| ಮಲ್ಲಿಕಾರ್ಜುನ ತಿಪ್ಪಾರ ಬೆಂಗಳೂರು
ಇಸ್ರೇಲ್ (Isreal) ಮತ್ತೆ ರಾಜಕೀಯ ನಾಯಕತ್ವ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. 14 ತಿಂಗಳ ಹಿಂದೆಯಷ್ಟೇ, ಭ್ರಷ್ಟಾಚಾರ ಆರೋಪ ಹೊತ್ತಿದ್ದ ಇಸ್ರೇಲಿಗಳ ಪ್ರೀತಿಯ ‘ಬೀಬಿ’ ಬೆಂಜಮಿನ್ ನೆತನ್ಯಾಹು (Benjamin Netanyahu) ಮತ್ತೆ ಅಧಿಕಾರಕ್ಕೆ ಮರಳುತ್ತಿದ್ದಾರೆ. ಮುಂದಿನ ವಾರ ಅವರು ಇಸ್ರೇಲ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಇಸ್ರೇಲ್ ಭಾರಿ ರಾಜಕೀಯ ಅಸ್ಥಿರತೆಯನ್ನು ಕಂಡಿದೆ. ಈ ಅವಧಿಯಲ್ಲಿ ಒಟ್ಟು ಐದು ಚುನಾವಣೆಗಳು ನಡೆದಿವೆ. ನೆತನ್ಯಾಹು ಅವರು ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದರು, ಕೋರ್ಟ್ ಕಟಕಟೆಯೂ ಹತ್ತಬೇಕಾಯಿತು. ಅಂತಿಮವಾಗಿ, ಮಾಡಿಕೊಂಡ ಒಪ್ಪಂದದಂತೆ 2020 ನವೆಂಬರ್ 17ಕ್ಕೆ ಎದುರಾಳಿ ನಾಯಕ ಬೆನ್ನಿ ಗ್ಯಾಂಟ್ಜ್‌ಗೆ ಪ್ರಧಾನಿ ಹುದ್ದೆ ಬಿಟ್ಟು ಕೊಡಬೇಕಾಯಿತು. ಆದರೆ, ಜನಪ್ರಿಯತೆಯಲ್ಲೇನೂ ಕುಂದು ಉಂಟಾಗಲಿಲ್ಲ. ಪರಿಣಾಮ, ಮತ್ತೆ 2022ರ ನವೆಂಬರ್ 1ರಂದು ನಡೆದ ಚುನಾವಣೆಯಲ್ಲಿ ಜಯಭೇರಿ ಬಾರಿಸಿ, ಇಸ್ರೇಲಿಗಳನ್ನು ಮುನ್ನಡೆಸಲು ಸಜ್ಜಾಗಿದ್ದಾರೆ.
ಇಸ್ರೇಲ್ ಸಂಸತ್ತು ಒಟ್ಟು 120 ಕ್ಷೇತ್ರಗಳ ಬಲ ಹೊಂದಿದೆ. ನೆತನ್ಯಾಹು ಪ್ರತಿನಿಧಿಸುವ ಲಿಕುಡ್ ಹಾಗೂ ಬಲಪಂಥ ವಿಚಾರಧಾರೆಯನ್ನು ಹೊಂದಿರುವ ಮಿತ್ರ ಪಕ್ಷಗಳ ಕೂಟ 64 ಸೀಟುಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಪೈಕಿ ಲಿಕುಡ್ ಪಕ್ಷವು 32 ಸ್ಥಾನಗಳನ್ನು ಗೆದ್ದುಕೊಂಡರೆ, ಅಲ್ಟ್ರಾ ಆರ್ಥ್‌ಡಾಕ್ಸ್ ಪಕ್ಷಗಳು 18 ಹಾಗೂ ಉಳಿದ ಮಿತ್ರ ಪಕ್ಷಗಳು 14 ಸ್ಥಾನಗಳನ್ನು ಗೆದ್ದುಕೊಂಡಿವೆ. ಇದರೊಂದಿಗೆ ಬೆಂಜಮಿನ್ ನೆತನ್ಯಾಹು ನೇತೃತ್ವದಲ್ಲಿ ಮತ್ತೆ ಇಸ್ರೇಲ್ ಬಲಪಂಥೀಯ ಸರ್ಕಾರವನ್ನು ಕಾಣುವುದು ಸ್ಪಷ್ಟವಾಗಿದೆ.
ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್ ನೆತನ್ಯಾಹು ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತ ಬಂದಿದ್ದಾರೆ. ದಶಕಗಳಿಂದ ಇಸ್ರೇಲ್ ರಾಜಕಾರಣದಲ್ಲಿ ಪ್ರಭಾವ ಹೊಂದಿರುವ ನೆತನ್ಯಾಹು ತಮ್ಮ ಗಟ್ಟಿ ನಾಯಕತ್ವದ ಮೂಲಕವೇ ಅಂತಾರಾಷ್ಟ್ರೀಯವಾಗಿ ಮನ್ನಣೆ ಗಳಿಸಿದ್ದಾರೆ. ಜತೆಗೆ, ಇಸ್ರೇಲ್‌ನ 74 ವರ್ಷಗಳ ಇತಿಹಾಸದಲ್ಲೇ ಅತಿ ದೀರ್ಘ ಅವಧಿಗೆ ಪ್ರಧಾನಿ ಹುದ್ದೆ ಅಲಂಕರಿಸಿದ ಖ್ಯಾತಿ ಈ 73 ವರ್ಷದ ನೆತನ್ಯಾಹು ಅವರಿಗಿದೆ.
ನೆತನ್ಯಾಹು ವಿರುದ್ಧ ಆರೋಪವೇನು?
14 ತಿಂಗಳ ಹಿಂದೆ ಅವರು ಪ್ರಧಾನಿ ಹುದ್ದೆ ತೊರೆದಿದ್ದರು. ಈ ಹಿಂದಿನ ಅವಧಿಯಲ್ಲಿ ಅವರು ಭ್ರಷ್ಟಾಚಾರ ಆರೋಪಗಳನ್ನೂ ಎದುರಿಸಬೇಕಾಯಿತು. ದೀರ್ಘ ಅವಧಿಗೆ ಪ್ರಧಾನಿಯಾದ್ದರಿಂದ ಸಹಜವಾಗಿಯೇ ಅವರು, ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದರು. ಅದೇ ಕಾಲಕ್ಕೆ, ಭ್ರಷ್ಟಾಚಾರ ಆರೋಪಗಳು ಕೇಳಿ ಬಂದವು. ಬೆಂಜಮಿನ್ ನೆತನ್ಯಾಹು ಎದುರಿಸಿದ ಆರೋಪಗಳು ಹೀಗಿವೆ; ಬೆಜಕ್ ಟೆಲಿಕಾಂ ಇಸ್ರೇಲ್ ಕಂಪನಿಗೆ 50 ಕೋಟಿ ಡಾಲರ್ ಲಾಭವಾಗುವಂತೆ ಶಾಸನಾತ್ಮಕ ಸಹಾಯ. ಪ್ರತಿಯಾಗಿ ಈ ಕಂಪನಿ ವಲ್ಲಾ ಸುದ್ದಿ ಜಾಲತಾಣದಲ್ಲಿ ನೆತನ್ಯಾಹು ಹಾಗೂ ಅವರ ಪತ್ನಿ ಪರವಾಗಿರುವ ಸುದ್ದಿಗಳ ಪ್ರಕಟ. ನೆತನ್ಯಾಹು ಹಾಗೂ ಅವರ ಪತ್ನಿ ಸಾರಾ 2 ಲಕ್ಷ ಡಾಲರ್ ಮೌಲ್ಯದ ಕಾಣಿಕೆಗಳ ಸ್ವೀಕಾರ. ಅರ್ನಾನ್ ಮೋಜ್ ಒಡೆತನದ ‘ಯೆಡಿಯೂತ್ ಅಹ್ರನೋಥ್’ ಪತ್ರಿಕೆಯಲ್ಲಿ ತಮ್ಮ ಪರವಾಗಿ ಸುದ್ದಿಗಳು ಪ್ರಕಟಣೆಗೆ ಒಪ್ಪಂದ. ಪ್ರತಿಯಾಗಿ ಎದುರಾಳಿ ಪತ್ರಿಕೆಗಳ ಬೆಳವಣಿಗೆಯನ್ನು ತಡೆಯುವ ಭರವಸೆ. ಈ ಎಲ್ಲ ಆರೋಪಗಳಿಗಾಗಿ ಅವರು ಕೋರ್ಟ್ ಕಟಕಟೆಯನ್ನು ಹತ್ತಬೇಕಾಯಿತು, ಪದವಿಯನ್ನು ಕಳೆದುಕೊಂಡಿದ್ದು ಈಗ ಇತಿಹಾಸ.
ಮೋಶೆ ಹುಡುಕಿದ ಭವಿಷ್ಯದ ನಾಯಕ!
1949 ಅಕ್ಟೋಬರ್ 21ರಂದು ಟೆಲ್ ಅವಿವ್‌ನಲ್ಲಿ ಬೆಂಜಮಿನ್ ನೆತನ್ಯಾಹು ಜನನ. ತಂದೆ ಇತಿಹಾಸತಜ್ಞರು. ಶೈಕ್ಷಣಿಕ ವಲಯದಲ್ಲಿ ಅವಕಾಶಗಳನ್ನು ಅರಸಿ 1963ರಲ್ಲಿ ಇವರ ಕುಟುಂಬವು ಅಮೆರಿಕಕ್ಕೆ ಸ್ಥಳಾಂತರವಾಯಿತು. ಆದರೆ, ತಮ್ಮ 18ನೇ ವಯಸ್ಸಿಗೆ ನೆತನ್ಯಾಹು ಇಸ್ರೇಲ್‌ಗೆ ಮರಳಿ, ಸೇನೆ ಸೇರಿದರು. ಕಮಾಂಡೋ ಯುನಿಟ್ ಕ್ಯಾಪ್ಟನ್ ಆಗಿದ್ದರು. ಐದು ವರ್ಷ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಬೈರುತ್ ಏರ್‌ಪೋರ್ಟ್ ಕಾರ್ಯಾಚರಣೆ ಮತ್ತು ಮಧ್ಯಪ್ರಾಚ್ಯ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸೇನೆಯಿಂದ ಹೊರ ಬಂದು ಮತ್ತೆ ಅಮೆರಿಕಕ್ಕೆ ವಾಪಸಾದರು. ಇದೇ ವೇಳೆ ಅವರು ಅಮೆರಿಕದ ಮೆಸ್ಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಿಂದ ಡಿಗ್ರಿ ಮತ್ತು ಮಾಸ್ಟರ್ ಡಿಗ್ರಿ ಪಡೆದುಕೊಂಡರು.
1976ರಲ್ಲಿ ಬೆಂಜಮಿನ್ ಸಹೋದರ ಯೋನಾಥನ್ ಎಂಟೆಬ್ಬೆ ಕಾರ್ಯಾಚರಣೆಯಲ್ಲಿ ಹುತಾತ್ಮರಾದರು. ಸಹೋದರನ ನೆನಪಿಗಾಗಿ ಉಗ್ರ ವಿರೋಧಿ ಸಂಸ್ಥೆಯೊಂದನ್ನು ಹುಟ್ಟು ಹಾಕಿದರು. ಈ ಅವಧಿಯಲ್ಲಿ ಅಮೆರಿಕದಲ್ಲಿ ಇಸ್ರೇಲ್ ರಾಯಭಾರಿಯಾಗಿದ್ದ ಮೋಶೆ ಏರೆನ್ಸ್ ಅವರ ಕಣ್ಣಿಗೆ ಬಿದ್ದರು. ಮೋಶೆ ಅವರು ಬೆಂಜಮಿನ್ ಅವರನ್ನು ತಮ್ಮ ಡೆಪ್ಯುಟಿಯಾಗಿ ನೇಮಕ ಮಾಡಿಕೊಂಡರು. ಅಲ್ಲಿಂದಲೇ ನೆತನ್ಯಾಹು ಅವರ ಸಾರ್ವಜನಿಕ ಬದುಕು ಆರಂಭವಾಯಿತು. ಅಮೆರಿಕದಲ್ಲಿ ಅವಕಾಶ ಸಿಕ್ಕಾಗಲೆಲ್ಲ ದೂರದರ್ಶನದ ಚರ್ಚೆಗಳಲ್ಲಿ ಇಸ್ರೇಲ್ ಪರವಾಗಿ ಪ್ರಬಲ ವಾದ ಮಂಡಿಸುತ್ತಿದ್ದರು. ಇದು ಅವರ ಜನಪ್ರಿಯತೆ ಹೆಚ್ಚುವಂತೆ ಮಾಡಿತು. ಜತೆಗೇ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್‌ನ ಶಾಶ್ವತ ಪ್ರತಿನಿಧಿಯಾಗುವ ಅವಕಾಶವನ್ನೂ ಒದಗಿಸಿತು.
ರಾಜಕೀಯ ಜೀವನ ಶುರು
ಬೆಂಜಮಿನ್ ನೆತನ್ಯಾಹು ಅವರು 1988ರಲ್ಲಿ ಇಸ್ರೇಲ್‌ಗೆ ಮರಳಿದರು. ರಾಜಕೀಯವನ್ನು ಆಯ್ದುಕೊಂಡು, ಎಲೆಕ್ಷನ್ ಸ್ಪರ್ಧಿಸಿ ಇಸ್ರೇಲ್ ಸಂಸತ್ ಪ್ರವೇಶಿಸಿದರು. ಬಲಪಂಥೀಯ ವಿಚಾರಗಳಿಂದ ಪ್ರಭಾವಿತರು ಇವರು. ಲಿಕುಡ್ ಇದೇ ಸಿದ್ಧಾಂತವನ್ನು ಹೊಂದಿರುವ ಪಕ್ಷ. 1992ರ ಎಲೆಕ್ಷನ್‌ನಲ್ಲಿ ಲಿಕುಡ್ ಪಕ್ಷ ಸೋಲು ಕಂಡಿತು. ಆಗ ನೆತನ್ಯಾಹು ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. 1996ರಲ್ಲಿ ಶಿಮೋನ್ ಪೆರೆಸ್ ಅವರನ್ನು ಸೋಲಿಸಿ, ಇಸ್ರೇಲ್ ಪ್ರಧಾನಿಯಾಗಿ ಮೊದಲ ಬಾರಿಗೆ ಆಯ್ಕೆಯಾದರು. ಜತೆಗೇ, ಇಸ್ರೇಲ್‌ನ ಕಿರಿಯ ಪ್ರಧಾನಿ ಎಂಬ ಅಭಿದಾನವೂ ಪ್ರಾಪ್ತವಾಯಿತು. ನಂತರ, 2001ರಲ್ಲಿ ಏರಿಯಲ್ ಶೆರೋನ್ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ, ಹಣಕಾಸು ಸಚಿವರಾಗಿದ್ದರು. ಗಾಜಾ ಪಟ್ಟಿಯಿಂದ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವುದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ರಾಜಕೀಯ ಧ್ರುವೀಕರಣ
2005ರಲ್ಲಿ ಇಸ್ರೇಲ್ ರಾಜಕಾರಣದಲ್ಲಿ ಧ್ರುವೀಕರಣದ ಸಮಯ. ಪ್ರಭಾವಿ ನಾಯಕರಾಗಿದ್ದ ಶರೋನ್ ಅವರು ಲಿಕುಡ್ ಪಕ್ಷದಿಂದ ಹೊರಬಂದು ತಮ್ಮದೇ ಸ್ವಂತ ಕಡಿಮಾ ಪಕ್ಷ ಸ್ಥಾಪಿಸಿದರು. ಆಗ ಮತ್ತೆ ನೆತನ್ಯಾಹು ಹೆಗಲಿಗೆ ಲಿಕುಡ್ ಪಕ್ಷದ ನಾಯಕತ್ವ ಬಂತು. ಇದರ ಪರಿಣಾಮ ಅವರು 2009ರಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದರು. ಆಗ ಇವರದ್ದು ಮೈನಾರಿಟಿ ಸರ್ಕಾರ. 2012ರಲ್ಲಿ ಸಂಸತ್ತನ್ನು ವಿಸರ್ಜಿಸಿ ಅವಧಿಪೂರ್ವ ಚುನಾವಣೆ ಎದುರಿಸಿದರು. ಮತ್ತೊಂದೆಡೆ ಗಾಜಾ ಬಂಡುಕೋರರ ಮೇಲೆ ಉಗ್ರ ದಾಳಿಗೂ ಆದೇಶಿಸಿದರು. ಎಂಟು ದಿನ ನಡೆದ ಈ ಯುದ್ಧ ಇಸ್ರೇಲ್‌ನ ಅತ್ಯಂತ ಯಶಸ್ವಿ ಕಾರ್ಯಾಚರಣೆ. 2013ರಲ್ಲಿ 3ನೇ ಬಾರಿಗೆ ಪ್ರಧಾನಿಯಾದರು. 2014ರ ಜುಲೈ ಹೊತ್ತಿಗೆ ಪ್ಯಾಲಿಸ್ತೀನ್ ಮತ್ತು ಇಸ್ರೇಲ್ ಮಧ್ಯೆ ಹಿಂಸಾಚಾರ ಉಲ್ಬಣಗೊಂಡಿತು. ಸುಮಾರು 50 ದಿನ ಯುದ್ಧ ನಡೆಯಿತು. ಆದರೆ, ಇದಾವುದು ನೆತನ್ಯಾಹು ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ತಗ್ಗಿಸಲು ಸಕ್ಸೆಸ್ ಆಗಲಿಲ್ಲ. ಬದಲಿಗೆ 2015ರ ಚುನಾವಣೆಯಲ್ಲಿ ಲಿಕುಡ್ ಪಕ್ಷ ಬಹುಮತದೊಂದಿಗೆ ನೆತನ್ಯಾಹು ನೇತೃತ್ವದಲ್ಲಿ ಅಧಿಕಾರಕ್ಕೆ ಬಂತು ಮತ್ತು ನೆತನ್ಯಾಹು ದಾಖಲೆ 4ನೇ ಬಾರಿಗೆ ಪ್ರಧಾನಿ ಹುದ್ದೆಯನ್ನು ಏರಿದರು. ಈಗ ಐದನೇ ಬಾರಿಗೆ ಆ ಜವಾಬ್ದಾರಿಯನ್ನು ನಿರ್ವಹಿಸಲು ಸಜ್ಜಾಗುತ್ತಿದ್ದಾರೆ!
ಗಟ್ಟಿ ನಾಯಕ ನೆತನ್ಯಾಹು
ಇಸ್ರೇಲ್ ಎಂಬ ಪುಟ್ಟ ದೇಶದ ಪ್ರಧಾನಿಯಾಗಿ ನೆತನ್ಯಾಹು ಅವರು ಜಗತ್ತಿನಾದ್ಯಂತ ಬಹುದೊಡ್ಡ ಹೆಸರು ಮಾಡಿದ್ದಾರೆ. ಕಠಿಣ ಸಂದರ್ಭದಲ್ಲಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಎದೆಗಾರಿಕೆಯನ್ನು ಅನೇಕ ಸಾರಿ ಪ್ರದರ್ಶಿಸಿದ್ದಾರೆ. ಈ ಗುಣವೇ ಅವರು ಇಸ್ರೇಲಿಗಳ ಮೆಚ್ಚಿನ ನಾಯಕನಾಗಲು ಸಹಾಯ ಮಾಡಿದೆ. ಆದರೆ, ಅವರದ್ದು ತುಂಬ ಸ್ನೇಹಶೀಲ ವ್ಯಕ್ತಿತ್ವ. ಈ ಕಾರಣಕ್ಕಾಗಿಯೇ ಜಗತ್ತಿನಾದ್ಯಂತ ಎಲ್ಲ ನಾಯಕರು ಅವರಿಗೆ ಸ್ನೇಹಿತರು. ನೆತನ್ಯಾಹ-ಮೋದಿ ಫ್ರೆಂಡ್‌ಶಿಪ್ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ಅವರು ಕೇವಲ ವೃತ್ತಿಪರ ರಾಜಕಾರಣಿಯಷ್ಟೇ ಅಲ್ಲ. ಮುತ್ಸದ್ದಿ, ಚಿಂತಕ, ನಿಪುಣ ಆಡಳಿತಗಾರರೂ ಹೌದು.
ಮೂರು ಮದುವೆ
ಮುಂದಿನ ವಾರ ಇಸ್ರೇಲ್‌ನ ಪ್ರಧಾನಿಯಾಗಲಿರುವ 73 ವರ್ಷದ ನೆತನ್ಯಾಹು ಅವರಿಗೆ ಈವರೆಗೆ 3 ಮೂರು ಮದುವೆಗಳಾಗಿವೆ. ಮೊದಲ ಹೆಂಡತಿ ಮಿರಿಯಾಮ್ ವೀಜ್ಮನ್. ಎರಡನೇ ಹೆಂಡತಿ ಫ್ಲೇರ್ ಕೇಟ್ಸ್ ಮತ್ತು ಮೂರನೇ ಹೆಂಡತಿ ಸಾರಾ ಬೆನ್ ಆಟ್ರ್ಜಿ. ಮೊದಲ ಇಬ್ಬರಿಗೆ ಡಿವೋರ್ಸ್ ನೀಡಿದ್ದಾರೆ. ಒಟ್ಟ ಮೂರು ಮಕ್ಕಳಿದ್ದಾರೆ. ನೆತನ್ಯಾಹು ಬರಹಗಾರರೂ ಹೌದು. ‘ಇಂಟರ್‌ನ್ಯಾಷನಲ್ ಟೆರರಿಸಮ್: ಚಾಲೆಂಜ್ ಆ್ಯಂಡ್ ರೆಸ್ಪಾನ್ಸ್’ ಸೇರಿ ನಾಲ್ಕು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಮತ್ತೆ ಪ್ರಧಾನಿಯಾಗಿ ಮರಳುತ್ತಿರುವ ಬೆಂಜಮಿನ್ ನೆತನ್ಯಾಹು ಮುಂದೆ ಸಾಕಷ್ಟು ಸವಾಲಗಳೂ ಇವೆ. ಅವುಗಳನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕು. ಆದರೆ, ಅವರ ಟ್ರ್ಯಾಕ್ ರೆಕಾರ್ಡ್ ನೋಡಿದರೆ, ಎಂಥದ್ದೇ ಸಂದರ್ಭವನ್ನು ತಮ್ಮ ಪರವಾಗಿ ಪರಿವರ್ತಿಸಿಕೊಳ್ಳುವ ಚಾಕಚಕ್ಯತೆ ಇರುವುದನ್ನು ಮರೆಯಬಾರದು.
ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ | ಧೈರ್ಯ, ಹುಂಬತನ, ಹುಮ್ಮಸ್ಸು, ಇದೇ ಎಲಾನ್ ಮಸ್ಕ್ ವರ್ಚಸ್ಸು