Site icon Vistara News

ಈಗೀಗ 30-40ನೇ ವಯಸ್ಸಿನಲ್ಲೇ ಸ್ತನ ಕ್ಯಾನ್ಸರ್‌ ಕಾಡುವುದೇಕೆ? ಎಲ್ಲಿ ಎಡವಿದ್ದೇವೆ ನಾವು?

Breast Cancer

ಸ್ತನ ಕ್ಯಾನ್ಸರ್‌ ನಮ್ಮ ದೇಶದಲ್ಲಿ ಯಾವ ವೇಗದಲ್ಲಿ ಹೆಚ್ಚುತ್ತಿದೆ ಎಂದರೆ ಈಗೀಗ ಒಂದೇ ವರ್ಷದಲ್ಲಿ 10 ಲಕ್ಷ ಪ್ರಕರಣಗಳು ಪತ್ತೆಯಾಗುತ್ತಿವೆ. ದೇಶದಲ್ಲಿ ಹೆಣ್ಮಕ್ಕಳನ್ನು ಕಾಡುವ ಕ್ಯಾನ್ಸರ್‌ಗಳ ಪೈಕಿ ಗರ್ಭದ ಕೊರಳಿನ ಕ್ಯಾನ್ಸರ್‌ ಮೊದಲ ಸ್ಥಾನದಲ್ಲಿದ್ದರೆ  ಬ್ರೆಸ್ಟ್ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಎರಡು – ಮೂರು ದಶಕಗಳ ಹಿಂದೆ, ಸಾಮಾನ್ಯವಾಗಿ 50-60ರ ವಯಸ್ಸಿನವರಲ್ಲಿ ಕಂಡು ಬರುತ್ತಿದ್ದ ಈ ಕಾಯಿಲೆ, ಇತ್ತೀಚೆಗೆ ಸಣ್ಣ ವಯಸ್ಸಿನವರಲ್ಲೂ ಅಂದರೆ 30-40 ವಯಸ್ಸಿನ ಹೆಂಗಸರಲ್ಲೂ ಕಾಣಿಸಿಕೊಳ್ಳುತ್ತಿದೆ.

ಸ್ತನ ಕ್ಯಾನ್ಸರ್ ನಿಂದ  ಸಾವನ್ನಪ್ಪುವವರ  ಅಂಕಿ ಅಂಶಗಳನ್ನು ನೋಡಿದರೆ,  ಜಗತ್ತಿನಲ್ಲಿ ಭಾರತವೇ ಪ್ರಥಮ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯವಾಗಿದೆ. ಇದಕ್ಕಿಂತಲೂ ಆತಂಕಕಾರಿಯಾದ ಇನ್ನೊಂದು ಸಂಗತಿ ಎಂದರೆ, ನಮ್ಮಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರಲ್ಲಿ ಐವತ್ತು ಶೇಕಡಾ ಮರಣವನ್ನಪ್ಪುತ್ತಾರೆ!

ಇದಕ್ಕೆ ಮುಖ್ಯ ಕಾರಣ, ಸ್ತನ ಕ್ಯಾನ್ಸರ್‌ ಪತ್ತೆಯಾಗುವುದೇ ತುಂಬಾ ವಿಳಂಬವಾಗಿ. ನಾಚಿಕೆಯಿಂದಲೋ, ಭಯದಿಂದಲೋ, ಅಜ್ಞಾನದಿಂದಲೋ ಅಥವಾ ಈ  ಗಂಟುಗಳಲ್ಲಿ ನೋವಿಲ್ಲದಿರುವುದರಿಂದಲೋ, ಮಹಿಳೆಯರು ಇದನ್ನು ಪ್ರಾಥಮಿಕ ಹಂತದಲ್ಲಿ ಕಡೆಗಣಿಸಿ ತಜ್ಞರ ಬಳಿ ತಡವಾಗಿ ಹೋಗುವುದರಿಂದ ರೋಗ ಗಂಭೀರ ಸ್ಥಿತಿ ತಲುಪಿದ ಮೇಲೆಯೇ ಗೊತ್ತಾಗುತ್ತದೆ.

ರೋಗ ಲಕ್ಷಣಗಳು ಏನೇನು?

ಸ್ತನದಲ್ಲಿ ಗಂಟು, ತೊಟ್ಟಿನಿಂದ ರಕ್ತದಂತಹ ದ್ರವ ಸೋರುವಿಕೆ, ಸ್ತನದ ಆಕಾರ ಅಥವಾ ಗಾತ್ರದಲ್ಲಿ ವ್ಯತ್ಯಾಸ, ಮೇಲ್ಗಡೆ ಚರ್ಮದಲ್ಲಿ ಬದಲಾವಣೆ, ಇಂತಹ ಕೆಲವು ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಬೇಕು.

ಸ್ತನ ಕ್ಯಾನ್ಸರ್‌ಗೆ ಕಾರಣಗಳು

1. ಕೌಟುಂಬಿಕ ಹಿನ್ನೆಲೆ – ತಾಯಿ, ಸೋದರಿ ಅಥವಾ ತೀರ ಸಮೀಪದ ಬಂಧುವಿಗೆ ಸ್ತನ, ಅಂಡಾಶಯ ಅಥವಾ ಕರುಳಿನ  ಕ್ಯಾನ್ಸರ್ ಇದ್ದರೆ, ಕುಟುಂಬದ ಇತರರಿಗೆ ಬರುವ ಸಾಧ್ಯತೆ.

2. ವಯಸ್ಸು ಜಾಸ್ತಿಯಾದ ಮೇಲೆ ಗರ್ಭಿಣಿಯಾಗುವುದು

3. ನಾನಾ ಕಾರಣಗಳಿಗಾಗಿ ಎದೆ ಹಾಲೂಡಿಸದೆ ಇರುವುದು

4. ದೇಹ ತುಂಬ ದಪ್ಪ ಆಗಿರುವುದು, ತೂಕ ತುಂಬ ಜಾಸ್ತಿ ಆಗಿರುವುದು.

5. ಧೂಮಪಾನ ಮಾಡುವುದರಿಂದ

6. ದೋಷ ಪೂರಿತ  BRCA 1 ಮತ್ತು 2 ಜೀನ್ ಗಳು

7. ವರ್ಷಾನುಗಟ್ಟಲೆ ಈಸ್ಟ್ರೋಜೆನ್ ಹಾರ್ಮೋನ್ ಸೇವಿಸಿದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಜಾಸ್ತಿ ಎನ್ನುವ ಸತ್ಯವನ್ನು ಅಲ್ಲಗಳೆಯುವಂತಿಲ್ಲ.

ರೋಗ ನಿರ್ಣಾಯಕ ವಿಧಾನಗಳು

1. ಸ್ವಯಂ ಪರೀಕ್ಷೆ – ತಿಂಗಳ ಋತುಸ್ರಾವ  ನಿಂತ ನಂತರ ಸ್ವತಃ ಸ್ತನ ಪರೀಕ್ಷೆ ಮಾಡಿಕೊಂಡು ಗಂಟುಗಳಿವೆಯೇ ಎಂದು ತಿಂಗಳಿಗೊಮ್ಮೆ ಗಮನಿಸಿಕೊಳ್ಳುವುದು ಉತ್ತಮ ವಾಡಿಕೆ.

2. ವೈದ್ಯಕೀಯ  ಪರೀಕ್ಷೆ – ಮೇಲೆ ಹೇಳಿದ ರೋಗ  ಲಕ್ಷಣಗಳಿಲ್ಲದಿದ್ದರೆ ವರ್ಷಕ್ಕೊಮ್ಮೆ, ಲಕ್ಷಣಗಳಿದ್ದರೆ ತಕ್ಷಣವೇ ನುರಿತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಒಂದೊಮ್ಮೆ ಪರೀಕ್ಷೆಯಲ್ಲಿ ಗಂಟುಗಳಿವೆ ಎನಿಸಿದರೂ, ಬಹಳಷ್ಟು ಸಲ ಅವುಗಳು  ಗಂಟುಗಳಲ್ಲ ಎಂದು ವೈದ್ಯರು ಪರೀಕ್ಷೆಯಿಂದ ಖಾತ್ರಿಪಡಿಸಿದಾಗ ನಿರಾಳವಾಗಬಹುದು.

3. ವಯಸ್ಸು 40 ದಾಟಿದ ಮೇಲೆ ವರ್ಷಕ್ಕೊಮ್ಮೆ ಮಾಮ್ಮೊಗ್ರಫಿ  ಮಾಡಿಸಿಕೊಳ್ಳುವುದು ಒಳ್ಳೆಯದು.

4. ತಜ್ಞರ ಪರೀಕ್ಷೆಯಲ್ಲೂ ಗಂಟಿದೆ ಎಂದು ಖಚಿತವಾದರೆ, ಅಲ್ಟ್ರಾಸೌಂಡ್  ಸ್ಕ್ಯಾನ್,  ಎಂಆರ್ ಐ ನಂತಹ ರೋಗ  ನಿರ್ಣಾಯಕ ವಿಧಾನಗಳಿಗೆ ಒಳಪಡಬೇಕಾಗಿ ಬರಬಹುದು. ಗಂಟಿನ ಬಯಾಪ್ಸಿ ಅದು  ಕ್ಯಾನ್ಸರ್  ಹೌದೋ ಅಲ್ಲವೋ ಎನ್ನುವ ಖಚಿತ  ಮಾಹಿತಿಯನ್ನು ನೀಡುತ್ತದೆ.

ಇದನ್ನೂ ಓದಿ| ಫಾಸ್ಟ್ ಫುಡ್ v/s ಸ್ಲೋ ಪುಡ್‌: ಅವಸರ v/s ಆರೋಗ್ಯ‌

ಸ್ತನ ಕ್ಯಾನ್ಸರ್‌ಗೆ ಪರಿಹಾರವಿದೆಯಾ?

ಕ್ಯಾನ್ಸರ್ ನಲ್ಲಿ  ನಾಲ್ಕು  ಹಂತಗಳಿವೆ. ಮೊದಲಿನ ಹಂತ ಹಾಗೂ ಎರಡನೇ ಹಂತದ ಪೂರ್ವ ಭಾಗದಲ್ಲಿ ಕ್ಯಾನ್ಸರ್ ಗಂಟನ್ನು  ದೇಹದಿಂದ  ಸಂಪೂರ್ಣವಾಗಿ ತೆಗೆದುಹಾಕಿದಲ್ಲಿ ಅದು ಮರುಕಳಿಸುವ ಸಾಧ್ಯತೆ  ಕಡಿಮೆ. ಎರಡನೇ ಹಂತದ ಕೊನೆ ಭಾಗದಲ್ಲಿ, ಮೂರನೇ ಹಾಗೂ ನಾಲ್ಕನೇ ಹಂತಗಳಲ್ಲಿ ಕೀಮೋಥೆರಪಿ, ರೇಡಿಯೋಥೆರಪಿ ಮತ್ತು ಹಾರ್ಮೋನ್  ಥೆರಪಿಗಳಂತಹ ಚಿಕಿತ್ಸಾ ವಿಧಾನಗಳ ನೆರವು ಪಡೆಯಬೇಕು.

ಸ್ತನಗಳನ್ನು  ಪೂರ್ತಿಯಾಗಿ  ತೆಗೆದು ಹಾಕಿದಲ್ಲಿ ಕೃತಕ ಸ್ತನಗಳನ್ನು ಜೋಡಿಸಿ ಮುಂಚಿನಂತೆಯೇ ದೇಹಾಕೃತಿಯನ್ನು ಕಾಪಾಡಿಕೊಳ್ಳುವಂತಹ  ಅನೇಕ ನೂತನ ಕ್ರಮಗಳು ಇಂತಹ ಮಹಿಳೆಯರಿಗೆ  ಸಹಾಯಕಾರಿಯಾಗಿವೆ.

ಸಣ್ಣ ಅನುಮಾನ  ಬಂದರೂ, ಉದಾಸೀನ ಮಾಡದೆ, ವೈದ್ಯಕೀಯ ಸಹಾಯದಿಂದ ಆರಂಭದಲ್ಲೇ ಅದರ ಪತ್ತೆ  ಹಚ್ಚಿ, ಸೂಕ್ತವಾದ ಚಿಕಿತ್ಸಾ ಕ್ರಮಗಳನ್ನು  ಪಾಲಿಸಿದರೆ, ಕ್ಯಾನ್ಸರ್ ನಿಂದ ಗುಣ ಮುಕ್ತರಾಗಬಹುದು. ಕಾಯಿಲೆ ಮುಂದುವರಿದ ಮೇಲೆ ಎಷ್ಟೇ ಸಮಯ ಹಾಗೂ  ಹಣ  ವ್ಯಯ  ಮಾಡಿದರೂ, ಪ್ರಾಣಹಾನಿಯಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

ಲೇಖಕರು ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರು ಹಾಗೂ ಐವಿಎಫ್ ತಜ್ಞರು

Exit mobile version