* ಮರು ಮಾರಾಟ ಉದ್ದೇಶದ ನಿವೇಶನ ಖರೀದಿ ವಿವಾದದ ದೂರು ವಜಾ
ಗ್ರಾಹಕ ನ್ಯಾಯಾಲಯಗಳಲ್ಲಿ ದೂರನ್ನು ದಾಖಲಿಸುವ ಮೊದಲು ಗ್ರಾಹಕ ರಕ್ಷಣೆ ಕಾಯ್ದೆಯ ಪ್ರಕಾರ ತಾವು ಗ್ರಾಹಕರೇ ಎಂಬುದನ್ನು ಪ್ರತಿಯೊಬ್ಬರೂ ಗಮನಿಸತಕ್ಕದ್ದು. ವಾಣಿಜ್ಯದ ವ್ಯವಹಾರಗಳು ಗ್ರಾಹಕ ರಕ್ಷಣೆ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. ಅಂದರೆ ನೀವೊಂದು ವಸ್ತುವನ್ನು ಖರೀದಿಸಿ ಅದನ್ನು ಮತ್ತೆ ಮಾರಾಟ ಮಾಡುವವರಿದ್ದರೆ ಈ ಖರೀದಿಯಲ್ಲಿ ನೀವು ಗ್ರಾಹಕರಾಗಿರುವುದಿಲ್ಲ. ಅದು ಲಾಭದ ಉದ್ದೇಶದ ಖರೀದಿಯಾಗಿರುತ್ತದೆ. ಈ ಸೂಕ್ಷ್ಮವನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಅಂಥದ್ದೊಂದು ಪ್ರಕರಣವಿದೆ.
ಹೈದ್ರಾಬಾದದ ಸಂಜಯ ಧೀರ್ ಎನ್ನುವವರು ಬಹ್ರೇನ್ ಮೂಲದ, ಆದರೆ ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿರುವ ಮೆ.ಎಕ್ಸ್‌ಪಾಟ್ ಪ್ರಾಜೆಕ್ಟ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ. ಇವರಿಂದ ನಾಲ್ಕು ನಿವೇಶನಗಳನ್ನು (ಪ್ರತಿಯೊಂದೂ 1011.71.ಚ.ಮೀ.) 20,68,000 ರುಪಾಯಿಗಳಿಗೆ ಖರೀದಿಸುವುದಕ್ಕಾಗಿ 9,67,000 ರುಪಾಯಿಗಳನ್ನು ಮುಂಗಡವಾಗಿ ನೀಡಿ ಒಪ್ಪಂದಪತ್ರವನ್ನು ಮಾಡಿಕೊಳ್ಳುತ್ತಾರೆ. ಆದರೆ ಮೆ.ಎಕ್ಸ್‌ಪಾಟ್ ಪ್ರಾಜೆಕ್ಟ್ಸ್ ಆ್ಯಂಡ್ ಡೆವಲಪರ್ಸ್ ಪ್ರೈ.ಲಿ. ಇವರು ಸಂಜಯ ಧೀರ್ ಅವರಿಗೆ ನಿವೇಶನಗಳನ್ನು ಹಸ್ತಾಂತರಿಸಲೂ ಇಲ್ಲ, ಅವರ ಹೆಸರಿಗೆ ಕ್ರಯಪತ್ರವನ್ನು ಮಾಡಿಸಿ ಕೊಡಲೂ ಇಲ್ಲ. ಇದರಿಂದ ಅಸಮಾಧಾನಗೊಂಡ ಅವರು ಬೆಂಗಳೂರು 2ನೆ ಹಚ್ಚುವರಿ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆಯಲ್ಲಿ ದೂರನ್ನು ದಾಖಲಿಸುತ್ತಾರೆ. ತಾವು ನೀಡಿರುವ ಹಣವನ್ನು ತಮಗೆ ವಾಪಸ್ಸು ಕೊಡಿಸಬೇಕು ಮತ್ತು ಅದಕ್ಕೆ ಶೇ.12ರಂತೆ ಬಡ್ಡಿಯನ್ನು ಕೊಡಿಸಬೇಕು ಎಂದು ಅವರು ಕೋರುತ್ತಾರೆ.
ಇದನ್ನೂ ಓದಿ | ಗ್ರಾಹಕ ಜಾಗೃತಿ | ದೂರುದಾರರ ಪರವಾಗಿ ಗ್ರಾಹಕ ಆಯೋಗದ ಸ್ವಯಂ ಊಹೆ ಕಾನೂನು ಸಮ್ಮತವಲ್ಲ
ವಿಚಾರಣೆ ನಡೆಸಿದ ಜಿಲ್ಲಾ ವೇದಿಕೆಯು, ಗ್ರಾಹಕ ರಕ್ಷಣೆ ಕಾಯ್ದೆ 2019ರ ಪ್ರಕಾರ ದೂರುದಾರರು ಗ್ರಾಹಕ ಅಲ್ಲ ಎಂದು ನಿರ್ಧರಿಸಿ ಅವರ ದೂರನ್ನು ವಜಾ ಮಾಡುತ್ತದೆ. ಇದರ ವಿರುದ್ಧ ಸಂಜಯ ಧೀರ್ ಅವರು ಕರ್ನಾಟಕ ರಾಜ್ಯ ಗ್ರಾಹಕ ಆಯೋಗದಲ್ಲಿ ಮೇಲ್ಮನವಿಯನ್ನು ಸಲ್ಲಿಸುತ್ತಾರೆ.
ರಾಜ್ಯ ಆಯೋಗವು ಮೇಲ್ಮನವಿಯ ವಿಚಾರಣೆ ನಡೆಸುತ್ತದೆ. ದೂರುದಾರರು ಸದ್ಯ ಮುಂಬಯಿ ನಿವಾಸಿಯಾಗಿದ್ದಾರೆ ಮತ್ತು ಪ್ರತಿವಾದಿ ಸಂಸ್ಥೆಯು ಬೆಂಗಳೂರಿನಲ್ಲಿ ಕಚೇರಿಯನ್ನು ಹೊಂದಿದ್ದು ಬಹ್ರೇನ್‌ನಿಂದ ವ್ಯವಹಾರವನ್ನು ನಡೆಸುತ್ತಿದೆ. ದೂರುದಾರರು ನಾಲ್ಕು ನಿವೇಶನಗಳನ್ನು 9.67 ಲಕ್ಷ ರುಪಾಯಿ ನೀಡಿ ಬುಕ್ ಮಾಡಿರುವುದು ನಿಜ. ಆದರೆ ಒಬ್ಬ ವ್ಯಕ್ತಿಗೆ ಒಂದು ನಿವೇಶನ ಸಹಜ. ಆದರೆ ಅವರು ನಾಲ್ಕು ನಿವೇಶನಗಳನ್ನು ಏಕೆ ಖರೀದಿಸಲು ಬಯಸಿದರು ಎಂಬುದು ಪ್ರಶ್ನೆ. ಆದರೆ ಅವರು ಆ ಕುರಿತು ಯಾವುದೇ ವಿವರಣೆಯನ್ನು ನೀಡಿರಲಿಲ್ಲ. ಗ್ರಾಹಕ ರಕ್ಷಣೆ ಕಾಯ್ದೆ 2019ರ ಪ್ರಕಾರ ವಾಣಿಜ್ಯ ವ್ಯವಹಾರ ನಡೆದರೆ ಆಗ ದೂರುದಾರರನ್ನು ಗ್ರಾಹಕರೆಂದು ಪರಿಗಣಿಸುವಂತಿಲ್ಲ. ದೂರುದಾರರು ಈ ನಾಲ್ಕು ನಿವೇಶನಗಳನ್ನು ಹೂಡಿಕೆ ಎಂದು ಖರೀದಿಸಲು ಬಯಸಿದ್ದರು. ಈಗ ಖರೀದಿಸಿ ಇಟ್ಟು ನಂತರ ಬೆಲೆ ಬಂದಾಗ ಮಾರಿಕೊಳ್ಳುವ, ಆ ಮೂಲಕ ಲಾಭ ಮಾಡಿಕೊಳ್ಳುವ ಉದ್ದೇಶವನ್ನು ಹೊಂದಿರುವಂತಿದೆ. ಆ ಹಿನ್ನಲೆಯಲ್ಲಿ ಅದು ವಾಣಿಜ್ಯ ವ್ಯವಹಾರವಾಗುತ್ತದೆ. ಜಿಲ್ಲಾ ವೇದಿಕೆಯು ನೀಡಿದ ತೀರ್ಪು ಸರಿಯಾಗಿಯೇ ಇದೆ. ಕಾರಣ ಮೇಲ್ಮನವಿಯನ್ನು ವಜಾ ಮಾಡುವುದಾಗಿ ರಾಜ್ಯ ಆಯೋಗ ಆದೇಶಿಸಿತು.
ತೀರ್ಪು- 04 Jan 2022
ಇದನ್ನೂ ಓದಿ | ಗ್ರಾಹಕ ಜಾಗೃತಿ ಅಂಕಣ | ಬ್ಯಾಂಕ್‌ಗಳು ವಿಳಂಬವಾಗಿ ಸಲ್ಲಿಸಿದರೆ ಮೇಲ್ಮನವಿ ವಜಾ