಹೆಂಡತಿಗೆ ಪ್ರೆಸೆಂಟ್ ಮಾಡುತ್ತಾನೆ. ಅದು ಲೋಕಪ್ರಸಿದ್ಧಿ ಪಡೆಯಿತು.

ಆಕೆಯು ಅಷ್ಟೇ ಪ್ರೀತಿಯಿಂದ ʼಪೊಯೆಮ್ಸ್ ಬಿಫೋರ್ ಕಾಂಗ್ರೆಸ್’ ಕವಿತೆಯನ್ನು ಬರೆದು ಅವನಿಗೆ ಅರ್ಪಿಸುತ್ತಾಳೆ. ಗಂಡನ ಪ್ರೀತಿಯಲ್ಲಿ ಮುಳುಗಿ ʼಆರೋರಾ’ ಎಂಬ ಪ್ರೇಮಗ್ರಂಥವನ್ನು ಬರೆದು ಪ್ರಕಟಣೆ ಮಾಡುತ್ತಾಳೆ. ಅವರ ಪ್ರೀತಿಯ ಪ್ರತೀಕವಾಗಿ ಅವರಿಗೆ ವೀಡ್ಮನ್ ಬ್ಯಾರೆಟ್ ಎಂಬ ಮಗನು ಹುಟ್ಟುತ್ತಾನೆ.

1861ರಲ್ಲಿ ರಾಬರ್ಟ್ ತನ್ನ ಮಹತ್ವಾಕಾಂಕ್ಷೆಯ ಕೃತಿ ʼಮೆನ್ ಅಂಡ್ ವಿಮೆನ್’ ಪೂರ್ತಿ ಮಾಡಿ ಪತ್ನಿಯ ಕೈಯ್ಯಲ್ಲಿ ಇಟ್ಟು ಬಿಡುಗಡೆ ಮಾಡುತ್ತಾನೆ. 15 ವರ್ಷಗಳ ಶ್ರೇಷ್ಟ ದಾಂಪತ್ಯದ ಅನುಪಮ ಪ್ರೀತಿಯನ್ನು ಆಸ್ವಾದಿಸಿದ ನಂತರ 1861ರ ಜೂನ್ 29ರಂದು ಎಲಿಜೆಬೆತ್ ತನ್ನ ಗಂಡನ ತೋಳುಗಳಲ್ಲೇ ಉಸಿರು ನಿಲ್ಲಿಸುತ್ತಾಳೆ. ಕೆಲವೇ ವರ್ಷಗಳಲ್ಲಿ ರಾಬರ್ಟ್ ಕೂಡ ನಿಧನ ಹೊಂದುತ್ತಾನೆ.

ಅವರ ಪ್ರೀತಿಗೆ ಸಾಕ್ಷಿಯಾಗಿ ಇಟಲಿಯ ಫ್ಲಾರೆನ್ಸ್ ಎಂಬ ನಗರದಲ್ಲಿ ಇರುವ ಅವರ ನಿವಾಸದ ಪಕ್ಕದಲ್ಲಿ ಅವರಿಬ್ಬರ ಸಮಾಧಿಗಳನ್ನು ನಿರ್ಮಿಸಲಾಗಿದೆ. ಅದರ ಮೇಲೆ ಬರೆದಿರುವ ಒಂದೇ ಸಾಲಿನ ಕವಿತೆ – ಲವ್ ಈಸ್ ನಾಟ್ ಬ್ಲೈಂಡ್!

ಇದನ್ನೂ ಓದಿ: ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

Continue Reading

ಅಂಕಣ

ರಾಜಮಾರ್ಗ ಅಂಕಣ: ಸಾಧನೆಯ ಹಾದಿಯ 25 ಮೈಲಿಗಲ್ಲುಗಳು

ರಾಜಮಾರ್ಗ ಅಂಕಣ: ಯಶಸ್ಸು ಗಳಿಸಲು ಬೇಕಾದ್ದು ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಎಚ್ಚರ. ಇತ್ಯಾದಿ. ನಿಮ್ಮನ್ನು ಗೆಲುವಿನ ಕಡೆಗೆ ಒಯ್ಯುವ 25 ಸೂತ್ರಗಳು ಇಲ್ಲಿವೆ.

VISTARANEWS.COM


on

winning tips ರಾಜಮಾರ್ಗ ಅಂಕಣ
Koo

ಗೆಲ್ಲಲು ಹೊರಟವರಿಗೆ ನಿಜವಾದ ಬೂಸ್ಟರ್ ಡೋಸ್ ಈ ಸೂತ್ರಗಳು

Rajendra-Bhat-Raja-Marga-Main-logo

:: ರಾಜೇಂದ್ರ ಭಟ್‌ ಕೆ.

ರಾಜಮಾರ್ಗ ಅಂಕಣ: ಗೆಲ್ಲುವುದು (Winning) ಯಾರಿಗೆ ಬೇಡ ಹೇಳಿ? ಸೋಲಲು ಯಾರೂ ಬಯಸುವುದಿಲ್ಲ. ದಿಗಂತದ ಕಡೆಗೆ ದೃಷ್ಟಿ ನೆಟ್ಟು ಸಾಧನೆಯ (achievement) ಹಸಿವು ಮತ್ತು ಕನಸಿನ ಕಸುವುಗಳನ್ನು ಜೋಡಿಸಿಕೊಂಡು ನಾವು ಖಂಡಿತ ಗೆಲ್ಲಲೇಬೇಕು ಎಂದು ಹೊರಟಾಗ ಈ 25 ಸೂತ್ರಗಳು (Success Tips) ನಿಮ್ಮನ್ನು ಗೆಲ್ಲಿಸುತ್ತವೆ.

1) ಗಮ್ಯ (Aim) – ನಾವು ತಲುಪಬೇಕಾದ ಸ್ಥಳದ ಸರಿಯಾದ ಅರಿವು.

2) ದಾರಿ (Way)- ನಾವು ಕ್ರಮಿಸಬೇಕಾದ ನ್ಯಾಯಯುತವಾದ ಮತ್ತು ನೇರವಾದ ದಾರಿ.

3) ಆತ್ಮವಿಶ್ವಾಸ (confidence) – ಖಂಡಿತ ಗಮ್ಯವನ್ನು ತಲುಪುವೆ ಎಂಬ ನಂಬಿಕೆಯು ನಮಗೆ ಇಂಧನ ಆಗುತ್ತದೆ.

4) ಎಚ್ಚರ – ಎಂದಿಗೂ ತಪ್ಪು ದಾರಿ ಹಿಡಿಯುವುದಿಲ್ಲ ಎಂಬ ನಮ್ಮ ನಿರ್ಧಾರ

5) ಮಾರ್ಗದರ್ಶಕರು – ಕೈ ಹಿಡಿದು ನಡೆಸುವ ಮಂದಿ ಸದಾ ನಮ್ಮನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುತ್ತಾರೆ.

6) ಇಚ್ಛಾ ಶಕ್ತಿ – ಎಲ್ಲೂ ನಾನು ಕ್ವಿಟ್ ಮಾಡುವುದಿಲ್ಲ ಎಂಬ ಹಠ. ಅದೇ ನಮಗೆ ಲುಬ್ರಿಕೆಂಟ್.

7) ಪಾಸಿಟಿವ್ ಥಿಂಕಿಂಗ್ (Positive thinking)- ಎಂತಹ ಸವಾಲು, ಸಮಸ್ಯೆಗಳು ಎದುರಾದರೂ ಎದುರಿಸಿ ನಿಲ್ಲುವೆ ಎನ್ನುವ ಗಟ್ಟಿ ನಿಲುವು.

8) ಕಾಳಜಿ – ನಮ್ಮ ಜೊತೆಗೆ ಹೆಜ್ಜೆ ಹಾಕಿ ನಡೆಯುವವರ ಬಗ್ಗೆ ತೀವ್ರವಾದ ಕಾಳಜಿ.

9) ಸ್ಟಾಟರ್ಜಿ – ದುರ್ಗಮವಾದ ಹಾದಿಯಲ್ಲಿ ಹೆಜ್ಜೆಯಿಟ್ಟು ನಡೆಯುವಾಗ ಅದಕ್ಕೆ ಪೂರಕವಾದ ತಂತ್ರಗಾರಿಕೆ ಮತ್ತು ಯೋಜನೆ.

10) ತಾಳ್ಮೆ – ನಮ್ಮೊಳಗಿನ ಸತ್ವವನ್ನು ಹೆಚ್ಚಿಸುವ ಮತ್ತು ನಮ್ಮನ್ನು ಎಂದಿಗೂ ಸೋಲಲು ಬಿಡದ ಟೆಂಪರಮೆಂಟ್.

11) ಫೋಕಸ್ – ಒಂದಿಷ್ಟೂ ವಿಚಲಿತವಾಗದ ಮನಸ್ಥಿತಿ. ಆಮಿಷಗಳಿಗೆ, ಅಡ್ಡ ದಾರಿಗಳಿಗೆ ನಮ್ಮನ್ನು ಎಳೆಯದ ಗಟ್ಟಿ ಮನಸ್ಸು.

12) ಅಹಂ ರಾಹಿತ್ಯ – ಒಂದಿಷ್ಟೂ ಅಹಂ ಇಲ್ಲದ, ಎಷ್ಟು ಸಾಧನೆ ಮಾಡಿದರೂ ನಾನೇನು ಮಾಡಿಲ್ಲ ಎನ್ನುವ ವಿಕ್ಷಿಪ್ತ ಭಾವನೆ.

13) ನಿರಂತರತೆ – ಯಾವ ಏರು,ತಗ್ಗಿನ ರಸ್ತೆಯಲ್ಲಿಯೂ ವೇಗವನ್ನು ಕಳೆದುಕೊಳ್ಳದ ಶಕ್ತಿ.

14) ಕಾಂಪಿಟೆನ್ಸಿ – ಯಾವ ರೀತಿಯ ಸ್ಪರ್ಧೆಗೂ ನಮ್ಮನ್ನು ತೆರೆದುಕೊಳ್ಳುವ ಮತ್ತು ಎದುರಿಸಿ ನಿಲ್ಲುವ ಗಟ್ಟಿತನ.

15) ನಮ್ಮ ಕಾಂಪಿಟಿಟರ್ – ನೀವು ಒಪ್ಪುತ್ತೀರೋ ಅಥವಾ ಬಿಡುತ್ತೀರೋ ಗೊತ್ತಿಲ್ಲ. ನಮ್ಮ ಸ್ಪರ್ಧಿಗಳು ನಮ್ಮನ್ನು ಸದಾ ಜಾಗೃತವಾಗಿ ಇಟ್ಟುಕೊಂಡು ಗೆಲುವಿನ ಕಡೆಗೆ ಮುನ್ನಡೆವ ಉತ್ಸಾಹ ತುಂಬುತ್ತಾರೆ.

16) ಸವಾಲುಗಳು – ನಾವು ಒಳ್ಳೆಯ ಚಾಲಕ ಆಗಬೇಕು ಎಂದು ನೀವು ನಿರ್ಧರಿಸಿದರೆ ದೊಡ್ಡ ಹೆದ್ದಾರಿಯಲ್ಲಿ ಗಾಡಿ ಓಡಿಸುವುದಲ್ಲ. ದುರ್ಗಮವಾದ ರಸ್ತೆಗಳನ್ನು ಆಯ್ಕೆ ಮಾಡಬೇಕು!

17) ಆದ್ಯತೆಗಳು – ಹೊರಳು ದಾರಿಯಲ್ಲಿ ಸರಿಯಾದದ್ದನ್ನು ಮತ್ತು ಸೂಕ್ತವಾದದ್ದನ್ನು ನಮ್ಮ ವಿವೇಚನೆಯಿಂದ ಆಯ್ಕೆ ಮಾಡಿಕೊಳ್ಳುವುದು.

18) ಉತ್ಕೃಷ್ಟತೆ – ಯಾವಾಗಲೂ ಉತ್ತಮವಾದದ್ದನ್ನು ಮತ್ತು ಸರಿಯಾದದ್ದನ್ನು ಆರಿಸುವ ಪ್ರೌಢಿಮೆ.

19)ಪ್ಲಾನಿಂಗ್ – ಸರಿಯಾದ ಯೋಜನೆ ಇದ್ದರೆ ಸೋಲು ಕೂಡ ಸೋಲುತ್ತದೆ.

business man
business man

20) ಉದ್ದೇಶದ ಸ್ಪಷ್ಟತೆ – ನಮ್ಮ ಪ್ರಯಾಣದ ಉದ್ದೇಶವು ನಮಗೆ ಸ್ಪಷ್ಟವಾಗಿದ್ದರೆ ಗೆಲುವು ಸುಲಭ. ಯಾಕೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದರೆ ಹೇಗೆ? ಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ಸುಲಭ ಆಗುತ್ತದೆ.

21) ಅನುಭವಗಳಿಂದ ಪಾಠ ಕಲಿಯುವುದು – ನಮ್ಮ ತಪ್ಪುಗಳಿಂದ ಪಾಠ ಕಲಿಯುವಷ್ಟು ನಮ್ಮ ಆಯಸ್ಸು ದೊಡ್ಡದಲ್ಲ. ಬೇರೆಯವರ ತಪ್ಪುಗಳಿಂದ ಕೂಡ ಪಾಠ ಕಲಿಯಬಹುದು.

22) ಟೀಮ್ ವರ್ಕ್ – ತಂಡವಾಗಿ ಕೆಲಸ ಮಾಡುವ ಖುಷಿ ನಮ್ಮ ಗೆಲುವನ್ನು ಖಾತರಿ ಮಾಡುತ್ತದೆ.

23) ಸ್ವಯಂ ಶಿಸ್ತು – ನಮಗೆ ನಾವೇ ಹಾಕಿಕೊಂಡ ಶಿಸ್ತು ಮತ್ತು ಅನುಶಾಸನಗಳ ಗೆರೆಗಳು ನಮ್ಮನ್ನು ಸೋಲಲು ಬಿಡುವುದಿಲ್ಲ.

24) ವಾಸ್ತವದ ಪ್ರಜ್ಞೆ – ನಮ್ಮ ಭ್ರಮೆಗಳಿಂದ ಹೊರಬಂದು ವಾಸ್ತವದ ಪ್ರಜ್ಞೆಯೊಂದಿಗೆ ಮುನ್ನಡೆಯುವುದು ನಮ್ಮ ಗೆಲುವನ್ನು ಸುಲಭ ಮಾಡುತ್ತದೆ.

25) ಅವಲೋಕನ- ಒಮ್ಮೆ ನಾವು ಪ್ರಯಾಣ ಮಾಡಿದ ದಾರಿಯನ್ನು ಹಿಂತಿರುಗಿ ನೋಡಿ ಮತ್ತೆ ಮುಂದಿನ ಗಮ್ಯಕ್ಕೆ ತಯಾರಿ ಮಾಡುವುದು.

ಇವಿಷ್ಟನ್ನು ಬಂಡವಾಳ ಮಾಡಿಕೊಂಡು ಹೊರಡಿ. ನಿಮ್ಮನ್ನು ಸೋಲಿಸಲು ನಿಮ್ಮ ಶತ್ರುಗಳಿಗೂ ಸಾಧ್ಯ ಇಲ್ಲ. ಗೆಲುವು ನಿಮ್ಮದಾಗಲಿ.

ಇದನ್ನೂ ಓದಿ: ರಾಜಮಾರ್ಗ ಅಂಕಣ: ಈ 20 ಅಂಶಗಳನ್ನು ಸರಿಯಾಗಿ ಪಾಲಿಸಿದರೆ ಗೋಲ್ಡನ್ ಮೆಮೊರಿ ನಿಮ್ಮದು!

Continue Reading

ಅಂಕಣ

ಕೇರಂ ಬೋರ್ಡ್‌ ಅಂಕಣ: ಮಲೆನಾಡಿನ ಮಳೆಯಲ್ಲಿ ಶ್ರೀರಾಮ ಏನಾದ?

ಕೇರಂ ಬೋರ್ಡ್:‌ ಸೀತೆಯನ್ನು ಕಳೆದುಕೊಂಡು ವಿರಹತಪ್ತನಾದ ಶ್ರೀರಾಮ ಮಳೆಗಾಲದ ನಾಲ್ಕು ತಿಂಗಳುಗಳನ್ನು ಪರ್ವತದ ಗುಹೆಯೊಂದರಲ್ಲಿ ಕಳೆಯಬೇಕಾಗುತ್ತದೆ. ಈ ಮಳೆಕಾಡಿದ ಮುಂಗಾರಿನ ವನವಾಸ ರಾಮನಿಗೆ ಮಾಡಿದ್ದೇನು?

VISTARANEWS.COM


on

ಕೇರಂ ಬೋರ್ಡ್‌ rama and laxmana
Koo

ʼರಾಮಾಯಣ ದರ್ಶನಂʼ ಕಾಣಿಸಿದ ಒಂದು ದರ್ಶನ

kerum board

ಮಳೆಗಾಲ (Monsoon) ಎಂದರೆ ನೆನಪಾಗುವುದು ಬಾಲ್ಯದ ಮಲೆನಾಡಿನ ಎಡೆಬಿಡದ ಮುಂಗಾರು; ನಂತರ ಅದೇ ಮೈಯಾಂತು ಬಂದಂತೆ ‘ಶ್ರೀ ರಾಮಾಯಣ ದರ್ಶನಂ’ ಕೃತಿಯಲ್ಲಿ ಕುವೆಂಪು (Kuvempu) ಕಾಣಿಸಿದ ಕಾರ್ಗಾಲ. ಅದು ಅಂತಿಂಥ ಕಾವಳದ ಕಾಲವಲ್ಲ. ಮಲೆಗಳಲ್ಲಿ ಮದುಮಗಳು, ಕಾನೂರು ಕಾದಂಬರಿಗಳಲ್ಲೂ  ಅವರ ‘ಕದ್ದಿಂಗಳು ಕಗ್ಗತ್ತಲು’ ಮೊದಲಾದ ಪದ್ಯಗಳಲ್ಲೂ  ಅದರ ಝಲಕ್ ಇದೆ. ರಾಮಾಯಣ ದರ್ಶನಂನಲ್ಲಿ ಕತೆಯ ಭಾಗವಾಗಿ, ಶ್ರೀ ರಾಮನ (Sri Rama) ಮನಸ್ಸಿನ ಭಾವರೂಪಕವಾಗಿ, ಸೀತಾವಿರಹದ ವಸ್ತುಪ್ರತಿರೂಪವಾಗಿ ಅದು ಬರುತ್ತದೆ.

ಅದು ಶುರುವಾಗುವುದು ಹೀಗೆ: ವನವಾಸದ ವೇಳೆ ಸೀತೆಯನ್ನು ಕಳೆದುಕೊಂಡ ರಾಮ ಪಂಚವಟಿಯಿಂದ ಮುಂದೊತ್ತಿ ಬಂದು ಕಿಷ್ಕಿಂಧೆಯಲ್ಲಿ ಸುಗ್ರೀವನ ಸಖ್ಯ ಬೆಳೆಸಿ, ವಾಲಿವಧೆ ಮಾಡುತ್ತಾನೆ. ಅಷ್ಟರಲ್ಲಿ ಮಳೆಗಾಲ ಸಮೀಪಿಸುತ್ತದೆ. ವನವಾಸವಾದ್ದರಿಂದ ಅವನಿಗೆ ಪುರಪ್ರವೇಶವಿಲ್ಲ. ಹೀಗಾಗಿ ಪ್ರಸ್ರವಣ ಪರ್ವತದ ಗುಹೆಯೊಂದರಲ್ಲಿ ತಂಗುತ್ತಾನೆ. ಮುಂಗಾರಿಗಾಗಿ ತಿರೆ ಬಾಯಾರಿದೆ- ಸೀತೆಯ ವಿರಹತಪ್ತ ರಾಮನ ಹಾಗೆ. ದಿಗಂತದಂಚಲ್ಲಿ ಮೇಘಸ್ತೋಮ ಮೇಲ್ಮೇಲೆದ್ದು ಬರುತ್ತದೆ-

ಸೀತೆಗೆ ರಾಮನಂತೆ, ಮುಂಗಾರ್ಗೆ ತಿರೆ
ಬಾಯಾರುತಿರೆ, ಓ ಆ ದಿಗಂತದೆಡೆ, ವರದಂತೆವೋಲ್
ಕಾಣಿಸಿತು ವರ್ಷಶಾಪಂ, ರವಿಸಂಗಿ, ಶರಧಿಶಿಶು,
ನೀರದಸ್ತೂಪನೀಲಂ, ಶಿವನ ಜಟೆಯಂತೆವೋಲ್
ಶಿಖರಾಕೃತಿಯಿನುಣ್ಮಿ, ಮೇಲೆಮೇಲಕ್ಕೇರ್ದು
ಶೈಲಾಕೃತಿಯಿನುರ್ಬ್ಬಿ, ತೆಕ್ಕನೆ ಕದದ್ದತ್ತು.
ಕುಣಿವ ಕಾಳಿಯ ಕರಿಯ ಮುಡಿ ಬಿರ್ಚ್ಚಿ ಪರ್ವುವೋಲ್,
ಸಂಜೆಬಾನಂ ಮುಸುಕಿ ಮುಚ್ಚಿ. ಮೇಣ್ ಕಾರ್ಗಾಳಿ
ಬೀಸಿದುದು ಮಲೆಯ ಮಂಡೆಯ ಕಾಡುಗೂದಲಂ
ಪಿಡಿದಲುಬಿ ತೂಗಿ, ನೋವಿಂಗೊರಲಿದತ್ತಡವಿ :
ಹಳೆಮರಗಳುರುಳಿ ; ಮರಕೆ ಮರವುಜ್ಜಿ ; ಕೊಂಬೆಗೆ
ಕೊಂಬೆ ತೀಡಿ ; ಮಳೆಯೊಳ್ ಬಿದಿರು ಕರ್ಕಶವುಲಿಯ
ಕೀರಿ, ಸಿಡಿರೋಷದಿಂ ಕಿಡಿಯಿಡುವ ಮಸಿನವಿರ
ಪುರ್ಬ್ಬಿನಾ ಕಾರ ರಾಕ್ಷಸಿಯಕ್ಷಿಯಲೆವಂತೆ

ಈ ಮುಂಗಾರು ‘ವರ್ಷಶಾಪಂ’. ವಿರಹಾಗ್ನಿದಗ್ಧ ರಾಮನಂತಃಕರಣದ ಕ್ಷೋಭೆಯಂತೆ ಇಲ್ಲಿ ಕಾಣುವುದೆಲ್ಲ ಕರಾಳ ಪ್ರತಿಮೆಗಳು- ತಲೆಕುಚ್ಚು ಹಿಡಿದಲುಗಿಸುವ, ನೋವಿಗೆ ಒರಲುವ, ಕರ್ಕಶ ಕೀರುವ ಬಿದುರಿನ, ಕಡುಗಪ್ಪುಗೂದಲಿನ ಹುಬ್ಬಿನ ಯಕ್ಷಿರಾಕ್ಷಸಿ ಇತ್ಯಾದಿ. ಮಳೆ ಶುರುವಾಗುತ್ತದೆ:

ಮಿಂಚಿತು ಮುಗಿಲಿನಂಚು, ಸಂಘಟ್ಟಣೆಗೆ ಸಿಡಿಲ್
ಗುಡುಗಿದವು ಕಾರ್ಗಲ್ ಮುಗಿಲ್‌ಬಂಡೆ, ತೋರ ಹನಿ
ಮೇಣಾಲಿಕಲ್ ಕವಣೆವೀಸಿದುವು. ಬಿಸಿಲುಡುಗಿ,
ದೂಳುಂಡೆಗಟ್ಟಿ, ಮಣ್‌ತೊಯ್ದು, ಕಮ್ಮನೆ ಸೊಗಸಿ
ತೀಡಿದುದು ನೆಲಗಂಪು ನಲ್, ಝಣನ್ನೂಪುರದ
ಸುಸ್ವರದ ಮಾಧುರ್ಯದಿಂ ಕನತ್ಕಾಂತಿಯಿಂ
ಝರದ ಝಲ್ಲರಿಯ ಜವನಿಕೆಯಾಂತು ನರ್ತಿಸುವ
ಯೌವನಾ ಯವನಿಯ ಕರದ ಪೊಂಜುರಿಗೆಯಂತೆ
ಸುಮನೋಜ್ಞಮಾದುದಾ ಭೀಷ್ಮ ಸೌಂದರ್ಯದಾ
ಮುಂಗಾರ್ ಮೊದಲ್.

ಹಿಂಗಿದುದು ಬಡತನಂ ತೊರೆಗೆ,
ಮೊಳೆತುದು ಪಸುರ್‌ ತಿರೆಗೆ, ಪೀತಾಂಬರಕೆ
ಜರತಾರಿಯೆರಚುವೋಲಂತೆ ಕಂಗೊಳಿಸಿದುದು
ಹಸುರು ಗರುಕೆಯ ಪಚ್ಚೆವಾಸಗೆಯೊಳುದುರಿರ್ದ
ಪೂವಳದಿ ಪೊನ್, ಬಂಡೆಗಲ್ ಬಿರುಕಿನಿಂದಾಸೆ
ಕಣ್ದೆರೆಯುವಂತೆ ತಲೆಯೆತ್ತಿದುದು ಸೊಂಪುವುಲ್.
ಮಿಂದು ನಲಿದುದು ನಗಂ : ಮೇದು ತಣಿದುದು ಮಿಗಂ ;
ಗರಿಗೊಂಡೆರಂಕೆಗೆದರುತೆ ಹಾಡಿ ಹಾರಾಡಿ
ಹಣ್ಣುಂಡು ಹಿಗ್ಗಿದುದು ಹಕ್ಕಿಯ ಮರಿಯ ಸೊಗಂ.
ಮಳೆ ಹಿಡಿದುದತಿಥಿಯಾಗೈತಂದವಂ ಮನೆಗೆ
ತನ್ನೊಡೆತನವನೊಡ್ಡಿ ನಿಲ್ವಂತೆ.

ಮಳೆ ಹಿಡಿದದ್ದು ಮನೆಗೆ ಬಂದ ಅತಿಥಿ ಮನೆಗೇ ಒಡೆತನವನ್ನೊಡ್ಡಿದಂತಾಯ್ತು- ಭಿಕ್ಷೆ ಬೇಡಲು ಬಂದವನು ಗೃಹಿಣಿಯನ್ನೇ ಅಪಹರಿಸಿದಂತೆ! ಇಲ್ಲಿಂದ ರಾಮನ ಏಕಾಂತದುರಿಯ, ಭಗ್ನಮಾನಸದ ದುರ್ದಿನಗಳು ಆರಂಭವಾಗುತ್ತವೆ:

ದುರ್ದಿನಂ ದ್ರವರೂಪಿಯಾಗಿ ಕರಕರೆಯ ಕರೆದುದನಿಶಂ
ದೂರವಾದುದು ದಿನಪದರ್ಶನಂ,

(ದಿನಪಕುಲಜನಿಗೆ ದಿನಪದರ್ಶನ ದುರ್ಲಭವಾಯಿತು)

ಕವಿದುದಯ್
ಕರ್ಮುಗಿಲ ಮರ್ಬ್ಬಿನ ಮಂಕು ಪಗಲಮ್. ಇರುಳಂ
ಕರುಳನಿರಿದುದು ಕೀಟಕೋಟಿಯ ಕಂಠವಿಕೃತಿ.

ಸುಖದ ದಿನಗಳಲ್ಲಿ ಜೋಗುಳವೆನಿಸಬಹುದಾಗಿದ್ದ ಇರುಳ ಕೀಟಗಳ ದನಿಯೀಗ ಕಂಠವಿಕೃತಿ. ಇಲ್ಲಿಂದಾಚೆ ಮಲೆನಾಡಿನವರಿಗೆ ಸುಲಭವಾಗಿ ಅರ್ಥವಾಗಬಹುದಾದ ಚಿತ್ರಗಳು. ಗಟ್ಟಿ ಹಿಡಿದು ಸುರಿಯುವ ಮಳೆಗೆ ಮುದುಡುವ ಜೀವರಾಜಿಯ ನೋಟಗಳು.

ramayana forest
rama laxmana

ಗರಿ ತೊಯ್ದು ಮೆಯ್ದಂಟಿ ಕಿರಿಗೊಂಡ ಗಾತ್ರದಿಂ
ಮುದುರಿದೊದ್ದೆಯ ಮುದ್ದೆಯಾಗಿ ಕುಗುರಿತು ಹಕ್ಕಿ
ಹೆಗ್ಗೊಂಬನೇರಿ, ಕಾಡಂಚಿನಾ ಪಸಲೆಯಂ
ನಿಲ್ವಿರ್ಕೆ ಗೈದು, ರೋಮಂದೊಯ್ದಜಿನದಿಂದ
ಕರ್ಪು ಬಣ್ಣಂಬಡೆದವೋಲಿರ್ದು, ಹರಹರೆಯ
ಕೊಂಬಿನಿಂದಿಂಬೆಸೆವ ಮಂಡೆಯ ಮೊಗವನಿಳುಹಿ,
ಜಡಿಯ ಜಿನುಗಿಗೆ ರೋಸಿ, ತನ್ನ ಹಿಂಡಿನ ನಡುವೆ
ನಿಂದುದು ಮಳೆಗೆ ಮಲೆತು, ಕೆಸರು ಮುಚ್ಚಿದ ಖುರದ
ಕಾಲ್ಗಳ ಮಿಗದ ಹೋರಿ.

ಕಲ್ಲರೆಯನೇರಿದುದು
ಕಟ್ಟಿರುಂಪೆಯ ಪೀಡೆಗಾರದ ಮೊಲಂ, ಜಿಗಣೆ,
ನುಸಿ, ಹನಿಗಳಿಗೆ ಹೆದರಿ ಹಳುವನುಳಿಯುತ್ತೆ ಹುಲಿ
ಹಳು ಬೆಳೆಯದತ್ತರದ ಮಲೆಯ ನೆತ್ತಿಯನರಸಿ
ಚರಿಸಿದುದು. ಜೀರೆಂಬ ಕೀ‌ದನಿಯ ಚೀ‌ರ್‌ಚೀರಿ
ಪಗಲಿರುಳ ಗೋಳಗರೆದುದಯ್ ಝಿಲ್ಲಿಕಾ ಸೇನೆ :
ಬೇಸರದೇಕನಾದಮಂ ಓ ಬೇಸರಿಲ್ಲದೆಯೆ
ಬಾರಿಸುತನವರತಂ ಬಡಿದುದು ಜಡಿಯ ಸೋನೆ !

ಹೀಗೆ ಸಾಮಾನ್ಯರಿಗೂ ಮಂಕು ಹಿಡಿಸುವ ಕಾರ್ಗಾಲ, ಜೀವನದ ಗಾಢ ವಿಷಣ್ಣಕಾಲದಲ್ಲಿರುವವನಿಗೆ ಇನ್ನು ಹೇಗಿರಬಹುದು. ಒಂದೊಂದೇ ಮಾಸ ಯಾವಾಗ ಮುಗಿಯುತ್ತದೆ, ಯಾವಾಗ ಬಿಸಿಲೇಳುತ್ತದೆ ಎಂದು ಕಾಯುವ ಕರ್ಮ.

ಕಳೆದುದಯ್ ಜೇಷ್ಠಮಾಸಂ. ತೊಲಗಿತಾಷಾಢಮುಂ.
ತೀರ್ದುದಾ ಶ್ರಾವಣಂ. ಭಾದ್ರಪದ ದೀರ್ಘಮುಂ,
ಶಿವಶಿವಾ, ಕೊನೆಮುಟ್ಟಿದತ್ತೆಂತೊ ! ದಾಶರಥಿ ತಾಂ
ಮಾಲ್ಯವತ್ ಪರ್ವತ ಗುಹಾಶ್ರಮದಿ ಕೇಳ್, ಶ್ರಮದಿಂದ
ನೂಂಕುತಿರ್ದನ್ ಮಳೆಯ ಕಾಲಮಂ, ಕಾಲಮಂ
ಸತಿಯ ಚಿಂತೆಗೆ ಸಮನ್ವಯಿಸಿ, ಬೈಗು ಬೆಳಗ
ಮೇಣ್ ಪಗಲಿರುಳಂ ದಹಿಸಿತಗಲಿಕೆವೆಂಕೆ :
ಪಡಿದೋರ್ದುದಾ ವಿರಹಮಿಂದ್ರಗೋಪಂಗಳಿಂ ಮೇಣ್
ಮಿಂಚುಂಬುಳುಗಳಿಂ; ಇರುಳ್, ಅಣ್ಣತಮ್ಮದಿ‌ರ್
ಗವಿಯೊಳ್ ಮಲಗಿ, ನಿದ್ದೆ ಬಾರದಿರೆ, ನುಡಿಯುವರ್

ಹಗಲು ಕಾಮನಬಿಲ್ಲುಗಳು ವಿರಹವನ್ನು ವೆಗ್ಗಳಿಸುವುವು. ಇರುಳು ಅಗಲಿಕೆ ಬೆಂಕಿ ದಹಿಸಿ ನಿದ್ದೆ ಬಾರದು. ಅಣ್ಣ ತಮ್ಮಂದಿರು ಕತ್ತಲನ್ನು ದಿಟ್ಟಿಸುತ್ತಾ ಮಾತನಾಡುವರು. ಮಾತಿನಲ್ಲಿ ಅಸ್ಪಷ್ಟ ಭವಿಷ್ಯದ ಚಿತ್ರ.

ಕಡೆಯುವರ್ ತಮ್ಮ ಮುಂದಣ ಕಜ್ಜವಟ್ಟೆಯಂ.
ಕಾರಿರುಳ್‌. ಹೆಪ್ಪುಗಟ್ಟಿದ ಕಪ್ಪು, ಕಲ್ಲಂತೆವೋಲ್.
ಹೊರಗೆ, ಮಳೆ ಕರಕರೆಯ ಕರೆಯುತಿದೆ. ಕಪ್ಪೆ ಹುಳು
ಹಪ್ಪಟೆಯ ಕೊರಳ ಸಾವಿರ ಹಲ್ಲ ಗರಗಸಂ
ಗರ್ಗರನೆ ಕೊರೆಯುತಿದೆ ನಿಶೆಯ ನಿಶ್ಯಬ್ದತೆಯ
ಖರ್ಪರವನಾಲಿಸಿದ ಕಿವಿ ಮೂರ್ಛೆವೋಪಂತೆ :

ಸಹ್ಯಾದ್ರಿಯ ಇರುಳಮಳೆ ಎಂದರೆ ಕಪ್ಪೆ ಇತ್ಯಾದಿ ಕೀಟಕೋಟಿಯ ಘೋಷಗಳೂ ಸೇರಿದ ಸಹಸ್ರ ದಂತ ಗರಗಸದ ಕೊರೆತ!

“ಏನ್ ವೃಷ್ಟಿ ಘೋಷಮಿದು, ಆಲಿಸಾ, ಸೌಮಿತ್ರಿ !
ಮಲೆ ಕಾಡು ನಾಡು ಬಾನ್ ಒಕ್ಕೊರಲೊಳೊಂದಾಗಿ
ಬಾಯಳಿದು ಬೊಬ್ಬಿರಿಯುತಿಪ್ಪಂತೆ ತೋರುತಿದೆ.
ಈ ಪ್ರಕೃತಿಯಾಟೋಪದೀ ಉಗ್ರತೆಯ ಮಧ್ಯೆ
ನಾವ್ ಮನುಜರತ್ಯಲ್ಪ ಕೃತಿ ! ನಮ್ಮಹಂಕಾರ
ರೋಗಕಿಂತಪ್ಪ ಬೃಹದುಗ್ರತಾ ಸಾನ್ನಿಧ್ಯಮೇ
ದಿವ್ಯ ಭೇಷಜಮೆಂಬುದೆನ್ನನುಭವಂ. ಇಲ್ಲಿ,
ಈ ಗರಡಿಯೊಳ್ ಸಾಧನೆಯನೆಸಗಿದಾತಂಗೆ
ದೊರೆಕೊಳ್ವುದೇನ್ ದುರ್ಲಭಂ ಪಾರ್ವತಸ್ಥಿರತೆ ?
ಸಾಕ್ಷಿಯದಕಿರ್ಪನಾಂಜನೇಯಂ !..”

ಆಗ ರಾಮನ ಮನದಲ್ಲಿ ಮೂಡುವ ಮೂರ್ತಿ ಆಂಜನೇಯ. ಇಂಥ ಪ್ರ‌ಕೃತಿಯಾಟೋಪದ ಬೃಹದುಗ್ರತಾಸಾನಿಧ್ಯವೇ ನಮ್ಮ ಅಹಂಕಾರಗಳು ಅಳಿಯಲು ಸೂಕ್ತ ಮದ್ದು. ಇಂಥ ಗರಡಿಯ ಸಾಧನೆಯಲ್ಲಿಯೇ ಹನುಮನಂಥ ಪರ್ವತಸ್ಥಿರ ವ್ಯಕ್ತಿತ್ವ ರೂಪುಗೊಂಡೀತು ಎಂಬ ಕಾಣ್ಕೆ ಅವನದು. ಆಮೇಲೆ ನಳ ನೀಲ ಮುಂತಾದ ವಾನರವೀರರ ಕುರಿತೂ ಮಾತಾಗುತ್ತದೆ.

ಆದರೆ ಮಳೆಗಾಲದ ಐದು ತಿಂಗಳು ಕಳೆಯುತ್ತ ಬಂದರೂ ಸುಗ್ರೀವನ ಸುಳಿವಿಲ್ಲ. ವಾನರವೀರರನ್ನು ಕರೆದುಕೊಂಡು ಬಂದು ಸೀತಾನ್ವೇಷಣೆಗೆ ನೆರವಾಗುತ್ತೇನೆ ಎಂದಿದ್ದ ಕಪಿವೀರನ ಸದ್ದಿಲ್ಲ. ಆತಂಕ ಒಳಗೊಳಗೇ ಮಡುಗಟ್ಟುತ್ತದೆ. ಮರೆತನೇನು? ಲಕ್ಷ್ಮಣ ನಾನೇ ಹೋಗಿ ಸುಗ್ರೀವನ ಕಂಡು ಬರುವೆ ಎಂದು ಹೂಂಕರಿಸುತ್ತಾನೆ. ಆದರೆ ರಾಮನೇ ಅವನನ್ನು ಸುಮ್ಮನಿರಿಸುತ್ತಾನೆ. ಈ ಭಯಂಕರ ಮಳೆಯಲ್ಲಿ ಯಾರು ಎಲ್ಲಿ ಹೇಗೆ ಓಡಾಡಲು ಸಾಧ್ಯ? ಮಳೆ ಕಳೆದ ಮೇಲೆ ಬಾ ಎಂದು ನಾನೇ ಅವನಿಗೆ ಹೇಳಿದ್ದಾನೆ ಎನ್ನುತ್ತಾನೆ. ಅಷ್ಟರಲ್ಲಿ ಬಂತು ಅಶ್ವಯುಜ ಮಾಸ!

ನುಗ್ಗುತಿರ್ದ್ದತ್ತಾಶ್ವಯುಜ ವರ್ಷಾಶ್ವದಳದ
ಹೇಷಾರವದ ಘೋಷಂ !… ಆಲಿಸುತ್ತಿದ್ದಂತೆ,
ಅರಳಿದುವು ಕಣ್ಣಾಲಿ : ಘೋರಾಂಧಕಾರದಾ
ಸಾಗರದಿ ತೇಲಿ ಬಹ ಹನಿಮಿಂಚಿನಂತೆವೋಲ್,
ಮಿಂಚುಂಬುಳೊಂದೊಯ್ಯನೊಯ್ಯನೆಯೆ ಪೊಕ್ಕುದಾ
ಕಗ್ಗತ್ತಲೆಯ ಗವಿಗೆ, ತೇಲುತೀಜುತ ಮೆಲ್ಲ
ಮೆಲ್ಲನೆಯೆ ಹಾರಾಡಿ ನಲಿದಾಡಿತಲ್ಲಲ್ಲಿ,
ಮಿಂಚಿನ ಹನಿಯ ಚೆಲ್ಲಿ, ಮಿಂಚಿನ ಹನಿಯ ಸೋರ್ವ
ಮಿಂಚುಂಬನಿಯ ಪೋಲ್ವ ಮಿಂಚುಂಬುಳುವನಕ್ಷಿ
ಸೋಲ್ವಿನಂ ನೋಡಿ, ರಾಮನ ಕಣ್ಗೆ ಹನಿ ಮೂಡಿ,
ತೊಯ್ದತ್ತು ಕೆನ್ನೆ : ತೆಕ್ಕನೆ ತುಂಬಿದುದು ಶಾಂತಿ
ತನ್ನಾತ್ಮಮಂ ! ಮತ್ತೆಮತ್ತೆ ನೋಡಿದನದಂ.
ಸಾಮಾನ್ಯಮಂ, ಆ ಅನಿರ್ವಚನೀಯ ದೃಶ್ಯಮಂ !

rama laxmana
rama laxmana

ಕಗ್ಗತ್ತಲು ಕವಿದ ರಾಮನ ಬದುಕಿಗೆ ಭರವಸೆಯ ಬೆಳಕು ಬಂದುದು ಒಂದು ಸಣ್ಣ ಮಿಂಚುಹುಳದ ಮೂಲಕ! ವಾಲ್ಮೀಕಿಯಂಥ ಆದಿಕವಿಗೂ ಹೊಳೆಯದ ದೃಶ್ಯವೊಂದು ಮಲೆನಾಡಿನ ಈ ಕವಿಗೆ ಝಗ್ಗನೆ ಹೊಳೆದುಬಿಟ್ಟಿದೆ. ಕಾರ್ಗತ್ತಲಲ್ಲಿ ತಡಕಾಡುತ್ತಿರುವವನಿಗೆ ಅಶ್ವಯುಜ ಮಾಸದ ಮಳೆ ಇಳಿಯುತ್ತ ಬಂದ ಆ ರಾತ್ರಿಯಲ್ಲಿ ಗವಿಯೊಳಗೆ ಮೆಲ್ಲಮೆಲ್ಲನೆ ಹಾರಾಡುತ್ತ ಬಂದ ಮಿಂಚುಹುಳವೊಂದು ಆಸೆಯ ಹಣತೆಗೆ ಕಿಡಿಹಚ್ಚಿತು. ನೋಡಿದ ರಾಮನ ಕಣ್ಣು ಹನಿಗೂಡಿತು, ಆತ್ಮವನ್ನು ಶಾಂತಿ ತುಂಬಿತು. ಅನಿರ್ವಚನೀಯ ದೃಶ್ಯವನ್ನು ಮತ್ತೆ ಮತ್ತೆ ನೋಡಿದ, ಕೆನ್ನೆ ತೋಯಿಸಿಕೊಂಡ.

ಕುಳ್ಳಿರ್ದ ಮಳೆಗಾಲಮೆದ್ದು ನಿಂತುದು ತುದಿಯ
ಕಾಲಿನಲಿ, ನೂಲ್‌ಸೋನೆಯಾ ತೆರೆಮರೆಯನೆತ್ತಲ್ಕೆ
ಶೈಲವರನಕೊ, ಕಾಣಿಸಿತ್ತಾತನೆರ್ದೆಗೊರಗಿ
ರಮಿಸಿರ್ದ ಕಾನನ ವಧೂ ಶ್ಯಾಮಲಾಂಬರಂ !

ಹಗಲಾಯಿತು. ನೂಲಿನಂತೆ ಸುರಿಯುತ್ತಿದ್ದ ಸೋನೆಮಳೆಯ ತೆರೆಯನ್ನು ಸರಿಸಿದಾಗ ಕಂಡದ್ದು ಮಹಾ ಪರ್ವತವೆಂಬ ವರ! ಅವನ ತೆಕ್ಕೆಗೆ ಒರಗಿದ ಹಸಿರು ವನರಾಜಿಯೆಂಬ ವಧು! ಹೆಂಡತಿಯನ್ನು ಕಳೆದುಕೊಂಡು ಪರಿತಪಿಸುತ್ತಿದ್ದ ರಾಮನಿಗೆ ಇಂಥ ಚೇತೋಹಾರಿ ದೃಶ್ಯ ಇನ್ನೊಂದು ಇದ್ದೀತೆ?

ಲಂಬಮಾನಂ ಸೋರ್ವ ಮುತ್ತಿನ ಸರಗಳಂತೆ
ಕಾವಿಯನುಳಿದ ಮಲೆಯ ತೊರೆಯ ನೀರ್‌ಬೀಳಗಳು
ಕಣ್‌ಸೆಳೆದುವಲ್ಲಲ್ಲಿ.

ಅಬ್ಬರದ ಮಳೆಯಿಂದಾಗಿ ಮಣ್ಣುನೀರು ತುಂಬಿಕೊಂಡು ಕೆಂಪಾಗಿ ಹರಿಯುತ್ತಿದ್ದ ಕಾಡಿನ ತೊರೆಗಳು ಈಗ ʼಕಾವಿ ತೊರೆದುʼ ಮುತ್ತಿನ ಸರಗಳಂತೆ ಕಾಣಿಸತೊಡಗಿದವು. ಅಂದರೆ ರಾಮನಿಗೂ ಕಾವಿ ತೊರೆಯುವ ಕಾಲ ಬಂತು.

ಕೇದಗೆಗೆ ಮುಪ್ಪಡಸಿ,
ಬೀತುದೆ ಸೀತಾಳಿ ಹೂ, ಬಾನ್‌ಬಯಲೊಳಿರ್ದ
ಮೋಡಮೋರೆಗೆ ಕರ್ಪುವೋಗಿ, ಬೆಳ್ಳಿನ ನೆಳಲ್
ಸುಳಿದುದಲ್ಲಲ್ಲಿ. ನಿಸ್ತೇಜನಾಗಿರ್ದ ರವಿ
ಘನವನಾಂತರ ವಾಸಮಂ ಮುಗಿಸಿ ಮರುಳುತಿರೆ,
ಮೇಘಸಂಧಿಗಳಿಂದೆ, ಮುಸುಕೆತ್ತಿ, ನಸುನಾಣ್ಣಿ,
ಮೊಗಕೆ ನಾಣ್‌ಬೆಟ್ಟೇರಿದಪರಿಚಿತಳಂತೆವೋಲ್
ಇಣಿಕಿತು ಗತೋಷ್ಣಾತಪಂ.

ಸೂರ್ಯನಿಗೆ ವನಾಂತರ ವಾಸ ಮುಗಿಯಿತು. ರಾಮನಿಗೆ ಇನ್ನೂ ಮುಗಿದಿಲ್ಲ. ಆದರೆ ಮುಗಿಯುವ ಸೂಚನೆ ನೀಡಿತು. ಸಂದಿದ್ದ ಬೆಚ್ಚಗಿನ ಹವೆ ಮೆಲ್ಲಗೆ ಮೈದೋರಿತು- ಮುಸುಕೆತ್ತಿ ಮುಖಕ್ಕೆ ನಸುನಾಚಿಕೆಯಿಂದ ಬೆರಳನ್ನು ಕುತ್ತಿದ ಮುಗುದೆಯಂತೆ.

ಪಾಲ್ತುಂಬಿ ತುಳ್ಕಿ
ಗರುಕೆಪಚ್ಚೆಗೆ ಸೋರ್ವ ಕೊಡಗೆಚ್ಚಲಿನ ಗೋವು
ಹೊಸಬಿಸಿಲ ಸೋಂಕಿಂಗೆ ಸೊಗಸಿ ಮೆಯ್ ಕಾಯಿಸುತೆ
ಗಿರಿಸಾನು ಶಾದ್ವಲದಿ ನಿಂತು, ಬಾಲವನೆತ್ತಿ
ಕುಣಿದೋಡಿ ಬಂದು ತನ್ನೆಳಮುದ್ದುಮೋರೆಯಂ
ತಾಯ್ತನಕೆ ಪಡಿಯೆಣೆಯ ಮೆತ್ತೆಗೆಚ್ಚಲ್ಗಿಡಿದು,
ಜೊಲ್ಲುರ್ಕೆ, ಚಪ್ಪರಿಸಿ ಮೊಲೆಯನುಣ್ಬ ಕರುವಂ
ನೆಕ್ಕಿತಳ್ಕರೆಗೆ. ಲೋಕದ ಕಿವಿಗೆ ದುರ್ದಿನಂ
ಕೊನೆಮುಟ್ಟಿದತ್ತೆಂಬ ಮಂಗಳದ ವಾರ್ತೆಯಂ
ಡಂಗುರಂಬೊಯ್ಸಿದುದು ಪಕ್ಷಿಗೀತಂ.

ಮಳೆಗಾಲದ ಕೊನೆಯ ದಿನಗಳು ಸುಭಿಕ್ಷದ, ಹಸುರಿನ, ಹಾಲು ತುಂಬಿ ತುಳುಕುವ ಕೊಡಗೆಚ್ಚಲಿನ ಗೋವುಗಳ ಕಾಲ. ದುರ್ದಿನಗಳು ಮುಗಿದವು ಎಂಬ ಘೋಷವನ್ನು ಪಕ್ಷಿಗೀತೆಗಳು ಡಂಗುರ ಸಾರಿದವು.

ಹೀಗೆ ಮಳೆಗಾಲದ ವರ್ಣನೆ ಕೊನೆಯಾಗುತ್ತದೆ. ಇಲ್ಲಿಂದ ಮುಂದೆ ಸುಗ್ರೀವಾಜ್ಞೆ, ವಾನರವೀರರ ದಿಟ್ಟ ಹೋರಾಟದ ಸುಂದರ ಪುಟಗಳು ತೆರೆದುಕೊಳ್ಳುತ್ತವೆ. ಅಯೋಧ್ಯೆಯ ನಗರವಾಸಿ ರಾಮ, ಕರ್ನಾಟಕದ ಸಹ್ಯಾದ್ರಿಯ ಮಲೆಗಳ ನಡುವೆ ಗುಹೆಯಲ್ಲಿ, ಮುಂಗಾರಿನ ಬಿರುಹೊಯ್ಲಿನ, ಕಾರ್ಗತ್ತಲಿನ, ಸೋನೆಮಳೆಯ, ಮಿಂಚುಹುಳಗಳ, ದಿನಗಳ ನಡುವೆ ಆಶೆನಿರಾಶೆಗಳ ರಾಟವಾಳದಲ್ಲಿ ಕುಳಿತು ಏರಿಳಿಯುತ್ತಾನೆ. ಮಳೆಗಾಲ ಮುಗಿದಾಗ ಅವನು ಕತ್ತಲ ಗವಿಯನ್ನು ದಾಟಿ ಹೊಸ ಬೆಳಕನ್ನು ಕಾಣುತ್ತಿರುವ ಹೊಸ ಮನುಷ್ಯನಾಗಿದ್ದಾನೆ.

ಈತ ವಾಲ್ಮೀಕಿಗೆ ಕಾಣಿಸಿರದ, ಕುವೆಂಪುಗೆ ಮಾತ್ರ ಕಾಣಿಸಬಹುದಾದ ರಾಮ.

ಇದನ್ನೂ ಓದಿ: ಕೇರಂ ಬೋರ್ಡ್‌ | ಗಾಂಧಿಕ್ಲಾಸಿನಲ್ಲಿ ಕುಳಿತು ಒಂದೆರಡು ನೋಟ

Continue Reading
Advertisement
Adivi Sesh Goodachari Turns 6 unveils six stunning looks
ಟಾಲಿವುಡ್20 mins ago

Adivi Sesh: ʻಗೂಢಚಾರಿʼಗೆ ಆರು ವರ್ಷದ ಸಂಭ್ರಮ; ನಟ ಅಡಿವಿ ಶೇಷ್ ಹೇಳಿದ್ದೇನು?

Yadagiri News
ಯಾದಗಿರಿ29 mins ago

Yadagiri News: ಆದಾಯಕ್ಕಿಂತ‌ ಅಧಿಕ ಆಸ್ತಿ ಹೊಂದಿರುವ ಆರೋಪ; ಯಾದಗಿರಿ ಡಿಎಚ್ಒ ಅಮಾನತು

IND vs SL 2nd ODI:
ಕ್ರೀಡೆ34 mins ago

IND vs SL 2nd ODI: ಇಂದು ಭಾರತ-ಲಂಕಾ ದ್ವಿತೀಯ ಏಕದಿನ ಮುಖಾಮುಖಿ; ಪಂದ್ಯಕ್ಕೆ ಮಳೆ ಭೀತಿ

BSF Chief
ದೇಶ48 mins ago

BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Amitabh Bachchan-Sridevi Movies
Latest52 mins ago

Amitabh Bachchan-Sridevi Movies: ಅಮಿತಾಭ್ ಬಚ್ಚನ್ – ಶ್ರೀದೇವಿ ಜೊತೆಯಾಗಿ ನಟಿಸಿದ 5 ಸೂಪರ್ ಹಿಟ್ ಚಿತ್ರಗಳಿವು

Health Tips
ಆರೋಗ್ಯ52 mins ago

Health Tips: ಏನ್ ನಿಂಗೆ ಕೊಬ್ಬಾ ಅನ್ನಬೇಡಿ ಕೊಬ್ಬೂ ಇರಬೇಕು!

Robbery Case
ಕ್ರೈಂ1 hour ago

Robbery Case: ಬೆಂಗಳೂರಿನಲ್ಲಿ ಮಿತಿ ಮೀರಿದ ಕಳ್ಳರ ಹಾವಳಿ; ಆನ್‌ಲೈನ್‌ ಡೆಲಿವರಿ ಬಾಯ್‌ಗಳೇ ಇವರ ಟಾರ್ಗೆಟ್‌: Video ಇಲ್ಲಿದೆ

Paris Olympics
ಕ್ರೀಡೆ1 hour ago

Paris Olympics: ಗ್ರೇಟ್​ ಬ್ರಿಟನ್ ಮಣಿಸಿ ಸೆಮಿಫೈನಲ್​ ಪ್ರವೇಶಿಸಲಿ ಭಾರತ ಹಾಕಿ ತಂಡ

Duniya Vijay Bheema Official Trailer Out
ಸ್ಯಾಂಡಲ್ ವುಡ್1 hour ago

Duniya Vijay: ವಿಜಯ್ ನಟಿಸಿ, ನಿರ್ದೇಶಿಸಿರುವ ‘ಭೀಮ ಚಿತ್ರದ  ಟ್ರೈಲರ್‌ ಔಟ್‌; ಕ್ರೇಜ್‌ ಹೆಚ್ಚಿಸಿದ ʻಸಲಗʼ!

Personality Test
ಲೈಫ್‌ಸ್ಟೈಲ್2 hours ago

Personality Test: ನೀವು ಒಳ್ಳೆಯವರೇ, ಕೆಟ್ಟವರೇ?; ನಿಮ್ಮನ್ನೇ ನೀವು ಪರೀಕ್ಷಿಸಬೇಕಾದರೆ ಇದನ್ನು ಓದಿ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka rain
ಮಳೆ21 hours ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ6 days ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

ಟ್ರೆಂಡಿಂಗ್‌