ಅಮೀರಾ ಶಾ ಎಂದರೆ ಮೆಟ್ರೊಪಾಲಿಸ್ ಹೆಲ್ತ್‌ಕೇರ್‌ನ ವ್ಯವಸ್ಥಾಪಕ ನಿರ್ದೇಶಕರು. (Ameera Sha̧h Managing Director of Metropolis Helthcare) 43 ವರ್ಷ ವಯಸ್ಸಿನ ಅಮೀರಾ ಶಾ ಅವರು ಮೆಟ್ರೊಪಾಲಿಸ್ ಅನ್ನು ಒಂದು ಪೆಥಾಲಜಿ ಲ್ಯಾಬೊರೇಟರಿಯಿಂದ ಸಮಗ್ರ ಮಲ್ಟಿನ್ಯಾಶನಲ್ ಸರಣಿ ಡಯಾಗ್ನಸ್ಟಿಕ್ಸ್ ಆಗಿ ಬೆಳೆಸಿರುವುದು ಅಸಾಮಾನ್ಯ ಸಾಧನೆಯಾಗಿದೆ. ಇವತ್ತು ಮೆಟ್ರೊಪಾಲಿಸ್ ಭಾರತದ ಪ್ರಮುಖ ಡಯಾಗ್ನಸ್ಟಿಕ್ಸ್ ಸರಣಿಯಾಗಿದೆ.
ಮುಂಬಯಿನಲ್ಲಿ ಎಚ್‌ಆರ್ ಕಾಲೇಜ್ ಆಫ್ ಕಾಮರ್ಸ್ & ಎಕನಾಮಿಕ್ಸ್‌ನಲ್ಲಿ ಪದವಿ ಗಳಿಸಿದ ಬಳಿಕ ಅಮೀರಾ ಅವರು ಆಸ್ಟಿನ್‌ನಲ್ಲಿ ಪ್ರತಿಷ್ಠಿತ ಟೆಕ್ಸಾಸ್ ವಿವಿಗೆ ಸೇರಿದರು. ಅಲ್ಲಿ ಓದು ಮುಗಿಸಿದ ಬಳಿಕ ಗೋಲ್ಡ್ ಮನ್ ಸ್ಯಾಕ್ಸ್‌ನಲ್ಲಿ ಕೆಲ ಕಾಲ ಕೆಲಸ ಮಾಡಿದರು. ಜಗತ್ತಿನ ದೊಡ್ಡ ಇನ್ವೆಸ್ಟ್ ಮೆಂಟ್ ಬ್ಯಾಂಕ್‌ನಲ್ಲಿ ಆಕರ್ಷಕ ಹುದ್ದೆಯಲ್ಲಿ ಕಳೆಯಬಹುದಿತ್ತು. ಆದರೆ ಅವರಿಗೆ ಅವರ ಕೆಲಸದಲ್ಲಿ ತೃಪ್ತಿ ಇದ್ದಿರಲಿಲ್ಲ.
ಅಮೀರಾ ಶಾ ಅವರ ತಂದೆ ಡಾ. ಸುಶೀಲ್ ಶಾ. ಅವರೊಬ್ಬ ಪೆಥಾಲಜಿಸ್ಟ್. ದಕ್ಷಿಣ ಮುಂಬಯಿನಲ್ಲಿ ಒಂದು ಸಣ್ಣ ಡಯಾಗ್ನಸ್ಟಿಕ್ಸ್ ಲ್ಯಾಬ್ ಅನ್ನು ಹೊಂದಿದ್ದರು. ಹೀಗಾಗಿ ಭಾರತಕ್ಕೆ ಮರಳಿದ ಅಮೀರಾ ಅವರು ತಂದೆ ನಡೆಸುತ್ತಿದ್ದ ಡಯಾಗ್ನಸ್ಟಿಕ್ಸ್ ಸೆಂಟರ್‌ಗೆ ಸೇರಿದರು. ತಾಯಿ ಗೈನಕಾಲಜಿಸ್ಟ್ ಆಗಿದ್ದರು.
ಯುವ ಬಿಸಿನೆಸ್ ಮಹಿಳೆಯಾಗಿ ಅಮೀರಾ ಹಲವಾರು ಸವಾಲುಗಳನ್ನು ಎದುರಿಸಿದರು. ಬಾಸ್‌ನ ಮಗಳಾಗಿ ಹಣೆಪಟ್ಟಿ ಕಳಚಿಕೊಂಡು ನಿಂತು ಯಶಸ್ವಿಯಾಗುವುದು ಸುಲಭವಿರಲಿಲ್ಲ. ಆದರೂ ಕೆಲ ಕಾಲದಲ್ಲಿ ನಾಯಕತ್ವದ ಕೌಶಲವನ್ನು ಕಲಿತು ಯಶಸ್ವಿಯಾದರು. ಮೆಟ್ರೊಪಾಲಿಸ್ ಬಹು ಬೇಗ ತಂತ್ರಜ್ಞಾನವನ್ನು ಮೈಗೂಡಿಸಿಕೊಂಡು ನವೀನ ರೀತಿಯಲ್ಲಿ ಬೆಳೆಯಲೇಬೇಕು ಎಂಬುದನ್ನು ಅಮೀರಾ ಶಾ ಮನಗಂಡರು. ಇದುವೇ ಸಂಸ್ಥೆಯ ಮುಂದಿಬ ಶರವೇಗದ ಬೆಳವಣಿಗೆಗೆ ನಾಂದಿ ಹಾಡಿತು! ಆಗಲೇ ಡಯಾಗ್ನಸ್ಟಿಕ್ಸ್ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸಲು ಬಯಸಿದ್ದರು. ಬದಲಾಗುತ್ತಿರುವ ಟೆಕ್ನಾಲಜಿಯನ್ನು ಅಷ್ಟೇ ಮುಕ್ತವಗಿ ಸ್ವೀಕರಿಸಿ ಅಳವಡಿಸಿದ ಕಾರಣ ಅವರು ಅಭೂತಪೂರ್ವ ಸಾಧನೆ ಮಾಡುವಂತಾಯಿತು. ಹೀಗಾಗಿ ಮೆಟ್ರೊಪಾಲಿಸ್‌ನಲ್ಲಿ ಟೆಕ್ ಡಿಪಾರ್ಟ್‌ಮೆಂಟ್ ಅನ್ನು ಸ್ಟ್ರಾಂಗ್ ಆಗಿ ಕಟ್ಟಿದರು. ಎರಡನೆಯದಾಗಿ ನಿಖರ ಡಯಾಗ್ನಸ್ಟಿಕ್ಸ್ ಮತ್ತು ಕಸ್ಟಮರ್ ಎಕ್ಸ್‌ಪೀರಿಯನ್ಸ್‌ಗೆ ಆದ್ಯತೆ ನೀಡಿದರು.
It was a pleasure to interact with Krish Kothari on his show #TheSenseiKujakuShow. Thank you for the opportunity to share my business and entrepreneurial journey.@MetropolisLab https://t.co/aIPiQzVGT4
— Ameera Shah (@AmeeraShah) April 12, 2023
ಅಮೀರಾ ಶಾ ನಾಯಕತ್ವದಲ್ಲಿ ಮೆಟ್ರೊಪಾಲಿಸ್ (Metropolis) ಮೂರು ಹೆಸರಾಂತ ಪ್ರೈವೇಟ್ ಈಕ್ವಿಟಿ ಹೂಡಿಕೆದಾರರಿಂದ ಬಂಡವಾಳ ಹೂಡಿಕೆಯನ್ನು ಗಳಿಸಿತು. ಇದರ ಪರಿಣಾಮ ಭಾರತದ ಮುಂಚೂಣಿಯ ಡಯಾಗ್ನಸ್ಟಿಕ್ಸ್ ಸೆಂಟರ್ ಆಗಿ ಮೆಟ್ರೊಪಾಲಿಸ್ ಹೊರಹೊಮ್ಮಿತು! ಉಗಾಂಡಾ, ಶ್ರೀಲಂಕಾ, ಜಾಂಬಿಯಾ, ಮಾರಿಷಸ್, ಕೀನ್ಯಾ, ತಾಂಜಾನಿಯಾ, ಘಾನಾದಲ್ಲೂ ಡಯಾಗ್ನಸ್ಟಿಕ್ಸ್ ಸೆಂಟರ್‌ಗಳನ್ನು ಸಂಸ್ಥೆ ವಿಸ್ತರಿಸಿತು. ಇಂದು ಮೆಟ್ರೊಪಾಲಿಸ್ 1500 ಸೆಂಟರ್‌ಗಳನ್ನು ಹೊಂದಿದೆ. 2022-23ರ ಮೂರನೇ ತ್ರೈಮಾಸಿಕದಲ್ಲಿ 36 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಅಮೀರಾ ಅವರು ಫಾರ್ಚ್ಯೂನ್ ಇಂಡಿಯಾದ 50 ಪ್ರಭಾವಿ ಮಹಿಳೆಯರು ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ. ಫೋರ್ಬ್ಸ್ ಏಷ್ಯಾದ ಏಷ್ಯಾಸ್ ಮೋಸ್ಟ್ ಪವರ್ ಫುಲ್ ವಿಮೆನ್ ಇನ್ ಬಿಸಿನೆಸ್‌ನಲ್ಲೂ ಸ್ಥಾನ ಗಳಿಸಿದ್ದಾರೆ.
ಅಪ್ಪನ ಬಿಸಿನೆಸ್ ವಿಸ್ತರಿಸಲು ಮಗಳ ತಂತ್ರ ಏನಾಗಿತ್ತು?
ಮೆಟ್ರೊಪಾಲಿಸ್ ಹೆಲ್ತ್ ಕೇರ್ ಇತಿಹಾಸದ 20 ವರ್ಷಗಳನ್ನು ಗಮನಿಸಿದರೆ, ಅಮೀರಾ ಶಾ ಕೈಗೊಂಡ ತಂತ್ರಗಾರಿಕೆಯ ಅರಿವಾಗುತ್ತದೆ. ಅದನ್ನು ಎರಡು ವಿಭಾಗವಾಗಿಸಬಹುದು. 2001ರಿಂದ 2015ರ ತನಕ ಮೆಟ್ರೊಪಾಲಿಸ್ ಬಿಸಿನೆಸ್-ಟು-ಬಿಸಿನೆಸ್ ಸಂಸ್ಥೆಯಾಗಿತ್ತು. 2015ರಲ್ಲಿ ಅಮೀರಾ ಅವರು ಮೆಟ್ರೊಪಾಲಿಸ್‌ನ ವಿಸ್ತರಣೆಗೆ ಕೈ ಹಾಕಿದರು. ಅದಕ್ಕೆ ವೃತ್ತಿಪರತೆಯ ಸ್ಪರ್ಶ ನೀಡಿದರು. ಉತ್ತಮ ತಂಡವನ್ನು ಕಟ್ಟಿದರು. 2016ರಲ್ಲಿ 300 ಸೆಂಟರ್‌ಗಳನ್ನು ತೆರೆಯಲಾಯಿತು. ಈಗ 1,500 ಕ್ಕೂ ಹೆಚ್ಚು ಸೆಂಟರ್‌ಗೆ ಏರಿದೆ. ಈಗ ಭಾರತದ 200 ನಗರಗಳಲ್ಲಿ ಇದ್ದೇವೆ. ಇದು 400ಕಕೆ ಏರಿಕೆಯಾಗಲಿದೆ. ತಂತ್ರಜ್ಞಾನ, ಆಟೊಮೇಶನ್‌ನಲ್ಲಿ ಹೆಚ್ಚು ಹೂಡಿಕೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅಮೀರಾ ಶಾ.
ಬಿಸಿನೆಸ್ ಎಂದರೆ ಆಮ್ಲಜನಕ, ಆರೋಗ್ಯ ಕ್ಷೇತ್ರಕ್ಕೂ ಅಗತ್ಯ
ಮಹಿಳೆಯರು ಉದ್ಯಮಿಯಗಬೇಕು ಎಂದು ಕನಸು ಕಾಣುವುದು ಈಗ ಸುಲಭ, ಆದರೆ ಅಂದುಕೊಂಡದ್ದನ್ನು ಜಾರಿಗೊಳಿಸಲು ಸತತ ಪರಿಶ್ರಮ ಅಗತ್ಯ. ಕಂಫರ್ಟ್ ಝೋನ್‌ನಿಂದ ಹೊರ ಬರಲೇಬೇಕಾಗುತ್ತದೆ. 21ರಲ್ಲೇ ನನಗೆ ಉದ್ಯಮಿ ಆಗಬೇಕು ಎಂಬ ಕನಸಿತ್ತು. ವೈಯಕ್ತಿಕ ವ್ಯಕ್ತಿತ್ವ ಇದರಲ್ಲಿ ಮುಖ್ಯವಾಗುತ್ತದೆ. ಸಣ್ಣ ಸ್ಟಾರ್ಟಪ್‌ನಲ್ಲಿ ಉದ್ಯಮಿಯ ವ್ಯಕ್ತಿತ್ವ ಛಾಪು ಮೂಡಿಸುತ್ತದೆ. ಆತ ಮಹತ್ತ್ವಾಕಾಂಕ್ಷೆ, ಛಲದಿಂದ ದುಡಿದರೆ ಕಂಪನಿ ಬೆಳೆಯುತ್ತದೆ. ಉದ್ಯಮಿ ಸಂಘಟಿತ ವ್ಯಕ್ತಿ ಆಗಿರದಿದ್ದರೆ ಕಂಪನಿ ಸಂಘಟನೆಯಾಗುವುದಿಲ್ಲ. ಬಾಸ್ ಇತರರ ಜತೆ ಉತ್ತಮ ಸಂಬಂಧ ಹೊಂದಿರದಿದ್ದರೆ ಕಂಪನಿಯೂ ಇತರರ ಜತೆ ಉತ್ತಮ ಸಂಬಂಧ ಹೊಂದುವುದಿಲ್ಲ. ಮುಖ್ಯಸ್ಥ ನಿರಾಸಕ್ತಿ ತೋರಿದರೆ ಕಂಪನಿಯೂ ನಿರಾಸಕ್ತಿಯಿಂದ ಮುಗ್ಗರಿಸುತ್ತದೆ. ಆದ್ದರಿಂದ ಮೊದಲು ಕಂಪನಿಯಲ್ಲಿ ಎಲ್ಲರ ಮನಸ್ಥಿತಿ ಬದಲಿಸಬೇಕಾಗುತ್ತದೆ.
ಹಲವು ವರ್ಷಗಳ ಹಿಂದೆ ಹೆಲ್ತ್ ಕೇರ್ ಎಂದರೆ ಬಿಸಿನೆಸ್ ಅಲ್ಲ ಎಂಬ ವಾಡಿಕೆ ಇತ್ತು. ಆರೋಗ್ಯ ಸೇವೆ ಎಂದರೆ ದುಡ್ಡು ಮಾಡುವುದಲ್ಲ, ದುಡ್ಡು ಮಾಡಬಾರದು ಎಂಬ ಭಾವನೆ ಇತ್ತು. ಆರೋಗ್ಯ ಕ್ಷೇತ್ರವನ್ನು ಬಿಸಿನೆಸ್ ಎನ್ನುವುದೇ ಮಹಾಪರಾಧ ಎಂಬ ಭಾವನೆ ಪ್ರಚಲಿತವಾಗಿತ್ತು. ಆದರೆ ಬಿಸಿನೆಸ್ ಎಂದರೆ ಅಪರಾಧ ಅಲ್ಲ, ಬಿಸಿನೆಸ್ ನಡೆಯದಿದ್ದರೆ ಯಾವುದೇ ಸಂಸ್ಥೆ ನಡೆಯುವುದಿಲ್ಲ. ಲಾಭವಿಲ್ಲದಿದ್ದರೆ ಯಾವುದೇ ಸಂಸ್ಥೆಗೆ ಒಳ್ಳೆಯ ಸಿಬ್ಬಂದಿ ನೇಮಿಸಲು ಅಸಾಧ್ಯ, ಮೂಲಸೌಕರ್ಯ ಕಲ್ಪಿಸಲು, ಹೊಸ ಟೆಕ್ನಾಲಜಿ ಅಳವಡಿಸಲು ಅಸಾಧ್ಯ. ಬಿಸಿನೆಸ್ ಎಂದರೆ ಆಮ್ಲಜನಕ ಇದ್ದಂತೆ. ಅದು ಎಲ್ಲ ಸಂಸ್ಥೆಗೂ ಬೇಕು, ಆರೋಗ್ಯ ಕ್ಷೇತ್ರವೂ ಅದಕ್ಕೆ ಹೊರತಾಗಿಲ್ಲ ಎಂದು ಅತ್ಯಂತ ಸ್ಪಷ್ಟವಾಗಿ ಹೇಳುತ್ತಾರೆ ಅಮೀರಾ ಶಾ.
21ನೇ ವರ್ಷದಲ್ಲಿ ತಂದೆಯ ಡಯಾಗ್ನಸ್ಟಿಕ್ಸ್ ಸೇರಿದಾಗ ಸಂಪನ್ಮೂಲದ ಕೊರತೆ ಇತ್ತು. ಎಚ್ ಆರ್ ಆಗಿ ಒಳ್ಳೆಯ ಸಂಪನ್ಮೂಲ ಗಳಿಸುವುದು ಗೊತ್ತಿರಲಿಲ್ಲ. ಹೀಗಾಗಿ ಲಭ್ಯವಿದ್ದ ಬಂಡವಾಳದಲ್ಲಿ ಒಳ್ಳೆಯ ಟೀಮ್ ರಚಿಸಲಾಯಿತು. ತಂತ್ರಜ್ಞಾನಕ್ಕೆ ಆದ್ಯತೆ ನೀಡಲಾಯಿತು. ಆಫ್ರಿಕಾ ಮೊದಲಾದ ಕಡೆ ಸಂಸ್ಥೆಯ ಕಚೇರಿ ತೆರೆಯುವಾಗ ಆದಷ್ಟು ಸರಳವಾಗಿ ಬಿಸಿನೆಸ್ ಮಾಡೆಲ್ ಅನ್ನು ಮುಂದಿಟ್ಟೆವು. ಸಂಕೀರ್ಣವಾದಷ್ಟು ಕಷ್ಟ. ಯಾವತ್ತೂ ಬಿಸಿನೆಸ್ ಅನ್ನು ಸರಳವಾಗಿಸಿ. ಮೊದಲು ಒಂದು ಮಾರುಕಟ್ಟೆಯಲ್ಲಿ ಪ್ರಬಲವಾಗಿ ಬೇರೂರಿಕೊಳ್ಳಿ. ಅದು ವಿಸ್ತರಣೆಗೆ ಸಹಕರಿಸುತ್ತದೆ. ಬಿಸಿನೆಸ್ ಪಾರ್ಟ್‌ನರ್‌ಗಳನ್ನು ಆಯ್ಕೆ ಮಾಡುವಾಗಲೂ ಯೋಚಿಸಿ. ಅವರ ಜತೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಇಲ್ಲದಿದ್ದರೆ ಸಂಸ್ಥೆಗೆ ಸಮಸ್ಯೆಯಾಗುತ್ತದೆ ಎನ್ನುತ್ತಾರೆ ಅಮೀರಾ ಶಾ.
ಸಕಾರಾತ್ಮಕ ಮನೋಭಾವನೆ ಮುಖ್ಯ
ಯಾವುದೇ ಬಿಸಿನೆಸ್‌ನಲ್ಲಿ ಯಶಸ್ಸಿಗೆ ಸಕಾರಾತ್ಮಕ ಪ್ರವೃತ್ತಿ ಮುಖ್ಯ. ಜತೆಗೆ ನಿರಂತರ ಮುಂದುವರಿಯುತ್ತಿರಬೇಕು. ಎಲ್ಲ ಸವಾಲುಗಳ ಎದುರು ಧೃತಿಗೆಡಬಾರದು. ಜನ ಏನು ಯೋಚನೆ ಮಾಡುತ್ತಾರೆ, ಏನು ಹೇಳುತ್ತಾರೆ ಎಂಬುದಕ್ಕೆ ಹೆಚ್ಚು ತಲೆ ಕೆಡಿಸಿಕೊಳ್ಳಬಾರದು. ಆದರೆ ಪ್ರಾಮಾಣಿಕವಾಗಿ ಬೆಳೆಯುವುದು ಮುಖ್ಯ. ನಿಮಗೆ ನೀವು ಸರಿ ಎನ್ನಿಸಬೇಕು. ಕೋವಿಡ್ ಸಂದರ್ಭ ನಮ್ಮ ಸಂಸ್ಥೆಯ ಉದ್ಯೋಗಿಗಳು 18-20 ಗಂಟೆ ಕೆಲಸ ಮಾಡಿದ್ದರು. ಅನೇಕ ಸವಾಲುಗಳು ಆಗ ಎದುರಾಗಿತ್ತು. ಎಲ್ಲ ಮುನಿಸಿಪಾಲಿಟಿಗಳಲ್ಲಿ ನಾನಾ ನಿಯಮಗಳು, ನಿರ್ಬಂಧಗಳು ಇರುತ್ತಿತ್ತು. ತಪ್ಪಿದರೆ ಸಂಸ್ಥೆಯೇ ಮುಚ್ಚಿರಬೇಕಿತ್ತು. ಇಡೀ ಸ್ಥಿತಿ ಎಲ್ಲರಿಗೂ ಸವಾಲಿನಿಂದ ಕೂಡಿತ್ತು. ಆದರೆ ಧೃತಿಗೆಡದೆ ಎಲ್ಲ ಸವಾಲುಗಳನ್ನು ದಾಟಿದೆವು. ಅಂಥ ಬೆಂಬಲ ನಮ್ಮ ತಂಡದಿಂದ ಲಭಿಸಿತ್ತು. ಪ್ರತಿ ದಿನ ನಮಗೆ ಹೊಸ ದಿನ ಹಾಗೂ ಹೊಸ ಅನುಭವಗಳನ್ನು ನೀಡುತ್ತದೆ. ಪ್ರತಿಯೊಂದು ಅನುಭವಗಳಿಂದಲೂ ಹೊಸ ಪಾಠವನ್ನು ಕಲಿಯುತ್ತೇವೆ. ಕಂಪನಿ ಬೆಳೆಯಲು ಇದು ಮುಖ್ಯ.
ನಾನು ಪರಿಪೂರ್ಣ ಮಹಿಳೆ ಅಲ್ಲ, ಹಲವಾರು ದೋಣಿಗಳಲ್ಲಿ ಕಾಲಿಟ್ಟಿದ್ದೇನೆ. ಆದರೆ ಸಮಗ್ರತೆಗೆ ಒತ್ತು ನೀಡುತ್ತೇನೆ. ಅಂಥ ವಾತಾವರಣವನ್ನು ನಿರ್ಮಿಸಲು ಯತ್ನಿಸುತ್ತೇನೆ. ನಮಗೆ ನಮ್ಮ ಮೇಲೆ ಅಪರಿಮಿತ ವಿಶ್ವಾಸ ಇರಬೇಕು. ಸತತವಾಗಿ ಬದಲಾವಣೆಗೆ ಒಡ್ಡಿಕೊಳ್ಳಿ, ಕಠಿಣ ಪರಿಶ್ರಮಿಯಾಗಿ, ನಿರಂತರ ಆವಿಷ್ಕಾರ ಎಲ್ಲದಕ್ಕೂ ಅಗತ್ಯ. ಸಂವಹನ ಅಥವಾ ಕಮ್ಯುನಿಕೇಟ್ ಮುಖ್ಯ. ಸುತ್ತುಮುತ್ತಲು ಇರುವವರಿಗೆ ಪ್ರೇರೇಪಣೆ ನೀಡಬೇಕು. ಸಕಾರಾತ್ಮಕ ವಾತಾವರಣ ಮೂಡಿಸಬೇಕು ಎನ್ನುತ್ತಾರೆ ಅಮೀರಾ ಶಾ.
ಭಾರತದಲ್ಲಿ ಡಯಾಗ್ನಸ್ಟಿಕ್ಸ್ ಹೆಲ್ತ್‌ಕೇರ್ ಉದ್ದಿಮೆ ಬಹುತೇಕ ಅಸಂಘಟಿತವಾಗಿದೆ. ಇಂಥ ವಲಯದಲ್ಲಿ ವಿಭಿನ್ನವಾಗಿರುವುದು ಮುಖ್ಯ. ವಿಶೇಷ ಟೆಸ್ಟ್ ಸೌಲಭ್ಯ, ತಂತ್ರಜ್ಞಾನ ಮೆಟ್ರೊಪಾಲಿಸ್ ಹೆಲ್ತ್ ಕೇರ್‌ನ ವೈಶಿಷ್ಟ್ಯವಾಗಿದೆ. I have always focussed on the contribution that i can make to the communiţy society and my country ಎನ್ನುತ್ತಾರೆ ಅಮೀರಾ ಶಾ. ಈ ಸೃಜನಶೀಲತೆ ಮತ್ತು ಸೇವಾ ಮನೋಭಾವ ಮತ್ತು ಉದ್ಯಮಶೀಲತೆಯ ಪರಿಣಾಮ ಆಫ್ರಿಕಾದಲ್ಲೂ ಅಮೀರಾ ಅವರು ಡಯಾಗ್ನಸ್ಟಿಕ್ಸ್ ಸೆಂಟರ್‌ಗಳನ್ನು ಸ್ಥಾಪಿಸಿದ್ದಾರೆ.
ಇದನ್ನೂ ಓದಿ :Brand story : ಫ್ಲಿಪ್ ಕಾರ್ಟ್‌ನ ಮಾಜಿ ಉದ್ಯೋಗಿ ಸಮೀರ್ ಆರಂಭಿಸಿದ ಫೋನ್ ಪೇ, 99,000 ಕೋಟಿ ರೂ. ಕಂಪನಿಯಾಗಿದ್ದು ಹೇಗೆ?