Site icon Vistara News

ಹೈಫಾ ಮುಕ್ತಿ ದಿನ | ಮೈಸೂರು ಮಹಾರಾಜರ ಸೇನೆಯಿಂದ ಇಸ್ರೇಲಿನ ಹೈಫಾ ನಗರ ರಕ್ಷಿಸಲ್ಪಟ್ಟ ದಿನ ಇಂದು

Mysuru lancers and bengalore memorial

ಅನಿಲ್‌ ಕುಮಾರ್‌ ರಾಜೇ ಅರಸ್‌, ಬೆಂಗಳೂರು
ದೂರದ ಇಸ್ರೇಲಿನ ಹೈಫಾ ಪಟ್ಟಣಕ್ಕೂ ಮೈಸೂರಿಗೂ ಏನು ಸಂಬಂಧ ಎನ್ನುವುದು ಸೇನೆಯಿಂದ ಹೊರಗಿರುವ ಅನೇಕರಿಗೆ ತಿಳಿದಿಲ್ಲ. 1918ರ ಸೆಪ್ಟೆಂಬರ್‌ 23ರಂದು, ವಿಶ್ವದ ಅತ್ಯಂತ ಪ್ರಮುಖ ಅಶ್ವಾರೂಢ ಯುದ್ಧವನ್ನು ಜಯಗಳಿಸುವಲ್ಲಿ ಮೈಸೂರು ಮಹಾರಾಜರ ಸೇನೆಯು ಮಹತ್ವದ ಪಾತ್ರ ವಹಿಸಿತು.

ಮೊದಲ ವಿಶ್ವಯುದ್ಧದ ಸಂಯುಕ್ತ ಸೇನೆಯ ಭಾಗವಾಗಿ ಮೈಸೂರು ಲ್ಯಾನ್ಸರ್ಸ್‌, ಜೋಧಪುರ ಅಶ್ವಸೇನೆ, ಹೈದರಾಬಾದ್‌ ಸೇನೆ ಹಾಗೂ ಬ್ರಿಟಿಷರ 15ನೇ ಅಶ್ವದಳ ಸೇರಿ ಈಗಿನ ಇಸ್ರೇಲ್‌ನಲ್ಲಿರುವ ಹೈಫಾ ನಗರದ ಸುತ್ತಮುತ್ತಲಿದ್ದ ಟರ್ಕಿ ನೆಲೆಗಳ ಮೇಲೆ ದಾಳಿ ನಡೆದಿದವು. ಹೈಫಾ ನಗರವನ್ನು ಮರಳಿಸುತ್ತೇವೆ ಎಂದು ಇಸ್ರೇಲಿಗೆ ಬ್ರಿಟಿಷರು ನೀಡಿದ್ದ ವಾಗ್ದಾನ ಈಡೇರಿಕೆಗಾಗಿ ನಡೆದ ಕದನ. ಭಾರತೀಯ ಸೈನಿಕರು ಕೇವಲ ಕುದುರೆ ಹಾಗೂ ಕತ್ತಿಗಳೊಂದಿಗೆ ಹೋರಾಟಕ್ಕಿಳಿದರೆ, ಅತ್ತ ಟರ್ಕಿ ಸೇನೆ ಬಳಿ ತುಪಾಕಿಗಳು ಹಾಗೂ ಮೆಷಿನ್‌ ಗನ್‌ಗಳಿದ್ದವು.

ಅಂದಿನಿಂದ ನೂರು ವರ್ಷಗಳು ಕಳೆದಿವೆ. ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್ ಲ್ಯಾನ್ಸರ್‌ಗಳ ಅಶ್ವದಳದ ರೆಜಿಮೆಂಟ್‌ಗಳು ಈ ದಿನವನ್ನು (ಸೆಪ್ಟೆಂಬರ್ 23) ಹೈಫಾ ವಿಮೋಚನಾ ದಿನ ಎಂದು ಆಚರಿಸುತ್ತಿವೆ ಮತ್ತು 1918 ರಲ್ಲಿ ಒಟ್ಟೋಮನ್ ಸಾಮ್ರಾಜ್ಯದ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನು ಅರ್ಪಿಸಿದ ವೀರ ಸೈನಿಕರನ್ನು ಗೌರವಿಸುತ್ತಿವೆ.

ಈ ಮಹಾಯುದ್ಧದಲ್ಲಿ, ಮೈಸೂರು ಲ್ಯಾನ್ಸರ್‌ಗಳ ಕೊಡುಗೆಗಳು ವಿಶೇಷವಾಗಿ ಜಾಗತಿಕವಾಗಿ ಬಹಾಯಿ ಸಮುದಾಯಕ್ಕೆ ಮತ್ತು ಆಧುನಿಕ ಇಸ್ರೇಲ್ ರಾಜ್ಯದ ಅಸ್ತಿತ್ವಕ್ಕೆ ಗಮನಾರ್ಹ ಮತ್ತು ಅಪಾರವಾದದ್ದು.

ಒಟ್ಟೋಮನ್ ಮತ್ತು ಜರ್ಮನ್ ಸೈನಿಕರನ್ನು ಸೋಲಿಸಲು ಮತ್ತು ಆಯಕಟ್ಟಿನ ಪ್ರಮುಖ ಪಟ್ಟಣವಾದ ಡಮಾಸ್ಕಸ್, ಜೆರುಸಲೆಮ್, ಟಿಗ್ರಿಸ್‌, ಬಾಗ್ದಾದ್, ಮೆಸೊಪಟೋಮಿಯಾ ಮತ್ತು ಕುಟ್-ಅಲ್-ಅಮಾರಾವನ್ನು ಸ್ವತಂತ್ರಗೊಳಿಸಲು ಬ್ರಿಟಿಷ್ 15 ನೇ ಇಂಪೀರಿಯಲ್ ಸರ್ವೀಸ್ ಕ್ಯಾವಲ್ರಿ ಬ್ರಿಗೇಡ್‌ಗೆ ಮೊದಲನೆಯ ಮಹಾಯುದ್ಧವು ಅವಕಾಶ ಮಾಡಿಕೊಟ್ಟಿತು.

ಜಾಗತಿಕವಾಗಿ ಸೆಪ್ಟೆಂಬರ್‌ 23ನ್ನು ಹೈಫಾ ದಿನವನ್ನಾಗಿ ಆಚರಿಸಲಾಗುತ್ತದಾದರೂ, ಭಾರತದಲ್ಲಿ, ವಿಶೇಷವಾಗಿ ಮೈಸೂರು ಲ್ಯಾನ್ಸರ್‌ ಕುಟುಂಬದವರು ಹಾಗೂ ಬಹಾಯಿ ಸಮುದಾಯದವರಿಗೆ ವೈಯಕ್ತಿಕವಾಗಿ ಬಹಳ ಆಪ್ತ ಸಂದರ್ಭ. ಬಹಾಯಿ ಪಂಥದ ಸ್ಥಾಪಕರಾದ ಬಹಾ-ಉ-ಲ್ಲಾಹ್‌ ಅವರ ಹಿರಿಯ ಪುತ್ರ ಅಬ್ದುಲ್‌ ಬಹಾ ಅವರನ್ನು ಮೈಸೂರು ಲ್ಯಾನ್ಸರ್ಸ್‌ ರಕ್ಷಣೆ ಮಾಡಿದ್ದರು. ಇಂದು ನವದೆಹಲಿಯಲ್ಲಿ ಪ್ರವಾಸಿ ಆಕರ್ಷಣೆ ಕೇಂದ್ರವೂ ಆಗಿರುವ ಲೋಟಸ್‌ ಟೆಂಪಲ್‌, ಇದೇ ಬಹಾಯಿ ಸಮುದಾಯದ ಪ್ರಾರ್ಥನಾ ಮಂದಿರ.

1892ರಲ್ಲಿ ರಚನೆಯಾಗಿದ್ದ ಮೈಸೂರು ಲ್ಯಾನ್ಸರ್ಸ್‌ ಹಾಗೂ ಜೋಧಪುರ ಅಶ್ವದಳದ ಸೈನಿಕರು, ಹೈದರಾಬಾದ್‌ ಅಶ್ವದಳ ಸುಮಾರು ಎರಡು ತಿಂಗಳು ಹೋರಾಡಿ ಬಹಾ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು. ಬ್ರಿಟಿಷರ ಅಡಿಯಲ್ಲಿದ್ದ ಎರಡು ಸೇನೆಗಳು ಸೆಣೆಸಿ ಬಂಧನದಿಂದ ಬಿಡಿಸಿದ್ದು ಒಂದೆಡೆಯಾದರೆ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಅತ್ಯಂತ ಶೌರ್ಯವಂತರಾದ ಕರ್ನಲ್‌ ಜೆ. ದೇಶರಾಜ ಅರಸ್‌ರನ್ನು ಹಾಗೂ ಆಯ್ದ ಸೈನಿಕರನ್ನು ಕಳಿಸಿಕೊಟ್ಟಿದ್ದರು. ಇದಕ್ಕಾಗಿ ಬಹಾಯಿ ಸಮುದಾಯ ಇಂದಿಗೂ ಮೈಸೂರು ಲ್ಯಾನ್ಸರ್ಸ್‌ಗೆ ತನ್ನ ಕೃತಜ್ಞತೆಯನ್ನು ಅರ್ಪಿಸುತ್ತದೆ. ತನ್ನ ಪಾಡಿಗೆ ಶಾಂತಿ ಹಾಗೂ ಸೌಹಾರ್ದತೆಯಿಂದ ಜೀವಿಸುತ್ತಿರುವ ಸಮುದಾಯವೊಂದನ್ನು ಮತ್ತೊಂದು ನಂಬಿಕೆಯ ಜನರು ಹೇಗೆ ರಕ್ಷಣೆ ಮಾಡಿದರು ಎನ್ನುವುದಕ್ಕೂ ಹೈಫಾ ಕದನ ಉದಾಹರಣೆಯಾಗಿ ನಿಂತಿದೆ.

ಕೊನೆಯ ಅಶ್ವಾರೂಢ ಕದನ

ಕಾಕತಾಳೀಯವೆಂಬಂತೆ, ಹೈಫಾ ಕದನವು ವಿಶ್ವದಲ್ಲಿ ನಡೆದ ಕೊಟ್ಟಕೊನೆಯ ಅಶ್ವಾರೂಢ ಕದನ. ವಿಶ್ವಯುದ್ಧ ಕೊನೆಗೊಳ್ಳುವವರೆಗೆ ಸುಮಾರು ಎರಡು ತಿಂಗಳು ನಡೆದ ಕದನದಲ್ಲಿ ಬ್ರಿಟಿಷ್‌ ಸೈನ್ಯದ ಜತೆಗೆ ಹೋರಾಡಿದ ಮೈಸೂರು ಲ್ಯಾನ್ಸರ್ಸ್‌, ಸುಮಾರು 1,350 ಶತೃ ಸೈನಿಕರನ್ನು ಬಂಧಿಸಿತು. ಲಭ್ಯ ದಾಖಲೆಗಳ ಪ್ರಕಾರ, ಹೈಫಾ ನಗರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಬ್ರಿಟಿಷ್‌ ಸೇನೆಯನ್ನು ನಿಯೋಜನೆ ಮಾಡಲಾಗಿತ್ತು. ಆದರೆ ಶತೃಗಳನ್ನು ಹಿಮ್ಮಟ್ಟಿಸಲು ಈ ಸೇನೆಯಿಂದ ಸಾಧ್ಯವಾಗಲಿಲ್ಲ. ನಂತರ ಮೈಸೂರು ಲ್ಯಾನ್ಸರ್ಸ್‌ ಹಾಗೂ ಜೋಧಪುರ ಲ್ಯಾನ್ಸರ್ಸ್‌ಗೆ ಹೊಣೆ ನೀಡಲಾಯಿತು, ಈ ಸೇನೆಗಳು ತಮ್ಮ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವು.

ಹೈಫಾಕ್ಕೆ ತಲುಪಿದ ಬಗೆ

1914ರ ಅಕ್ಟೋಬರ್‌ನಲ್ಲಿ ಮೂಸೂರು ಲ್ಯಾನ್ಸರ್ಸ್‌ ತಂಡವು ಬೆಂಗಳೂರಿನಿಂದ ಹೊರಟು ಮಧ್ಯಪ್ರಾಚ್ಯ ತಲುಪಿತು. ಸೂಯೇಜ್‌ ಕಾಲುವೆಯ ಮೂಲಕ ಭಾರತೀಯ ಸೇನೆಯನ್ನು 36 ಹಡಗುಗಳು ಕೊಂಡೊಯ್ದವು. ಕಿಶೋನ್‌ ನದಿ ಹಾಘೂ ಕಾರ್ಮೆಲ್‌ ಬೆಟ್ಟಗಳ ಇಳಿಜಾರಿನ ನಡುವೆ ನಡೆಯಬೇಕಿದ್ದ ಕದನವನ್ನು ಜಯಿಸುವುದು ಅಸಾಧ್ಯ ಎಂದೇ ಭಾವಿಸಲಾಗಿತ್ತು. ಇದೆಲ್ಲದರ ಜತೆಗೆ ಅತ್ಯಾಧುನಿಕ ಬಂದೂಕುಗಳ ಮೂಲಕ ನಗರವನ್ನು ತುರ್ಕಿ ಸೈನಿಕರು ರಕ್ಷಿಸಿದ್ದರು. ಪೂರ್ವದಿಂದ ಉತ್ತರದೆಡೆಗೆ ದಾಲಿ ನಡೆಸಲು ಮೈಸೂರು ಲ್ಯಾನ್ಸರ್ಸ್‌ಗೆ ಆದೇಶ ನೀಡಲಾಯಿತು. ಕಡಿದಾದ ಪ್ರದೇಶದಲ್ಲಿ ಕಾದಾಡುತ್ತಲೇ ಮೇಲೇರಿದ ಮೈಸೂರು ಲ್ಯಾನ್ಸರ್ಸ್‌, ಕೊನೆಗೂ ಗುರು ತಲುಪಿ ಪ್ರದೇಶವನ್ನು ವಶಕ್ಕೆ ಪಡೆಯಲು ಯಶಸ್ವಿಯಾದರು.

ಕದನದ ನಂತರ 1,350 ಜರ್ಮನ್‌ ಹಾಗೂ ಒಟ್ಟೊಮನ್‌ ಸೈನಿಕರನ್ನು ಬಂಧಿಸುವ ಜತೆಗೆ ಇಬ್ಬರು ಜರ್ಮನ್‌ ಅಧಿಕಾರಿಗಳು, 35 ಒಟ್ಟಿಮನ್‌ ಅಧಿಕಾರಿಗಳು, 17 ಬಂದೂಕುಗಳು, 11ಯಾಂತ್ರೀಕೃತ ಬಂದೂಕುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಇಷ್ಟೆಲ್ಲ ಕದನವಾಗುವ ವೇಳೆಯಲ್ಲಿ ಮೈಸೂರು ಲ್ಯಾನ್ಸರ್ಸ್‌ನ 8 ಅಶ್ವಾರೋಹಿ ಸೈನಿಕರು ತಮ್ಮ ಪ್ರಾಣಾರ್ಪಣೆ ಮಾಡಿದರೆ, 34 ಸೈನಿಕರು ಗಾಯಗೊಂಡರು.

ಮೈಸೂರು ಮಹಾರಾಜರ ಕೊಡುಗೆ

ಮೈಸೂರು ಮಹಾರಾಜರು ಅತ್ಯಂತ ಆಸ್ಥೆಯಿಂದ ಮೈಸೂರು ಲ್ಯಾನ್ಸರ್ಸ್‌ ಅನ್ನು ರೂಪಿಸಿದ್ದರು. ಅದನ್ನು ದೇಶರಾಜ ಅರಸ್‌ ಮುನ್ನಡೆಸುತ್ತಿದ್ದರಯ. ಭಾರತದೊಂದಿಗೆ ಮೈಸೂರು ಸಂಸ್ಥಾನವನ್ನು ವಿಲೀನ ಮಾಡಿದಾಗ ಮೈಸೂರು ಲ್ಯಾನ್ಸರ್ಸ್‌ ಅನ್ನು ಭಾರತೀಯ ಸೇನೆಯ 61ನೇ ಅಶ್ವದಳಕ್ಕೆ ವಿಲೀನ ಮಾಡಲಾಯಿತು, ಲ್ಯಾನ್ಸರ್ಸ್‌ನ ಎಲ್ಲ ಆಸ್ತಿಗಳೂ (ಭೂಮಿ, ಕಟ್ಟಡಗಳು) ಈಗ ಕರ್ನಾಟಕ ಮೀಸಲು ಪೊಲೀಸ್‌ ಪಡೆಯ ಸುಪರ್ದಿಯಲ್ಲಿವೆ.

ಕದನವನ್ನು ನೆನೆದ ಅದಾನಿ

ಭಾರತದ ಉದ್ಯಮಿ ಗೌತಮ್‌ ಅದಾನಿಯವರು ಇದೀಗ ಹೈಫಾ ನಗರದಲ್ಲಿರುವ ಬಂದರಿನ ಒಡೆತನ ಸಾಧಿಸಿದೆ. ಈ ಸಮಯದಲ್ಲಿ ಟ್ವೀಟ್‌ ಮಾಡಿದ್ದ ಗೌತಮ್‌ ಅದಾನಿ, “ಗಡೋಟ್‌ ಸಂಸ್ಥೆಯೊಂದಿಗೆ ಪಾಲುದಾರಿಕೆಯಲ್ಲಿ ಇಸ್ರೇಲ್‌ನ ಹೈಫಾ ಬಂದರಿನ ಖಾಸಗೀಕರಣ ಟೆಂಡರ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಲು ಸಂತಸವಾಗುತ್ತಿದೆ. ಇದು ಎರಡೂ ದೇಶಗಳಿಗೆ ಅತ್ಯಂತ ರಾಜತಾಂತ್ರಿಕ ಹಾಗೂ ಐತಿಹಾಸಿಕ ಸ್ಥಳ ಇದು. ಹೈಫಾದಲ್ಲಿ ಇರುವುದಕ್ಕೆ ಹೆಮ್ಮೆ ಎನ್ನಿಸುತ್ತಿದೆ. 1918ರಲ್ಲಿ, ಮಿಲಿಟರಿ ಇತಿಹಾಸದಲ್ಲೆ ಅತ್ಯಂತ ವೈಭವಯುತವಾದ ಅಶ್ವಾರೋಹಿ ಕದನವನ್ನು ಭಾರತೀಯರು ಇಲ್ಲಿ ನಡೆಸಿದ್ದರು” ಎಂದು ತಿಳಿಸಿದ್ದರು.

ಬೆಂಗಳೂರು ಹಾಗೂ ನವದೆಹಲಿಯಲ್ಲಿ ಸ್ಮಾರಕ

ಹೈಫಾ ಕದನವನ್ನು ವಿಶ್ವದ ಮೂರು ಭಾಗಗಳಲ್ಲಿ ನೆನೆಯಲಾಗುತ್ತದೆ. ಮೊದಲನೆಯದು ಇಸ್ರೇಲ್‌ನ ಹೈಫಾ ನಗರದಲ್ಲಿ, ಎರಡನೆಯದು ನವದೆಹಲಿಯ ತೀನ್‌ ಮೂರ್ತಿ ಚೌಕ್‌ನಲ್ಲಿ ಹಾಗೂ ಮೂರನೆಯದು ಬೆಂಗಳೂರಿನ ಜಯಚಾಮರಾಜೇಂದ್ರ (ಜೆಸಿ) ನಗರದಲ್ಲಿರುವ ಮೈಸೂರು ಲ್ಯಾನ್ಸರ್ಸ್‌ ಸ್ಮಾರದ ಮೂಲಕ. ಜವಾಹರ ಲಾಲ್‌ ನೆಹರೂ ಅವರು ವಾಸಿಸುತ್ತಿದ್ದ ಮನೆಯನ್ನು ತೀನ್‌ ಮೂರ್ತಿ ಭವನ ಎಂದು ಹೆಸರಿಸಲಾಗಿದ್ದು, ಪ್ರಮುಖವಾಗಿ ಮೂರು ಅಶ್ವಾರೋಹಿ ಸೈನಿಕರ ಮೂರ್ತಿಗಳನ್ನು ಹೊಂದಿದೆ. ಮೈಸೂರು, ಹೈದರಾಬಾದ್‌ ಹಾಗೂ ಜೋಧಪುರದಿಂದ ಈ ಮೂರ್ತಿಗಳನ್ನು ತರಲಾಗಿದೆ. ತೀನ್‌ ಮೂರ್ತಿ ಚೌಕ್‌ ಅನ್ನು ತೀನ್‌ ಮೂರ್ತಿ-ಹೈಫಾ ಚೌಕ್‌ ಎಂದು ಮರುನಾಮಕರಣ ಮಾಡಲಾಗಿದೆ.

ಬೆಂಗಳೂರಿನಲ್ಲಿರುವ ಸ್ಮಾರಕವೂ ಮೈಸೂರು ಲ್ಯಾನ್ಸರ್ಸ್‌ ಹೋರಾಟವನ್ನು ಸ್ಮರಿಸುವಂತೆ ಮಾಡುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್‌ 23ರಂದು ಸ್ಮಾರಕವನ್ನು ಅಲಂಕರಿಸುವ ಮೈಸೂರು ಲ್ಯಾನ್ಸರ್ಸ್‌ ಕುಟುಂಬದವರು ಹಾಗೂ ಸಾರ್ವಜನಿಕರು ತಮ್ಮ ಗೌರವವನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ | StartUp Pavilion | ನವೋದ್ಯಮಗಳ ಸ್ಥಾಪನೆಗೆ ಮೈಸೂರು ಪ್ರಶಸ್ತ ಸ್ಥಳ: ಯದುವೀರ ಒಡೆಯರ್

Exit mobile version