Site icon Vistara News

ನಿರ್ಣಾಯಕ ಹಂತದಲ್ಲಿ ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ಕಾಂಗ್ರೆಸ್‌; ಇದು ಚುನಾವಣೆಯ ಟರ್ನಿಂಗ್‌ ಪಾಯಿಂಟ್‌!

Congress Poll Promise To Ban Bajrang Dal; This is a Major Turning Point for Election

Congress Poll Promise To Ban Bajrang Dal; This is a Major Turning Point for Election

| ರಮೇಶ್‌ ಕುಮಾರ್‌ ನಾಯಕ್‌

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದು ವಾರವಷ್ಟೇ ಬಾಕಿ ಇದೆ. ಆಡಳಿತ ಪಕ್ಷ ಬಿಜೆಪಿಯ ಅಧಿಕಾರ ಮತ್ತು ಧನಬಲದಿಂದ ಕೂಡಿದ ಅಬ್ಬರದ ಪ್ರಚಾರದ ನಡುವೆಯೂ ಕಾಂಗ್ರೆಸ್‌ ಜನಮಾನಸದಲ್ಲಿ ಮುನ್ನಡೆಯಲ್ಲೇ ಇತ್ತು. ಈವರೆಗಿನ ಬಹುತೇಕ ಚುನಾವಣೆ ಪೂರ್ವ ಸಮೀಕ್ಷೆಗಳ ಪ್ರಕಾರ, ಸರಳ ಬಹುಮತಕ್ಕೆ ಹತ್ತಿರದ ಸ್ಥಾನಗಳನ್ನು ಕಾಂಗ್ರೆಸ್‌ ಗಳಿಸುತ್ತದೆ ಎನ್ನಲಾಗಿತ್ತು. ಆದರೆ ಎಲೆಕ್ಷನ್‌ನ ಕ್ಲೈಮ್ಯಾಕ್ಸ್‌ ಹಂತದಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಒಂದೇ ಒಂದು ಸಾಲು ಟರ್ನಿಂಗ್‌ ಪಾಯಿಂಟ್‌ ಆಗಲಿದೆ.

ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಬದಲಾವಣೆ, 40 ಪರ್ಸೆಂಟ್‌ ಭ್ರಷ್ಟಾಚಾರದ ಆರೋಪ, ಆಡಳಿತ ವಿರೋಧಿ ಅಲೆ, ದಶಕಗಳ ಕಾಲ ಜತೆಗಿದ್ದ ಜಗದೀಶ್‌ ಶೆಟ್ಟರ್‌ರಂಥ ಹಿರಿಯ ಲಿಂಗಾಯತ ನಾಯಕರ ಪಕ್ಷಾಂತರ ಇತ್ಯಾದಿಗಳು ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದ್ದವು. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ನಾಯಕತ್ವದಲ್ಲಿ ಕೈ ಪಾಳಯ ಸಲೀಸಾಗಿ 115 ಪ್ಲಸ್‌ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ದಟ್ಟವಾಗಿತ್ತು. ಆದರೀಗ, ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎಂದು ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್‌ ಘೋಷಿಸಿರುವುದು ಚುನಾವಣೆಯ ದಿಕ್ಕನ್ನೇ ಬದಲಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಅಧಿಕಾರ ಹಿಡಿಯುವ ಮೊದಲು ಬಜರಂಗ ದಳ, ಶ್ರೀರಾಮ ಸೇನೆಯಂಥ ಸಂಘಟನೆಗಳ ಕಾರ್ಯಕರ್ತರು ಮತ್ತು ಬಿಜೆಪಿ ನಡುವೆ ಅನ್ಯೋನ್ಯ ಸಂವಹನ-ಸಂಬಂಧ ಇತ್ತು. ಆದರೆ ಬಿಜೆಪಿ ಅಧಿಕಾರ ಹಿಡಿದ ಬಳಿಕ ನಾನಾ ಕಾರಣಗಳಿಂದ ಸಂಘ ಪರಿವಾರದ ಕೆಲವು ಸಂಘಟನೆಗಳು ಮತ್ತು ಬಿಜೆಪಿ ನಡುವೆ ಭಿನ್ನಾಭಿಪ್ರಾಯ ಬೆಳೆಯುತ್ತಿದೆ. ಈ ಬಾರಿಯ ಚುನಾವಣೆಯಲ್ಲಂತೂ, ರಾಜ್ಯದ ಹಲವು ಕಡೆ ಸಂಘ ಪರಿವಾರದ ಸಂಘಟನೆಗಳ ಪ್ರಮುಖರು ಬಿಜೆಪಿ ಅಭ್ಯರ್ಥಿಗಳ ವಿರುದ್ಧವೇ ಸ್ಪರ್ಧಿಸುತ್ತಿದ್ದಾರೆ. ಪುತ್ತೂರು, ಚಿಕ್ಕಮಗಳೂರಿನಂಥ ಬಿಜೆಪಿ ಪ್ರಾಬಲ್ಯದ ಕ್ಷೇತ್ರಗಳಲ್ಲೇ ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ತಿರುಗಿ ಬಿದ್ದಿದ್ದಾರೆ.‌ ಮುಸ್ಲಿಂ ಮೂಲಭೂತವಾದಿ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಅವರನ್ನು ಬರ್ಬರವಾಗಿ ಕೊಲೆ ಮಾಡಿದ ಸಂದರ್ಭದಲ್ಲಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಕಾರನ್ನೇ ಸಂಘ ಪರಿವಾರದ ಹುಡುಗರು ಅಲುಗಾಡಿಸಿದ್ದರು. ನಳಿನ್‌ ಕುಮಾರ್‌ ಎಸಿ ಕಾರಿನೊಳಗೇ ಬೆವರುವಂತೆ ಮಾಡಿದ್ದರು. ಈ ಬಾರಿ ಸಂಘ ಪರಿವಾರದ ಸಾಕಷ್ಟು ಕಾರ್ಯಕರ್ತರು, ರಾಜ್ಯ ಬಿಜೆಪಿಗೆ ಒಂದು ಪಾಠ ಕಲಿಸಬೇಕು ಎಂಬ ನಿರ್ಧಾರ ಮಾಡಿದ್ದನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದರೆ ಬಜರಂಗದಳವನ್ನು ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್‌ ಹೇಳಿಕೆ ಸಂಘ ಪರಿವಾರದ ಸಂಘಟನೆಗಳನ್ನು ರೊಚ್ಚಿಗೆಬ್ಬಿಸಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಒಂದೇ ಒಂದು ಸಾಲು, ಮುನಿಸಿಕೊಂಡಿದ್ದ ಸಂಘ ಪರಿವಾರದ ಎಲ್ಲ ಕಾರ್ಯಕರ್ತರು ಮತ್ತೆ ಬಿಜೆಪಿ ಪರ ಅನಿವಾರ್ಯವಾಗಿ ಒಗ್ಗೂಡುವಂತೆ ಮಾಡಿದೆ. ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಮಗೆ ಉಳಿಗಾಲವಿಲ್ಲ ಎಂದವರು ಭಾವಿಸುವುದು ಸಹಜ.

ಹಲವಾರು ಉಚಿತ ಕೊಡುಗೆಗಳ ಭರವಸೆ ಮೂಲಕ ಗೆಲುವಿನತ್ತ ಮುನ್ನುಗ್ಗುತ್ತಿದ್ದ ಕಾಂಗ್ರೆಸ್, ಚುನಾವಣೆ ಪ್ರಣಾಳಿಕೆ ಪರಿಣತರ ಮೂರ್ಖ ನಿರ್ಧಾರದಿಂದಾಗಿ ದುಬಾರಿ ಬೆಲೆ ತೆರಬೇಕಾಗಿ ಬರಲಿದೆ. ಸಮಾಜದ ಸೌಹಾರ್ದ ಹಾಳು ಮಾಡುವ ಎಲ್ಲ ಧರ್ಮದ ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಲಾಗುವುದು ಎಂದು ಘೋಷಿಸಿದ್ದರೆ ವಿವಾದದ ಕಿಡಿ ಏಳುತ್ತಲೇ ಇರಲಿಲ್ಲ. ಪಿಎಫ್‌ಐ ಸಂಘಟನೆಯನ್ನು ಈಗಾಗಲೇ ಕೇಂದ್ರದ ಬಿಜೆಪಿ ಸರ್ಕಾರವೇ ಬ್ಯಾನ್‌ ಮಾಡಿದೆ. ಹೀಗಿರುವಾಗ, ತಾವು ಅಧಿಕಾರಕ್ಕೆ ಬಂದರೆ ಪಿಎಫ್‌ಐ ಬ್ಯಾನ್‌ ಮಾಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದು ಕೂಡ ಸ್ಪಷ್ಟ ಎಡವಟ್ಟು.

ಬಜರಂಗದಳ ನಿಷೇಧ ಪ್ರಸ್ತಾಪದ ಹಿಂದಿತ್ತು ಲೆಕ್ಕಾಚಾರ

ಬಜರಂಗದಳವನ್ನು ನಿಷೇಧ ಮಾಡಲಾಗುವುದು ಎಂಬ ಕಾಂಗ್ರೆಸ್‌ ಘೋಷಣೆ ಆಕಸ್ಮಿಕವಲ್ಲ. ಇದು ಲೆಕ್ಕಾಚಾರದ ಘೋಷಣೆ. ಇದಕ್ಕೂ ಕೆಲವು ಕಾರಣಗಳಿವೆ. ಮುಸ್ಲಿಂ ಬಾಹುಳ್ಯದ ಪ್ರದೇಶಗಳಲ್ಲಿ ಕಾಂಗ್ರೆಸ್‌ಗೆ ಮುಸ್ಲಿಂ ಮೂಲಭೂತವಾದಿ ಸಂಘಟನೆ ಎಂಬ ಆರೋಪ ಹೊತ್ತಿರುವ ಎಸ್‌ಡಿಪಿಐ ದೊಡ್ಡ ಬೆದರಿಕೆ ಆಗಿದೆ. ಮುಖ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಎಸ್‌ಡಿಪಿಐ ಭಾರಿ ಏಟು ನೀಡಿತ್ತು. ಬಿಜೆಪಿಯ ನಿರಾಯಾಸ ಗೆಲುವಿಗೆ ಎಸ್‌ಡಿಪಿಐ ಸ್ಪರ್ಧೆ ಹಾದಿಮಾಡಿ ಕೊಟ್ಟಿತ್ತು. ಈ ಬಾರಿಯೂ ಅದು ಕಾಂಗ್ರೆಸ್ ಪಕ್ಷದ ಗಣನೀಯ ಸಂಖ್ಯೆಯ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ. ಅಲ್ಪಸಂಖ್ಯಾತರ ಪಾಲಿಗೆ ಕಾಂಗ್ರೆಸ್‌ ಕೂಡ ಹೇಗೆ ಶತ್ರು ಎನ್ನುವುದನ್ನು ಎಸ್‌ಡಿಪಿಐ ಮುಖಂಡರು ಮುಸ್ಲಿಮರ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದೆಡೆ ಜೆಡಿಎಸ್‌ ಕೂಡ ಕೆಲವು ಕ್ಷೇತ್ರಗಳಲ್ಲಿ ಮುಸ್ಲಿಂ ಮತಗಳನ್ನು ಸೆಳೆಯುತ್ತಿದೆ. ಟಿಕೆಟ್‌ ವಂಚಿತ ಕೆಲವು ಮುಸ್ಲಿಂ ಮುಖಂಡರು ಜೆಡಿಎಸ್‌ ಟಿಕೆಟ್‌ ಪಡೆದು ಸ್ಪರ್ಧಿಸಿ ಕಾಂಗ್ರೆಸ್‌ಗೆ ನಡುಕ ಹುಟ್ಟಿಸಿದ್ದಾರೆ. ಎಸ್‌ಡಿಪಿಐ ಮತ್ತು ಜೆಡಿಎಸ್‌ ಮುಸ್ಲಿಂ ಮತ ಸೆಳೆಯುವುದನ್ನು ತಪ್ಪಿಸಲು ಕಾಂಗ್ರೆಸ್‌ ರೂಪಿಸಿದ ತಂತ್ರವೇ ಬಜರಂಗದಳ ನಿಷೇಧ ಪ್ರಸ್ತಾಪ! ಈ ಮೂಲಕ ಕಾಂಗ್ರೆಸ್‌ ಪರ ಮುಸ್ಲಿಂ ಮತಗಳನ್ನು ಕ್ರೋಡೀಕರಿಸುವ ಲೆಕ್ಕಾಚಾರ. ಬಿಜೆಪಿ ಕಿತ್ತುಕೊಂಡಿರುವ ಮೀಸಲನ್ನು ಮುಸ್ಲಿಮರಿಗೆ ವಾಪಸ್‌ ಕೊಡುತ್ತೇವೆ ಎಂದಿರುವುದೂ ಇದಕ್ಕೆ ಪೂರಕ.

ಬಿಜೆಪಿಗೆ ಅಯಾಚಿತವಾಗಿ ಸಿಕ್ಕ ಅಸ್ತ್ರ

ಕಾಂಗ್ರೆಸ್‌ ಪ್ರಣಾಳಿಕೆ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಜರಂಗ ದಳ ನಿಷೇಧ ವಿವಾದವನ್ನು ಕ್ಯಾಚ್‌ ಮಾಡಿದ್ದಾರೆ. ಹಿಂದೆ ರಾಮನನ್ನು ಪೀಡಿಸಿದ ಕಾಂಗ್ರೆಸ್‌ನವರು ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಈಗಾಗಲೇ ಬಿಜೆಪಿ ಈ ಸಂಗತಿಯನ್ನು ವ್ಯಾಪಕವಾಗಿ ಬಳಸಿಕೊಳ್ಳುತ್ತಿದೆ. “ಹೌದು, ನಾನು ಬಜರಂಗಿʼ ಎಂಬ ಅಭಿಯಾನ ನಡೆಸುತ್ತಿದೆ. ಬಜರಂಗ ನಿಷೇಧಿಸುತ್ತೇವೆ ಎಂಬ ಕಾಂಗ್ರೆಸ್‌ ಘೋಷಣೆಯ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಆಯೋಜಿಸುತ್ತಿದೆ. ನರೇಂದ್ರ ಮೋದಿ ಅವರು ಬುಧವಾರ ಕರಾವಳಿಯಲ್ಲಿ ಬೃಹತ್‌ ಸಮಾವೇಶ ನಡೆಸುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ನ ಎಡವಟ್ಟು, ಹಿಂದುತ್ವದ ಪ್ರಯೋಶಾಲೆ ಎನ್ನಲಾಗುವ ಕರಾವಳಿಯಲ್ಲಿ ಬಿಜೆಪಿಗೆ ವರದಾನ ಆಗುವುದು ಖಚಿತ. ಕಾಂಗ್ರೆಸ್‌ ವಿರುದ್ಧ ಹಿಂದೂ ಮತಗಳ ಧ್ರುವೀಕರಣಕ್ಕೆ ಈ ವಿವಾದ ಕಾರಣವಾಗಲಿದೆ.

ಇದನ್ನೂ ಓದಿ: Congress Manifesto : ವಿನಾಶಕಾಲೇ ವಿಪರೀತ ಬುದ್ಧಿ; ಬಜರಂಗ ದಳ ನಿಷೇಧ ಪ್ರಸ್ತಾಪಕ್ಕೆ ವಿಜಯೇಂದ್ರ ಖಂಡನೆ

ರಾವಣನು ಸೀತೆಯನ್ನು ಅಪಹರಿಸಿಕೊಂಡು ಹೋದಾಗ, ಆಕೆಯನ್ನು ಅರಸುತ್ತ ಲಂಕೆಗೆ ಹೋದ ಆಂಜನೇಯನ ಬಾಲಕ್ಕೆ ರಾವಣನ ಬಂಟರು ಬೆಂಕಿ ಹಚ್ಚಿದ್ದು ಮುಂದೆ ಎಂಥ ಅನಾಹುತಕ್ಕೆ ಕಾರಣವಾಯಿತು ಎನ್ನುವುದು ಜನಜನಿತ. ಇದೀಗ, ಎಲ್ಲವೂ ತಮ್ಮ ಪರವಾಗಿಯೇ ಇದೆ ಎಂಬ ವಾತಾವರಣದ ಮಧ್ಯೆ ಕಾಂಗ್ರೆಸ್‌ ಸುಖಾಸುಮ್ಮನೆ ಬಜರಂಗದಳ ನಿಷೇಧದ ಉಸಾಬರಿಗೆ ಹೋಗಿರುವುದು ಖಂಡಿತವಾಗಿ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ.

Exit mobile version